ಗಿಫ್ಟ್ ಏನು ಕೊಡಲಿ?
ಉಡುಗೊರೆ ಲೆಕ್ಕಾಚಾರ
Team Udayavani, Jan 29, 2020, 4:33 AM IST
ಉಡುಗೊರೆ, ಸಂಬಂಧಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುವ ವಸ್ತು. ಉಡುಗೊರೆ ನೀಡುವುದರಿಂದ ಸಂಬಂಧಗಳ ನಡುವಿನ ಪ್ರೀತಿ, ಆಪ್ತತೆ ಹೆಚ್ಚುತ್ತದೆ. ಜನ್ಮದಿನ, ವಿವಾಹ, ವಾರ್ಷಿಕೋತ್ಸವ, ರಕ್ಷಾಬಂಧನ, ಮದುವೆ, ಉಪನಯನ, ನಾಮಕರಣ, ಮುಂತಾದ ಸಂದರ್ಭಗಳಲ್ಲಿ ಉಡುಗೊರೆ ನೀಡಬೇಕಾಗುತ್ತದೆ. ಮೊದಲೆಲ್ಲಾ ಮದುವೆ, ಉಪನಯನಗಳಲ್ಲಿ ಹೆತ್ತವರಿಗೆ ಅನುಕೂಲವಾಗಲಿ ಎಂದು ಉಡುಗೊರೆಗಳನ್ನು ಧನದ ರೂಪದಲ್ಲಿ ಕೊಡುತ್ತಿದ್ದರು. ಆದರೀಗ ಹಣದ ಬದಲು, ತಮ್ಮ ಪ್ರತಿಷ್ಠೆಗೆ ತಕ್ಕಂತೆ ವಸ್ತುಗಳನ್ನು ಗಿಫ್ಟ್ ಆಗಿ ಕೊಡುತ್ತಾರೆ.
ಆದರೆ, ಈ ಗಿಫ್ಟ್ ಕೊಡೋದು ಸುಲಭದ ವಿಷಯವಲ್ಲ. ಯಾಕಂದ್ರೆ, ನಮ್ಮ ಬಜೆಟ್/ ಪ್ರತಿಷ್ಠೆಗೆ ತಕ್ಕಂತೆ, ಪಡೆಯುವವರಿಗೆ ಇಷ್ಟವಾಗುವ, ಅವರ ಉಪಯೋಗಕ್ಕೆ ಬರುವ ವಸ್ತು ಯಾವುದು ಅಂತ ಹುಡುಕುವುದು ಕಷ್ಟ. ಇದುವರೆಗೆ ಯಾರೂ ಕೊಡದ ಉಡುಗೊರೆ ಕೊಡಬೇಕು ಅಂತ ಅಂದುಕೊಂಡರೆ, ಮತ್ತಷ್ಟು ತಲೆ ಉಪಯೋಗಿಸಬೇಕಾಗುತ್ತೆ. ಈ ವಿಷಯದಲ್ಲಿ ಕೆಲವೊಂದು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ, ಗಿಫ್ಟ್ ಖರೀದಿಸುವುದು ಸುಲಭವಾಗುತ್ತದೆ.
-ಗಿಫ್ಟ್ ಪಡೆಯುವವರ ಆಸಕ್ತಿ, ಅಭಿರುಚಿ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಉಡುಗೊರೆ ನೀಡಿ. ಉದಾ: ಪುಸ್ತಕ ಪ್ರಿಯರಿಗೆ, ಅವರ ಸಂಗ್ರಹದಲ್ಲಿ ಇರದ ಅಮೂಲ್ಯ ಪುಸ್ತಕವನ್ನು ಉಡುಗೊರೆ ನೀಡಬಹುದು. ಗಾರ್ಡನಿಂಗ್‌ನಲ್ಲಿ ಆಸಕ್ತಿ ಇದ್ದವರಿಗೆ, ಹೊಸ ತಳಿಯ ಗಿಡ/ ಬೀಜ ನೀಡಿದರೆ ಖುಷಿಯಾಗುತ್ತದೆ.
– ಉಡುಗೊರೆ ಧನದ ರೂಪದಲ್ಲಿದ್ದರೆ, ಪಡೆದವರಿಗೆ ಆ ಹಣವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ಹಾಗಾಗಿ, ಉಡುಗೊರೆಯಾಗಿ ಹಣ ಕೊಡುವುದು ಎಂದಿಗೂ ಒಳ್ಳೆಯ ಐಡಿಯಾ.
