ಪ್ಯಾಕಿಂಗ್ ಪುರಾಣ
Team Udayavani, Oct 2, 2019, 3:10 AM IST
ಹೆಂಗಸರ ಶಾಪಿಂಗ್ ಬಗ್ಗೆ ಎಷ್ಟು ಜೋಕ್‌ಗಳಿವೆಯೋ, ಅವರ ಪ್ಯಾಕಿಂಗ್ ಬಗ್ಗೆಯೂ ಅಷ್ಟೇ ಜೋಕ್‌ಗಳಿವೆ. ಅದರಲ್ಲೂ, ಆತ್ಮೀಯರ ಮದುವೆ ಸಮಾರಂಭಕ್ಕೆ ಹೊರಟ ಹೆಂಗಸರ ಪ್ಯಾಕಿಂಗ್ ಸಂಭ್ರಮವನ್ನಂತೂ ಕೇಳಲೇಬೇಡಿ. ಮದುವೆಗೊಂದು, ಆರತಕ್ಷತೆಗೊಂದು, ಮಧ್ಯದಲ್ಲಿ ಎರಡೆರಡು ಬಾರಿ ಬದಲಾಯಿಸಲು ಸೀರೆಗಳು, ಅದಕ್ಕೆ ತಕ್ಕ ಮ್ಯಾಚಿಂಗ್ ಬ್ಲೌಸು, ಮೇಕಪ್ ಕಿಟ್‌ಗಳಿಂದ ಬ್ಯಾಗ್ ತುಂಬಿ ತುಳುಕುತ್ತಿರುತ್ತದೆ…
“ಶಾರದಾ, ಗಂಟೆ ಒಂಬತ್ತಾಯಿತು. ರಾತ್ರಿ ಊಟ ಮಾಡೋ ಯೋಚನೆ ಇದ್ಯೋ ಇಲ್ವೋ? ಏನು ಮಾಡ್ತಾ ಇದ್ದೀಯೇ…?’ ಟಿ.ವಿ. ನೋಡುತ್ತಿದ್ದ ಪುರುಷೋತ್ತಮ ರಾಯರು ದನಿ ಏರಿಸಿ ಹೆಂಡತಿಯನ್ನು ಕರೆದರು. ಒಳಗಿಂದ ಯಾವುದೇ ಉತ್ತರ ಬರದಿದ್ದಾಗ, ಅಡುಗೆ ಕೋಣೆಯತ್ತ ಹೊರಟ ರಾಯರು, ರೂಮ್‌ತುಂಬಾ ಹರಡಿದ್ದ ವಸ್ತುಗಳ ಮಧ್ಯೆ ಕುಳಿತಿದ್ದ ಪತ್ನಿಯನ್ನು ಕಂಡು ಒಂದು ಕ್ಷಣ ಅವಾಕ್ಕಾದರು.
“ಅಯ್ಯೋ ಮಾರಾಯ್ತಿ , ಏನೇ ಇದು? ನಾವು ಮನೆ ಶಿಫ್ಟ್ ಏನಾದ್ರೂ ಮಾಡ್ತಿದ್ದೇವಾ?’ ರಾಯರು ಹಾಗೆಂದಿದ್ದೇ ತಡ, ಶಾರದಮ್ಮನ ಮುಖ ಕೆಂಪಾಯಿತು. “ಇನ್ನು ಎರಡು ದಿನಕ್ಕೆ ನನ್ನ ಅಕ್ಕನ ಮಗಳ ಮದುವೆ ಅಲ್ವೇನ್ರೀ..? ಅದರ ತಯಾರಿ ಆಗಬೇಡ್ವೇ..?’ ಸ್ವಲ್ಪ ಖಾರವಾಗಿಯೇ ಉತ್ತರಿಸಿದರು ಶಾರದಮ್ಮ. “ನಿನ್ನ ತಯಾರಿ ನೋಡಿದ್ರೆ, ನಮ್ಮನೇಲೇ ಮದುವೆ ನಡೆಯೋ ಹಾಗಿದೆ’ ಪತ್ನಿಯ ಪ್ಯಾಕಿಂಗ್ ಸಡಗರ ನೋಡಿ ರೇಗಿಸಿದರು ರಾಯರು.
