ಹ್ಞೂಂ ಅಂತೀಯ, ಊಹ್ಞೂಂ ಅಂತೀಯಾ…
Team Udayavani, Feb 7, 2018, 4:55 PM IST
ಕಾಲ ಬದಲಾಗಿದೆ… ಈ ಮಾತು ಎಲ್ಲ ವಿಷಯಕ್ಕೂ ಅನ್ವಯಿಸುತ್ತದೆ. ಊಟ, ಉಡುಗೆ, ಸಂಸ್ಕೃತಿ, ಜೀವನಶೈಲಿ… ಹೀಗೆ ಎಲ್ಲದರಲ್ಲೂ ಬದಲಾವಣೆಗಳಾಗಿವೆ. ಇನ್ನು ಆ ಬದಲಾವಣೆಯ ಗಾಳಿ ವಧು ಪರೀಕ್ಷೆಯನ್ನು ತಟ್ಟದೇ ಬಿಟ್ಟಿàತೇ? ಈಗ ಪ್ರತಿಯೊಬ್ಬರ ಮನೆಯ ಒಂದೊಂದು ಕುಡಿಯೂ ಬೆಂಗಳೂರಿನ ಪ್ರಜೆ. ವಧುಪರೀಕ್ಷೆಗೆಂದು ಊರಿಗೋಡುವ ಬದಲು ಈ ಮಾಯಾನಗರಿಯಲ್ಲೇ ಆ ಹುಡುಗನಿಗೆ ಮುಖಾಮುಖೀ ಆಗುತ್ತಾಳೆ ಹೆಣ್ಣು. ಸಂಬಂಧಿಕರ ಮನೆಯಲ್ಲೋ, ಸ್ನೇಹಿತರ ಮನೆಯಲ್ಲೋ “ಅವಳು’ ತಯಾರಿಸುವ ಉಪ್ಪಿಟ್ಟಿನ ಹಿಂದೆ ಘಮ್ಮೆನ್ನುವ ರಸಕಾವ್ಯವೂ ಇದೆ…
ಒಂದು ದಿನ ಅಮ್ಮ ಮನೆಯಿಂದ ಬೆಳಗ್ಗೆ ಬೆಳಗ್ಗೆ ಫೋನು ಮಾಡಿದ್ದಳು. “ಏನೇ, ಗಂಟೆ ಏಳಾದರೂ ಇನ್ನೂ ಎದ್ದಿಲ್ವಾ?’ ಎಂಬ ಗದರಿಕೆಯ ಸದ್ದಿಲ್ಲ. ತುಂಬಾ ಅನುನಯದಿಂದ ಮಾತು ಶುರುಮಾಡಿದ್ದಳು. “ಈ ವೀಕೆಂಡ್ ಏನು ಪ್ಲಾನ್ ನಿಂದು?’ ಎಂಬ ಪ್ರಶ್ನೆಯಲ್ಲೇ ಏನೋ ಅಡ್ಡವಾಸನೆ ಹೊಡೆಯಿತು. ಆಮೇಲೆ ನಿಧಾನಕ್ಕೆ, “ಈ ವೀಕೆಂಡ್ ಚಿಕ್ಕಮ್ಮನ ಮನೆಗೆ ಹೋಗ್ಬಾ. ತುಂಬಾ ದಿನಾ ಆಯ್ತು ಆ ಕಡೆ ಬರದೆ ಅಂತ ಹೇಳ್ತಿದುÉ..’ ಅಂದಳು. “ಅಮ್ಮಾ, ಈ ವಾರ ಟೈಮಿಲ್ಲ. ಫ್ರೆಂಡ್ಸ್ ಜೊತೆ ಮೂವಿಗೆ ಹೋಗ್ಬೇಕು’ ಅಂದ್ರೆ, “ಮೂವಿ ಎಲ್ಲಾ ಮುಂದಿನವಾರ.
