ಓಟ್ಸ್‌ನಿಂದ ವೆರೈಟಿ ತಿನಿಸು
Team Udayavani, Jul 4, 2018, 6:00 AM IST
ಹೆಚ್ಚಿನವರ ಮೆಚ್ಚಿನ ಆಹಾರವಾಗಿರುವ ಓಟ್ಸ್‌ನ ಲಾಭಗಳು ಅನೇಕ. ಅದು ದೈಹಿಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲೂ ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನಕ್ಕೆ ತಂದು ತೂಕವನ್ನು ಇಳಿಸಲು ಸಹಕರಿಸುತ್ತದೆ. ಓಟ್ಸ್‌ನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ರೆಸಿಪಿ ಇಲ್ಲಿದೆ.
1. ಓಟ್ಸ್ ಕಿಚಡಿ
ಬೇಕಾಗುವ ಸಾಮಗ್ರಿ: ಓಟ್ಸ್- 1ಕಪ್, ಹೆಸರು ಬೇಳೆ-1/2 ಕಪ್, ಜೀರಿಗೆ 1ಟೀ ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ ಒಂದಿಂಚು, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು-2, ಹೆಚ್ಚಿದ ಈರುಳ್ಳಿ-1, ಕ್ಯಾರೆಟ್-1, ಟೊಮೆಟೊ-2, ಬೀನ್ಸ್-5, ಕ್ಯಾಪ್ಸಿಕಂ-1 (ಎಲ್ಲ ತರಕಾರಿಗಳನ್ನೂ ಒಂದೇ ರೀತಿ ಹೆಚ್ಚಿಕೊಳ್ಳಿ) ಬಟಾಣಿ-1/2 ಕಪ್, ನೀರು-5 ಕಪ್, ಅರಿಶಿನ ಪುಡಿ- 1/2 ಚಮಚ, ಇಂಗು- ಚಿಟಿಕೆ, ತುಪ್ಪ- 3 ಟೀ ಚಮಚ, ಉಪ್ಪು, ಕರಿಬೇವು, ಕೊತ್ತಂಬರಿ.
ಮಾಡುವ ವಿಧಾನ: ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಜೀರಿಗೆ ಮತ್ತು ಇಂಗು ಹಾಕಿ. ನಂತರ ಶುಂಠಿ, ಕರಿಬೇವು ಹಾಕಿ ಹುರಿಯಿರಿ. ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಟೊಮೆಟೊ ಹಾಕಿ ಬಾಡಿಸಿ. ನಂತರ ಎಲ್ಲ ತರಕಾರಿಗಳನ್ನು ಹಾಕಿ ಮೂರು ನಿಮಿಷ ಹುರಿಯಿರಿ. ನಂತರ ಅದಕ್ಕೆ ಹೆಸರುಬೇಳೆ ಹಾಕಿ, ಅರಿಶಿನ ಪುಡಿ ಸೇರಿಸಿ ಎರಡು ನಿಮಿಷ ಹುರಿಯಿರಿ. ನಂತರ ಒಂದು ಕಪ್ ಓಟ್ಸ್ ಹಾಕಿ ಮತ್ತೆರಡು ನಿಮಿಷ ಹುರಿಯಿರಿ. ಹುರಿದ ಪದಾರ್ಥಕ್ಕೆ ಐದು ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ. ಎರಡು ವಿಷಲ್ ಬಂದ ನಂತರ ಒಲೆ ಆರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.
2. ಓಟ್ಸ್ ಉತ್ತಪ್ಪಂ
ಬೇಕಾಗುವ ಸಾಮಗ್ರಿ: ಓಟ್ಸ್-1 ಕಪ್, ಚಿರೋಟಿ ರವೆ- 1/2 ಕಪ್, ಮೊಸರು-1 ಕಪ್, ಅಕ್ಕಿಹಿಟ್ಟು-1/2 ಕಪ್, ಉಪ್ಪು, ಜೀರಿಗೆ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ- 1/2 ಚಮಚ, ಕ್ಯಾರೆಟ್ ತುರಿ- 1 ಕಪ್, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ-1, ಹಸಿಮೆಣಸಿನಕಾಯಿ 2, ಹೆಚ್ಚಿದ ಈರುಳ್ಳಿ-1, ಎಣ್ಣೆ ಅಥವಾ ತುಪ್ಪ, ಕೊತ್ತಂಬರಿ, ಕರಿಬೇವು.
