ಪೂಜನೀಯ ತುಳಸಿ
ವನಸುಮದೊಂದಿಗೆ ಮಾತುಕಥೆ; ಓದು-ಬರಹ ತಿಳಿಯದ ಪರಿಸರ ತಜ್ಞೆ...
Team Udayavani, Feb 5, 2020, 6:00 AM IST
“ಪ್ರಶಸ್ತಿ ಬಂದಿರೋದರಿಂದ ಭಾರೀ ಖುಷಿ ಆಗ್ತಿದೆ. ನಮಗ್ಯಾರಿಗೂ ವಿಷಯ ಗೊತ್ತೇ ಇರಲಿಲ್ಲ. ಅವತ್ತು ರಾಶಿ ಜನ ಮನೆಗೆ ಬಂದಾಗಲೇ ಗೊತ್ತಾಗಿದ್ದು ಪ್ರಶಸ್ತಿ ಸಿಕ್ಕಿದೆ ಅಂತ. ಆಮೇಲೆ ದೊಡ್ಡ ದೊಡ್ಡವರೆಲ್ಲ ಬಂದು ಮಾತನಾಡಿಸಿಕೊಂಡು ಹೋದರು…’ ಅಂತ ಮುಗªವಾಗಿ ನಗುತ್ತಾರೆ ಈ ಬಾರಿಯ ಪದ್ಮಶ್ರೀ ವಿಜೇತೆ ತುಳಸಿ ಗೌಡ. ವನಸುಮದಂತೆ ಜೀವನ ನಡೆಸುತ್ತಿರುವ ತುಳಸಿ ಗೌಡ, ತಮ್ಮ ಜೀವನದ ಕಥೆಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಕಾಡಲ್ಲಿ ಅರಳಿದ ಹೂವು
ತುಳಸಿ ಗೌಡ ಹುಟ್ಟಿದ್ದು 1944ರಲ್ಲಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಬಡ ಹಾಲಕ್ಕಿ ಕುಟುಂಬದಲ್ಲಿ. ಕೆಲವೇ ವರ್ಷಗಳಲ್ಲಿ ಆಕೆಯ ತಂದೆ ನಾರಾಯಣ ತೀರಿಕೊಂಡರು.ಆಗ ತಾಯಿ ನೀಲಮ್ಮನ ಜೊತೆ, ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕಾದ ಅನಿವಾರ್ಯ ತುಳಸಿಯದ್ದಾಯ್ತು. ಅಂದಿನ ಹಾಲಕ್ಕಿಗಳ ಪಾಲಿಗೆ, ಓದು-ಬರಹ ಎಂಬುದು ಗಗನಕುಸುಮವೇ. ಪರಿಸರವೇ ಅವರ ಪಾಠಶಾಲೆ. ಪ್ರಾಣಿ,ಪಕ್ಷಿ, ಮರ-ಗಿಡಗಳೇ ಗುರುಗಳು. ತುಳಸಿಯೂ ಅದೇ ರೀತಿ, ಪರಿಸರ ಶಾಲೆಯ ವಿದ್ಯಾರ್ಥಿನಿಯಾದಳು. ಕುತೂಹಲದ ಕಣ್ಣುಗಳಿಂದ ಕಾಡನ್ನು ನೋಡತೊಡಗಿದಳು.
