ಟೈಟಾನಿಕ್ ಚೆಲುವೆ ಚಳಿಯೇ ಶತ್ರು
Team Udayavani, Jan 16, 2018, 3:34 PM IST
ಚಳಿ ಅವರ್ಣನೀಯ ನಿಜ. ಅದು ಸ್ವರ್ಗವನ್ನೇ ಧರೆಗಿಳಿಸುತ್ತೇ ಅದೂ ನಿಜ. ನಿಸರ್ಗಕ್ಕೆ ವಿಶೇಷ ಉಡುಪು ತೊಡಿಸಿ, ಕಣ್ಣಲ್ಲೊಂದು ಕಲಾಜಗತ್ತನ್ನು ಕೂರಿಸುತ್ತೆ ಅನ್ನೋದೂ ದಿಟವೇ. ಈ ಚಳಿಯನ್ನು ಬಹುತೇಕ ವಿದ್ಯಾರ್ಥಿಗಳು ಇಷ್ಟಪಟ್ಟಂತೆ, ಅದನ್ನು ದ್ವೇಷಿಸುವ ಹುಡುಗಿಯೊಬ್ಬಳು ಇಲ್ಲಿ ಅನಿಸಿಕೆ ತೋಡಿಕೊಂಡಿದ್ದಾಳೆ…
ಅಪ್ಪನ ಹಳೇ ಬಜಾಜ್ ಸ್ಕೂಟರ್‌ನ ಮುಂಭಾಗದಲ್ಲಿ ಕೂರುವಾಗ ಜಗತ್ತೇ ನನ್ನ ಕಣ್ಣ ವಶದಲ್ಲಿರುವಂತೆ ಪುಳಕಗೊಳ್ಳುತ್ತಿದ್ದೆ. “ಟೈಟಾನಿಕ್’ ಚಿತ್ರದ ಆ ದೃಶ್ಯ ನೋಡಿದಂದಿನಿಂದ, ಹಾಗೆ ಗಾಳಿಗೆ ಮುಖ ಅರಳಿಸಿ ನಿಲ್ಲುವುದು ನನಗೊಂದು ಸಂಭ್ರಮ. ಹಡಗಿನ ಮುಂಭಾಗದ ಪೋರ್ಟಿಕೋದಲ್ಲಿ ನಾಯಕ ಡಿ’ಕ್ಯಾಪ್ರಿಯೋ, ಅಪ್ಸರೆಯಂಥ ಚೆಲುವಿನ ಕೇಟ್‌ಳನ್ನು ತಬ್ಬಿಕೊಂಡು, ಸಾಗರಕ್ಕೆ ಮುಖ ಮಾಡಿ ನಿಲ್ಲುತ್ತಾನಲ್ಲ, ಅದೇ ಗತ್ತು ನನ್ನದಾಗಿರುತ್ತಿತ್ತು. ಅದಕ್ಕಾಗಿ ಅಣ್ಣನನ್ನು ಹಿಂದಿನ ಸೀಟಿನಲ್ಲಿ ಕೂರಿಸಿ, ನಾನೇ ಮುಂದೆ ನಿಂತು, ಟೈಟಾನಿಕ್ ಹೀರೋಯಿನ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದೆ. ನಾನು ಕೇಟ್ ಆಗಿ, ಅಪ್ಪ ಡಿ’ಕ್ಯಾಪ್ರಿಯೋ ಎಂದು ಕಲ್ಪಿಸಿಕೊಳ್ಳುವಾಗ. ಆ ಬಜಾಜ್ ಬೈಕೇ ನಮ್ಮ ಪಾಲಿನ ಪುಟ್ಟ ಟೈಟಾನಿಕ್ಕು. ಈ ಪುಳಕ ಎಲ್ಲಿಯ ತನಕ? ಚಳಿಗಾಲದ ತನಕವಷ್ಟೇ. ಚಿಲ್ಲನೆ ಚಳಿ ಮುತ್ತಿಬಿಟ್ಟರೆ, ಮುಗಿಯಿತು, ನನ್ನೊಳಗೆ ಟೈಟಾನಿಕ್ ಬಗ್ಗೆ ಸಿಡಿಗೋಪ ಹುಟ್ಟಿತು ಅಂತಲೇ ಲೆಕ್ಕ. ಮಲೆನಾಡಿನ ದಟ್ಟ ಕುಳಿರ್ಗಾಳಿಗೆ ಮುಖವೊಡ್ಡಲು ಹಿಂಜರಿದು, ಅಣ್ಣನನ್ನೇ ಮುಂದೆ ನಿಲ್ಲಿಸಿ, ಬಚಾವಾಗಿಬಿಡುತ್ತಿದ್ದೆ.
