ಪಾಪ ಕಣ್ರೀ, ಹೌಸ್‌ವೈಫು…
ಪ್ರತಿ ಮನೆಯೊಳಗೂ ಇದೆ ಗಾಣದ ಎತ್ತು!
Team Udayavani, Feb 5, 2020, 5:05 AM IST
ಈರುಳ್ಳಿ ಹೆಚ್ಚುವಾಗ ಆಕೆಯ ಕಣ್ಣಲ್ಲಿ ಧಾರಾಕಾರ ನೀರು. ನೀರು ಕೊಡುವುದು ತಡವಾಯಿತೆಂದು ರಾತ್ರಿ ಆತ ಕೆಟ್ಟದಾಗಿ ಬೈದಿದ್ದೂ, ಈರುಳ್ಳಿ ಹೆಚ್ಚುವ ಕ್ಷಣದಲ್ಲೇ ಛಕ್ಕನೆ ನೆನಪಾಗಿ ಕಣ್ಣೀರು ಮತ್ತಷ್ಟು ಹೆಚ್ಚಾಗುತ್ತದೆ. ಓಹ್, ಮೆಣಸಿನಕಾಯಿಯ ಖಾರಕ್ಕೆ ಕೈ ಉರಿಯುತ್ತಿದೆ! ಬಿಡಿ, ಎದೆಯೊಳಗೆ ಇದಕ್ಕಿಂತ ಜಾಸ್ತಿ ಉರಿಯಿದೆ!
ಈಗ ಅಲರಾಮ್‌ನ ಸದ್ದು ಬೆಳಗಿನ ಸಿಹಿ ನಿದ್ದೆಯನ್ನು ತುಂಡರಿಸಿದಾಗ, “ಇನ್ನೊಂದು ಹತ್ತು ನಿಮಿಷ’ ಅಂತ ಮುದುರಿ ಮಲಗುವ ಹಾಗಿಲ್ಲ. ಕಾಲೇಜು ಹುಡುಗಿಯಾಗಿದ್ದಾಗ, ಹತ್ತು ನಿಮಿಷ ಎಕ್ಸ್‌ಟ್ರಾ ಸಿಹಿ ನಿದ್ದೆ ಸವಿದ ಹಾಗೆ, ಅಣ್ಣ ನೀರು ಚುಮುಕಿಸಿ ಎಬ್ಬಿಸುತ್ತಿದ್ದ ಆ ದಿನಗಳು ಮತ್ತೂಮ್ಮೆ ಮರುಕಳಿಸಬಹುದೇ?
ಸೇರು ಒದ್ದ ಹೊಸ್ತಿಲಿನ ಮುಂದೆ ರಂಗವಲ್ಲಿ ಅರಳಿಸುವ ನಡುವೆ, ತನ್ನ ಕನಸಿನ ಕಾಮನಬಿಲ್ಲು ಅದೆಲ್ಲಿ ಕಳೆದುಹೋಯಿತೋ ಗೊತ್ತೇ ಆಗಲಿಲ್ಲ. ಅಡುಗೆ ಮನೆಯಲ್ಲಿ ಹಾಲುಕ್ಕಿದ ಸದ್ದಿಗೆ ಒಂದೇ ಉಸಿರಿಗೆ ಓಡಿದಾಗ, ಸ್ಕೂಲಿನಲ್ಲಿ ಸಿಕ್ಕಿದ್ದ ರನ್ನಿಂಗ್ ರೇಸಿನ ಮೊದಲ ಬಹುಮಾನಗಳು ನಕ್ಕಂತೆ ಭಾಸವಾಗುತ್ತದೆ. ತವರು ಮನೆಯ ಬಣ್ಣ ಮಾಸಿದ ಗೋಡೆಯ ಮೇಲೆ ಬಹುಮಾನ ಹಿಡಿದ ಅದೆಷ್ಟೋ ಫೋಟೋಗಳಿವೆ. ಮೊದಲ ರ್‍ಯಾಂಕಿನ ಛಲಗಾತಿಗೆ ಇನ್ನೂ ಸಾಧಿಸುವುದಿತ್ತಲ್ಲವಾ?