ಹನ್ನೆರಡಕ್ಕೇ ಮದುವೆ
ತುಂಬಾ ಚಿಕ್ಕ ವಯಸ್ಸಿಗೇ ಮದುವೆಯಾಯ್ತಂತೆ ಅಂತ ಕೇಳಿದರೆ, “ಹೌದು, ಅಂಕೋಲಾದ ಶೀರೂರಿನಲ್ಲಿ ನನ್ನ ಮದುವೆ ನಡೆದಿತ್ತು. ಆಗ ನನಗೆ ಹನ್ನೊಂದೋ, ಹನ್ನೆರಡೋ ವರ್ಷ’ ಅಂತ ನೆನಪಿನಾಳಕ್ಕೆ ಇಳಿಯುತ್ತಾರವರು. ಮಗ ಸುಬ್ರಾಯ, ಮಗಳು ಸೋಮಿ ಹುಟ್ಟಿದ ಕೆಲ ಸಮಯದಲ್ಲಿ, ಗಂಡ ತೀರಿಕೊಂಡರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಎರಡು ಮಕ್ಕಳ ಜವಾಬ್ದಾರಿ ಬಂದೆರಗಿತು. ಆದರೂ, ಅವರು ಧೃತಿಗೆಡಲಿಲ್ಲ. ಯಾಕಂದ್ರೆ, ಹಾಲಕ್ಕಿಗಳು ಕಷ್ಟ ಸಹಿಷ್ಣುಗಳು. ಸಂಸಾರ ನಿರ್ವಹಣೆಗಾಗಿ ಅರಣ್ಯವನ್ನು ಅವಲಂಬಿಸಿದರು ತುಳಸಿ. ಊರಿನವರ ಜೊತೆ ಕಾಡಿಗೆ ಹೋಗುವುದು, ಉರುವಲು ಕಟ್ಟಿಗೆ ತಂದು ಮಾರುವುದು ಅವರ ಕಾಯಕವಾಯ್ತು.
75 ಪೈಸೆ ಸಂಬಳ
ಸ್ವಲ್ಪ ಸಮಯದ ನಂತರ, ತುಳಸಿಗೆ ಅರಣ್ಯ ಇಲಾಖೆಯ ನರ್ಸರಿ (ಸಸ್ಯ ಪಾಲನಾ ಕೇಂದ್ರ) ಯಲ್ಲಿ ದಿನಗೂಲಿ ಕೆಲಸ ಸಿಕ್ಕಿತು. ಅವರ ದಿನದ ಸಂಬಳ 75 ಪೈಸೆ. ಮರ-ಗಿಡಗಳನ್ನು ಪ್ರೀತಿಸುವ ಅವರು, ಬಹು ನಿಷ್ಠೆಯಿಂದ ಕೆಲಸ ಮಾಡತೊಡಗಿದರು. ದಿನಗಳೆದಂತೆ ಪರಿಸರ ಕಾಳಜಿಯೂ ಜಾಗೃತವಾಯ್ತು. ಗಿಡ-ಮರಗಳನ್ನು ಬೆಳೆಸಬೇಕು, ಅರಣ್ಯ ಸಂಪತ್ತನ್ನು ಅರಿಯಬೇಕು ಎನ್ನುತ್ತಾ, ಜೀವನೋಪಾಯಕ್ಕಾಗಿ ಸೇರಿದ ಕೆಲಸವನ್ನೇ ತಪಸ್ಸಿನಂತೆ ನಿರ್ವಹಿಸಿಕೊಂಡು ಬಂದರು. ಪ್ರತಿ ವರ್ಷ ಸುಮಾರು 30 ಸಾವಿರಕ್ಕೂ ಹೆಚ್ಚು ಗಿಡದಂತೆ, ದಶಕಗಳ ಕಾಲ ಗಿಡ ನೆಡುತ್ತಲೇ ಹೋದ ತುಳಸಿಯವರು, ವೃಕ್ಷಮಾತೆ ಅಂತಲೇ ಕರೆಯಲ್ಪಟ್ಟರು. ಇವರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ಪರಿಸರ ತಜ್ಞ, ಅರಣ್ಯಾಧಿಕಾರಿ ಎ.ಎನ್. ಯಲ್ಲಪ್ಪ ರೆಡ್ಡಿ, ಇನ್ನೂ ಹೆಚ್ಚಿನ ಹೊಣೆಗಾರಿಕೆ ನೀಡಿ, ಅವರ ಕೆಲಸಕ್ಕೆ ಸಾಥ್ ನೀಡಿದ್ದನ್ನು ತುಳಸಿಗೌಡ ಸ್ಮರಿಸುತ್ತಾರೆ.
