ಟೊಮೇಟೋ ಕೀ ಬಾತ್
ಥರಹೇವಾರಿ ಉಪಯೋಗಿ ಈ ತರಕಾರಿ...
Team Udayavani, Nov 6, 2019, 4:12 AM IST
“ನಿಮ್ಮ ಮನೆಯಲ್ಲಿ ಏನಡುಗೆ ಇವತ್ತು?’ ಎಂದು ಪಕ್ಕದ ಮನೆಯ ಹೆಂಗಸು ನನ್ನನ್ನು ಕೇಳುವುದಕ್ಕೂ, ನಾನು ಮಾಡುವ ಅಡುಗೆಗೂ ಏನೋ ಸಂಬಂಧವಿರುವುದು ನಿಜ. ಅವರು ಹಾಗೆ ಕೇಳಿದ ಎಲ್ಲ ದಿನವೂ ನಾನು ಟೊಮೇಟೊ ಸಾರು ಮಾಡಿರುತ್ತೇನೆ ಎಂದರೆ ನೀವು ನಂಬುತ್ತೀರೋ ಇಲ್ಲವೋ! ನಾನು ಟೊಮೇಟೊ ಸಾರು ಮಾಡಿದ ದಿನ, ಅವರ ಸಿಕ್ತ್ ಸೆನ್ಸ್‌ಗೆ ಅದು ಹ್ಯಾಗೆ ತಿಳಿಯುತ್ತದೋ ಗೊತ್ತಿಲ್ಲ.
ಬೇಳೆ,ಬಟಾಟೆ (ಆಲೂಗಡ್ಡೆ), ಬಟಾಣಿಯೆಂದರೆ ನನ್ನ ಹೊಟ್ಟೆಗೆ ಏನೋ ದ್ವೇಷ. ಅವನ್ನೆಲ್ಲ ದಿನಾ ತಿಂದು ಗ್ಯಾಸ್ಟ್ರಿಕ್ ಸಮಸ್ಯೆ ಬರುವುದು ಬೇಡವೆಂದು, ಬಹುತೇಕ ದಿನಗಳಲ್ಲಿ ನಾನು ಟೊಮೇಟೊ ಸಾರನ್ನೇ ಮಾಡುತ್ತೇನೆ. ಕೆಲವೊಮ್ಮೆ ದಿನ ಬಿಟ್ಟು ದಿನ ಟೊಮೇಟೊ ಸಾರು ಮಾಡಿದ್ದೂ ಇದೆ. ಮನೆಯವರಂತೂ, “ಹಿಂದಿನ ಜನ್ಮದಲ್ಲಿ ನೀನು ಟೊಮೇಟೊ ಬೆಳೆಯುತ್ತಿದ್ದಿರಬೇಕು’ ಅಂತ ತಮಾಷೆ ಮಾಡುತ್ತಿರುತ್ತಾರೆ.
ಟೊಮೇಟೊ ಸಾರು, ಬಹಳ ಬೋರು ಅಂದುಕೊಳ್ಳಬೇಡಿ. ನಾನು ಅದರಲ್ಲಿಯೂ ವಿವಿಧ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಟೊಮೇಟೊವನ್ನು ಕೊಚ್ಚಿ, ಸ್ವಲ್ಪವೇ ಸ್ವಲ್ಪ ಬೇಳೆ ಹಾಗೂ ರಸಂ ಪೌಡರ್ ಹಾಕಿ ಮಾಡುವುದು ಒಂದು ರೀತಿಯಾದರೆ, ಟೊಮೇಟೊವನ್ನು ಬೇಯಿಸಿ, ಮಿಕ್ಸಿಗೆ ಹಾಕಿ ರುಬ್ಬಿ ಮಾಡುವುದು ಇನ್ನೊಂದು ಬಗೆ. ಊರಿನಿಂದ ಅತ್ತೆ, “ಸಾರಿನ ಪುಡಿ ಬೇಕೇನೆ?’
