ಮನೆಯೆಂಬ ಆತ್ಮಕಥನ
Team Udayavani, Jun 14, 2019, 5:39 AM IST
ಮನೆಯ ಸೋಫಾದಲ್ಲಿ ಆಗಷ್ಟೇ ಕುಳಿತಿದ್ದೆ. ಯಾವುದನ್ನಾದರೂ ನಿಶ್ಚಿತವಾಗಿ ನೋಡಬೇಕು ಎನಿಸದಿದ್ದರೂ ಏನಾದರೂ ನೋಡುವಂತಹುದಿದೆಯೆ ಎಂಬ ಒಂದು ಸಣ್ಣ ಕುತೂಹಲದಲ್ಲಿ ಟಿವಿ ಸ್ವಿಚ್ ಹಾಕಿದೆ. ಆದರೆ ಅಷ್ಟು ಹೊತ್ತಿಗೇ ವಿದ್ಯುತ್ ಕೈಕೊಟ್ಟಿತು. ಟಿವಿ ನೋಡುವ ಹಾಗಿಲ್ಲ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಆಚೀಚೆ ಕಣ್ಣು ಹೊರಳಿಸಿದಾಗ ಅಲ್ಲೇ ಪಕ್ಕದ ಶೆಲ್ಫಿನಲ್ಲಿದ್ದ ಪುಸ್ತಕವೊಂದು ನನ್ನನ್ನೇ ನೋಡಿದಂತಾಯಿತು. ಹೌದು. ಅದು ನನ್ನ ಒಳಗನ್ನು ದೃಷ್ಟಿಸಿ ನೋಡಿದಂತೆನಿಸಿತು. ಮಹಿಳೆಯೊಬ್ಬರು ಬರೆದ ಆತ್ಮಕಥನವದು. ಕೆಲವು ದಿನಗಳ ಹಿಂದಷ್ಟೇ ಓದಿ ಮುಗಿಸಿದ್ದೆ. ಹೀಗೂ ಉಂಟೆ ಎನಿಸಿತ್ತು.
ಬದುಕಿನಲ್ಲಿ ವೈಯಕ್ತಿಕ ದೌರ್ಬಲ್ಯದ ಜೊತೆಗೆ ಎದುರಾಗಬಹುದಾದ ಅಥವಾ ಎದುರಾದ ಅದೆಷ್ಟೋ ಸಮಸ್ಯೆಗಳನ್ನು ಸುಲಭವಾಗಿ, ಸುಲಲಿತವಾಗಿ ಪರಿಹರಿಸಿಕೊಳ್ಳುತ್ತ, ಆತ್ಮವಿಶ್ವಾಸದಿಂದ ಮುಂದುವರಿದು ಹೊಸ ಹೊಸ ಯೋಚನೆ, ಯೋಜನೆಗಳನ್ನೆಲ್ಲ ಸಾಧನೆಯ ವೇದಿಕೆಗೆ ಎಳೆತಂದು ಯಶಸ್ವಿಯಾದ ಮಹಿಳೆಯೊಬ್ಬಳ ಯಶೋಗಾಥೆ ಆ ಆತ್ಮಕಥನ. ಇಂತಹ ಓದು ಕ್ಷಣಕ್ಷಣಕ್ಕೂ ಆತಂಕಕ್ಕೊಳಪಡುವ ಮನಸುಗಳಿಗೆ ಆಧಾರದ ಕೈಪಿಡಿಯಾಗಬಲ್ಲುದು. ಈ ಓದಿನ ಖುಷಿಯೇ ಬೇರೆ. ಇಂತಹ ಓದಿನಲ್ಲಿ ಮನಸ್ಸು ಅರಳುತ್ತದೆ. ಒಳಗಿನ ಕುತೂಹಲ ಆಕಾಂಕ್ಷೆಗಳು ಜುಗಲ್‌ಬಂದಿ ಹಾಡಿ ರಾಗ ವಿಸ್ತರಿಸುತ್ತವೆ. ಮನದ ಕ್ಯಾನ್ವಾಸಿನಲ್ಲಿ ಚಿತ್ರ ಬರೆಯುತ್ತವೆ. ಪುಟದಿಂದ ಪುಟಕ್ಕೆ ಬಣ್ಣ ತುಂಬಿಕೊಳ್ಳುತ್ತವೆ.
