ಮಕ್ಕಳ ಮಾತು
Team Udayavani, Dec 8, 2017, 3:59 PM IST
ಮಕ್ಕಳ ಮದುವೆಯಾದರೆ ಸಾಕು, ಪೋಷಕರಾಗಿ ಮಾಡುವ ಜವಾಬ್ದಾರಿ ಮುಗಿಸಿದಂತಾಯಿತು. ಆದರೆ, ಹೆಣ್ಣು ಬಂದು ಹೊಸ್ತಿಲು ತುಳಿದ ನಂತರ ಅವರವರ ನಿರ್ಧಾರ ಅವರದು ಎಂದು ಹೇಳುತ್ತಿದ್ದ ಹಿರಿಯರು ಮದುವೆಯಾದ ಮಾರನೆಯ ದಿವಸದಿಂದಲೇ ವಂಶ ಬೆಳೆಯಲು ಕುಡಿ ಬೇಕೆಂಬ ಅಪೇಕ್ಷೆಯಲ್ಲಿ ತೊಡಗುತ್ತಾರೆ. ಯಾವ ತಿಂಗಳಿನಿಂದ ಹುಡುಗಿಗೆ ಮೂರು ದಿನದ ರಜಾ ಸರಣಿ ಮುಗಿಯುವ ಸುದ್ದಿ ಬರುತ್ತದೆಂದು ತೀವ್ರ ಕುತೂಹಲದಲ್ಲಿರುತ್ತಾರೆ. ನಮ್ಮದು ಹೆಸರಿರುವ ಮನೆತನ, ಮನೆ ಕಟ್ಟಿದವರು ಮುತ್ತಜ್ಜನೊ ಅಥವಾ ಅಜ್ಜನೊ, ಮನೆಯಲ್ಲಿ ಸದಾ ದೀಪ ಬೆಳಗಬೇಕೆಂಬ ಆಶಯದಿಂದ ಹಿಂದಿನ ತಲೆಮಾರಿನವರು ಕಷ್ಟಪಟ್ಟು ಆಸ್ತಿಯನ್ನು ಗಳಿಸಿ ಉಳಿಸಿಕೊಂಡು ಬಂದಿದ್ದಾರೆ, ಸಂತಾನ ಬೆಳೆಸಿಕೊಂಡು ಬಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಬೇಡವೆ? ಇಂಥಾದ್ದೆಲ್ಲ ಪರೋಕ್ಷ ಸೂಚನೆಯ ಮಾತುಕತೆಗಳು. ಹಾಗಾಗಿ, ಮದುವೆಯಾಗಿ ಬಂದ ಹೆಣ್ಣಿನ ಮೇಲೆ ದಿನನಿತ್ಯ ಹತ್ತಿರದ ಗಮನವಿರುತ್ತದೆ. ಅವಳಿಗೆ ಸ್ವಲ್ಪ ಅಜೀರ್ಣತೆಯ ತೊಂದರೆಯಿಂದ ವಾಂತಿ ಬರುವಂತೆ ಕಂಡರೂ ಅಥವಾ ಬಳಲಿಕೆಯ ಅಂಶ ತೋರಿದರೂ ಏನೋ ವಿಶೇಷವಿದೆಯೆಂದು ಖುಷಿಯಿಂದ ಬೀಗಿಬಿಡುತ್ತಾರೆ. ಕೆಲವು ತಿಂಗಳು ಕಳೆದೂ ವಿಷಯ ಸ್ಪಷ್ಟವಿಲ್ಲವೆಂದರೆ, “ನಾವೆಲ್ಲ ಕಾಯುತ್ತಿದ್ದೇವೆ ಯಾವಾಗ ಒಳ್ಳೆ ಸುದ್ದಿ ಕೊಡುವಿರಿ’ ಎಂದು ಸೀದಾ ಕೇಳಿಬಿಡುತ್ತಾರೆ.