ಅಂದರೆ, ಬೇಡ ಎನ್ನದೇ ಅದನ್ನೂ ತಂದು ಬಳಸಿದರೆ, ಅದಕ್ಕೆ “ಅತ್ತೆ ಮಾಡಿದ ಪುಡಿಯ ಸಾರು’ ಎಂಬ ಹೆಸರು. ಅಮ್ಮ ಕೊಟ್ಟಾಗ, “ಅಮ್ಮ ಮಾಡಿದ ಪುಡಿಯ ಸಾರು’ ಎಂದೂ, ಗೂಗಲ್‌ನಲ್ಲಿ ಹುಡುಕಿ ಮಾಡಿದರೆ, ತಮಿಳು ಶೈಲಿ, ಆಂಧ್ರ ಶೈಲಿ ಸಾರು, ನಾಟಿ ಟೊಮೇಟೊವನ್ನು ಕಿವುಚಿ ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಸಾರು… ಹೀಗೆ ನಾನಾ ಬಗೆಯ ಸಾರು ಮಾಡುವುದರಲ್ಲಿ ನಾನು ಪಿಎಚ್.ಡಿ ವಿದ್ಯಾರ್ಥಿನಿ. (ತಿನ್ನುವವರಿಗೂ ಬೇಜಾರಾಗಬಾರದಲ್ಲ!),
ಎಂಜಿನಿಯರಿಂಗ್ ಓದಲು ಹಾಸ್ಟೆಲ್ ಸೇರಿದಾಗ ಅಮ್ಮನ ಅಡುಗೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ. ಮೆಸ್‌ನಲ್ಲಿ ಚೆನ್ನಾಗಿಯೇ ಅಡುಗೆ ಮಾಡಿದರೂ, ನಮಗೆ ಸೇರದ ಕೆಲವು ಪದಾರ್ಥಗಳಿದ್ದವು. ಆಗ ನಾವು ರೂಮ್‌ನಲ್ಲಿ ಗೆಳತಿಯ ಎಲೆಕ್ಟ್ರಿಕ್ ಸ್ಟೌವ್ ಬಳಸಿ, ಮ್ಯಾಗಿ ಅಥವಾ ದಾಲ್ ಕಿಚಡಿಯನ್ನು ಮಾಡಿಕೊಳ್ಳುತ್ತಿದ್ದೆವು. ಮೆಸ್‌ನಲ್ಲಿ ಮಾಡಿದ ಪಲ್ಯ ಖಾಲಿಯಾದರೆ, ದಿಢೀರನೆ ಟೊಮೇಟೊ ಪಲ್ಯ ಮಾಡುತ್ತಿದ್ದರು.
ಅದಕ್ಕಾಗೇ ನಾವು ರೂಮ್‌ಮೇಟ್ಸ್‌ಗಳು ಬೇಕಂತಲೇ ತಡವಾಗಿ ಊಟಕ್ಕೆ ಹೋಗುತ್ತಿದ್ದೆವು.ಪಲ್ಯ ಖಾಲಿಯಾಗಿದ್ದರೆ ಖುಷಿಯೋ ಖುಷಿ. ಕೆಲಸಕ್ಕೆ ಸೇರಿದ ಮೇಲೆ, ಸಹೋದ್ಯೋಗಿಗಳೆಲ್ಲ ಒಟ್ಟಿಗೆ ಊಟ ಮಾಡುತ್ತಿದ್ದೆವು. ಕಾಲೇಜಿನಲ್ಲಿ ಒಟ್ಟಿಗೆ ಓದಿದ ಗೆಳೆಯ-ಗೆಳತಿಯರೂ ಇದ್ದುದರಿಂದ ಡಬ್ಬಿಯಲ್ಲಿನ ತಿನಿಸುಗಳನ್ನು ಹಂಚಿಕೊಂಡು ತಿನ್ನುವುದು ರೂಢಿ. ಗೆಳೆಯನೊಬ್ಬ ಚಪಾತಿಯೊಂದಿಗೆ ಎಣ್ಣೆಗಾಯಿ, ಟೊಮೇಟೊ ಪಲ್ಯ ತರುತ್ತಿದ್ದ.