ಈ ವಾರಾನೇ ಅಲ್ಲಿಗೆ ಹೋಗು’ ಅಂತ ಒಂದೇ ಹಠ. ಈ ವಾರವೇ ಯಾಕೆ ಅಂತ ಆಮೇಲೆ ಗೊತ್ತಾಯ್ತು, ಚಿಕ್ಕಪ್ಪನ ಕಡೆಯ ಹುಡುಗನೊಬ್ಬ ಈ ವಾರ ಅಲ್ಲಿಗೆ ಬರಲಿದ್ದು, ನಾನೂ ಅಲ್ಲಿಗೆ ಹೋದರೆ ಒಬ್ಬರನ್ನೊಬ್ಬರು ನೋಡಬಹುದು ಅಂತ ಹೀಗೆ ಹೇಳುತ್ತಿದ್ದಾರೆ ಅಂತ. “ಫೇಸ್‌ಬುಕ್ಕಲ್ಲಿ ನಿನ್ನ ನೋಡಿದ್ದಾನಂತೆ ಹುಡುಗ. ನಿಂಗಿಷ್ಟ ಆದರೆ ಮಾತ್ರ ಮುಂದಿನ ಮಾತುಕತೆ’ ಅಂದಳು ಅಮ್ಮ. ಹೀಗೆ ಸದ್ದಿಲ್ಲದೆ ಅಮ್ಮ ಊರಲ್ಲಿದ್ದುಕೊಂಡೇ ಚಿಕ್ಕಮ್ಮನ ನೇತೃತ್ವದಲ್ಲಿ ನನ್ನನ್ನು ವಧು ಪರೀಕ್ಷೆಗೆ ಸಜ್ಜು ಮಾಡುವ ಪ್ರಯತ್ನದಲ್ಲಿದ್ದಳು.
ಡಿಗ್ರಿ ಮುಗಿಸಿದ ಮೇಲೆ, ಮನೆಯ ಕಡೆಯಿಂದ ಆಗಾಗ ಮದುವೆಯ ಒತ್ತಡ ಬರುತ್ತಲೇ ಇತ್ತು. ಮನೆಯಲ್ಲಿಯೇ ಉಳಿದರೆ ಮದುವೆ ಮಾಡುತ್ತಾರೆ ಎಂಬ ಕಾರಣಕ್ಕೇ ನಾನು ಕೆಲಸದ ನೆಪದಲ್ಲಿ ಬೆಂಗಳೂರು ಸೇರಿದ್ದೆ. ಓದು ಮುಗಿಯಿತಲ್ಲಾ, ಮದುವೆಯಾಗು ಅನ್ನುವ ಉಪದೇಶವಂತೂ ತಪ್ಪಿಲ್ಲ. ಇನ್ನೂ ಒಂದೆರಡು ವರ್ಷ ನನ್ನ ಸುದ್ದಿಗೇ ಬರಬೇಡಿ ಅಂದರೂ, “ಈಗ ಹುಡುಕೋಕೆ ಶುರುಮಾಡಿದರೆ ಇನ್ನೆರಡು ವರ್ಷಕ್ಕೆ ಮದುವೆ ಮಾಡೊºàದು. ಮದುವೆ ಅಂದ್ರೆ ಆಟ ಅಲ್ಲ, ಇನ್ನಾದ್ರೂ ಸ್ವಲ್ಪ ಸೀರಿಯಸ್ ಆಗು ಈ ಬಗ್ಗೆ’ ಅನ್ನುತ್ತಾರೆ.
ಇತ್ತೀಚೆಗಂತೂ ಇಲ್ಲಿ ಯಾವ ಸಂಬಂಧಿಕರ ಮದುವೆ, ನಾಮಕರಣ, ಗೃಹಪ್ರವೇಶ ನಡೆದರೂ, ಹೋಗು ಅಟೆಂಡ್ ಮಾಡು ಅಂತ ಅಮ್ಮ ಮನೆಯಿಂದಲೇ ಫೋನಿನಲ್ಲಿ ಅಸೈನ್‌ಮೆಂಟ್ ಹಾಕುತ್ತಿರುತ್ತಾಳೆ. “ಸ್ವಲ್ಪ ಚೆನ್ನಾಗಿ ರೆಡಿ ಆಗಿ ಹೋಗು’ ಅಂತ ಒತ್ತಿ ಒತ್ತಿ ಹೇಳುವುದನ್ನೂ ಅವಳು ಮರೆಯುವುದಿಲ್ಲ. ಸಂಬಂಧಿಕರು, ಫಂಕ್ಷನ್, ಅಲಂಕಾರ ಅಂದರೆ ನನಗೆ ಮೊದಲೇ ಅಲರ್ಜಿ. ಒಂದೆರಡು ಫಂಕ್ಷನ್‌ಗೆ ಹೋಗದೆ ಚಕ್ಕರ್ ಹಾಕಿದ್ದೆ. ಮತ್ತೆ ಫೋನ್ ಮಾಡಿ, “ನೀನು ಬಂದೇ ಬರಿ¤àಯ ಅಂತ ಅವರಿಗೆಲ್ಲ ಹೇಳಿದ್ದೆ, ಹೋಗೋಕೇನಾಗಿತ್ತು ರೋಗ?’ ಅಂತ ಬೈದಳು.
