ಈ ವಾರ ಶಾಲೆಗೆ ರಜೆ!
ಆಹಾ, ಈ ವಿರಾಮ ಎಂಥಾ ಆರಾಮ...
Team Udayavani, Dec 25, 2019, 5:26 AM IST
ರೆಕಾರ್ಡ್ ಬುಕ್‌ನಲ್ಲಿ ಏನು ಬರೆದಿದ್ದಾರೋ? ಏನೇನು ಅಸೈನ್‌ಮೆಂಟ್ ಕೊಟ್ಟಿದ್ದಾರೋ? ಮಗು, ಟೈಂ ಕೀಪ್ ಮಾಡ್ತಾ ಇದೆಯಾ? ಹೋಂ ವರ್ಕ್ ಮಾಡಿದೆಯಾ? ಶಿಸ್ತು ಪಾಲಿಸಿದೆಯಾ? ಕ್ಲಾಸ್ ಟೀಚರ್, ಬ್ಯಾಗ್‌ಗೆ ನೋಟಿಸ್ ಹಾಕಿದಾರಾ?- ವರ್ಷವಿಡೀ ಹೀಗೆ ಯೋಚಿಸುವ ಅಮ್ಮಂದಿರು- ಕ್ರಿಸ್‌ಮಸ್ ರಜೆ ಬಂದಾಗ, ಅಬ್ಟಾ, ಇನ್ನು ಹತ್ತು ದಿನ ಯಾವ ತಲೆನೋವೂ ಇಲ್ಲ ಎಂದು ಸಂಭ್ರಮಿಸುತ್ತಾರೆ. ಅಂಥ ಸಂಭ್ರಮಕ್ಕೆ ಈಡಾದ ತಾಯಿಯೊಬ್ಬಳ ಮನದ ಮಾತುಗಳು ಇಲ್ಲಿವೆ…
“ಅಮ್ಮಾ’… ಎನ್ನುವ ಸ್ವರ ತೂರಿ ಬರುತ್ತಿದ್ದ ಹಾಗೆಯೇ ಬೆಚ್ಚಿಬಿದ್ದು, ಮರುದಿನ ಬೆಳಗ್ಗೆ ಇಡ್ಲಿಗೆಂದು ನೆನೆಸಿಟ್ಟ ಉದ್ದನ್ನೇ ದಿಟ್ಟಿಸಿದೆ. ಮುಂದಿನ ಪ್ರಶ್ನೆ ಯಾವುದು ಎಂದು ಗೊತ್ತಿದ್ದರಿಂದ, ಉತ್ತರ ಸಿಕ್ಕ ಕೂಡಲೇ ಇನ್ನೊಂದು ಯುದ್ಧ ಶುರುವಾಗುವುದರಿಂದ ಅಪ್ರಯತ್ನವಾಗಿ ಮನಸ್ಸನ್ನು ಸಿದ್ಧಗೊಳಿಸುತ್ತಲೇ “ಹೇಳು’ ಅಂದೆ. “ನಾಡಿದ್ದು ಕ್ರಿಸ್ಮಸ್ ಪಾರ್ಟಿ, ನಂಗೆ ಚಿಪ್ಸ್ ಹಾಗೂ ಕೇಕ್ ತಂದುಕೊಡು, ತಗೊಂಡು ಹೋಗ್ತಿನಿ’… ಎಂದಿನ ಕಿರಿಕಿರಿಯಿಲ್ಲದ, ಮುನಿಸಿಲ್ಲದ ಸಂಭ್ರಮದ ದನಿ. ನಮ್ಮ ಮನೆ ರಾಜಕುಮಾರಿ ಮುಖದಲ್ಲಿ ಮಂದಹಾಸ.. ನಡಿಗೆಯಲ್ಲಿ ಚಿಮ್ಮುವ ಉತ್ಸಾಹ. ಅಬ್ಟಾ, ಬದುಕಿದೆಯಾ ಬಡಜೀವವೇ ಎಂದು ನಿಟ್ಟುಸಿರು ಬಿಟ್ಟೆ. ಇನ್ನೆರೆಡು ದಿನ ಕಳೆದರೆ ಮುಗಿಯಿತು; ಆಮೇಲೆ ರಜಾ. ಕವಿದಿದ್ದ ಕಾರ್ಮೋಡ ಕರಗಿ ಮನಸ್ಸು ಗರಿಗೆದರಿದ ನವಿಲು..
