ಸ್ಮಾರ್ಟ್ ಯುಗದ ಸ್ಮಾರ್ಟ್ ಗರ್ಲ್
ಗುಡ್ ಗರ್ಲ್ ಆದರಷ್ಟೇ ಸಾಲದು...
Team Udayavani, Mar 11, 2020, 5:28 AM IST
ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಅವಳ ಮಾತಿನ ಶೈಲಿ, ಸ್ವಲ್ಪ ಅತಿ ಎನಿಸಿದ ಕಿಸಿಕಿಸಿ ನಗು….ನನ್ನ ಮನಸ್ಸಿಗಂತೂ ಹಿತವೆನಿಸಲಿಲ್ಲ. “ಯಾರೋ ಬಾಯ್‌ಫ್ರೆಂಡ್ ಜೊತೆ ಮಾತಾಡುತ್ತಿದ್ದಾಳೆ’ ಅಂದುಕೊಂಡೆ. ಆ ಯುವತಿ ಅಚಾನಕ್ ಆಗಿ ನನ್ನತ್ತ ನೋಡಿದಾಗ ಆಶ್ಚರ್ಯವಾಯಿತು. ಯಾಕಂದ್ರೆ, ಆಕೆ ನನ್ನ ಸ್ನೇಹಿತೆಯ ಮಗಳೇ…
ಅದೊಂದು ದಿನ ಸಂಜೆ ಏಳು ಗಂಟೆಯ ಸಮಯ. ಕತ್ತಲಾಗಿತ್ತು. ಮುಖ್ಯರಸ್ತೆಯಿಂದ ನಮ್ಮ ಬಡಾವಣೆಗೆ ತಿರುಗುವ ರಸ್ತೆಯ ಪಕ್ಕದ ಅಂಗಡಿಯಲ್ಲಿ ಸಣ್ಣ ವ್ಯಾಪಾರ ಮುಗಿಸಿ ಹೊರಡುವವಳಿ¨ªೆ. ಅಲ್ಲಿಯೇ ಪಕ್ಕದಲ್ಲಿದ್ದ ಬಸ್ ತಂಗುದಾಣದಲ್ಲಿ ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದು ಕಾಣಿಸಿತು. ಅವಳ ಮಾತಿನ ಶೈಲಿ, ಸ್ವಲ್ಪ ಅತಿ ಎನಿಸಿದ ಕಿಸಿಕಿಸಿ ನಗು….ನನ್ನ ಮನಸ್ಸಿಗಂತೂ ಹಿತವೆನಿಸಲಿಲ್ಲ. “ಯಾರೋ ಬಾಯ್‌ಫ್ರೆಂಡ್ ಜೊತೆ ಮಾತಾಡುತ್ತಿದ್ದಾಳೆ. ಈಗಿನ ಹುಡುಗಿಯರಿಗೆ ಸಾಮಾಜಿಕ ಶಿಸ್ತು ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾತುಕತೆ, ಚರ್ಯೆಗಳನ್ನು ಪರಿಚಿತರು ಗಮನಿಸಿ ಈ ಹುಡುಗಿ ಹಾಗೆ..ಹೀಗೆ ಎಂಬ ಅಭಿಪ್ರಾಯ ತಳೆಯುತ್ತಾರೆ ಎಂಬ ಪರಿಜ್ಞಾನ ಇಲ್ಲ..’ ಇತ್ಯಾದಿ ಇತ್ಯಾದಿಗಳು ನನ್ನ ಮನಸ್ಸಿನಲ್ಲಿ ಹಾದು ಹೋದವು.
