ಸತ್ಯ ಮತ್ತು ಸೌಂದರ್ಯ
Team Udayavani, Oct 24, 2018, 6:00 AM IST
ಆಹಾರ, ಆರೋಗ್ಯದ ಬಗ್ಗೆ ನಮ್ಮಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಹೀಗೆ ಮಾಡಬೇಕು, ಹೀಗೆ ಮಾಡಬಾರದು, ಇದನ್ನು ತಿನ್ನಬಾರದು ಅಂತೆಲ್ಲಾ ಹೇಳುತ್ತಿರುತ್ತೇವೆ. ನಾವು ನಂಬಿಕೊಂಡಿರುವ, ಫಾಲೋ ಮಾಡುತ್ತಿರುವ ಕೆಲವು ವಿಷಯಗಳು ತಪ್ಪು ಎನ್ನುತ್ತವೆ ಸಂಶೋಧನೆಗಳು. ಅಂಥ ಕೆಲವು ಮಿಥ್ಯೆಗಳು ಯಾವುವು ಗೊತ್ತಾ?
1. ಒದ್ದೆ ಕೂದಲಿಂದ ಶೀತ ಆಗುತ್ತೆ
ಸ್ನಾನ ಮಾಡಿ, ಸರಿಯಾಗಿ ತಲೆ ಒರೆಸಿಕೊಳ್ಳದಿದ್ದರೆ ಅಮ್ಮಂದಿರು ಹೇಳ್ಳೋ ಮಾತು ಇದು. ಆದರೆ, ಸಂಶೋಧನೆಗಳು ಇದನ್ನು ಸುಳ್ಳು ಅನ್ನುತ್ತವೆ. ನಿಮಗೆ ನೆಗಡಿಯಾಗಿದ್ದಾಗ ತಲೆಗೆ ಸ್ನಾನ ಮಾಡಿದರೆ, ಶೀತ ಜಾಸ್ತಿಯಾಗುವ ಸಂಭವ ಇರುತ್ತದೆ. ಉಳಿದಂತೆ, ಎರಡರ ಮಧ್ಯೆ ಯಾವ ಸಂಬಂಧವೂ ಇಲ್ಲವಂತೆ.
2. ಮಂದ ಬೆಳಕಿನಲ್ಲಿ ಓದಿದರೆ ದೃಷ್ಟಿ ದೋಷ
ಮಂದ ಬೆಳಕಿನಲ್ಲಿ ಓದುವುದರಿಂದ ಕಣ್ಣುಗಳಿಗೆ ಆಯಾಸವಾಗುತ್ತದೆ ನಿಜ. ಆದರೆ, ಅದರಿಂದ ದೃಷ್ಟಿದೋಷ ಬರುವುದಿಲ್ಲ. ಹಿರಿಯರು ಹೇಳಿದಂತೆ, ಕತ್ತಲೆಯಲ್ಲಿ ಕೂತು ಓದಿದರೆ, ಕನ್ನಡಕ ಬರುತ್ತದೆ ಎಂಬುದಕ್ಕೆ ಆಧಾರವಿಲ್ಲ ಎಂಬುದು ಸಂಶೋಧನೆಗಳ ವಾದ. ಆದರೆ, ಕಣ್ಣಿಗೆ ಆಯಾಸವಾಗಿ, ಕಣ್ಣುರಿ, ಕಣ್ಣೀರು ಬರುವ ಅಪಾಯವಿರುತ್ತದೆ ಎಂಬುದು ಸತ್ಯ.
3. ಕೂದಲು ಸೀಳಿದ್ದರೆ ಶ್ಯಾಂಪೂ ಬಳಸಿ
ಕೂದಲಿನ ತುದಿ ಸೀಳಿದ್ದರೆ (ಸ್ಪ್ಲಿಟ್ ಎಂಡ್) ಕೆಲವು ಸ್ಪೆಷಲ್ ಶ್ಯಾಂಪೂ ಬಳಸಿದರೆ ಸರಿ ಹೋಗುತ್ತದೆ ಅಂತ ನಂಬುವವರಿದ್ದಾರೆ. ಜಾಹೀರಾತುಗಳು ಹಾಗೂ ಹೇರ್ ಸ್ಪೆಷಲಿಸ್ಟ್‌ಗಳು ಹೇಳುವ ಮಾತು ಕೂಡ ಇದೇ. ಆದರೆ, ಉತ್ತಮ ಆಹಾರ ಸೇವಿಸಿದರೆ, ಕೂದಲನ್ನು ಚೆನ್ನಾಗಿ ಆರೈಕೆ ಮಾಡಿದರೆ ಮಾತ್ರ ಕೂದಲು ಸೀಳುವಿಕೆ ನಿಲ್ಲುತ್ತದೆಯೇ ಹೊರತು, ಶ್ಯಾಂಪೂಗಳಿಂದ ಯಾವ ಜಾದೂ ಕೂಡ ನಡೆಯುವುದಿಲ್ಲ.
