ಸೆಕೆಗಾಲವೂ ಸುಖವಾಗಲಿ
Team Udayavani, May 31, 2019, 6:00 AM IST
ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಪರಿಚಯಸ್ಥರು, ನೆಂಟರಿಷ್ಟರು, ಸ್ನೇಹಿತರು, ವಿಶೇಷವಾಗಿ ಮಧ್ಯ ವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರೆಗಿನವರು ಯಾರೇ ಸಿಕ್ಕರೂ ಕುಶಲೋಪರಿ ವಿಚಾರಿಸಿದ ನಂತರ ಮಾತನಾಡುವುದೇ ಸೆಕೆಯ ವಿಷಯ. ದೂರದ ಊರಲ್ಲಿ ಇರುವವರಿಗೆ ಫೋನಾಯಿಸಿದರೂ ಇದೇ ವಿಷಯದ ಪ್ರಸ್ತಾವನೆ. ವಾಕಿಂಗ್ ಗೆಳತಿಯರದೂ ಇದೇ ಚರ್ಚೆ. ಸೆಕೆೆಯ ಅನುಭವ ಅವರವರ ಆರೋಗ್ಯ ಹಾಗೂ ಮನಸ್ಥಿತಿಯನ್ನು ಅವಲಂಬಿಸಿದೆ.
ಊರಿಗೆ ಹೋದಾಗ ಮಟಮಟ ಮಧ್ಯಾಹ್ನ ಇಬ್ಬರು ಪರಿಚಿತರು ಆಮಂತ್ರಣ ಕೊಡಲು ನಮ್ಮ ಮನೆಗೆ ಬಂದಾಗ ನನಗೋ ಅವರ ಮೇಲೆ ಕನಿಕರ. ಫ್ಯಾನ್ ಗಾಳಿಯ ವೇಗವನ್ನು ಹೆಚ್ಚಿಸಿದೆ. ಅವರಿಗದು ಅಸಹನೀಯವಾಯಿತು. ಕೃತಕ ಗಾಳಿಯಿಂದ ತಪ್ಪಿಸಿಕೊಂಡು ದೂರ ಹೋಗಿ ಕುಳಿತರು. ಕುಡಿಯಲು ಬಿಸಿ ಬಿಸಿ ಕಷಾಯವನ್ನು ಕೇಳಿದರು. ಆಶ್ಚರ್ಯ! ನಾನು ತಂಪು ನೀರಿನ ಶರಬತ್ತು ಕೇಳಬಹುದೆಂದುಕೊಂಡಿದ್ದೆ. ಅವರಲ್ಲಿ ಪ್ರಶ್ನಿಸಿಯೂ ಬಿಟ್ಟೆ. ಅದಕ್ಕವರು ದೇಹದ ಉಷ್ಣತೆಯ ಸಮತೋಲನ ಕಾಪಾಡಲು ಬಿಸಿಯನ್ನೇ ಕುಡಿಯಬೇಕೆಂದರು. ವಿದ್ಯುತ್ತಿನ ಮಿತಬಳಕೆ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂಬ ಪಾಠವನ್ನು ರೂಢಿಸಿಕೊಂಡು ಬಂದವರವರು. ಮತ್ತದೇ ಬಿಸಿಲಿನಲ್ಲಿ ಸರಸರನೆ ಹೊರಟೇ ಬಿಟ್ಟರು. ನಮಗೆ ಈ ಹವಾಮಾನವೆನ್ನುವುದು ನೈಸರ್ಗಿಕವಾಗಿ ಪ್ರಕೃತಿಯ ಕೊಡುಗೆಯಾದುದರಿಂದ ಅದನ್ನು ಖುಷಿಯಿಂದ ಅನುಭವಿಸಿದರೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುವದೇನೋ. ಬಿಸಿಲು, ಗಾಳಿ, ಮಳೆ, ಚಳಿಗಳಿಗೆ ಅಳುಕದೆ ಮುಂದೆ ಸಾಗುವುದೇ ಜಾಣತನ.
