ಮಗಳು ದೊಡ್ಡವಳಾದಳು!
Team Udayavani, Sep 21, 2018, 6:00 AM IST
ಮೊಮ್ಮಗಳನ್ನು ಶಾಲೆಯ ವ್ಯಾನಿಗೆ ಕಳುಹಿಸಲು ಕೆಳಗೆ ಬಂದೆ. ನಮ್ಮ ಮನೆಯ ರಸ್ತೆಯ ಮಧ್ಯದಲ್ಲೇ ಒಂದು ಪೆಂಡಾಲ್ ಎದ್ದು ನಿಂತಿತ್ತು. ಧ್ವನಿವರ್ಧಕದಿಂದ ಒಂದು ತಮಿಳು ಹಾಡು ಹೊರಹೊಮ್ಮುತ್ತಿತ್ತು. ಮಕ್ಕಳು, ಹೆಂಗಸರು ಸಂಭ್ರಮದಿಂದ ಓಡಾಡುತ್ತಿದ್ದರು. ವಿಚಾರಿಸಲು ಪುರುಸೊತ್ತಿರಲಿಲ್ಲ. ವಿಷಯ ತಾನಾಗೇ ಗೊತ್ತಾಗುತ್ತದೆ, ಅಂತ ಮನೆಗೆ ಹೋದೆ.
ನಮ್ಮ ಮನೆಯ ಕೆಲಸದಾಕೆ ಕೆಲಸಕ್ಕೆಂದು ಬಂದವಳು ನನ್ನ ಸೊಸೆಯ ಹತ್ತಿರ, “”ಅಕ್ಕ ನೀವು ಆಫೀಸಿನಿಂದ ಬರುವಾಗ ಹುಡುಗಿಯರಿಗೆ ಕೊಡುವಂಥ ಏನಾದರೂ ಗಿಫ್ಟ್ ತಂದುಕೊಡಿ ಅಕ್ಕ. 100 ರೂಪಾಯಿ ಒಳಗಿನದು ಸಾಕು. ನನ್ನ ಸಂಬಳದಲ್ಲಿ ಹಿಡಿದುಕೊಳ್ಳಿ” ಎಂದು ಹೇಳಿದಳು.
“”ಏನು ವಿಷಯ. ಯಾವುದಾದರೂ ಮದುವೆಗೆ ಹೋಗ್ತಿದ್ದೀಯಾ?” ಕೇಳಿದೆ. “”ಇಲ್ಲಮ್ಮಾ , ನಮ್ಮ ಪಕ್ಕದ ಮನೆ ಪಾರ್ವತಿಯ ಮಗಳು ದೊಡ್ಡವಳಾಗಿದ್ದಾಳೆ. ಇವತ್ತಿಗೆ ಮೈಲಿಗೆಯೆಲ್ಲ ಕಳೆದು 16ನೇ ದಿವಸ ಮಧ್ಯಾಹ್ನ ಊಟ, ರಾತ್ರಿ ಆರತಿ ಇಟ್ಟುಕೊಂಡು ಸುತ್ತಮುತ್ತಲಿನ ಜನರನ್ನೆಲ್ಲಾ ಕರೆದಿದ್ದಾರೆ. ದೊಡ್ಡ ಚಪ್ಪರ ಹಾಕಿದ್ದಾರೆ. ನೀವು ನೋಡಲಿಲ್ವಾ? ಅದಕ್ಕೆ ಹೋದಾಗ ಏನಾದರೂ ಮುಯ್ಯಿ ಮಾಡ್ಬೇಕಲ್ವಾ?” ಅಂದಳು.
