ಸಾಂಪ್ರದಾಯಿಕ ಉಡುಗೆಯ ಸುಂದರ-ಸುಂದರಿಯರು
Team Udayavani, Dec 22, 2017, 1:24 PM IST
ಇವತ್ತು ಹೆಚ್ಚಿನ ಹುಡುಗಿಯರು ಪ್ಯಾಂಟು-ಟೀಶರ್ಟುಗಳನ್ನು ಧರಿಸಲು ಬಯಸುತ್ತಾರೆ. ಹಾಫ್ಪ್ಯಾಂಟುಗಳನ್ನು ಧರಿಸುವ ತರುಣಿಯರೂ ಇದ್ದಾರೆ. ಆದರೆ, ದೇಹದ ಭಾಗಗಳನ್ನು ಕಾಣಿಸುವಂತೆ ಧರಿಸುವ ಇಂಥ ಉಡುಗೆಗಳ ತರುಣಿಯರ ಮುಂದೆ ಸೀರೆ ಉಟ್ಟ ಒಬ್ಟಾಕೆಯನ್ನು ನಿಲ್ಲಿಸಿದರೆ ಆಕೆ ಎಲ್ಲರ ಸೌಂದರ್ಯವನ್ನು ತಾನೊಬ್ಬಳೇ ಹೀರಿಕೊಂಡಂತೆ ಭಾಸವಾಗುತ್ತದೆ. ಅಂದರೆ, ಮೈಯ ಭಾಗಗಳನ್ನು ಗರಿಷ್ಠವಾಗಿ ಮುಚ್ಚುವ ಉಡುಗೆಯೇ ಭಾರತೀಯ ಸಂಸ್ಕೃತಿಯ ನಿಜವಾದ ಪ್ರತೀಕ. ಸೀರೆ ಇಂಥ ಉಡುಗೆಯಾಗಿದೆ. ಉಡುಗೆ-ತೊಡುಗೆಗಳ ಉದ್ದೇಶವೇ ದೇಹವನ್ನು ಮುಚ್ಚುವುದಲ್ಲವೆ? ಕೈಕಾಲು ಮುಖವಲ್ಲದೆ ಬೇರೆ ಭಾಗಗಳನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಕಾಣಿಸಬೇಕೆಂಬ ಹಠ ಯಾಕೆ? ಇದರಿಂದ ಏನನ್ನು ಸಾಧಿಸಿದ ಹಾಗಾಗುತ್ತದೆ?
ಯುವಜನರಲ್ಲಿ ಮತ್ತೆ ಸಾಂಪ್ರದಾಯಿಕ ಉಡುಗೆ-ತೊಡುಗೆಯ ಬಗ್ಗೆ ಆಸಕ್ತಿ ಮೂಡುತ್ತಿರುವುದು ಅಭಿಮಾನಪಡತಕ್ಕ ಬೆಳವಣಿಗೆಯಾಗಿದೆ. ಅದರಲ್ಲೂ ಈಗ ಸುಲಭವಾಗಿ ಸೀರೆ ಉಡುವುದು ಹೇಗೆ; ಉಟ್ಟ ಮೇಲೆ ಅದನ್ನು ನಿಭಾಯಿಸುವುದು ಹೇಗೆ- ಮುಂತಾದವುಗಳನ್ನು ಹೇಳಿಕೊಡುವ ಮಾರ್ಗದರ್ಶಕಿಯರೂ ಹೆಚ್ಚಾಗಿದ್ದಾರೆ. ಬ್ಯೂಟೀಶಿಯನ್‌ಗಳಿಗೆ ಇದು ಉಪವೃತ್ತಿಯಾಗಿದೆ.
ಸೀರೆ ಉಟ್ಟವಳೇ ನಿಜವಾದ ನೀರೆ !
ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗನ ಕಲಿಕೆಯ ಅವಧಿ ಮುಗಿಯುವ ಕಡೆಯ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಒಂದು ಸಾಂಪ್ರದಾಯಿಕ ದಿನವನ್ನು ಆಯೋಜಿಸಿದ್ದರು. ಅಂತೆಯೇ ಎಲ್ಲರೂ ತಮ್ಮ ತಮ್ಮ ಧರ್ಮಗಳ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿಕೊಂಡು ಬಂದಿದ್ದರು. ಹಿಂದೂಗಳೇ ಹೆಚ್ಚಾಗಿದ್ದ ಆ ಕಾಲೇಜಿನಲ್ಲಿ ಎಲ್ಲೆಲ್ಲಿ ನೋಡಿದರೂ ಪಂಚೆಯೇ ತಾಂಡವವಾಡುತ್ತಿತ್ತಂತೆ. ಅದರಲ್ಲೂ ಇನ್ನೂ ಶಾಸ್ತ್ರ ಸಂಪ್ರದಾಯದವರು ಕಚ್ಚೆಪಂಚೆಯನ್ನು ಧರಿಸಿಕೊಂಡು ಬಂದಿದ್ದರೆಂಬುದು ಇನ್ನೂ ಗಮನಾರ್ಹ. ಕೆಲವರು ಪೈಜಾಮ, ಜುಬ್ಬ ಧರಿಸಿದ್ದರೆ ಹುಡುಗಿಯರೆಲ್ಲ ಆ ಒಂದು ದಿನ ಪ್ಯಾಂಟು, ಶರ್ಟು, ಚೂಡಿದಾರುಗಳಿಗೆಲ್ಲ ವಿರಾಮ ನೀಡಿ ಭಾರತೀಯ ಅಪ್ಪಟ ಸ್ತ್ರೀಯರ ವಿನ್ಯಾಸದಲ್ಲಿ ಸೀರೆ, ಲಂಗ-ದಾವಣಿ ಧರಿಸಿ “ಭಾರತೀಯ ನೀರೆ, ನಿನಗೆಷ್ಟು ಅಂದವೇ ಸೀರೆ’ ಎಂಬಂತೆ ಶೋಭಿಸುತ್ತಿದ್ದರಂತೆ.
ಅನಾದಿ ಕಾಲದಿಂದಲೂ ಪಂಚೆಯು ನಮ್ಮ ಜನರ ಪ್ರಮುಖ ಉಡುಗೆಯಾಗಿತ್ತು. ಪೌರೋಹಿತ್ಯ ವರ್ಗದವರಂತೂ ಕಚ್ಚಪಂಚೆ ಧರಿಸದೆ ಒಂದು ದಿನವೂ ಹೊರಗಡೆ ಕಾಲಿಡುತ್ತಿರಲಿಲ್ಲ. ತಲೆಯಲ್ಲಿ ಒಂದು ಜುಟ್ಟು , ಕಚ್ಚೆಪಂಚೆ, ಮೈಮೇಲೊಂದು ಜುಬ್ಬ , ಅದರ ಮೇಲೆ ಒಂದು ಶಾಲು ಇಷ್ಟರಿಂದಲೇ “”ಪೂಜಾರು ಬಂದರು” ಎಂದು ಅವರನ್ನು ಗುರುತಿಸುತ್ತಿದ್ದರು. ಅವರುಗಳ ಪುಟ್ಟ ಮಕ್ಕಳೂ ಅದೇ ಉಡುಗೆಗಳನ್ನು ಧರಿಸಿ ಶಾಲೆಗೆ ಹೋಗಬೇಕಾಗಿತ್ತು. ಕ್ರಮೇಣ ಸಹಪಾಠಿಗಳಿಂದ ಹಾಸ್ಯಕ್ಕೆ ಗುರಿಯಾಗುತ್ತಿದ್ದ ಮಕ್ಕಳು ಜುಟ್ಟನ್ನು ಕತ್ತರಿಸಿ, ತಲೆಕೂದಲನ್ನು ಬೆಳೆಸಿಕೊಳ್ಳಲಾರಂಭಿಸಿದರು. ಕಚ್ಚೆಪಂಚೆಯ ಸ್ಥಾನವನ್ನು ಚಲ್ಲಣಗಳು ಆಕ್ರಮಿಸಿಕೊಂಡವು. ಯುವಕರಾಗುತ್ತಿದ್ದಂತೆ ಪಾಶ್ಚಾತ್ಯ ಉಡುಗೆಗಳು ಹದಿಹರೆಯದವರನ್ನು ಆಕರ್ಷಿಸಿದುದರಲ್ಲಿ ಆಶ್ಚರ್ಯವೇನಿಲ್ಲ. ಪ್ಯಾಂಟು, ಕೋಟುಗಳು ನಮ್ಮ ದೇಶದ ಉಡುಗೆಯೋ ಏನೋ ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತವಾಗಿಬಿಟ್ಟವು. ಹುಡುಗರಂತೂ ಪ್ಯಾಂಟುಗಳಿಗೆ ಅಧೀನರಾದ ಮೇಲೆ ಹುಡುಗಿಯರೂ ನಾವೇನು ಕಮ್ಮಿ ಎಂಬಂತೆ ಪ್ಯಾಂಟುಗಳಿಗೆ ಮುಗಿಬಿದ್ದರು. ಮೊದಲು ದೊಗಲೆಯಾಗಿದ್ದ ಪ್ಯಾಂಟುಗಳು ಟೈಟು ಪ್ಯಾಂಟುಗಳಾಗಿ ಕ್ರಮೇಣ ಮಾರ್ಪಾಟಾಯಿತು. ತಮ್ಮ ಅಂಗ ರಚನೆಗಳನ್ನೆಲ್ಲ ಎಲ್ಲರಿಗೂ ರಾಜಾರೋಷವಾಗಿ ತೋರಿಸುವುದಕ್ಕೆ ಯಾವುದೇ ಹಿಂಜರಿಕೆಯಿರಲಿಲ್ಲ. ದೇವರು ಸೌಂದರ್ಯ ಕೊಟ್ಟಿರು ವುದೇ ಪ್ರದರ್ಶನಕ್ಕಾಗಿ. ಎಲ್ಲರೂ ನೋಡಿದರೆ ತಪ್ಪೇನು ಎಂಬ ಅವರ ವಾದದ ಮುಂದೆ ಯಾರಿಗೂ ಎದುರಾಡುವ ಧೈರ್ಯವೇ ಇರಲಿಲ್ಲ.