ಮನುಷ್ಯನನ್ನು ಅತೀ ಹೆಚ್ಚು ಪೀಡಿಸುವ ಈ ಕಾಲದಲ್ಲಿಯೇ ಮಾಮರಗಳಿಗೆ ಚಿಗುರಿ ಹೂಹಣ್ಣುಗಳ ಬಿಡುವ ಸಂಭ್ರಮ, ಕೋಗಿಲೆಗೆ ಹಾಡುವ ಸಂಭ್ರಮ, ಮಕ್ಕಳಿಗೆ ರಜೆಯ ಸಂಭ್ರಮ. ಸೆಕೆೆಯ ಬಗೆಗಿನ ಬೇಸರ ನಮ್ಮ ಸ್ಪಂದನೆಯ ಮೇಲೂ ಅವಲಂಬಿತವಾಗಿದೆಯೇನೋ.
ಬೇಸಿಗೆಯ ಉಷ್ಣತೆ ನನ್ನನ್ನು ಅತಿಯಾಗಿ ಕಾಡುವಾಗ ನಾನೊಮ್ಮೆ ನನ್ನೂರಿನ ಕಡೆ ಮನಸ್ಸನ್ನು ಹರಿಯಬಿಡುತ್ತೇನೆ. ಕರಾವಳಿಯ ತೀರದಲ್ಲಿರುವ ನನ್ನೂರಿನ ಪೂರ್ವಕ್ಕೆ ಸಹ್ಯಾದ್ರಿಯ ಸಾಲು ಹಾಗೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರ. ವಾತಾವರಣದ ಆದ್ರìತೆಯಿಂದ ಬೇಸಿಗೆಯಲ್ಲಿ ಅತಿಯಾದ ಬೆವರು. ಆದರೂ ಹಳ್ಳಿಯ ಜನಗಳು ಅದಾವುದನ್ನೂ ಲೆಕ್ಕಿಸದೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಊರಲ್ಲಿ ಈಗ ಗದ್ದೆಗಳಿಗೆ ಶೇಂಗಾ (ಕಡ್ಲೆಕಾಯಿ), ಉದ್ದು, ಅಲಸಂಡೆ, ಉಳ್ಳಾಗಡ್ಡೆ ಬೆಳೆಗಳ ಹಸಿರುಡುಗೆ. ನಡುನಡುವೆ ಕೆಂಪು ಹರಿವೆಸೊಪ್ಪಿನ ವಿನ್ಯಾಸ. ಭೂಮಿ ತನ್ನೊಳಗೆ ಶೇಖರಿಸಿಟ್ಟ ಸಣ್ತೀವನ್ನೇ ಬಳಸಿ ಬೆಳೆಗೆ ಅನುವಾಗಿಸುವ ಪರಿ ತಾಯ್ತನದ ಸಿರಿ. ಬೆಳ್ಳಂಬೆಳಗ್ಗೆ ನವಿಲುಗಳ ಹಿಂಡು, ನರ್ತನ ಸೊಬಗ ನೋಡಲು ಕಣ್ಣುಸಾಲದು. ಇವೆಲ್ಲದರ ಜೊತೆಗೆ ರೈತರ ಬೆವರ ಹನಿಗಳ ಗಂಧ. ಒಂದೊಂದು ಹನಿಯೂ ಬೆಲೆಕಟ್ಟಲಾಗದ್ದು. ಗದ್ದೆ ಹೂತು, ಎಲ್ಲೋ ದೂರದ ಮನೆಗಳಿಂದ ಗೊಬ್ಬರ ಹೊತ್ತು ತಂದು, ಹರಡಿ, ಹದಗೊಳಿಸಿ, ಬೀಜ ಬಿತ್ತಿ, ಮೊಳೆತು ಬೆಳೆದು ನಿಂತ ಬೆಳೆಯನ್ನು ನೋಡುವ ಸಂತೋಷ ರೈತರಿಗೆ. ಬೆವರುಹನಿಗಳಿಂದ ತೊಯ್ದ ಮೈಗೆ, ಶರಧಿ ತಂಪಾಗಿಸಿ ಕಳಿಸಿದ ಗಾಳಿಯೇ ಹಿತ. ಬಳಲಿ ಮನೆಗೆ ಬಂದು ಯಾವಾಗ ನೆಲಕಾಣುವೆನೋ ಎಂಬಂತಾದಾಗ ಸುಖ ನಿದ್ರೆ. ಶ್ರಮಜೀವಿಗಳಿಗೆ ಅದೊಂದು ವರವೇ ಇರಬಹುದೇ!