“ನಿಂಗ್ಯಾರು ಹೇಳು ಅಂದಿದ್ದು. ನಾನು ಬಂದೇ ಬರಿ¤àನಿ ಅಂತ ಅಗ್ರೀಮೆಂಟ್ ಏನಾದ್ರೂ ಮಾಡಿಕೊಂಡಿದ್ನಾ ನಿನ್ನ ನೆಂಟರ ಜೊತೆ?’ ಅಂತ ಅಧಿಕಪ್ರಸಂಗಿಯಂತೆ ಮಾತಾಡಿ ಮತ್ತೆ ಬೈಸಿಕೊಂಡೆ. ಆಮೇಲೆ ಅಪ್ಪನಿಂದ ಗೊತ್ತಾದ ವಿಷಯವೇನೆಂದರೆ, ಆ ಫಂಕ್ಷನ್‌ಗೆ ಹುಡುಗ ಮತ್ತು ಅವರ ಮನೆಯವರು ಬರಲಿದ್ದರಂತೆ. ಅವರು ನನ್ನನ್ನು ನೋಡಲಿ ಅಂತ ಅಪ್ಪ- ಅಮ್ಮ ಬಯಸಿದ್ದರು. ಅಂದರೆ, ಅಲ್ಲಿಗೇನಾದರು ಹೋಗಿದ್ದರೆ ನಾನು ನನಗೇ ಗೊತ್ತಿಲ್ಲದೆ ವಧು ಪರೀಕ್ಷೆ ಎದುರಿಸುತ್ತಿದ್ದೆ! ಸಂಬಂಧಿಕರ ಆ ಫಂಕ್ಷನ್‌ಗಳು ಕೇವಲ ಫಂಕ್ಷನ್ ಅಷ್ಟೇ ಅಲ್ಲ, ವಧು- ವರ ಅನ್ವೇಷಣೆಯ ಕೇಂದ್ರಗಳಾಗಿದ್ದವು.
ಆಫೀಸಿನಲ್ಲಿ ರಜೆ ಕೇಳುವ ತಾಪತ್ರಯವಿಲ್ಲ. ಊರಿಗೆ ಹೋಗಿ, ಅಕ್ಕಪಕ್ಕದ ಮನೆಯವರಿಗೆಲ್ಲಾ ಗೊತ್ತಾಗುವಂತೆ ಹುಡುಗನ ಕಡೆಯವರನ್ನು ಎದುರು ನೋಡುವ ಹಿಂಸೆಯೂ ಈಗ ಬೆಂಗಳೂರಿಗೆ ಬಂದ ಹೆಣ್ಣಿಗಿಲ್ಲ. “ಈಗಾಗಲೇ ಆ ಹುಡುಗೀನ ಆರು ಗಂಡುಗಳು ನೋಡ್ಕೊಂಡ್ ಹೋಗಿದ್ದಾರೆ’ ಅಂತ ಲೆಕ್ಕ ಹಾಕುವ ಪಕ್ಕದ ಮನೆಯ ಗಯ್ನಾಳಿಗಳೂ ಇಲ್ಲಿಲ್ಲ. ವೀಕೆಂಡ್‌ನಲ್ಲಿ ಸಿನಿಮಾಕ್ಕೆ ಹೋದಷ್ಟೇ ಸಲೀಸಾಗಿ ಬೆಂಗಳೂರಿನಲ್ಲಿ ವಧುಪರೀಕ್ಷೆ ಮುಗಿದು ಹೋಗುತ್ತದೆ, ಯಾರಿಗೂ ಗೊತ್ತೇ ಆಗದಂತೆ. ಕೆಲವೊಮ್ಮೆ ನಮಗೂ!
