ಮೂರು ಸಾವಿರ ಹೊಲಿಗೆಗಳು: ಸುಧಾಮೂರ್ತಿ ಹೇಳಿದ ಬದುಕಿನ “ಕ್ಲಾಸ್’ ಪಾಠ
Team Udayavani, Aug 16, 2017, 3:09 PM IST
ಒಂದು ನಿರ್ಮಲ ನಗುವನ್ನು ಸಾಕಿಕೊಂಡು, ಕೋಟಿ ಸಂಪನ್ನೆಯಾದರೂ ಕಾಟನ್ ಸೀರೆ ಉಟ್ಟುಕೊಂಡು, ಸಾಮಾನ್ಯ ಮಹಿಳೆಯಂತೆ ಕಾಣಿಸುವ ಸುಧಾಮೂರ್ತಿ, ಜೀವನಾನುಭವಗಳ ಮೇಲೆ ನಂಬಿಕೆ ಇಟ್ಟವರು. “ಕ್ಲಾಸ್ ಎನ್ನುವುದು ಹಣದಿಂದ ಬರುವಂಥದ್ದಲ್ಲ…’ ಎಂಬ ಅವರ ಮಾತಿನಲ್ಲಿ ಬದುಕಿನ ಅಧ್ಯಾತ್ಮ ಕಾಣಿಸುತ್ತದೆ. ಇತ್ತೀಚೆಗಷ್ಟೇ ಬಿಡುಗಡೆ ಕಂಡ ಅವರ “ತ್ರೀ ಥೌಸಂಡ್ ಸ್ಟಿಚಸ್’ ಕೃತಿ ಕೂಡ ಅವರ ಜೀವನಾನುಭವಗಳ ಗುತ್ಛ. ಈ ಕೃತಿಯ ಆಯ್ದ ತುಣುಕುಗಳ ಅನುವಾದ ಇಲ್ಲಿದೆ…
“ಕ್ಯಾಟಲ್ ಕ್ಲಾಸ್’ ಎಂದಾಕೆಗೆ ಪಾಠ ಕಲಿಸಿದೆ!
ಕಳೆದ ವರ್ಷ ಲಂಡನ್‌ನ ಹೀತೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಹೊರಟು ನಿಂತಿದ್ದೆ. ನಾನು ಹೆಚ್ಚಾಗಿ ಸೀರೆ ಇಷ್ಟಪಡುತ್ತೇನಾದರೂ, ಪ್ರಯಾಣದ ವೇಳೆ ಸಲ್ವಾರ್ ಕಮೀಜ… ಅನ್ನೇ ಧರಿಸೋದು. ಬೋರ್ಡಿಂಗ್‌ಗಾಗಿ ಕ್ಯೂನಲ್ಲಿ ನಿಂತಿದ್ದೆ. ನನ್ನ ಮುಂದೆ ಇಬ್ಬರು ಮಹಿಳೆಯರಿದ್ದರು. ಇಂಡೋ- ವೆಸ್ಟರ್ನ್ ರೇಷ್ಮೆ ಸೀರೆ ಉಟ್ಟು, ಹೆಗಲಿಗೆ ಗುಚ್ಚಿ ಬ್ಯಾಗ್ ನೇತು ಹಾಕಿ, ಹೈಹೀಲ್ಸ… ಧರಿಸಿ, ಕೊರಳಿಗೆ ವಜ್ರದ ನೆಕ್ಲೇಸ್ ಹಾಕಿಕೊಂಡು ಫ್ಯಾಷನೇಬಲ… ಆಗಿ ಬಂದಿದ್ದರು.
