“ವೇದಾ’ಳ ಕಾಲ! ಬೌಂಡರಿ ಹುಡುಗಿಯ ಬದುಕಿನ ಚಿತ್ತಾರ
Team Udayavani, Aug 9, 2017, 2:53 PM IST
“ನಾನು ದಿಟ್ಟೆ, ಸೋಲಿಗೆ ಹೆದರುವುದಿಲ್ಲ’ ಎಂದು ವಿಶ್ವಕಪ್‌ನ ಸೋಲನ್ನು ಒಂದೇ ಗುಟುಕಿನಲ್ಲಿ ನುಂಗಿದಂತೆ, ಕಣ್ಣಮಿಟುಕಿಸುತ್ತಾರೆ ಕ್ರಿಕೆಟ್‌ಮಣಿ ವೇದಾ ಕೃಷ್ಣಮೂರ್ತಿ. “ಇನ್ನೂ ಆಟ ಬಾಕಿ ಇದೆ’ ಎಂಬ ವಿಶ್ವಾಸ ಅವರ ಮಾತುಗಳಲ್ಲಿ ತೇಲುತ್ತದೆ. “ಅವಳು’ ಜತೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವೇದಾ ಕ್ರಿಕೆಟ್ ಅಲ್ಲದೆ, ಬೌಂಡರಿ ಆಚೆಯ ತಮ್ಮ ಬದುಕಿನ ಬಗ್ಗೆಯೂ ಹೇಳಿಕೊಂಡಿದ್ದಾರೆ…
ಅದು ಜುಲೈ 23, 2017…
ನಿದ್ದೆಗೆಟ್ಟಿತ್ತು ಭಾರತ. “ಛೇ! ಎಂಥ ಕೆಲ್ಸ ಆಗೊಯ್ತು’ ಎಂದು ಬೇಸರದಿಂದ ಟೀವಿ ಆಫ್ ಮಾಡಿ, ದಿಂಬಿಗೆ ತಲೆ ಆನಿಸಿಬಿಟ್ಟರು ಕೋಟಿ ಕೋಟಿ ಮಂದಿ. ಬೆಳಗ್ಗೆದ್ದು ಮುಖ ತೊಳೆದ ಮೇಲೂ ಆ ಬೇಸರ ಅವರ ಮುಖದಿಂದ ಹೋಗಲಿಲ್ಲ. ಅದು ನೀರಿನಿಂದಲೋ, ಸೋಪಿನಿಂದಲೋ ತೊಳೆದು ಹೋಗುವ ದುಃಖವೂ ಅಲ್ಲ. “ಆದ್ರೂ ನಮ್ ಹೆಣ್ಮಕ್ಕಳು ಟೈಗರ್ ಥರ ಹೋರಾಡಿದ್ರಲ್ಲಾ…’ ಎಂಬ ಮಾತು ಕಚೇರಿಯಲ್ಲಿ, ಬಸ್‌ಸ್ಟಾಂಡಿನಲ್ಲಿ, ಆಟೋದ ಹಿಂಬದಿಯ ಸೀಟಿನಲ್ಲಿ, ಟಿವಿಯಲ್ಲಿ, ಇಂಟರ್ವೆಲ್ ಬಂದಾಗ ಟಾಕೀಸಿನಲ್ಲಿ, ಟೆರೇಸಿನಲ್ಲಿ ಫೋನಿನಲ್ಲಿ ಮಾತಾಡುವಾಗ, ಪಾರ್ಕಿನಲ್ಲಿ ವಾಕ್ ಮಾಡುವಾಗ… ಎಲ್ಲೆಲ್ಲೂ ಕೇಳಿಸುತ್ತಲೇ ಇತ್ತು!
