ನೋಡುಗನ ಕಣ್ಣಿನಲ್ಲಿದೆ ಸೌಂದರ್ಯ; ಮನಸ್ಸಿನಲ್ಲಿರಬಹುದು ಕಲ್ಮಶ
Team Udayavani, Aug 4, 2017, 10:57 AM IST
ಹೆಣ್ಣಿಗೆ ಸೀರೆಗಿಂತ ಚೆಂದದ ದಿರಿಸು ಬೇರಿಲ್ಲ ಅನ್ನೋ ಮಾತನ್ನು ನಾವೆಲ್ಲಾ ಕೇಳುತ್ತಲೇ ಬೆಳೆದಿದ್ದೇವೆ. ನನಗೂ ಸೀರೆಯಷ್ಟು ಪ್ರಿಯವಾದ ಉಡುಗೆ ಇನ್ನೊಂದಿಲ್ಲ. ಇದಕ್ಕೆ ಕಾರಣ ಸರಳ. ಒಮ್ಮೆ ಕೊಂಡರೆ ಎಂದಿಗೂ ಧರಿಸಬಹುದಾದ ಬಟ್ಟೆ ಇದು. ಹಾಗೆಂದು, ಜೀನ್ಸ್ ಕೂಡ ನನಗೆ ಪ್ರಿಯವೇ. ತುಂಬ ಅನೌಪಚಾರಿಕವಾದ ತೊಡುಗೆ ಎಂಬ ಕಾರಣಕ್ಕೆ ಅದನ್ನು ಪ್ರೀತಿಸುತ್ತೇನೆ.
ವಸ್ತ್ರವಿನ್ಯಾಸಕ್ಕೆ ಒಂದು ಚರಿತ್ರೆಯಿದೆ. ಮನುಷ್ಯ ಕಾಡಿನಿಂದ ನಾಡಿಗೆ ಬರುತ್ತಿದ್ದಂತೆ ಆತನ ಜೀವನ ಶೈಲಿ ಬದಲಾಗುತ್ತ ಬಂದಿತು. ಮೊದಲು ಬಟ್ಟೆ ಧರಿಸುವುದು ಆತನ/ಆಕೆಯ ಮೂಲಭೂತ ಆವಶ್ಯಕತೆಯಾಗಿತ್ತು. ಆದರೆ, ನಿಧಾನಕ್ಕೆ ಇದು ಪ್ರತಿಷ್ಠೆಯ ಅಥವಾ ಸೌಂದರ್ಯದ ಪ್ರತೀಕವಾಗಲಾರಂಭಿಸಿತು. ನಾನೂ “ಬದಲಾವಣೆಯೇ ಸತ್ಯ’ ಎಂದು ನಂಬಿದವಳು. ಹಾಗಾಗಿಯೇ ಜೀವನದ ರೀತಿನೀತಿಗಳು ಬದಲಾದಂತೆ ಧರಿಸುವ ಬಟ್ಟೆಯ ಸ್ವರೂಪಗಳೂ ಬದಲಾಗಬೇಕೆಂಬ ಮಾತನ್ನು ಒಪ್ಪುತ್ತೇನೆ. ಇಂಥ ಬದಲಾವಣೆಯನ್ನು ತಡೆಯುವುದು ಅಸಾಧ್ಯ. ಈ ಬದಲಾವಣೆಯ ಫಲಿತವನ್ನು ಇಂದು ನಾವು ವೈವಿಧ್ಯಮಯ ವಿನ್ಯಾಸದ ಬಟ್ಟೆಗಳಲ್ಲಿ ಕಾಣುತ್ತೇವೆ.