ಬೇಸಿಗೆ ಬಂತೆಂದರೆ ಹಪ್ಪಳ-ಸಂಡಿಗೆಗಳ ಅಬ್ಬರದ ಹಬ್ಬ. ಭಾನುವಾರ ಅಮ್ಮನ ಶಾಲೆ ಕೆಲಸವಂತೂ ಇಲ್ಲ. ಆ ದಿನ ಮನೆಯ ತುಂಬೆಲ್ಲ ಉದ್ದಿನ ಹಪ್ಪಳದ ಘಮ ಘಮ. ಮಲಗಿದ್ದವರ ಮೂಗಿಗೆ ನಾಟಿ ಥಟ್ಟನೆ ಎಬ್ಬಿಸುವಷ್ಟು. ಬೇಗನೇ ಎದ್ದು, ಮನೆಗೆಲಸ ಮುಗಿಸಿ, ಎಂಟು ಗಂಟೆಯಾಗುವಾಗ ಕುಟ್ಟಿ ಹದಮಾಡಿದ ಕುಂಬಳಕಾಯಿ ಗಾತ್ರದ ನಾಲ್ಕು ಮುದ್ದೆ ತಯಾರಿಸಿ ಬಿಡುವಳು. ಅಜ್ಜಿ, ಅತ್ತೆಯರು, ಮನೆಯ ಮಕ್ಕಳು, ಗಂಡಸರು, ಕೇರಿಯವರು- ಎಲ್ಲರೂ ಕೈ ಜೋಡಿಸುವರು. ಅಂಗಳದಲ್ಲಿ ಒಣ ಹಾಕುವ ಕೆಂಪು-ಬಿಳಿ ಹಪ್ಪಳಗಳ ಕಲೆಗಾರರು ನಾವೆಲ್ಲ. ಮುಂದಿನ ರವಿವಾರ ಹಲಸಿನಕಾಯಿ, ಬಾಳೆಕಾಯಿ, ಹಪ್ಪಳಗಳ ಪಾಳಿ. ಅವುಗಳಿಗೆ ಇನ್ನೂ ಹೆಚ್ಚಿನ ಶ್ರಮ. ಅದಾವುದರ ಪರಿವೆಯೇ ಇರದು, ಒಟ್ಟಾಗಿ ಮಾಡುವಾಗ. ಮಾತುಗಳ ನಡುವೆ ಹಾಸ್ಯದ ಚಟಾಕಿಗಳು ದಣಿವ ದೂಡಿಬಿಡುವವು. ಸಬ್ಬಕ್ಕಿ, ಕುಂಬಳಕಾಯಿ ಸಂಡಿಗೆಗಳು ತಾವೇನೂ ಕಡಿಮೆಯಿಲ್ಲವೆಂಬಂತೇ ಹಪ್ಪಳದ ಜೊತೆಗೂಡುವವು. ಒಂದು ತಿಂಗಳ ಚಟಗುಡುವ ಬಿಸಿಲಿನಲ್ಲಿ ಗರಿ ಗರಿಯಾಗಿ, ಹಲವು ಬಣ್ಣಗಳಲ್ಲಿ, ಸವಿಯಲು ಸಿದ್ಧವಾಗುವವು. ನೆಂಟರಿಷ್ಟರಿಗೆ, ನೆರೆಹೊರೆಯವರಿಗೆ ಹಂಚಿ, ಉಳಿದವು ಮಳೆಗಾಲವ ಇದಿರುನೋಡುತ್ತಿರುವವು. ಈ ಎಲ್ಲದರ ನಡುವೆ ಸೆಕೆಯ ಬವಣೆ ಸುಳಿಯುವುದೂ ಇಲ್ಲ. ಮಾಮಿಡಿಯ ವಿವಿಧ ಬಗೆಯ ತಾಜಾ ಉಪ್ಪಿನಕಾಯನ್ನು ಬಾಣಲೆಗಳಲ್ಲಿ ತುಂಬಿ, ರಜೆ ಮುಗಿಸಿ ಹೋಗುವವರಿಗೆಲ್ಲ ಡಬ್ಬಗಳಲ್ಲಿ ತುಂಬಿಸಿ ಕೊಡುವ ರಿವಾಜು.
