ರಜತಯಾನದ ಸಂಭ್ರಮದಲ್ಲಿ ಶ್ರೀರಾಮಕೃಷ್ಣ- ವಿವೇಕಾನಂದ ಆಶ್ರಮ
Team Udayavani, Mar 22, 2017, 3:50 AM IST
ಮಹಿಳೆಯರನ್ನು, ಅದರಲ್ಲೂ ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸೇರಿದವರೆಂದೇ ಭಾವಿಸುವ ಬಡ, ಅಶಕ್ತ, ದೀನ ಮಹಿಳೆಯರನ್ನು ವೇದ ಘೋಷ, ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪೂಜಿಸುವ ಸಂಗತಿಯನ್ನು ಕೇಳಿದ್ದೀರಾ? ಅಂಥದೊಂದು ಅಪರೂಪದ ಸಂಪ್ರದಾಯವನ್ನು ತುಮಕೂರಿನಲ್ಲಿರುವ ಶ್ರೀ ರಾಮಕೃಷ್ಣ- ವಿವೇಕಾನಂದ ಆಶ್ರಮವು ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿದೆ.
ಅಚರಣೆ ಮತ್ತು ಉತ್ಸವ ಎರಡೂ ಆಗಿರುವ ಈ ವಿಶಿಷ್ಟ ಸಂದರ್ಭವು ಜೀವಂತ ದುರ್ಗಾಪೂಜೆ ಎಂದೇ ಪ್ರಸಿದ್ಧಿ ಪಡೆದಿದೆ. ಅಂದ ಹಾಗೆ, ತುಂಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮಕ್ಕೆ ಇಂದು ರಜತೋತ್ಸವ ಸಂಭ್ರಮ.
ದಿನ ಬೆಳಗಾದರೆ ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳನ್ನು ಓದುತ್ತೇವೆ; ಇಪ್ಪತ್ತೂಂದನೆಯ ಶತಮಾನದಲ್ಲೂ ಸ್ತ್ರೀಯರು ಸಮಾನ ಅವಕಾಶಗಳಿಗಾಗಿ ಅಂಗಲಾಚುವ ಪರಿಸ್ಥಿತಿ ಇದೆಯಲ್ಲ ಎಂಬ ಆತಂಕದ ಮಾತುಗಳನ್ನು ಕೇಳುತ್ತೇವೆ; ಮಹಿಳೆಯರು ದೇವಾಲಯ ಪ್ರವೇಶಿಸುವುದರ ಕುರಿತಾದ ಚರ್ಚೆಗಳು ಇನ್ನೂ ಜೀವಂತವಾಗಿರುವುದನ್ನು ಕಾಣುತ್ತೇವೆ. ಈ ಎಲ್ಲದರ ನಡುವೆ ಮಹಿಳೆಯರನ್ನು, ಅದರಲ್ಲೂ ಸಮಾಜದ ನಿರ್ಲಕ್ಷಿತ ವರ್ಗಗಳ ಸ್ತ್ರೀಯರನ್ನು, ಅಕ್ಷರಶಃ ಪೂಜಿಸುವ ಸಂಗತಿಯನ್ನೇನಾದರೂ ಕೇಳಿದ್ದೀರಾ?
ನಿಮಗೆ ಸೋಜಿಗವೆನಿಸಬಹುದು, ಆದರೆ ಇದು ನಿಜ. ಇಂತಹದೊಂದು ಶಿಷ್ಟ ಸಂಪ್ರದಾಯವನ್ನು ತುಮಕೂರಿನ ಶ್ರೀರಾಮಕೃಷ್ಣ- ವಿವೇಕಾನಂದ ಆಶ್ರಮ ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬಂದಿದೆ. ಶ್ರೀ ಮಾತೆ ಶಾರದಾದೇವಿಯವರ ಸ್ಮರಣೆಯಲ್ಲಿ ಆಶ್ರಮವು ಆಚರಿಸಿಕೊಂಡು ಬರುತ್ತಿರುವ ಈ ಪರಿಕಲ್ಪನೆ “ಜೀವಂತ ದುರ್ಗಾಪೂಜೆ’ ಎಂದೇ ಪ್ರಸಿದ್ಧ.