ಆ ಪಲ್ಯ ತಂದ ದಿನ ನನಗೆ ಹಬ್ಬವೋ ಹಬ್ಬ. ನಾನು ಗರ್ಭಿಣಿ ಅಂತ ತಿಳಿದಾಗ, ನನಗೆ ಒಂದು ಕೆ.ಜಿ. ಟೊಮೇಟೋ ಕೊಟ್ಟಿದ್ದಲ್ಲದೆ, ಅಮ್ಮನ ಬಳಿ ಹೇಳಿ ನನಗಾಗಿ ಪಲ್ಯ ಮಾಡಿಸಿಯೂ ತಂದಿದ್ದ. ಒಮ್ಮೆ ದೇವಸ್ಥಾನದಲ್ಲಿ ಊಟ ಮಾಡುವಾಗ ಚಟ್ನಿಯೆಂದು ಸ್ವಲ್ಪ ಬಡಿಸುವವರು, ನನಗೆ ತುಸು ಜಾಸ್ತಿಯೇ ಬಡಿಸಿದ್ದರು. ಆ ಪದಾರ್ಥಕ್ಕೆ ಸಂತೋಷಿ ಅಂದೇನೋ ಹೆಸರು ಹೇಳಿದ್ದರು. ಯಾವತ್ತೂ ಎರಡನೇ ಸಾರಿ ಬಡಿಸಲು ಬಾರದವರು, ಆ ಪದಾರ್ಥವನ್ನಷ್ಟೇ ಎರಡನೇ ಬಾರಿ ತಂದರೆಂದರೆ, ದೇವರಿಗೂ ನನ್ನ ಟೊಮೇಟೊ ಪ್ರೀತಿ ತಿಳಿದಿದೆ ಅಂತ ಖುಷಿಪಟ್ಟಿದ್ದೆ.
ಖಾಲಿಯಾಗದೇ ಹಾಗೇ ಉಳಿದ ಆ ಪದಾರ್ಥ ಎರಡನೇ ಬಾರಿ ಬಂದಿತ್ತೆಂದು ಆಮೇಲೆ ತಿಳಿಯಿತು. ಟೊಮೇಟೊ ಪಲ್ಯ ಮಾಡಬೇಕೆಂದು ಗೂಗಲ್‌ನಲ್ಲಿ ತಡಕಾಡಿ ಎಷ್ಟೇ ಪ್ರಯತ್ನಪಟ್ಟರೂ ಗೆಳೆಯನ ಅಮ್ಮ ಮಾಡಿದಂತೆಯೋ, ಹಾಸ್ಟೆಲ್ ಮೆಸ್‌ನಲ್ಲಿ ಮಾಡಿದಂತೆಯೋ ರುಚಿ ಬರಲೇ ಇಲ್ಲ. ದೂರದ ಸಂಬಂಧಿಯೊಬ್ಬರು ಊಟಕ್ಕೆ ಬಂದವರು ಮಾತನಾಡುತ್ತ, ಟೊಮೇಟೊ ಪಲ್ಯದ ಸುದ್ದಿ ಬರುತ್ತಲೇ ಸಂತೋಷಿಯ ರೆಸಿಪಿ ಹೇಳಿದರು.
ಅವರು ಹೊರಟ ಕೂಡಲೇ ಅಡುಗೆ ಮನೆಗೆ ಓಡಿ ಆ ರೆಸಿಪಿ ಪ್ರಯತ್ನಿಸಿದೆ. ಅದೇ ಮೆಸ್‌ನ ಪಲ್ಯ. ಆ ಕ್ಷಣ ನಾನೂ ಸಂತೋಷಿಯಾದೆ. ಚಪಾತಿ, ಅನ್ನ ಯಾವುದಕ್ಕೂ ನೆಂಚಿಕೊಂಡು ತಿನ್ನಲು ಸರಿ ಆ ಪಲ್ಯ. ಮಾವನವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಏನು ಅಡುಗೆ ಮಾಡಲೆಂದು ತಿಳಿಯದೇ ಬೇಳೆಸಾರು, ಸಂತೋಷಿ (ಟೊಮೇಟೊ ಪಲ್ಯ) ಮಾಡಿದೆ. ಚಪ್ಪರಿಸಿ ತಿಂದ ಮಾವನವರು, ಮಾರನೇ ದಿನವೂ ಅದನ್ನೇ ಮಾಡು ಎಂದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡರೆ, ಮನೆಯವರು “ನಮ್ಮಪ್ಪನಿಗೂ ಹಿಡಿಸಿದೆಯಾ ಆ ನಿನ್ನ ಪಲ್ಯದ ರುಚಿನಾ?’ ಎಂದರು.
