ಬೋಗುಣಿ ಕಟ್: ಇದು ಕೋವಿಡ್ ಹೇರ್ ಸ್ಟೈಲ್
Team Udayavani, May 13, 2020, 12:49 PM IST
ಸಾಂದರ್ಭಿಕ ಚಿತ್ರ
ಸ್ಮಶಾನ ವೈರಾಗ್ಯ ಎಂಬ ಮಾತು ಕೇಳಿದ್ದೆವು. ಆದರೆ, ಈಗ ನಮ್ಮನ್ನು ಆವರಿಸಿರುವುದು ಕೋವಿಡ್ ವೈರಾಗ್ಯ. ಅಲ್ವಾ ಮತ್ತೆ? ಮಡಿಸಿ ಇಸ್ತ್ರಿ ಮಾಡಿಟ್ಟ ಸೀರೆಗಳು, ಬೀರುವಿನಲ್ಲಿ
ಹಾಗೆಯೇ ಇವೆ. ನಾಲ್ಕು ನೈಟಿ, ಮೂರು ಚೂಡಿದಾರಗಳಲ್ಲಿ ತಿಂಗಳು ಕಳೆದಿದ್ದೇವೆ. ಇಷ್ಟಿದ್ದರೆ ಸಾಕಲ್ಲವೇ? ಹೊಸ ಚಪ್ಪಲಿ, ಹೊಸ ಸೀರೆಗಳು, ಆಭರಣಗಳು ಏನೂ ಬೇಡ. ಆರೋಗ್ಯ ಸರಿಯಾಗಿದ್ದರೆ ಸಾಕು ಎನ್ನಿಸುವ ಮಟ್ಟಿಗೆ, “ಕೋವಿಡ್ ವೈರಾಗ್ಯ’ ಆವರಿಸಿಬಿಟ್ಟಿದೆ.
ಅಷ್ಟೇ ಅಲ್ಲ, ಈ “ಲಾಕ್‌ಡೌನ್’, ನಮ್ಮಲ್ಲಿರುವ ಪ್ರತಿಭೆಯ “ಲಾಕ್ ಓಪನ್’ ಮಾಡಿರುವುದು ಸುಳ್ಳಲ್ಲ. (ಕೆಲವರು ಎಲ್ಲೆಲ್ಲೋ ಸಿಕ್ಕಿ ಹಾಕಿಕೊಂಡು ನಿಜ ಅರ್ಥದಲ್ಲಿ ಲಾಕ್ ಡೌನ್ ಆಗಿಬಿಟ್ಟಿದ್ದಾರೆ. ಪರಿಚಿತರೊಬ್ಬರು, ನೆಂಟರ ಮದುವೆಗೆಂದು ಬೆಂಗಳೂರಿಗೆ ಬಂದವರು ವಾಪಸ್ ಹೋಗಲಾಗದೆ ಅನಿವಾರ್ಯವಾಗಿ ನೆಂಟರ ಮನೆಯಲ್ಲಿಯೇ ದಿನ ಎಣಿಸುತ್ತಿದ್ದಾರೆ) ನಮ್ಮ ಮನೆಯ ಹತ್ತಿರ, ಉಡುಪಿ ಮೂಲದ ಸಂಸಾರ ಒಂದಿದೆ. ಅವರ ಹೆಂಡತಿ, ಮದುವೆ ಇತ್ತೆಂದು ಉಡುಪಿಗೆ ಹೋಗಿದ್ದಾರೆ. ಗಂಡನಿಗೆ ಕೆಲಸದ ಒತ್ತಡದಲ್ಲಿ ಹೊರಡಲಾಗಲಿಲ್ಲ. 4 ದಿನಕ್ಕೆ ಅಂತ ಹೋದ ಹೆಂಡತಿ, ಮಕ್ಕಳು ಅಲ್ಲಿ ಲಾಕ್ ಆಗಿಬಿಟ್ಟರು. ಇವರು ಬೆಂಗಳೂರಿನಲ್ಲಿ. ನಮ್ಮ ಹಿಂದಿನ ಬೀದಿಯವರೇ ಆದ್ದರಿಂದ, ಆಚೀಚೆ ಓಡಾಡುವಾಗ, ಮಾತಾಡಿಸುತ್ತಿದ್ದರು. ಒಂದು ದಿನ ಹೀಗೇ ಮಾತಾಡುತ್ತಾ- “ನೋಡಿ ಅಕ್ಕ, ನನ್ನ ಕೂದಲು ಹೇಗೆ ಬೆಳೆದಿದೆ. ಯಾವಾಗಲೂ 2 ತಿಂಗಳಿಗೊಮ್ಮೆ ಹೇರ್‌ಕಟ್ ಮಾಡಿಸ್ತಿದ್ದೆ. ಈ ಬಾರಿ ಎರಡೂವರೆ ತಿಂಗಳು ಹೋಗಲಾಗಿರಲಿಲ್ಲ. ಅಷ್ಟರಲ್ಲಿ ಲಾಕ್‌ಡೌನ್ ಆಯಿತು. ಈಗ 4 ತಿಂಗಳು ಆಗುತ್ತಾ ಬಂತು. ತಲೆಯೆಲ್ಲಾ ತುರಿಕೆ ಬೇರೆ’ ಎಂದು ನೀಳ ಕೂದಲೊಳಗೆ ಕೈಯಾಡಿಸಿ, ಎಂಥ ಮಾಡುವುದೋ ಏನೋ ಎಂದು ಪೇಚಾಡಿಕೊಂಡರು.
