ಪುಟಾಣಿ ಕಳ್ಳರು !
ಅಧ್ಯಾಪಕಿಯ ಟಿಪ್ಪಣಿಗಳು
Team Udayavani, Nov 8, 2019, 4:00 AM IST
ಟೀಚರ್, ಶಾಲೆಗೆ ಕಳ್ಳ ನುಗ್ಗಿದ್ದಾನಂತೆ”- ಶಾಲೆಯ ಗೇಟಿನ ಬಳಿ ತಲುಪಿದಾಗಲೇ ಮಕ್ಕಳು ವರದಿಯೊಪ್ಪಿಸಿದರು. ಬೇಗ ಬೇಗ ಶಾಲೆಯ ಬಳಿ ಬಂದೆ. ನಮ್ಮ ಮುಖ್ಯ ಶಿಕ್ಷಕಿ ಹಾಗೂ ಇನ್ನೊಬ್ಬರು ಶಿಕ್ಷಕಿ ಕಚೇರಿಯ ಬಾಗಿಲ ಬಳಿ ನಿಂತಿದ್ದರು. ಮಕ್ಕಳ ಹೆತ್ತವರೂ ಕೆಲವರಿದ್ದರು. “”ಏನಾಯಿತು ಟೀಚರ್?” ಎಂದು ದಿಗಿಲಿನಿಂದಲೇ ಕೇಳಿದೆ. “”ಯಾರೋ ಬೀಗ ಒಡೆದಿದ್ದಾರೆ. ಶಾಲೆಗೆ ಕಳ್ಳ ನುಗ್ಗಿದ್ದಾನೆ” ಎಂದರು ಅವರು. ಎಲ್ಲರ ಮುಖದಲ್ಲೂ ಚಿಂತೆ. ಎಸ್‌ಡಿಎಂಸಿಯವರು ಬಂದರು. ಮುಖ್ಯ ಶಿಕ್ಷಕಿ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಪೊಲೀಸರು ಹೆಚ್ಚು ತಡಮಾಡದೇ ಬಂದರು. ಯಾವೆಲ್ಲ ವಸ್ತುಗಳು ನಷ್ಟವಾಗಿವೆ ಎಂಬ ಪಟ್ಟಿ ತಯಾರಿಸುತ್ತಿದ್ದರು. ಆಗ ನಾನು ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ನೇತ್ರಾವತಿ ಮಕ್ಕಳಿಗೆ ಗೈಡ್ ತರಬೇತಿ (ಸ್ಕೌಟ್ ಮತ್ತು ಗೈಡ್ಸ್) ಕೊಡುತ್ತಿದ್ದೆವು. ನಾವು ಕೂಡಾ ಏನೆಲ್ಲಾ ಕಳವಾಗಿದೆ ಎಂದು ಪರಿಶೀಲಿಸುತ್ತಿದ್ದೆವು. “”ನಮ್ಮದೆರಡು ಪೆಗ್ ಕಳೆದು ಹೋಗಿದೆ” ಎಂದು ನೇತ್ರಾವತಿ ಟೀಚರ್ ಉದ್ಗರಿಸಿದರು. “”ಹೌದಾ ನಮ್ಮ ಪೆಗ್ ತಗೊಂಡು ಹೋದ್ರಾ? ಛೆ!” ಅಂದೆ ನಾನು. ಪೊಲೀಸರಿಬ್ಬರು ಮುಖಮುಖ ನೋಡಿ ನಗುತ್ತಿದ್ದರು. ಸ್ಕೌಟ್ ಧ್ವಜದ ಕಂಬದಿಂದ ಮೂರು ಕಡೆಯಲ್ಲಿ ನೆಲಕ್ಕೆ ಊರಿದ ಕಬ್ಬಿಣದ ಗೂಟಗಳಿಗೆ ಹಗ್ಗ ಎಳೆದುಕಟ್ಟಿ ಧ್ವಜ ಕಂಬವನ್ನು ನೇರವಾಗಿ ನಿಲ್ಲಿಸಲಾಗುತ್ತದೆ. (ಧ್ವಜ ಕಂಬವನ್ನು ಮಣ್ಣಿನೊಳಗೆ ಊರಲಿಕ್ಕಿಲ್ಲ) ಅದಕ್ಕೆ ಬಳಸುವ ಆ ಮೂರು ಕಬ್ಬಿಣದ ಗೂಟಗಳ ಹೆಸರು ಪೆಗ್! ಎಲ್ಲಿ ಕ್ಯಾಂಪ್ ಇದ್ದರೂ ನಾವು ಧ್ವಜ ಸ್ತಂಭ ಮಾಡಲು ಬೇಕಾದ ಐದಡಿಯ ಮೂರು ಕೋಲುಗಳು, ಹಗ್ಗ, ಮೂರು ಪೆಗ್‌ಗಳನ್ನು ತೆಗೆದುಕೊಂಡು ಹೋಗಬೇಕಿತ್ತು. ವಾರಕ್ಕೊಂದು ದಿನ ಗೈಡ್ ತರಗತಿ ಇದ್ದು ಆಗ ಧ್ವಜಾರೋಹಣ ಮಾಡಲೂ ಈ ಪೆಗ್ ಬೇಕಾಗಿತ್ತು. ನಾವು ಕಮ್ಮಾರನ ಬಳಿ ಮಾಡಿಸಿ ತಂದ ಅಮೂಲ್ಯ ಸಂಪತ್ತು ಅದು. ಅದಿಲ್ಲವೆಂದರೆ ನಮ್ಮ ಗೈಡಿಂಗ್ ಚಟುವಟಿಕೆಗೆ ಭಂಗ ಬರುತ್ತದೆ. ಇದೇ ನಮ್ಮ ಚಿಂತೆಗೆ ಕಾರಣ. ಆದರೆ, ಪೊಲೀಸರಿಗೆ ಪೆಗ್ ಅಂದಾಗ ಏನು ನೆನಪಾಯಿತೋ! ನಮ್ಮ ಪೆಗ್‌ನ ಕಲ್ಪನೆ ಅವರಿಗೆ ಬಂದಿರಲಿಕ್ಕೂ ಇಲ್ಲ.
ನಮ್ಮ ಶಾಲೆಯಲ್ಲಿ ಗಂಟೆ ಬಾರಿಸಲು ದೇವಸ್ಥಾನಗಳಲ್ಲಿ ಇರುವಂತಹ ಒಂದು ಮಧ್ಯಮಗಾತ್ರದ ಕಂಚಿನ ಗಂಟೆಯಿತ್ತು. ಅದು ಈಗ ನಾಪತ್ತೆಯಾಗಿತ್ತು. ಇದು ಶಾಲೆಯ ಮಟ್ಟಿಗೆ ಅತ್ಯಗತ್ಯದ ವಸ್ತು. ಮುಖ್ಯ ಶಿಕ್ಷಕರ ಮೇಜಿನ ಡ್ರಾಯರ್‌ನಲ್ಲಿದ್ದ ಸಣ್ಣದೊಂದು ಮೊತ್ತವೂ ನಾಪತ್ತೆಯಾಗಿತ್ತು. ಬೀಗ ಮುರಿದಿತ್ತು. ಬಾಗಿಲಿಗೆ ಸ್ವಲ್ಪ ಹಾನಿಯಾಗಿತ್ತು. ಪೊಲೀಸರು ಎಲ್ಲಾ ಬರೆದುಕೊಂಡು ಹೊರಟರು. ಕೆಲವು ಸಮಯದ ನಂತರ ಕಳ್ಳ ಯಾರೆಂದು ತಿಳಿಯಿತು. ಬಡ ಸರ್ಕಾರಿ ಶಾಲೆಗೆ ಕಳ್ಳತನಕ್ಕೆ ಬಂದ ಆ ಮೂರ್ಖ ನಮ್ಮದೇ ಒಬ್ಬ ಹಳೆವಿದ್ಯಾರ್ಥಿಯಾಗಿದ್ದ. ಅವನು ಕಳ್ಳನೆಂಬುದಕ್ಕಿಂತ ಕಳ್ಳತನದ ಗೀಳು ಹತ್ತಿಕೊಂಡ ವ್ಯಕ್ತಿಯಾಗಿದ್ದ. ವಸ್ತು ರೂಪದಲ್ಲಿ ಕಳವು ಮಾಲು ಸಿಗಲಿಲ್ಲ. ನಗದು ರೂಪದಲ್ಲಿ ಸಿಕ್ಕಿತು. ಮತ್ತೆ ನಾವು ಹೊಸ ಪೆಗ್ ತಂದೆವು. ಹೊಸ ಗಂಟೆ, ಹೊಸ ಬೀಗ ತಂದೆವು.