ನನ್ನ ಪಾಲಿಗೆ ಚಳಿಗಾಲ ವಿಲನ್ ಆಗಿದ್ದೇ ಅಲ್ಲಿಂದ. ದಸರೆ ಗೊಂಬೆಯನ್ನು ಸಿಂಗರಿಸುವಂತೆ ಅಮ್ಮ ನನ್ನನ್ನು ಅಲಂಕರಿಸಿ, ಪಾಂಡ್ಸ್ ಪೌಡರನ್ನು ಮುಖಕ್ಕೆ ಮೆತ್ತಿ, ಪುಟ್ಟ ಮಫ್ಲರ್ ಕಟ್ಟಿ, ಮನೆಯಿಂದ ಹೊರಡಿಸುವಾಗ ಲಟಿಕೆ ತೆಗೆಯುತ್ತಿದ್ದಳು. ಆ ಚಳಿಯಲ್ಲಿ ಅವಳ ಲಟಿಕೆ ಬಲಿಷ್ಠವಾಗಿ, ಪುಟ್ಟ ಪಟಾಕಿ ಹೊಡೆದಂತೆ ಸದ್ದು ಹೊಮ್ಮಿಸುತ್ತಿತ್ತು. ಮಗಳೆಂಬ ಐಶ್ವರ್ಯಾ ರೈಯನ್ನು ಮುದ್ದಿಸುವ ಅಮ್ಮನ ಆ ಪರಿಗೆ ಹೊಟ್ಟೆಕಿಚ್ಚು ಪಟ್ಟೇ, ಚಳಿ- ಮಂಜುಗಳು ನನಗೆ ಶತ್ರುವಂತೆ ತೋರುತ್ತಿದ್ದವು. ಶಾಲೆ ತಲುಪುವ ಹೊತ್ತಿಗೆ, ರೆಪ್ಪೆ ಮೇಲೆಲ್ಲ ಇಬ್ಬನಿಯ ಥಕಧಿಮಿತ. ಮೇಕಪ್ ನೀರಾಗುತ್ತಿತ್ತು. ಮಂಜಿನಲ್ಲಿ ಮಿಂದ ಶಿಲೆಯಂತೆ ತಣ್ಣಾಗುತ್ತಿದ್ದೆ. ಮೈ ಮರಗಟ್ಟಿರುತ್ತಿತ್ತು. ಬಾಯಿ ತೊದಲುತ್ತಿರುತ್ತಿತ್ತು. ಮೇಷ್ಟ್ರೇನಾದರೂ ಪ್ರಶ್ನೆ ಕೇಳಿಬಿಟ್ಟರೆ, ಉತ್ತರ ನಾಲ್ಕಾರು ಸೆಕೆಂಡು ತಡವಾಗಿ, ಉಕ್ಕುವ ಭಯದೊಳಗೂ, ಚಳಿ ದಾಳಿ ನಡೆಸಿ, ನನ್ನನ್ನು ಇನ್ನಷ್ಟು ತೊದಲುವಂತೆ ಮಾಡುತ್ತಿತ್ತು. ಆಗ ಕೈಗೆ ಪಟೀರ್ ಏಟು. ಚಳಿಯಲ್ಲಿ, ಬಿಸಿ ಸೌಟು ಕಾಸಿಟ್ಟಂತೆ. “ಅಯ್ಯೋ’ ಎನ್ನುತ್ತಾ, ಮೇಷ್ಟ್ರ ಕೈಯಿಂದ ಬೆತ್ತ ಕಸಿದು, ಆ ಚಳಿಗೆ ಬಾರಿಸುವಷ್ಟು ಸಿಟ್ಟು ಬರುತ್ತಿತ್ತು.
ಆಮೇಲೆ ಎಸ್ಸೆಸ್ಸೆಲ್ಸಿಗೆ ಬಂದೆ. ಹೇಳಿ ಕೇಳಿ ಅದು ಬದುಕಿನ “ಪ್ರಮುಖ ಘಟ್ಟ’. ಈ ಮಾತನ್ನ ಶಾಲೆಯಲ್ಲಿ, ಮನೆಯಲ್ಲಿ ಕೇಳಿ ಕೇಳಿ, ಓದುವ ಉತ್ಸಾಹ ಬಂದಿತ್ತು. ಚೆನ್ನಾಗಿ ಓದಬೇಕು, ಅಣ್ಣನಿಗಿಂತ ಜಾಸ್ತಿ ಅಂಕ ತೆಗೆಯಬೇಕು ಅಂತ ಅಂದುಕೊಂಡಿದ್ದೆ. ನನ್ನ ಸಾಧನೆಗೆ ಮತ್ತೆ ಅಡ್ಡಗಾಲು ಹಾಕಿದ್ದು, ಇದೇ ಹಾಳು ಚಳಿ. ರಾತ್ರಿ ಓದಲು ಕುಳಿತರೆ, ಕಿಟಕಿಯಿಂದ ಚಳಿಗಾಳಿ ಬೀಸಿ ನಿದ್ದೆ ಬರುತ್ತಿತ್ತು. ಬೆಳಗ್ಗೆ ಏಳ್ಳೋಣ ಅಂದುಕೊಂಡರೆ ಏಳ್ಳೋಕೆ ಆಗದಷ್ಟು ಚಳಿ. ಕಷ್ಟಪಟ್ಟು ಎದ್ದು, ಮನೆಯಂಗಳದಲ್ಲಿ ಓಡಾಡಿಕೊಂಡು ಓದೋಣ ಅಂದರೆ, ಅಲ್ಲೆಲ್ಲಾ ಇಬ್ಬನಿ ಬಿದ್ದು ಕೆಸರು ಕೆಸರು. ಪುಸ್ತಕ ಹಿಡಿದು ಒಳಗೆ ಬಂದು ಕುಳಿತರೆ ಮತ್ತೆ ತೂಕಡಿಕೆ. ಚಳಿಯ ಮೇಲಿನ ದ್ವೇಷ ಮತ್ತಷ್ಟು ಹೆಚ್ಚಾಯ್ತು.