ಹಳ್ಳಿಗಳಲ್ಲಿಯಂತೂ ಹಳೆಯ ತೊಟ್ಟಿಲನ್ನು ಅಟ್ಟದ ಮೇಲಿಂದ ಇಳಿಸಿ ಚೊಕ್ಕಮಾಡಿ ಹಗ್ಗ ಬಿಗಿದು ಸಿದ್ಧಪಡಿಸುವರು. ಯಾವ ವೈದ್ಯರಲ್ಲಿ ಹೆರಲು ಒಯ್ಯುವುದು ಒಳ್ಳೆಯದೆಂದು ತರ್ಕ ಮಾಡುವರು. ಬಾಣಂತಿತನಕ್ಕೆ ಬೇಕಿರುವ ಬಟ್ಟೆಬರೆ, ಎಣ್ಣೆ, ಇತ್ಯಾದಿ ಸಾಮಗ್ರಿಗಳನ್ನು ಆಯೋಜಿಸುವದರಲ್ಲಿ ತೊಡಗುವರು. ಕೆಲ ತಿಂಗಳು ಕಳೆದೂ ಪ್ರಗತಿ ಸಿಗದಿದ್ದರೆ ಮುನಿದು ಬಿಡುವರು. ಪಾಸಿಟಿವ್ ಸೂಚನೆ ಇಲ್ಲದಿದ್ದರೆ ಮಾತು ಕಡಿಮೆಯಾಗಿ ಬಿಡಬಹುದು, ಜರೆಯಲು ಆರಂಭಿಸಬಹುದು. ಇನ್ನೂ ಮುಂದೆ ಸಾಗಿ ಮಕ್ಕಳ ಹೆರುವ ಅವಳ ಸಾಮರ್ಥ್ಯದ ಕುರಿತು ಪ್ರಶ್ನೆ ಏಳಬಹುದು. ಇನ್ನು ಕೆಲವೊಮ್ಮೆ ವಿಚ್ಛೇದನದ ತನಕ ಮುಂದುವರಿಯುವುದೂ ಇದೆ.
ವ್ಯಾಯಾಮವಿಲ್ಲದೆ…
ಅದರಲ್ಲಿಯೂ ಕುರ್ಚಿಗೆ ತಗಲಿರುವ ಅಥವಾ ಕೂತು ನಿರ್ವಹಿಸುವ ನೌಕರಿಯಲ್ಲಿ ಇರುವವರ ಕುರಿತು ಉದ್ವೇಗ ಹೆಚ್ಚು. ಅವರಿಗೆ ಸಂತಾನವಾಗುವ ಕುರಿತು ಸಂಶಯವೇ. ಸಾಫ್ಟ್ ವೇರ್ ಅಥವಾ ಕಂಪ್ಯೂಟರ್ ಕೆಲಸದಲ್ಲಿರುವ ದಂಪತಿಗಳಿಗೆ ಮಕ್ಕಳಾಗದಿರುವ ಬಗ್ಗೆ ಚರ್ಚೆಯಾಗುವುದು ಅಧಿಕ. ಶಾರೀರಿಕ ಶ್ರಮ ಸಾಕಷ್ಟಿಲ್ಲದೆ ಮಕ್ಕಳಾಗುವುದು ಹೇಗೆ ಎಂಬುದು ಆಗ ಮಾತಿನಲ್ಲಿ ಬರುತ್ತದೆ. ಕೆಲವೊಮ್ಮೆ ಮದುವೆಯಾಗಿ ಅವರ ದಿನಚರಿಗೆ ಹೊಂದಿಕೊಂಡ ಕೂಡಲೇ ಕೆಲಸದ ಸ್ಥಳ ಪಲ್ಲಟವಾಗಿಬಿಡಬಹುದು. ಗಂಡ ಒಂದು ಕಡೆಯಾದರೆ ಹೆಂಡತಿ ಇನ್ನೊಂದು ಕಡೆಯಾಗಬಹುದು. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಬಂದು, ಅಲ್ಲಿ ಮಕ್ಕಳಾದರೆ ಹೇಗೆಂದು ಯೋಚಿಸಬಹುದು. ಮತ್ತೆ ಕೆಲವರು ಮದುವೆಯಾದ ಬಳಿಕ ದುಡಿತದ ಮತ್ತು ಕೌಟುಂಬಿಕ ಸ್ಥಿರತೆಯ ಯತ್ನದಲ್ಲಿರಬಹುದು. ಇಂಥ ಸಂದರ್ಭದಲ್ಲೆಲ್ಲ ಹೊಸ ದಂಪತಿಯ ಮೇಲೆ ಸಂತಾನದ ಒತ್ತಡ ಬಂದರೆ ಅನಗತ್ಯ ಕಿರಿಕಿರಿ ಉಂಟಾಗತೊಡಗುತ್ತದೆ. ಸಂತಾನದ ಅಪೇಕ್ಷೆಯಲ್ಲಿರುವ ಹಿರಿಯರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ಸಮತೋಲನ ಕುಸಿದಿರುತ್ತದೆ. ಅಂಥ ಪ್ರಭಾವದಲ್ಲಿ ಕೆಲವೊಮ್ಮೆ ಗಂಡನಾದವನು ಅವರದೇ ತಾಳಕ್ಕೆ ಹೆಜ್ಜೆ ಹಾಕಿ, ಮಾನಸಿಕ ಒತ್ತಡ ಹೆಣ್ಣಿನ ಮೇಲೆ ಹಾಕಿಬಿಡುವ ಸನ್ನಿವೇಶಗಳೂ ಸಂಭವಿಸುವುದಿದೆ.