ನಿಖರ ರೇಖೆಗಳ ನಡುವೆ ವರ್ಣ ಚಿತ್ತಾರ ಮಾತನಾಡುತ್ತ, ಪ್ರಶ್ನಿಸುತ್ತ, ಕುತೂಹಲ ಕೆರಳಿಸುತ್ತ, ಭಾವ ಅರಳಿಸುತ್ತ ಬುದ್ಧಿಯ ಹಲ್ಲಿಗೆ ಗ್ರಾಸವಾಗುತ್ತದೆ. ಇಂತಹ ಓದಿನ ಹವ್ಯಾಸವಿದ್ದರೆ ಗೃಹಿಣಿ ಮನೆಯ ಆಗುಹೋಗುಗಳನ್ನೆಲ್ಲ “ಪ್ರಪಂಚ ದೃಷ್ಟಿ’ಯಿಂದ ನೋಡಲು ಸಾಧ್ಯ. ಸಾಂದರ್ಭಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ. ಸಾರ್ವಕಾಲಿಕ ನೆಲೆಯಲ್ಲಿ ಪ್ರತಿಯೊಂದು ನಿರ್ಧಾರವನ್ನು ಅಳತೆ ತೂಕದ ಸಹಿತ ಪರಾಂಬರಿಸಿ ಇತ್ಯರ್ಥ ಮಾಡಲು ಸಾಧ್ಯ. ಇಂಥ ಸಾಮರ್ಥ್ಯ ಆಕೆಯ ಕ್ರಿಯೆಗೆ ಶಕ್ತಿವಾಹಕವೂ ಆಗಬಹುದು.
ಸೋಫಾದಿಂದೆದ್ದು ಒಳಗೆ ಬರುತ್ತಿದ್ದಂತೆ ಒಳಗಿನ ಕೋಣೆಯ ಕಪಾಟಿನಲ್ಲಿ ವಸ್ತುಗಳೆಲ್ಲ ಕೊಂಚ ಅಸ್ತವ್ಯಸ್ತವಾಗಿದೆ ಎನಿಸಿತು. ಸರಿದೂಗಿಸೋಣ ಎಂದು ಬಟ್ಟೆ ತೆಗೆದುಕೊಂಡು ಒರೆಸುತ್ತ ಎಲ್ಲ ಸರಿ ಮಾಡುತ್ತಿರುವಾಗ ಒಂದು ಹಳೇ ಅಲ್ಬಂ ಕಣ್ಣಿಗೆ ಬಿತ್ತು. ತುಂಬ ಸಮಯವಾಗಿತ್ತು. ಅದನ್ನು ನೋಡದೆ, ಆ ಕ್ಷಣ ಇದ್ದ ಕೆಲಸ ಬಿಟ್ಟು ಅದನ್ನು ತೆರೆದು ನೋಡುವ ಕುತೂಹಲವಾಯಿತು. ಒಂದೊಂದು ಪುಟ ತೆರೆಯುತ್ತಿದ್ದಂತೆ ಬೇರೆಯದೇ ಲೋಕ. ಒಂದು ಫೋಟೊದಲ್ಲಿ ದೊಡ್ಡ ಕಡೆಯುವ ಕಲ್ಲಿನೆದುರು ಹಿಟ್ಟು ಕಡೆಯುತ್ತಿದ್ದ ಅಜ್ಜಿ . ಅವರ ಸಹಜ ನಗುವಿನಲ್ಲಿ ಬೊಚ್ಚುಬಾಯಿಯ ಎರಡು ಹಲ್ಲುಗಳು ಎದ್ದು ಕಾಣುತ್ತಿದ್ದವು. ಫೋಟೋಕ್ಕಾಗಿ ಯಾವ ವಿಶೇಷ ತಯಾರಿಯೂ ಇಲ್ಲದ, ಕಕ್ಕುಲತೆ ಸೂಸುವ ಮುಗ್ಧ ಕಣ್ಣುಗಳ ಅಂಗಳದ ತುಳಸಿಕಟ್ಟೆಯ ಎದುರು ನಾನು ಪುಟ್ಟ ಮಗುವಾಗಿ ಕುಳಿತಿದ್ದರೆ, ಅಮ್ಮ ನನ್ನನ್ನು ಹಿಡಿದುಕೊಳ್ಳುವ ಯತ್ನದಲ್ಲಿ ಅವಡುಗಟ್ಟಿದ್ದಳು. ಅವಳ ಗಮನ ಸಂಪೂರ್ಣ ನನ್ನ ಮೇಲೆ, ಎಲ್ಲಿಯಾದರೂ ಹೋಗಿ ಬಿದ್ದು ಬಿಡುತ್ತೇನೇನೊ ಎಂಬ ಕಾಳಜಿ ಆ ಕಣ್ಣುಗಳಲ್ಲಿತ್ತು.