ಪತ್ನಿಯನ್ನೇ ಸಾಕ್ಷಾತ್ ಕಾಳಿಕಾ ಮಾತೆಯೆಂದು ಪೂಜಿಸಿ ಗೌರವಿಸಿದವರು ಶ್ರೀರಾಮಕೃಷ್ಣ ಪರಮಹಂಸರು. ಲೌಕಿಕದಲ್ಲಷ್ಟೇ ಅಲ್ಲದೆ ಪಾರಲೌಕಿಕ ಸಾಧನೆಯಲ್ಲೂ ಗಂಡ- ಹೆಂಡಿರ ಪರಸ್ಪರ ಸಹಕಾರ- ಸಮನ್ವಯತೆಗಳು ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ಶ್ರೀಮಾತೆ ಶಾರದಾದೇವಿ. ಮಹಿಳೆಯರ ಸ್ಥಿತಿ ಉತ್ತಮಗೊಳ್ಳದೆ ಜಗತ್ತು ಉದ್ಧಾರವಾಗದು ಎಂದು ಸದಾ ತುಡಿಯುತ್ತಿದ್ದವರು ಇವರಿಬ್ಬರ ಪ್ರೀತಿಯ ಶಿಷ್ಯ ಸ್ವಾಮಿ ವಿವೇಕಾನಂದರು. ಇಂತಹ ಮಹಾನ್ ವ್ಯಕ್ತಿತ್ವಗಳ ಸಂದೇಶದ ನೆರಳಿನಲ್ಲೇ ಸಾಗುತ್ತಿರುವ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಮಳೆಯರಿಗೆ ಶೇಷ ಗೌರವ, ಮನ್ನಣೆ.
ಅದರಲ್ಲೂ “ಜೀವಂತ ದುರ್ಗಾಪೂಜೆ’ಯ ಪರಿಕಲ್ಪನೆಯಲ್ಲಿ ಆಶ್ರಮದ ಆದರಕ್ಕೆ ಪಾತ್ರರಾಗುವವರು ಕೊಳಗೇರಿಗಳಲ್ಲಿ, ಬೀದಿಬದಿಗಳಲ್ಲಿ ವಾಸಿಸುವ, ಭಿಕ್ಷೆ ಎತ್ತುವ ಬಡ, ದೀನ ಹಾಗೂ ಅಶಕ್ತ ಮಹಿಳೆಯರು. “ಹಸಿದವರಿಗೆ ಅನ್ನ ನೀಡಿ, ನಿಮ್ಮ ಸಿದ್ಧಾಂತ ಬೋಧಿಸಬೇಡಿ’ ಎಂಬ ವಿವೇಕಾನಂದರ ಮಾತನ್ನು ಯತಾರ್ಥವಾಗಿ ಅನುಷ್ಠಾನಕ್ಕೆ ತಂದಿದ್ದರೆ ಅದು ಈ ಜೀವಂತ ದುರ್ಗಾಪೂಜೆಯಲ್ಲಿ ಎಂಬುದನ್ನು ಹೃದಯವಂತರೆಲ್ಲರೂ ಒಪ್ಪಿಕೊಳ್ಳಬೇಕು.
ಜನತಾ ಸೇವೆಯೇ ಜನಾರ್ಧನನ ಸೇವೆ ಎಂಬುದು ಜನಪ್ರಿಯ ನುಡಿ. ಅದರಲ್ಲೂ ನಿರ್ಲಕ್ಷಿತರ, ಅಶಕ್ತ ಮಹಿಳೆಯರ ಸೇವೆ ಯಾವ ದೇವರ ಪೂಜೆಗೂ ಕಮ್ಮಿಯಲ್ಲ. ರಾಮಕೃಷ್ಣ- ವಿವೇಕಾನಂದ ಆಶ್ರಮವು ನಡೆಸಿಕೊಂಡು ಬರುತ್ತಿರುವ ಜೀವಂತ ದುರ್ಗಾಪೂಜೆಯ ಹಿಂದೆ ಇರುವುದೂ ಇದೇ ಉದಾತ್ತ ಚಿಂತನೆ.
