ಸೋರೆಕಾಯಿ ವೈವಿಧ್ಯ
Team Udayavani, Dec 21, 2018, 6:55 AM IST
ಸೋರೆಕಾಯಿ ಸೌತೆಕಾಯಿಯಂತಹದೇ ತರಕಾರಿ. ಅದನ್ನು ನಾವು ಹಲವು ರೀತಿಯಲ್ಲಿ ನಮ್ಮ ಅಡುಗೆಯಲ್ಲಿ ಬಳಸಬಹುದು. ದೋಸೆ, ಪಲ್ಯ, ಸಾಂಬಾರು, ಪಾಯಸ, ಬೋಳು ಕೊದಿಲು, ಹಲ್ವ, ಮಜ್ಜಿಗೆ ಹುಳಿ, ಹೀಗೆ ಹಲವು ರೀತಿಯ ಅಡುಗೆಯನ್ನು ಮಾಡಬಹುದು. ಪಥ್ಯದ ಆಹಾರವಾಗಿಯೂ ಇದರ ಬಳಕೆ ಜಾಸ್ತಿ.
ಸೋರೆಕಾಯಿ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 4 ಕಪ್, ಸೋರೆಕಾಯಿ- 2 ಕಪ್- ಸಿಪ್ಪೆತೆಗೆದು ತಿರುಳು ಸಹಿತ ಬಳಸಬಹುದು. ರುಚಿಗೆ ಉಪ್ಪು, ಇಷ್ಟವೆಂದಾದರೆ ನೀರುಳ್ಳಿ , ಹಸಿಮೆಣಸು ಸಣ್ಣಗೆ ಹೆಚ್ಚಿದ್ದು.
ತಯಾರಿಸುವ ವಿಧಾನ: 4 ಗಂಟೆ ನೆನೆಸಿದ ಅಕ್ಕಿಯನ್ನು ಸೋರೆಕಾಯಿ ಹೋಳು ತಿರುಳು ಹಾಕಿ ನುಣ್ಣಗೆ ಬೀಸಿಕೊಳ್ಳಿ. ನೀರು ಹಾಕುವ ಬದಲು ಸೋರೆಕಾಯಿಯನ್ನೇ ಹಾಕಬೇಕು. ಅದಕ್ಕೆ ಉಪ್ಪು$ಸೇರಿಸಿ ದೋಸೆ ಮಾಡಬಹುದು. ಸಣ್ಣಗೆ ತುಂಡು ಮಾಡಿದ ನೀರುಳ್ಳಿ , ಹಸಿಮೆಣಸು, ಸ್ವಲ್ಪಕಾಯಿತುರಿಯನ್ನು ಬಳಸಿದರೆ ಮತ್ತೂಂದು ರುಚಿಯ ದೋಸೆ ತಯಾರು. ಚಟ್ನಿ, ಜೇನಿನೊಂದಿಗೆ ತಿನ್ನಲು ಬಾರಿ ರುಚಿ.
ಬೋಳು ಕೊದ್ಲು
ಬೇಕಾಗುವ ಸಾಮಗ್ರಿ: ಸಣ್ಣಗೆ ತುಂಡು ಮಾಡಿದ ಸೋರೆಕಾಯಿ ಹೋಳುಗಳು, ರುಚಿಗೆ ಉಪ್ಪು, ಬೆಲ್ಲ, ಉಂಡೆಹುಳಿ ಹುಡಿ, ಅರಸಿನ, ಮೆಣಸಿನ ಹುಡಿ ಚೂರು. ಒಗ್ಗರಣೆಗೆ- ಮೆಣಸು , ಸಾಸಿವೆ, ತುಪ್ಪ , ಬೆಳ್ಳುಳ್ಳಿ ಎಸಳುಗಳು.
ತಯಾರಿಸುವ ವಿಧಾನ: ಸೋರೆಕಾಯಿ ಹೋಳು, ಉಪ್ಪು, ಹುಳಿ, ಬೆಲ್ಲ, ಅರಸಿನ, ಮೆಣಸಿನ ಹುಡಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಬೋಳುಕೊದು ತಯಾರು. ಪಥ್ಯದ ಬೋಳು ಕೊದ್ಲುಗಾದರೆ ಒಗ್ಗರಣೆ, ಮೆಣಸಿನ ಹುಡಿ, ಅರಸಿನ ಬಳಸುವುದಿಲ್ಲ.
ಸೋರೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿ: ತೆಳ್ಳಗೆ ಕತ್ತರಿಸಿದ ಸೋರೆಕಾಯಿ ಹೋಳುಗಳು, ಉಪ್ಪು, ಮೆಣಸಿನ ಹುಡಿ (ಸಾರಿನ ಹುಡಿಯೂ ಆದೀತು), ಅರಸಿನ, ಬೆಲ್ಲ , ಒಗ್ಗರಣೆಗೆ- ಮೆಣಸು, ಸಾಸಿವೆ ಬೇವಿನಸೊಪ್ಪು, ಎಣ್ಣೆ. ಕಾಯಿತುರಿ.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಗ್ಗರಣೆ ಸಿಡಿದಾಗ ಬೇವಿನಸೊಪ್ಪು ಹಾಕಿ. ಅದಕ್ಕೆ ತುಂಡರಿಸಿದ ಹೋಳು, ಉಪ್ಪು, ಅರಸಿನ, ಬೆಲ್ಲ ಹಾಕಿ ನೀರು ಆರುವವರೆಗೆ ಬೇಯಿಸಿ. (ಬೇರೆ ನೀರು ಹಾಕುವ ಅಗತ್ಯವಿಲ್ಲ. ಸಣ್ಣ ಉರಿಯಲ್ಲಿ ಇಟ್ಟಾಗ ನೀರು ಹೋಳಿನಿಂದ ಬಿಡುತ್ತದೆ.) ಬಳಿಕ ಅದಕ್ಕೆ ಕಾಯಿತುರಿ ಹಾಕಿ ಕೈ ಆಡಿಸಿದರೆ ಪಲ್ಯ ತಯಾರು.
ಸೋರೆಕಾಯಿ ಪಾಯಸ
ಬೇಕಾಗುವ ಸಾಮಗ್ರಿ: ಸಣ್ಣಗೆ ಕತ್ತರಿಸಿದ ಸೋರೆಕಾçಯಿ ಹೋಳುಗಳು (ಸಿಪ್ಪೆ-ಬೀಜ, ತಿರುಳು ಸಂಪೂರ್ಣ ತೆಗೆಯಬೇಕು), ಹಸಿ ತೆಂಗಿನಕಾಯಿ ಹಾಲು (ದಪ್ಪಹಾಲು , ತೆಳ್ಳಗಿನ ಹಾಲು- 2ನೇ ಬಾರಿ ತೆಗೆದದ್ದು) ಬೆಲ್ಲ- 5ಅಚ್ಚು, ಅಕ್ಕಿ ಹಿಟ್ಟು- 5 ಚಮಚ, ಗೇರುಬೀಜ ಸ್ವಲ್ಪ, ಬೇಕಷ್ಟು ಉಪ್ಪು.
ತಯಾರಿಸುವ ವಿಧಾನ: ಸೋರಿಕಾಯಿ ಹೋಳುಗಳನ್ನು ಉಪ್ಪು, ಒಂದು ಸಣ್ಣ ತುಂಡು ಬೆಲ್ಲ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಹೋಳು ಬೆಂದ ಮೇಲೆ ಉಳಿದ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಆಮೇಲೆ ಅಕ್ಕಿಹಿಟ್ಟು ಹಾಕಿ ಚೆನ್ನಾಗಿ ಕುದಿಸಬೇಕು. ಆಮೇಲೆ ತೆಳು ಕಾಯಿಹಾಲು ಹಾಕಿ ಕುದಿಸಿ. ನಂತರ ದಪ್ಪಕಾಯಿಹಾಲು ಹಾಕಿ ಸಣ್ಣಗೆ ಕುದಿ ಬರಿಸಿ ಇಳಿಸಿ. ಗೇರುಬೀಜವನ್ನು ತುಪ್ಪದಲ್ಲಿ ಉರಿದು ಸೇರಿಸಿ. ಈಗ ಸ್ವಾದಿಷ್ಟ ಸೋರೆಕಾಯಿ ಪಾಯಸ ತಯಾರು.
ಸೋರೆಕಾಯಿ ಹಲ್ವ
ಬೇಕಾಗುವ ಸಾಮಗ್ರಿ: ತುರಿದ ಸೋರೆಕಾಯಿ- 4 ಕಪ್, ಸಕ್ಕರೆ- 2 ಕಪ್, ಗೇರುಬೀಜ ಸ್ವಲ್ಪ, ಏಲಕ್ಕಿ ಹುಡಿ ಚೂರು. ತುಪ್ಪ-5 ಚಮಚ.
ತಯಾರಿಸುವ ವಿಧಾನ: ಸೋರೆಕಾಯಿ ತುರಿಯನ್ನು ದಪ್ಪ ಬಾಣಲೆಯಲ್ಲಿ ನೀರು ಹಾಕದೆ ಬೇಯಿಸಿ. ಬಳಿಕ ಗೇರುಬೀಜವನ್ನು ಹಾಕಿ. ಬೇಯುವಾಗ ನೀರೆಳುತ್ತದೆ. ಅದು ಸಂಪೂರ್ಣ ಆರಿದಾಗ ಸಕ್ಕರೆ , ತುಪ್ಪಹಾಕಿ ಚೆನ್ನಾಗಿ ಮೊಗಚಿರಿ. ತಳ ಬಿಡುತ್ತಾ ಬಂದಾಗ ಬೇರೆ ಪಾತ್ರದಲ್ಲಿ ಹಾಕಿ ತಣಿಯಲು ಬಿಡಿ. ಬಿಸಿ ಬಿಸಿ ತಿನ್ನಲು ರುಚಿ. ಪ್ರಿಜ…ನಲ್ಲಿ ಇಟ್ಟು ಐಸ್‌ಕ್ರೀಮ… ಜೊತೆ ತಿನ್ನಲು ರುಚಿ.
– ಅಶ್ವಿನಿ ಮೂರ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.