ಗ್ರಹಣ ನೋಡಿದ್ರೆ ಏನಾಗ್ಬಿಡುತ್ತೆ?
ನಂಬಿಕೆ, ಅಪನಂಬಿಕೆಗಳ ಸುತ್ತ...
Team Udayavani, Dec 25, 2019, 4:52 AM IST
ನಾವು ಮನುಷ್ಯರು ಎಷ್ಟೆಲ್ಲ ಓದಿಕೊಂಡಿದ್ದರೂ, ಗ್ರಹಣ ಅಂದಾಕ್ಷಣ ಹೆದರಿ ಮನೆಯೊಳಗೆ ಅಡಗಿ ಕೂರುತ್ತೇವೆ. ಆದರೆ, ಪ್ರಾಣಿ-ಪಕ್ಷಿಗಳು ಹೀಗೇನೂ ಯೋಚಿಸದೆ ತಮ್ಮ ಪಾಡಿಗೆ ತಾವು ಆರಾಮಾಗಿ ಬದುಕುವುದಿಲ್ಲವೆ? ಎಂದಳು ಅಮ್ಮ…
ಹತ್ತಾರು ವರ್ಷಗಳ ಹಿಂದಿನ ಮಾತು. ಅಂದು ಸೂರ್ಯಗ್ರಹಣ. ಟಿ.ವಿಯಲ್ಲಿ ಈಗಿನಂತೆ ಜ್ಯೋತಿಷಿಗಳ ಅಬ್ಬರವೇನೂ ಇರಲಿಲ್ಲ. ಆದರೆ, ಗ್ರಹಣದ ದಿನದ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿದ್ದವು .ಮಧ್ಯಾಹ್ನ ಕೆಲವು ನಿಮಿಷಗಳವರೆಗೆ ಭಾಗಶಃ ಸೂರ್ಯ ಗ್ರಹಣವಿತ್ತು. ನಾನಾಗ ಐದೋ ಆರೋ ತಿಂಗಳ ಗರ್ಭಿಣಿ. ಅಣ್ಣ ಊರಿನಿಂದ ಬಂದಿದ್ದ. ಇಬ್ಬರೂ ಸೂರ್ಯಗ್ರಹಣ ನೋಡಲೆಂದು ಮನೆ ಮೇಲೆ ಹೋದೆವು. ಎಕ್ಸ್ ರೇ ಶೀಟ್‌ನಿಂದ ಸೂರ್ಯಗ್ರಹಣ ನೋಡಿ, ಮೆಟ್ಟಲಿಳಿದು ಬರುವಾಗ ರಸ್ತೆ ಕಡೆ ಗಮನ ಹರಿಸಿದೆ. ಒಬ್ಬರೂ ಕಾಣಿಸಲಿಲ್ಲ.
ಸಾಯಂಕಾಲ ಮನೆಯ ಓನರ್, “ಸೂರ್ಯಗ್ರಹಣ ನೋಡಿದ್ರಾ?’ ಅಂದರು. “ಹಾಂ, ಹೌದು ಆಂಟಿ’ ಅಂದೆ. “ಬಸುರಿ ಹೆಂಗಸು ಗ್ರಹಣ ಕಾಲದಲ್ಲಿ ಹಾಗೆಲ್ಲ ಹೊರಗೆ ಬರಬಾರದು’ ಅಂದರು. ನಕ್ಕು ಸುಮ್ಮನಾದೆ. ಪಕ್ಕದ ಮನೆಯವರು ತಮ್ಮ ಮನೆಯ ಕಿಟಕಿಯಿಂದಲೇ ಇಣುಕಿ- “ಮಗು ಮೇಲೆ ಗ್ರಹಣ ಕೆಟ್ಟ ಪ್ರಭಾವ ಬೀರುತ್ತೇರಿ. ಪಾಪ, ಅವರಿಗೆ ಗೊತ್ತಿಲ್ಲ ಅನಿಸುತ್ತೆ’ ಅಂತ ದನಿಗೂಡಿಸಿದರು. ಅಲ್ಲಿಯವರೆಗೂ ಎಷ್ಟೊಂದು ಗ್ರಹಣಗಳನ್ನು ಯಾವುದೇ ಭಯವಿಲ್ಲದೆ ನೋಡಿದ್ದ ನನಗೆ ಒಳಗೊಳಗೇ ಭಯವಾಯ್ತು. “ಯಾಕೆ, ಏನಾಗುತ್ತೆ? ಮಗು ಮೇಲೆ ಪ್ರಭಾವ ಅಂದ್ರೆ, ಯಾವ ರೀತಿಯಲ್ಲಿ?’ ಅಂದಿದ್ದಕ್ಕೆ ಇಬ್ಬರೂ ಹಾರಿಕೆ ಉತ್ತರ ಕೊಟ್ಟರಾದರೂ, ಅವರ ಮಾತುಗಳು ನನ್ನ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ್ದಂತೂ ಸತ್ಯ.