ಅಪೇಕ್ಷೆ ಮತ್ತು ವಾಸ್ತವಿಕತೆಯ ನಡುವೆ ಕಂದಕವಿದ್ದರೆ ಏನೆಲ್ಲ ನಡೆಯಬಹುದೆಂದು ತಿಳಿಯುವ ಅಗತ್ಯವಿದೆ. ಸಮಾಜ ಹಡೆಯದ ಹೆಣ್ಣನ್ನು ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳದಿರುವ ಉದಾಹರಣೆಗಳು ಸಾಕಷ್ಟಿವೆ. 28 ವಯಸ್ಸಿನ ಮುಂಬೈ ಹುಡುಗಿಯೊಬ್ಬಳು ಇದ್ದಾಳೆ. ಅವಳ ಜನನಾಂಗ ಮತ್ತು ಗರ್ಭಕೋಶ ಸರಿ ಇಲ್ಲವೆಂದು ಹುಡುಗ ಮತ್ತು ಅವನ ಮನೆಯವರು ಅವಳನ್ನು ಮದುವೆ ಮಾಡಿಸಿಕೊಳ್ಳಲು ಸಿದ್ಧವಿಲ್ಲ. ಆಗ ಅವಳ ತಾಯಿ ತನ್ನ ಗರ್ಭಕೋಶವನ್ನು ಅವಳಿಗೆ ಕೊಡಲು ಸಿದ್ಧವಿರುವಳು. ಚಂಢೀಗರ್‌ನಲ್ಲಿ ಮದುವೆಯಾದ ಒಬ್ಬಳಿಗೆ ಬಸಿರು ಚೀಲದ ತೊಂದರೆ ತಿಳಿದು ಅವಳಿಗೆ ವಿಚ್ಛೇದನದ ಸೂಚನೆಯನ್ನು ಗಂಡ ಮತ್ತು ಮನೆಯವರು ಸಲ್ಲಿಸಿದರು. ಅವಳ ಗರ್ಭ ಧರಿಸುವ ಸಮಸ್ಯೆ ಸರಿಯಾದರೆ ಅವಳನ್ನು ಉಳಿಸಿಕೊಳ್ಳುವುದಾಗಿ ಗಂಡನ ಮನೆಯವರು ಹೇಳಿರುವುದಿದೆ. ಇಂಥ ಉದಾಹರಣೆಗಳು ಸಮಾಜದಲ್ಲಿ ಬೇಕಷ್ಟಿವೆ. ಇತ್ತೀಚೆಗೆ ಹೆಂಡತಿ ಕಾಯಿಪಲ್ಲೆ ಮತ್ತು ಸಾಮಾನುಗಳನ್ನು ಸಂತೆಯಿಂದ ತಂದಿಲ್ಲವೆಂದು ಅಥವಾ ಇನ್ನೇನೋ ತೀರಾ ಚಿಕ್ಕ ವಿಷಯಕ್ಕೆ ವಿಚ್ಛೇದನ ತನಕ ತಲುಪಿರುವ ತೀವ್ರತೆಗಳು ಬೆಳಕಿಗೆ ಬಂದಿವೆ. ಇವೆಲ್ಲ ಹುಸಿ ನೆಪಗಳಷ್ಟೆ . ಮುಖ್ಯ ಕಾರಣ ಅವಳು ಮಕ್ಕಳಾಗುವ ಸಾಮರ್ಥ್ಯ ಪಡೆದಿಲ್ಲವೆಂಬುದೇ ಆಗಿರುತ್ತದೆ.
