ಮದುವೆಯ ಈ ಬಂಧನ
ನಿನ್ನ ನೀನು ಮರೆತರೇನು ಸುಖವಿದೆ?
Team Udayavani, Feb 26, 2020, 5:59 AM IST
ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ, ಸಂಸಾರ, ಮಗು, ಕುಟುಂಬ ಕೊಡುವ ಅವರ್ಣನೀಯ ಬೆಚ್ಚನೆಯ ಸುಖದಲ್ಲಿ ಅವಳು ಮೈಮರೆತಿರುವಾಗ, ತನ್ನದೆನ್ನುವ ವ್ಯಕ್ತಿತ್ವವನ್ನು ತಾನು ನಿಧಾನಕ್ಕೆ ಕಳೆದುಕೊಳ್ಳುತ್ತಿರುವುದು ಗೊತ್ತೇ ಆಗುವುದಿಲ್ಲ.
ಹದಿನಾರು ತುಂಬುತ್ತಿದ್ದಂತೆ ಪೊರೆ ಕಳಚಿದ ಬಣ್ಣದ ಚಿಟ್ಟೆಯಂತೆ ಹಾರಾಡುವ ಅವಳು, ಮದುವೆಯಾದ ಕೂಡಲೇ ಮತ್ತದೇ ಪೂರ್ವಾವಸ್ಥೆಗೆ ತನ್ನನ್ನು ತಾನೇ ದೂಡಿಕೊಂಡು ಬಿಡುತ್ತಾಳೆ. ಯಾವ ಅನಿವಾರ್ಯತೆಗಳು, ಒತ್ತಡಗಳು ಅವಳಲ್ಲಿನ ಜೀವನೋತ್ಸಾವನ್ನು ಹೀಗೆ ಬಗ್ಗುಬಡಿಯುತ್ತವೆ? ಅಷ್ಟಕ್ಕೂ ಮದುವೆ ಎಂಬ ಮೂರಕ್ಷರ ಅವಳ ಬದುಕನ್ನು ಈ ಪರಿಯಾಗಿ ಬದಲಾಯಿಸಬೇಕಾದರೂ ಯಾಕೆ? ಅಥವಾ ತನಗೇ ಗೊತ್ತಿಲ್ಲದಂತೆ ಅವಳೇ ಬದಲಾಗಿ ಬಿಡುತ್ತಾಳಾ?
ಅರವತ್ತು ನಿಮಿಷಕ್ಕೆ ಅರವತ್ತೈದು ಕನಸು ಕಾಣುತ್ತಿದ್ದ ಅವಳು, ಗಂಟೆಗೊಂದು ಸಲ ಎಲ್ಲರೊಂದಿಗೂ ಜಗಳ ಕಾಯುತ್ತಿದ್ದ ಅವಳು, ಚಟಾಕಿಯಂತೆ ಗಲಗಲ ಮಾತಾಡುತ್ತಿದ್ದ ಅವಳು, ಕಾಫಿ ಲೋಟ ಕಾಲ ಬುಡದಲ್ಲಿ ಉರುಳಾಡಿದರೂ ಎತ್ತಿಡದ ಅವಳು, ಹಠ ಸಾಧಿಸಿಯೇ ಎಲ್ಲವನ್ನೂ ಗೆಲ್ಲುತ್ತಿದ್ದ ಅವಳು, ತನ್ನ ಸೌಂದರ್ಯದ ಬಗ್ಗೆ ಅಪರಿಮಿತ ಜಂಭವಿದ್ದ ಅವಳು, ಅಮ್ಮನ ನೀರಸ ಬದುಕಿನ ಕುರಿತು ತಮಾಷೆ ಮಾಡುತ್ತಿದ್ದ ಅವಳು, ಮದುವೆಯಾದ ಕೂಡಲೇ ಅಮ್ಮನ ಅದೇ ದೈನೇಸಿತನದ ಪ್ರತಿಬಿಂಬವಾಗಿ ಥೇಟ್ ಅಂಥದ್ದೇ ಬದುಕನ್ನು ಅಪ್ಪಿಬಿಡುವುದಾದರೂ ಯಾಕೆ? ಹೆತ್ತರವರ ಮಾತಿಗೆ “ಎಸ್’ ಎಂದೇ ಗೊತ್ತಿರದ ಅವಳ್ಯಾಕೆ “ನೋ’ ಎನ್ನುವುದನ್ನೇ ಮರೆತು ಬಿಡುತ್ತಾಳೆ.