ಇತ್ತೀಚೆಗೆ ಇವೆಲ್ಲವೂ ಕಾಣಸಿಗುವುದು ಅಪರೂಪ. ಹೊಸ ಜೀವನ ಶೈಲಿಗೆ ಹೊಂದಿಕೊಂಡ ಜನರಿಗೆ ಸಮಯವೂ ಇರುವುದಿಲ್ಲ .”ಇವೆಲ್ಲ ಕಷ್ಟ ಯಾಕೆ? ಹಣಕೊಟ್ಟು ಫ್ಯಾಕ್ಟರಿಗಳಲ್ಲಿ ತಯಾರಿಸಿರುವುದನ್ನೇ ಕೊಂಡರಾಯಿತು’ ಎನ್ನುವ ಮನೋಭಾವವೇ ಹೆಚ್ಚಾಗಿದೆ.
ಆ ಖುಷಿಯನ್ನು ಅನುಭವಿಸಿದ ನಾವೇ ಪುಣ್ಯವಂತರು. ರಜೆಯಲ್ಲಿ ದೂರದೂರಿನಲ್ಲಿರುವ ನೆಂಟರು, ಮಕ್ಕಳು ಮನೆಯಲ್ಲಿ ಜಮಾಯಿಸುತ್ತಿದ್ದರು. ಮಾವಿನ ಮರ, ಗೇರು ಮರಗಳಿಗೆ ಕಲ್ಲೆಸೆದು ಉದುರಿಸಿ ತಿನ್ನುವ ತಾಜಾ ಹಣ್ಣುಗಳ ಸವಿಯೆಷ್ಟು! ತೃಪ್ತಿಯೆಷ್ಟು! ಊರ ಹೊಳೆಗಳಲ್ಲೋ ಮಕ್ಕಳ ದಂಡು. ಖುಷಿಯಿಂದ ನೀರಲ್ಲಿ ಮುಳುಗಿ ಕೈಕಾಲು ಬಡಿಯುವಾಗ ನಮಗರಿವಿಲ್ಲದಂತೆ ಈಜಾಡಲು ಕಲಿತುಬಿಡುತ್ತಿದ್ದೆವು. ಸಂಜೆಯ ವೇಳೆ ಸಮುದ್ರ ತಟ. ಆಹಾ… ಎಷ್ಟು ಮಜಾ ! ಈಗೆಲ್ಲ ಬರಿಯ ನೆನಪುಗಳೇ.
ಮನೆಯ ನಾಲ್ಕು ಗೋಡೆಗಳ ನಡುವೆ ಸೆಕೆಯೆಂದು ಚಡಪಡಿಸುತ್ತ ಫ್ಯಾನಿನ ವೇಗವನ್ನು ಹೆಚ್ಚಿಸಿಯೋ ಹವಾನಿಯಂತ್ರಕ ಬಳಸಿಯೋ ಕುಳಿತು ಹಣ್ಣಿನ ರಸ ಹೀರುವ ಬದಲಾದ ಜೀವನ ಶೈಲಿ ಈಗ ಬೇಸರ ತರಿಸುವುದು ಸಹಜ. ಅನಿವಾರ್ಯತೆಯ ಹೊರತಾದ ಯಾವುದೇ ಐಷಾರಾಮವೂ ಬೇಕೆನಿಸುವದಿಲ್ಲ ನಮಗೆ. ದುಡಿಮೆಗಾರರೇ ಇರುವ ಪರಿಸರದಲ್ಲಿ ಬೆಳೆದುದರ ಪ್ರಭಾವವಿರಬಹುದೇನೋ. ಅವರಂತೆಯೇ ನಾವೂ ಯಾಕೆ ಇರಬಾರದು? ಎಂಬ ಮನೋಭಾವ. ಅದು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರಿಸಿದೆ ಎಂಬುದು ಗಮನಾರ್ಹ ಅಂಶ.