“ಇದು ನನ್ನ ಸಂಬಂಧದ ಮದುವೆ ನೋಡಿ, ಅದಕ್ಕೇ ಈ ಮಾತು. ಮದುವೆಗೆ ಮುಂಚಿತವಾಗಿ ಬರಲೇಬೇಕು ಎಂದು ಅಕ್ಕ ಹೇಳಿದ್ದಾಳೆ. ಎಲ್ಲಾ ಕಾರ್ಯಕ್ರಮ ಮುಗಿಸಿಯೇ ವಾಪಸ್ ಹೊರಡೋದು ನಾವು ಅಂತ ನಾನೂ ಹೇಳಿಬಿಟ್ಟಿದ್ದೀನಿ..’ “ಆಯ್ತಮ್ಮಾ ಮಹಾತಾಯಿ..ನಮ್ಮನೆಯ ಹೈಕಮಾಂಡ್ ನೀನೇ ತಾನೆ…’ ಅಣಕಿಸಿದರು ರಾಯರು. “ಸುಮ್ಮನೆ ಮಾತು ಬೇಡ… ಪ್ಯಾಕಿಂಗ್‌ಗೆ ಸ್ವಲ್ಪ ಸಹಾಯ ಮಾಡಿ’ ಎನ್ನುತ್ತಾ ಉದ್ದನೆಯ ಚೀಟಿ ಕೈಗಿತ್ತರು ಶಾರದಮ್ಮ.
“ಇದೆಂಥ, ಸಾಮಾನಿನ ಚೀಟಿಯಾ?…’ ಎಂದು ಕಿಸೆಯಲ್ಲಿ ಕನ್ನಡಕಕ್ಕಾಗಿ ಹುಡುಕಿದರು ರಾಯರು. “ಇದು ಸಾಮಾನುಗಳ ಪಟ್ಟಿ ಅಲ್ಲ. ನಾಳೆ ಹೊರಡಲು ಮಾಡ ಬೇಕಿರೋ ತಯಾರಿ. ನಾನು ಒಂದೊಂದೇ ಪ್ಯಾಕ್ ಮಾಡ್ತೀನಿ, ನೀವು ಪಟ್ಟಿಯಲ್ಲಿರೋದಕ್ಕೆ ಟಿಕ್ ಮಾಡಿ…’ ಎನ್ನುತ್ತಾ ತನ್ನ ಮುಂದಿದ್ದ ಲಗೇಜ್ ಬ್ಯಾಗ್‌ನ ಜಿಪ್‌ನ್ನು ರೊಯ್ ಎಂದು ತೆಗೆದರು ಶಾರದಮ್ಮ. “ನೋಡಿ, ಹೊರಡೋ ದಿನಕ್ಕೆ ಈ ಸಿಂಪಲ್ ಮೆರೂನ್ ಕಾಟನ್ ಸೀರೆ.
ಹೇಗಿದೆ, ಒಪ್ಪುತ್ತಲ್ವಾ ನನಗೆ? ಹುಂ, ಇದರದ್ದೇ ಬ್ಲೌಸ್ ಜೊತೇಲಿ ಇಟ್ಟಿದ್ದೇನೆ. ನಿಮಗೆ ಈ ಪ್ಯಾಂಟ್-ಶರ್ಟ್. ಆ ಟೇಬಲ್ ಮೇಲೆ ಇಟ್ಟಿರುತ್ತೇನೆ. ಮತ್ತೆ ಹೊರಡೋ ಗಡಿಬಿಡೀಲಿ, “ಶಾರೀ ನನ್ನ ಶರ್ಟ್ ಎಲ್ಲಿ…ಕಚೀìಫ್ ಹುಡುಕಿ ಕೊಡೇ’ ಅಂತೆಲ್ಲಾ ನನ್ನಲ್ಲಿ ಕೇಳಬೇಡಿ. ಗೊತ್ತಾಯ್ತೇ…’ ತಲೆ ಆಡಿಸಿ ಸಮ್ಮತಿಸಿದರು ರಾಯರು. “ಮದುವೆ ದಿನ ಬೆಳಗ್ಗೆ ಈ ರೇಷ್ಮೆ ಸೀರೆ.. ಮತ್ತೆ ಮುಹೂರ್ತದ ಸಮಯಕ್ಕೆ ಅಕ್ಕ-ಭಾವ ಮದುವೆಗೇ ಅಂತ ತೆಗೆದುಕೊಟ್ಟಿದ್ದಾರಲ್ಲ ಕಾಂಚೀವರಂ ಸೀರೆ ಅದು.