ಇವರೆಲ್ಲರ ಮಾತಿನ ನಡುವೆ ಒಂದು ಹೆಸರನ್ನೂ ಎಲ್ಲರೂ ಜಪಿಸಿದ್ದರು. ಅದು ವೇದಾ ಕೃಷ್ಣಮೂರ್ತಿಯದ್ದು! “ಆ ಕಡೂರು ಹುಡ್ಗಿ ಇನ್ನೂ ಒಂದ್ ಓವರ್ ಆಡಿದ್ದಿದ್ರೆ, ಇಂಗ್ಲೆಂಡು ಚಿಂದಿ ಆಗ್ತಿತ್ತು’ ಎನ್ನುತ್ತಾ ವೇದಾಳ ಬ್ಯಾಟಿಂಗ್ ಅನ್ನು ಅವರೆಲ್ಲ ಹೊಗಳಿ ಎವರೆಸ್ಟಿಗೇರಿಸುತ್ತಿದ್ದರು. ಚೆಂಡಿರುವುದೇ ಚಚ್ಚುವುದಕ್ಕೆ ಎಂಬಂತೆ ಆಡುತ್ತಿದ್ದ ಆಕೆಯ ಬ್ಯಾಟಿಂಗಿನ ಬಿರುಸುತನ ಕಂಡು, “ಲೇಡಿ ಯುವರಾಜ್ ಸಿಂಗ್’ ಎನ್ನುವ ಟ್ರಾಲ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ, ಹರಿದಾಡಿದ್ದವು.
ಯೆಸ್… ನಾಲ್ಕೇ ವೇದಗಳು ಗೊತ್ತಿದ್ದ ಭಾರತದಲ್ಲಿ “ಪಂಚಮವೇದ’ವಾಗಿ ವೇದಾ ಕೃಷ್ಣಮೂರ್ತಿ ಬಂದಾಗ ಹೀಗೆಲ್ಲ ದೃಶ್ಯಾವಳಿಗಳು ಘಟಿಸಿದ್ದವು. “ನಾನು ದಿಟ್ಟೆ, ಸೋಲಿಗೆ ಹೆದರುವುದಿಲ್ಲ’ ಎಂದು ವಿಶ್ವಕಪ್‌ನ ಸೋಲನ್ನು ಒಂದೇ ಗುಟುಕಿನಲ್ಲಿ ನುಂಗಿದಂತೆ, ಕಣ್ಣಮಿಟುಕಿಸುತ್ತಾರೆ ವೇದಾ. “ಇನ್ನೂ ಆಟ ಬಾಕಿ ಇದೆ’ ಎಂಬ ವಿಶ್ವಾಸ ಅವರ ಮಾತುಗಳಲ್ಲಿ ತೇಲುತ್ತವೆ. “ಹುಡ್ಗಿರು ವೇಗವಾಗಿ ರನ್ ಗಳಿಸೋದಿಲ್ಲ’ ಎಂಬ ಹಲವರ ಮಾತನ್ನು ಸುಳ್ಳು ಮಾಡಿದವರ ಪೈಕಿ ವೇದಾ ಕೃಷ್ಣಮೂರ್ತಿ ಕೂಡ ಒಬ್ಬರು. ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದು ಮೈದಾನದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸುತ್ತಿದ್ದ ವೇದಾ, ಮನಮೋಹಕ ಆಟದಿಂದಲೇ ಎಲ್ಲರ ಮನಗೆದ್ದರು. “ಅವಳು’ ಜತೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವೇದಾ ಕ್ರಿಕೆಟ್ ಅಲ್ಲದೆ, ಬೌಂಡರಿ ಆಚೆಯ ತಮ್ಮ ಬದುಕಿನ ಬಗ್ಗೆಯೂ ಹೇಳಿಕೊಂಡರು.
ಕ್ರಿಕೆಟ್ ಟೂರಿನಲ್ಲೂ ರಾಜೇಶ್ವರಿ ಜತೆ ಕನ್ನಡದಲ್ಲಿ ಮಾತಾಡಿ, ವೈರಲ್ ಆಗ್ಬಿಟ್ರಲ್ಲಾ..?