ಅವರಲ್ಲೊಬ್ಬಳು ನನ್ನನ್ನು ಗುರಾಯಿಸುತ್ತಾ, “ಎಲ್ಲಿ ನಿಮ್ಮ ಬೋರ್ಡಿಂಗ್ ಪಾಸ್ ತೋರಿಸಿ?’ ಎಂದಳು. ಅವರು ಏರ್‌ಲೈನ್ ಸಿಬ್ಬಂದಿ ಅಲ್ಲ ಎಂಬುದು ನನಗೆ ಗೊತ್ತಿದ್ದ ಕಾರಣ ನಾನು, “ಏಕೆ?’ ಎಂದು ಪ್ರಶ್ನಿಸಿದೆ. ಅದಕ್ಕವಳು, “ಇದು ಬ್ಯುಸಿನೆಸ್ ಕ್ಲಾಸ್ ಮಂದಿಗಿರುವ ಕ್ಯೂ’ ಎಂದು ಹೇಳಿ, ಎಕಾನಮಿ ಕ್ಲಾಸಿನತ್ತ ಕೈತೋರಿಸಿ, “ನೋಡು ಎಕಾನಮಿ ಕ್ಲಾಸ್ ಕ್ಯೂ ಅಲ್ಲಿದೆ, ನೀನು ಹೋಗಿ ಅಲ್ಲಿ ನಿಂತುಕೋ’ ಎಂದು ಆದೇಶಭರಿತ ಧ್ವನಿಯಲ್ಲಿ ನುಡಿದಳು. ನಾನು ಆಗಲೇ ಆಕೆಗೆ ಬೋರ್ಡಿಂಗ್ ಪಾಸ್ ತೋರಿಸೋಣ ಎಂದು ಅಂದುಕೊಂಡರೂ, ನಿರ್ಧಾರ ಬದಲಿಸಿದೆ. ಆಕೆ, ನಾನು ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಲು ಅರ್ಹಳಲ್ಲ ಎಂಬರ್ಥದಲ್ಲಿ ಮಾತಾಡಿದ್ದು ಗೊತ್ತಾಗಬೇಕಿತ್ತು. ಅದಕ್ಕಾಗಿಯೇ, ಮತ್ತೆ ಆಕೆಯನ್ನು ನೋಡಿ, “ನಾನೇಕೆ ಇಲ್ಲಿ ನಿಲ್ಲಬಾರದು?’ ಎಂದು ಪ್ರಶ್ನಿಸಿದೆ. ಅದಕ್ಕವಳು, “ನೋಡು, ಎಕಾನಮಿ ಮತ್ತು ಬ್ಯುಸಿನೆಸ್ ಕ್ಲಾಸಿನ ಟಿಕೆಟ್ ದರದಲ್ಲಿ ಭಾರೀ ವ್ಯತ್ಯಾಸವಿರುತ್ತೆ. ಎಕಾನಮಿಗೆ ಹೋಲಿಸಿದರೆ ಬ್ಯುಸಿನೆಸ್ ಕ್ಲಾಸ್‌ಗೆ ಮೂರು ಪಟ್ಟು ಹೆಚ್ಚು ಹಣ ತೆರಬೇಕು’ ಎಂದಳು. ಜೊತೆಗೆ, ಬ್ಯುಸಿನೆಸ್ ಕ್ಲಾಸಿನಲ್ಲಿ ದೊರಕುವ ಎಲ್ಲ ಐಷಾರಾಮಿ ಸೌಲಭ್ಯಗಳ ಬಗ್ಗೆಯೂ ವಿವರಿಸಿದಳು. “ಈಗ ಗೊತ್ತಾಯ್ತಲ್ಲ? ಹೋಗು, ನಿನ್ನ ಕ್ಯೂನಲ್ಲಿ ನಿಂತುಕೋ’ ಎಂದಳು. ಆದರೆ, ನಾನು ಒಪ್ಪಲಿಲ್ಲ. ಅದರಿಂದ ಆಕೆ ಕಸಿವಿಸಿಗೊಂಡಳು. ಅಷ್ಟೇ ಅಲ್ಲ, “ಇಂಥ ಕ್ಯಾಟಲ… ಕ್ಲಾಸ್ ಜನರೊಂದಿಗೆ ವಾದಿಸುವುದೂ ಕಷ್ಟ. ವಿಮಾನದ ಸಿಬ್ಬಂದಿಯೇ ಬಂದು ಓಡಿಸಿದಾಗ ಗೊತ್ತಾಗುತ್ತದೆ’ ಎನ್ನುತ್ತಾ ನನ್ನನ್ನೇ ದುರುಗುಟ್ಟಿ ನೋಡಿ ಮುಂದೆ ಸಾಗಿದಳು.