ಸ್ವಂತಿಕೆ ಮರೆಯಾಗಿ…
ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ, ಸಂಸಾರ, ಮಗು, ಕುಟುಂಬ ಕೊಡುವ ಅವರ್ಣನೀಯ ಬೆಚ್ಚನೆಯ ಸುಖದಲ್ಲಿ ಅವಳು ಮೈಮರೆತಿರುವಾಗ, ತನ್ನದೆನ್ನುವ ವ್ಯಕ್ತಿತ್ವವನ್ನು ತಾನು ನಿಧಾನಕ್ಕೆ ಕಳೆದುಕೊಳ್ಳುತ್ತಿರುವುದು ಗೊತ್ತೇ ಆಗುವುದಿಲ್ಲ. ಇಷ್ಟದ ಹವ್ಯಾಸಗಳು ಮೆಲ್ಲಗೆ ಅಟ್ಟ ಸೇರುತ್ತವೆ. ಸೌಂದರ್ಯದ ಬಗೆಗೊಂದು ದಿವ್ಯ ನಿರ್ಲಕ್ಷ್ಯ ಮೂಡುತ್ತದೆ. ಸ್ನೇಹಿತರೊಂದಿಗೆ ಸುತ್ತುವ ಆಸಕ್ತಿಯೇ ಹೊರಟು ಹೋಗಿರುತ್ತದೆ. ಎಲ್ಲಿ ಹೋದರೂ ನೆನಪಾಗುವ ಮನೆಯ ಜವಾಬ್ದಾರಿಗಳು ಆಕೆಯನ್ನು ಕಂಗೆಡಿಸುತ್ತವೆ. ಗಂಡ-ಮಕ್ಕಳ ಬೇಕು ಬೇಡಗಳನ್ನು ಪೂರೈಸುವ ಧಾವಂತದಲ್ಲಿ ತನಗೇನು ಬೇಕಿತ್ತು ಎನ್ನುವುದನ್ನೇ ಮರೆತು ಬಿಟ್ಟಿರುತ್ತಾಳೆ. ಅದು ಅರಿವಾಗುವ ಹೊತ್ತಿಗೆ ಬದುಕು ಅವಳನ್ನು ಮತ್ತೂಂದು ನಿರ್ಲಿಪ್ತ ದಡಕ್ಕೆ ಸದ್ದಿಲ್ಲದೇ ಸಾಗಿಸಿಬಿಟ್ಟಿರುತ್ತದೆ.
ಅವಳು ಮುಗ್ಗರಿಸುವುದೆಲ್ಲಿ?
ಹೊಸತನದ ಹುಮ್ಮಸ್ಸಿನಲ್ಲಿ ಗಂಡನನ್ನು ಒಲಿಸಿಕೊಳ್ಳಲು, ಹಿರಿಯರನ್ನು ಮೆಚ್ಚಿಸಲು ಅವರ ಕೆಲಸಗಳನ್ನು ಬೇಡವೆಂದರೂ ಮಾಡಿಕೊಡುವುದು ಆರಂಭದಲ್ಲಿ ಖುಷಿಕೊಟ್ಟರೂ, ಜವಾಬ್ದಾರಿ ಹೆಚ್ಚಿದಂತೆಲ್ಲಾ ಅವು ಹೊರೆಯಾಗಿ ಬಿಡುತ್ತವೆ. ನಂತರ ಎಲ್ಲರೂ ಹೇಳುವ ಕೆಲಸಗಳನ್ನು ಇಷ್ಟವಿರಲಿ, ಇಲ್ಲದಿರಲಿ “ನೋ” ಎನ್ನದೇ ಮಾಡಬೇಕಾಗುತ್ತದೆ. ಮನೆಯವರು ಎಲ್ಲದ್ದಕ್ಕೂ ತನ್ನನ್ನೇ ಅವಲಂಬಿಸುವ ಸ್ಥಿತಿಯನ್ನು ಹೆಣ್ಣು ತಾನಾಗಿಯೇ ರೂಢಿ ಮಾಡಿಸಿಬಿಡುತ್ತಾಳೇನೋ! ಅವರವರ ಕೆಲಸಗಳನ್ನು ಸಾಧ್ಯವಾದಷ್ಟು ಅವರೇ ಮಾಡಿಕೊಳ್ಳಲು ಬಿಟ್ಟರೆ, ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಯುತ್ತಾ ಒಂದೊಳ್ಳೆ ಪುಸ್ತಕ ಓದುವುದಕ್ಕೋ, ಚಂದದ ಸಿನೆಮಾ ನೋಡುವುದಕ್ಕೋ ಹೆಣ್ಣಿಗೆ ಸಮಯ ಸಿಕ್ಕೀತು.