ನಾನು ಮತ್ತು ರಾಜ್ ಯಾವಾಗಲೂ ಕನ್ನಡದಲ್ಲೇ ಮಾತಾಡೋದು. ಡ್ರೆಸ್ಸಿಂಗ್ ರೂಂ, ಹೋಟೆಲ್, ಮೈದಾನ… ಎಲ್ಲಿಗೇ ಹೋದರೂ ರಾಜೇಶ್ವರಿ ಪಕ್ಕದಲ್ಲಿದ್ದರೆ, ಕನ್ನಡವಲ್ಲದೆ ಬೇರೆ ಭಾಷೆಯಲ್ಲಿ ನಾನು ಮಾತಾಡೋದೇ ಇಲ್ಲ. ನ್ಯೂಜಿಲೆಂಡ್ ಪಂದ್ಯದ ಬಳಿಕ ನಾವಿಬ್ಬರೂ ಕನ್ನಡದಲ್ಲಿ ಮಾತಾಡಿದ ಆ ವಿಡಿಯೋ ತುಣುಕು, ಅಷ್ಟೆಲ್ಲಾ ವೈರಲ್ ಆಗುತ್ತೆ ಅಂತ ನಾನು ಊಹಿಸಿಯೇ ಇರ್ಲಿಲ್ಲ. ಅದನ್ನು ನೋಡಿ ನಮ್ಮಿಬ್ಬರಿಗೇ ಆಶ್ಚರ್ಯ ಆಯ್ತು. ಹಾಗೆ ನೋಡಿದ್ರೆ, ಆ ವಿಡಿಯೋದಲ್ಲಿರೋದು ಏನೂ ಅಲ್ಲ… ನಾವಿಬ್ಬರೂ ಗಂಟೆಗಟ್ಟಲೆ ಕನ್ನಡದಲ್ಲಿ ಹರಟುತ್ತೇವೆ.
ಹ್ಹಹ್ಹಹ್ಹ… ಅದು ಸರಿ, ನೀವು ಮೊದಲ ಬಾರಿಗೆ ಬ್ಯಾಟ್ ಹಿಡಿದಿದ್ದು..?
ಚಿಕ್ಕಂದಿನಲ್ಲಿ ನಾನು ನನ್ನ ಅಣ್ಣ ಮತ್ತು ಫ್ರೆಂಡ್ಸ್ ಜೊತೆ ಗಲ್ಲಿ ಕ್ರಿಕೆಟ್ ಆಡ್ತಾ ಇದ್ದೆ ಮತ್ತು ಆಸಕ್ತಿಯಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೆ. 2005ರಲ್ಲಿ ನಾನು 12 ವರ್ಷ ವಯಸ್ಸಿನವಳಾಗಿದ್ದಾಗ ಕ್ರಿಕೆಟರ್ ಆಗಬೇಕು ಎಂಬ ಆಸೆ ಮೊಳೆಯಿತು. ಆಗಲೇ ನಾನು ಕಡೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿದೆ. ನಂತರ ನನ್ನ ಕ್ರೀಡಾ ಜೀವನ ಆರಂಭವಾಯಿತು.
ರೋಲ್ ಮಾಡೆಲ್ ಅಂತ ಯಾರಾದ್ರೂ…?
ಆ ರೀತಿ ಸ್ಫೂರ್ತಿ ನನಗೆ ಮೊದಲು ಯಾರೂ ಇರಲಿಲ್ಲ. ನಾನು ಕ್ರಿಕೆಟ್ ಜೀವನವನ್ನು ಪ್ರವೇಶಿಸಿದ ಮೇಲಷ್ಟೇ ಅಂಥ ಪರಿಕಲ್ಪನೆಗಳ ಬಗ್ಗೆ ನನಗೆ ತಿಳಿದಿದ್ದು. ಈಗಲೂ ಫೇವರಿಟ್ ಆಟಗಾರ ಅಂತ ನನಗೆ ಯಾರೂ ಇಲ್ಲ. ಮಿಥಾಲಿ ರಾಜ್‌ರ ಆಟವನ್ನು ಮೊದಲಿನಿಂದಲೂ ತುಂಬಾ ಗಮನಿಸುತ್ತಿದ್ದೆ. ಇನ್ನು ಸುರೇಶ್ ರೈನಾ, ಕೇವಿನ್ ಪೀಟರ್‌ಸನ್, ಮೈಕೆಲ್ ಕ್ಲಾರ್ಕ್ ಆಟವನ್ನು ಇಷ್ಟಪಡುತ್ತೇನೆ. ಇವರ ಆಟವನ್ನು ನೋಡುತ್ತಲೇ ನಾನು ಕ್ರಿಕೆಟ್ ಕಲಿತೆ.