ಈಗ ಮಧ್ಯ ವಯಸ್ಸಿನಲ್ಲಿರುವ, ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದು ಬಂದ ನನ್ನಂಥ ಹೆಚ್ಚಿನ ಮಹಿಳೆಯರ ಅಭಿಪ್ರಾಯ ಹೀಗೆಯೇ ಇರುತ್ತದೇನೋ. ಆಧುನಿಕ ಸವಲತ್ತುಗಳು, ಮೊಬೈಲ್ ಫೋನ್‌ಗಳಿಲ್ಲದ ನಮ್ಮ ಕಾಲದಲ್ಲಿ, ಹೆಣ್ಣು ಮಕ್ಕಳೆಂದರೆ ತಗ್ಗಿ ಬಗ್ಗಿ ನಡೆಯಬೇಕು, ಕೆಲಸ-ಬೊಗಸೆ ಕಲಿಯಬೇಕು, ಹುಡುಗರೊಂದಿಗೆ ಚೆಲ್ಲುಚೆಲ್ಲಾಗಿ ವರ್ತಿಸಬಾರದು, ಹೀಗಿರಬೇಕು, ಹಾಗಿರಬಾರದು ಎಂಬೆಲ್ಲಾ ಲಕ್ಷ್ಮಣ ರೇಖೆಯ ಒಳಗೆ ಬೆಳೆದು ಬಂದ ಕಾರಣ “ಗುಡ್ ಗರ್ಲ್ ಸಿಂಡ್ರೋಮ್’ ನಮಗೆ ಅರಿಯದೆಯೇ ನಮ್ಮನ್ನು ಆವರಿಸಿತ್ತು. ನಮಗೆ ಏನು ಬೇಕು, ನಾವು ಹೇಗಿರಬೇಕು ಎಂಬ ವೈಯಕ್ತಿಕ ಆಯ್ಕೆಗೆ ಅವಕಾಶವೇ ಇಲ್ಲದಂತೆ ಇನ್ನೊಬ್ಬರ ಮೆಚ್ಚುಗೆ ಗಳಿಸಲು, ಇನ್ನೊಬ್ಬರಿಂದ ಅಂಗೀಕಾರ ಪಡೆಯಲು ನಾವು ಹೇಗಿರಬೇಕು ಎಂಬುದೇ ನಮ್ಮ ಆದರ್ಶವಾಗಿತ್ತು. ಆಗಿನ ಸಾಮಾಜಿಕ ಪರಿಸರದಲ್ಲಿ ಇದು ಸೂಕ್ತವೇ ಆಗಿತ್ತು.
ನಾನು ಹೀಗೆಲ್ಲಾ ಆಲೋಚಿಸುತ್ತಲೇ ಇದ್ದೆ. ಇನ್ನೂ ಮಾತನಾಡುತ್ತಲೇ ಇದ್ದ ಆ ಯುವತಿ ಅಚಾನಕ್ ಆಗಿ ನನ್ನತ್ತ ನೋಡಿದಳು. ನನಗೆ ಆಶ್ಚರ್ಯವಾಯಿತು! ಯಾಕಂದ್ರೆ, ಆಕೆ ನನಗೆ ಪರಿಚಿತಳೇ. ಸ್ನೇಹಿತೆಯೊಬ್ಬರ ಮಗಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನನ್ನನ್ನು ಗಮನಿಸಿದ ಆಕೆ “ಹಾಯ್ ಆಂಟಿ’ ಅಂದು ಪುನಃ ಮಾತು ಮುಂದುವರಿಸಿದಳು. ಚಿಕ್ಕ ವಯಸ್ಸು, ವಿದ್ಯೆ ಇದೆ, ಕೈಯಲ್ಲಿ ದುಡ್ಡಿದೆ, ಮೇಲಾಗಿ ಸ್ವಾತಂತ್ರ್ಯ ಇದೆ, ಏನಾದರೂ ಮಾಡಿಕೊಳ್ಳಲಿ ಅಂತ ಒಂದು ಮನಸ್ಸು ಹೇಳಿತಾದರೂ, ಆಕೆ ಸ್ನೇಹಿತೆಯ ಮಗಳು. ಅವಳೇನಾದರೂ ತಪ್ಪು ಮಾಡಿದರೆ ತಿದ್ದಬೇಕಾದದ್ದು ನನ್ನ ಕಕ್ಷಿರ್ತವ್ಯ. ಈ ವಿಚಾರವನ್ನು ಸೂಕ್ಷ್ಮವಾಗಿ ಹುಡುಗಿಯ ತಾಯಿಯ ಗಮನಕ್ಕೆ ತರುವುದು ಉತ್ತಮವಲ್ಲವೇ ಎಂದಿತು ಇನ್ನೊಂದು ಮನಸ್ಸು. ಕೆಲವು ದಿನಗಳ ನಂತರ ಆ ಸ್ನೇಹಿತೆಯ ಮನೆಗೆ ಭೇಟಿ ಕೊಟ್ಟಾಗ, ಹೇಳಲೋ ಬೇಡವೋ ಅಂತ ಅಳೆದೂ-ಸುರಿದೂ ಕೊನೆಗೆ ಸಂಕ್ಷಿಪ್ತವಾಗಿ, ನಾನು ಗಮನಿಸಿದುದನ್ನು ಹೇಳಿದೆ.