ಎಲ್ಲರೂ ಹೇಳುತ್ತಾರೆ: “ಹೌಸ್‌ವೈಫ್ಗಳದ್ದು ಆರಾಮದಾಯಕ ಕೆಲಸ. ಮನೇಲಿದ್ದು ಬೇಯಿಸಿ ಹಾಕೋದು, ಅಷ್ಟೇ ತಾನೆ?’ ಅಂತ. ಆ ಫಸ್ಟ್ ರ್‍ಯಾಂಕ್ ಹುಡುಗಿ ಈಗ ಅದೇ “ಆರಾಮದಾಯಕ’ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಿಂತ ಜಾಸ್ತಿ ಇರಬೇಕಿತ್ತು ಅಂದುಕೊಳ್ಳುತ್ತಾ, ಅವಸರವಸರದಲ್ಲಿ ಕೆಲಸ ಮಾಡುವ ಆಕೆ, ತನ್ನ ತಿಕ್ಕಲು ಆಲೋಚನೆಗೆ ತಾನೇ ಮುಗುಳ್ನಗುತ್ತಾಳೆ. ಯಾಕಂದ್ರೆ, ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಪ್ಪತ್ನಾಲ್ಕು ಕೆಲಸ ಮಾಡುವ ತಾಕತ್ತು ಆಕೆಗೆ ಇದೆ. “ಹೌಸ್ ವೈಫು’ ಎಂಬ ಒಂದು ಪದ, ಆಕೆಗೆ ಎಲ್ಲವನ್ನೂ ಕಲಿಸಿಬಿಟ್ಟಿದೆ.
ಈರುಳ್ಳಿ ಹೆಚ್ಚುವಾಗ ಆಕೆಯ ಕಣ್ಣಲ್ಲಿ ಧಾರಾಕಾರ ನೀರು. ನೀರು ಕೊಡುವುದು ತಡವಾಯಿತೆಂದು ರಾತ್ರಿ ಆತ ಕೆಟ್ಟದಾಗಿ ಬೈದಿದ್ದೂ, ಈರುಳ್ಳಿ ಹೆಚ್ಚುವ ಕ್ಷಣದಲ್ಲೇ ಛಕ್ಕನೆ ನೆನಪಾಗಿ ಕಣ್ಣೀರು ಮತ್ತಷ್ಟು ಹೆಚ್ಚಾಗುತ್ತದೆ. ಓಹ್, ಮೆಣಸಿನಕಾಯಿಯ ಖಾರಕ್ಕೆ ಕೈ ಉರಿಯುತ್ತಿದೆ! ಬಿಡಿ, ಎದೆಯೊಳಗೆ ಇದಕ್ಕಿಂತ ಜಾಸ್ತಿ ಉರಿಯಿದೆ!
“ಅಮ್ಮಾ, ನನ್ನ ಸಾಕ್ಸ್ ಎಲ್ಲಿ?’ ಅಂತ ಇತ್ತ ಕಡೆಯಿಂದ ಮಗ, “ಅಯ್ಯೋ ಲೇಟಾಗ್ತಿದೆ. ಬಾಕ್ಸ್ ಕೊಡಮ್ಮಾ ಬೇಗ…’ ಅತ್ತ ಕಡೆಯಿಂದ ಮಗಳು..ಎಂಟೂವರೆಯ ಹೊತ್ತಿಗೆ ಹತ್ತು ಕೈಗಳು ಅದೆಲ್ಲಿಂದಲೋ ಜೋಡಿಯಾಗಿಬಿಡುತ್ತವೆ.. ನೋಯುತ್ತಿರುವ ಬೆನ್ನು, ಕೈ-ಕಾಲುಗಳೂ ಆಕೆಯ ಗಡಿಬಿಡಿ ನೋಡಿ ಸುಮ್ಮನಾಗುತ್ತವೆ. ಆತ ಮಾತ್ರ, ಕಾಲಿನ ಮೇಲೆ ಕಾಲು ಹಾಕಿಕೊಂಡು ನಿರುಮ್ಮಳವಾಗಿ ಪೇಪರಿನ ಸುದ್ದಿ ಓದುತ್ತಲೇ ಇರುತ್ತಾನೆ… ಶಾಲೆ-ಕಾಲೇಜು ದಿನಗಳಲ್ಲಿ ಆಕೆ ಸಾಧಿಸಿದ್ದೆಲ್ಲ, ಈಗ ಒಂದು ಕಾರ್ನರಿನ ಸುದ್ದಿಯೂ ಅಲ್ಲ..
ದಿನವೂ ಬೇಯಿಸುವಿಕೆಯಲ್ಲೇ ಬೆಂದು ಹೋಗುವ ಆಕೆ, ತಾನು ಮಾಡಿದ ಅಡುಗೆಯನ್ನೇ ಅನುಭವಿಸಿ ತಿನ್ನಲು ಮಧ್ಯಾಹ್ನದ ಮೂರು ಗಂಟೆ ಮತ್ತು ರಾತ್ರಿಯ ಹನ್ನೊಂದು ಗಂಟೆವರೆಗೆ ಕಾಯಬೇಕು. ಆತ ಮತ್ತು ನಿದ್ದೆ ಆಕೆಗಾಗಿ ಕಾಯತ್ತಲೇ ಇರುತ್ತವೆ. ನಿದ್ದೆ ಸುಳಿಯುವ ಹೊತ್ತಿನಲ್ಲೇ ಆತ ಆವರಿಸಿಕೊಳ್ಳುತ್ತಾನೆ… ಸ್ವಲ್ಪ ಹೊತ್ತಿನ ನಂತರ ಮತ್ತದೇ ಅಲಾರಾಮು..ಆನಂತರ, ಸರಭರ, ಗಡಿಬಿಡಿ ಕೆಲಸ… ಇಷ್ಟೇ ಆಕೆಯ ಜೀವನ!
