ಅರ್ಜೆಂಟ್ ಮ್ಯಾರೇಜಾ? ಅವಸರದ ಮದ್ವೆ, ಅಪಾಯಕ್ಕೆ ಆಹ್ವಾನ!
Team Udayavani, Jul 26, 2017, 6:15 AM IST
ಹುಡುಗಿಗೆ ಇಷ್ಟವಿಲ್ಲದೆ, ಕುಟುಂಬದವರು ಅವಸರದಿಂದ ಮದ್ವೆ ಮಾಡಿದರೆ ದಾಂಪತ್ಯದಲ್ಲಿ ಅಪಸ್ವರಗಳು ಉದ್ಭವಿಸುವ ಸಾಧ್ಯತೆಯಿರುತ್ತದೆ…
ಮೊನ್ನೆ ನನ್ನ ಹಳೆಯ ಗೆಳತಿಯೊಬ್ಬಳು ಕಾಲ್ ಮಾಡಿ, ಕ್ಷೇಮದ ಬಗ್ಗೆ ವಿಚಾರಿಸುತ್ತಾ “ನಾನು ನಿನ್ನೊಂದಿಗೆ ಓದಲು ಬರುತ್ತೇನೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಅಪ್ಲಿಕೇಷನ್ ಕೊಡೋದು ಯಾವಾಗ?’ ಎಂದು ಕೇಳಿದಳು. ನನಗೆ ಆಶ್ಚರ್ಯ! “ಮದ್ವೆ ಆಗಿ ಒಂದು ಮಗು ಇರುವ ನಿನಗೆ, ಗಂಡ- ಮನೆ- ಮಗು ಬಿಟ್ಟು ಈ ಸಮಯದಲ್ಲಿ ಓದುವ ಆಸೆ ಯಾಕೆ ಬಂತು?’ ಎಂದು ಮರುಪ್ರಶ್ನೆ ಹಾಕಿದೆ. ಅವಳು ಬೇಜಾರಿನಿಂದಲೇ ಉತ್ತರಿಸಿದಳು, “ಗಂಡನಿಗೆ ಜವಾಬ್ದಾರಿಯಿಲ್ಲ. ದಿನವೂ ಕುಡಿದು ಬರುತ್ತಾನೆ. ಜೊತೆಗೆ ಮಗು ಬೇರೆ. ಅವಳ ಭವಿಷ್ಯ ಚೆನ್ನಾಗಿರಬೇಕು ಅಂದ್ರೆ ನಾನು ಓದಿ ಒಳ್ಳೆಯ ಕೆಲಸ ಪಡೆದು ಅವಳನ್ನು ಸಾಕಬೇಕು. ಹಾಗಾಗಿ, ವಿದ್ಯಾಭ್ಯಾಸ ಮುಂದುವರಿಸಲೇಬೇಕು ನಾನೀಗ.’ ಅವಳು ಹೇಳಿದ್ದು ಕೇಳಿ ನನಗೆ ಗೊತ್ತಿಲ್ಲದೇ ನನ್ನ ಕಣ್ಣಲ್ಲಿ ನೀರು ಜಿನುಗಿತು.