ಆ ಟೈಲರ್ ನಾನು ಹೇಳಿದ ಹಾಗೇ ಸ್ಟಿಚ್ ಮಾಡದೇ ಎಡವಟ್ಟು ಮಾಡಿಬಿಟ್ಟ, ಹಾಳಾದವನು…’ ಶಾರದಮ್ಮ ಗೊಣಗಿದರು. “ಅಯ್ಯೋ, ಸ್ವಲ್ಪ ಹೆಚ್ಚು ಕಮ್ಮಿ ಆದರೆ ಯಾಕೇ ಬೈತೀಯಾ? ಧರಿಸುವ ಹಾಗಿದೆಯಲ್ಲ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊ’ ಎಂದಿದ್ದಕ್ಕೆ ಗುರ್ ಎನ್ನುತ್ತಾ, “ಊಟದ ನಂತರ ಇದು. ಮತ್ತೆ ಆ ಹಸಿರು ಬಣ್ಣದ್ದು ಆರತಕ್ಷತೆಗೆ…. ‘ ಸೀರೆಗಳ ಪಟ್ಟಿ ಬೆಳೆಯುತ್ತಾ ಹೋಯಿತು. “ನನ್‌ಮೇಕಪ್ ಸೆಟ್‌ಎಲ್ಲಿದೆ? ನೀವೇನಾದರೂ ನೋಡಿದ್ರಾ… ‘ ಅಂತ ಕೇಳುತ್ತಾ, ಓಡಿ ಹೋಗಿ ರೂಮ್‌ನ ಕಪಾಟಿನಲ್ಲಿಟ್ಟಿದ್ದ ಮೇಕಪ್‌ಕಿಟ್ ತಂದರು ಶಾರದಮ್ಮ.
ಅಷ್ಟರಲ್ಲಿ ಫೋನ್ ರಿಂಗಣಿಸಿತು. “ಸಣ್ಣಕ್ಕಂದು’ ಎಂದು ಹೇಳುತ್ತಾ, ಮುಖವರಳಿಸಿ ಮಾತಾಡತೊಡಗಿದರು. ಆಹಾ ನನ್ನಾಕೆಯ ಮದುವೆಯ ಸಡಗರವೇ… ಇನ್ನರ್ಧ ಗಂಟೆ ಇವಳು ಫೋನಿಡುವುದಿಲ್ಲ ಎಂದುಕೊಳ್ಳುತ್ತಾ ಮತ್ತೆ ಟಿ.ವಿ. ಆನ್ ಮಾಡಿದರು ರಾಯರು. ಬರೋಬ್ಬರಿ ನಲವತ್ತು ನಿಮಿಷದ ನಂತರ ಒಳಬಂದ ಶಾರದಮ್ಮ – ” ಮತ್ತೆ ಟಿ.ವಿ. ಮುಂದೆ ಕೂತ್ರಾ? ಪ್ಯಾಕಿಂಗ್ ಮಾಡೋಣ ಬನ್ನಿ’ ಅಂತ ಗಡಿಬಿಡಿ ಮಾಡಿದರು. ಅಯ್ಯೋ, ನನ್ನಿಂದಾಗಿ ಲೇಟಾದವಳಂತೆ ಆಡ್ತಾಳಲ್ಲಾ ಎಂದು ಗೊಣಗುತ್ತಾ, ರಾಯರು ಹೆಂಡತಿಯನ್ನು ಹಿಂಬಾಲಿಸಿದರು.
“ಮಕ್ಕಳ ಡ್ರೆಸ್ ತಕ್ಕೊಂಡಿದ್ದೀಯೋ, ಬರೀ ನಿನ್ನ ಸೀರೆಯಲ್ಲೇ ಬ್ಯಾಗ್ ತುಂಬಿತೋ?’ ರಾಯರ ಪ್ರಶ್ನೆ ಮುಗಿಯುವಷ್ಟರಲ್ಲಿ, ಡುಮ್ಮಗಾಗಿದ್ದ ಎರಡು ದೊಡ್ಡ ಬ್ಯಾಗ್‌ಗಳನ್ನು ಗಂಡನ ಎದುರಿಟ್ಟರು ಶಾರದಮ್ಮ. ನನಗೆ ಅಷ್ಟೂ ತಿಳಿಯೋದಿಲ್ಲವೇ ಅನ್ನುವಂತಿತ್ತು ಅವರ ದೃಷ್ಟಿ. ತುಂಬು ಗರ್ಭಿಣಿಯಂತೆ ಕಾಣುವ ಆರು ಬ್ಯಾಗ್‌ಗಳು ತಯಾರಾದಾಗ, ರಾಯರಿಗೆ ಕುತೂಹಲ; ಏನೆಲ್ಲಾ ತುಂಬಿಸಿದ್ದಾಳೆ ಇದರೊಳಗೆ ಅಂತ. ಕುತೂಹಲದಿಂದ ಚೀಟಿ ಮೇಲೆ ಕಣ್ಣಾಡಿಸಿದರು.