ಹಬ್ಬಕೊಮ್ಮೆ ತವರು ಮನೆ, ಇನ್ನೂರೈವತ್ತು ರೂಪಾಯಿಯ ಸೀರೆಯೊಳಗೆ ನಗುವ ಹೂವುಗಳು ಆಕೆಯ ಬವಣೆಯನ್ನು ಮರೆಸಿ ಬಿಡುತ್ತವೆ. ಹಬ್ಬದ ಸಿಹಿಯೊಂದಿಗೆ ಮರಳುವಾಗ, ಅಮ್ಮನ ಮನೆಯ ಮುಂದೆ ಸದಾ ನಗುತ್ತಾ, ನಗಿಸುತ್ತಾ ಜಿಂಕೆಯ ಹಾಗೆ ಓಡಾಡಿದ್ದ ಹುಡುಗಿಯ ಕಪ್ಪು-ಬಿಳುಪಿನ ಚಿತ್ರ ಕಣ್ಮುಂದೆ ಸುಳಿದಾಡುತ್ತದೆ.
ಉಹೂಂ, ಆಕೆಯ ಕನಸುಗಳು ಹೀಗಿರಲೇ ಇಲ್ಲ. ಬಣ್ಣಗಳಿತ್ತು ಅಲ್ಲಿ! ತನ್ನ ಅಷ್ಟೂ ಕನಸುಗಳ ಜೊತೆಗಾರ, ಮೆಲ್ಲಗೆ ಬಂದು ಮೊಳ ಮಲ್ಲಿಗೆ ಜಡೆಗಿಟ್ಟು ತಬ್ಬುವ ತುಂಟ, ಉಗುರಿನ ಬಣ್ಣ ತರಲು ಮರೆತದ್ದಕ್ಕಾಗಿ ಸಾರಿ ಕೇಳುತ್ತ ಪೆಚ್ಚು ಮುಖ ಹೊತ್ತು ಅಪರಾಧಿಯಂತೆ ನಿಲ್ಲುವವ, ಯಾವತ್ತೋ ಒಂದು ದಿನ ಏಳುವುದು ತಡವಾದಾಗ, ಒಂದು ಕಪ್ಪು ತನ್ನಿಷ್ಟದ ಬೆಲ್ಲದ ಚಹಾ ಕೈಲಿ ಹಿಡಿದು ಮಗುವಂತೆ ಎಬ್ಬಿಸುವವ… ಹೀಗೆ, ಅದೇನೇನೋ ಕನಸುಗಳು ಆಕೆಯ ಬುಟ್ಟಿಯಲ್ಲಿದ್ದವು. ಮುಚ್ಚಿದ ಬುಟ್ಟಿ ಮೂಲೆ ಸೇರಿ, ಮೊದಲ ಬಹುಮಾನದ ಹುಡುಗಿ, ಅಷ್ಟು ಪರ್ಸೆಂಟೇಜಿನ ಒಡತಿ ಈಗ ಹೌಸ್‌ವೈಫು… “ಹೋಮ್ ಮೇಕರ್’ ಅಂತ ಕೂಡಾ ಕರೆಯುತ್ತಾರೆ ಅವಳನ್ನು. ಆಹಾ, ಎಷ್ಟು ಚಂದದ ಇಂಗ್ಲಿಷಿನ ಪದ! ಕೇಳಲಷ್ಟೇ… “ಏನ್ ಕೆಲಸ ಮಾಡ್ಕೊಂಡಿದೀರಾ?’ ಅಂತ ಯಾರಾದರೂ ಕೇಳಿದರೆ, “ಹೌಸ್‌ವೈಫು’ ಅನ್ನುವಾಗ ಅದೇನೋ ಮುಜುಗರ ಆಕೆಗೆ. ಕೇಳಿದವರ ಕಣ್ಣಲ್ಲೂ ಕಂಡೂ ಕಾಣದ ತಾತ್ಸಾರ…ಆದರೆ, ದಿನವಿಡೀ ದುಡಿದರೂ ಮುಗಿಯದ ಕೆಲಸದ ಬಗ್ಗೆ, ಸಂಬಳ ಬಿಡಿ, ಗೌರವವೂ ಸಿಗದ ನೋವಿನ ಬಗ್ಗೆ ಆಕೆಗಷ್ಟೇ ಗೊತ್ತು…
-ಮಮತಾ ಚೆನ್ನಪ್ಪ ಮ್ಯಾಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.