ಮೊನ್ನೆ ಸಂಜೆ ಕಾಂಪೌಂಡ್ ಬಳಿ ನಿಂತಿದ್ದಾಗ, “ಹೇಗಿದ್ದೀರ ಅಕ್ಕಾ..?’ ಎಂದು ರಸ್ತೆಯಲ್ಲಿ ಹೋಗುವವರೊಬ್ಬರು ಕೇಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಪಕ್ಕನೆ ಗುರುತು ಸಿಗಲಿಲ್ಲ. ಮಾಸ್ಕ್ ತೆಗೆದ ಆತ, “ನಾನು ಅಕ್ಕಾ ಶ್ರೀಧರ. ಗೊತ್ತಾಗಲಿಲ್ಲವಾ?’ ಎಂದರು. ಅವರ ಹೊಸ ಹೇರ್‌ಸ್ಟೈಲ್ ನೋಡಿ, “ಅಯ್ಯೋ, ಇದೆಂಥಾ ಅವಸ್ಥೆ ನಿಮ್ಮದು? ಎಲ್ಲಿ ಹೇರ್‌ಕಟ್ ಮಾಡಿಸಿದಿರಿ?’ ಎಂದಾಗ, “ಶಾರದಕ್ಕ, ಕೂದಲು ಉದ್ದ ಆಗಿ ತುರಿಕೆಯಿಂದ ಮಂಡೆಬಿಸಿ ಆಗಿತ್ತು. ಇದಕ್ಕೊಂದು ಗತಿ ಕಾಣಿ ಸಲೇಬೇಕೆಂದು, ಕನ್ನಡಿ ಮುಂದೆ ನಿಂತು, ಕತ್ತರಿಯಿಂದ ಹಿಂದೆ, ಮುಂದೆ ಹಾಗೂ ಕಿವಿ ಹತ್ತಿರ ಉದ್ದುದ್ದ ಬೆಳೆದ ಕೂದಲೆಲ್ಲ ಕತ್ತರಿಸಿದೆ. ಆದರೆ ಒಂದೇ ಲೆವೆಲ್ ಬರಲಿಲ್ಲ. ಒಂಥರಾ ಇಲಿ ತಿಂದ ಹಾಗಾಗಿತ್ತು. ಎಂಥ ಮಾಡುದಪ್ಪಾ ಅಂತ ಆಲೋಚಿಸಿ, ನನ್ನ ತಲೆ ಅಳತೆಯ ಒಂದು ಗುಂಡಾದ ಸ್ಟೀಲ್ ಬೋಗುಣಿ ತೆಗೆದುಕೊಂಡು, ತಲೆ ಮೇಲೆ ಕವಚಿ ಇಟ್ಟು, ಒಂದು ಕೈಯಲ್ಲಿ ಅದನ್ನು ಗಟ್ಟಿಯಾಗಿ ಹಿಡಿದು, ಇನ್ನೊಂದು ಕೈಯಲ್ಲಿ ಉಳಿದ ಭಾಗವನ್ನು ನೀಟಾಗಿ ಶೇವ್ ಮಾಡಿಬಿಟ್ಟೆ. ಹೇಗಿದೆ ಈ “ಕೊರೊನಾ ಕಟಿಂಗ್?’ ಎಂದು ನಕ್ಕರು.
“ಇದಕ್ಕೆ “ಬೋಗುಣಿ ಕಟ್’ ಅಂತ ಹೇಳ್ಳೋದೆ ಸರಿ. ಹೆಂಡತಿಗೆ ತೋರಿಸಿದಿರಾ ನಿಮ್ಮ ಕೈ ಚಳಕವನ್ನು?’ ಅಂತ ಕೇಳಿದೆ. “ಒಳ್ಳೆ ಹೆಸರೇ ಕೊಟ್ರಿ ನೋಡಿ ಈ ಸ್ಟೈಲ್‌ಗೆ. ಫೋಟೋ ಕಳಿಸಿದ್ದೆ. ಚೆನ್ನಾಗಿದೆ ಹೊಸಾ ಸ್ಟೈಲು ಅಂತ ಉತ್ತರ ಬಂದಿದೆ. ಅದೇನು ಹೊಗಳಿಕೆಯೋ, ವ್ಯಂಗ್ಯವೋ ಸದ್ಯಕ್ಕೆ ಗೊತ್ತಾಗಿಲ್ಲ. ಈ ಕೋವಿಡ್ ದಿಂದ ನಾವು ಇನ್ನೂ ಏನೇನು ಕಲಿಯಬೇಕಿದೆಯೋ ಅನ್ನುತ್ತಾ ಹೆಜ್ಜೆ ಮುಂದಿಟ್ಟರು. ಇನ್ನು ಯಾರ್ಯಾರು ಏನೇನು ಕಂಡು ಹಿಡಿದಿದ್ದಾರೋ, ದೇವರೇ ಬಲ್ಲ. ನೋಡುತ್ತಿರಿ, ಎಲ್ಲಾ ಈಚೆಗೆ ಬರುತ್ತದೆ, ಲಾಕ್‌ಡೌನ್ ನಂತರ…
ಶಾರದಾಂಬ .ವಿ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.