ಚಳಿಗೆ ಚಮಕ್ ಕೊಡಲು “ಸೂಪ್’ ಶಾಸ್ತ್ರ!
Team Udayavani, Jan 23, 2019, 12:30 AM IST
ಈ ವರ್ಷ ಚಳಿ ಜೋರಾಗಿಯೇ ಇದೆ. ಬಿಸಿಬಿಸಿ ಸಾರು, ಸೂಪ್, ಚಹಾ, ಕಷಾಯ.. ಹೀಗೆ ಚಳಿಯಿಂದ ರಕ್ಷಣೆ ಪಡೆಯಲು ಬಿಸಿ ಆಹಾರದ ಮೊರೆ ಹೋಗಿದ್ದೇವೆ. ಈ ಸಾಲಿಗೆ ತುಕ್ಬಾ ಮತ್ತು ಸ್ಕ್ಯೂ ಅನ್ನು ಸೇರಿಸಬಹುದು. ಏನಪ್ಪಾ ಇದು ತುಕಾ³ ಅಂತೀರಾ? ಇತ್ತೀಚೆಗೆ ಲಡಾಕ್‌ಗೆ ಪ್ರವಾಸ ಹೋಗಿದ್ದಾಗ ಅಲ್ಲಿ ಸವಿದ ಆಹಾರವೇ ತುಕಾ³ ಮತ್ತು ಸ್ಕ್ಯೂ. ಅಲ್ಲಿ ಸ್ಥಳೀಯವಾಗಿ ಬೆಳೆಯುವ ಕೆಲವು ತರಕಾರಿಗಳು, ಯಾಕ್ ಮೃಗದ ಹಾಲು, ಬೆಣ್ಣೆ ಬಳಸಿ ಇವನ್ನು ತಯಾರಿಸಲಾಗುತ್ತದೆ. ಆದರೆ, ನಮ್ಮಲ್ಲಿ ಲಭ್ಯವಿರುವ ಪರ್ಯಾಯ ವಸ್ತುಗಳನ್ನು ಹಾಗೂ ಮಸಾಲೆಯನ್ನು ಸೇರಿಸಿ, ಕೆಲವು ಪ್ರಾದೇಶಿಕ ಬದಲಾವಣೆ ಮಾಡಿಕೊಂಡು ನಾವೂ ಲಡಾಕ್‌ನ ತುಕಾ³ ಮತ್ತು ಸ್ಕೂ ಗಳನ್ನು ತಯಾರಿಸಬಹುದು. ಹೇಗೆ ಅನ್ನೋದು ಇಲ್ಲಿದೆ…
1. ತುಕ್ಬಾ (ನೂಡಲ್ ಸೂಪ್)
(ಲಡಾಕ್‌ನ ಹೆಚ್ಚಿನ ಹೋಟೆಲ್‌ಗಳಲ್ಲಿ ಸುಲಭವಾಗಿ ಸಿಗುವ ಆಹಾರ ಇದು. ಸಸ್ಯಾಹಾರ ಮತ್ತು ಮಾಂಸಾಹಾರದ ವೈವಿಧ್ಯಗಳಲ್ಲಿ ದೊರೆಯುತ್ತದೆ. ಬೇರೆ ಬೇರೆ ಮಸಾಲೆಗಳನ್ನು ಬಳಸಿ ವಿವಿಧ ಬಣ್ಣ,ರುಚಿ ಹಾಗೂ ಘಮದ ತುಕ್ಬಾವನ್ನು ತಯಾರಿಸಬಹುದು. ಪಾಸ್ತಾ ಅಥವಾ ನೂಡಲ್ಸ್ ಜೊತೆಗೆ ಕೆಲವು ತರಕಾರಿಗಳು, ಬೆಣ್ಣೆ, ಗರಂ ಮಸಾಲೆ ಹಾಕಿ ಕುದಿಸಿದಾಗ ತಯಾರಾಗುವ ಸರಳ ಸೂಪ್ ಇದು)
ಬೇಕಾಗುವ ಸಾಮಗ್ರಿ: ನೂಡಲ್ಸ್/ಪಾಸ್ತಾ- 100 ಗ್ರಾಂ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಆಲೂಗಡ್ಡೆ ಇತ್ಯಾದಿ ತರಕಾರಿ- 2 ಕಪ್, ಗರಂ ಮಸಾಲೆ/ಸಾರಿನ ಪುಡಿ/ಹಸಿಮೆಣಸಿಕಾಯಿ-ಕಾಳುಮೆಣಸು ಪೇಸ್ಟ್/ ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಬೆಣ್ಣೆ/ಅಡುಗೆ ಎಣ್ಣೆ- 4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ನೀರು- 5-6 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ, ಲಿಂಬೆ ಹಣ್ಣು-1.
