ಬಾಡಿ ಶೇಮಿಂಗ್
Team Udayavani, Dec 29, 2017, 6:00 AM IST
ಸದಾ ಕಾಲ ಐಶ್ವರ್ಯಾ ರೈಯಂತೆಯೋ, ಕತ್ರಿನಾ ಕೈಫ್ಳಂತೆಯೋ ಇರಬೇಕಾದಲ್ಲಿ ಅದಕ್ಕನುಗುಣವಾದ ವರಮಾನ, ಆರೋಗ್ಯದ ಬಗ್ಗೆ ವ್ಯಯಿಸಲು ಸಮಯ, ಅನುಕೂಲ ಅವರಿಗೆ ಇರಬೇಕು. ಹೆಚ್ಚಿನ ಮಹಿಳೆಯರು ಇಪ್ಪತ್ತಕ್ಕೆಲ್ಲ ಮದುವೆಯಾಗಿ ನಲುವತ್ತರ ಹೊತ್ತಿಗೆ ಇಪ್ಪತ್ತು ಕೆ. ಜಿ. ಭಾರ ಹೆಚ್ಚಿಸಿಕೊಂಡು ಮನೆ, ಸಂಸಾರ, ಮಕ್ಕಳ ವಿದ್ಯಾಭ್ಯಾಸ ಎಂದೆಲ್ಲ ಒದ್ದಾಡುತ್ತಿರುತ್ತಾರೆ.
ಬಾಡಿ ಶೇಮಿಂಗ್’ ಇತ್ತೀಚೆಗೆ ಪ್ರಚಲಿತವಾಗಿರುವ ಶಬ್ದ. ಅತ್ಯಂತ ಮಾನವೀಯ ಕಳಕಳಿಯುಳ್ಳ ಈ ಶಬ್ದಕ್ಕೆ ದಿಗಿಲು ಹುಟ್ಟಿಸುವ, ಕಣ್ಣೀರು ಜಿನುಗಿಸುವ ಆಯಾಮಗಳಿವೆ. ಒಂದು ಕಾಲದಲ್ಲಿ ಫಿಲ್ಮ್ ಸ್ಟಾರ್‌ಗಳಿಗೆ ಮಾತ್ರ ಇದ್ದ ಅಂದ-ಚಂದದ ಬಗೆಗಿನ ಅತಿಯಾದ ಕಾಳಜಿ ಈಗ ಸಾಮಾಜಿಕ ಜೀವನದ ಎಲ್ಲ ಸ್ತರಗಳಲ್ಲೂ ವ್ಯಾಪಿಸಿರುವುದೇ ಇದಕ್ಕೆ ಕಾರಣ. ಶರೀರದ ಅಂದ, ಚಂದ, ಆಕಾರ, ಗಾತ್ರ ಬಣ್ಣ- ಹೀಗೆ ಇನ್ನೊಬ್ಬರನ್ನು ಅವಮಾನಿಸುವ, ಅವರ ಉಳಿದೆಲ್ಲ ಕ್ವಾಲಿಟಿಗಳನ್ನು ನಗಣ್ಯಗೊಳಿಸುವಂತೆ ಪರಿಗಣಿಸುವ ಮಾನವನ ಸಂಕುಚಿತ ಮನೋ ಭಾವವೇ ಬಾಡಿ ಶೇಮಿಂಗ್. ಇದಕ್ಕೆ ತುತ್ತಾದ ವ್ಯಕ್ತಿ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡು, ಇನ್ನಷ್ಟು ಕೀಳರಿಮೆಯ ಕೂಪಕ್ಕೆ ಬಿದ್ದು ನರಳುವ, ಹೆಚ್ಚೇಕೆ ಸರ್ಜರಿ ಇತ್ಯಾದಿಗಳಿಗೆ ಒಳಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಗಳೂ ಇವೆ.