ಗಡಿಯಾರದ ಜೊತೆ ಓಟ
ಗಾಢ ನಿದ್ದೆಯಲ್ಲೂ ಅಲಾರಂ ಅರಚಿಕೊಳ್ಳುತ್ತಿದ್ದ ಹಾಗೆ, ಧಿಗ್ಗನೆದ್ದು, ಅದರ ತಲೆಗೊಂದು ಮೊಟಕಿ ಎದ್ದರೆ, ಅಲ್ಲಿಂದ ಶುರುವಾಗುವ ಗಡಿಯಾರ ದಿಟ್ಟಿಸುವ ಕೆಲಸ ಮತ್ತೆ ಮಲಗುವವರೆಗೂ ಮುಗಿಯುವುದೇ ಇಲ್ಲ. ಕಾಲದ ಜೊತೆ ಜೊತೆಗೆ ಓಟ, ಧಾವಂತ. ಅಡುಗೆಮನೆಗೆ ಬಂದರೆ ಗ್ಯಾಸ್ ಒಲೆಯ ನಾಲ್ಕು ಬರ್ನಾಲ್‌ಗಳಿಗೂ ಬಿಡುವಿಲ್ಲದ ದುಡಿತ. ಅಲ್ಲಿ ಬೇಯಿಸುತ್ತಾ, ಹುರಿಯುತ್ತಾ ಕೈಗಳು ಗಡಿಬಿಡಿಯಲ್ಲಿರುವ ಹೊತ್ತಿನಲ್ಲೂ ಕಣ್ಣು ಗಡಿಯಾರದತ್ತಲೇ. “ಅಯ್ಯೋ, ಟೈಮ್ ಆಗಿಯೇ ಹೋಯಿತಲ್ಲ’ ಎಂದು ರೂಮಿನ ಒಳಗೆ ಬಂದರೆ, ಇಡೀ ರಜಾಯಿಯನ್ನು ಸುತ್ತಿಕೊಂಡು ಮುದುರಿ ಗುಬ್ಬಚ್ಚಿಯಂತೆ ಬೆಚ್ಚಗೆ ಮಲಗಿದ ಮಗಳ ಕಂಡಾಗ ಗಡಿಯಾರ, ಎಬ್ಬಿಸಲು ಬಂದ ನಾನು, ಸಮಯಕ್ಕೆ ಸರಿಯಾಗಿ ಬರುವ ಬಸ್, ಶಾಲೆ ಎಲ್ಲದರ ಮೇಲೂ ಕೋಪವುಕ್ಕಿ ಇಂಥ ಚಳಿಯಲ್ಲೂ ಎಬ್ಬಿಸಬೇಕಾ, ಶಾಲೆಗೆ ಹೋಗಬೇಕಾ ಅನ್ನಿಸಿ ಮನಸ್ಸು ವಿಲವಿಲ.
ಇನ್ನೊಂದೈದು ನಿಮಿಷ…
ಎಬ್ಬಿಸುವುದು ಇನ್ನೊಂದು ಹರಸಾಹಸದ ಕೆಲಸ. ಕಲಿತ ಬುದ್ಧಿಯೆಲ್ಲಾ ಖರ್ಚಾಗಿ, ಇರುವ ಸಹನೆಯೆಲ್ಲಾ ಮುಗಿದು ಇನ್ನೇನು ರೇಗಬೇಕು ಎನ್ನುವ ವೇಳೆಗೆ “ಅಮ್ಮಾ, ಇನ್ನೊಂದು ನಿಮಿಷ ಮುದ್ದು ಪ್ಲೀಸ್’… ಎನ್ನುವ ರಾಗದ ದನಿ ಕೋಪಕ್ಕೆ ಬ್ರೇಕ್ ಹಾಕಿ ಆ ಜಾಗದಲ್ಲಿ ಕರುಣೆ ಹುಟ್ಟಿಸಿಬಿಡುತ್ತದೆ. ನೋಡೂ, ಇನ್ನೆರೆಡು ದಿನ ಅಷ್ಟೇ. ಆಮೇಲೆ ಶನಿವಾರ ಎಂದು ಪುಸಲಾಯಿಸುತ್ತಾ, ರಜೆಯ ಆಸೆ ಹುಟ್ಟಿಸಿದರೂ ಮಗಳು ಏಳುವುದಿಲ್ಲ. ಕಡೆಗೆ, ನಾನೇ ಸೋತು, ಒಂದೇ ನಿಮಿಷ ಅಷ್ಟೇ, ಎನ್ನುತ್ತಾ ಮನಸ್ಸಿಲ್ಲದ ಮನಸ್ಸಿನಿಂದ ಎಬ್ಬಿಸಿ, ಸ್ನಾನಕ್ಕೆ ಕಳುಹಿಸಿ ಬಂದರೆ ಕರೆಯುವ ಅಡುಗೆಮನೆ, ಟಿಫನ್ ಬಾಕ್ಸ್ ಇನ್ನೆರಡು ಕೈಯಿದ್ದರೂ ಸಾಲದು ಅನ್ನಿಸುವಷ್ಟು ಕೆಲಸ, ಧಾವಂತದಲ್ಲಿ ಮುಳುಗಿರುವಾಗಲೇ – ನನ್ನ ಯುನಿಫಾರ್ಮ್ ಎಲ್ಲಿ? ಸಾಕ್ಸ್ ಕಾಣಿಸ್ತಾ ಇಲ್ಲಾ ಎಂಬ ಕೂಗು. ಕಾಣಿಸದಿರುವುದು ಆ ವಸ್ತುಗಳ್ಳೋ ಅಥವಾ ಅಮ್ಮನೋ… ಕೇಳುವ ಹಾಗಿಲ್ಲ. ಹೋಗುವುದಷ್ಟೇ ಕೆಲಸ.