ಹಿರಿಯರು ನೆಟ್ಟು , ನೀರೆರೆದು, ಪೋಷಿಸಿ, ಹೆಮ್ಮರವಾಗಿದ್ದ ನಮ್ಮ ಸಂಸ್ಕೃತಿಯ ಬೇರಿಗೆ ಇನ್ನೇನು ಕೊಡಲಿಯೇಟು ಬಿದ್ದಿತು ಎನ್ನುವಷ್ಟರಲ್ಲಿ ಆಶಾಕಿರಣವೊಂದು ಉದಯಿಸಿದೆ. ನಮ್ಮ ಇತ್ತೀಚಿನ ಪೀಳಿಗೆಯ ಯುವಕರು ನಮ್ಮ ಸಂಸ್ಕೃತಿಯನ್ನು ಉಳಿಸಲು, ಗೌರವಿಸಲು ಹೊರಟಿರುವುದು ಒಂದು ಆಶಾದಾಯಕ ಬೆಳವಣಿಗೆ. ಅವರಿಗೆ ಅದೊಂದು ಫ್ಯಾಷನ್ ಆಗಿರಬಹುದು. ಆದರೂ ಅದು ಸ್ವಲ್ಪಮಟ್ಟಿಗೆ ಒಂದು ಸಮಾಧಾನಕರವಾದ ವಿಷಯ.
ಈಗಂತೂ ಕೆಲವು ಸಾಂಪ್ರದಾಯಿಕ ಮನೆಗಳಲ್ಲಿ ಪೂಜೆ, ಹಬ್ಬ, ಹರಿದಿನ ಮುಂತಾದ ವಿಶೇಷ ದಿನಗಳಲ್ಲಿ ಹದಿಹರೆಯದವರು ತಮ್ಮ ಮಾತಾ-ಪಿತೃಗಳಿಗೆ ಸರಿಸಮನಾಗಿ ಪಂಚೆ, ಸೀರೆಗಳನ್ನು ಧರಿಸಿ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸ್ವಾಗತಾರ್ಹ. ಹೇಗೆಂದರೆ ಹಾಗೆ ಪಂಚೆ, ಸೀರೆಗಳನ್ನು ಧರಿಸಿದರೆ ಅದಕ್ಕೆ ಮರ್ಯಾದೆ ಸಿಗುವುದಿಲ್ಲ. ಪಂಚೆಯನ್ನು ಚಂದವಾಗಿ ಉಡುವುದೂ ಒಂದು ಕಲೆ. ಅದರಲ್ಲೂ ಕಚ್ಚೆ ಹಾಕಿ ಪಂಚೆಯನ್ನು ಉಡಬೇಕಾದರೆ ಅನುಭವ ಬೇಕಾಗುತ್ತದೆ. ಹಿಂದುಗಡೆ ಅದರ ಜರಿಯನ್ನು ನೆರಿಗೆ ಹಿಡಿದು ಪಟ್ಟಿಯಂತೆ ಸಿಕ್ಕಿಸಿದರೆ ಕಲಾತ್ಮಕವಾಗಿ ಕಾಣುತ್ತದೆ. ಶುಭ್ರವಾದ ಕಚ್ಚೆಪಂಚೆ ಉಟ್ಟು , ಮೇಲೊಂದು ಜುಬ್ಬ , ಹೆಗಲ ಮೇಲೊಂದು ಶಾಲು ಹಾಕಿಕೊಂಡು ಹೋಗುತ್ತಿದ್ದರೆ ಆ ವ್ಯಕ್ತಿಯ ಮೇಲೆ ನಿಜವಾಗಲೂ ಗೌರವ ಉಕ್ಕುತ್ತದೆ.