ನನ್ನ ಸರದಿ ಬಂದಾಗ, ಅಟೆಂಡೆಂಟ್ ನನ್ನ ಬೋರ್ಡಿಂಗ್ ಪಾಸ್ ನೋಡಿ ಒಳಕ್ಕೆ ಬಿಟ್ಟಳು. ಇದನ್ನೆಲ್ಲ ಆ ಹೆಂಗಸರಿಬ್ಬರು ದೂರ ನಿಂತು ವೀಕ್ಷಿಸುತ್ತಿದ್ದರು. ನನಗೆ ತಡೆಯಲಾಗಲಿಲ್ಲ. ನೇರವಾಗಿ ಅವರ ಬಳಿ ಹೋಗಿ ಕೇಳಿದೆ – “ದಯವಿಟ್ಟು ಹೇಳಿ, ನಾನು ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಲು ಅರ್ಹಳಲ್ಲ ಎಂದು ನಿಮಗೇಕೆ ಅನಿಸಿತು? ನೀವು ಕ್ಯಾಟಲ… ಕ್ಲಾಸ್ (ಅಂತಸ್ತು, ಶ್ರೇಣಿಯ ವಿಚಾರದಲ್ಲಿ ಅತ್ಯಂತ ಕೆಳವರ್ಗದ ಜನ) ಎಂಬ ಪದ ಬಳಸಿದಿರಿ. ಕ್ಲಾಸ್ ಎನ್ನುವುದು ಹಣದಿಂದ ಬರುವಂಥದ್ದಲ್ಲ. ಈ ಜಗತ್ತಿನಲ್ಲಿ ಹಣ ಮಾಡಲು ಸಾಕಷ್ಟು ಕೆಟ್ಟ ದಾರಿಗಳಿವೆ. ಮದರ್ ಥೆರೇಸಾ, ಮಂಜುಳಾ ಭಾರ್ಗವ ಅವರೂ ಕ್ಲಾಸೀ ವ್ಯಕ್ತಿಗಳೇ. ಹಣವೊಂದಿದ್ದರೆ ಕ್ಲಾಸ್ (ಶ್ರೇಣಿ) ತನ್ನಿಂತಾನೇ ದಕ್ಕುತ್ತದೆ ಎಂಬ ಪರಿಕಲ್ಪನೆ ತುಂಬಾ ಹಳೆಯದಾಗಿದೆ, ನೆನಪಿರಲಿ’ ಎನ್ನುತ್ತಾ ಅಲ್ಲಿಂದ ಹೊರನಡೆದೆ.
ಈ ಘಟನೆ ನಡೆದ ಸುಮಾರು 8 ಗಂಟೆಯ ಬಳಿಕ ನಮ್ಮ ಪ್ರತಿಷ್ಠಾನದ ವತಿಯಿಂದ ವಿವಿಧ ಶಾಲೆಗಳಿಗೆ ದೇಣಿಗೆ ನೀಡುವ ಬಗ್ಗೆ ಚರ್ಚಿಸುವ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅಲ್ಲಿಗೆ ತೆರಳಿದಾಗ ಆಶ್ಚರ್ಯ ಕಾದಿತ್ತು. ಅಲ್ಲಿ ದೇಣಿಗೆ ಕೇಳಲು ಆಗಮಿಸಿದ್ದವರಲ್ಲಿ ಆ ಇಬ್ಬರು ಮಹಿಳೆಯರೂ ಇದ್ದರು! ನನ್ನನ್ನು ಕಂಡೊಡನೆ ಅವರು ತಮ್ಮ ಕಣ್ಣುಗಳನ್ನು ತಾವೇ ನಂಬಲಾಗದಂತೆ ಪರಸ್ಪರ ಮುಖ ಮುಖ ನೋಡಿಕೊಂಡರು. ನನ್ನನ್ನು “ಕ್ಯಾಟಲ… ಕ್ಲಾಸ್’ ಎಂದು ಕರೆದಿದ್ದ ಅವರಿಗೆ ಅಂದು ನಾನು ಕ್ಲಾಸ್ ಬಗ್ಗೆ ಪಾಠ ಮಾಡಿಯೇ ಹಿಂತಿರುಗಿದೆ!
ಟಾಯ್ಲೆಟ್ ಇಲ್ಲದ ಕಾಲೇಜಲ್ಲಿ ಎಂಜಿನಿಯರಿಂಗ್!