ನನ್ನ ಗೆಳತಿಯೂ ಇಂಥದ್ದೇ ಒಂದು ವಧು ಪರೀಕ್ಷೆ ಎದುರಿಸಿದ್ದಳು. ಆಕೆಯ ತಂದೆಯ ಬಾಲ್ಯ ಸ್ನೇಹಿತರೊಬ್ಬರ ಮಗನೂ ಬೆಂಗಳೂರಿನಲ್ಲೇ ಇದ್ದ. ಊರಿನಲ್ಲಿದ್ದ ಅಪ್ಪ, “ಹೋಗಿ ಅವನನ್ನು ಮೀಟ್ ಮಾಡಿ ಬಾ’ ಅಂತ ಹೇಳಿದರು. ಆ ಹುಡುಗನಿಗೂ ಅವರ ಅಪ್ಪನಿಂದ ಸೂಚನೆ ಸಿಕ್ಕಿತ್ತು. ಇಬ್ಬರೂ ಒಂದು ಭಾನುವಾರ ಮಾಲ್ ಒಂದರಲ್ಲಿ ಭೇಟಿಯಾದರು. ಒಂದಷ್ಟು, ಮಾತು, ಹರಟೆಯಲ್ಲಿ ತಮ್ಮ ಅಭಿರುಚಿಯನ್ನು ಹೇಳಿಕೊಂಡರು. ಪರಸ್ಪರ ಇಷ್ಟವಾದ ಮೇಲೆ, ಮನೆಯವರು ಮದುವೆಗೆ ತಯಾರಿ ನಡೆಸಿದರು. ಅದಕ್ಕೂ ಮೊದಲು, ಅವಳೂ ಒಂದೆರಡು ವಧು ಪರೀಕ್ಷೆಗಳನ್ನು ಇನ್‌ಡೈರೆಕ್ಟಾಗಿ ಎದುರಿಸಿದ್ದಳಂತೆ.
ಹಿಂದಿನ ಕಾಲದಲ್ಲಿ ವಧು ಪರೀಕ್ಷೆಗಳು ನಡೆಯುತ್ತಿದ್ದ ರೀತಿಯೇ ಬೇರೆ. ನೆಂಟರಿಷ್ಟರ ಮೂಲಕವೋ, ಬ್ರೋಕರ್‌ಗಳ ಮೂಲಕವೋ ಸಂಬಂಧಗಳು ಕುದುರುತ್ತಿದ್ದವು. ಜಾತಕಗಳು ಕೂಡಿದ ಮೇಲೆ, ಹುಡುಗನ ಕಡೆಯವರು ಹುಡುಗಿಯ ಮನೆಗೆ ಹೆಣ್ಣು ನೋಡಲು ಬರುತ್ತಿದ್ದರು. ಕೊಡು- ಕೊಳ್ಳುವಿಕೆಯ ಮಾತುಕತೆಯಾಗುತ್ತಿತ್ತು. ಹುಡುಗ- ಹುಡುಗಿ ಪರಸ್ಪರ ನೋಡುತ್ತಿದ್ದುದೇ ಆಗ. ಮಾತಾಡುವ ಅವಕಾಶ ಸಿಗುತ್ತಿದ್ದುದು ಅಪರೂಪ.
ಆಗಲೂ ಹುಡುಗಿಯ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿರಲಿಲ್ಲ. ಎರಡೂ ಕುಟುಂಬದವರಿಗೆ ಒಪ್ಪಿಗೆಯಾದರೆ ಅವಳೂ ಅದನ್ನು ಒಪ್ಪಿಕೊಳ್ಳಲೇಬೇಕಿತ್ತು. ಹುಡುಗಿಯೇನಾದರೂ, ತನಗೆ ಈ ಹುಡುಗ ಬೇಡ ಎಂದರೆ, “ನಿನ್ನ ಗೆಳತಿಯರಿಗೆಲ್ಲಾ ಮದುವೆಯಾಗಿದೆ, ಈಗಾಗಲೇ ಇಬ್ಬರು ಬಂದು ನೋಡಿ ಹೋಗಿದ್ದಾರೆ ನಿನ್ನ. ಇನ್ನೂ ಹೀಗೇ ಇದ್ದರೆ ಮುದುಕನನ್ನು ಮದುವೆಯಾಗ್ಬೇಕಾದೀತು’ ಅಂತ ಗದರಿ ಮದುವೆಗೆ ಒಪ್ಪಿಸುತ್ತಿದ್ದರು. ಅವರ ಪ್ರಕಾರ, ಹೆಚ್ಚು ಹೆಚ್ಚು ಹುಡುಗರು ಬಂದು ನೋಡಿದರೆ, ಹೆಚ್ಚೆಚ್ಚು ವಯಸ್ಸಾದಂತೆ ಲೆಕ್ಕ.
ಆದರೆ, ಈಗ ಆ ಕಾಲ ಬದಲಾಗಿದೆ. ಶಾಪಿಂಗ್‌ಗೇ ದಿನವಿಡೀ ವ್ಯಯಿಸುವ ಹುಡುಗಿಯರು, ಕಾಫಿ- ಉಪ್ಪಿಟ್ಟು ಕೊಡುವ ಗ್ಯಾಪಿನಲ್ಲಿ ಹುಡುಗನನ್ನು ಆರಿಸುತ್ತಾರೆಯೇ? ನೋ, ಛಾನ್ಸ್. ಉದ್ಯೋಗದಲ್ಲಿರುವ ಹುಡುಗಿಯರನ್ನು ಮದುವೆಗೆ ಒಪ್ಪಿಸುವುದು ಕೂಡ ಈಗ ಕಷ್ಟವೇ. 25ರ ಹುಡುಗಿಯನ್ನು, ಏನೇ ಇನ್ನೂ ಮದುವೆಯಾಗಿಲ್ಲ ಅಂತ ಮೂದಲಿಸುತ್ತಾ ಅಜ್ಜಿಯರಂತೆ ಕಾಣುವ ಕಾಲವಲ್ಲ ಇದು. ಬಾಳ ಸಂಗಾತಿಯನ್ನು ಆರಿಸುವ ಸ್ವಾತಂತ್ರ್ಯ ಹೆಣ್ಣು- ಗಂಡು ಇಬ್ಬರಿಗೂ ಸಮಾನವಾಗಿ ಸಿಕ್ಕಿದೆ.
ಮೊದಲು ಅವರು ಪರಸ್ಪರ ಭೇಟಿಯಾಗುತ್ತಾರೆ. ನಂತರ ಹೆಣ್ಣು ನೋಡುವ ಶಾಸ್ತ್ರ ಮನೆಯವರ ಕಡೆಯಿಂದ ನಡೆಯುತ್ತದೆ. ಹೆಚ್ಚಿನವರು ಬೆಂಗಳೂರಿನಲ್ಲಿಯೇ ಉದ್ಯೋಗದಲ್ಲಿರುವುದರಿಂದ, ವಧು ಪರೀಕ್ಷೆಗಳು ಹೀಗೆ ನೆಂಟರ ಮನೆಯಲ್ಲೋ, ಕಾಫಿ ಡೇನಲ್ಲೋ ನಡೆಯುತ್ತವೆ. ಜಾತಕ, ಫೋಟೊ ತೋರಿಸುವ ಅಗತ್ಯವೂ ಇಲ್ಲ. ಹುಡುಗನ ಹೆಸರು ಹೀಗಿದೆ, ಫೇಸ್‌ಬುಕ್‌ನಲ್ಲಿದ್ದಾನಂತೆ, ಬೇಕಾದ್ರೆ ನೋಡು ಅನ್ನುತ್ತಾರೆ. ಎಫ್ಬಿ ಗೋಡೆಯ ಬರಹ ನೋಡಿ, ಇವನ ಹಣೆಬರಹ ಇಷ್ಟೇ ಅಂತ ಹುಡುಗನನ್ನು ರಿಜೆಕ್ಟ್ ಮಾಡಿದವರೂ ಇದ್ದಾರೆ.