ಪರಿಸರ ತಜ್ಞೆ
“ಅನುಭವಗಳೇ ಜೀವನದ ಪಾಠಶಾಲೆ’ ಎಂಬ ಮಾತಿನಂತೆ ತುಳಸಿ ಗೌಡ, ನರ್ಸರಿಯ ನಿರಂತರ ಕೆಲಸ ಕಾರ್ಯಗಳಿಂದಲೇ ಪರಿಸರದ ಬಗ್ಗೆ ಅಪಾರ ಜ್ಞಾನ ಗಳಿಸಿದ್ದಾರೆ. ಪ್ರತಿಯೊಂದು ಗಿಡ, ಅವುಗಳ ಗುಣಧರ್ಮ, ಬೀಜಗಳು, ಅವುಗಳಲ್ಲಿರುವ ಔಷಧೀಯ ಗುಣಗಳು, ಅವುಗಳ ಬೆಳವಣಿಗೆ, ಮುಂತಾದ ವಿಚಾರಗಳಲ್ಲಿ ಅವರಿಗಿರುವ ತಿಳಿವಳಿಕೆ, ಸಸ್ಯಶಾಸ್ತ್ರದ ಡಾಕ್ಟರೇಟ್ ಪದವೀಧರರಿಗಿಂತ ಕಡಿಮೆಯಿಲ್ಲ.
ಬೀಜಗಳನ್ನು ಸಸ್ಯಗಳನ್ನಾಗಿ ಮಾಡಲು ಯಾವ ತಂತ್ರಜ್ಞಾನವೂ ಇಲ್ಲದ ಆ ಕಾಲದಲ್ಲಿ, ತರಗೆಲೆಗಳನ್ನೇ ಬಳಸಿ ಅವುಗಳಲ್ಲಿ ಬೀಜಗಳನ್ನು ಸಂಸ್ಕರಿಸಿ ಸಸಿಗಳನ್ನು ಮಾಡುತ್ತಿದ್ದರು ತುಳಸಿಗೌಡ. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ…’ ಎಂಬಂತೆ, ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ ಇವರನ್ನೇ ಪ್ರಶಸ್ತಿಗಳು ಅರಸಿಕೊಂಡು ಬಂದು, ಧನ್ಯತೆ ಪಡೆದವು ಅಂದರೆ ತಪ್ಪಲ್ಲ.
1999ರಲ್ಲಿ “ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ’ ಪ್ರಶಸ್ತಿಯ ಮೂಲಕ ತುಳಸಿ ಗೌಡ, ಜನಪ್ರಿಯರಾದರು. ಇವರ ಈ ಸಾಧನೆಗೆ ನಾಡು ರಾಜ್ಯೋತ್ಸವ ಗೌರವ ನೀಡಿ ಪುರಸ್ಕರಿಸಿದೆ. ಈ ಪ್ರಶಸ್ತಿಗಳಿಂದ ತುಳಸಿ ಗೌಡರ ಖ್ಯಾತಿ ಹೆಚ್ಚಿತು ಅನ್ನುವುದಕ್ಕಿಂತ, ಆ ಪ್ರಶಸ್ತಿಗಳ ಘನತೆ ಹೆಚ್ಚಿತು ಎಂಬುದೇ ಎಲ್ಲರೂ ಒಪ್ಪುವಂಥ ಮಾತು. ಮೂರ್ನಾಲ್ಕು ದಶಕಗಳ ಕಾಲ ಅರಣ್ಯ ಇಲಾಖೆಯಲ್ಲಿ ದುಡಿದ ತುಳಸಿ ಈಗ ನಿವೃತ್ತಿಯಾಗಿದ್ದಾರೆ. ಆದರೆ, ಬದುಕಿನ ಸಂಧ್ಯಾ ಕಾಲದಲ್ಲಿಯೂ ಪರಿಸರ ಕಾಳಜಿಯನ್ನು ಅವರು ಮರೆತಿಲ್ಲ. ಟಿ.ವಿಯಲ್ಲಿ “ಕನ್ನಡ ಕಣ್ಮಣಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎರಡು ಬಾರಿ ದಿಲ್ಲಿಗೆ ಹೋಗಿ, ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿ, ಆ ಮೂಲಕ ದೇಶದ ಜನರಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸಿದ್ದಾರೆ.