ಪುಟ ತಿರುಗಿಸಿದಂತೆ ಮತ್ತೂಂದು ಫೋಟೊ ನನ್ನ ಗಮನ ಸೆಳೆಯಿತು. ಅದರಲ್ಲಿ ನಾನು ಪುಟ್ಟ ಮಗುವಾಗಿ ಅಮ್ಮನ ಕಾಲಲ್ಲಿ ಕುಳಿತಿದ್ದೆ. ಅಮ್ಮನ ಆಚೆಈಚೆ ಪಕ್ಕದಲ್ಲಿ ನನ್ನ ಅಜ್ಜಿ ಹಾಗೂ ಅವರ ತಂಗಿಯಂದಿರು ಅಂದರೆ ನನ್ನ ಮೂರು ಅಜ್ಜಿಯಂದಿರು ತಲೆಯ ಮೇಲೆ ಸೆರಗು ಹಾಕಿ ನಿರಾಭರಣೆಯರಾಗಿ ನಿಂತಿದ್ದರು. ಅಜ್ಜಿಯಂದಿರನ್ನು ನೋಡಿದ ತಕ್ಷಣ ಅದೆಲ್ಲೋ ದೂರ ಸರಿದ ನನ್ನ ಆಪ್ತಭಾವ ಹತ್ತಿರಕ್ಕೆಳೆದಂತಾಯಿತು.
ಕಪ್ಪು ಬಿಳುಪು ಬಣ್ಣದ ಆ ಫೋಟೊ ಮಾಸಲು ಬಣ್ಣಕ್ಕೆ ತಿರುಗಿತ್ತು. ಆದರೆ, ಆ ಫೋಟೊದ ಸೆರೆಯಲ್ಲಿದ್ದ ಆಕೃತಿಗಳು ಮಾತ್ರ ಬರಿದಾಗದ ಬದುಕಿನನುಭವದ ಕಣಜವಾಗಿ ಇಂದಿಗೂ ಮಾಸದ ನೆನಪಾಗಿ ಉಳಿದಿವೆ ಎಂದು ನನಗನಿಸಿತು. ಅಜ್ಜಿಯರ ಪ್ರೀತಿ, ಕಥೆ ಹೇಳುವ ರೀತಿ ಎಲ್ಲ ಸ್ಮತಿಪಟಲದಲ್ಲಿ ಮೂಡಿ ಮತ್ತೆ ಮತ್ತೆ ಫೋಟೊ ನೋಡಿದೆ. ಶಾಲೆಯ ಮುಖ ಕಂಡಿರದ ಅವರ ಅನುಭವದ ಆಳದ ಮಾತು ಮೇಲ್ನೋಟಕ್ಕೆ ಒರಟಾಗಿ ಕಂಡರೂ ಅದರ ಭಾವದಲ್ಲಿ ಬೆಣ್ಣೆಯ ಮೃದುತ್ವವಿತ್ತು ಎಂದು ಈಗ ನನಗೆ ಅನಿಸುತ್ತದೆ.
ಅಂದು ತಲೆ ಬೋಳಿಸಿಕೊಂಡು, ಕೆಂಪು ಸೀರೆಯೊಳಗೆ ಇಡೀ ಬದುಕನ್ನು ಮುದುಡಿಸಿ ಮುದ್ದೆಕಟ್ಟಿದ ಆ ಶೋಷಿತೆಯರ ಶ್ವಾಸ ಉಸುರುವ ಕತೆಯೆಲ್ಲ ಮನೆಯ ಕತ್ತಲಕೋಣೆಯಲ್ಲಿ ಕರಗಿ ಹೋಗಿರಬಹುದು.
ಎಲ್ಲ ಅಜ್ಜಿಯಂದಿರದು ಒಂದೊಂದು ದುರಂತ ಕಥೆ. ಬಾಲ್ಯವಿವಾಹ. ಏಳರ ಹರೆಯದ ಹುಡುಗಿಗೆ ಎಪ್ಪತ್ತರ ವಯಸ್ಸಿನವನೊಂದಿಗೆ ವಿವಾಹ. ಈ ವಯಸ್ಸಿನ ಅಂತರದಿಂದಾಗಿ ಬಾಲವಿಧವೆಯರ ಸಾಲು ಸಾಲು ಆ ಕಾಲದಲ್ಲಿ. ಬಾಲ್ಯದ ಸ್ವತ್ಛಂದತೆಯೇ ಇಲ್ಲದ, ಯೌವ್ವನದ ಕನಸುಗಳೇ ಇಲ್ಲದೆ ಮನೆಕೆಲಸ, ಜಪತಪ, ವಾರ, ಒಪ್ಪೊತ್ತು, ವ್ರತ ನಿಯಮಗಳ ವರ್ತುಲದಲ್ಲಿ ಸನ್ಯಾಸಿಯಂತೆ ಹದಿನಾರರ ಹರಯದಲ್ಲೇ ಹದಿನಾರು ಅಂಕಣದ ಮನೆಯ ಹಜಾರದ ಮೂಲೆಯಲ್ಲಿ ಮುಚ್ಚಿಗೆಯ ಅಟ್ಟದಲ್ಲಿ, ಛಾವಣಿಯ ಧಗೆಯಲ್ಲಿ ನಡುಮನೆಯ ಕತ್ತಲಿಲ್ಲ ಮನೆಮಗಳು ಪಡುವ ಬವಣೆಗೆ, ಹತಾಶ ರೋದನಕ್ಕೆ ಮೂಕಸಾಕ್ಷಿಗಳಾಗಿ ನಿಂತಿದ್ದು ಇದೇ ಮನೆಯ ಕಂಬಗಳಲ್ಲವೆ?