ಬಾಗಿಲನ್ನೊಮ್ಮೆ ತೆರೆದು ನೋಡು..
-ಗೃಹಕೃತ್ಯಗಳಲ್ಲಿ ಕಳೆದು ಹೋಗುವ ನಡುವೆ, ನಿಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡಿ. ಒಳ್ಳೆಯ ಸಂಗೀತ ಕೇಳುವುದು, ಉತ್ತಮ ಸಾಹಿತ್ಯ ಓದುವುದು ದಿನಚರಿಯ ಭಾಗವಾಹಗಲಿ.
-ವ್ಯಕ್ತಿತ್ವ, ಅಭಿರುಚಿಗೆ ತಕ್ಕಂತೆ ಹೆಂಗಸರ ಗುಂಪು ಕಟ್ಟಿಕೊಂಡು ಪ್ರವಾಸ, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಿ.
-ಕಲಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಬಹಳ ವರ್ಷಗಳಿಂದ ಕಲಿಯಬೇಕು ಅಂತ ಕನಸು ಕಂಡ ವಿದ್ಯೆಯನ್ನು ಕಲಿಯಲು ಸಮಯ ಮೀಸಲಿಡಿ.
-ನಲವತ್ತು ವರ್ಷ ದಾಟಿ, ಎರಡು ಮಕ್ಕಳ ತಾಯಿಯಾದ ಕೂಡಲೇ ಬದುಕು ಮುಗಿದು ಹೋಗಿದೆ ಎಂಬ ವೈರಾಗ್ಯ ಸಲ್ಲ. ಅದರಿಂದ ಆದಷ್ಟು ಬೇಗ ಆಚೆ ಬನ್ನಿ. ಸಿಗುವ ಸ್ವಾತಂತ್ರ್ಯದ ಮಿತಿಯೊಳಗಿನ ಎಲ್ಲ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ.
-ಮದುವೆ ಎನ್ನುವುದು ಕೇವಲ ಜವಾಬ್ದಾರಿಗಳ ಹೊರೆಯಲ್ಲ. ಅಲ್ಲಿ ನಮಗೂ ನಮ್ಮದೇ ಆದ ಸ್ಥಾನವಿದೆ. ಒಂದು ವ್ಯಕ್ತಿತ್ವವಿದೆ. ಅದನ್ನು ಚಂದವಾಗಿ ರೂಪಿಸಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆ. ಅದಕ್ಕೆ, ನಾವಾಗಿಯೇ ಭದ್ರ ಪಡಿಸಿಕೊಂಡ ಸಂಸಾರದ ಕೋಟೆಯ ಬಾಗಿಲನ್ನು ತೆರೆದು ನೋಡಬೇಕು.
-ಹೊಸ ಮನೆಯನ್ನು ಸೇರಿದ ದಿಗಿಲಿನಿಂದಲೋ, ದಾಕ್ಷಿಣ್ಯದಿಂದಲೋ ನಿಮ್ಮ ಇಷ್ಟಾನಿಷ್ಟಗಳನ್ನು ಮರೆಮಾಚಬೇಡಿ. ನಿಮ್ಮ ಆಸಕ್ತಿ, ಹವ್ಯಾಸ, ಆಸೆ-ಆಕಾಂಕ್ಷೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.
– ಕವಿತಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.