4. ಸಿಹಿ ತಿಂದ ಮಕ್ಕಳು ಹೈಪರ್ ಆ್ಯಕ್ಟಿವ್
ಮಕ್ಕಳಿಗೆ ಜಾಸ್ತಿ ಸಿಹಿ ತಿಂಡಿಗಳನ್ನು ಕೊಟ್ಟರೆ ಅವು ಹೈಪರ್ ಆ್ಯಕ್ಟಿವ್ (ಅತಿಯಾದ ಚುರುಕು) ಆಗಿ ವರ್ತಿಸುತ್ತವೆ ಅನ್ನೋದು ಇನ್ನೊಂದು ತಪ್ಪು ಕಲ್ಪನೆ. ಈ ಮಾತನ್ನು ಯಾವ ಸಂಶೋಧನೆಯೂ ಪುಷ್ಟೀಕರಿಸಿಲ್ಲ. ಆದರೆ, ಜಾಸ್ತಿ ಸಿಹಿತಿಂಡಿ ತಿನ್ನುವ ಮಕ್ಕಳಲ್ಲಿ ಬೊಜ್ಜು, ಹಲ್ಲು ಹುಳುಕಿನಂಥ ಸಮಸ್ಯೆ ಬರುತ್ತವೆ.
5. ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತೆ
ಡಯಟ್‌ನ ಹೆಸರಿನಲ್ಲಿ ಊಟ-ತಿಂಡಿ ಮಾಡದೇ ಇರುವವರು ಹೇಳುವ ಮಾತಿದು. ಆದರೆ, ಉಪವಾಸವಿದ್ದಾಗ ಹಸಿವು ಜಾಸ್ತಿಯಾಗಿ, ನಂತರ ಹೆಚ್ಚು ಆಹಾರ ಸೇವಿಸಬೇಕಾಗುತ್ತದೆ. ಅದರಿಂದ ತೂಕ ಹೆಚ್ಚುತ್ತದೆ ಅಂತಾರೆ ತಜ್ಞರು. ತೂಕ ಕಡಿಮೆಯಾಗುವ ಬದಲು, ದೇಹದ ಚಟುವಟಿಕೆಗಳಲ್ಲಿ ಏರುಪೇರಾಗಿ ಅನಾರೋಗ್ಯ ಕಾಡುತ್ತದೆ.
6. ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಕ್ರೀಂ ಬೇಡ
ಚಳಿಗಾಲದಲ್ಲಿ ಜಾಸ್ತಿ ಬಿಸಿಲಿರುವುದಿಲ್ಲ. ಹಾಗಾಗಿ, ಸನ್‌ಸ್ಕ್ರೀನ್ ಕ್ರೀಂ ಹಚ್ಚಿಕೊಳ್ಳುವುದು ಬೇಡ ಅನ್ನುವವರಿದ್ದಾರೆ. ಆದರೆ, ಬಿಸಿಲು ತೀಕ್ಷ್ಣವಾಗಿಲ್ಲದಿದ್ದರೂ, ಸೂರ್ಯನ ಅಲ್ಟ್ರಾವೈಲಟ್ ಕಿರಣಗಳು ನಮ್ಮ ಚರ್ಮವನ್ನು ಹಾಳು ಮಾಡುತ್ತವೆ. ಹಾಗಾಗಿ, ಕಾಲ ಯಾವುದೇ ಇರಲಿ, ಚರ್ಮದ ಕುರಿತು ನಿರ್ಲಕ್ಷ್ಯ ಬೇಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.