“ನಾಳೆ ಡಬ್ಬಿ ಬೇಡ’ ಎಂದು ಮನೆಯವರು ಹೇಳಿದಾಗ ಮಾರನೇ ದಿನ ಬೆಳಿಗ್ಗೆ ಒಂದ್ಹತ್ತು ನಿಮಿಷ ತಡವಾಗಿ ಆರಾಮಾಗಿ ಏಳುವುದು ನನ್ನ ಅಭ್ಯಾಸ. ಆದರೆ ಮತ್ತೆ ಅವರ ಪ್ಲಾನ್ ಬದಲಾಗಿ ಟೀಮ್ ಲಂಚ್ ಕ್ಯಾನ್ಸಲ್ ಆಯಿತು.ಊಟಕ್ಕೆ ಆದರೆ ಹಾಕಿಕೊಡು ಎಂದರೆ ದಿಢೀರಾಗಿ ಏನು ಮಾಡುವುದು ಎಂಬ ಯೋಚನೆ.ಅನ್ನ ಮಾಡಿದರೆ,ಸಾರು ನೆಂಚಿಕೊಳ್ಳಲು ಪಲ್ಯ ಮಾಡುತ್ತ ಕೂರಬೇಕು.ಅಷೆxಲ್ಲ ಮಾಡಲು ಸಾಕಷ್ಟು ಸಮಯವೇ ಬೇಕು.ಆಗ ನನಗೆ ಹೊಳೆದದ್ದು ಟೊಮ್ಯಾಟೊ ಬಾತ….ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ,ಅಕ್ಕಿ ಹಾಕಿ ಚೆನ್ನಾಗಿ ಹುರಿದು ಮಾಡಿದರೆ ಮುಗಿಯಿತು.
ಪಲಾವ್, ಕುರ್ಮಾ, ಪನ್ನೀರ್, ಮಶ್ರೂಮ್ ಇತ್ಯಾದಿ ಪದಾರ್ಥಗಳನ್ನು ಮಾಡಲು ಟೊಮೇಟೊ ಇರಲೇಬೇಕು. ಟೊಮೇಟೊನಿಂದ ತಮಿಳು ಶೈಲಿಯಲ್ಲಿ ಚಟ್ನಿ, ಆಂಧ್ರ ಶೈಲಿಯಲ್ಲಿ ಶೇಂಗಾ, ಕೊತ್ತಂಬರಿ ಬೆರೆಸಿ ಮಾಡುವ ಚಟ್ನಿ ಹೀಗೆ ನಾನಾ ಬಗೆಯನ್ನು ಪ್ರಯತ್ನಿಸಿದ್ದೇನೆ. ಎಲ್ಲರ ಮನೆಯಲ್ಲಿ ಟೊಮೇಟೊ ಕೆ.ಜಿ.ಗೆ ಮೂರು ನಾಲ್ಕು ರೂಪಾಯಿಗೆ ಇಳಿದಾಗ ನಾಲ್ಕಾರು ಕೆ.ಜಿ., ಬೇರೆಯ ದಿನ ಬೇಕೆ ಬೇಡವೇ ಎಂದು ತಂದರೆ; ನಮ್ಮ ಮನೆಯಲ್ಲಿ ತರಕಾರಿ ತರಲು ಹೋದರೂ, ಹೋಗದಿದ್ದರೂ ವಾರಕ್ಕೆ ಒಂದೆರಡು ಕೆ.ಜಿ. ಟೊಮೇಟೊ ಬೇಕೇಬೇಕು.