ಅಂದು ಪಿಯುಸಿ ಫಲಿತಾಂಶದ ದಿನ. ನನಗೆ ಒಳ್ಳೆಯ ಅಂಕ ಸಿಕ್ಕಿತ್ತು. ಎಂಜಿನಿಯರಿಂಗ್ ಓದಬೇಕೆಂಬ ಆಸೆ ಆಗಷ್ಟೇ ಚಿಗುರೊಡೆದಿದ್ದ ಕಾರಣ ಮನೆಯಲ್ಲಿ ಈ ವಿಚಾರ ತಿಳಿಸಿದೆ. ನಾನು ಮನೆಯೊಳಗೆ ದೊಡ್ಡದೊಂದು ಬಾಂಬ… ಹಾಕಿದೆನೇನೋ ಎಂಬಂತೆ ಎಲ್ಲರೂ ವರ್ತಿಸಿದರು. ಆಗಿನ ಕಾಲದಲ್ಲಿ ಎಂಜಿನಿಯರಿಂಗ್ ಎಂದರೆ ಪುರುಷ ಪ್ರಧಾನ ಕೋರ್ಸ್. ಹುಡುಗಿಯರು ಅತ್ತ ಕಡೆ ತಲೆ ಹಾಕಿಯೂ ಮಲಗುವಂತಿರಲಿಲ್ಲ. ಅಂಥದ್ದನ್ನು ಊಹಿಸುವುದೂ ಅಪರಾಧ. ಅದು, ಒಂದು ರೀತಿ ಹಂದಿ ಹಾರುವುದನ್ನು ನಿರೀಕ್ಷಿಸಿದಂತೆ! “ನೀನು ನಿನ್ನ ನಿರ್ಧಾರ ಬದಲಿಸದೇ ಇದ್ದರೆ, ಉತ್ತರ ಕರ್ನಾಟಕದ ಯಾವೊಬ್ಬ ವ್ಯಕ್ತಿಯೂ ನಿನ್ನನ್ನು ಮದುವೆಯಾಗುವುದಿಲ್ಲ. ಒಬ್ಬ ಎಂಜಿನಿಯರ್ ಮಹಿಳೆಯನ್ನು ಯಾರಾದರೂ ಮದ್ವೆ ಆಗ್ತಾರಾ?’ - ನನ್ನ ಪ್ರೀತಿಯ ಅಜ್ಜಿ ಇಂಥದ್ದೊಂದು ಪ್ರಶ್ನೆಯನ್ನು ನನ್ನ ಮುಂದಿಟ್ಟಿದ್ದರು. ಅವರು ಒಪ್ಪದ್ದನ್ನು ನಾನು ಮಾಡುತ್ತೇನೆ ಎಂದು ಅವರು ಎಂದೂ ಯೋಚಿಸಿರಲಿಲ್ಲ. ಅಷ್ಟೇ ಅಲ್ಲ, ಎಂಜಿನಿಯರ್ ಆಗಿದ್ದ ನಾರಾಯಣಮೂರ್ತಿ ಎಂಬ ವ್ಯಕ್ತಿಯು ನನ್ನನ್ನು ಮದ್ವೆ ಆಗ್ತಾರೆ ಎಂಬುದನ್ನು ಅವರೇ ಏಕೆ, ನಾನೂ ಊಹಿಸಿರಲಿಲ್ಲ.
ಕೊನೆಗೂ ಕೋರ್ಸ್ ವಿಚಾರದಲ್ಲಿ ನನ್ನ ಹಠವೇ ಗೆದ್ದಿತು. ಅಂಕದಿಂದಾಗಿ ನನಗೆ ಬಿ.ವಿ.ಬಿ. ಕಾಲೇಜ… ಆಫ್ ಎಂಜಿನಿಯರಿಂಗ್‌ನಲ್ಲಿ ಸೀಟೂ ಸಿಕ್ಕಿತು. ಆಗ ಆ ಕಾಲೇಜಿನ ಪ್ರಾಂಶುಪಾಲರು, ಬಿ.ಸಿ. ಖಾನಾಪುರೆ. ಅವರು ನಮ್ಮ ತಂದೆಯವರ ಸ್ನೇಹಿತರು. ನನಗೆ ಸೀಟು ಸಿಕ್ಕ ಬಗ್ಗೆ ಅಪ್ಪನಲ್ಲಿ ಮಾತನಾಡುತ್ತಾ, “ನಿಮ್ಮ ಮಗಳಿಗೆ ಮೆರಿಟ್ ಆಧಾರದಲ್ಲಿ ಸೀಟು ಸಿಕ್ಕಿದೆ. ಆದರೆ, ಸಮಸ್ಯೆಯಿರುವುದೇ ಇಲ್ಲಿ. ಇಡೀ ಕಾಲೇಜಲ್ಲಿ ಅವಳೊಬ್ಬಳೇ ಹುಡುಗಿ. ನಮ್ಮ ಕ್ಯಾಂಪಸ್‌ನಲ್ಲಿ ಹೆಣ್ಮಕ್ಕಳ ಶೌಚಾಲಯವಿಲ್ಲ. ವಿಶ್ರಾಂತಿ ಗೃಹವೂ ಇಲ್ಲ. ಇನ್ನು ಕಾಲೇಜಿಗೆ ಬರುವ ಹುಡುಗರೋ, ಬಿಸಿರಕ್ತದವರು. ಅವರು ಖಂಡಿತಾ ನಿಮ್ಮ ಮಗಳಿಗೆ ತೊಂದರೆ ಕೊಡದೇ ಇರಲಾರರು. ದಯವಿಟ್ಟು ಅವಳಿಗೆ ನಿರ್ಧಾರ ಬದಲಿಸುವಂತೆ ಹೇಳಿ’ ಎಂದಿದ್ದರು. ಆದರೆ, ನಾನು ಷರತ್ತುಗಳಿಗೆ ಒಪ್ಪಿದೆನೇ ಹೊರತು, ಕೋರ್ಸ್ ಸೇರುವ ವಿಚಾರದಲ್ಲಿ ನಿರ್ಧಾರ ಬದಲಿಸಲಿಲ್ಲ. ಅದರಂತೆ, ಕಾಲೇಜು ಸೇರಿದೆ. ಒಳ್ಳೆಯ ಗೆಳೆಯರು ಸಿಕ್ಕರು. ಆದರೆ, ಕ್ಯಾಂಪಸ್‌ನಲ್ಲಿ ಲೇಡೀಸ್ ಟಾಯ್ಲೆಟ…ಗಿದ್ದ ಕೊರತೆ ನನಗೆ ದೇಶದಲ್ಲಿ ಎಷ್ಟೋ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಅರಿಯುವಂತೆ ಮಾಡಿತು. ಮುಂದೆ ಇನ್‌ಫೊಸಿಸ್ ಪ್ರತಿಷ್ಠಾನದ ವತಿಯಿಂದ ಕರ್ನಾಟಕವೊಂದರಲ್ಲೇ 13 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲು ಪ್ರೇರೇಪಿಸಿದ್ದೂ ಇದುವೇ.
ರಾಜ್ ಕಪೂರ್ ಸಿನಿಮಾ ಬಂತಂದ್ರೆ…
ಚಿಕ್ಕವಳಿದ್ದಾಗ ಆ್ಯಕ್ಷನ್, ರೊಮ್ಯಾಂಟಿಕ್ ಸಿನಿಮಾ ನೋಡುವುದು ಮಹಾಪರಾಧ ಎಂದು ಹೇಳಿಯೇ ನಮ್ಮನ್ನು ಬೆಳೆಸಲಾಗಿತ್ತು. ಮನೆಯಲ್ಲಿ ಟಿವಿ ನೋಡುವಾಗ ರೊಮ್ಯಾಂಟಿಕ್ ದೃಶ್ಯಗಳೇನಾದರೂ ಬಂದರೆ ಕಣ್ಮುಚ್ಚಿ ಕೂರಬೇಕಿತ್ತು. ಆದರೆ, ದೊಡ್ಡವಳಾದ ಮೇಲೆ ನನಗೆ ಅಂಥ ಸಿನಿಮಾಗಳ ಹುಚ್ಚು ತುಸು ಹೆಚ್ಚೇ ಹತ್ತಿಬಿಟ್ಟಿತ್ತು. ಅದನ್ನು ಯಾರಾದರೂ ವಿರೋಧಿಸಿದರೆ ಸಿಟ್ಟು ನೆತ್ತಿಗೇರುತ್ತಿತ್ತು. ಒಂದು ದಿನ ಗೆಳತಿಯರು ನನಗೊಂದು ಚಾಲೆಂಜ್ ಹಾಕಿದರು. “ನೀನು 365 ದಿನಗಳಲ್ಲಿ 365 ಸಿನಿಮಾಗಳನ್ನು ನೋಡಿದರೆ, ನಾವು ನಿನಗೆ ನೂರು ರುಪಾಯಿ ನೀಡಿ, ನಿನ್ನನ್ನು “ಮಿಸ್ ಸಿನಿಮಾ’ ಎಂಬ ಬಿರುದನ್ನೂ ನೀಡಿ ಗೌರವಿಸುತ್ತೇವೆ. ಬೆಟ್‌ಗೆ ರೆಡೀನಾ?’ ಎಂದು ಕೇಳಿದರು. ನಾನು ಯೋಚಿಸದೇ ಒಪ್ಪಿಕೊಂಡೆ. ಅಲ್ಲಿಂದ ನನ್ನ ಸಿನಿಮಾ ಪಯಣ ಆರಂಭವಾಯಿತು.
