ಗ್ಯಾಲರಿಯಲ್ಲಿ ಅರಳಿದ ಅಬ್ಬಲ್ಲಿಗೆ ಹೂವು, ಹಾರಿ ಬಂದ ಚಿಟ್ಟೆ !
Team Udayavani, Feb 15, 2019, 12:30 AM IST
ಹತ್ತೂಂಬತ್ತು ವರುಷಗಳ ಹಿಂದೆ ಅಪ್ಪಟ ಹಳ್ಳಿಯ ನಾಡಿನಲ್ಲಿದ್ದವಳು ಮದುವೆಯಾಗಿ ಮುಂಬಯಿಗೆ ಬರುವಾಗ, ಸಾವಿರ ಮೈಲಿ ದೂರದ ಪ್ರಯಾಣದ ಜೊತೆಗೆ ಎಲ್ಲವೂ ಹೊಸದು. ಹಿಂದಿ ಅರ್ಥವಾಗುತ್ತಿತ್ತೇ ವಿನಃ ಸರಿಯಾಗಿ ಮಾತನಾಡಲು ಗೊತ್ತಿರಲಿಲ್ಲ. ಮದುವೆಯ ಸಂದರ್ಭದಲ್ಲಿ ಪತಿಗೆ ಮುಂಬೈಯಲ್ಲಿ ಎರಡೂವರೆ ಲಕ್ಷ ರೂಪಾಯಿಯ ಮನೆ ಇದೆಯಂತೆ! ಎಂಬ ಸುದ್ದಿ ತಿಳಿದಾಗ ನನ್ನೊಳಗೆ ಮೂಡಿದ ಚಿತ್ರಗಳು, ವಾಸ್ತವದಲ್ಲಿ ಕಿರಿದಾಗಿ ಕಂಡಾಗ ಒಮ್ಮೆಗೆ ಮನಸ್ಸು ಇಳಿದಿತ್ತು. ಮೂರನೆಯ ಮಹಡಿಯ ಮೇಲೆ ಮನೆ. ರಂಗೋಲಿಯಿಡಲು ಅಂಗಳವಿಲ್ಲ, ಪೂಜೆಗೆ ತುಳಸಿ ಕಟ್ಟೆಯಿಲ್ಲ, ಸುತ್ತ ತೋಟ, ಗದ್ದೆ, ಬಯಲು, ಕಾಡು, ನದಿ ಏನೇನೂ ಕಾಣಿಸ್ತಾ ಇಲ್ಲ. ಸ್ವತ್ಛಂದವಾಗಿ ವಿಹರಿಸುತ್ತಿದ್ದ ಹಕ್ಕಿಯನ್ನು ಗೂಡಿನಲ್ಲಿ ತಂದಿಟ್ಟ ಹಾಗೆ ಅಂದಿನ ಸ್ಥಿತಿಯಾಗಿತ್ತು. ಎಲ್ಲಿ ನೋಡಿದರಲ್ಲಿ ಗಗನಚುಂಬಿ ಕಟ್ಟಡಗಳು. ರಸ್ತೆಯುದ್ದಕ್ಕೂ ಕಿರಿಕಿರಿ ಅನಿಸುವಷ್ಟು ಓಡಾಡುವ ವಾಹನಗಳು! ಹೊರಗಿನ ವಾತಾವರಣದಲ್ಲಿ ಸುತ್ತಾಡಿ ಬರೋಣವೆಂದರೆ, ಶಾಂತತೆಯಿರದೆ, ಮನಸ್ಸಿಗೆ ಹಾಯೆನಿಸುವಂಥ ಪರಿಶುದ್ಧ ಗಾಳಿಯಿರದೆ, ಸಹ್ಯವೆನಿಸದ ಒಳಚರಂಡಿಗಳ ಗಬ್ಬು ವಾಸನೆ. ಸೈಕಲ್ ಸದ್ದು ಕೂಡ ವಿರಳವಾಗಿ ಕೇಳಿಸುವ ಹಳ್ಳಿಮನೆಯ ನೈಜ ಪರಿಸರದಲ್ಲಿ ಬೆಳೆದಿರುವವಳಿಗೆ ಇಲ್ಲಿನ ವಾತಾವರಣ ಮೊದಲಿಗೆ ಅಸಹನೀಯವೆನಿಸಿತ್ತು. ಊರಿನಲ್ಲಿ, ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಯಾರಾದರೂ ಕರೆದು ಮಾತನಾಡಿಸಿದರೆ ಮಾತ್ರ ಮರು ಉತ್ತರಿಸುವ ಸ್ವಭಾವದವಳು ನಾನು. ಅಂಥದ್ದರಲ್ಲಿ ಇಲ್ಲಿ ಅವರಿವರೊಡನೆ ಮಾತುಕತೆಗೆ ಮನಸ್ಸು ಹಂಬಲಿಸುತ್ತಿತ್ತು. ಆದರೆ, ಇಲ್ಲಿ ಯಾರೂ ಬಿಡುವಿಲ್ಲವೆಂಬಂತೆ ತರಾತುರಿಯಲ್ಲಿ ಓಡಾಡುವವರೇ. ಬೀದಿಯಲ್ಲಿ ಯಾರಾದರೂ ಮನೆ ಪಕ್ಕದ ಗುರುತಿನವರು ಮುಖಾಮುಖೀಯಾದಾಗ ನೋಡಿ ನಗಬೇಕೆನ್ನುವಷ್ಟರಲ್ಲಿ ಅವರು ಬಹಳ ದೂರ ಸಾಗಿ ಬಿಡುತ್ತಿದ್ದರು. ಇಲ್ಲಿ ಗಂಟೆಗಳಿಗೂ ಅವಸರ. ಬೆಳಗು, ಸಂಜೆ, ರಾತ್ರಿ ಬಹುಬೇಗ ಬಂದೆದ್ದು ಹೋಗುವವುಗಳೇ!
ಮುಂಬಯಿ ಎಂಬ ದೊಡ್ಡ ಶಹರ !
ಮದುವೆಯಾಗಿ ಬಂದ ಆರಂಭದ ದಿನಗಳಲ್ಲಿ ಔತಣದ ಊಟಕ್ಕೆ ಸಂಬಂಧಿಕರು ಕರೆಯಲಾರಂಭಿಸಿದರು. ಅವರ ಮನೆಗೆ ಹೋದ ಸಂದರ್ಭದಲ್ಲಿ, ಕೋಣೆಗಳೇ ಇಲ್ಲದ ಅತಿ ಚಿಕ್ಕ ಮನೆಯನ್ನು ಹಾಗೂ ಅವರ ಜೀವನ ಶೈಲಿಯನ್ನು ನೋಡಿದೆ. ನನ್ನ ಪುಟ್ಟ ಅರಮನೆಯೇ ಎಷ್ಟೋ ವಾಸಿ ಎಂದೆನಿಸಿತು. ಒಂದು ಮಲಗುವ ಕೊಠಡಿ ಮತ್ತು ಅಡುಗೆಕೋಣೆ ಆದರೂ ಇದೆಯಲ್ಲ! ಅಂತ ಸಮಾಧಾನಿಸಿಕೊಂಡೆ. ಆರಂಭದ ದಿನಗಳಲ್ಲಿ ಒಂದೆರಡು ಬಾರಿ ಪತಿರಾಯರು ಬಾಜಿ ಮಾರ್ಕೆಟ್, ಮೀನಿನ ಮಾರ್ಕೆಟ್, ದಿನಸಿ ಅಂಗಡಿ ತೋರಿಸಿ, ಮನೆಯೊಡತಿಯ ಕರ್ತವ್ಯವನ್ನು ಮನದಟ್ಟು ಮಾಡಿಸಿದರು. ಅಂದಿನಿಂದ ಮುಂಬಯಿ ನಗರಿಯ ಜೀವನಕ್ಕೆ ಹೊಂದಿಕೊಳ್ಳಲಾರಂಭಿಸಿದೆ. ಅಕ್ಕಪಕ್ಕದ ಊರವರನ್ನು ಪರಿಚಯ ಮಾಡಿಕೊಂಡೆ. ಕಡಿಮೆ ಬೆಲೆಗೆ ವಸ್ತುಗಳು ಸಿಗುವ ತಾಣವನ್ನು ಅರಸಿದೆ. ಅವರ ಜೊತೆಗೆ ಚೌಕಾಶಿ ಮಾಡುವುದನ್ನೂ ಕಲಿತೆ. ಇಲ್ಲಿನವರು ವ್ಯವಹಾರದ ವೇಳೆಗೆ ಹೆಚ್ಚಾಗಿ ಮರಾಠಿ ಭಾಷೆಯೇ ಮಾತಾಡುತ್ತಾರೆ. ಕೊಂಡ ತರಕಾರಿಗೆ ಎಷ್ಟು ಬೆಲೆ ಎಂಬುದನ್ನು ಕೂಡ ಮರಾಠಿ ಅಥವಾ ಹಿಂದಿ ಭಾಷೆಯಲ್ಲಿಯೇ ಹೇಳುತ್ತಾರೆ. ಡಾಯಿ, ಅಡಾಯಿ ರೂಪಾಯಿ (ಒಂದೂವರೆ, ಎರಡೂವರೆ) ಎಂಬ ಪದಗಳು ಯಾವಾಗಲೂ ಎಡವಟ್ಟಿಗೀಡು ಮಾಡುತ್ತಿದ್ದವು. ಶಾಲೆಯಲ್ಲಿ ಕಲಿತಿದ್ದ ನೂರು ಹಿಂದಿ ಅಂಕೆಗಳಲ್ಲಿ ಇಪ್ಪತ್ತರವರೆಗೆ ಮಾತ್ರ ನೆನಪಿತ್ತು. ಆ ಸಂದರ್ಭದಲ್ಲಿ ಕೈಬಾಯಿ ಸನ್ನೆಯಲ್ಲಿಯೇ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಬೇಕಾದ ಪರಿಸ್ಥಿತಿ ನನ್ನದಾಗಿತ್ತು.
ಒಮ್ಮೆ ದಿನಸಿ ಅಂಗಡಿಯವನಿಗೆ ನಾನು ಹೇಳಿದ್ದು ಅರ್ಥವಾಗಲಿಲ್ಲ. “ದಿಮಾಗ್ ಕರಾಬ್ ಹೋಗಯ ಕ್ಯಾ’ ಎಂದು ಆತ ಮೆಲ್ಲನೆ ಹೇಳುವುದು ಕೇಳಿಸಿತು. ಆ ಕೂಡಲೇ “ಯಾಕೆ ಹಾಗಂದೆ?’ ಅಂತ ಜಗಳ ಆಡೋಣವೆಂದರೆ ಭಾಷೆ ಸರಿಯಾಗಿ ಬರುತ್ತಿರಲಿಲ್ಲವಲ್ಲ. ಆದರೂ ಸುಮ್ಮನಿರಲಿಲ್ಲ. ನನ್ನವರಲ್ಲಿ ದೂರು ಕೊಟ್ಟು , ಮಾರನೆಯ ದಿನವೇ ಇವರೊಂದಿಗೆ ಅಂಗಡಿಗೆ ಬಂದು, ಹಾಗೆಂದ ಹುಡುಗನನ್ನು ತೋರಿಸಿದೆ. ಆತ ಹಿಂದಿಯಲ್ಲಿ “ಇಲ್ಲ’ ಎಂದು ಇವರಲ್ಲಿ ವಾದಿಸಿದ. “ಹೌದು, ಅವನು ಹಾಗೆನೇ ಅಂದಿದ್ದ’ ಅಂತ ನಾನು ತುಳುವಿನಲ್ಲಿ ಸಮರ್ಥಿಸಿದೆ. “ಇವಳಿಗೆ ಹಿಂದಿ ಭಾಷೆ ಬರುವುದಿಲ್ಲ, ಸ್ವಲ್ಪ ಸುಧಾರಿಸಿಕೊಳ್ಳಿ’ ಅಂತ ಇವರು ಅಂಗಡಿಯವರಿಗೆ ತಿಳಿಸಿದ ನಂತರ, “ನಿನಗೇನು ಕೇಳಿಸ್ತೋ… ಅವರು ಹಾಗೆಲ್ಲ ಹೇಳಿರಲಿಕ್ಕಿಲ್ಲ’ ಎಂದು ಹೇಳಿ ಮನೆಗೆ ಕರೆದುಕೊಂಡು ಬಂದರು.