ನಡುನಡುವೆ ಜಗಳ
ಏನು ತಿಂಡಿ? ಎಂಬ ಮಾತಿಂದಲೇ ವಿರೋಧದ ಸ್ವರ, ಲಂಚ್ ಏನು? ಪ್ರತಿಭಟನೆ ಮುಂದುವರಿಯುವ ಸೂಚನೆ, ಮುಖ ಸಿಂಡರಿಸುತ್ತಲೇ “ಒಂದು ಹಾಕು ಸಾಕು’ ಎನ್ನುತ್ತಾ, ತಟ್ಟೆ ಕುಕ್ಕುವ ಸದ್ದು! ಅಲ್ಲಿಗೆ ಯುದ್ಧ ಘೋಷಣೆಯಾದಂತೆ. ಬೆಳಗ್ಗೆ ಎದ್ದು ಕಷ್ಟಪಟ್ಟು ಎರಡು ಮೂರು ತರಹ ತಿಂಡಿ ಮಾಡಿದ್ರೂ ಗೋಳು ತಪ್ಪೊಲ್ಲ ಅಂತ ಸಿಡುಕುತ್ತಲೇ ಡಬ್ಬಿ ರೆಡಿ ಮಾಡಿ, ಒಂದೇ ಉಸಿರಿನಲ್ಲಿ ತಲೆಬಾಚಲು ಬಂದರೆ, “ನಿಧಾನ… ನೋಯುತ್ತೆ’ ಎಂಬ ಅಳುವಿನ ಸ್ವರ, ಅದು ಹೊರಡುವ ಸಂಕಟ ಎಂದು ಗೊತ್ತಿದ್ದರೂ, ರೇಗಬೇಕು! ಅನಿವಾರ್ಯ. ಗಡಿಬಿಡಿಯಲ್ಲಿ ಶೂ ಹಾಕಿಸಿ, ಗಡಿಯಾರ ನೋಡುತ್ತಲೇ ಓಡಿಕೊಂಡು ಸ್ಟಾಪ್‌ನಲ್ಲಿ ನಿಂತರೆ ಬಸ್ ಇನ್ನೂ ಬಂದಿಲ್ಲ, ಅಬ್ಟಾ, ನಿರಾಳ.
ಬಸ್ ಹತ್ತಿಸಿ ಹೊರಡುವ ಮುನ್ನ ಒಮ್ಮೆ ತಿರುಗಿ ನೋಡಿದಾಗ ಮಾತ್ರ- ಛೆ, ಸುಮ್ಮನೆ ಬೈದುಬಿಟ್ಟೆ, ಇಷ್ಟು ಬೆಳಗ್ಗೆ ಹೊರಡುವುದು ಅಷ್ಟು ಸುಲಭವಾ? ನಾವೋ ಆರಾಮಾಗಿ ಎದ್ದು ನಿಧಾನಕ್ಕೆ ತಿಂದು ಬಿಸಿಲು ಕಾಯಿಸುತ್ತಾ ಶಾಲೆಗೆ ಹೋಗುತ್ತಿದ್ದವರು. ನಮಗೆಲ್ಲಾ ಹೇಗೆ ಗೊತ್ತಾಬೇಕು ಈ ಕಷ್ಟ? ಅನ್ನುವ ಸಂಕಟ ಕಾಡಿ, ಕುಡಿಯುವ ಕಾಫಿಯೂ ಒಮ್ಮೊಮ್ಮೆ ಕಹಿ ಅನ್ನಿಸಿ, ಯಾರು ಮಾಡಿದ್ರೋ ಈ ಶಾಲೆ ಅನ್ನೋದನ್ನ ಎಂಬ ಪ್ರಶ್ನೆ ಮೂಡಿ ಅದರ ಹಿಂದೆಯೇ ಭಾವಾವೇಶಕ್ಕೆ ನಗುವೂ…
ನಿಲ್ಲದ ಓಟ..