ನನ್ನ ಮಾತುಗಳಿಂದ ಆಕೆಗೆ ಅಸಮಾಧಾನ, ಚಿಂತೆ ಅಥವಾ ಮುಜುಗರ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ನನಗೆ ಅಚ್ಚರಿಯಾಗುವಂತೆ ಸ್ನೇಹಿತೆ ಪಕಪಕನೇ ನಗುತ್ತಾ ಹೇಳಿದರು- “ಓಹೋ ಅದಾ… ಚೆನ್ನಾಗಿ ನಾಟಕ ಆಡುತ್ತೆ..ಅವರ ಕಂಪನಿ ಕ್ಯಾಬ್ ಮೈನ್ ರೋಡ್‌ವರೆಗೆ ಮಾತ್ರ ಬರುತ್ತೆ. ಕೆಲವೊಮ್ಮೆ ಅವಳು ಬರುವಾಗ ಕತ್ತಲಾಗಿರುತ್ತದೆ. ಆವಾಗ ಅಲ್ಲಿಳಿದು ಮನೆಗೆ ಫೋನ್ ಮಾಡಿ ತಿಳಿಸ್ತಾಳೆ. ಇಲ್ಲಿಂದ ಹೋಗಿ ಕರ್ಕೊಂಡು ಬರುವಷ್ಟು ಸಮಯ ಆ ಬಸ್ ಸ್ಟಾಂಡ್‌ನಲ್ಲಿ ಒಬ್ಳೆ ಇರ್ತಾಳಲ್ಲಾ, ಯಾರಾದರೂ ಪಡ್ಡೆ ಹುಡುಗರು ಏನಾದ್ರೂ ನೆಪ ಮಾಡ್ಕೊಂಡು ಮಾತಾಡ್ಸೋದು, ಕಣ್ಣು ಹೊಡೆಯೋದು, ಹಲ್ಲಿ ಕಿಸಿಯೋದು ಮಾಡ್ತಾರಂತೆ. ಅದಕ್ಕೆ ಇವೆ ಮಾಡ್ಕೊಂಡಿರೋ ಉಪಾಯ ಇದು. ಮನೆಗೊಮ್ಮೆ ತಿಳಿಸಿ, ಆಮೇಲೆ ನನ್ನ ಬಳಿಯೋ, ಅವಳ ಫ್ರೆಂಡಿಗೋ ಕಾಲ್ ಮಾಡಿ, ಬಾಯ್ ಫ್ರೆಂಡ್ ಜೊತೆಗೆ ಮಾತಾಡಿದಂಗೆ ಸುಳ್ಳೇ ಸುಳ್ಳು ಮಾತಾಡ್ತಾಳೆ. ಕೆಲವೊಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಿಯೇ ಏಕಪಾತ್ರಾಭಿನಯ ಮಾಡ್ತಾಳೆ. ಅಪ್ಪ ಅಥವಾ ತಮ್ಮ ಬರುವಲ್ಲಿವರೆಗೆ ಹಿಂಗೆ ಇವಳ ನಾಟಕ ನಡೆದಿರುತ್ತೆ. ಆಶ್ಚರ್ಯಕ್ಕೆ, ಯಾವ ಪಡ್ಡೆ ಹುಡುಗರೂ ಇವಳೆ ತಂಟೆಗೆ ಬಂದಿಲ್ವಂತೆ…’
“ಈಗಿನ ಹುಡುಗೀರು ಸ್ಮಾರ್ಟ್ ಕಣೇ… ನಾವುಗಳೇ ಕಾಲೇಜಿಗೆ ಹೋಗುತ್ತಿದ್ದಾಗ, ಬಸ್ ಮಿಸ್ ಆಗಿ ಕತ್ತಲಾದ್ರೆ, ಯಾವನಾದ್ರೂ ಮಾತಾಡ್ಸಿದ್ರೆ ಪೆಕರು ಪೆಕರಾಗಿ ಅಳುಮುಂಜಿ ತರ ಇರ್ತಿದ್ದಿದ್ದು…’ ಎಂದೂ ಅವರು ಹೇಳಿದಾಗ “ಜಾಣೆಯಿವಳು’ ಎಂದು ತಲೆದೂಗಿದೆ.
ಹೆಣ್ಣನ್ನು ಚುಡಾಯಿಸುವವರು ಅಂದೂ ಇದ್ದರು. ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ತ್ರೇತಾಯುಗದಲ್ಲಿಯೇ ರಾವಣನು ಸೀತೆಯನ್ನು ಕಾಡಿದ್ದನಂತೆ. ಇನ್ನು ಕಲಿಯುಗದಲ್ಲಿ ಕೇಳಬೇಕೆ? ಮಹಿಳೆಯೇ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕು. ಜೊತೆಗೆ, ಅವಳ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಇದ್ದರೆ, ಆಕೆ ತನ್ನನ್ನು ಸಂರಕ್ಷಿಸಿಕೊಳ್ಳಲು ಸುಲಭ. ಈಗಿನ ಕಾಲದಲ್ಲಿ ಗುಡ್ ಗರ್ಲ್ ಆಗಿದ್ದರಷ್ಟೇ ಸಾಲದು, ಸ್ಮಾರ್ಟ್ ಗರ್ಲ್ ಕೂಡಾ ಆಗಿದ್ದರೆ ಒಳ್ಳೆಯದು.
– ಹೇಮಮಾಲಾ ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.