-ವಸ್ತು ರೂಪದಲ್ಲಿ ಗಿಫ್ಟ್ ಕೊಡುವಾಗ, ಅವರ ಬಳಿ ಮೊದಲೇ ಸಮಾಲೋಚಿಸಿ, ಅವರಿಗೆ ಉಪಯೋಗವಾಗುವ ವಸ್ತುಗಳನ್ನೇ ನೀಡಿ.
-ನಮಗಿಂತ ಶ್ರೀಮಂತರಿಗೆ, ಅವರ ಯೋಗ್ಯತೆಗೆ ಅನುಸಾರವಾಗಿ ಉಡುಗೊರೆ ಕೊಡಲು ಹೋಗಿ ಸಾಲ ಮಾಡಿಕೊಳ್ಳಬೇಡಿ. ನೀವು ಕೊಟ್ಟ ಉಡುಗೊರೆ/ಹಣದ ಅಗತ್ಯ ಆ ಶ್ರೀಮಂತರಿಗೆ ಇರುವುದಿಲ್ಲ. ಹಾಗಾಗಿ, ನಿಮ್ಮ ಇತಿಮಿತಿಯಲ್ಲೇ ಚಂದದ ಉಡುಗೊರೆ ನೀಡಿ.
-ಉಡುಗೊರೆ ಪಡೆದುಕೊಳ್ಳುವವರು ಬಡವರಾದರೆ, ಕಷ್ಟಪಟ್ಟು ಮದುವೆ/ಉಪನಯನ/ ನಾಮಕರಣ ಮಾಡುತ್ತಿರುವವರಾದರೆ, ಆಗ ನಿಮ್ಮ ಯೋಗ್ಯತೆಗೆ ಮೀರಿ, ಅವರಿಗೆ ಅಗತ್ಯ ಇರುವುದನ್ನು ನೀಡಿ. ಉಡುಗೊರೆ ಧನದ ರೂಪದಲ್ಲಿದ್ದರೆ ಒಳ್ಳೆಯದು.
-ವಧು-ವರರಿಗೆ ಉಡುಗೊರೆ ನೀಡುವಾಗ, ಅವರು ಹೊಸ ಸಂಸಾರ ಹೂಡುವುದಾದರೆ, ಗೃಹೋಪಯೋಗಿ ವಸ್ತುಗಳನ್ನು (ಅವರ ಅಗತ್ಯವನ್ನು ವಿಚಾರಿಸಿ) ನೀಡಿ.
-ಸಣ್ಣ ಮಕ್ಕಳ ಹುಟ್ಟುಹಬ್ಬಗಳಲ್ಲಿ, ಆಟಿಕೆಗಳ ಬದಲು ಪುಸ್ತಕ ಅಥವಾ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ವಸ್ತುಗಳನ್ನು ನೀಡಬಹುದು.
-ಗಿಫ್ಟ್ ಕೂಪನ್/ ಗಿಫ್ಟ್ ವೋಚರ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಅದರಿಂದ ಅವರು ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದು.
– ಯಾವತ್ತಿಗೂ, ಇನ್ನೊಬ್ಬರು ನಿಮಗೆ ಕೊಟ್ಟ ಉಡುಗೊರೆಯನ್ನೇ ನೀವು ಬೇರೆಯವರಿಗೆ ದಾಟಿಸಬೇಡಿ.
-ನಿಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಉಡುಗೊರೆ (ರಿಟರ್ನ್ ಗಿಫ್ಟ್) ನೀಡುವುದಾದರೆ, ಎಲ್ಲ ಅತಿಥಿಗಳೂ ಒಂದೇ ಬಗೆಯ ವಸ್ತುವನ್ನು ನೀಡಿ. ಅದರಲ್ಲಿ ತಾರತಮ್ಯ ಮಾಡುವುದು ಸಣ್ಣತನವಾಗುತ್ತದೆ. (ಪುಸ್ತಕ, ಸಸ್ಯಗಳನ್ನು ನೀಡುವುದು ಈಗಿನ ಟ್ರೆಂಡ್)
-ಗಿಫ್ಟ್ ಪ್ಯಾಕ್ ಒಳಗೆ, ಹಸ್ತಾಕ್ಷರದಲ್ಲಿ ಶುಭಾಶಯಗಳನ್ನು ಬರೆದಿಟ್ಟರೆ, ಆ ಉಡುಗೊರೆ ಮತ್ತಷ್ಟು ಆಪ್ತ ಎನ್ನಿಸುತ್ತದೆ.
-ಅನಿತಾ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.