ಪುಣೆಯ ನಿಲಯಂ ಥಿಯೇಟರಿನಲ್ಲಿ ರಾಜ…ಕಪೂರ್ ಅವರ ಬಹುತೇಕ ಸಿನಿಮಾಗಳನ್ನು ನೋಡಿದೆ. ನಂತರ ಬೇರೆ ಬೇರೆ ನಟರ ಸಿನಿಮಾಗಳು, ಇಂಗ್ಲಿಷ್ ಕ್ಲಾಸಿಕ್ ಚಿತ್ರಗಳನ್ನು ವೀಕ್ಷಿಸತೊಡಗಿದೆ. ಒಂದು ವರ್ಷ ಮುಗಿದಿದ್ದೇ ಗೊತ್ತಾಗಲಿಲ್ಲ. ವರ್ಷ ಮುಗಿಯುವಾಗ 365 ಸಿನಿಮಾಗಳನ್ನು ನೋಡಿದ್ದೆ. ಕೊನೆಗೆ ಮಿಸ್ ಸಿನಿಮಾ ಬಿರುದೂ ಸಿಕ್ಕಿತು!
ಮಾಜಿ ದೇವದಾಸಿ ಕೊಟ್ಟ ನನ್ನ ಜೀವನದ ಬೆಸ್ಟ್ ಗಿಫ್ಟ್
ದೇವದಾಸಿಯರ ಬದುಕಿನ ಬಗ್ಗೆ ಅರಿಯಲು, ಅವರಲ್ಲಿ ಜಾಗೃತಿ ಮೂಡಿಸಲೆಂದು ಹೋಗಿದ್ದಾಗ ಶುರುವಿನಲ್ಲಿ ಚಪ್ಪಲಿ, ಟೊಮೇಟೋ ಎಸೆತದ ಸ್ವಾಗತ ಸಿಕ್ಕಿತ್ತು! ಇನ್ನು ಆ ಕಡೆ ಹೋಗಬಾರದೆಂದು ನಿರ್ಧರಿಸಿದ್ದೆ. ಆದರೆ, ಅಪ್ಪನ ಸಕಾರಾತ್ಮಕ ನುಡಿಗಳು ನನ್ನನ್ನು ಮತ್ತೆ ಬೆಳಗಾವಿಯ ಯಲ್ಲಮ್ಮನ ಗುಡ್ಡದತ್ತ ಕರೆದೊಯ್ಯಿತು. ಕ್ರಮೇಣ ದೇವದಾಸಿಯರೊಂದಿಗೆ ಮಾತು ಆರಂಭವಾಗಿ, ಅವರ ಬದುಕು, ಕಥೆ-ವ್ಯಥೆ ಎಲ್ಲವನ್ನೂ ಅರಿತು, ಸಹಾಯಕ್ಕೆ ಮುಂದಾದೆ. ಅವರ ಮಕ್ಕಳ ಶಿಕ್ಷಣಕ್ಕೆ ನೆರವು, ಆ ಜನರ ಸ್ವಾವಲಂಬನೆಗೆ ಬ್ಯಾಂಕ್ ಮಾಡಿಕೊಟ್ಟೆ. ಸಾಕಷ್ಟು ಮಂದಿ ದೇವದಾಸಿ ಪದ್ಧತಿಯ ಸರಪಳಿಯಿಂದ ಹೊರಬಂದರು. ಇವೆಲ್ಲವೂ ಆಗಲು 17 ವರ್ಷಗಳೇ ಬೇಕಾದವು. ಕೊನೆಗೊಂದು ದಿನ ಮಾಜಿ ದೇವದಾಸಿಯರೆಲ್ಲಾ ಸೇರಿ ಸರಳ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು, ನನ್ನನ್ನೂ ಆಹ್ವಾನಿಸಿದರು. ಅಂದು