ಈಗೀಗ ಜನ ಮಹಿಳಾ ಕ್ರಿಕೆಟ್ ಬಗ್ಗೆ ಮಾತಾಡ್ತಿದ್ದಾರೆ. ನಿಮಗೆ ಏನನ್ನಿಸುತ್ತಿದೆ?
ಜನರು ಮಹಿಳಾ ಕ್ರಿಕೆಟನ್ನು ಪುರುಷರ ಕ್ರಿಕೆಟ್‌ಗೆ ಹೋಲಿಸುತ್ತಾರೆ. ಮಹಿಳೆಯರ ಕ್ರಿಕೆಟ್ ಪಂದ್ಯವನ್ನು ಕೂತು ವೀಕ್ಷಿಸದರೆ ಮಾತ್ರ ಇದೂ ಆಸಕ್ತಿಕರವಾಗಿರುತ್ತೆ ಅಂತ ಅವರಿಗೆ ತಿಳಿಯುತ್ತದೆ. ಅದರಲ್ಲೂ ಈ ಸರಣಿಗೆ ಮಾಧ್ಯಮಗಳಿಂದ ಹೆಚ್ಚಿನ ಪ್ರಾಮುಖ್ಯತೆಯೂ ಸಿಕ್ಕಿದೆ. ಇದು ಉತ್ತಮ ಬೆಳವಣಿಗೆ. ಆದರೆ, ಈ ಸರಣಿಗೂ ಮೊದಲು ನಾವು ಉತ್ತಮ ಪ್ರದರ್ಶನವನ್ನೇ ನೀಡಿದ್ದೆವು. 2-3 ಸರಣಿ ಗೆದ್ದಿದ್ದೆವು. ಆದರೆ, ಇದು ವಿಶ್ವಕಪ್ ಆಗಿದ್ದ ಕಾರಣದಿಂದಲೋ ಏನೋ… ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತಷ್ಟೇ.
ಸೋಲು ಮತ್ತು ಗೆಲುವನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
ನಾನು ತುಂಬಾ ಗಟ್ಟಿ ಮನಸ್ಸಿನ ಹುಡುಗಿ. ಬದುಕಿನಲ್ಲಿ ಎಲ್ಲಾ ಸಂದರ್ಭಗಳನ್ನೂ ಸಮನಾಗಿಯೇ ಸ್ವೀಕರಿಸುತ್ತೇನೆ. ಅದಕ್ಕೆ ಈ ಸರಣಿಯೇ ಸಾಕ್ಷಿ. ಸರಣಿಯ ಮೂರು ಪಂದ್ಯಗಳನ್ನು ನಾನು ಆಡಲಿಲ್ಲ. ಪೆವಿಲಿಯನ್‌ನಲ್ಲೇ ಕೂತಿದ್ದೆ. ಆದರೆ, ಅವಕಾಶ ಸಿಕ್ಕಾಗ ಬಿಡಲಿಲ್ಲ; ಸಮರ್ಥವಾಗಿ ಬಳಸಿಕೊಂಡೆ. ಪೆವಿಲಿಯನ್‌ನಲ್ಲಿ ಕೂತಾಗ ನಾನು ಮಾನಸಿಕವಾಗಿ ಕುಗ್ಗಲಿಲ್ಲ, ಹತಾಶಳಾಗಲಿಲ್ಲ. ಬಹುಶಃ ನನ್ನ ಮನೋಸ್ಥೈರ್ಯವೇ ಅಂತಿಮ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ನೆರವಾಯಿತು ಅಂತನಿಸುತ್ತೆ.