ಬೇಸಿಗೆ ರಜೆ ಬಂತೆಂದರೆ ಇಲ್ಲಿನ ಮಕ್ಕಳದ್ದು ಹಿಲ್ ಸ್ಟೇಷನ್‌ಗಳಿಗೆ ಪ್ರವಾಸಕ್ಕೆ ಹೋಗುವ ಬೇಡಿಕೆ. ಅವರಿಗೂ ವೇಳೆ ಕಳೆಯಬೇಕಲ್ಲ. ಬೇರೆ ಮಾರ್ಗವಿಲ್ಲ. ಊರ ಮನೆಯಲ್ಲಿ ಒಬ್ಬರೋ ಇಬ್ಬರೋ ಇರುವುದರಿಂದ “ಅಲ್ಲಿ ಆಟವಾಡಲು ಯಾರೂ ಇರಲ್ಲ, ನಾನು ಬರಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ. ಪಾಲಕರ ಮನೋಭಾವವೂ ಅವರಿಗೆ ಬೆಂಬಲವಾಗಿಯೇ ಇರುವುದು. ವಾಟರ್‌ಪಾರ್ಕ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ಟಿಕೆಟ್‌ಗಳು, ರೂಮ್‌ಗಳು ಸಿಗುವುದೇ ಕಷ್ಟ. ಸಿಕ್ಕಿತೆಂದು ಖುಷಿಯಿಂದ ಹೋದರೆ ಜನಜಂಗುಳಿ. ಯಾವುದನ್ನೂ ಸರಿಯಾಗಿ ಆನಂದಿಸಲು ಆಗದು. ಸುಮ್ಮನೆ ಒಂದಿಷ್ಟು ಹಣ ಸುರಿದು ತಂಪಾಗಿ ಬರುತ್ತಾರೆ. ಅದನ್ನು ಆಚೆ ಈಚೆಯವರ ಹತ್ತಿರ ಹೇಳಿಕೊಂಡೋ ಫೋನ್‌ಗಳಲ್ಲಿ ಸಂದೇಶ ಕಳಿಸಿಯೋ ಇನ್ನಷ್ಟು ತಂಪಾಗುತ್ತಾರೆ. ಕಾಲಕ್ಕೆ ತಕ್ಕಂತೇ ಕುಣಿಯಲೇ ಬೇಕು.
ಸೆಕೆಗಾಲವೆಂದು ಚಡಪಡಿಸುವದಕ್ಕಿಂತ, ನಮ್ಮ ಯಾಂತ್ರಿಕ, ಆಧುನಿಕ, ಜೀವನಶೈಲಿಯಿಂದ ಅಪರೂಪಕ್ಕಾದರೂ ಹೊರಗೆ ಬಂದು, ಪ್ರಕೃತಿಯ ಸೇವೆಯಲ್ಲಿ ಸಕ್ರಿಯರಾಗಬೇಕು. ಅಂದರೆ ಮಾತ್ರ ಹಸಿರಾದ, ಹಸನಾದ, ಹಸಿಯಾದ ಭೂತಾಯಿ ತನ್ನ ಮಡಿಲಲ್ಲಿ ತಂಪಾದ ಆಸರೆ ನೀಡಲು ಸಾಧ್ಯವಾದೀತು. ನಿಸರ್ಗದ ನಿಯಮಗಳನ್ನು ಬದಲಿಸಲಂತೂ ನಮ್ಮಿಂದ ಸಾಧ್ಯವೇ ಇಲ್ಲ. ಆದಷ್ಟು ಹಿತಮಿತದಲ್ಲಿ ಪ್ರಕೃತಿ ನೀಡಿದ ಕಾಣಿಕೆಗಳನ್ನು ಬಳಸಿ, ಆಹಾರ ಇಳಿಸಿ, ಪರಿಸರವನ್ನೂ ಆರೋಗ್ಯವನ್ನೂ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.
ಕಲಾಚಿದಾನಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.