ಇಲ್ಲಿ ನಡೆಯುತ್ತದೆ ಜೀವಂತ ದುರ್ಗಾಪೂಜೆ!
ವರ್ಷಕ್ಕೊಂದು ಬಾರಿ ತುಮಕೂರಿನ ಸುತ್ತಮುತ್ತಲ ಬಡ, ಅಶಕ್ತ, ದೀನ ಮಹಿಳೆಯರನ್ನು ಆಶ್ರಮಕ್ಕೆ ಬರಮಾಡಿಕೊಂಡು ಅವರಿಗೆ ಅವಶ್ಯಕ ಸಾಮಗ್ರಿಗಳನ್ನು ಅರ್ಪಿಸಿ ಸತ್ಕರಿಸುವ ವಿಧಾನ ಅಪೂರ್ವ ಮತ್ತು ವಿಶಿಷ್ಟ. ಆಗಮಿಸಿದ ಬಡ ಮಹಿಳೆಯರನ್ನು ವೇದ ಘೋಷ, ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ, ಆಶ್ರಮದ ಭಾವೈಕ್ಯ ಮಂದಿರಕ್ಕೆ ಹಾಗೂ ಅಲ್ಲಿಂದ ವಿವೇಕಾನಂದ ಸಭಾಂಗಣಕ್ಕೆ ಕರೆದೊಯ್ದು ಕುಳ್ಳಿರಿಸಿ, ಪ್ರತಿಯೊಬ್ಬರಿಗೂ ಹೊಸ ಸೀರೆ, ಧಾನ್ಯಾದಿಗಳನ್ನು ನೀಡಲಾಗುತ್ತದೆ. ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತಿಯವರೇ ಖುದ್ದು ಎಲ್ಲರಿಗೂ ಈ ಉಡುಗೊರೆಗಳನ್ನು ನೀಡಿ, ಪುಷ್ಪಾರ್ಚನೆ ಮಾಡಿ, ಸತ್ಕರಿಸಿ ಕಳುಹಿಸಿಕೊಡುತ್ತಾರೆ. ತಮ್ಮನ್ನೂ ಆದರಾತಿಥ್ಯಗಳಿಂದ ಗೌರವಿಸುವವರು ಇದ್ದಾರಲ್ಲ ಎಂಬ ಸಂತೃಪ್ತಿಯಿಂದ ಕಂಬನಿ ತುಂಬಿಕೊಳ್ಳುತ್ತಾರೆ ಈ ಮುಗ್ಧ ಮನಸ್ಸಿನ ಮಹಿಳೆಯರು. ಇಂತಹ ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾದವರೆಲ್ಲರೂ ಮತ್ತೂಮ್ಮೆ ಈ ಜೀವಂತ ದುರ್ಗೆಯರಿಗೆ ವಂದಿಸಿ, ಸಿಹಿಯೂಟ ಉಣಿಸಿ, ಕಳುಹಿಸಿಕೊಡುತ್ತಾರೆ.
ಎಂತಹ ಮನೋಜ್ಞ ಪರಿಕಲ್ಪನೆ ಅಲ್ಲವೇ? ಹಸಿದ ಮಂದಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ಪೂಜೆ ಬೇರೆ ಯಾವುದಿದೆ? ಸಮಾಜದಲ್ಲಿ ಸರ್ವರೀತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮೇಲೆತ್ತಲು ಸ್ವಾಮಿ ವಿವೇಕಾನಂದರು ಆಶಿಸಿ ಸೇವೆಯನ್ನು ಜೀವನ ವಿಧಾನವಾಗಿಸಿಕೊಳ್ಳಲು ಕರೆಯಿತ್ತರು. ಸಹಮಾನವರ ಆಂತರ್ಯದಲ್ಲಿನ ದಿವ್ಯತೆಯನ್ನು ಗುರುತಿಸಿ ಗೌರವಿಸುವುದೇ ಅಧ್ಯಾತ್ಮ ಎಂದಿದ್ದರು ಅವರು.