ಕ್ರಿಕೆಟ್ ಪಟು ಆಗ್ತೀನಿ ಅಂದಾಗ ಫ್ಯಾಮಿಲಿ ಮತ್ತು ಸ್ನೇಹಿತರ ಬಳಗದಲ್ಲಿ ಪ್ರತಿಕ್ರಿಯೆ ಹೇಗಿತ್ತು?
ನನ್ನ ಅಪ್ಪ, ಅಮ್ಮ, ಅಣ್ಣ, ಎಲ್ಲರೂ ನನಗೆ ತುಂಬಾ ಬೆಂಬಲ ನೀಡಿದರು. “ಕ್ರಿಕೆಟ್ ಹುಡುಗರ ಆಟ, ನೀನು ಹುಡುಗಿ. ನಿಂಗ್ಯಾಕೆ ಅದೆಲ್ಲಾ?’ ಎಂದು ಯಾರೂ ಹೇಳಲಿಲ್ಲ. ಆದರೆ, ಹೊರಗಡೆ ಟೂರ್ನಮೆಂಟ್‌ಗಳಿಗೆ ನಮ್ಮ ತಂಡ ಹೋಗುವಾಗ ಜನರು, “ನೀವು ಹಾಕಿ ಆಟಗಾರರೇ?’ ಎಂದು ಕೇಳುತ್ತಿದ್ದರು. ನಮ್ಮ ನ್ಪೋರ್ಟ್ಸ್ ಕಿಟ್, 15-16 ಜನರ ತಂಡ ಅವರಿಗೆ ಹಾಕಿ ತಂಡವನ್ನು ನೆನಪಿಸುತ್ತಿತ್ತು ಅಂತನಿಸುತ್ತೆ. ನಾವು “ಇಲ್ಲ, ನಾವು ಕ್ರಿಕೆಟ್ ಆಟಗಾರ್ತಿಯರು’ ಎಂದಾಗ ಅವರ ಮುಖದಲ್ಲಿ ಆಶ್ಚರ್ಯ ಮೂಡುತ್ತಿತ್ತು.
ಡ್ರೆಸ್ಸಿಂಗ್ ರೂಮ್‌ನಲ್ಲಿ ತುಂಬಾ ತರಲೆ ಮಾಡ್ತೀನಿ ಅಂತ ಹೇಳಿದ್ರಿ. ಮನೇಲೂ ಹಾಗೆಯೇ ಇರ್ತೀರಾ?
ಮನೆಯಲ್ಲಿನ ನನ್ನ ವರ್ತನೆ ಇದಕ್ಕೆ ತದ್ವಿರುದ್ಧ. ಮನೆಯಲ್ಲಿ ನಾನು ಬಹಳ ಸೌಮ್ಯ ಸ್ವಭಾವದ ಹುಡುಗಿ. ಕೆಲವೊಮ್ಮೆ ನನ್ನ ರೂಂ ಬಿಟ್ಟು ಹೊರಗೆ ಬರೋದೇ ಇಲ್ಲ. ಹೆಚ್ಚಿನ ಸಮಯವನ್ನು ನಾನು ಅಭ್ಯಾಸ ಮತ್ತು ಟೂರ್‌ಗಳಲ್ಲಿಯೇ ಕಳೆಯುವುದರಿಂದ, ನನಗಾಗಿಯೇ ಸಿಗುವ ಸಮಯವನ್ನು ನಿದ್ದೆ ಮತ್ತು ನನ್ನ ವೈಯಕ್ತಿಕ ಕೆಲಸಗಳಿಗಾಗಿ ಮೀಸಲಿರಿಸುತ್ತೇನೆ.
ನಿದ್ದೆ ಮಾಡುವಾಗ ಯಾರಾದರೂ ನಿಮ್ಮನ್ನು ಎಚ್ಚರಿಸಿದರೆ ನಿಮ್ಮ ರಿಯಾಕ್ಷನ್…?