ಹೆಣ್ಣುಮಕ್ಕಳಲ್ಲಿ ತಾವು ಸುಂದರ ಕಾಣಿಸಬೇಕೆಂಬ ಹಂಬಲ ಯಾವಾಗಲೂ ಇರುವಂಥಾದ್ದೇ. ಇದು ಆನುವಂಶಿಕವಾಗಿ ಬರುವ ಮನೋಸ್ಥಿತಿಯೇನೂ ಅಲ್ಲ. ಬದಲಿಗೆ, ಬೆಳವಣಿಗೆಯ ಸಮಯದಲ್ಲಿ ಹೆಣ್ಣಿಗೆ ಕಲಿಸುವ ಪಾಠಗಳಲ್ಲೊಂದಾಗಿರುತ್ತದೆ. “ಸಮಾಜದಲ್ಲಿ ನಿನ್ನನ್ನು ಒಪ್ಪಲು ನಿನ್ನ ಸೌಂದರ್ಯವೇ ಕಾರಣ’ ಅಂತ ನಿರಂತರವಾಗಿ ಬೋಧಿಸುತ್ತ ಬರಲಾಗುತ್ತದೆ. ಇದರ ಜೊತೆಗೆ ಪ್ರಾಯ ಸಹಜವಾಗಿ ಬಣ್ಣಗಳ ಬಗ್ಗೆ ಒಂದು ರೀತಿಯ ಆಕರ್ಷಣೆ ಹೆಚ್ಚುತ್ತದೆ. ಹಾಗಾಗಿ, ವೈವಿಧ್ಯಮಯವಾದ ಉಡುಗೆ-ತೊಡುಗೆಗಳನ್ನು ಹೆಣ್ಣು ಸಹಜವೆಂಬಂತೆ ಬಯಸುತ್ತಾಳೆ. ಜೊತೆಗೆ ಸಮಾಜದಲ್ಲಿ ತನಗೆ ಪ್ರಾಮುಖ್ಯವಿಲ್ಲ ಎಂದು ಅರಿತ ಹೆಣ್ಣು ಆ ಪ್ರಾಮುಖ್ಯವನ್ನು ಗಳಿಸಿಕೊಳ್ಳುವುದಕ್ಕಾಗಿ ಹಂಬಲಿಸುತ್ತಾಳೆ ಮತ್ತು ಅದಕ್ಕಾಗಿ ಬಾಹ್ಯ ಉಡುಗೆಗಳನ್ನು ವಿಶಿಷ್ಟವಾಗಿ ಕಾಣಿಸಲು ಪ್ರಯತ್ನಿಸುತ್ತಾಳೆ. ಆಕೆಗೆ ಸಮಾಜದಲ್ಲಿ ಮತ್ತೂಬ್ಬ ಹೆಣ್ಣಿನೊಂದಿಗೆ ಸ್ಪರ್ಧೆ ಇರುತ್ತದೆ, ಜೊತೆಗೆ ಗಂಡಿನ ಜೊತೆಗೂ ಸ್ಪರ್ಧಿಸುವ ಸವಾಲು ಇರುತ್ತದೆ. ಇದಕ್ಕನುಗುಣವಾಗಿ, ಫ್ಯಾಷನ್ ಹಾಗೂ ತರಹೇವಾರಿ ಬಟ್ಟೆಗಳ ಉದ್ಯಮ ಆರಂಭವಾಗುತ್ತದೆ.
ವ್ಯಕ್ತಿ ಧರಿಸುವ ವಸ್ತ್ರ ಆತ/ಆಕೆಯ ಶರೀರವನ್ನು ಬಾಹ್ಯವಾಗಿ ಮುಚ್ಚಿದ್ದರೂ ಅದು ಆಂತರಿಕ ವ್ಯಕ್ತಿತ್ವದ ಕನ್ನಡಿ ತಾನೆ? ತನಗೆ ಆರಾಮದಾಯಕವೆನಿಸುವ, ತನ್ನತನವನ್ನು ಪ್ರಚುರಪಡಿಸಲು ಇಚ್ಛಿಸುವ ಮನೋಧರ್ಮದ ಪ್ರತಿಬಿಂಬಗಳು ಆತ/ಆಕೆ ಹಾಕುವ ಬಟ್ಟೆಗಳು. ಆದರೆ, ಹೆಣ್ಣಿನ ವಸ್ತ್ರಗಳ ವಿಷಯಕ್ಕೆ ಬರುವಾಗ ಒಂದಿಷ್ಟು ಅನ್ಯ ಸಂಗತಿಗಳು ಗಮನಸೆಳೆಯುತ್ತವೆ. ಕೆಲವೊಮ್ಮೆ ಕಾಣದ ಕಡಿವಾಣ ಆಕೆಯನ್ನು ನಿಯಂತ್ರಿಸುತ್ತಿರುತ್ತದೆ. ಅವಳ ವಸ್ತ್ರಸಂಹಿತೆಯನ್ನು ಅಲಿಖೀತ ಕಾನೂನು ಹಿಡಿತದಲ್ಲಿಡುತ್ತದೆ. ತಾನು ಬಯಸುವ ಉಡುಗೆಯ ಬಗ್ಗೆ ಗಂಡಿಗಿಲ್ಲದ ನಿಯಂತ್ರಣ ಹೆಣ್ಣಿನ ಮೇಲೇಕೆ ಎಂಬುದು ಮುಖ್ಯ ಪ್ರಶ್ನೆ.
ಧರಿಸುವ ದಿರಿಸಿಗ್ಯಾಕೆ ಮಾನದಂಡ ?