ನಮ್ಮ ಮನೆಯವರು ಬ್ಯಾಂಕ್‌ನಿಂದ ಬಂದ ತಕ್ಷಣ, ಗ್ರಹಣ ನೋಡಿದ ಬಗ್ಗೆ ಹೇಳಿದಾಗ, ಏನೂ ಆಗಲ್ಲ ಸುಮ್ಮನಿರು ಅಂತ ಧೈರ್ಯ ಹೇಳಿದರು. ನನ್ನ ತಲೆಯಲ್ಲಿ ಮಾತ್ರ ಮಗುವಿನ ಮೇಲೆ ಗ್ರಹಣ ಪ್ರಭಾವ ಬಿರುತ್ತೆ ಅಂದಿದ್ದು ಕಳವಳ ಉಂಟು ಮಾಡಿತ್ತು. ಅಮ್ಮನಿಗೆ ಫೋನ್ ಮಾಡಿ ಕೇಳುವ ಧೈರ್ಯವೂ ಬರಲಿಲ್ಲ ರಾತ್ರಿ 9 ಗಂಟೆಗೆ ಅಪ್ಪನ ಫೋನ್ ಬಂತು. ಫೋನ್ ಎತ್ತಿದವಳೇ- “ಅವ್ವಿ (ಅಮ್ಮ)ಗೆ ಫೋನ್ ಕೊಡು’ ಅಂತ ಹೇಳಿ, ಎಲ್ಲವನ್ನೂ ಅಮ್ಮನಿಗೆ ಹೇಳಿದೆ. “ಏನೂ ಆಗೋದಿಲ್ಲ. ನಾವು ಮನುಷ್ಯರು .ಗ್ರಹಣ ಅಂತ ಹೆದರಿ ಮನೆಯೊಳಗೆ ಕೂರ್ತಿವಿ. ಪ್ರಾಣಿ-ಪಕ್ಷಿಗಳು ಏನನ್ನೂ ವಿಚಾರ ಮಾಡದೆ ಬದುಕುವುದಿಲ್ಲವೇ? ತಲೆ ಕೆಡಿಸಿಕೊಳ್ಳಬೇಡ’ ಅಂದಳು, ಭೂಗೋಳ ಓದಿದ ಅವ್ವ.
ಅಮ್ಮಮ್ಮ (ಅಜ್ಜಿ), ಗ್ರಹಣ ಮುಗಿದ ಮೇಲೆ ಮನೆಯ ಎಲ್ಲ ಅಡುಗೆಯನ್ನು ಹಸುಗಳಿಗೆ ಹಾಕಿ, ಬಹಳ ದಿನ ಬಾಳಿಕೆ ಬರುವ ತುಪ್ಪ, ಹಪ್ಪಳ, ಉಪ್ಪಿನಕಾಯಿಯಂಥವನ್ನು ಮಾತ್ರ ಇಟ್ಟುಕೊಳ್ಳುತ್ತಿದ್ದಳು. ಮನೆಯೊಳಗಿದ್ದ ಹಾಸಿಗೆ, ಪಾತ್ರೆ ತೊಳೆಯುವುದು, ಇರೋ ನೀರನ್ನು ಚೆಲ್ಲುವುದು ಸ್ನಾನ, ಪೂಜೆ… ಎಲ್ಲವನ್ನೂ ಪಾಲಿಸುತ್ತಿದ್ದಳು. ಆದರೆ ಅಜ್ಜ ಗ್ರಹಣ ನೋಡಲು ನಮ್ಮನ್ನೆಲ್ಲ ಶಾಲೆಯ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಇಬ್ಬರಲ್ಲೂ ಎಂಥ ವ್ಯತ್ಯಾಸ! ಯಾವುದು ಸರಿ, ಯಾವುದು ತಪ್ಪು?- ಇದೆಲ್ಲಾ ಅವತ್ತು ಪದೇಪದೆ ನೆನಪಾದರೂ, ನನ್ನ ಮನಸ್ಸು ಮಾತ್ರ ಭಯದಿಂದ ಮುದ್ದೆಯಾಗಿತ್ತು.
ಅಂಗವಿಕಲ, ಬುದ್ಧಿಮಾಂದ್ಯ ಮಗು ಹುಟ್ಟಿಬಿಟ್ಟರೆ, ನಾನು ಮಾಡಿದ ತಪ್ಪಿನಿಂದ (ಅದು ತಪ್ಪೇ?) ಮಗು ಕಷ್ಟ ಅನುಭವಿಸುವಂತಾದರೆ…ಎಂಬೆಲ್ಲ ಯೋಚನೆಗಳು ಜೊತೆಯಾಗಿದ್ದವು. ಮುಂದಿನ ಬಾರಿ ಚೆಕಪ್‌ಗೆ ಹೋದಾಗ “ಡಾಕ್ಟರ್, ಮಗು ಚೆನ್ನಾಗಿದೆಯಾ?’ ಅಂತ ಹೆದರಿ ಕೇಳಿದ್ದೆ. “ಫಸ್ಟ್ ಕ್ಲಾಸ್ ಆಗಿದೆ’ ಅಂತ ಅವರಂದರೂ, “ಗ್ರಹಣ ಪ್ರಭಾವ ಬೀರುತ್ತೆ’ ಅಂದ ನೆರೆಹೊರೆಯವರ ಮಾತೇ ಹೆಚ್ಚಾಗಿ ಕಾಡುತ್ತಿತ್ತು.