ಹೀಗೆ, ಗಿಡ-ಮರಗಳ ತಾಯಿಯಾಗಿ, ವನ ದೇವತೆಯಾಗಿ, ಅರಣ್ಯ ರಕ್ಷಣೆಯತ್ತ ಜನ ಸಾಮಾನ್ಯರ ಕಣ್ಣು ತೆರೆಸಿದ ನಿಜವಾದ ಪರಿಸರ ಪ್ರೇಮಿ ಈ ತುಳಸಿ ಗೌಡ. ಅವರ ಕಾಳಜಿ ಮತ್ತು ಕಳಕಳಿ ಇಂದಿನ ಮತ್ತು ಮುಂದಿನ ಜನಾಂಗಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.
ಧನ ಸಹಾಯವೂ ಬೇಕಿದೆ
ಪದ್ಮ ಪುರಸ್ಕಾರಗಳಿಗೆ ಗೌರವ ಧನ ಇರುವುದಿಲ್ಲ. ಬದುಕಿನ ಸಂಧ್ಯಾ ಕಾಲದಲ್ಲಿ ನೀಡುವ ಈ ಪುರಸ್ಕಾರಗಳಿಗೆ ಕೆಲ ಮಟ್ಟಿನ ಧನ ಸಹಾಯವಿದ್ದರೆ ಆರ್ಥಿಕವಾಗಿ ಅನುಕೂಲವೂ ಆಗುತ್ತದೆ ಹಾಗೂ ಇನ್ನೂ ಹೆಚ್ಚಿನ ಸಾಧನೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ಮೊದಲು ಪ್ರಶಸ್ತಿ ಬಂದಾಗ ಸ್ಥಳೀಯ “ಕರಾವಳಿ ಮುಂಜಾವು’ ಪತ್ರಿಕೆಯ ಗಂಗಾಧರ ಹಿರೇಗುತ್ತಿಯವರೇ ಆರ್ಥಿಕ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ್ದನ್ನು ತುಳಸಿ ಗೌಡ ನೆನೆಯುತ್ತಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆ ನಿಂತಿರುವ ಹಾಲಕ್ಕಿ ಸಮುದಾಯ, ಕಾಡಿನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದೆ. ಆಹಾರ, ಉಡುಗೆ-ತೊಡುಗೆ, ಜೀವನಶೈಲಿಯಿಂದಲೂ ಈ ಸಮುದಾಯದ ಜನರು, ಇತರರಿಗಿಂತ ಭಿನ್ನರು. ಕವಿ ದಿನಕರ ದೇಸಾಯಿ ಹೇಳಿದಂತೆ- “ಇವರ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ, ಆದರೂ ಇವರಿಗೆ ಹೆಸರು ಹಾಲಕ್ಕಿ’… ಕಡು ಕಷ್ಟದ ಬದುಕು ಇವರದ್ದು. ಕಳೆದ ಐದು ವರ್ಷಗಳಲ್ಲಿ ಎರಡು ಪದ್ಮ ಪುರಸ್ಕಾರಗಳನ್ನು ಪಡೆದಿರುವುದು, ಅವರ ಸಾಂಸ್ಕೃತಿಕ ಶ್ರೀಮಂತಿಕೆಗೆ ಮತ್ತು ಪರಿಸರ ಕಾಳಜಿಗೆ ಸಾಕ್ಷಿ.
ಸ್ಥಿತಪ್ರಜ್ಞೆ
ಅತ್ಯುನ್ನತ ಪ್ರಶಸ್ತಿ ಬಂದಿದ್ದರೂ, ತುಳಸಿ ಗೌಡ ಮಾತ್ರ ಎಂದಿನಂತೆ ಸ್ಥಿತಪ್ರಜ್ಞರು. ಮನೆಯಲ್ಲಿ ಸಾಕಿರುವ ನಾಲ್ಕು ದನಗಳಿಗೆ ಹುಲ್ಲು-ನೀರು ಕೊಡುವುದು, ಮೊಮ್ಮಕ್ಕಳ-ಮರಿ ಮೊಮ್ಮಕ್ಕಳ ಜೊತೆ ಆಟವಾಡುವುದು ಅವರ ದಿನಚರಿ. ಈಗಂತೂ ಮನೆಗೆ ಬಂದು ಹೋಗುವವರನ್ನು, ಸಂದರ್ಶನಕ್ಕೆ ಬರುವವರನ್ನು ಭೇಟಿ ಮಾಡುತ್ತಾ, ತಮ್ಮ ವಿವರಗಳನ್ನು ಬೇಸರವಿಲ್ಲದೆ ನೀಡುತ್ತಾ ಬ್ಯುಸಿಯಾಗಿದ್ದಾರೆ ತುಳಸಿಗೌಡ.