ಆಗ ಗೊತ್ತಾಯಿತು, ಕೆಳಗಿನ ರಸ್ತೆಯಲ್ಲಿ ಪೆಂಡಾಲ್ ಹಾಕಿದ್ದು ಯಾಕೆ ಅಂತ. ಅವರಲ್ಲಿ ಹುಡುಗಿ ಮೈನೆರೆದರೆ ಬಹಳ ಗ್ರ್ಯಾಂಡಾಗಿ ಆಚರಿಸುತ್ತಾರೆ ಅಂತ ಹೇಳಿದಳು. ಹುಡುಗಿ ದೊಡ್ಡವಳಾದ ದಿನದಿಂದ ಆಕೆಯನ್ನು ದೂರ ಕುಳ್ಳಿರಿಸಿ, ಪ್ರತಿದಿವಸ ಯಾರಾದರೂ ಆಕೆಯ ಮೈಗೆಲ್ಲಾ ಅರಸಿನ ಹಚ್ಚಿ ಸ್ನಾನಮಾಡಿಸುತ್ತಾರೆ. ಬೇಕಾದಷ್ಟು ತುಪ್ಪ ಹಾಕಿ ಮಾಡಿದ ರವೆಯ ಸಜ್ಜಿಗೆಯನ್ನು , ಚಿಗಳಿಯನ್ನು ದಿವಸವೂ ತಿನ್ನಲು ನೀಡುತ್ತಾರೆ. ಹಸಿಮೈ ಅಂತ ಹೊರಗಡೆ ಎಲ್ಲೂ ಕಳುಹಿಸದೆ ಮನೆಯಲ್ಲೇ ಆರೈಕೆ ಮಾಡುತ್ತಾರೆ. ಶಾಲೆಗೂ ಕಳುಹಿಸುವುದಿಲ್ಲ. ಹದಿನಾರನೆಯ ದಿವಸ ಆ ಹುಡುಗಿಗೆ ತಲೆಗೆ ಸ್ನಾನ ಮಾಡಿಸಿ, ಸೀರೆ-ಒಡವೆಗಳಿಂದ ಮದುಮಗಳಂತೆ ಅಲಂಕರಿಸುತ್ತಾರೆ. ತಮ್ಮ ಮಗಳಿಗೆ ಹೆಣ್ತನ ಪ್ರಾಪ್ತಿಯಾಯಿತು ಎಂಬ ತೃಪ್ತಿ ಪೋಷಕರಿಗೆ. ನಂತರ ನೆಂಟರಿಷ್ಟರಿಗೆಲ್ಲ ಊಟ. ರಾತ್ರಿ ಸುತ್ತಮುತ್ತಲಿನ ಮುತ್ತೈದೆಯರನ್ನೆಲ್ಲ ಅರಸಿನ-ಕುಂಕುಮಕ್ಕೆ ಕರೆದು ಹೂವು, ಬಳೆ, ರವಿಕೆ ಕಣ, ತಾಂಬೂಲ ಕೊಟ್ಟು ಕಳುಹಿಸುತ್ತಾರೆ. ಹತ್ತಿರದ ಬಂಧುಬಳಗದವರೆಲ್ಲ ಚಿನ್ನದ ಆಭರಣಗಳ ಜೊತೆ ಬೇರೆ ಉಡುಗೊರೆಗಳನ್ನೂ ಕೊಡುತ್ತಾರೆ. ಆ ನಂತರದ ದಿನಗಳಲ್ಲಿ ಆ ಹುಡುಗಿಗೆ ಒಂದು ರೀತಿ ಜೈಲುವಾಸದ ಅನುಭವ. ಅವಳು ಹುಡುಗರ ಜೊತೆ ಆಟ ಆಡುವಂತಿಲ್ಲ. ಹೆಚ್ಚು ಮಾತುಕತೆಯಾಡಬಾರದು. ಹೊರಗಡೆ ಒಬ್ಬಳೇ ಓಡಾಡುವಂತಿಲ್ಲ. ಅವಳ ಎಲ್ಲ ಕೆಲಸಗಳಿಗೂ ಕಡಿವಾಣ. ಇದುವೇ ಅವಳ ಮುಂದಿನ ಜೀವನ.
ಹುಡುಗಿಯರು ಮೈನೆರೆದಾಗ ನಡೆಯುವ ಆಚರಣೆಗಳೆಲ್ಲ ಒಂದೊಂದು ಸಂಸ್ಕೃತಿಯಲ್ಲಿ ಒಂದೊಂದು ತೆರನಾಗಿರುತ್ತದೆ. ಇದು ಅನಾದಿ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಆದರೆ ಇಂದು ನಾವು 21ನೆಯ ಶತಮಾನದಲ್ಲಿದ್ದೇವೆ. ರಾಜಧಾನಿಯಲ್ಲಿ ವಾಸಮಾಡುತ್ತಿರುವವರಲ್ಲೂ ಇಂಥ ಒಂದು ಆಚರಣೆ ಎಂದಾಗ ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು.