ಗಂಡನ, ಗಂಡನ ಮನೆಯವರ ಮತ್ತು ಸಮಾಜದ ಅಪೇಕ್ಷೆ ಅವಳೇ ಹಡೆದು ಕೊಡುವ ಮಕ್ಕಳೇ ಬೇಕೆಂಬುದಾಗಿರುತ್ತದೆ. ಅಂಥ ಆಶಯ ನಿಭಾಯಿಸಲು ಹಲವು ಪೋಷಕರು ಸ್ವತಃ ತಮ್ಮ ಹೆಣ್ಣುಮಕ್ಕಳಿಗೆ ಗರ್ಭಕೋಶದ ಕಸಿ ನಡೆಸಿಕೊಡಲು ಮುಂದೆ ಬರುತ್ತಿರುವದು ಹೊಸ ಸಂಗತಿ. ಪುಣೆಯ ಗ್ಯಾಲಕ್ಸಿ ಕೇರ್ ಸಂಸ್ಥೆ ಎರಡು ಗರ್ಭಕೋಶದ ಕಸಿಯನ್ನು ಕಳೆದ ಮೇ 17ಕ್ಕೆ ಮಾಡಿದೆ. ಅವರಿಬ್ಬರೂ ಗುಣಮುಖರಾಗುತ್ತಿರುವುದಾಗಿಯೂ ಆಸ್ಪತ್ರೆಯ ಮಾಹಿತಿ ಇದೆ. ಅಲ್ಲದೆ, ಏಳು ತಿಂಗಳ ನಂತರ ಗರ್ಭ ಸರಿಯಾಗುವ ಕುರಿತು ಚಿಕಿತ್ಸೆ ಕೊಡುವುದಾಗಿಯೂ ಹೇಳಿದೆ.
ಒಬ್ಬರ ಗರ್ಭಕೋಶ ಮತ್ತೂಬ್ಬರಿಗೆ !
ಗರ್ಭಾಶಯದ ಕಸಿ ಭಾರತದಲ್ಲಿ ವೈದ್ಯಕೀಯ ಕ್ಷೇತ್ರದ ನೂತನ ಪರಿಕಲ್ಪನೆ. ಗರ್ಭಕೋಶದ ಕಸಿಯೆಂದರೆ ಬೇರೆಯವರ ಯೋಗ್ಯ ಬಸಿರು ಚೀಲವನ್ನು ಪಡೆದು ಸರಿಯಾಗಿಲ್ಲದ ಹೆಣ್ಣಿನ ಅಂಗ ತೆಗೆದು ಅದರ ಜಾಗದಲ್ಲಿ ಜೋಡಿಸುತ್ತಾರೆ. ಅದನ್ನು ಹೆಣ್ಣಿನ ದೇಹ ತಿರಸ್ಕರಿಸದೆ ಒಪ್ಪಿಕೊಳ್ಳಬೇಕು. ನಂತರ ಇನ್‌ವಿಟ್ರೋ ಶಿಶುವನ್ನು ಹೊಸ ಚೀಲದಲ್ಲಿ ಇಟ್ಟು ಬೆಳೆಸಬಹುದು. ಈ ಚೀಲಕ್ಕಿರುವ ಅರ್ಹತೆ ಸುಮಾರು ಐದು ವರ್ಷಗಳು ಮತ್ತು ಹೆಚ್ಚೆಂದರೆ ಎರಡು ಶಿಶುಗಳಷ್ಟೆ. ಹಡೆದ ನಂತರ ಅಳವಡಿಸಿದ ಚೀಲವನ್ನು ಇಟ್ಟುಕೊಳ್ಳುವಂತೆ ಇಲ್ಲ. ತೆಗೆದುಬಿಡುವುದು ವೈದ್ಯಕೀಯ ಅನಿವಾರ್ಯತೆ. ಅಧಿಕೃತ ವರದಿಯಂತೆ ನಮ್ಮ ದೇಶದಲ್ಲಿ ಸದ್ಯ ಮಹಾರಾಷ್ಟ್ರ ಸರಕಾರವಷ್ಟೇ ಅಂತಹ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದೆ.