ಇದು ಶಾಲೆಯ ವಸ್ತುಗಳು ಕಳವಾದದ್ದಾದರೆ, ಶಾಲೆಯ ಮಕ್ಕಳ ಸಣ್ಣಪುಟ್ಟ ವಸ್ತುಗಳು ಕಳ್ಳತನವಾಗುವ ಪ್ರಕರಣಗಳನ್ನು ನಾವು ಒಮ್ಮೊಮ್ಮೆ ತನಿಖೆ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಪೆನ್ನು, ಪೆನ್ಸಿಲ್ ಹಾಗೂ ಹತ್ತಿಪ್ಪತ್ತು ರೂಪಾಯಿಯೊಳಗಿನ ಮೊತ್ತ ಕಾಣೆಯಾಗುತ್ತದೆ. ಹೈಸ್ಕೂಲ್‌ನಲ್ಲಾದರೆ ಕೆಲವು ನೂರು ರೂಪಾಯಿಗಳೇ ಕಾಣೆಯಾಗುತ್ತವೆ. ಮಕ್ಕಳ ಹೆತ್ತವರು ಏನೋ ಒಂದು ವಸ್ತು ಖರೀದಿಸಿ ತರುವಂತೆ ಮಕ್ಕಳಲ್ಲಿ ಹಣ ಕೊಟ್ಟು ಕಳಿಸುತ್ತಾರೆ. ಇದು ನಾಪತ್ತೆಯಾಗಿರುತ್ತದೆ. ಹಣ ಕಾಣೆಯಾಗಿದೆ ಎಂದು ತಿಳಿದಾಗ ಶಿಕ್ಷಕರಾದ ನಮಗೆ ದೂರು ಬರುತ್ತದೆ. ನಾವು ಒಂದಿಬ್ಬರು ಮೂವರು ತನಿಖೆಗೆ ಹೊರಡುತ್ತೇವೆ. ಎಲ್ಲಾ ವಿದ್ಯಾರ್ಥಿಗಳನ್ನೂ ಹೊರಗೆ ಕಳಿಸಿ (ಕಳಿಸುವಾಗ ಕೈ, ಜೇಬು ಎಲ್ಲಾ ಪರೀಕ್ಷಿಸಿ)
ಬ್ಯಾಗ್, ಪುಸ್ತಕ ಎಲ್ಲಾ ಪರಿಶೀಲಿಸುತ್ತೇವೆ. ಒಮ್ಮೆಯೂ ಯಾರ ಬ್ಯಾಗಿನಿಂದಲೂ ಪುಸ್ತಕ ಸಿಕ್ಕಿದ್ದಿಲ್ಲ. ಆದರೆ ಒಂದೆರಡು ಬಾರಿ ಅಲ್ಲೇ ಡೆಸ್ಕಿನ ಅಡಿಯಲ್ಲಿ ಬಿದ್ದು ಕಳೆದುಹೋದ ಹಣ ಸಿಕ್ಕುವುದಿದೆ. ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದಾಗ ಹಣ ತೆಗೆದವರು ಈ ತರ ಹಣವನ್ನು ಬೇರೆಲ್ಲೋ ಹಾಕಿ ಹೋಗಿರುತ್ತಾರೆ. ಕೆಲವೊಮ್ಮೆ ನಮ್ಮ ಎಲ್ಲಾ ತನಿಖೆಯೂ ವಿಫಲವಾಗಿ ಆ ಹಣ ಸಿಗದೇ ಹೋಗುವುದಿದೆ.