ಬೆಳಗ್ಗಿನ ನಿದ್ದೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆ ವೇಳೆ ಯಾರಾದರೂ ನಿದ್ದೆಯನ್ನು ಹಾಳುಮಾಡಿದರೆ, ಅವರ ಕಥೆ ಮುಗೀತು ಅಂತಲೇ ಲೆಕ್ಕ! ಅಷ್ಟೊಂದು ಕೂಗಾಡುತ್ತೇನೆ. ಕ್ರಿಕೆಟ್ ಅಭ್ಯಾಸ ಇದ್ದಾಗಲೂ ನಾನು ಏಳುವುದು 8 ಗಂಟೆಗೇನೆ. ತಿಂಡಿ ಕೂಡ ತಿನ್ನುವುದಿಲ್ಲ. ತಿಂಡಿ ತಿನ್ನಲು ಅರ್ಧ ಗಂಟೆ ವ್ಯಯಿಸುವ ಬದಲು ಇನ್ನರ್ಧ ಗಂಟೆ ನಿದ್ದೆ ಮಾಡಬಹುದಲ್ಲಾ ಎಂಬುದು ನನ್ನ ಲೆಕ್ಕಾಚಾರ. ಬೆಳಗ್ಗೆ ಎದ್ದು ರೆಡಿಯಾಗಿ ಎಲ್ಲಿಯಾದರೂ ಹೋಗುವುದಿದ್ದರೆ ನಾನು ಮೇಕಪ್, ಬಟ್ಟೆ ಬರೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಡ್ರೆಸ್ ಮಾಡಿಕೊಳ್ಳುವ ಸಮಯದಲ್ಲಿ ಇನ್ನೊಂದಿಷ್ಟು ಸಮಯ ನಿದ್ದೆ ಮಾಡಬಹುದು ಎಂದು ಯೋಚಿಸುತ್ತೇನೆ. ಅಷ್ಟರ ಮಟ್ಟಿಗೆ ನಾನು ನನ್ನ ಬೆಳಗ್ಗಿನ ನಿದ್ದೆಯನ್ನು ಪ್ರೀತಿಸುತ್ತೇನೆ.
ಸಿನಿಮಾ ಏನಾದ್ರೂ ನೋಡ್ತೀರಾ?
ಓಹ್… ನೋಡ್ತೀನಿ. ಅದರಲ್ಲೂ ಟಾಕೀಸಿಗೆ ಹೋಗಿ ಸಿನಿಮಾ ನೋಡೋದು, ನನ್ನ ಇಷ್ಟದ ಹವ್ಯಾಸಗಳಲ್ಲಿ ಒಂದು. ಬಂದ ಕೂಡಲೇ ಯಾವೆಲ್ಲಾ ಒಳ್ಳೆಯ ಕನ್ನಡ ಸಿನಿಮಾಗಳು ಟಾಕೀಸಿನಲ್ಲಿವೆ ಎಂದು ಪತ್ತೆ ಮಾಡಿ, ನೋಡಲು ಹೋಗುತ್ತೇನೆ. ಲಂಡನ್ ಟೂರ್‌ಗೆ ತೆರಳುವ ಮೊದಲು “ರಾಜಕುಮಾರ’, “ಕಿರಿಕ್ ಪಾರ್ಟಿ’ ಚಿತ್ರಗಳನ್ನು ನೋಡಿದ್ದೆ. ವಾಪಸ್ಸಾದ ಬಳಿಕ ಹಿಂದಿ ಚಿತ್ರ “ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ’ ವೀಕ್ಷಿಸಿದೆ.
ಕ್ವಿಕ್ ಸಿಂಗಲ್ಸ್
1. ವಿಶ್ವಕಪ್ ಫೈನಲ್ ಮುಗಿದ ಕೂಡಲೇ ನೀವು ಮಾಡಿದ್ದು..?
ಒಬ್ಬರಿಗೊಬ್ಬರು ತಬ್ಬಿಕೊಂಡು ಅತ್ತೆವು..!
2. ಮಿಥಾಲಿ ಕ್ರಿಕೆಟ್ ಆಡಲು ಬಂದಾಗ, ನಿಮ್ಮ ವಯಸ್ಸು?
ಬರೀ 5 ವರ್ಷ!