ಭಾರತದಲ್ಲಿ ಈ ಚಿಕಿತ್ಸೆಗೆ ಸರಿಯಾದ ನಿರ್ದೇಶನ, ಸೂಚನೆಗಳನ್ನು ಇನ್ನೂ ಕೇಂದ್ರ ಸರಕಾರ ನೀಡಿಲ್ಲ. ಗರ್ಭಾಶಯ ಕಸಿಯ ಪ್ರಕರಣಗಳು ಬಂದಾಗ ಹೆಣ್ಣಿನ ಕುರಿತು ಸ್ಥಿತಿಗತಿ ಮತ್ತು ಗಾಂಭೀರ್ಯವನ್ನು ಪರಿಶೀಲಿಸಿ ತಜ್ಞ ಸಮಿತಿಯ ಅನುಮತಿಯಿಂದಷ್ಟೇ ಅಂತಹ ಪ್ರಕರಣಗಳನ್ನು ಸ್ವೀಕರಿಸಬೇಕೆಂದು ಮಹಾರಾಷ್ಟ್ರ ಸರಕಾರ ಸೂಚಿಸಿದೆ. ಹೆಣ್ಣಿನ ಕುರಿತು ನ್ಯಾಯ-ನೀತಿಯಲ್ಲಿ ಚ್ಯುತಿಯಾಗಬಾರದೆಂದು ಅದರ ಅರ್ಥ. ಮಕ್ಕಳನ್ನು ಪಡೆಯಲಾರದ ಹೆಣ್ಣು ಅಥವಾ ಗಂಡಿಗೆ ಸರೊಗಸಿ ವಿಧಾನವಿದೆ. ಹೆಣ್ಣಿನ ಅಂಡ ಮತ್ತು ಗಂಡಿನ ವೀರ್ಯಾಣುವನ್ನು ಪೋಷಿಸಿ ಹಡೆಯಲು ಸಿದ್ಧವಿರುವ ಆರೋಗ್ಯವಂತ ಮಹಿಳೆಯಲ್ಲಿ ಬೆಳೆಸಿ ಶಿಶುವನ್ನು ಪಡೆಯುವುದು ಅದರ ತಣ್ತೀÌ. ಭಾರತದಲ್ಲಿ ಸಿನೆಮಾ ತಾರೆಯರಾದ ಕರಣ್ ಜೋಹರ್, ಶಾರೂಖ್ ಖಾನ್, ಅಮೀರ್ ಖಾನ್, ತುಷಾರ್ ಕಪೂರ್ ಈ ವಿಧಾನದಿಂದ ಮಕ್ಕಳನ್ನು ಪಡೆದಿರುವುದು ಎಲ್ಲರಿಗೂ ತಿಳಿದಿದೆ. ಮಕ್ಕಳು ಬೇಕಿದ್ದವರು ಉದ್ದೇಶ ಸಾಧನೆಗೆ ಸರಿಯಾದ ದತ್ತು ತೆಗೆದುಕೊಂಡು ಬಿಡುವುದು ಅವೆಲ್ಲಕ್ಕಿಂತ ಸುಲಭ ಮಾರ್ಗ!