ಹಿಂದೆ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಪಂಡಿತರುಗಳೆಂದರೆ ನಮ್ಮ ಕಣ್ಮುಂದೆ ಒಂದು ಚಿತ್ರ ಹಾದುಹೋಗುತ್ತಿತ್ತು. ಅವರೇ ಕಚ್ಚೆಪಂಚೆಯ ಅವದೂತರುಗಳು. ಹಾಗೆಯೇ ದೇವಸ್ಥಾನಗಳಲ್ಲಿ ಪೂಜೆ ಮಾಡುವವರದೂ ಅದೇ ರೀತಿಯ ಉಡುಗೆಯಾಗಿದ್ದಿತು. ಅದರಲ್ಲೂ ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ನಾವು ನೋಡುವುದು ಇಂಥ ವ್ಯಕ್ತಿಗಳನ್ನೇ. ಇಂದೂ ಕೆಲವಾರು ದೇವಸ್ಥಾನಗಳಲ್ಲಿ ಪ್ಯಾಂಟು ಧರಿಸಿದ ವ್ಯಕ್ತಿಗಳಿಗೆ ದೇವಾಲಯ ಪ್ರವೇಶ ನಿಷಿದ್ಧವಾಗಿರುವುದನ್ನು ನಾವು ಗಮನಿಸಬಹುದು.
ಇತ್ತೀಚೆಗಂತೂ ಕಚ್ಚೆಪಂಚೆಗಳು ಫ್ಯಾಷನ್ ಆದ ನಂತರ ಅದು ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಬರುತ್ತಿವೆ. ಸಿದ್ಧ ಉಡುಪುಗಳಂತೆ ತಯಾರಿಸಿದ ಅವುಗಳನ್ನು ಧರಿಸುವುದೂ ಸುಲಭ. ದೊಡ್ಡ ದೊಡ್ಡ ವಸ್ತ್ರದ ಕಂಪೆನಿಗಳಂತೂ ಇದರ ತಯಾರಿಕೆಯಲ್ಲಿ ಹಿರಿಮೆಯನ್ನು ಸಾಧಿಸಿವೆ. ಮದುವೆ, ಪೂಜಾವಿಧಿ ಮುಂತಾದ ಕಾರ್ಯಕ್ರಮಗಳಲ್ಲಿ ಪುಟ್ಟ ಪುಟ್ಟ ಮಕ್ಕಳೂ “ಧೋತಿ’ ಎಂದು ಕರೆಯಲ್ಪಡುವ ಕಚ್ಚೆಪಂಚೆಯನ್ನು ಧರಿಸಿ ಅತ್ತಿಂದಿತ್ತ ಓಡಾಡುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ.
ಕೆಲವಾರು ಕಡೆಗಳಲ್ಲಿ ಪಂಚೆಯನ್ನು ಉಟ್ಟ ವ್ಯಕ್ತಿಗಳನ್ನು ಕೀಳಾಗಿ ಕಂಡಿದ್ದಾರೆ. ದೊಡ್ಡ ದೊಡ್ಡ ಸಭೆಗಳಲ್ಲಿ ಅವರಿಗೆ ಸ್ಥಾನ ಕಲ್ಪಿಸುವಲ್ಲಿಯೂ ನಿರ್ಲಕ್ಷ್ಯ ತೋರಿದ್ದಾರೆ. ಪ್ರವೇಶವನ್ನು ನಿರಾಕರಿಸಿದ ಸಂದರ್ಭವೂ ಉಂಟು. ಆದರೆ, ಕೆಲವು ಧೈರ್ಯಶಾಲಿಗಳು ಯಾರ ಬಲವಂತಕ್ಕೂ ತಮ್ಮ ಉಡುಗೆಗಳನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಛಲತೊಟ್ಟಿದ್ದಾರೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೇವಲ ಉಡುಗೆ-ತೊಡುಗೆಗಳಿಂದ ಅಳೆಯಲು ಸಾಧ್ಯವಿಲ್ಲ. ಬಾಹ್ಯಾಡಂಬರಕ್ಕಿಂತ ಅಂತರಂಗ ಶುದ್ಧಿ ಮುಖ್ಯ ಎನ್ನುವುದನ್ನು ಅರಿಯಬೇಕು. ಪ್ಯಾಂಟು, ಕೋಟು, ಟೈ, ಬೂಟು ತೊಟ್ಟ ಮಾತ್ರಕ್ಕೆ ಅವನು ದೊಡ್ಡ ಮನುಷ್ಯನಾಗುವುದಿಲ್ಲ. ಯಾವ ವ್ಯಕ್ತಿಯೂ ತಂತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸುತ್ತಾನೋ ಅವನೇ ಆದರ್ಶ ವ್ಯಕ್ತಿ.