ನೋಡಿದ ಹುಡುಗನನ್ನು ಒಪ್ಪಿಕೊಳ್ಳಲೇಬೇಕು ಎಂಬ ಒತ್ತಡವೂ ಇಲ್ಲ. ಅಯ್ಯೋ, ಅವನು ರಿಜೆಕ್ಟ್ ಮಾಡಿದ ಅಂತ ಕೊರಗುತ್ತ ಕೂರುವವರೂ ಕಡಿಮೆಯೇ. ಬೆಂಗಳೂರಿನಲ್ಲಿ ಬಹುತೇಕ ಎಲ್ಲ ಜಾತಿಗೆ ಸಂಬಂಧಿಸಿದ ವಧು-ವರರ ವೇದಿಕೆಗಳಿವೆ. ಅಲ್ಲಿ ಆಗಾಗ ವಧು- ವರಾನ್ವೇಷಣೆಯ ಕಾರ್ಯಕ್ರಮಗಳು ನಡೆಯುತ್ತವೆ. ಮದುವೆಗೆ ತಯಾರಿರುವ ಹುಡುಗ- ಹುಡುಗಿಯರು ಅಲ್ಲಿಗೆ ಬರುತ್ತಾರೆ. ಕೆಲವೆಡೆ ಜಾತಕಗಳ ವಿನಿಮಯ, ಪರಸ್ಪರ ಮಾತುಕತೆ ನಡೆದರೆ, ಇನ್ನೂ ಕೆಲವಡೆ ವೇದಿಕೆಯ ಮೇಲೆ ನಿಂತು ತಮ್ಮ ವಿವರ ನೀಡುವ ಪ್ರಕ್ರಿಯೆಯೂ ನಡೆಯುತ್ತದೆ. ಸ್ಟೇಜ್ ಮೇಲೆ ನಿಂತು ಮೈಕಿನಲ್ಲಿ ತಮ್ಮ ಹೆಸರು, ಉದ್ಯೋಗ, ಸಂಬಳ, ಎತ್ತರವನ್ನು ಹೇಳುವ ಪದ್ಧತಿಯೂ ಇದೆಯಂತೆ.
ಹುಡುಗ ಎಂಥವನೋ?: ಇದು ಗೆಳತಿಯೊಬ್ಬಳ ಕತೆ. ಮ್ಯಾಟ್ರಿಮೊನಿಯಲ್ಲಿ ಆಕೆಗೆ ಹುಡುಗನೊಬ್ಬನ ಪರಿಚಯವಾಗಿತ್ತು. ಇಬ್ಬರೂ ಮೀಟ್ ಮಾಡಿ, ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದುಕೊಂಡರು. ಇದೊಂಥರ, ಸ್ವಯಂಪ್ರೇರಿತ ವಧು-ವರ ಪರೀಕ್ಷೆ. ಎಷ್ಟೇ ಆದರೂ, ಇಲ್ಲಿಯವರೆಗೂ ಆ ಹುಡುಗನನ್ನು ಇವಳು ನೋಡಿಲ್ಲ. ಮ್ಯಾಟ್ರಿಮೊನಿ ಸೈಟ್‌ನಲ್ಲಿ ಬರೆದ ಪ್ರಕಾರ ಇಬ್ಬರ ಆಸಕ್ತಿ-ಅಭಿರುಚಿಗಳು ಮ್ಯಾಚ್ ಆಗುತ್ತಿದ್ದವು. ಆದರೆ, ಹುಡುಗನನ್ನು ಮೀಟ್ ಮಾಡೋ ದಿನ ಯಾವ ರೀತಿ ಡ್ರೆಸ್ ಹಾಕೋದು ಅಂತ ಇವಳಿಗೆ ಗೊಂದಲ.
ಇವಳು ತುಂಬಾ ಟ್ರೆಡಿಶನಲ್ ಹುಡುಗಿಯೇನೂ ಆಗಿರಲಿಲ್ಲ. ಹಾಗಾಗಿ ಜೀನ್ಸ್ ಹಾಕೋಣ ಅಂದುಕೊಂಡಳು. “ಏಯ್, ಹುಡುಗರಿಗೆ ಜೀನ್ಸ್ ಹಾಕೋ ಹುಡುಗಿಯರು ಇಷ್ಟ ಆಗಲ್ಲ ಕಣೇ’ ಅಂತ ರೂಮ್‌ಮೇಟ್ ಹೇಳಿ, ಗೊಂದಲ ಸೃಷ್ಟಿಸಿಬಿಟ್ಟಳು. ಹಾಗಂತ ಟ್ರೆಡಿಶನಲ್ ಆಗಿ ರೆಡಿ ಆಗಿ, ಆ ಹುಡುಗ ಇವಳಾÂರೋ ಹಳ್ಳಿ ಗುಗ್ಗು ಅಂತ ಅಂದುಕೊಂಡರೆ ಅಥವಾ ಮುಂದೊಂದು ದಿನ, “ನೀನು ಜೀನ್ಸ್ ಎಲ್ಲಾ ಹಾಕ್ತೀಯ? ಮತ್ಯಾಕೆ ಮೊದಲ ದಿನ ಗೌರಮ್ಮನ ಹಾಗೆ ಬಂದಿದ್ದಿ’ ಅಂತ ಮೂದಲಿಸಿದರೆ ಅಂತನ್ನಿಸಿತು. ಕೊನೆಗೆ ಅವಳಿಗೊಂದು ಡ್ರೆಸ್ ಸೆಲೆಕ್ಟ್ ಮಾಡಿಕೊಡುವಷ್ಟರಲ್ಲಿ ಎಲ್ಲರಿಗೂ ಸುಸ್ತಾಗಿ ಹೋಗಿತ್ತು.