ಆದರೆ ಸರೊಗಸಿ ಮತ್ತು ದತ್ತು ತೆಗೆದುಕೊಳ್ಳುವ ವಿಧಾನಗಳಿಂದ ಹೊಸ್ತಿಲು ತುಳಿದು ಬಂದ ಹೆಣ್ಣೇ ದೋಷವಿದ್ದೂ ಮಗುವನ್ನು ಹಡೆದು ಕೊಡಬೇಕೆಂಬ ಬಯಕೆ ಪೂರ್ತಿಯಾಗದು. ಅದಕ್ಕೆ ಇಂದು ಗರ್ಭ ಹೊರಲು ದೋಷವಿರುವ ಹುಡುಗಿಯರು ಮತ್ತು ಹೆಂಗಸರು ಗರ್ಭಾಶಯ ಕಸಿಗೆಂದು ಸಾಲು ಹಿಡಿದಿರುವ ಕಾರಣದಿಂದ ಶಸ್ತ್ರವೈದ್ಯರು ಸರಕಾರದ ಒಪ್ಪಿಗೆಗೆ ಮೊರೆ ಹೋಗಿರುವರೆಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಕಸಿ ಅಥವಾ ಸರೊಗಸಿ ತುಂಬ ದುಬಾರಿ. ಅಲ್ಲದೆ, ಪ್ರಾಯೋಗಿಕ ಯಶಸ್ವಿಯ ದೃಷ್ಟಿಯಿಂದ ಹಲವು ಪ್ರಶ್ನೆಗಳಿವೆ. ಸಾಮಾನ್ಯ ಜನತೆಗೆ ಈ ವಿಧಾನ ಸಾಧ್ಯವೇ ಇಲ್ಲ ಅನ್ನಬಹುದು. ಸಂತಾನೋತ್ಪತ್ತಿಯ ಒತ್ತಡದಲ್ಲಿರುವ ಮತ್ತು ಅಶಿಕ್ಷಿತರಿರುವ ನಮ್ಮ ದೇಶದಲ್ಲಿ ಗರ್ಭಾಶಯದ ಕಸಿಯ ಒಪ್ಪಿಗೆಯೇ ವಿಪತ್ತಿನ ಪ್ರವೃತ್ತಿಗೆ ಕಾರಣವಾಗಬಹುದಂತೆ. ಹಾಗಾಗಿ, ಸುಲಭ ಮಾರ್ಗವಾದ ದತ್ತು ಸ್ವೀಕಾರವೇ ಹೆಚ್ಚು ಅರ್ಥಪೂರ್ಣವೆಂದು ಡಾಕ್ಟರ್ ಸೌಮ್ಯಾ ಸ್ವಾಮಿನಾಥನ್ (ಹೆಡ್, ಅಯ…ಸಿಎಮ…ಆರ್) ಹೇಳುತ್ತಾರೆ.
ಒಟ್ಟಾರೆ ವಿಷಯವನ್ನು ಸಮಗ್ರತೆ ಮತ್ತು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಆವಶ್ಯಕತೆ ಇದೆ. ಇಂದಿನ ಪೀಳಿಗೆ ಅದೂ ಪಟ್ಟಣಗಳಲ್ಲಿ ಸಂತಾನೋತ್ಪತ್ತಿಯೇ ಮೊದಲ ಆದ್ಯತೆಯೆಂದು ಹೇಳಲಾಗದು. ಅವರ ಪ್ರಾಮುಖ್ಯ ಬೇರೆ ಇರುತ್ತವೆ. ವೃತ್ತಿ ಕಾಯಕವಿರಬಹುದು, ಬದುಕಿನ ಸ್ಥಿರತೆ ಕಂಡುಕೊಳ್ಳುವುದಿರಬಹುದು, ಹಣಕಾಸಿನ ಕುರಿತ ನಿರ್ವಹಣೆಯ ಸವಾಲಿರಬಹುದು, ಭೌತಿಕತೆಯ ಸಂತೃಪ್ತಿ ಇರಬಹುದು. ಅವುಗಳನ್ನು ನಿಭಾಯಿಸಲು ಹೆಣ್ಣು ಗಂಡಿನ ಜೊತೆ ಹೆಗಲಿಗೆ ಹೆಗಲು ಕೊಟ್ಟು ಪರಿಶ್ರಮದಲ್ಲಿರುವುದನ್ನು ಕಾಣಬಹುದು. ವಾಸ್ತವಿಕತೆಯಲ್ಲಿ ತೊಡಗಿರುವ ಯುವ ಸಮಾಜದಲ್ಲಿ ಕೆಲವರು ಸಂತಾನೋತ್ಪತ್ತಿಯ ಹೊರತಾದ ಜೀವನವೇ ಸುಖಮಯವೆಂದು ನಿರ್ಧರಿಸುವುದನ್ನೂ ಕಾಣುತ್ತೇವೆ. ಒಳ್ಳೆಯ ನಾಯಿಮರಿಯನ್ನು ಪಾಲಿಸುವುದು ಮಕ್ಕಳನ್ನು ಹಡೆದು ಬೆಳೆಸುವ ಹೊಣೆಗಿಂತ ಸುಲಭ ಮತ್ತು ಸುಂದರ ಅನ್ನುವವರ ಸಂಖ್ಯೆಯೂ ಕೆಲವು ದೇಶಗಳಲ್ಲಿ ದಿನದಿಂದ ದಿನ ಬೆಳೆಯುತ್ತಿದೆ. ನಾಯಿಮರಿ ಎಂದೂ ನಂಬುಗೆಯ ಮತ್ತು ಅಚಲವಾದ ಒಲವಿನ ಪ್ರಾಣಿ, ಮನುಷ್ಯರು ಬೆಳೆದಂತೆ ಅವರ ಪ್ರವೃತ್ತಿ ಹೇಗಾಗುತ್ತದೆಂದು ಹೇಳಲಾಗದೆಂದು ಅವರ ವಾದವಂತೆ!