ಮಾಡುವ ವಿಧಾನ: ಓಟ್ಸ್‌ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಒಂದು ಬೌಲ್‌ನಲ್ಲಿ ಓಟ್ಸ್ ಪೌಡರ್, ಚಿರೋಟಿ ರವೆ, ಅಕ್ಕಿ ಹಿಟ್ಟು, ಮೊಸರು, ಜೀರಿಗೆ, ಉಪ್ಪು, ಶುಂಠಿ ಹಾಕಿ ಮಿಶ್ರಣ ಮಾಡಿ. ಅದಕ್ಕೆ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಕಾವಲಿ ಬಿಸಿ ಮಾಡಿ, ಹಿಟ್ಟನ್ನು ಸ್ವಲ್ಪ ದಪ್ಪಗೆ ಹರಡಿ. ಅದರ ಮೇಲೆ ಕ್ಯಾರೆಟ್ ತುರಿ, ಈರುಳ್ಳಿ, ಕ್ಯಾಪ್ಸಿಕಂ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ. ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮೇಲೆ ಹಾಕಿದ ತರಕಾರಿಗಳನ್ನು ಅದರೊಂದಿಗೆ ಸೇರುವಂತೆ ಒತ್ತಿ. ನಂತರ ತಿರುಗಿಸಿ ಹಾಕಿ, ಬೇಯಿಸಿ. ಈಗ ರುಚಿಯಾದ ಉತ್ತಪ್ಪಂ ರೆಡಿ. ಇದನ್ನು ತೆಂಗಿನ ಚಟ್ನಿ ಜೊತೆಗೆ ಸವಿಯಬಹುದು.
3. ಓಟ್ಸ್ ಲಡ್ಡು
ಬೇಕಾಗುವ ಸಾಮಗ್ರಿ: ಓಟ್ಸ್- ಒಂದೂವರೆ ಕಪ್, ಸಕ್ಕರೆ-1 ಕಪ್, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ-20, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1/2 ಕಪ್.
ಮಾಡುವ ವಿಧಾನ: ಬಾಣಲೆಯಲ್ಲಿ ಓಟ್ಸ್ ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದು ಆರಿದ ನಂತರ ನುಣ್ಣಗೆ ಪುಡಿ ಮಾಡಿ, ಜರಡಿ ಹಿಡಿಯಿರಿ. ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಎರಡೂ ಪುಡಿಯನ್ನು ಮಿಶ್ರಣ ಮಾಡಿ. ತುಪ್ಪ ಬಿಸಿ ಮಾಡಿ, ಗೋಡಂಬಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿದು, ಅದನ್ನು ಓಟ್ಸ್ ಹಿಟ್ಟಿಗೆ ಸೇರಿಸಿ. ಏಲಕ್ಕಿ ಪುಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪದ ಬಿಸಿಗೆ ಹಿಟ್ಟು ಉಂಡೆ ಕಟ್ಟುವ ಹದಕ್ಕೆ ಬಂದಿರುತ್ತದೆ. ಬಿಸಿ ಇರುವಾಗಲೇ ಉಂಡೆ ಕಟ್ಟಿ.
4. ಓಟ್ಸ್ ಮಸಾಲೆ ಚಪಾತಿ
ಬೇಕಾಗುವ ಸಾಮಗ್ರಿ: ಓಟ್ಸ್- 1ಕಪ್, ಗೋಧಿ ಹಿಟ್ಟು- ಒಂದೂವರೆ ಕಪ್, ಜೀರಿಗೆಪುಡಿ- 1/2 ಚಮಚ, ಧನಿಯಾ ಪುಡಿ- 1/2 ಚಮಚ, ಅಚ್ಚಖಾರದ ಪುಡಿ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ-1, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಮಿಕ್ಸಿಯಲ್ಲಿ ಓಟ್ಸ್ ಹಾಕಿ ನುಣ್ಣಗೆ ಪುಡಿಮಾಡಿ. ಓಟ್ಸ್ ಹಿಟ್ಟಿಗೆ, ಗೋಧಿ ಹಿಟ್ಟು, ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟನ್ನು ಕಾಲು ಗಂಟೆ ಹಾಗೇ ಬಿಟ್ಟು, ನಂತರ ಉಂಡೆ ಮಾಡಿಕೊಳ್ಳಿ. ಗೋಧಿ ಹಿಟ್ಟನ್ನು ಉದುರಿಸಿಕೊಂಡು ಚಪಾತಿ ಲಟ್ಟಿಸಿ. (ಹಿಟ್ಟನ್ನು ಮೊದಲು ತ್ರಿಕೋನ ಮಾಡಿ ಲಟ್ಟಿಸಿದರೆ ಮೆತ್ತಗಿರುತ್ತದೆ) ಕಾವಲಿ ಬಿಸಿ ಮಾಡಿ, ತುಪ್ಪ ಹಾಕಿ ಬೇಯಿಸಿದರೆ ಓಟ್ಸ್ ಮಸಾಲೆ ಚಪಾತಿ ರೆಡಿ.
ವೇದಾವತಿ ಹೆಚ್. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.