ಬಾಡಿ ಶೇಮಿಂಗ್‌ನಲ್ಲಿ ಪ್ರಧಾನವಾದುದು ದೇಹದ ಗಾತ್ರದ ಬಗ್ಗೆ ಅವಹೇಳನ. ಒಂದು ಕಾಲಕ್ಕೆ ಗುಂಡು ಗುಂಡಾಗಿರುವುದು ಸಿರಿವಂತಿಕೆಯ, ಆರೋಗ್ಯದ ಲಕ್ಷಣವಾಗಿದ್ದರೆ ಈಗ ದಪ್ಪವಾಗಿರುವವರು ಸೋಮಾರಿಗಳೆಂದೂ, ಡಯಟ್ ಪಾಲಿಸುವ ಮನೋಬಲ ಇಲ್ಲದಿರುವವರು, ಬೊಜ್ಜು ಮೈಯ ನಿರಾಶಾವಾದಿಗಳೆಂದೂ ಪರಿಗಣಿಸಲ್ಪಡುತ್ತಾರೆ. ಇಪ್ಪತ್ತರ ಹುಡುಗಿಯನ್ನು “ಆಂಟಿ’ ಎಂದು ಕರೆದರೆ ಆಕೆಗೆಷ್ಟು ನೋವಾಗಬೇಡ? ಎಲ್ಲರೂ ಜೀವಮಾನವಿಡೀ ತೆಳ್ಳಗೆ-ಬೆಳ್ಳಗೆ ಬಳುಕುತ್ತಿರಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ತೆಳ್ಳಗೆ ಇದ್ದವರೂ ಕಾಲಾನುಕ್ರಮದಲ್ಲಿ ಹಾರ್ಮೋನ್ ವ್ಯತ್ಯಾಸದಿಂದಲೋ, ಮದುವೆ-ಬಸಿರು-ಬಾಣಂತನಗಳಿಂದಲೋ ದಢೂತಿಯರಾದ ಮಹಿಳೆಯರಾಗುತ್ತಾರೆ. ಸದಾ ಕಾಲ ಐಶ್ವರ್ಯಾ ರೈಯಂತೆಯೋ, ಕತ್ರಿನಾ ಕೈಫ್ಳಂತೆಯೋ ಇರಬೇಕಾದಲ್ಲಿ ಅದಕ್ಕನುಗುಣವಾದ ವರಮಾನ, ಆರೋಗ್ಯದ ಬಗ್ಗೆ ವ್ಯಯಿಸಲು ಸಮಯ, ಅನುಕೂಲ ಅವರಿಗೆ ಇರಬೇಕು. ಹೆಚ್ಚಿನ ಮಹಿಳೆಯರು ಇಪ್ಪತ್ತಕ್ಕೆಲ್ಲ ಮದುವೆಯಾಗಿ ನಲುವತ್ತರ ಹೊತ್ತಿಗೆ ಇಪ್ಪತ್ತು ಕೆ.ಜಿ. ಭಾರ ಹೆಚ್ಚಿಸಿಕೊಂಡು ಮನೆ, ಸಂಸಾರ, ಮಕ್ಕಳ ವಿದ್ಯಾಭ್ಯಾಸ ಎಂದೆಲ್ಲ ಒದ್ದಾಡುತ್ತಿರುತ್ತಾರೆ.
ಹೀರೋಯಿನ್‌ಗೆ ಮಾತ್ರ ವಯಸ್ಸಿನ ಸಮಸ್ಯೆ
ಇನ್ನು ಅಂದವೇ ಬಂಡವಾಳವಾಗಿರುವ ಸಿನೆಮಾದಂತಹ ಕ್ಷೇತ್ರದಲ್ಲಿಯಂತೂ ಹೀರೋಗಳಿಗೆ ಎಷ್ಟು ವಯಸ್ಸಾದರೂ ಹೀರೋಯಿನ್‌ಗಳು ತೆಳ್ಳಗೆ ಬೆಳ್ಳಗೆ ಬಳುಕುತ್ತಿರಬೇಕು. ಇಲ್ಲವಾದರೆ ಅವರಿಗೆ ಅತ್ತಿಗೆ, ಅತ್ತೆ, ಕೊನೆಗೆ ಅಮ್ಮನ ಪಾತ್ರ ಗ್ಯಾರಂಟಿ. (ಮೊದಲು ತಮ್ಮ ಜೊತೆ ನಾಯಕನಾಗಿ ನಟಿಸಿದ ನಟರಿಗೆ ಕೆಲಕಾಲ ಕಳೆದ ಮೇಲೆ ಅಮ್ಮನಾಗಿ ನಟಿಸಿದವರೂ ಇದ್ದಾರೆ). ಹೆಣ್ಣು ಎಲ್ಲಾ ರಂಗದಲ್ಲೂ ಸಮಾನತೆ ಸಾಧಿಸಿರುವುದು ಹೌದು. ಅದಕ್ಕೆ ಸಾಕಷ್ಟು ಬೆಲೆ ತೆತ್ತಿದ್ದಾಳೆ ಕೂಡ. ಈ ನಿಟ್ಟಿನಲ್ಲಿ “ಬಾಡಿ ಶೇಮಿಂಗ್’ ಆಕೆಯ ಹೆಣ್ತನವನ್ನೇ ಅಳೆಯುವ, ಅವಳ ಬೌದ್ಧಿಕತೆ, ಕನಸುಗಾರಿಕೆ, ಸ್ವಾತಂತ್ರ್ಯದ ಅಪೇಕ್ಷೆಗೆ ಕಡಿವಾಣ ಹಾಕುವ, ಅವಳ ಅಂತಃಸಣ್ತೀವನ್ನೇ ಅವಮಾನಿಸುವ ಪುರುಷ ಪ್ರಧಾನ, ಕ್ಯಾಪಿಟಲಿಸಂ ವ್ಯವಸ್ಥೆಯ ಹುನ್ನಾರ.