ಆಯಾ ದೇಶಗಳಲ್ಲಿ ಅಲ್ಲಿನ ಭೌಗೋಳಿಕ ಲಕ್ಷಣಗಳಿಗನುಗುಣವಾಗಿ ಉಡುಗೆಗಳನ್ನು ಧರಿಸುತ್ತಾರೆ. ಹೆಚ್ಚು ಚಳಿಯಿರುವ ಪ್ರದೇಶಗಳಲ್ಲಿ ಪ್ಯಾಂಟು ಕೋಟುಗಳು ಸೂಕ್ತ ಉಡುಗೆ ಗಳಾಗಿರುತ್ತವೆ. ಹಾಗಂತ ಅತ್ಯಂತ ಉಷ್ಣವಿರುವ ನಮ್ಮ ದೇಶದಲ್ಲಿ ಅಂಥ ಉಡುಗೆಗಳು ಯಾವಾಗಲೂ ಸರಿಹೊಂದುವುದಿಲ್ಲ. ಈ ಎಲ್ಲಾ ದೃಷ್ಟಿಯಿಂದ ನೋಡುವುದಾದರೆ ಇಂದಿನ ಯುವಕರು ಸೀಮಿತ ದಿನಗಳಲ್ಲಿಯಾದರೂ ತಮ್ಮ ಸಾಂಪ್ರದಾಯಿಕ ಉಡುಗೆಯ ಮಹತ್ವ ಗಮನಿಸಿ ಅದನ್ನು ಎಲ್ಲರಿಗೂ ಪ್ರಚುರಪಡಿಸುತ್ತಿರುವುದು ಸಂತೋಷಕರವಾದ ವಿಷಯ. “ಸಾಂಪ್ರದಾಯಿಕ ದಿನ’ ಎಂಬ ನೆಪದಲ್ಲಿಯಾದರೂ ನಮ್ಮ ಉಡುಗೆಗೆ ಮರ್ಯಾದೆ ಕೊಟ್ಟಿರುವುದು ವಿಶೇಷ. ಇಂಥ ದಿನಗಳಲ್ಲಿ ಆಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ಸುಸಂದರ್ಭಗಳಲ್ಲಿಯೂ ಅವುಗಳತ್ತ ಗಮನ ಹರಿಸಬೇಕಾದುದು ಅವಶ್ಯಕ. ಹಾಗೆ ಮಾಡಿದಾಗ ಮಾತ್ರ ನಮ್ಮ ಸಂಸ್ಕೃತಿಯ ಉಳಿವು ಸಾಧ್ಯ ಕೆಲವು ಪಾಶ್ಚಾತ್ಯರು ನಮ್ಮ ಉಡುಗೆಗಳಿಗೆ ಮಾರುಹೋಗಿರುವುದಂತೂ ಸುಳ್ಳಲ್ಲ. ನಮ್ಮ ಭವ್ಯ ಪರಂಪರೆಯನ್ನು, ಸಂಸ್ಕೃತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕಾದ ಜವಾಬ್ದಾರಿಯನ್ನು ಯುವಪೀಳಿಗೆ ಅರಿತುಕೊಳ್ಳಬೇಕಾದುದು ಅಗತ್ಯ. ಪಾಶ್ಚಾತ್ಯ ಉಡುಪುಗಳು ಧರಿಸಲು ಸುಲಭ, ದೈನಂದಿನ ಕೆಲಸಕ್ಕೆ ಅನುಕೂಲಕರ ಎಂಬ ವಾದವೂ ಇದೆ. ಹಾಗಂತ ಅದಕ್ಕೇ ದಾಸರಾಗುವುದು ಸರಿಯಲ್ಲ.
ಪುಷ್ಪಾ ಕೆ. ಎನ್. ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.