ವಸ್ತ್ರಸಂಹಿತೆಯ ಮಿತ್ರ ಸಮ್ಮಿತೆ
ಅಧ್ಯಾಪಕಿಯ ಟಿಪ್ಪಣಿಗಳು ಕ್ಲಾಸ್‌ರೂಮ್
Team Udayavani, Sep 6, 2019, 5:09 AM IST
ಎರಡು-ಮೂರು ವರ್ಷಗಳ ಹಿಂದೆ ಕಚೇರಿ ವಸ್ತ್ರ ಸಂಹಿತೆಯ ಕುರಿತಾದ ಚರ್ಚೆ ಜೋರಾಗಿ ನಡೆಯುತ್ತಿದ್ದ ಕಾಲ. ಆ ಸಮಯದಲ್ಲಿ ನಮ್ಮ ಶಾಲಾ ಶಿಕ್ಷಕರಿಗೊಂದು ಸಮವಸ್ತ್ರ ಮಾಡುವ ಪ್ರಸ್ತಾಪವನ್ನು ನಮ್ಮ ಮುಖ್ಯಶಿಕ್ಷಕರು ಮುಂದಿಟ್ಟರು. ಕಚೇರಿಗೆ ಮಹಿಳೆಯರು (ಸೀರೆ ಅಥವಾ ಚೂಡಿದಾರ್) ಸಭ್ಯವಾದ ಉಡುಗೆ ಧರಿಸಬಹುದು ಎಂಬುದಾಗಿ ವಸ್ತ್ರ ಸಂಹಿತೆಯಲ್ಲಿದೆ ಎಂದು ತಿಳಿದಾಗ, ಶಿಕ್ಷಕಿಯರು ಸೀರೆಯನ್ನೇ ಉಡಬೇಕು ಎಂಬ ನಿಯಮ ಇಲ್ಲ ಎಂದು ಮಾಹಿತಿ ಹಕ್ಕಿನಡಿಯಲ್ಲಿ ಯಾರೋ ಮಾಹಿತಿ ಸಂಗ್ರಹಿಸಿದ್ದನ್ನು ಜಾಲತಾಣಗಳಲ್ಲಿ ಹಂಚಿಕೊಂಡಾಗ ನಮ್ಮ ಮನಸ್ಸಲ್ಲೊಂದು ಯೋಚನೆ ಹೊಳೆಯಿತು. ನಮ್ಮ ಶಾಲೆಯ ಮಹಿಳಾ ಶಿಕ್ಷಕಿಯರ ಮಧ್ಯೆ ಬಹಳ ಹೆಚ್ಚಿನ ಪ್ರಾಯ ವ್ಯತ್ಯಾಸಗಳಿರಲಿಲ್ಲವಾದ್ದರಿಂದಲೂ ಎಲ್ಲರೂ ಸಮಾನಮನಸ್ಕರಾಗಿದ್ದುದರಿಂದಲೂ ನಮಗೂ ಚೂಡಿದಾರ್ ಅವಕಾಶ ಸಿಗಬೇಕಿತ್ತು ಎಂಬ ಆಸೆ ನಮ್ಮಲ್ಲಿ ಮೊಳೆಯಿತು.
ಸೀರೆ ಎಷ್ಟೇ ಸಾಂಪ್ರದಾಯಿಕ ಉಡುಗೆಯಾದರೂ ಅದರಲ್ಲಿ ಹೆಣ್ಣಿನ ಶರೀರ ಸೌಂದರ್ಯ ಎದ್ದು ಕಾಣುತ್ತದೆ. ಸರಿಯಾಗಿ ಉಡದಿದ್ದರೆ ಶರೀರದ ಕೆಲವು ಭಾಗಗಳು ಹೊರಗಿಣುಕುತ್ತವೆ, ಸೀರೆ ಉಡಲು ಹೆಚ್ಚು ಸಮಯ ಬೇಕು, ವಾಹನ ಸಂಚಾರ ಮಾಡುವಾಗ, ಸ್ಕೂಟರ್ ಚಲಾಯಿಸುವಾಗ, ಮಳೆಗಾಲದಲ್ಲಿ ನಡೆಯುವಾಗ ಸೀರೆ ಬಹಳ ಕಾಟ ಕೊಡುತ್ತದೆ ಹೀಗೆಲ್ಲಾ ಸೀರೆಯಿಂದಾಗುವ ತೊಂದರೆಗಳ ಬಗ್ಗೆ ನಮ್ಮ ಮಾತುಕತೆ ನಡೆಯಿತು.