3. ನೆಚ್ಚಿನ ನಟ
ಕನ್ನಡದಲ್ಲಿ ನನಗೆ ಯಶ್ ತುಂಬಾ ಇಷ್ಟ. ಅವರ ಎಲ್ಲಾ ಚಿತ್ರಗಳನ್ನೂ ನೋಡಿದ್ದೇನೆ. ಬಾಲಿವುಡ್‌ನಲ್ಲಿ ರಣವೀರ್ ಸಿಂಗ್ ಇಷ್ಟ ಆಗ್ತಾರೆ.
4. ಆಲ್‌ಟೈಮ್ ಫೇವರಿಟ್ ಸಿನಿಮಾ
ಎಕ್ಸ್‌ಕ್ಯೂಸ್ ಮಿ, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ
5. ಒಂದು ವೇಳೆ ಕ್ರಿಕೆಟರ್ ಆಗದೇ ಇದ್ದಿದ್ರೆ?
ಐಪಿಎಸ್ ಆಫೀಸರ್ ಆಗ್ತಿದ್ದೆ!
6. ಡಯೆಟ್‌ಗೆ ಮೋಸ ಮಾಡಿಯೇ ಇಲ್ವಾ?
ಚಿಕನ್ ಬಿರಿಯಾನಿ, ಚಾಕ್ಲೆಟ್ ಪೇಸ್ಟ್ರಿ ಸಿಕ್ಕಾಗ ಡಯೆಟ್‌ಗೆ ಮೋಸ ಮಾಡಿದ್ದಿದೆ!
7. ಅಡುಗೆಮನೆ ಕಡೆಗೆ ಹೋಗಿದ್ರಾ?
ಚಿಕನ್ ಬಿರಿಯಾನಿ, ನುಗ್ಗೇಕಾಯಿ ಸಾರು, ಮೊಟ್ಟೆ ಪದಾರ್ಥಗಳನ್ನು ಮಾಡುವುದರಲ್ಲಿ ನಾನು ಎಕ್ಸ್‌ಪರ್ಟ್. ನನ್ನ ಕೈರುಚಿ ತುಂಬಾ ಚೆನ್ನಾಗಿರುತ್ತೆ. “ಅಡುಗೆ ಕಲೆ ನಿನಗೆ ಒಲಿದಿದೆ’ ಎಂದು ನಮ್ಮಮ್ಮ ಯಾವಾಗಲೂ ಹೇಳ್ತಾ ಇರ್ತಾರೆ.
8. ನಿಮ್ಮನ್ನು ಸದಾ ಟ್ರ್ಯಾಕ್ ಸೂಟ್‌ನಲ್ಲೇ ನೋಡ್ತೀವಿ. ಆದರೆ, ನೀವು ಇಷ್ಟಪಡುವ ಉಡುಗೆ ಯಾವುದು?
ನಾನು ಯಾವಾಗಲೂ ಕ್ಯಾಶುವಲ್ ವಸ್ತಗಳನ್ನೇ ಹೆಚ್ಚು ಧರಿಸುವುದು. ಜೀನ್ಸ್, ಟೀಶರ್ಟ್, ನ್ಪೋಟ್ಸ್ ಶೂ ನನಗೆ ಇಷ್ಟದ ಮತ್ತು ಆರಾಮದಾಯಕ ಉಡುಗೆ. ಸಾಂಪ್ರದಾಯಿಕ ಉಡುಗೆಗಳಿಂದ ನಾನು ಸ್ವಲ್ಪ ದೂರಾನೇ ಇರ್ತೀನಿ. ಕೆಲವೊಮ್ಮೆ ಸೆಮಿ ಫಾರ್ಮಲ್ ಉಡುಗೆಗಳನ್ನೂ ತೊಡುತ್ತೇನೆ.
9. ಅಪ್ಪ, ಅಮ್ಮ ಮತ್ತು ಊರನ್ನು ಮಿಸ್ ಮಾಡಿಕೊಳ್ಳಲ್ವಾ?