ಬಾಲಕಿಯರು ದೊಡ್ಡವರಾಗುವ ನೈಸರ್ಗಿಕ ಕ್ರಿಯೆಯನ್ನು ಒಂದು ಕಾಲದಲ್ಲಿ ಗಂಭೀರವಾಗಿ ಪರಿಗಣಿಸುತ್ತಿದ್ದರು. ಶತಮಾನಗಳ ಹಿಂದೆ ಮಗಳು ಮೈನರೆಯುವ ಮುನ್ನವೇ ಅವಳನ್ನು ಮದುವೆ ಮಾಡಿ ಕಳುಹಿಸಬೇಕಿತ್ತು. ಒಂದು ವೇಳೆ, ಮದುವೆ ಮುನ್ನ ಅವಳು ದೊಡ್ಡವಳಾಗಿಬಿಟ್ಟಳೆಂದರೆ ಅವಳ ಕಣ್ಣುಗಳಿಗೆ ಬಟ್ಟೆಕಟ್ಟಿ ಕಾಡಿಗೆ ಬಿಟ್ಟು ಬರುವಂಥ ದುಷ್ಟ ಪದ್ಧತಿಯೂ ಇತ್ತೆಂದು ಅಜ್ಜಿಯಂದಿರು ಹೇಳುತ್ತಿದ್ದರು. ಇದರಿಂದ ಹೆದರಿದ ಮಾತಾಪಿತೃಗಳು ಮಗಳು ಮೈನೆರೆದ ವಿಷಯವನ್ನು ಗುಟ್ಟಾಗಿಟ್ಟು , ಮದುವೆಯ ನಂತರ ಬಹಿರಂಗಗೊಳಿಸಿ ಅವಳನ್ನು ಪತಿಗೃಹಕ್ಕೆ ಕಳುಹಿಸುತ್ತಿದ್ದರು. ಏಳೆಂಟು ವರ್ಷಗಳಲ್ಲೇ ಮದುವೆಯಾಗಿರುವ ಹೆಣ್ಮಕ್ಕಳು ಸಾಧಾರಣ ಹದಿನಾಲ್ಕು, ಹದಿನೈದು ವರ್ಷದ ತನಕ ತವರು ಮನೆಯಲ್ಲೇ ಆಟವಾಡಿಕೊಂಡಿರುತ್ತಿದ್ದರು. ಆಗಿನ ಕಾಲದಲ್ಲಿ ಹದಿನೈದು ವರ್ಷಗಳ ತನಕ ಯಾರೂ ದೊಡ್ಡವರಾಗುತ್ತಿರಲಿಲ್ಲ. ಮಗಳು ಪ್ರಾಯಕ್ಕೆ ಬಂದ ತಕ್ಷಣ ಅವಳ ಪತಿಗೃಹಕ್ಕೆ ಒಸಗೆಯನ್ನು ಕಳುಹಿಸಬೇಕಾಗುತ್ತಿತ್ತು. ನಂತರ ಅವರು ಒಂದು ಶುಭದಿನದಂದು ಪ್ರಸ್ತದ ಶಾಸ್ತ್ರವನ್ನು ಮುಗಿಸಿ ಸೊಸೆಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಅಂದಿನಿಂದ ಅವಳಿಗೆ ಗಂಡನ ಮನೆಯೇ ಸರ್ವಸ್ವವಾಗುತ್ತಿತ್ತು.
ಕಾಲ ಉರುಳುತ್ತಿದ್ದಂತೆ ಸಂಪ್ರದಾಯಗಳಲ್ಲಿಯೂ ಬದಲಾವಣೆ ಯಾಗತೊಡಗಿದವು. ಬಹಿಷ್ಠೆಯಾದವರನ್ನು ಕೇವಲ ಮೂರು ದಿನಗಳ ಕಾಲ ಯಾರೂ ಮುಟ್ಟಿಸಿಕೊಳ್ಳದೆ ಮನೆಯ ಒಂದು ಮೂಲೆಯಲ್ಲಿ ಕುಳ್ಳಿರಿಸುವ ಪದ್ಧತಿ ರೂಢಿಗೆ ಬಂದಿತು. ಆ ದಿನಗಳಲ್ಲಿ ಆಕೆಗೆ ವಿಶ್ರಾಂತಿಯ ಆವಶ್ಯಕತೆಯಿರುತ್ತಿತ್ತು. ಮಾನಸಿಕ ಹಾಗೂ ದೈಹಿಕವಾಗಿ ಬಳಲುತ್ತಿರುವ ಅವಳಿಗೆ ಕೆಲಸಗಳಿಂದ ಮೂರು ದಿನ ಬಿಡುವು ಬೇಕಾಗುತ್ತಿತ್ತು.