ಯಾಕಿಷ್ಟು ಧಾವಂತ? ವಿದ್ಯೆ ಕಲಿಯಲೇ ಬೇಕಲ್ಲ ಎಂದು ಸಮಾಧಾನಿಸಿಕೊಳ್ಳುವ ಹೊತ್ತಿಗೆ, ಮಕ್ಕಳು ಮರೆತುಹೋದ ನೀರಿನ ಬಾಟಲಿಯೋ, ಹಣ್ಣಿನ ಡಬ್ಬಿಯೋ ಕಂಡರೆ ಮುಗಿದೇ ಹೋಯಿತು; ಮತ್ತೆ ಓಟ.. ಅವ್ಯಾವುವೂ ಇಲ್ಲದ ಒಂದೊಂದು ದಿನ ಮನೆಯೊಳಗೆ ಬರುತ್ತಿದ್ದ ಹಾಗೇ, ಫೋನ್ ಮೊರೆತ. “ಅಮ್ಮಾ ಪ್ರಾಜೆಕr… ಬಿಟ್ಟು ಬಂದೆ. ಇವತ್ತೇ ಲಾಸ್ಟ್ ಡೇಟ್ ಪ್ಲೀಸ್ ತಂದ್ಕೊಡು…’ “ಅಯ್ಯೋ, ಹತ್ತು ಸಲ ಹೇಳೆª ಎತ್ತಿಟ್ಟುಕೋ ಅಂತ…’ ಗೊಣಗಿದರೆ ಕೇಳಿಸಿಕೊಳ್ಳಲು ಅವಳೆಲ್ಲಿ? ಹೋಗಿ ಕೊಡುವುದಷ್ಟೇ ಉಳಿದಿರುವ ದಾರಿ… ಶಾಲೆಯಿರುವಷ್ಟು ದಿನ ಓಟ ತಪ್ಪಿದ್ದಲ್ಲ.
ಇಬ್ಬರಿಗೂ ಒಂದೊಂದು ಚಿಂತೆ
ಸಂಜೆ ಅವಳಿಗಿಂತ ಮೊದಲೇ ಹೊಸ್ತಿಲ ಒಳಗೆ ತೂರಿ ಬರುವ- ತಿನ್ನೋಕೆ ಏನು ಎನ್ನುವ ಪ್ರಶ್ನೆ. ತಿನ್ನುವ ಅವಳಿಗೆ ಆಡಲು ಹೋಗುವ ಯೋಚನೆಯಾದರೆ, ನನಗೋ- ಕೊಟ್ಟ ಹೋಂ ವರ್ಕ್ ಬಗ್ಗೆ ಚಿಂತೆ. ಅಷ್ಟರವರೆಗೆ ಶಾಲೆಯಲ್ಲಿ ಇದ್ದು ಬಂದವಳಿಗೆ ಹೋಂ ವರ್ಕ್ ಎಂದರೆ ಮೂಗಿನ ತುದಿಯಲ್ಲಿ ಅಗ್ನಿಪರ್ವತ. ನನಗೋ, ಬಿಟ್ಟರೆ ಸಿಕ್ಕದು ಇದು ಎನ್ನುವ ಆತಂಕ. ಹಾಯಾಗಿ ಆಡಬೇಕಾದ ವಯಸ್ಸಿನಲ್ಲಿ ಉರು ಹೊಡೆಯುವ, ಬರೆಸುವ ಕೆಲಸ ಮಾಡಿಸಬೇಕಲ್ಲಾ ಎನ್ನುವ ಬೇಸರವಿದ್ದರೂ ತೋರಿಸಿಕೊಳ್ಳುವ ಹಾಗಿಲ್ಲ. “ಒಂಚೂರು ಆಟ ಆಡಿ ಬರ್ತೀನಿ. ಅದೇ ಓದು, ಅದೇ ಬರೀ ಎಷ್ಟು ಮಾಡೋದು?’ ಅನ್ನುವ ಅವಳು ದೂರ್ವಾಸ ಮುನಿ, ನಾನೋ, ಕೈ ಮುಗಿದು ಬೇಡುವ ಶಾಪಗ್ರಸ್ತ ರಾಜಮಾತೆ. ಈ ಕಷ್ಟದಲ್ಲಿ ಓದಿ ಆಗೋದೇನು? ನನ್ನ ಮೇಲೆಯೇ ನನಗೆ ಸಿಟ್ಟು. ಆಡುವ ಕೂಸಿಗೆ ಸಮಯದ ಲಕ್ಷ್ಮಣ ರೇಖೆ ಎಳೆಯುವ ಬಗ್ಗೆ ಅಸಹನೆ. ಯಾವಾಗ ರಜೆ ಬರುತ್ತೋ ಕಣ್ಣು ಕ್ಯಾಲೆಂಡರ್‌ನತ್ತ. ಬೆರಳು, ದಿನ ಲೆಕ್ಕ ಹಾಕುವುದರಲ್ಲಿ ಮಗ್ನ.