ಗ್ಯಾಲರಿಯಲ್ಲಿ ತುಲಸೀ ಗಿಡ !
ಹಿಂದೆ ಮನೆಯಲ್ಲಿ ಮೊಬೈಲ್, ಲ್ಯಾಂಡ್‌ಫೋನ್ ಯಾವುದೂ ಇರಲಿಲ್ಲ. ಎಸ್‌ಟಿಡಿ ಬೂತ್‌ಗಳಲ್ಲಿ ವಾರಕ್ಕೊಮ್ಮೆ ಮಾತ್ರ ಊರಿಗೆ ಫೋನ್ ಮಾಡುವ ಅವಕಾಶ ಸಿಗುತ್ತಿತ್ತು. ಊರಿನಲ್ಲಿ ಲ್ಯಾಂಡ್ ಫೋನ್ ಇರುವ ಲಿಲ್ಲಿಬಾಯಿಯ ಮನೆಗೆ ಕರೆ ಮಾಡಿ, ಅಮ್ಮನನ್ನು ಬರಲು ಹೇಳಿ, ಕುಶಲೋಪರಿ ವಿಚಾರಿಸುವಷ್ಟರಲ್ಲಿಯೇ ಫೋನ್ ಬಿಲ್ಲು ನೂರು ರೂಪಾಯಿ ದಾಟುತ್ತಿತ್ತು. ಆದ್ದರಿಂದ ಎಸ್‌ಟಿಡಿ ಬೂತ್‌ನ ಮೀಟರ್‌ನಲ್ಲಿ ಶರವೇಗದಲ್ಲಿ ಓಡುವ ಹಣದ ಮೊತ್ತವನ್ನು ನೋಡಿಕೊಂಡೇ ಆಡುವ ಮಾತುಗಳೆಲ್ಲ ಔಪಚಾರಿಕವೆನಿಸಿ, ಮನದಾಳದ ಮಾತುಗಳು ಅಲ್ಲೇ ಉಳಿದುಬಿಡುತ್ತಿದ್ದವು. ಅಂಚೆಕಚೇರಿ ಕೂಡ ದೂರ ಇದ್ದುದ್ದರಿಂದ ಪತ್ರ ಬರೆಯುವ ಅವಕಾಶವೂ ಸಿಗುತ್ತಿರಲ್ಲಿಲ್ಲ. ಹಳ್ಳಿಯ ಮನೆ ಮತ್ತು ಮನೆಯವರ ಅದೆಷ್ಟೋ ನೆನಪುಗಳು ಮೂರನೆಯ ಮಹಡಿಯ ಮೇಲಿನ, ನಾಲ್ಕು ಗೋಡೆಗಳ ನಡುವಿನ ಅಡುಗೆ ಕೋಣೆಯಲ್ಲಿ ಬೇರೊಂದು ರೀತಿಯಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತಿದ್ದವು. ಮನಸ್ಸಿನ ಖುಷಿಗೆ, ಜೀವನದ ಪ್ರೀತಿಗೆ ಗ್ಯಾಲರಿಯಲ್ಲಿಯೇ ಒಂದು ಕುಂಡದಲ್ಲಿ ತುಲಸೀಗಿಡ ನೆಟ್ಟೆ. ಇತರ ಕುಂಡಗಳಲ್ಲಿ ನೆಟ್ಟ ಗುಲಾಬಿ, ಸೇವಂತಿ, ಅಬ್ಬಲಿಗೆಯ ಗಿಡಗಳಲ್ಲಿ ಹೂಗಳರಳಿ ಗ್ಯಾಲರಿಯನ್ನು ರಂಗೇರಿಸಿದವು. ಚಿಟ್ಟೆಗಳು ಬಂದು ಆಚೀಚೆ ಕುಣಿಯಲಾರಂಭಿಸಿದವು. ಊರಿನಿಂದ ತಂದು ನೆಟ್ಟ ಬಸಳೆ, ತಿಮರೆ (ಒಂದೆಲಗ) ಗಿಡಗಳ ಬಳ್ಳಿಗಳು ಗ್ಯಾಲರಿಯ ಕಂಬಿಗಳನ್ನೆಲ್ಲ ಬಳಸಿಕೊಂಡವು. ಇಲ್ಲಿ ಆಕಾಶವೇ ಅಂಗಳ. ನಿತ್ಯ ಬಂದು ಹೋಗುವ ಸೂರ್ಯ-ಚಂದ್ರ-ತಾರೆಯರು ಹಿಂದಿಗಿಂತಲೂ ಇಂದು ತೀರ ಸನಿಹವಾಗಿ ಇನ್ನಷ್ಟು ಆಪ್ತರಾದರು. ಗ್ಯಾಲರಿಯ ಮೂಲೆಯಲ್ಲಿ ಒಂದು ರಟ್ಟಿನ ಪೆಟ್ಟಿಗೆಯನ್ನು ಇರಿಸಿದ್ದೆ. ಅದರೊಳಗೆ ಬಂದು ಸಂಸಾರ ಹೂಡಿದ ಗುಬ್ಬಚ್ಚಿಗಳು, ಆಗಾಗ ಬಂದು ಹೋಗುವ ಕಾಗೆ, ಪಾರಿವಾಳ ಮತ್ತು ಗಿಳಿಗಳಿಗೆ ಇಷ್ಟವಾದ ಕಾಳನ್ನೀಯುತ್ತ ಅವುಗಳೊಂದಿಗೆ ಆತ್ಮೀಯ ನೇಹದ ಭಾವವನ್ನು ಬೆಳೆಸಿಕೊಂಡೆ.
ಮರಾಠಿ ಮಹಿಳೆಯರ ಅರಸಿನ-ಕುಂಕುಮ
ಪಕ್ಕದ ಮನೆಯ ಮರಾಠಿ ಮಹಿಳೆಯರು ಅರಸಿನ-ಕುಂಕುಮ ಕಾರ್ಯಕ್ರಮಕ್ಕೆ ಕರೆದಾಗ ನಮ್ಮ ಊರಿನ ಮಹಿಳೆಯರ ಜೊತೆಗೆ ನಾನೂ ಹೋಗಲೇ ಬೇಕಾಗಿತ್ತು. ನೌವಾರಿ (ಸೀರೆ) ಉಟ್ಟ ಮಹಿಳೆಯರು ನಮ್ಮ ಹಣೆಗಳಿಗೆ ಅರಸಿನ-ಕುಂಕುಮವಿಟ್ಟ ನಂತರ ಹೂವು-ಹಣ್ಣು-ವೀಳ್ಯದೆಲೆಯನ್ನು ನಮಗೆ ಸೆರಗು ಚಾಚಿ ಸ್ವೀಕರಿಸಲು ಹೇಳುತ್ತಿದ್ದರು. ನಂತರ ನಮ್ಮ ಪಾದ ಮುಟ್ಟಿ ಮೂರು ಬಾರಿ ನಮಸ್ಕರಿಸುತ್ತಿದ್ದರು. ಐವತ್ತು ದಾಟಿದ ಮಹಿಳೆಯರು ಪಾದ ಮುಟ್ಟುವಾಗ ಮುಜುಗರವೆನಿಸುತ್ತಿತ್ತು.
ಆದರೆ, ಇಲ್ಲಿನ ಮಹಿಳೆಯರು ಕಟ್ಟಾಸಂಪ್ರದಾಯಸ್ಥರು. ಪರಂಪರೆಯನ್ನು ಬಿಡಲಾರರು. ಅವರೊಂದಿಗೆ ಸುಮ್ಮನೆ ಹೊಂದಿಕೊಂಡೆ.
ಅನಿತಾ ಪಿ. ತಾಕೊಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.