ಚೂಡಿದಾರ್ ಧರಿಸಿದರೆ ಅಂಗಾಂಗ ಪ್ರದರ್ಶನವಾಗುವುದಿಲ್ಲ. ಪೂರ್ತಿ ಮೈಮುಚ್ಚುತ್ತದೆ. ಮಳೆಗಾಲದಲ್ಲಿ ಧರಿಸಲು, ಅವಸರಕ್ಕೆ ಬೇಗನೇ ತಯಾರಾಗಲು, ಸ್ಕೂಟರ್ ಚಲಾಯಿಸಲು, ನಿರಾಳವಾಗಿ ಪಾಠ ಮಾಡಲು ಚೂಡಿದಾರ್‌ನಷ್ಟು ಸಮರ್ಪಕ ಉಡುಗೆ ಬೇರೆಯಿಲ್ಲ ಎಂಬುದಾಗಿ ಚೂಡಿದಾರ್ ಬಗ್ಗೆ ಹಲವು ಸಮರ್ಥನೆಗಳನ್ನು ಕಂಡುಕೊಂಡೆವು. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದರೆ ಮುಖ್ಯಗುರುಗಳಲ್ಲಿ ಈ ವಿಷಯದ ಕುರಿತಾದ ಸಮರ್ಥನೆ ನಡೆಸಿ ಚೂಡಿದಾರ್ ಧರಿಸಲು ಅನುಮತಿ ಪಡೆಯುವುದು ಹೇಗೆ ಎಂಬ ಸಣ್ಣ ಚಿಂತೆ ನಮ್ಮಲ್ಲಿತ್ತು. ಅವರು ಒಪ್ಪುವರೆಂಬ ಖಚಿತತೆಯೂ ಇತ್ತು ಎಂದರೆ ತಪ್ಪಲ್ಲ. ಯಾಕೆಂದರೆ, ಅವರೂ ನಮ್ಮ ಸಮಾನಮನಸ್ಕರು, ಸಮಾನವಯಸ್ಕರು. ಆದರೆ ಮುಖ್ಯೋಪಾಧ್ಯಾಯರಾಗಿ ಅವರ ನಿಲುವೇನು ಎಂಬುದು ನಮಗೆ ಊಹಿಸಲು ಸಾಧ್ಯವಿರಲಿಲ್ಲ. ಸೂಕ್ತ ಸಂದರ್ಭಕ್ಕಾಗಿ ಕಾದೆವು. ಇದೇ ಸಂದರ್ಭದಲ್ಲಿ ವಸ್ತ್ರಸಂಹಿತೆಯ ಬಗ್ಗೆ ಒಂದೆರಡು ಪತ್ರಿಕೆಗಳಲ್ಲಿ ಲೇಖನವನ್ನೂ ಬರೆದಿದ್ದೆ.
ಆ ದಿನ ಮುಖ್ಯೋಪಾಧ್ಯಾಯರು ನಮಗೆ ಕರೆ ಕಳಿಸಿದ್ದರು. ಅವರ ಚೇಂಬರ್‌ನಲ್ಲಿ ಸಮವಸ್ತ್ರದ ಬಗ್ಗೆ ಮಾತನಾಡಲೆಂದೇ ಕರೆದಿದ್ದರು. ಸಮವಸ್ತ್ರದ ಸೀರೆಗೆ ಒಂದು ಒಳ್ಳೆಯ ಕಲರ್ ಸೆಲೆಕ್ಟ್ ಮಾಡಿ. ಪುರುಷ ಶಿಕ್ಷಕರಿಗೂ ಅದೇ ಕಲರ್ ಆಯ್ಕೆಯಾಗುವಂತಿರಲಿ ಎಂದು ಅವರೆಂದಾಗ ಮೆಲ್ಲನೆ ನಮ್ಮ ತಂಡದ ಒಬ್ಬರು ಸರ್, “ಈಗ ಹೇಗೂ ವಸ್ತ್ರ ಸಂಹಿತೆಯ ಪ್ರಕಾರ ಚೂಡಿದಾರ್ ಧರಿಸಬಹುದು ಎಂದಿದೆಯಲ್ಲ. ನಮ್ಮೆಲ್ಲರಿಗೂ ಚೂಡಿದಾರ್ ಆಗಬಹುದು ಎಂಬ ಅಭಿಪ್ರಾಯವಿದೆ. ನೀವು ಏನು ಹೇಳ್ತೀರೋ ಹಾಗೆ ಮಾಡುವಾ’ ಎಂದರು. “ಹಾಗೆ ಹೇಳ್ತೀರಾ? ಊಂ… ಅಡ್ಡಿಯಿಲ್ಲ. ಸೀರೆ ಅಥವಾ ಚೂಡಿದಾರ್ ಯಾವುದಾದರೂ ಆಗಬಹುದು. ನಮಗೆ ಓವರ್ ಕೋಟ್ ಒಂದನ್ನು ಒಬ್ಬರು ದಾನಿಗಳು ನ್ಪೋನ್ಸರ್ ಮಾಡಿದ್ದಾರೆ. ಅದಕ್ಕೂ ಒಂದು ಕಲರ್ ಸೆಲೆಕ್ಟ್ ಮಾಡಿ’ ಎಂದರು.