ಹಾಗಾಗಿ ಭಾರತೀಯ ಸಾಂಪ್ರದಾಯಿಕ, ಪಾರಂಪರಿಕ ಮನೆ ಎಂಬ ಮನಸ್ಸುಗಳ ಬೀಡು ಹೆಣ್ಣಿನ ಏಳುಬೀಳುಗಳ, ಸಂಭ್ರಮ ಸಂತಾಪಗಳ ಆಡೊಂಬಲವಾಗಿ, ಆಕೆಯ ಪ್ರಗತಿ ನಿಧಾನಗತಿ, ಅಧೋಗತಿಗಳ ಇತಿಹಾಸದ ಅಸ್ತಿಭಾರದ ಮೇಲೆ ಆಕೆಯ ಬದುಕು ಭಾವಗಳ ಮೂರ್ತ ರಂಗಮಂಟಪವಾಗಿ ನಿಲ್ಲುತ್ತದೆ. ಮನೆಯ ಒಳಗೋಡೆಯೆಂಬ ಸ್ಥಾವರದಲ್ಲಿ ಗೃಹಿಣಿಯ ಅದೆಷ್ಟೋ ಭಾವೋದ್ವೇಗದ, ಶಾಂತಿ ಅನುರಾಗದ, ಶೋಷಿತ ಸಂಕಟದ ಏದುಸಿರು, ಬಿಸಿಯುಸಿರು, ನಿಟ್ಟುಸಿರುಗಳ ಮಾರ್ದನಿ ಮಿಡಿಯುತ್ತಿರುತ್ತದೆ.
ಈ ಧ್ವನಿ ಅದೆಷ್ಟೋ ಹೆಂಗಳೆಯರ ಆತ್ಮಕಥನಗಳಲ್ಲಿ ಅಕ್ಷರಗಳಾಗಿ ಜೀವ ಪಡೆಯುತ್ತ, ಅನುಭವಗಳ ಸಾಲನ್ನು ಅರುಹುತ್ತ, ಯಾವುದೋ ಒಂದು ಸಂದರ್ಭದಲ್ಲಿ ಅಪೂರ್ಣತೆಯ ಸಂದಿಗ್ಧದಲ್ಲೇ ಪೂರ್ಣ ವಿರಾಮವನ್ನು ಪಡೆಯುತ್ತದೆ. ಅಜ್ಜಿಯ, ಅಮ್ಮನ ಆತ್ಮಕಥನಗಳಲ್ಲೆಲ್ಲ ಮೂಡುವ, ಮಿನುಗುವ, ಮರೆಯಾಗಿ ಇಣುಕುವ, ಮತ್ತೆ ಮತ್ತೆ ಎದುರಾಗುವ, ಢಾಳಾಗಿ ರಾಚುವ ಅಕ್ಷರಗಳೆಲ್ಲ ಒಂದೊಂದು ಅಪ್ರಬುದ್ಧೆಯ, ಅಸಹಾಯಕ ಪ್ರಬುದ್ಧೆಯ ಧ್ವನಿಯಾಗಿ ಕೇಳುಗ, ಓದುಗ ಮನಸುಗಳನ್ನು ಕಾಡುತ್ತ ಪ್ರಶ್ನೆ ಕೇಳುತ್ತವೆ. ಪರಿಹಾರದ ತಲಾಶೆಯಲ್ಲಿ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಛಾಯಾಚಿತ್ರ ಜೀವ ಪಡೆದು ಕಥೆ ಹೇಳುವಂತೆನಿಸಿತು.
ಎಷ್ಟೊಂದು ಆಶ್ಚರ್ಯವಾಗುತ್ತದೆ. ನಮ್ಮ ಅಜ್ಜಿಯಂದಿರ, ಅವರ ಅಮ್ಮಂದಿರ, ಅವರ ಅಜ್ಜಿಯಂದಿರ ಬಾಲ್ಯ-ಯೌವ್ವನವೆಲ್ಲ ಕಾಡ ಬೆಳದಿಂಗಳಂತೆ ಕಳೆದುಹೋದದ್ದು ಇಂಥದ್ದೇ ಮನೆಯ ನಾಲ್ಕು ಗೋಡೆಗಳ ಆವರಣದ ಒಳಗೇ ಅಲ್ಲವೆ !
-ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.