ಇದು ಕೇವಲ ಬಡವರಿಗೆ ಅವಶ್ಯಕ ಪದಾರ್ಥಗಳನ್ನು ವಿತರಿಸುವ ಕಾರ್ಯವಷ್ಟೇ ಆಗಿರದೆ ಅವರ ನೈಜ ಅಸ್ತಿತ್ವವಾದ ದಿವ್ಯತೆಯನ್ನು ಅವರಿಗೆ ಪರಿಚಯಿಸುವ ಪವಿತ್ರಕಾರ್ಯವೂ ಆಗಿದೆ. ಯಾರನ್ನು ಗೌರವಾನ್ವಿತವಾಗಿ ನೋಡುವುದಿಲ್ಲವೋ ಆ ವ್ಯಕ್ತಿಗಳನ್ನು ಭಗವಂತನ ಸ್ವರೂಪ ಎಂದು ಪೂಜಿಸುವುದು ಮತ್ತು ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವುದೇ ಮಾನವೀಯತೆ ಎಂಬ ಸಂದೇಶವನ್ನು ನಾವು ಸಮಾಜಕ್ಕೆ ಸಾರಬೇಕಿದೆ ಎನ್ನುತ್ತಾರೆ ಸ್ವಾಮೀಜಿ.
ಆಶ್ರಮದ ರಜತಯಾನ
ಅಂದಹಾಗೆ, ಆಶ್ರಮವು ಈಗ ರಜತವರ್ಷದ ಹೊಸ್ತಿಲಲ್ಲಿದೆ. “ಯಾರು ಇನ್ನೊಬ್ಬರಿಗಾಗಿ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಾರೋ, ಅವರು ವಾಸ್ತವವಾಗಿ ತಮಗೇ ಒಳ್ಳೆಯದು ಮಾಡುತ್ತಿರುತ್ತಾರೆ’ ಎಂಬ ಶ್ರೀರಾಮಕೃಷ್ಣರ ಬೋಧನೆಯ ಬೆಳಕಲ್ಲಿ ಸಾಗಿ ಬಂದಿರುವ ಆಶ್ರಮವು ಸ್ಥಾಪನೆಯಾದದ್ದು 1992 ನವೆಂಬರ್ 22ರಂದು. ಈ ಇಪ್ಪತ್ತೆ„ದು ವರ್ಷಗಳ ಹಾದಿಯ ಸಿಂಹಾವಲೋಕನಕ್ಕಾಗಿಯೇ ಇದೇ ಮಾರ್ಚ್ 22ರಿಂದ ಒಂದು ವರ್ಷ ಕಾಲ ಆಶ್ರಮವು “ರಜತಯಾನ’ ಶೀರ್ಷಿಕೆಯಡಿ ಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. “ರಜತಮಥಿತ’ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳ ಮಂದಿಗೆ ಪುನಶ್ಚೇತನ ಕಾರ್ಯಕ್ರಮಗಳು ಹಾಗೂ “ರಜತ ಉಲ್ಲಸಿತ’ ಹೆಸರಿನಲ್ಲಿ ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ವಿಶೇಷವಾಗಿ ಯುವಜನಾಂಗಕ್ಕೆ ಶಕ್ತಿ ತುಂಬುವ ಕೆಲವನ್ನು ಇಷ್ಟೂ ವರ್ಷಗಳಲ್ಲಿ ಆಶ್ರಮವು ಜಾತಿ ಮತ ಭೇದವಿಲ್ಲದೆ ಮಾಡುತ್ತಾ ಬಂದಿದೆ. ಜಾತ್ಯತೀತತೆಯೇ ಆಶ್ರಮದ ಬಲುದೊಡ್ಡ ಆಶಯ. ವಿದ್ಯಾರ್ಥಿಗಳು, ಶಿಕ್ಷಕರನ್ನು