ಪದವಿಯಲ್ಲಿ ಚೆನ್ನಾಗಿಯೇ ಓದುತ್ತಿದ್ದ ಅವಳು, ಎರಡನೇ ಸೆಮ್‌ನಲ್ಲಿ ಮದ್ವೆಯ ಕಾರ್ಯಗಳಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಮದ್ವೆ ಆದಮೇಲೆ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬೇಕೆನ್ನುವ ಒತ್ತಡಗಳಿದ್ದರೂ ನನ್ನ ಗೆಳತಿ ಹಾಗೆ ಮಾಡಲಿಲ್ಲ. ಮದ್ವೆಯ ನಂತರವೂ ಅವಳು ಕಾಲೇಜಿಗೆ ಬರುತ್ತಿದ್ದಳು. ಪದವಿಯ ಎರಡನೇ ವರ್ಷ ಮುಗಿಯುವ ಹೊತ್ತಿಗೆ ಅವಳ ಕಂಕುಳಲ್ಲಿ ಒಂದು ಮಗುವಿತ್ತು. ಮನೆಯಲ್ಲಿ ಹಲವು ಸಮಸ್ಯೆಗಳ ನಡುವೆಯೂ ಅವಳು ಪದವಿ ಪಡೆದಳು. ಆದರೆ, ಅವಳ ಸಾಂಸಾರಿಕ ಜೀವನವೇ ಸರಿಯಿರಲಿಲ್ಲ. ಉತ್ತಮ ಬಾಳ ಸಂಗಾತಿ ಸಿಗದೇ, ಅವಳ ಜೀವನವೇ ಹಾಳಾಗಿತ್ತು. ಪಾಪ, ಅದೆಷ್ಟು ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದಳ್ಳೋ? ಗೊತ್ತಿಲ್ಲ.
ನನ್ನ ಗೆಳತಿಗೆ ಕೈಲಾದಷ್ಟು ನೆರವಾಗಬೇಕು ಎಂದು ನಿರ್ಧರಿಸಿ ಎಂ.ಎ. ಪದವಿಗೆ ಅಪ್ಲಿಕೇಷನ್ ಹಾಕಿಸಿದೆ. ಆದರೆ, ಅದೃಷ್ಟ ಅವಳ ಕೈ ಹಿಡಿಯಲಿಲ್ಲ. ಹೆಚ್ಚಿನ ಮಾರ್ಕ್ಸ್ ಗಳಿಸಿದ ವಿದ್ಯಾರ್ಥಿಗಳಿಗೆ ಸೀಟ್ ನೀಡುತ್ತಿದ್ದ ಆ ವ್ಯವಸ್ಥೆಯಲ್ಲಿ ನನ್ನ ಗೆಳತಿಯ ಸ್ವಾಭಿಮಾನ, ಆಸಕ್ತಿ ಯಾವುದೂ ಲೆಕ್ಕಕ್ಕೇ ಬರಲಿಲ್ಲ. ಇವತ್ತಿಗೂ ನನ್ನಲ್ಲಿ ಆ ನೋವು ಕಾಡುತ್ತಿದೆ… ನಾನು ಗಮನಿಸಿದ ಹಾಗೆ ಎಷ್ಟೋ ಹುಡುಗಿಯರಿಗೆ ಓದಿನಲ್ಲಿ ಆಸಕ್ತಿಯೇ ಇರುವುದಿಲ್ಲ. ತಂದೆ- ತಾಯಿ ಅಥವಾ ಇನ್ಯಾರದೋ ಬಲವಂತಕ್ಕೆ ಓದುತ್ತಿರುತ್ತಾರೆ. ಮತ್ತೆ ಕೆಲವರು ಕುಟುಂಬ ಪ್ರತಿಷ್ಠೆಗಾಗಿ ಓದುತ್ತಾರೆ.
ಮದ್ವೆಗೆ ಮುನ್ನ ಮಕ್ಕಳ ಭಾವನೆಗೆ ಮೊದಲು ಬೆಲೆ ಕೊಟ್ಟು ಆಮೇಲೆ ಪೋಷಕರು ತಮ್ಮ ಸಿದ್ಧಾಂತಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಮಕ್ಕಳ ಭವಿಷ್ಯವೇ ಹಾಳಾಗುವ ಸಂಭವವಿರುತ್ತದೆ. ತಮ್ಮ ಮಗಳ ಮದ್ವೆಗೆ ಮುನ್ನ ಮೊದಲು ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು, ಮಗಳ ಭಾವನೆಗಳಿಗೂ ಬೆಲೆ ಕೊಡಬೇಕು, ಮದ್ವೆಯಾಗುವ ಹುಡುಗನ ಕುರಿತು ಯಾವ ರೀತಿಯ ಆಲೋಚನೆಗಳಿವೆ ಎಂದು ಕೇಳಿ ತಿಳಿದುಕೊಳ್ಳಬೇಕು. ನಂತರ ಬೇಕಾದರೆ, ನಿರ್ಧಾರವನ್ನು ಕೈಗೊಳ್ಳಿ. ಆಗ ಎಲ್ಲರ ಭವಿಷ್ಯವೂ ಉತ್ತಮವಾಗಿರುತ್ತದೆ.