ಅವಿಭಕ್ತ ಕುಟುಂಬದಿಂದ ವಿಭಕ್ತದವರೆಗೆ…
ಅಂದು ಅವಿಭಕ್ತ ಕುಟುಂಬಗಳು. ಕೆಲಸ ವಿಪರೀತ. ಆದ್ದರಿಂದ ಬಲವಂತವಾಗಿಯಾದರೂ ಅವಳಿಗೆ ವಿರಾಮ ದೊರಕಲಿ ಎಂದು ಬಹುಶಃ ಈ ಪದ್ಧತಿ ಹುಟ್ಟಿಕೊಂಡಿರಬಹುದು. ಆದರೆ ಬರಬರುತ್ತ ಈ ಕ್ರಮ ಯುವತಿಯರಿಗೆ ಶಿಕ್ಷೆಯಂತೆ ಅನ್ನಿಸಲು ಶುರುವಾಯಿತು. ಮನೆಗೆ ಬರುವ ಹೋಗುವವರ ಮುಂದೆ ಚಾಪೆ, ತಟ್ಟೆ , ಲೋಟ ಇಟ್ಟುಕೊಂಡು ದೂರ ಕುಳಿತುಕೊಳ್ಳುವುದು, ಎಲ್ಲ ಅಗತ್ಯಗಳಿಗೂ ಇನ್ನೊಬ್ಬರನ್ನು ಅವಲಂಬಿಸುವುದು ಮುಜುಗರವೆನಿಸತೊಡಗಿತು. ಅಂದಿನ ದಿನಗಳಲ್ಲಿ ಪ್ಯಾಡ್, ನ್ಯಾಪ್‌ಕಿನ್‌ಗಳ ಉಪಯೋಗಗಳೂ ಗೊತ್ತಿಲ್ಲದೆ, ಅವರು ಆ ಸಮಯದಲ್ಲಿ ಉಪಯೋಗಿಸುತ್ತಿದ್ದ ಹಳೆಯ ಬಟ್ಟೆಗಳಿಂದಾಗಿ ಕೆಲವರಿಗೆ ಸೋಂಕು ರೋಗಗಳೂ ತಗುಲಿಕೊಳ್ಳತೊಡಗಿದವು. ಹಾಗಾಗಿ, ಸುಶಿಕ್ಷಿತ ಯುವತಿಯರು ತಮ್ಮ ತಾಯ್ತಂದೆಗಳ ಮನವೊಲಿಸಿ, ಸ್ವತ್ಛತೆಯ ಅರಿವು ಮೂಡಿಸಿ ಮೂರು ದಿನಗಳ ಕಾಲ ದೂರ ಕುಳಿತುಕೊಳ್ಳುವ ವಿರುದ್ಧ ಯುದ್ಧ ಸಾರಿದರು.
ಅದೂ ಅಲ್ಲದೆ ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೇ ಇರುವ ವಿಭಕ್ತ ಕುಟುಂಬಗಳು ತಲೆಯೆತ್ತಿದ್ದವು. ಮೂರು ದಿನ ದೂರ ಕುಳಿತರೆ ಗಂಡ ಕೆಲಸದಿಂದ ವಾಪಸು ಬರುವವರೆಗೆ ಉಪವಾಸವಿರಬೇಕಾದ ಪ್ರಸಂಗ ಒದಗುತ್ತಿತ್ತು. ಈ ಎಲ್ಲ ಕಾರಣಗಳಿಂದ ಮಡಿ ಎಂಬ ಸಂಪ್ರದಾಯವು ಕ್ರಮೇಣ ಮರೆಯಾಗಿ ಸ್ನಾನಮಾಡಿ ಮನೆಯ ಎಲ್ಲ ಕೆಲಸಕ್ಕೂ ಕೈಹಾಕಿದರು. ಆದರೆ, ಈಗಲೂ ಕೆಲವು ಮಡಿವಂತರ ಮನೆಯಲ್ಲಿ ಈ ಕ್ರಮ ಇನ್ನೂ ಅಳಿಸಿಹೋಗಿಲ್ಲ.