ದಸರೆಯ ಹಿಂದಿನ ದಿನ, ಡೆಲಿವರಿಗಾಗಿ ಆಸ್ಪತ್ರೆಗೆ ಹೋದೆವು. ಆಯುಧ ಪೂಜೆಯ ದಿನ ಆಸ್ಪತ್ರೆಯಲ್ಲಿ ಎಲ್ಲವನ್ನೂ ಅದೇ ತಾನೇ ಪೂಜೆ ಮಾಡಿ ಪ್ರಸಾದ ಹಂಚಿ ಸಂಭ್ರಮದಲ್ಲಿದ್ದರೆ, ನಾನು ಮಾತ್ರ ಹುಟ್ಟುವ ಮಗುವಿನ ಬಗ್ಗೆ ಚಿಂತಿತಳಾಗಿದ್ದೆ. ಕೊನೆಗೂ ರಾತ್ರಿ 1 ಗಂಟೆ ಹೊತ್ತಿಗೆ, ಆಸ್ಪತ್ರೆ ಹಾರಿ ಹೋಗುವಂತೆ ಅಳುತ್ತಾ ಮಗ ಹುಟ್ಟಿದ. ಮಂಪರಿನಿಂದ ಎಚ್ಚರವಾದಾಗ ನಾನು ಮೊದಲು ಕೇಳಿದ್ದು- “ಡಾಕ್ಟರ್ ಮಗು ಸರಿಯಾಗಿದೆಯಾ?’ “ಫಸ್ಟ್ ಕ್ಲಾಸ್ ಇದ್ದಾನೆ’ ಅವರದ್ದು ಅದೇ ಉತ್ತರ.
ಕಣ್ತೆರೆದು ಸ್ವಲ್ಪ ಹೊತ್ತಾದರೂ ನರ್ಸ್, ಮಗುವನ್ನು ನನಗೆ ತೋರಿಸಲೇ ಇಲ್ಲ. ಅಣ್ಣಂದಿರು, ಅತ್ತೆ, ಅಮ್ಮ, ನಮ್ಮ ಮನೆಯವರು ಮಾತನಾಡುವ, ನಗುವ ಸದ್ದು ಕೇಳಿದರೂ ಯಾಕೋ ಸಮಾಧಾನವಿಲ್ಲ. ನರ್ಸ್ ಬಂದಾಗ, “ಮಗುವಿನ ಕೈ-ಕಾಲು ಸರಿ ಇದೆಯಾ? ಎಂದು ಕೇಳಿದೆ. “ಹಾಂ, ಸರಿ ಇದೆ. ಯಾಕೆ, ಮೊದಲನೇ ಮಗುವಿನದ್ದು ಸರಿ ಇಲ್ವಾ? ಅಂತ ಕನಿಕರದಿಂದ ನೋಡಿದ್ದಳು.
ದಿನಗಳೆದಂತೆ ಮಗ ಸಹಜವಾಗಿ ಬೆಳೆಯುತ್ತಿದ್ದರೂ, ನನ್ನ ತಲೆಯಿಂದ, ಮಗುವಿನ ಮೇಲೆ ಗ್ರಹಣದ ಪ್ರಭಾವ ಅಂತ ಹೇಳಿದ್ದು ಮರೆಯಾಗಿರಲಿಲ್ಲ. ಮಗುವಿಗೆ ಸರಿಯಾಗಿ ಕಿವಿ ಕೇಳುತ್ತಾ, ಕಣ್ಣು ಕಾಣುತ್ತಾ, ಮಾತು ಬರುತ್ತಾ, ಬುದ್ಧಿ ಸರಿಯಾಗಿದೆಯಾ… ಅಂತ ಪರೀಕ್ಷಿಸುತ್ತಲೇ ವರ್ಷಗಳನ್ನು ಕಳೆದೆ. ಪ್ರತಿ ಬಾರಿಯ ಗ್ರಹಣದಲ್ಲೂ ಆ ಮಾತುಗಳು ನೆನಪಾಗುತ್ತವೆ. ಯಾವುದು ಸರಿ, ಯಾವುದು ಮೂಢನಂಬಿಕೆ ಎಂಬ ಪ್ರಶ್ನೆಯೂ ಕಾಡುತ್ತದೆ.
ಶೋಭಾ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.