ಇಂದು ಮದುವೆಯಾಗುವ ಗಂಡು ಮತ್ತು ಹೆಣ್ಣು ವಯಸ್ಕರಿರುತ್ತಾರೆ. ಅವರಿಗೆ ಸಂತಾನೋತ್ಪತ್ತಿಯ ಕುರಿತು ಸಾಕಷ್ಟು ಮಾಹಿತಿ ಮತ್ತು ತಿಳಿವಳಿಕೆಗಳಿರುತ್ತವೆ. ಒಮ್ಮೆ ಸಂತಾನ ಸಾಧ್ಯವಾಗದಿರುವ ಸ್ಥಿತಿಗತಿಗಳಲ್ಲಿಯೂ ಅವರದೇ ಸಮಾಧಾನ ಮತ್ತು ತೀರ್ಮಾನಗಳಿರುತ್ತವೆ. ನಡುವೆ ಪೋಷಕರು ಅಥವಾ ಸಮಾಜ ಹಸ್ತಕ್ಷೇಪ ನಡೆಸಿದರೆ ಪ್ರಸಂಗ ವಿಕೋಪಕ್ಕೆ ತಿರುಗುತ್ತದೆ. ತಮ್ಮ ಮಾನಸಿಕ ತೃಪ್ತಿಯ ಸಲುವಾಗಿ ಹಡೆಯಲಾರದ ಹೆಣ್ಣನ್ನು ಅಪ್ರಬುದ್ಧ, ಅಪ್ರಾಯೋಜಕ ಮತ್ತು ದುಭìರ ಶಸ್ತ್ರಕ್ರಿಯ ಚಿಕಿತ್ಸೆಯೊಳಗೆ ತಳ್ಳುವದು ಸರಿಯಲ್ಲ. ಅಲ್ಲದೆ, ಸಂತಾನೋತ್ಪತ್ತಿಯ ವಿಷಯದಲ್ಲಿ ಪೋಷಕರು ಮತ್ತು ಸಮಾಜ ಮಕ್ಕಳ ಮೇಲೆ ಒತ್ತಡ ಹೇರುವುದು ಅಸಂಬದ್ಧ ಮತ್ತು ಅಸಹಜ. ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಸೂಕ್ತ ಸಮಯದಲ್ಲಿ ಸಂಕ್ಷಿಪ್ತದಲ್ಲಿ ಹಂಚಿಕೊಳ್ಳಬಹುದಷ್ಟೆ. ಮನೆತನ ಮುಂದುವರಿಕೆ, ವಂಶದ ಕುಡಿ ಮುಂತಾದ ತಿಳಿವಳಿಕೆ ಹಳೆಯ ಕಾಲದ ಕಲ್ಪನೆಗಳೆನ್ನಬಹುದೆ? ಅಂತಹ ಅಪಕ್ವತೆಯಿಂದ ತೊಲಗಿ ಮದುವೆಯಾದ ಹೊಸ ದಂಪತಿಗಳನ್ನು ಪರಿಪಕ್ವತೆ ಮತ್ತು ಸಮಗ್ರತೆಯ ಕಡೆ ಹುರಿದುಂಬಿಸುವುದು ಅರ್ಥಪೂರ್ಣ. ಅವರನ್ನು ಅವರವರ ನಿರ್ಧಾರಕ್ಕೆ ಬಿಟ್ಟಾಗಲೇ ಸಂತಾನದ ಕುರಿತು ಅರ್ಥಪೂರ್ಣ ಮತ್ತು ಆಹ್ಲಾದಕರ ಪರಿಣಾಮ ಸಿಗಬಹುದು.
ಎಸ್.ಜಿ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.