ಕಡಿಮೆ ಬೆಲೆ ಇರುವಾಗ ಕೆ.ಜಿ.ಗಟ್ಟಲೆ ತಂದ ಟೊಮೇಟೊದಿಂದ ಸಾಸ್ ತಯಾರಿಸಿಡುತ್ತಾರೆ ಎಂದು ಕೇಳಿ ನಾನೂ ಪ್ರಯತ್ನಿಸಿದೆ. ಏನು ತಪ್ಪಾಯಿತೋ ತಿಳಿಯಲಿಲ್ಲ, ರುಚಿ ಹದಗೆಟ್ಟು ತಿನ್ನಬೇಕೋ, ಬಿಸಾಡಬೇಕೋ ತಿಳಿಯದೇ ಬಂದ ನೆಂಟರಿಷ್ಟರಿಗೆಲ್ಲ ಹೊಸರುಚಿ ನೋಡಿಯೆಂದು ಹಂಚಿದೆ. ಅವರು ಒಂದೆರಡು ವರುಷವಾಯಿತು ನಮ್ಮ ಮನೆಯ ಬಳಿ ಕಾಲು ಹಾಕದೇ! ಊರಿಗೆ ಹೋಗುವಾಗ ಫ್ರಿಡ್ಜ್ ಖಾಲಿ ಮಾಡಿ ಸ್ವಿಚ್‌ಆಫ್ ಮಾಡಬೇಕೆಂದು ತರಕಾರಿಗಳನ್ನು ವಾರದ ಹಿಂದಿಂದ ತರುವುದನ್ನು ನಿಲ್ಲಿಸುತ್ತೇನೆ. ಆದರೆ ಪ್ರಯಾಣದ ಹೊತ್ತಲ್ಲಿ ತಿನ್ನಲು ಚಪಾತಿ,ಟೊಮ್ಯಾಟೊ ಸಂತೋಷಿ (ಪಲ್ಯ) ಮಾಡುತ್ತೇನೆ.
ಮಗರಾಯನಿಗೆ ಪ್ರಯಾಣವೆಂದರೆ ಅಮ್ಮ, “ಚಪಾತಿ, ಪಲ್ಯ ಮಾಡಿಯಾಯ್ತಾ?’ ಎಂದು ಕೇಳುವಷ್ಟು ಅದು ಪ್ರಯಾಣದ ಭಾಗವೇ ಆಗಿಹೋಗಿದೆ. ವಿದೇಶದಲ್ಲಿ ಕೆಲವು ಹಬ್ಬದ ಸಂದರ್ಭದಲ್ಲಿ ದ್ರಾಕ್ಷಿ, ಟೊಮೇಟೊನಲ್ಲಿ ಆಟವಾಡುತ್ತ, ಒಬ್ಬರ ಮೇಲೆ ಇನ್ನೊಬ್ಬರು ಅದನ್ನು ಚೆಲ್ಲಾಡುತ್ತ ಆಡುತ್ತಾರಂತೆ. ಮನೆಯವರು, ಒಮ್ಮೆ ಆ ಹಬ್ಬಕ್ಕೆ ನನ್ನನ್ನು ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ದೇಶದಲ್ಲಿ, ಇಷ್ಟವಾಗದ ಕಾರ್ಯಕ್ರಮದಲ್ಲಿ ಮಾತ್ರ ರಾಜಕಾರಣಿಗಳ ಮೇಲೆ ಟೊಮೇಟೊ ಎಸೆಯುವುದು ಕೇಳಿದ್ದೇನೆ.
ಆದರೆ ಅಲ್ಲಿ ಅದು ಒಂದು ಹಬ್ಬವೆಂದರೆ ಆಶ್ಚರ್ಯವೇ. ನನಗಂತೂ ಅಷ್ಟು ಪಲ್ಯ ತಿನ್ನುವುದರಿಂದ ವಂಚಿತಳಾದೆನಲ್ಲ ಎನಿಸುವುದು ಸುಳ್ಳಲ್ಲ. ಹುಂ! ನನಗೆ ತಿಳಿಯಿತು, ನೀವೆಲ್ಲ ಟೊಮೇಟೊ ಬೆಲೆಯೆಷ್ಟು, ಏನು ಹೊಸರುಚಿ ಮಾಡಬಹುದು ಎಂದು ಗೂಗಲ್-ಯೂಟ್ಯೂಬ್ ಮೊರೆ ಹೋಗಿದ್ದೀರಾ?! ಸರಿ, ನಾವೆಲ್ಲ ಹೊಸರುಚಿ ಮಾಡಿ ಹೊಸಹೊಸ ಅನುಭವಗಳೊಂದಿಗೆ ಜೀವನದಲ್ಲಿ ಹೊಸತನವನ್ನು ಕಾಣೋಣ. ಇಲ್ಲಿಗೆ ನನ್ನ ಟೊಮೇಟೊ ಕೀ ಬಾತ್ ಮುಗಿಯಿತು.
* ಸಾವಿತ್ರಿ ಶ್ಯಾನುಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.