ಹೆಣ್ಣು ಧರಿಸುವ ಬಟ್ಟೆಗಳೇ ಆಕೆಯ ನಡವಳಿಕೆಯನ್ನು ತಿಳಿಸುತ್ತವೆ ಅಂತ ಅಥವಾ ಆಕೆ ಧರಿಸುವ ದಿರಿಸು ಗಂಡುಗಳನ್ನು ಪ್ರಚೋದಿಸುತ್ತದೆ ಎಂಬುದು ಮುಖ್ಯವಾದ ಒಂದು ಆರೋಪ. ಹೆಣ್ಣಿನ ಉಡುಪಿನಲ್ಲಿ ಸಮಾಜದ ಮಾನ-ಮರ್ಯಾದೆಗಳ ಚೌಕಟ್ಟನ್ನು ಹುಡುಕುವ ಎಲ್ಲರಿಗೂ ನನ್ನದೊಂದು ಚಿಕ್ಕ ಪ್ರಶ್ನೆ- ಮನುಷ್ಯರೆಲ್ಲರನ್ನು ಆವರಿಸಿರುವ ಚರ್ಮ ಒಂದೇ ಅಲ್ಲವೆ? ಅದರಲ್ಲಿ ಗಂಡು-ಹೆಣ್ಣೆಂಬ ಭೇದ ಯಾಕೆ? ಗಂಡಿನ ಸಂದರ್ಭದಲ್ಲಿ ಇಲ್ಲದ ಪ್ರಚೋದನೆ ಹೆಣ್ಣಿನ ಸಂದರ್ಭಕ್ಕಾಗುವಾಗ ಯಾಕೆ ಉಂಟಾಗುತ್ತದೆ? ನಿಜವಾದ ಪ್ರಚೋದನೆ ಇರುವುದು ಧರಿಸುವ ದಿರಿಸಿನಲ್ಲಿಯೋ ಅಥವಾ ನೋಡುವ ಕಣ್ಣಿನಲ್ಲಿಯೊ?
ಈ “ಪ್ರಚೋದನಾಕಾರಿ’ ಎಂಬುದು ಆಯಾಯ ಕಾಲಘಟ್ಟಕ್ಕೆ, ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಪದವೆಂದು ನನ್ನ ಅನಿಸಿಕೆ. ಆದಿಮಾನವನ ಕಾಲದಿಂದ ಬದಲಾದ ವಸ್ತ್ರ ವಿನ್ಯಾಸದ ಬಗ್ಗೆ ತಿಳಿದಿರುವ ನಮಗೆ “ಪ್ರಚೋದನಾಕಾರಿ’ ಪದವು ತುಂಬ ಬಾಲಿಶ ಎನ್ನಿಸಬೇಕಲ್ಲವೆ? ತನ್ನ “ಅನ್ನಿಸುವಿಕೆ’ಯನ್ನು ಇನ್ನೊಬ್ಬರ ಮೇಲೆ ಹೊರಿಸುವ ಮಾಧ್ಯಮಗಳಾಗಿ “ಪ್ರಚೋದನಕಾರಿ’, “ನಡವಳಿಕೆ’ ಮುಂತಾದ ಪದಗಳನ್ನು ಬಳಸುತ್ತಾರೆ. ಒಂದು ಪ್ರದೇಶದಲ್ಲಿ ಒಂದು ಸಂದರ್ಭದಲ್ಲಿ ತಪ್ಪಾಗಿ ಕಾಣಿಸಿದ ವಸ್ತ್ರವಿನ್ಯಾಸ ಬೇರೊಂದು ಸಂದರ್ಭದಲ್ಲಿ ಸಹಜವಾದ ವಸ್ತ್ರವಾಗಿರುವುದು ನಮಗೆಲ್ಲ ತಿಳಿದಿದೆ. ಹಾಗಾದರೆ, ಇದು ನೋಡುವವನ ಮನಸ್ಥಿತಿ ಮತ್ತು ಸಂದರ್ಭವನ್ನು ಸೂಚಿಸುತ್ತದೆಯೇ ಹೊರತು ಧರಿಸುವವರು ಅದಕ್ಕೆ ಹೊಣೆಗಾರರಲ್ಲ.
ಆಂಗ್ಲ ಭಾಷೆಯಲ್ಲೊಂದು ಗಾದೆಯಿದೆ: “ನೋಡುಗನ ಕಣ್ಣಿನಲ್ಲಿದೆ ಸೌಂದರ್ಯ. ಅಂತೆಯೇ ನೋಡುಗನ ಮನಸ್ಸಿನಲ್ಲಿದೆ ಕಲ್ಮಶ.
ಧರಿಸುವ ದಿರಿಸಿನಿಂದ ವ್ಯಕ್ತಿಯ ನೈತಿಕ ಮೌಲ್ಯಗಳನ್ನು, ಸಮಾಜದ ಸಾಂಸ್ಕೃತಿಕ ಮೌಲ್ಯವನ್ನು ಅಳೆಯುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ವಿಶೇಷವಾಗಿ ಹೆಣ್ಣಿನ ಉಡುಪಿನ ನಮ್ಮ ದೃಷ್ಟಿಕೋನದ ಬಗ್ಗೆ ಮತ್ತೆ ಯೋಚಿಸಬೇಕಾಗಿದೆ.
ರಶ್ಮಿ ಕುಂದಾಪುರ
(ಲೇಖಕಿ ಎಂ. ಡಿ. ಪದವೀಧರೆ. ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.