ಚಪ್ಪಲಿ ತೋರಿಸಿದ್ದ ಮಂದಿಯೇ ಇಂದು ನನ್ನ ಟಿಕೆಟ್ ದರವನ್ನೂ ಭರಿಸಿದರು. ವೇದಿಕೆ ಹತ್ತಿದ ಮಾಜಿ ದೇವದಾಸಿಯೊಬ್ಬರು, “ಇಂದು ನಾವು ಅಕ್ಕನಿಗೊಂದು ವಿಶೇಷ ಉಡುಗೊರೆ ನೀಡುತ್ತಿದ್ದೇವೆ. ಇದು ಎಂಬ್ರಾಯಿಡರಿ ಮಾಡಿರುವ ಹೊದಿಕೆ. ಇದರಲ್ಲಿ ನಾವು ಪ್ರತಿಯೊಬ್ಬರೂ ಹಾಕಿದ ಹೊಲಿಗೆಯಿದೆ. ಒಟ್ಟು 3 ಸಾವಿರ ಹೊಲಿಗೆಗಳು ಇದರಲ್ಲಿವೆ. ಇದು ನೋಡಲು ಚೆನ್ನಾಗಿ ಕಾಣಲಿಕ್ಕಿಲ್ಲ. ಆದರೆ, ನಮ್ಮೆಲ್ಲರ ಉಪಸ್ಥಿತಿ ಅದರಲ್ಲಿರಬೇಕೆಂಬ ಬಯಕೆ ನಮ್ಮದು. ಇದು ನಿಮ್ಮನ್ನು ಬೇಸಿಗೆಯಲ್ಲಿ ತಂಪಾಗಿಯೂ, ಚಳಿಯಲ್ಲಿ ಬೆಚ್ಚಗಾಗಿಯೂ ಇಡಲಿದೆ’ ಎನ್ನುತ್ತಾ ಆ ಹೊದಿಕೆಯನ್ನು ನನ್ನ ಕೈಗೆ ಹಸ್ತಾಂತರಿಸಿದರು. ನನ್ನ ಕಣ್ಣಂಚಲ್ಲಿ ನೀರು ಜಿನುಗಿತ್ತು. ಅಂದು ನಾನು ಪಡೆದಿದ್ದು, ಜೀವನದ ಬೆಸ್ಟ್ ಗಿಫ್ಟ್!
ದೇವಗಂಗೆಯಲ್ಲಿ ಶಾಪಿಂಗ್ ಮೋಹವನ್ನು ತೇಲಿಸಿಬಿಟ್ಟೆ!
ಕಾಶಿ ಯಾತ್ರೆ ಕೈಗೊಳ್ಳಬೇಕೆಂಬ ಅಜ್ಜ-ಅಜ್ಜಿಯ ಆಸೆ ಈಡೇರಿರಲಿಲ್ಲ. ಅವರ ನಿಧನಾನಂತರ ನಾನಾದರೂ ಅವರ ಆಸೆ ಈಡೇರಿಸಬೇಕೆಂದು ಕಾಶಿಗೆ ತೆರಳಿದೆ. ಅಲ್ಲಿನ ಪ್ರತಿ ದೇವಾಲಯಕ್ಕೂ ಪ್ರದಕ್ಷಿಣೆ ಹಾಕಿ, ಮಾರುಕಟ್ಟೆಯತ್ತ ಹೆಜ್ಜೆ ಹಾಕಿದಾಗ ನನ್ನನ್ನು ಸೆಳೆದಿದ್ದು ಬಣ್ಣ ಬಣ್ಣದ ಸೀರೆಗಳು. ವ್ಹಾವ್, ಇದನ್ನು ಖರೀದಿಸದೇ ವಾಪಸ್ ಹೋಗೋದಿಲ್ಲ ಎಂದು ನಿರ್ಧರಿಸಿದೆ. ಮಾರನೇ ದಿನ ಬಂದು, ಖರೀದಿಸಿದರಾಯ್ತು ಅಂದುಕೊಳ್ಳುತ್ತಾ ನಡೆದೆ.