ಬಹುಶಃ “ಬಾಡಿ ಶೇಮಿಂಗ್’ ಮತ್ತು “ರೇಸಿಸಮ್’ ಗೆ ಹೆಚ್ಚು ವ್ಯತ್ಯಾಸಗಳಿಲ್ಲ. ಒಂದು ಕಾಲದಲ್ಲಿ ಬಿಳಿಯರು ಆಫ್ರಿಕಾದ ಒಬ್ಬಳು ಮಹಿಳೆಯನ್ನು ಬೋನಿನಲ್ಲಿ ಹಾಕಿ ನೋಡಲು ಇಟ್ಟಿದ್ದರಂತೆ. ಪಿಗ್ಮಿಗಳು ಮನುಷ್ಯರೇ ಅಲ್ಲವೆಂದೂ ಪ್ರತಿಪಾದಿಸಿದ ಹೆಗ್ಗಳಿಕೆ ಅವರದು! ಹಾಗೆ ನೋಡಿದರೆ ಅಸ್ಪೃಶ್ಯತೆಯೂ ಒಂದು ದಯನೀಯವಾದ ಬಾಡಿ ಶೇಮಿಂಗ್. ಅದಕ್ಕೆ ವರ್ಣ, ಜಾತಿ, ಧರ್ಮ ಎಂದೆಲ್ಲ ಏನೇ ವಿವರಣೆ ಇತ್ತರೂ ಅದು ಅಮಾನವೀಯವೇ.
ಶರೀರದ ಅಂದ-ಚಂದಕ್ಕೆ ಆರ್ಥಿಕತೆ, ಆಧುನಿಕತೆಯ ಸಂಬಂಧವಿರುವುದರಿಂದಲೇ ಬಹುಶಃ ಜನರು ಸುಂದರವಾಗಿ ಕಾಣಿಸಿಕೊಳ್ಳಲು ಒದ್ದಾಡುತ್ತಿರುತ್ತಾರೆ. ನಾವು ಕಾಲೇಜಿಗೆ ಹೋಗುತ್ತಿದ್ದಾಗ ಕಾಲೇಜಿಗೆ ಬಂದನಯ್ಯ ಹಳ್ಳಿ ಮುಕ್ಕ ಹಾಡು ಫೇಮಸ್ ಆಗಿತ್ತು. ನಿಜವಾಗಿಯೂ ಹಳ್ಳಿ ಮುಕ್ಕರೇ ಆಗಿದ್ದ ನಾವು ನಮ್ಮನ್ನು ನಾವೇ ಆ ಹಾಡಿಗೆ ಅನ್ವಯಿಸಿಕೊಳ್ಳುತ್ತಿದ್ದೆವು. ಶ್ರೀದೇವಿಯ ಮೂಗು, ಕರೀನಾಳ ಜೀರೋ ಸೈಜ್ ಫಿಗರ್, ಹೇಮಾಮಾಲಿನಿಯ ಚೆಂದ, ಹೀಗೆ ಕ್ಲಿಯೋಪಾತ್ರಾಳಂತೆ ಅವರ ಸೌಂದರ್ಯ ಮಸುಕಾಗುವುದೇ ಇಲ್ಲವೇನೋ ಎಂದು ಜನಸಾಮಾನ್ಯರು ಮರುಗುವುದು ಇದ್ದೇ ಇದೆ.
ಶರೀರದ ಗಾತ್ರ ಬಿಟ್ಟರೆ ಅತಿ ಹೆಚ್ಚು ಬಾಡಿ ಶೇಮಿಂಗ್ ಕಾಣಿಸಿಕೊಳ್ಳುವುದು ಬಣ್ಣದ ಬಗ್ಗೆ. ನೀಲಮೇಘ ಶ್ಯಾಮ, ಕೃಷ್ಣ, ಕಾಳಿ ಎಂದೆಲ್ಲ ದೇವರನ್ನು ಒಪ್ಪಿಕೊಳ್ಳುವ ನಾವು ಮನುಷ್ಯರು ಕಪ್ಪಗಿದ್ದರೆ ಅಷ್ಟಾಗಿ ಸೈರಿಸಿಕೊಳ್ಳಲಾರೆವು. ಭಾರತ ದೇಶದಲ್ಲಿ ಅತ್ಯಂತ ಯಶಸ್ವಿ ಉದ್ದಿಮೆ ಆಗಿರುವ, ಕೋಟಿಗಟ್ಟಲೆ ಲಾಭ ಗಳಿಸುವ ಬೆಳ್ಳಗಾಗಿಸುವ ಕ್ರೀಮ್‌ಗಳು ಇದಕ್ಕೆ ಸಾಕ್ಷಿ.