ಈಗಿನ ಹೈಟೆಕ್ ಯುಗದಲ್ಲಿ ಎಲ್ಲವೂ ಹೈಜೆನಿಕ್ ಆಗಿರಲೇಬೇಕು. ಹೊರಗೆ ದುಡಿಯುವ ಅನಿವಾರ್ಯತೆಯಿಂದಾಗಿ ಹೊಸ ಕ್ರಮಗಳು ಎಲ್ಲರಿಗೂ ಅತ್ಯಗತ್ಯವಾಗಿವೆ. ಇದೊಂದು ಸಹಜ ನೈಸರ್ಗಿಕ ಕ್ರಿಯೆ ಎಂದು ಹಿಂದಿನ ಪೀಳಿಗೆಯವರೆಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ದೂರದರ್ಶನ, ಮೊಬೈಲ್‌ಗಳು ಬಳಕೆಯಲ್ಲಿರುವ ಇಂದಿನ ದಿನಗಳಲ್ಲಿ ಅದರಲ್ಲಿ ಪ್ರಸಾರವಾಗುವ ಕೆಲವು ಪ್ರಚೋದನಕಾರಿ ದೃಶ್ಯಗಳು ಪುಟ್ಟ ಮಕ್ಕಳ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತವೆ. ಇದು ಅವರ ಶರೀರದ ಮೇಲೂ ಪರಿಣಾಮಕಾರಿಯಾಗುತ್ತದೆ. ಅದೂ ಅಲ್ಲದೆ, ಅವರು ಸೇವಿಸುವ ಶ್ರೀಮಂತಿಕೆಯ ಆಹಾರದಿಂದಲೂ ಅವರ ದೇಹ ಶೀಘ್ರ ಬೆಳವಣಿಗೆಯಾಗಿ ಈಗ ಹತ್ತುವರ್ಷದ ಒಳಗಿನ ಮಕ್ಕಳೂ ಸಹ ಮೈನೆರೆದು ಬಿಡುತ್ತಿದ್ದಾರೆ. ಆ ಮಕ್ಕಳದು ಇನ್ನೂ ಎಳೆಯ ಮನಸ್ಸು. ತಿಳುವಳಿಕೆಯೂ ಇರುವುದಿಲ್ಲ. ಇಂಥ ಸಮಯದಲ್ಲಿ ಅವರಲ್ಲಾದ ಪ್ರಕ್ರಿಯೆ ಅವರಿಗೆ ಸಹಿಸಿಕೊಳ್ಳಲಾಗದಂತಹುದು. ಇದು ಕೇವಲ ಒಂದು ಸಲಕ್ಕೆ ಮುಗಿಯುವುದಲ್ಲ. ತಿಂಗಳು ತಿಂಗಳು ಬರುವ ಅನಪೇಕ್ಷಿತ ಅತಿಥಿ ಎಂದಾಗ ಅವರಿಗೆ ನಿಜಕ್ಕೂ ಆಘಾತವೇ ಉಂಟಾಗುವುದು ಸಹಜ.
ಪುಟ್ಟ ಬಾಲಕಿಯರು ತಮಗೇ ಗೊತ್ತಿಲ್ಲದಂತೆ ತಮ್ಮ ಶರೀರದಲ್ಲಾದ ಬೆಳವಣಿಗೆಗಳಿಂದ ಘಾಸಿಗೊಂಡಿರುತ್ತಾರೆ. ಮನಸ್ಸು ಸಂಕೋಚದಿಂದ ಮುದುಡಿಕೊಂಡಿರುತ್ತದೆ. ಯಾರಲ್ಲಿಯೂ ಹೇಳಿಕೊಳ್ಳಲಾರದಂಥ ಪರಿಸ್ಥಿತಿ. ಇದನ್ನು ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧರಿರುವುದಿಲ್ಲ. “ಮಗಳು ಹೆಣ್ಣಾದಳು’ ಹೌದು. ಅದು ತಂದೆತಾಯಿಯರಿಗೆ ಸಂತಸ ತರುವಂಥ ವಿಷಯ. ಆದರೆ, ಅದರ ಬೆನ್ನಹಿಂದೆಯೇ ಅವರ ಹೊಣೆಗಾರಿಕೆಯೂ ಹೆಚ್ಚಾಗುತ್ತದೆ.
ಪುಷ್ಪಾ ಎನ್. ಕೆ. ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.