ಹಸಿರು ಕ್ರಾಂತಿ
ಈ ಸಲ ಕಪ್ಪು ನಮ್ದಲ್ಲ...
Team Udayavani, Jul 24, 2019, 5:00 AM IST
ಮೊದಲೆಲ್ಲ, ಕಣ್ಣಿಗೆ ಹಚ್ಚುವ ಕಾಡಿಗೆ ಅಂದಾಗ ಥಟ್ಟನೆ ನೆನಪಾಗುತ್ತಿದ್ದುದು ಕಪ್ಪು ಬಣ್ಣ. ಆದರೆ, ಇದು ರಂಗು ರಂಗಿನ ಕಾಲ. ಕಣ್ ಕಾಡಿಗೆಯೂ ಬಣ್ಣ ಬದಲಿಸಿದ್ದು, ಹೆಣ್ಮಕ್ಕಳು ಹಸಿರು ಕಣ್ಣಿಗೆ ಮನ ಸೋತಿದ್ದಾರೆ.
ಇದೀಗ ಫ್ಯಾಷನ್ ಲೋಕದಲ್ಲಿ ಹಸಿರು ಕ್ರಾಂತಿಯ ಸಮಯ. ಅಂದರೆ, ಪಚ್ಚೆ ಬಣ್ಣದ “ಐ ಶಾಡೋ’ ಟ್ರೆಂಡ್ ಆಗುತ್ತಿರುವ ಸಮಯ. ಹಾಲಿವುಡ್, ಬಾಲಿವುಡ್, ಕನ್ನಡ ನಟಿಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಈ ಬಣ್ಣದ ಕಾಡಿಗೆಯನ್ನು, ಪಾಶ್ಚಾತ್ಯ ಉಡುಗೆ ಮತ್ತು ಸಾಂಪ್ರದಾಯಿಕ ಉಡುಗೆ ತೊಟ್ಟಾಗ ಕಣ್ಣಿಗೆ ಹಚ್ಚಿ ಹೊಸ ಅಲೆ ಎಬ್ಬಿಸಿದ್ದಾರೆ. ಹಸಿರು ಬಣ್ಣದ ಕಾಡಿಗೆಯಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದೇ ತಡ, ಅಭಿಮಾನಿಗಳು ಈ “ಐ ಶಾಡೋ’ ಖರೀದಿಸಲು ಮುಗಿಬೀಳುತ್ತಿದ್ದಾರೆ.
ಹಸಿರಷ್ಟೇ ಅಲ್ಲ…
ತಿಳಿ ಹಸಿರು, ಗಾಢವಾದ ಹಸಿರು, ಹಸಿರು ಬಣ್ಣದ ಜೊತೆ ಪಳ ಪಳ ಹೊಳೆಯುವ ಗ್ಲಿಟರ್ ಮತ್ತು ಶಿಮರ್ ಪೌಡರ್… ಹೀಗೆ ಗ್ರೀನ್ ಐ ಶಾಡೋನಲ್ಲಿ ಅನೇಕ ಆಯ್ಕೆಗಳಿವೆ. ಇವಿಷ್ಟಲ್ಲದೆ, ಹಸಿರು ಮತ್ತು ನೀಲಿ ಬಣ್ಣಗಳನ್ನು ಮಿಕ್ಸ್ ಮಾಡಿ, ನವಿಲು ಗರಿಯಲ್ಲಿರುವ ಬಣ್ಣಗಳಂತೆ ಕಣ್ಣನ್ನು ಅಲಂಕಾರ ಮಾಡಬಹುದು. ಸ್ವರ್ಣ, ಕೆಂಪು, ಗುಲಾಬಿ, ಕಂದು, ಬೂದಿ, ನೇರಳೆ, ಹೀಗೆ ಬಗೆ-ಬಗೆಯ ಬಣ್ಣಗಳ ಜೊತೆ ಪ್ರಯೋಗ ಮಾಡಬಹುದು ಕೂಡ.
ಕಣ್ಣ ಮೇಲೆ ಮದರಂಗಿ
ಹಸಿರು ಬಣ್ಣ ಹಚ್ಚಿ ಅದರ ಮೇಲೆ ಬೇರೆ ಬಣ್ಣದ ಚುಕ್ಕಿಗಳು, ಗೀಟುಗಳು, ಮತ್ತಿತರ ಆಕೃತಿಗಳನ್ನು ಮೂಡಿಸಬಹುದು. ಅಂಗೈ ಮೇಲೆ ಮದುರಂಗಿ ಬಿಡಿಸಿದಂತೆ ಕಣ್ಣ ರೆಪ್ಪೆಯ ಮೇಲೆ ಬ್ರಷ್‌ನಿಂದ ಚಿತ್ತಾರ ಮೂಡಿಸಿಕೊಳ್ಳಬಹುದು. ಈ ರೀತಿ ಪೋಲ್ಕಾ ಡಾಟ್ಸ್, ಸಾರ್, (ನಕ್ಷತ್ರಗಳು), ಹಾರ್ಟ್ ಶೇಪಿನ ಚಿಹ್ನೆಗಳು, ಜಾಮೆಟ್ರಿಕ್ ಡಿಸೈನ್ಸ್ (ಜ್ಯಾಮಿತೀಯ ವಿನ್ಯಾಸಗಳು), ಟ್ಯಾಟೂನಂಥ ಅಲಂಕಾರ ಬಿಡಿಸಿಕೊಳ್ಳಬಹುದು.
ಕಣ್ಣೇ ಕೇಂದ್ರಬಿಂದು
ಉಟ್ಟ ಉಡುಗೆ ಸರಳವಾಗಿದ್ದರೂ, ಎದ್ದು ಕಾಣುವ ಆಭರಣಗಳು, ಆ್ಯಕ್ಸೆಸರೀಸ್ ಇಲ್ಲದಿದ್ದರೂ, ತೀರಾ ಸರಳವಾಗಿರುವ ಕೇಶಾಲಂಕಾರ ಇದ್ದರೂ, ಉಳಿದ ಮೇಕ್‌ಅಪ್ ಸಿಂಪಲ್ ಆಗಿದ್ದರೂ, ಕೇವಲ ಕಣ್ಣ ರೆಪ್ಪೆಗಳಿಂದಲೇ ಜನರ ಗಮನವನ್ನು ನಿಮ್ಮತ್ತ ಸೆಳೆಯಬಹುದು. ಹೇಗೆ ಗೊತ್ತಾ?
ಮೊದಲಿಗೆ ತಿಳಿ ಹಸಿರು ಬಣ್ಣದ ಐ ಶಾಡೋವನ್ನು ರೆಪ್ಪೆಯ ಮೇಲೆ ಹಚ್ಚಬೇಕು. ನಂತರ ಗಾಢವಾದ ಹಸಿರು ಬಣ್ಣ ಅಥವಾ ಗ್ಲಿಟರ್ ಪೌಡರ್ ಅಥವಾ ಬೇರೆ ಬಣ್ಣದ ಶೇಡ್ ಅನ್ನು ಹಚ್ಚಬೇಕು. ಈ ರೀತಿ ಮಾಡುವಾಗ, ಮೊದಲಿಗೆ ಹಚ್ಚಿದ ಬಣ್ಣ ಸಂಪೂರ್ಣವಾಗಿ ಮರೆಮಾಚಿ ಹೋಗಬಾರದು! ನಂತರ ನಿಧಾನವಾಗಿ, ನಾಜೂಕಾಗಿ ಕಣ್ಣಿಗೆ ಬೌಂಡರಿ ಬಿಡಿಸಿದಂತೆ ಕಣಪ್ಪು ಬಳಸಿ, ಗೆರೆ ಬಿಡಿಸಿಕೊಳ್ಳಬೇಕು. ಕಣRಪ್ಪು ಹಸಿರಿಗಿಂತಲೂ ಬಹಳಷ್ಟು ಗಾಢವಾದ ಬಣ್ಣದ್ದಾಗಿರಬೇಕು. ಅದಕ್ಕೆ, ಕಪ್ಪು ಬಣ್ಣವೇ ಉತ್ತಮ. ಇಲ್ಲವೆಂದಾದರೆ ಕಂದು, ನೀಲಿ ಅಥವಾ ಕೆಂಪು ಬಣ್ಣ ಬಳಸಬಹುದು.
ಈ ಬಣ್ಣ ಒಪ್ಪುತ್ತದಾ?