ಮದ್ವೆ ಯಾವತ್ತೂ ದುಡುಕಿನ ಸಂಗತಿ ಆಗಬಾರದು. ಸಾಮಾನ್ಯವಾಗಿ ಹೆಣ್ಮಕ್ಕಳ ವಯಸ್ಸು 20 ದಾಟುತ್ತಿದ್ದ ಹಾಗೆಯೇ ಪೋಷಕರಲ್ಲಿ ತಳಮಳ ಶುರುವಾಗುತ್ತದೆ. ವಯಸ್ಸು ಹೆಚ್ಚಾದಂತೆ ತಮ್ಮ ಮಗಳನ್ನು ಯಾರೂ ಒಪ್ಪುವುದಿಲ್ಲ ಎಂಬ ತಲೆಬಿಸಿ ಹುಟ್ಟಿಕೊಳ್ಳುತ್ತದೆ. ಮನೆಯಲ್ಲಿನ ಹೆಣ್ಮಕ್ಕಳ ಕುರಿತು ಸಂಬಂಧಿಕರು ಏನಾದರೂ ಕೊಂಕು ನುಡಿಯುತ್ತಾರೆ ಎಂಬ ಭಯವೂ ಹೆತ್ತವರನ್ನು ಕಾಡುತ್ತಿರುತ್ತದೆ. ಹೀಗೆ ಏನೇನೊ ವಿಷಯಗಳು ಅವರ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಆದರೆ, ಅವಸರದಿಂದಾಗುವ ಅಪಾಯಗಳಿಗೆ ಯಾರು ಹೊಣೆಗಾರರಾಗುತ್ತಾರೆ? ಮದ್ವೆಗೆ ಸ್ವಲ್ಪ ತಡವಾದರೆ ಪ್ರಳಯವೇನೂ ಆಗುವುದಿಲ್ಲ. ಕಾಯುವ ತಾಳ್ಮೆ ಇದ್ದಾಗ ಎಲ್ಲವೂ ಶುಭವಾಗುತ್ತದೆ.
ಪೋಷಕರ ಗಮನಕ್ಕೆ…
– ಮಗಳಿಗೆ ವಯಸ್ಸು ಏರುತ್ತಿದೆಯೆಂಬ ಆತಂಕವನ್ನು ಮೊದಲು ತೊರೆಯಿರಿ.
– ಮಗಳ ಭಾವನೆಗೆ ಬೆಲೆಕೊಡಿ.
– ಕೈಹಿಡಿಯುವ ಹುಡುಗನ ಬಗ್ಗೆ ನಾಲ್ಕು ದಿಕ್ಕಿನಿಂದ ವಿಚಾರಿಸಬೇಕು.
– ಆಕೆಯ ಶಿಕ್ಷಣ, ಅಭಿರುಚಿಗೆ ತಕ್ಕಂತೆ ಹುಡುಗನನ್ನು ಹುಡುಕುವುದು ಉತ್ತಮ.
– ಮಗಳ ಮನಸ್ಸಿನಲ್ಲಿ ಯಾರಾದರೂ ಒಳ್ಳೆಯ ಹುಡುಗನಿದ್ದರೆ, ಆ ಬಗ್ಗೆಯೂ ಮಾತುಕತೆ ನಡೆಸಿ.
– ಪವಿತ್ರ ಎ. ಆರ್. ಅಂತರಗಟ್ಟೆ, ಕಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.