ಇವೆಲ್ಲಾ ಗೋಜಲುಗಳ ನಡುವೆಯೇ ಕ್ರಿಸ್ಮಸ್ ರಜೆ ಎನ್ನುವುದು ಮಳೆ ನಿಂತು ಹೋದಮೇಲೆ ಮೂಡಿದ ನೇಸರನ ಕಿರಣದ ಹಾಗೆ ಬೆಚ್ಚಗಿನ ಭಾವ ಕೊಡುತ್ತಿದೆ. ಇನ್ನೊಂದು ವಾರ ಗಡಿಯಾರದ ಮುಳ್ಳು ಹಿಂಬಾಲಿಸುವ ಕರ್ಮವಿಲ್ಲ, ಮಕ್ಕಳಿಗೆ, ಟೈಂ ಆಗೋಯ್ತು ಬನ್ನೀ… ಎಂದು ಹೇಳುವ, ಆಟವನ್ನು ನಿರ್ಬಂಧಿಸುವ ರಗಳೆಯಿಲ್ಲ. ಬೆಚ್ಚಗೆ ಹೊದ್ದು ಮಲಗಿದವಳ ಬಲವಂತವಾಗಿ ಎಬ್ಬಿಸುವ ಅನಿವಾರ್ಯತೆಯಿಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ, ನಾಳೆ ಏನು ಮಾಡುವುದು ಎಂಬ ಬಹು ದೊಡ್ಡ ಸಮಸ್ಯೆಯೇ ಇಲ್ಲ. ಸ್ಕೂಲ್ ಬ್ಯಾಗ್ ಮುಟ್ಟುವ ಅವಶ್ಯಕತೆಯಿಲ್ಲ, ಹೋಂ ವರ್ಕ್ ಏನು ಎಂದು ಚೆಕ್ ಮಾಡುವ ಸಂದರ್ಭವೇ ಇಲ್ಲ. ಉಸಿರು ಬಿಗಿ ಹಿಡಿದು ಓಡುವ, ಓದಿಸುವ ಧಾವಂತ ಇಲ್ಲ. ನಿಧಾನಕ್ಕೆ, ನೆಮ್ಮದಿಯಾಗಿ ಬದುಕನ್ನ ಆಸ್ವಾದಿಸಬಹುದು. ಪುಟ್ಟ ದೇವತೆಗಳು ಮನೆಯಲ್ಲಿ ಖುಷಿ ಖುಷಿಯಾಗಿ ಇರಬಹುದು, ಸಹಜವಾಗಿ ಅರಳಬಹುದು, ಬೇಕಾದ್ದು ಕಲಿಯಬಹುದು, ಬೇಡವೆನಿಸಿದ್ದು ಬಿಡಬಹುದು. ಕಪಾಟಿನ ಎಷ್ಟೊಂದು ಸರಕುಗಳು ಬೆಳಕು ಕಾಣಬಹುದು. ಎಷ್ಟೊಂದು ನಿರಾಳತೆ. ಎಂಥಾ ನೆಮ್ಮದಿ…
ಆಹಾ, ಈ ವಿರಾಮ ಎಂಥಾ ಆರಾಮಾ….
-ಶೋಭಾ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.