ಬಾಡಿ ಶೇಮಿಂಗ್‌ನಿಂದ ಹೆಚ್ಚು ನರಳುವವರು ಸ್ಕೂಲು ಕಾಲೇಜಿಗೆ ಹೋಗುವ ಮಕ್ಕಳು ಮತ್ತು ಮೂವತ್ತರ ಒಳಗಿನ ತರುಣ-ತರುಣಿಯರು. ವಿರುದ್ಧ ಲಿಂಗದ ಆಕರ್ಷಣೆ, ಸಾಮಾಜಿಕ ಒಪ್ಪಿಗೆ, ತಮ್ಮ ವಲಯದಲ್ಲಿ ಮನ್ನಣೆ- ಹೀಗೆ ಅನೇಕಾನೇಕ ಹಂಬಲಗಳು ಅವರಿಗೆ. ಜೀವನದ ಅನುಭವ ಗಾಢವಾದಂತೆ ಶರೀರ ಸೌಂದರ್ಯಕ್ಕೂ ಮೀರಿ ಮನಸ್ಸಿನ ಸೌಂದರ್ಯ ಇದೆ ಎಂದೂ, ಆತ್ಮ ತೃಪ್ತಿಗೆ ಕಾರಣವಾಗುವ, ಜೀವನ ಸಾರ್ಥಕಗೊಳಿಸುವ ಕ್ಷಣಗಳು, ಅವಕಾಶಗಳು ಎಲ್ಲರಿಗೂ ಇವೆ ಎಂದೂ ಅರಿವಾಗುತ್ತದೆ. ವ್ಹೀಲ್‌ಚೇರಿನಲ್ಲಿ ಅದ್ಭುತಗಳನ್ನು ಸಾಧಿಸಿದ ಸ್ಟಿಫನ್ ಹಾಕಿಂಗ್, ಅಂಧಳೂ ಕಿವುಡಿಯೂ ಮೂಗಿಯೂ ಆಗಿದ್ದ ಹೆಲೆನ್ ಕೆಲ್ಲರ್, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳನ್ನು ಗೆದ್ದವರು, ಆ್ಯಸಿಡ್‌ನಿಂದ ಉರಿದ ಮುಖದೊಂದಿಗೆಯೇ ಈ ಸಮಾಜದಲ್ಲಿ ಬದುಕುತ್ತಿರುವವರು, ಅಂಗವಿಕಲತೆಯನ್ನು ಮೆಟ್ಟಿ ನಿಂತವರು- ಹೀಗೆ ದೇಹದ ಅಂದ-ಚಂದಕ್ಕೆ ಮೀರಿ ಸಾಧಿಸಿದವರನ್ನು ಗಮನಿಸಲಾರಂಭಿಸುತ್ತೇವೆ. ಶರೀರವನ್ನು ತೀರಾ ಅಲಕ್ಷಿಸಬೇಕೆಂದು ಇದರರ್ಥವೇನಲ್ಲ. ಶರೀರಮಾದ್ಯಂ ಖಲು ಧರ್ಮ ಸಾಧನಂ, ದೇಹ ಆತ್ಮನ ದೇಗುಲ- ಹೀಗೆಲ್ಲ ಕೇಳಿಯೇ ಬೆಳೆದಿರುತ್ತೇವೆ. ಉತ್ತಮ ಆರೋಗ್ಯ, ಸಾಮಾಜಿಕವಾಗಿ ಒಪ್ಪಿತವಾಗುವ ಸೌಂದಯ ಪ್ರಜ್ಞೆ, ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವು ಮತ್ತು ವಿವೇಕ, ಬಾಳಿನ ಬಗ್ಗೆ ಧನಾತ್ಮಕತೆ ಇವಿಷ್ಟು ಇದ್ದರೆ “ಬಾಡಿ ಶೇಮಿಂಗ್’ ನಮ್ಮನ್ನು ಹೆಚ್ಚಾಗಿ ಕಾಡಲಾರದು.
– ಜಯಶ್ರೀ ಬಿ. ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.