ಗಮನದಲ್ಲಿರಿಸಿಕೊಂಡು ಅದು ಆಯೋಜಿಸಿರುವ ಕಾರ್ಯಕ್ರಮಗಳು ಸಾವಿರಕ್ಕೂ ಹೆಚ್ಚು. ಎರಡು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು, ಹತ್ತು ಸಾವಿರದಷ್ಟು ಶಿಕ್ಷಕರು ಆಶ್ರಮ ನಡೆಸುವ ವ್ಯಕ್ತಿತ್ವ ನಿರ್ಮಾಣದ ಪುಸ್ತಕಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ. ಯುವಸಮ್ಮೇಳನಗಳ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಆಶ್ರಮ ತಲುಪಿದೆ. ಶಿಕ್ಷಕರ ಸಮಾವೇಶಗಳಲ್ಲಿ ಏನಿಲ್ಲವೆಂದರೂ 50 ಸಾವಿರ ಶಿಕ್ಷಕರು ಭಾಗವಹಿಸಿ ಮೌಲ್ಯಾಧಾರಿತ ಶಿಕ್ಷಣದ ಸಾರವನ್ನು ಗ್ರಹಿಸಿದ್ದಾರೆ. ಸ್ವಾಮಿ ವೀರೇಶಾನಂದರು ತಮ್ಮ ಉಪನ್ಯಾಸಗಳ ಮೂಲಕ ತಲುಪಿರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತು ಲಕ್ಷ ದಾಟಿದೆ.
“ಜಾತಿಮತಗಳು ತೊಲಗಿ, ಧಾರ್ಮಿಕ ಕ್ಷೇತ್ರ ಹಸನಾಗಿ, ಅಧ್ಯಾತ್ಮಕ್ಕೆ ಸರ್ವಪುರಸ್ಕಾರ ದೊರೆತದ್ದಾದರೆ ಉಳಿದ ಸಮಸ್ಯೆಗಳು ತಾವಾಗಿಯೇ ಬಗೆಹರಿಯುತ್ತವೆ’ ಎಂದಿದ್ದರು ರಾಮಕೃಷ್ಣ- ವಿವೇಕಾನಂದರ ಅಪಾರ ಪ್ರಭಾವಕ್ಕೆ ಒಳಗಾಗಿದ್ದ ಕುವೆಂಪು. ಆಶ್ರಮ ಇಂತಹದೊಂದು ಹಂಬಲದ ಹಣತೆಯಂತೆ ಕಾಣುತ್ತದೆ.
ತುಮಕೂರಿನ ಶ್ರೀರಾಮಕೃಷ್ಣ ಆಶ್ರಮವು ಈವರೆಗೆ ಏನಿಲ್ಲವೆಂದರೂ ಎಂಟು ಸಾವಿರ ಮಹಿಳೆಯರನ್ನು ಜೀವಂತ ದುರ್ಗಾಪೂಜೆಯ ಪರಿಕಲ್ಪನೆಯಲ್ಲಿ ಸತ್ಕರಿಸಿ ಅವರಿಗೆ ಸಹಾಯಹಸ್ತ ಚಾಚಿದೆ. ಅನೇಕ ಸಂದರ್ಭಗಳಲ್ಲಿ ಅವರಿಗೆ “ಪೂಜೆ’ಗೆ ಮುನ್ನ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ, ಉಚಿತವಾಗಿ ಔಷಧಿಗಳನ್ನು ನೀಡಿದ್ದೂ ಇದೆ.
ಸಿಬಂತಿ ಪದ್ಮನಾಭ ಕೆ., ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.