ತಯಾರಿಸುವ ವಿಧಾನ: ನೂಡಲ್ಸ್ ಅಥವಾ ಪಾಸ್ತಾವನ್ನು ನೀರಿನಲ್ಲಿ ಕುದಿಸಿ, ನೀರು ಸೋಸಿ ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ತೆಗೆದುಕೊಂಡು, ಹೆಚ್ಚಿದ ತರಕಾರಿ ಹೋಳುಗಳು, ಉಪ್ಪು, ಇಷ್ಟವೆನಿಸಿದ ಯಾವುದಾದರೂ ಒಂದು ಮಸಾಲೆ ಸೇರಿಸಿ ಸ್ವಲ್ಪ ಬಾಡಿಸಿ. ಆಮೇಲೆ ತರಕಾರಿ ಮುಳುಗುವಷ್ಟು ನೀರು ಸೇರಿಸಿ ಬೇಯಿಸಿ. ಬೆಂದ ತರಕಾರಿ ಮಿಶ್ರಣಕ್ಕೆ ನೂಡಲ್ಸ್ ಅನ್ನು ಸೇರಿಸಿ, ಬೇಕಿದ್ದರೆ ಪುನಃ ಸ್ವಲ್ಪ ಉಪ್ಪು ಹಾಕಿ. ಸಾಕಷ್ಟು ನೀರು ಸೇರಿಸಿ ಸೂಪ್‌ನ ಹದಕ್ಕೆ ಕುದಿಸಿ. ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಬಿಸಿಬಿಸಿಯಾಗಿ ಸೇವಿಸಲು ರುಚಿಯಾಗಿರುತ್ತದೆ.
2. ಸ್ಕ್ಯೂ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 2 ಚಪಾತಿಗೆ ಆಗುವಷ್ಟು, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಆಲೂಗಡ್ಡೆ ಇತ್ಯಾದಿ ಮಿಶ್ರ ತರಕಾರಿಗಳು- 1 ಕಪ್, ಬಟಾಣಿ/ಅವರೇಕಾಳು- 1 ಕಪ್, ಗರಂ ಮಸಾಲೆ- 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಅಡುಗೆ ಎಣ್ಣೆ- 4 ಚಮಚ, ಅರಿಶಿನ ಪುಡಿ- 1/2 ಚಮಚ, ಅಚ್ಚಮೆಣಸಿನ ಪುಡಿ- 1/2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ನೀರು- 5-6 ಕಪ್, ಹಾಲು- ಒಂದು ಕಪ್.
ತಯಾರಿಸುವ ವಿಧಾನ: ಗೋಧಿಹಿಟ್ಟಿಗೆ ಸ್ವಲ್ಪ ನೀರು, ಸ್ವಲ್ಪ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ, ಸಣ್ಣ ಉಂಡೆಗಳನ್ನು ಮಾಡಿ. ಉಂಡೆಗಳನ್ನು ತಟ್ಟಿ ಚಿಕ್ಕ ವಡೆಯಾಕಾರ ಅಥವಾ ಗಿಣ್ಣಲಿನಂತೆ ತಯಾರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕತ್ತರಿಸಿಟ್ಟ ಎಲ್ಲಾ ತರಕಾರಿಗಳನ್ನು ಒಂದೊಂದಾಗಿ ಹಾಕಿ ಬಾಡಿಸಿಕೊಂಡು, ಮಸಾಲೆ, ಅರಿಶಿನಪುಡಿ, ಉಪ್ಪು, ಖಾರದ ಪುಡಿಯನ್ನೂ ಹಾಕಿ ತರಕಾರಿ ಮುಳುಗುವಷ್ಟು ನೀರು ಹಾಕಿ ಬೇಯಿಸಿ. ತರಕಾರಿ ಬೆಂದ ಮೇಲೆ, ತಯಾರಿಸಿಟ್ಟಿದ್ದ ಗೋಧಿಹಿಟ್ಟಿನ ವಡೆಗಳನ್ನು ಸೇರಿಸಿ, ಬೇಕಿದ್ದಲ್ಲಿ ಪುನಃ ಸ್ವಲ್ಪ ನೀರು, ಉಪ್ಪು ಸೇರಿಸಿ ಸೂಪ್‌ನ ಹದಕ್ಕೆ ಕುದಿಸಿ. ಕೊನೆಯಲ್ಲಿ ಹಾಲನ್ನು ಸೇರಿಸಿ ಕೆಳಗಿಳಿಸಿ. ಬಿಸಿಬಿಸಿಯಾದ ಸ್ಕ್ಯೂ ಸವಿಯಲು ಸಿದ್ಧ. ಅವರವರ ಆಯ್ಕೆಯ ತರಕಾರಿಯನ್ನು ಉಪಯೋಗಿಸಬಹುದು.
-ಹೇಮಮಾಲಾ.ಬಿ