ಕಾಲೇಜಿಗೆ ಕಾಲಿಟ್ಟೆ. ಸಮವಸ್ತ್ರದ ಹಂಗಿಲ್ಲದ ಬಣ್ಣ ಬಣ್ಣದ ಲೋಕವದು. ನನ್ನಿಷ್ಟದ ಬಟ್ಟೆ ಧರಿಸಿ, ತೆಳುವಾಗಿ ಮೇಕಪ್ ಮಾಡಿ, ಗಾಡಿಯೇರಿ ಹೊರಟರೆ, ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನೋ ಪುಳಕ. ಅಷ್ಟರಲ್ಲಿ ಮತ್ತೆ ಚಳಿ ಬಿತ್ತು. ತುಟಿ ಒಡೆಯಿತು, ಮುಖದ ಚರ್ಮ ಒಣಗಿತು. ಕನ್ನಡಿ ಮುಂದೆ ನಿಂತು ಆ ಕ್ರೀಂ, ಈ ಕ್ರೀಂ ಅಂತ ಉಜ್ಜಿದ್ದೇ ಬಂತು, ಪ್ರಯೋಜನ ಸೊನ್ನೆ. “ಏನು? ಇತ್ತೀಚೆಗೆ ಕನ್ನಡಿ ಮುಂದೆ ನಿಲ್ಲೋದು ಜಾಸ್ತಿಯಾಗಿದೆ?’ ಅಂತ ಅಮ್ಮನ ಪ್ರಶ್ನೆ ಬೇರೆ. ಮೊದಲಿನಂತೆ ಕೂದಲು ಹಾರಿಸುತ್ತಾ, ಗಾಡಿ ಓಡಿಸುವಂತಿಲ್ಲ. ಸ್ಕಾಫ್ìನಿಂದ ಸುತ್ತಿ, ಕುಳಿರ್ಗಾಳಿಯನ್ನು ತಡೆದರೂ ಕೂದಲು ಉದುರೋದು ನಿಲ್ಲಲಿಲ್ಲ. ಇಷ್ಟದ ಬಟ್ಟೆಯನ್ನು ಧರಿಸೋ ಸ್ವಾತಂತ್ರ್ಯವನ್ನು ಈ ಚಳಿ ಕಿತ್ತುಕೊಂಡಿತು. ಚಳಿ ತಡೆಯಲು ತುಂಬು ತೋಳಿನ ಟಾಪ್, ಸ್ವೆಟರ್ ಧರಿಸೋದು ಅನಿವಾರ್ಯವವಾಯ್ತು. ಟಾಪ್‌ನ ಹಿಂಭಾಗದ ಎಂಬ್ರಾಯ್ಡ್ರಿಯ ಸೊಬಗನ್ನೂ ಸ್ವೆಟರ್ ನುಂಗಿ ಹಾಕಿತು.
ಚಳಿಯ ಜೊತೆ ಜೊತೆಗೆ ಸೋಮಾರಿತನವೂ ಬರುವುದರಿಂದ, ಹೇಳಿದ ಸಮಯಕ್ಕೆ ಅಸೈನ್‌ಮೆಂಟ್ ಕಂಪ್ಲೀಟ್ ಮಾಡಲಾಗದೆ, ಮೊದಲ ಪಿರಿಯಡ್‌ಗೆ ಚಕ್ಕರ್ ಹೊಡೆದು ಅಟೆಂಡೆನ್ಸ್ ಕಡಿಮೆಯಾಗಿ ಇನ್‌ಒಬೀಡಿಯೆಂಟ್ ಅನ್ನೋ ಪಟ್ಟ ಬೇರೆ ಸಿಕ್ಕಿತು. ಈಗ ಹೇಳಿ ಇಂಥಾ ಚಳಿಯನ್ನು ಇಷ್ಟಪಡೋಕೆ ಒಂದು ಕಾರಣವಾದರೂ ಇದೆಯಾ ಅಂತ.
ಶಿಶಿರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.