ಅಷ್ಟಾಗಿ ಮಿಸ್ ಮಾಡಿಕೊಳ್ಳಲ್ಲ. ನಾನು ಚಿಕ್ಕ ವಯಸ್ಸಿಗೇ ಬೆಂಗಳೂರಿಗೆ ಬಂದೆ. ಈಗ ಅದೇ ಅಭ್ಯಾಸವಾಗಿದೆ. ಅಪ್ಪ, ಅಮ್ಮಾನೆ ಬೆಂಗಳೂರಿಗೆ ಬರಿರ್ತಾರೆ. ಇನ್ನು ನಾನು ಕಡೂರಿಗೆ ಹೋಗಿ ಒಂದೂವರೆ ವರ್ಷವಾಗಿದೆ.
ನನ್ನ ತುಂಟಾಟ ನಿಮ್ಗೆ ಗೊತ್ತಿಲ್ಲ…
ಹುಡುಗಿಯರ ಗುಂಪು ಇರುವ ಕಡೆ ಜಗಳ, ಕೋಪ, ಕಿತ್ತಾಟ ಮಾಮೂಲಿ ಎಂಬ ಮಾತಿದೆ. ಆದರೆ, ನಮ್ಮ ಟೀಮ್ ಹಾಗೇನೂ ಇಲ್ಲ. ತಂಡದ ಎಲ್ಲಾ ಸದಸ್ಯರ ಮಧ್ಯೆ ಉತ್ತಮ ಬಾಂಧವ್ಯವಿದೆ. ಬಿಡುವಿನ ವೇಳೆ ಸಾಕಷ್ಟು ಮಜಾ ಮಾಡುತ್ತೇವೆ. ನಾನು ಯಾರನ್ನೂ ಸುಮ್ಮನೆ ಕೂರಲು ಬಿಡೋದಿಲ್ಲ. ಏನಾದರೊಂದು ಕಿತಾಪತಿ ಮಾಡಿ, ಎಲ್ಲರೂ ಖುಷಿಯಾಗಿರುವಂತೆ ಮಾಡುತ್ತೇನೆ. ಬಿಡುವಿನ ವೇಳೆಯಲ್ಲಿ ಹಾಡೋದು, ಡ್ಯಾನ್ಸ್ ಮಾಡೋದು ಇದ್ದಿದ್ದೇ. ಒತ್ತಡ ಕಡಿಮೆ ಮಾಡಿಕೊಳ್ಳಲು ಇಂಥ ಕೀಟಲೆಗಳ ಅಗತ್ಯ ಎಲ್ಲಾ ಆಟಗಾರರಿಗೂ ಇರುತ್ತೆ.
ಕರ್ನಾಟಕದ ಪ್ರಥಮ ಮಹಿಳಾ ಸಿಎಂ ಆಗ್ಬೇಕು!
ನನಗೆ ರಾಜಕೀಯಕ್ಕೆ ಸೇರಬೇಕು ಎಂಬ ಆಸೆ ಇದೆ. ರಾಜಕಾರಣಿಯಾಗುವುದು ನನ್ನ ಜೀವಮಾನದ ಗುರಿ ಎಂದರೆ ತಪ್ಪಲ್ಲ. ಚಿಕ್ಕವಳಿದ್ದಾಗ ನಾನು ಕರ್ನಾಟಕದ ಮೊದಲ ಮಹಿಳಾ ಸಿಎಂ ಆಗಬೇಕು ಎಂಬ ಯೋಚನೆ ತಲೆಯಲ್ಲಿ ಮೂಡಿತ್ತು. ಬಹುಶಃ ರಾಜಕೀಯದ ಮೇಲೆ ಆಸಕ್ತಿ ಬರಲೂ ಅದೇ ಕಾರಣ ಇರಬಹುದು. ಒಂದು ವೇಳೆ ನಾನು ರಾಜಕೀಯ ಪ್ರವೇಶಿಸುವ ಮೊದಲೇ ಯಾರಾದರೂ ಮಹಿಳಾ ಸಿಎಂ ಆದರೆ ನನ್ನ ಗುರಿ ಬದಲಾಗಲೂಬಹುದು!
ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.