ಟವೆಲ್, ಒದ್ದೆ ಬಟ್ಟೆ ಹಾಕಲು ಪ್ಲಾಸ್ಟಿಕ್ ಕವರ್, ಶೀತ ಜ್ವರದ ಮಾತ್ರೆ, ಬಿ.ಪಿ ಮಾತ್ರೆ, ಕಾಲು ನೋವಿಗೆ ಎಣ್ಣೆ, ಸಣ್ಣ ಟಾರ್ಚ್, ಸ್ವೆಟರ್, ಪರ್ಸ್, ದೂರದ ಬೆಂಗಳೂರಿನ ಮದುವೆಗೆ ಆಭರಣ ಬೇಡವೆಂದು ಒಂದು ತಿಂಗಳ ಮೊದಲೇ ಖರೀದಿಸಿದ್ದ ಒನ್ ಗ್ರಾಂ ಗೋಲ್ಡ್ ಸೆಟ್, ಮೊಬೈಲ್‌ಚಾರ್ಜರ್, ಚೂರಿ, ಒಣಗಿಸಿದ ಶುಂಠಿ, ಲಿಂಬೆ ಚೂರು, ಚಿಕ್ಕಚಿಕ್ಕಚಾಕಲೇಟ್, ನೀರಿನ ಬಾಟಲ್, ಟೂತ್ ಬ್ರಷ್, ಪೇಸ್ಟ್, ಸೋಪ್, ಪೇಟೆಯ ಬಂಧುಗಳಿಗೆ ಹಂಚಲು ನನ್ನಾಕೆಯೇ ತಯಾರಿಸಿದ ಹಪ್ಪಳ, ಸಂಡಿಗೆ, ಮದುಮಕ್ಕಳಿಗೆ ಉಡುಗೊರೆ…
“ನಾಲ್ಕು ದಿನಕ್ಕೆ ಇಷ್ಟೆಲ್ಲಾ ತಯಾರಿ ಬೇಕಾ?’ ಅಂತ ರಾಯರ ಮಾತು ಮುಗಿಯೋ ಮೊದಲೇ, “ನೋಡೀ, ಪ್ಯಾಕಿಂಗ್ ಮಾಡಿದವಳು ನಾನು. ಹೊರೋದು ಬಸ್. ಮಧ್ಯೆ ನಿಮ್ಮದೇನು ತಕರಾರು. ಸುಮ್ಮನೆ ಬನ್ನಿ ಜೊತೆಗೆ… ‘ ಎನ್ನುತ್ತಾ ತುಂಬಿಸಿಟ್ಟ ಲಗೇಜ್‌ನ್ನೊಮ್ಮೆ ಸಂತೃಪ್ತಿಯಿಂದ ನೋಡಿದರು ಶಾರದಮ್ಮ. ಅಂತೂ ಇಂತೂ ಲಗೇಜ್ ಸಮೇತ ಬೆಂಗಳೂರು ತಲುಪಿತು ರಾಯರ ಕುಟುಂಬ.
ಮದುವೆಯ ಭೂರಿಭೋಜನ ಸವಿದು ವಿಶ್ರಾಂತಿಯಲ್ಲಿದ್ದ ರಾಯರಿಗೆ, ಎಲೆ ಅಡಕೆ ಮೆಲ್ಲುವ ಮನಸ್ಸಾಯ್ತು. ಅಲ್ಲಿ ಇಟ್ಟಿದ್ದ ಪಾನ್ ಬೀಡಾ ಅವರಿಗೆ ಹಿಡಿಸಲಿಲ್ಲ. ಛೇ, ಸಂಚಿಯ ಗಂಟನ್ನಾದರೂ ತರಬಾರದಿತ್ತೇ ಅನ್ನಿಸಿತು ಅವರಿಗೆ. ಅದನ್ನೇ ಹೆಂಡತಿಯಲ್ಲಿಯೂ ಹೇಳಿದರು. ಕೂಡಲೇ ಲಗೇಜ್ ರೂಮ್‌ಗೆ ಹೋದ ಶಾರದಮ್ಮ , ಎಲೆ-ಅಡಕೆ ಚೀಲದೊಂದಿಗೆ ಹೊರಬಂದರು! “ತಗೊಳ್ಳಿ ನಿಮ್ಮ ಅತ್ಯಮೂಲ್ಯವಾದ ಗಂಟು. ಈಗಲಾದರೂ ತಿಳಿಯಿತೇ, ಪ್ರಯಾಣಕ್ಕೆ ಮೊದಲು ನಾನು ಪಟ್ಟಿ ತಯಾರಿಸೋದು ಯಾಕೆ ಅಂತ…’ ಹೆಮ್ಮೆಯಿಂದ ಬೀಗಿದರು ಶಾರದಮ್ಮ.
* ವಂದನಾ ರವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.