ಕೆಲವು ವಿದ್ಯಾರ್ಥಿಗಳು ಈ ತರ ಹಣ ತೆಗೆಯಲು ಕಾರಣಗಳಿರುತ್ತವೆ. “ಕದಿಯಲು’ ಎಂಬ ಪದ ಬಳಸುವುದು ತಪ್ಪು, ಅವರು ಕಳ್ಳರಲ್ಲ ಎಂಬುದು ನನ್ನ ಭಾವನೆ. ತಮ್ಮ ಅಗತ್ಯಗಳನ್ನು ಈಡೇರಿಸಲು ಮನೆಯಿಂದ ಹಣ ಕೊಡದಿದ್ದಾಗ ಕೆಲವರು ಹೀಗೆ ಮಾಡಬಹುದು. ಬಡತನವಿರುವ ಮಕ್ಕಳು ಹಣ ತೆಗೆಯುತ್ತಾರೆ ಎಂದಲ್ಲ. ತಮ್ಮ ಬಾಯಿಚಪಲ ತೀರಿಸಲು ಅದೂ ಇದೂ ತಿನ್ನುವ ಹವ್ಯಾಸ ಇರುವವರು, ಕೈಗೆ ಕಟ್ಟುವ ಬ್ಯಾಂಡ್, ಪೆನ್ನು ಇತ್ಯಾದಿ ಖರೀದಿಸಲು ಕೆಲವರು ಹಣ ತೆಗೆಯುತ್ತಾರೆ. ಮಕ್ಕಳಿಗೆ ಅಗತ್ಯದ ವಸ್ತುಗಳನ್ನು ಕಾಲಕಾಲಕ್ಕೆ ಖರೀದಿಸಿ ಕೊಡುವುದರಿಂದ, ಅಪರೂಪಕ್ಕೊಮ್ಮೆ ಪಾಕೆಟ್ ಮನಿ ರೂಪದಲ್ಲಿ ಹಣ ಕೊಡುವುದರಿಂದ ಅವರಿಗೆ ಹಣ ಎಗರಿಸಿಯಾದರೂ ಆಸೆ ಈಡೇರಿಸಬೇಕು ಎಂಬ ಯೋಚನೆ ಮರೆಯಾಗುತ್ತದೆ. ದಿನಾಲೂ ಅನಗತ್ಯವಾಗಿ ಮಕ್ಕಳಿಗೆ ಹಣ ಕೊಡುವುದು ಕೂಡ ಅವರನ್ನು ದಾರಿ ತಪ್ಪಿಸುತ್ತದೆ. ಹೆತ್ತವರು ಮಕ್ಕಳಿಗೆ ಹಣದ ಮೌಲ್ಯ ತಿಳಿಸಿಕೊಡಬೇಕು. ಇನ್ನೊಬ್ಬರ ಹಣ ತೆಗೆಯುವುದು ತಪ್ಪು ಹಾಗೂ ಅವಮಾನಕರ ಎಂದು ತಿಳಿಹೇಳಿದರೆ ಮಕ್ಕಳು ಅಂತಹ ತಪ್ಪು ಮಾಡಲಾರರು. ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ವಿಚಾರಿಸುವ ಪರಿಪಾಠವನ್ನು ಹೆತ್ತವರು ಬೆಳೆಸಿಕೊಂಡರೆ, ಅವರೊಡನೆ ಉತ್ತಮ ಬಾಂಧವ್ಯ, ಸಂವಹನ ಇದ್ದರೆ ಆ ಮಕ್ಕಳು ತಪ್ಪು ಮಾಡಲು ಹಿಂಜರಿಯುತ್ತಾರೆ.
ಹಣ ನಾಪತ್ತೆಯಾಗುವ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ನಾವು ಮಕ್ಕಳಿಗೆ ಕೆಲವು ಸಲಹೆಗಳನ್ನು ಕೊಡುತ್ತೇವೆ. ಹಣ ತಾರದೇ ಇರಲು ಪ್ರಯತ್ನಿಸುವುದು, ತರಬೇಕಾದುದು ಅನಿವಾರ್ಯವಾದರೆ ಅದನ್ನು ಬೆಳಗ್ಗೆ ತಂದು ಯಾರಾದರೊಬ್ಬ ಶಿಕ್ಷಕರ ಕೈಗೆ ಒಪ್ಪಿಸಿ, ಸಂಜೆ ಪಡೆದುಕೊಳ್ಳುವುದು, ಹೆಣ್ಣುಮಕ್ಕಳು ತಮ್ಮ ಚೂಡಿದಾರಿನ ಪ್ಯಾಂಟ್‌ನಲ್ಲಿ ಒಂದು ಪಾಕೆಟ್ ಹೊಲಿಸಿಕೊಳ್ಳುವುದು, ಬ್ಯಾಗ್, ಪೌಚ್, ಕಂಪಾಸ್ ಬಾಕಕ್ಸ್ ಗಳಲ್ಲಿ ಹಣ ಇಟ್ಟುಕೊಳ್ಳದಿರುವುದು ಇವೇ ಆ ಸಲಹೆಗಳು. ಈ ಸಲಹೆಗಳನ್ನು ಮಕ್ಕಳು ಪಾಲಿಸತೊಡಗಿದಾಗ ಹಣ ಕಾಣೆಯಾಗುವ ಪ್ರಸಂಗಗಳು ಇಲ್ಲವಾಗಿದೆ.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.