ಮದುವೆಯೆಂಬ ಮ್ಯಾಟ್ರಿಮೋನಿಯಲ್: ನಿಮ್ಮ ಸಂಬಂಧಿಕರ ಬಳಗವನ್ನು ಒಮ್ಮೆ ಗಮನಿಸಿ ನೋಡಿ. ಅವರಲ್ಲಿ ಹತ್ತಾರು ಮದುವೆಗಳನ್ನು ಮಾಡಿಸಿದವರಿರುತ್ತಾರೆ. ಹಾಗಂತ ಅವರು ಪುರೋಹಿತರಲ್ಲ, ಬ್ರೋಕರ್ ಕೂಡ ಅಲ್ಲ. ಆದರೂ, ಎಲ್ಲಿಯದೋ ಹುಡುಗನಿಗೆ, ಇನ್ನೆಲ್ಲಿದೆಯೋ ಹುಡುಗಿಯ ನಂಟು ಬೆಸೆಯುತ್ತಾರೆ. ಮದುವೆ, ಗೃಹಪ್ರವೇಶ ಮುಂತಾದ ಯಾವ ಕಾರ್ಯಕ್ರಮವನ್ನೂ ಇವರು ಮಿಸ್ ಮಾಡಿಕೊಳ್ಳುವುದಿಲ್ಲ. ಅಲ್ಲಿ ಅವರ ಕಣ್ಣು ಅವಿವಾಹಿತ ಹುಡುಗ- ಹುಡುಗಿಯರ ಮೇಲೇ ಇರುತ್ತದೆ. ನೀನು ಯಾರ ಮಗಳು, ನೀನು ಎಲ್ಲಿ ಕೆಲಸ ಮಾಡುತ್ತಿದ್ದೀಯ ಎಂದೆಲ್ಲಾ ಮಾತಾಡಿಸಿ ವಿಚಾರ ಸಂಗ್ರಹಿಸಿರುತ್ತಾರೆ.
ಇನ್ಯಾರಾದರೂ, ಅವರ ಹತ್ತಿರ ಬಂದು, “ನಮ್ಮ ಮಗನಿಗೊಂದು ಹುಡುಗಿ ಇದ್ರೆ ಹೇಳಿ’ ಅಂತ ಕೇಳಿದರೆ ಸಾಕು. ಅವರು ತಮ್ಮ ನೆನಪಿನ ಬುತ್ತಿಯಲ್ಲಿನ ಯಾವ ಹುಡುಗಿ ಇವರ ಹುಡುಗನಿಗೆ ಸೂಟ್ ಆಗಬಹುದೆಂದು ನೋಡಿ, ಹೆಸರು- ಊರು ಸೂಚಿಸುತ್ತಾರೆ. ಕೆಲವೊಮ್ಮೆ ಎರಡೂ ಕುಟುಂಬದವರಿಗೆ ಪರಿಚಯ ಇರುವುದರಿಂದ, ಸ್ವತಃ ಮುಂದೆ ನಿಂತು ಮಾತುಕತೆಯನ್ನೂ ನಡೆಸುತ್ತಾರೆ. ಬೆಳೆದು ನಿಂತ ಹುಡುಗ- ಹುಡುಗಿಯರು ಇಂಥ ಫಂಕ್ಷನ್‌ಗಳಿಗೆ ಬರಲೇಬೇಕು. ಬಂದರಷ್ಟೇ ಸಾಲದು, ತಮ್ಮನ್ನು ಎಲ್ಲರೂ ಗುರುತಿಸುವಂತೆ ನಡೆದುಕೊಳ್ಳಬೇಕು ಅಂತ ಹಿರಿಯರು ಹೇಳುವುದು ಈ ಕಾರಣಕ್ಕೇ.
* ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.