ಈ ಬಣ್ಣ ಹಚ್ಚಿಕೊಂಡು ಹೊರಹೋಗುವ ಮುನ್ನ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ನಿಮಗೆ ಇದು ಒಪ್ಪುತ್ತದೆ, ಚೆನ್ನಾಗಿ ಕಾಣುತ್ತದೆ ಎಂದಾದರೆ ಧೈರ್ಯದಿಂದ ಈ ಕಾಂಬಿನೇಶನ್ ಹಚ್ಚಿ ಮನೆಯಿಂದ ಆಚೆಗೆ ಕಾಲಿಡಿ. ಮಾಡಿದ ಪ್ರಯೋಗದ ಬಗ್ಗೆ ನಿಮಗೆ ಏನೋ ಕಸಿವಿಸಿ ಇದ್ದರೆ, ಹೊರಹೋಗುವಾಗ ಇದನ್ನು ಹಚ್ಚಿಕೊಳ್ಳಬೇಡಿ!
ಪೂಜೆ, ಹಬ್ಬ, ಮದುವೆ – ಮುಂಜಿ, ಸಿನಿಮಾ ಪ್ರಚಾರ, ಅವಾರ್ಡ್ ಸೆರಮನಿ, ಪಾರ್ಟಿ, ವೆಕೇಷನ…, ಹೀಗೆ ಎಲ್ಲಾ ಥರದ ಸಮಾರಂಭಗಳಿಗೆ ಈ ಹಸಿರು ಬಣ್ಣದ ಐ ಶಾಡೋ ಹಾಕಿಕೊಳ್ಳಬಹುದು. ಆದರೆ, ಆಫೀಸ್‌ಗೆ ಹೋಗುವಾಗ, ಮೀಟಿಂಗ್ ಇದ್ದಾಗ ಮತ್ತು ಸಂದರ್ಶನಕ್ಕೆ ಈ ಪಚ್ಚೆ ಐ ಶಾಡೋ ಬೇಡ.
ನೋಡಿ ಕಲಿ!
ಕಣ್ಣಿನ ಮೇಲೆ ಚಿತ್ತಾರಗಳನ್ನು ಮೂಡಿಸುವುದು ಬ್ರಹ್ಮ ವಿದ್ಯೆ ಅಲ್ಲದಿದ್ದರೂ, ಅದೊಂದು ನಾಜೂಕಿನ ಕಲೆ. ಅದನ್ನು ನಿಮಗೆ ತಿಳಿಸಲೆಂದೇ ಯುಟ್ಯೂಬ್, ಇನ್‌ಸ್ಟಾಗ್ರಾಂ, ಫೇಸುºಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಲಭ್ಯ ಇವೆ. ವಿಡಿಯೋ ನೋಡಿ, ಯಾವುದು ಸುಲಭ ಮತ್ತು ಆಕರ್ಷಕ ಅನ್ನಿಸುತ್ತೋ, ಅದನ್ನು ಕಣ್ಣಿನ ಮೇಲೆ ಚಿತ್ತಾರಗೈಯಬಹುದು.
1. ಕಣ್ಣಿನ ಮೇಕಪ್ ಕುರಿತಾದ ವಿಡಿಯೋ ನೋಡಿ, ಕಲಿಯಬಹುದು
2. ಹಚ್ಚಿದ ಸ್ವಲ್ಪ ಹೊತ್ತಿನಲ್ಲೇ ಸ್ಪ್ರೆಡ್ ಆಗುವಂಥ ಕಡಿಮೆ ಗುಣಮಟ್ಟದ ಪ್ರಾಡಕ್ಟ್ ಬೇಡ
3. ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ, ಅದನ್ನು ಕನ್ಸಿàಲರ್‌ನಿಂದ ಅಡಗಿಸಿ
4. ಮುಖಕ್ಕೆ ತೆಳುವಾಗಿ ಮೇಕಪ್ ಮಾಡಿದರೆ ಸಾಕು
5. ಐ ಶಾಡೋದ ಬಣ್ಣಕ್ಕಿಂತ ಗಾಢವಾದ ಬಣ್ಣದಿಂದ ಕಣ್ಣಿನ ಸುತ್ತ ಗೆರೆ ಎಳೆಯಿರಿ
6. ರೆಪ್ಪೆಗೂದಲನ್ನು ಮಸ್ಕಾರದಿಂದ ಅಂದಗೊಳಿಸಿ
ಅದಿತಿಮಾನಸ. ಟಿ. ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.