ಅವರಿಂದ ಗ್ರೀನ್ ಸಿಗ್ನಲ್ ದೊರೆತದ್ದೇ ತಡಮಾಡದೇ ನಾವು ನಮ್ಮ ಪುತ್ತೂರಿನ ದೊಡ್ಡದೊಂದು ಬಟ್ಟೆ ಮಳಿಗೆಗೆ ಹೋದೆವು. ಒಂದು ಚೂಡಿದಾರ್ ಮೆಟೀರಿಯಲ್ ಸೆಲೆಕ್ಟ್ ಮಾಡಿ ಅಂತಹ ಏಳು ಜೊತೆಗೆ ಆರ್ಡರ್ ಕೊಟ್ಟೆವು. ಕಾಲರ್, ತ್ರೀಫೋರ್ತ್ ಸ್ಲಿವ್ ಇರುವಂತೆ ಒಂದೇ ಮಾದರಿಯಲ್ಲಿ ಚೂಡಿದಾರ್ ಹೊಲಿಸಿಕೊಂಡೆವು. ಬಿಳಿಬಣ್ಣದ ಬಟ್ಟೆಯಲ್ಲಿ ನೀಲಿ ವಿನ್ಯಾಸವಿದ್ದ ಆ ಚೂಡಿದಾರ್ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಜೊತೆಗೆ ಕೋಟೂ ಬಂತು. ಶಿಕ್ಷಕ ಮಿತ್ರರು ಬಿಳಿಯಲ್ಲಿ ನೀಲಿ ಲೈನ್ಸ್ ಇರುವ ಜುಬ್ಟಾ, ಹಾಗೂ ನೀಲಿ ಪ್ಯಾಂಟ್ ಹೊಲಿಸಿಕೊಂಡರು. ಖುಷಿಯಲ್ಲಿ ಗ್ರೂಪ್ ಫೋಟೋ ತೆಗೆದೆವು. ನಮ್ಮ ಶಿಕ್ಷಕ ಬಳಗದ ವಾಟ್ಸಾಪ್ ಗ್ರೂಪುಗಳಲ್ಲಿ ಹಂಚಿಕೊಂಡೆವು. ಎಲ್ಲರೂ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ನಮ್ಮ ವಿದ್ಯಾರ್ಥಿಗಳಿಗಾಗಲೀ, ಪೋಷಕರಿಗಾಗಲೀ ತಕರಾರು ಇರಲಿಲ್ಲ. ಶಿಕ್ಷಣಾಧಿಕಾರಿಗಳೂ ಈ ಬಗ್ಗೆ ಋಣಾತ್ಮಕವಾಗಿ ಏನೂ ಹೇಳಲಿಲ್ಲ. ನಮ್ಮ ಈ ಸಮವಸ್ತ್ರ ಉಳಿದ ಶಾಲೆಯ ಶಿಕ್ಷಕಿಯರಲ್ಲಿ ಸಂಚಲನ ಮೂಡಿಸಿತು. ಹಲವರು ತಮ್ಮ ತಮ್ಮ ಶಾಲೆಗಳಲ್ಲಿ ಇದೇ ತರ ಚೂಡಿದಾರ್ ಸಮವಸ್ತ್ರ ಹಾಕುವ ಬಗ್ಗೆ ಚರ್ಚೆ ಮಾಡಿದರು. ಆದರೆ ಬಹುಶಃ ನಮ್ಮಂತಹ ಸಮಾನಮನಸ್ಕರ ಕೊರತೆಯಿಂದಲೋ, ಶಿಕ್ಷಕಿಯರ ನಡುವಿನ ಪ್ರಾಯ ವ್ಯತ್ಯಾಸದಿಂದಲೋ ಎಲ್ಲೂ ಇಂತಹದ್ದೊಂದು ಸಮವಸ್ತ್ರ ಕ್ರಾಂತಿ ಸಾಧ್ಯವಾಗಲೇ ಇಲ್ಲ. ಆದರೆ ಖಂಡಿತವಾಗಿಯೂ ನಮ್ಮ ಪ್ರಭಾವ ಹಲವರ ಮೇಲೆ ಆಗಿತ್ತು. ನಮ್ಮ ನಡೆ ಹಲವರಿಗೆ ಧೈರ್ಯ ನೀಡಿತು. ಒಂದೊಂದು ಶಾಲೆಯಲ್ಲಿ ಒಬ್ಬರೋ ಇಬ್ಬರೋ ಎಂಬಂತೆ ಕೆಲವರು ಬಣ್ಣದ ಚೂಡಿದಾರ್ ಧರಿಸತೊಡಗಿದ್ದಾರೆ. ನಮ್ಮ ಚೂಡಿದಾರ್ ಸಮವಸ್ತ್ರಕ್ಕಿದು ಅಮೋಘ ಮೂರನೆಯ ವರ್ಷ. ಇದುವರೆಗೆ ಆರು ಜೊತೆ ಸಮವಸ್ತ್ರಗಳಾಗಿವೆ. ವರ್ಷಕ್ಕೆರಡು ಜೊತೆ ಎಂಬಂತೆ ಹಿಂದಿನ ವರ್ಷದ ನಾಲ್ಕು ಜೊತೆ ಸಮವಸ್ತ್ರಗಳು ಈಗ ಊರ್ಜಿತದಲ್ಲಿಲ್ಲ.
ಹಿಂದಿನೆರಡೂ ವರ್ಷ ನಾವು ಬಿಳಿ ಶೇಡ್‌ನ ಬಟ್ಟೆಯನ್ನೇ ಆಯ್ಕೆ ಮಾಡಿದ್ದೆವು. ಈ ವರ್ಷ ನಾವು ಒಂದು ನೀಲಿ-ಹಸಿರು ಮತ್ತೂಂದು ಪಿಂಕ್ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆ ಸಮವಸ್ತ್ರದಲ್ಲಿರುವ ನಮ್ಮ ಗ್ರೂಪ್ ಫೋಟೋಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದೆ. ನೋಡಿದ ಎಲ್ಲರಿಗೂ ಅದು ಇಷ್ಟವಾದದ್ದು ನಮಗೆ ಖುಷಿಕೊಟ್ಟಿದೆ. ಅತ್ಯಂತ ಸಭ್ಯ ರೀತಿಯಲ್ಲಿ ಹೊಲಿಸಿಕೊಂಡ ನಮ್ಮ ಆಕರ್ಷಕ ಸಮವಸ್ತ್ರ ನಮ್ಮ ಹೆಮ್ಮೆ. ಅದಕ್ಕಿಂತ ಸಮಾನಮನಸ್ಕರಾದ ಸಹೋದ್ಯೋಗಿಗಳು ಸಿಕ್ಕಿದ್ದು, ನಮ್ಮ ಜೊತೆ ಸಕಾರಾತ್ಮಕವಾಗಿ ಸ್ಪಂದಿಸುವ ಮುಖ್ಯೋಪಾಧ್ಯಾಯರು ಸಿಕ್ಕಿದ್ದು ನಮ್ಮ ಭಾಗ್ಯ. ಈ ಎಲ್ಲಾ ವಸ್ತ್ರಗಳನ್ನು ಹಾಕಿ ಫೋಟೋ ತೆಗೆದಿಟ್ಟಿದ್ದೇವೆ. ಒಂದು ವೇಳೆ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರೆ ಈ ಸಮವಸ್ತ್ರ ಸಂಹಿತೆ ಒಂದು ಸವಿನೆನಪಷ್ಟೇ ಆಗಬಹುದು. ಆಗ ಮತ್ತೆ ಮತ್ತೆ ನೋಡಿ ಕಣ್ತಂಬಿಕೊಳ್ಳಲು ನೆನಪಿಗೆ ಇರಲಿ ಒಂದಿಷ್ಟು ಫೋಟೋಗಳು.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.