ಮಗ, ಸೊಸೆ, ಮಕ್ಕಳು, ಮರಿ ಮಕ್ಕಳು ಸೇರಿ ಹತ್ತು ಮಂದಿ ಇರುವ ಕುಟುಂಬ ನಮ್ಮದು. ಅಮ್ಮನಿಗೆ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲ ಬಹಳ ಖುಷಿ, ಹೆಮ್ಮೆ ತಂದಿದೆ. 38 ವರ್ಷ ಅವರು ನರ್ಸರಿಯಲ್ಲಿ ದಿನಗೂಲಿ ಕೆಲಸ ಮಾಡಿದರು. ಅವರ ಕೆಲಸವನ್ನು ಗುರುತಿಸಿ, ದೆಹಲಿಗೆ ಕರೆದು ಸಚಿವೆ ಮನೇಕಾ ಗಾಂಧಿ ಅವರು ಪ್ರಶಸ್ತಿ ನೀಡಿದ್ದರು. ಅದಾದ ನಂತರವೂ ಅವರು 12 ವರ್ಷ, ಮರಗಿಡಗಳ ಸಂರಕ್ಷಣೆಯಲ್ಲಿ ದುಡಿದಿದ್ದಾರೆ. ನಾನೂ ಕೂಡಾ ಈ ಮೊದಲು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ ಎನ್ನುತ್ತಾರೆ ತುಳಸಿಗೌಡರ ಮಗ ಸುಬ್ರಾಯ.
“ಸುಮಾರು ವರ್ಷಗಳ ಹಿಂದೆ, ಇಂದಿರಾ ಪ್ರಶಸ್ತಿ ಪಡೆಯಲು ದಿಲ್ಲಿಗೆ ಹೋಗಿದ್ದೆ. ಆಮೇಲೆ, ನಾಲ್ಕೈದು ವರ್ಷಗಳ ಹಿಂದೆಯೂ ಒಮ್ಮೆ ದಿಲ್ಲಿಗೆ ಹೋಗಿದ್ದೆ. ಈ ಪ್ರಶಸ್ತಿ ಪಡೆಯಲೂ ಅಲ್ಲಿಗೇ ಹೋಗಬೇಕಂತಲ್ಲ? ನನಗೆ ವಿಮಾನ ಪ್ರಯಾಣದ ಬಗ್ಗೆ ಭಯವೇನೂ ಇಲ್ಲ. ಕಳೆದ ಎರಡು ಬಾರಿ ಅವರೇ ಎಲ್ಲ ವ್ಯವಸ್ಥೆ ಮಾಡಿದ್ದರು. ಈ ಬಾರಿಯೂ ಹಾಗೆಯೇ ಹೋಗಿ ಬರುತ್ತೇನೆ. ಪ್ರಶಸ್ತಿಗಳ ಸಲುವಾಗಿಯೇ ಮಂಡ್ಯ, ಮೈಸೂರು, ಬೆಂಗಳೂರು, ಗದಗಕ್ಕೆ ಹೋಗಿದ್ದೇನೆ. ಅದನ್ನು ಬಿಟ್ಟರೆ, ಈ ಕಾಡು, ಈ ಮನೆಯೇ ನನ್ನ ಜಗತ್ತು..’
ಸಂದರ್ಶನ ಲೇಖನ: ಉಲ್ಲಾಸ ಹುದ್ದಾರ
ಫೋಟೋಗಳು: ಪ್ರಮೋದ ಹುದ್ದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.