ಮಾರನೇ ದಿನ, ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಂತೆ, “ಕಾಶಿಗೆ ಹೋದರೆ, ಮರಳುವ ಮುನ್ನ ನಾವು ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸುವ ಯಾವುದಾದರೂ ವಸ್ತುವನ್ನು ತ್ಯಜಿಸಿ ಬರಬೇಕು’ ಎಂದು ಅಜ್ಜ ಹೇಳಿದ್ದು ನೆನಪಾಯಿತು. ನಾನು ಏನನ್ನು ತ್ಯಜಿಸುವುದು ಎಂದು ಯೋಚಿಸತೊಡಗಿದೆ. ಬದುಕು, ಬಣ್ಣ, ಪ್ರಕೃತಿ, ಸಂಗೀತ, ಕಲೆ, ಓದುವುದು, ಸೀರೆಗಾಗಿ ಶಾಪಿಂಗ್ - ಎಲ್ಲವೂ ನನಗಿಷ್ಟ. ಇದರಲ್ಲಿ ಒಂದನ್ನು ಬಿಟ್ಟುಬಿಡಲೇಬೇಕಲ್ಲ ಎಂದು ಯೋಚಿಸತೊಡಗಿದೆ. ಅಷ್ಟರಲ್ಲಿ ಕಣ್ಣ ಮುಂದೆ ಬಂದಿದ್ದು ಮೊದಲ ದಿನ ನೋಡಿದ್ದ ಸೀರೆಗಳು. ದೃಢ ಮನಸ್ಸು ಮಾಡಿ ಗಂಗೆಯನ್ನು ಬೊಗಸೆಯಲ್ಲಿ ಹಿಡಿದು, ಹೇಳಿಯೇಬಿಟ್ಟೆ; “ಈ ಕಾಶಿ ನಗರವು ನಾನು ಅತಿ ಹೆಚ್ಚು ಪ್ರೀತಿಸುವ ವಸ್ತುವನ್ನು ಬಯಸುತ್ತಿದೆ ಎಂದಾದಲ್ಲಿ, ಆ ಸೂರ್ಯನ ಸಾಕ್ಷಿಯಾಗಿ ಹೇಳುತ್ತೇನೆ, ಇನ್ನು ನಾನು ಅಗತ್ಯ ವಸ್ತುಗಳ ಹೊರತಾಗಿ ಎಲ್ಲ ರೀತಿಯ ಶಾಪಿಂಗ್ ಅನ್ನು ತ್ಯಜಿಸುತ್ತಿದ್ದೇನೆ’. ಅಲ್ಲಿಂದ ನನ್ನ ಶಾಪಿಂಗ್ ಆಸೆಯೆಲ್ಲ ಗಂಗೆಯಲ್ಲಿ ಲೀನವಾಗಿ ಹೋಯಿತು. ಮತ್ತೆಂದೂ ನಾನು ಸೀರೆಗಾಗಿ ಶಾಪಿಂಗ್ ಮಾಡಿದ್ದೇ ಇಲ್ಲ. ಆ ಕೊನೆಯ ಬೊಗಸೆ ನೀರು ನನ್ನ ಬದುಕನ್ನೇ ಬದಲಿಸಿಬಿಟ್ಟಿತು.
1. ನಾನು ಎಲ್ಲರಿಗಿಂತಲೂ ಅದೃಷ್ಟವಂತೆ. ನನ್ನ ಪ್ರತಿಯೊಂದು ಕೆಲಸವನ್ನೂ ನಾನು ಪ್ರೀತಿಸುತ್ತೇನೆ. ಹಾಗಾಗಿ, ನನಗೆ ಪ್ರತಿದಿನವೂ ರಜಾದಿನ ಇದ್ದಂತೆ. ರಜೆ ಯಾರಿಗೆ ಇಷ್ಟ ಇಲ್ಲ ಹೇಳಿ.
2. ಬದುಕಿನ ಕಟ್ಟಕಡೆಯ ಉದ್ದೇಶ ಹಣ ಗಳಿಸುವುದು ಎಂದು ಹೇಳಿದವರಾರು? ಊಹೂnಂ, ಖಂಡಿತಾ ಅಲ್ಲ. ಸಮಯ ಬಂದಾಗ ಇದು ನಿಮಗೇ ಗೊತ್ತಾಗುತ್ತದೆ.
3. ಜೀವನದಲ್ಲಿ ನಾವೆಲ್ಲರೂ ಕೆಲವು ಹೋರಾಟಗಳಲ್ಲಿ ಸೋತಿರಬಹುದು. ಆದರೂ, ದೊಡ್ಡ ಯುದ್ಧದಲ್ಲಿ ಗೆಲ್ಲಲು ನಮ್ಮಿಂದ ಸಾಧ್ಯ…
ಕನ್ನಡಕ್ಕೆ: ಹಲೀಮತ್ ಸ ಅದಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.