ತೊಂಡೆಕಾಯಿ ವೈವಿಧ್ಯ
Team Udayavani, Nov 16, 2018, 6:00 AM IST
ತೊಂಡೆಕಾಯಿ ಸುಲಭವಾಗಿ ಪಚನಗೊಳ್ಳುವ ತರಕಾರಿ. ಈ ತರಕಾರಿಯ ನಿತ್ಯ ಸೇವನೆಯಿಂದ ಮೆದುಳು ಮತ್ತು ಹೃದಯಗಳು ಶಕ್ತಿಯುತವಾಗುತ್ತದೆ.
ತೊಂಡೆಕಾಯಿ ಮಸಾಲೆ ಪಲ್ಯ
ಬೇಕಾಗುವ ಸಾಮಗ್ರಿ: 1 ಕಪ್ ತೊಂಡೆಕಾಯಿ, 1/2 ಕಪ್ ತೆಂಗಿನತುರಿ, 2-3 ಒಣಮೆಣಸು, 1/2 ಚಮಚ ಕೊತ್ತಂಬರಿ, 1/2 ಚಮಚ ಉದ್ದಿನಬೇಳೆ, 1 ಲವಂಗ, ಸಣ್ಣ ತುಂಡು ಚಕ್ಕೆ, 3-4 ಟೇಬಲ್ ಚಮಚ ಎಣ್ಣೆ , 1 ಚಮಚ ಹುಳಿರಸ, 2 ಚಮಚ ಬೆಲ್ಲ, 2 ಬೀಜ ಬೆಳ್ಳುಳ್ಳಿ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, 4 ಸೀಳು ಮಾಡಿ ಹೆಚ್ಚಿಡಿ. ತೊಂಡೆಕಾಯಿ ಇಡಿಯಾಗಿರಲಿ. ಬದನೆಕಾಯಿ ಎಣ್ಣೆಗಾಯಿ ಪಲ್ಯಕ್ಕೆ ಸೀಳು ಮಾಡಿದಂತೆ ಮಾಡಬೇಕು. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಕೊತ್ತಂಬರಿ, ಉದ್ದಿನಬೇಳೆ, ಲವಂಗ, ಚಕ್ಕೆ, ಒಣಮೆಣಸು ಸೇರಿಸಿ ಹುರಿಯಿರಿ. ನಂತರ ತೆಂಗಿನತುರಿ, ಹುರಿದ ಮಸಾಲೆ, ಉಪ್ಪು , ಹುಳಿ, ಬೆಲ್ಲ ಸೇರಿಸಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿ. ಈ ಮಸಾಲೆಯನ್ನು ಚೂರಿಯ ಸಹಾಯದಿಂದ ಹೆಚ್ಚಿದ ತೊಂಡೆಕಾಯಿಗೆ ತುಂಬಿಸಿ. ಈ ರೀತಿ ಎಲ್ಲ ತೊಂಡೆಕಾಯಿಗಳನ್ನು ತುಂಬಿಸಿ ತಟ್ಟೆಯಲ್ಲಿಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಬೆಳ್ಳುಳ್ಳಿ , ಒಣಮೆಣಸು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆ ಸಿಡಿದಾಗ, ತುಂಬಿಸಿಟ್ಟ ತೊಂಡೆಕಾಯಿಯನ್ನು ಹಾಕಿ ಮುಚ್ಚಿಡಿ. ನೀರು ಹಾಕಬಾರದು. 10 ನಿಮಿಷ ಕಳೆದು ಮೆಲ್ಲನೆ ಸೌಟು ಹಾಕಿ ತಿರುಗಿಸಿ. ಚೆನ್ನಾಗಿ ಬೆಂದ ಮೇಲೆ ಎಣ್ಣೆ ಬಾಣಲೆಯಲ್ಲಿ ಜಿನುಗುವಾಗ ಇಳಿಸಿರಿ. ಚಪಾತಿಯೊಂದಿಗೂ, ಅನ್ನಕ್ಕೂ ರುಚಿಯಾಗಿರುತ್ತದೆ.
ತೊಂಡೆ ಹಸಿ ತಂಬುಳಿ
ಬೇಕಾಗುವ ಸಾಮಗ್ರಿ: 10-12 ತೊಂಡೆ, 2 ಕಪ್ ತೆಂಗಿನತುರಿ, 2-3 ಹಸಿಮೆಣಸು, 3 ಕಪ್ ಸಿಹಿ ಮಜ್ಜಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಎಣ್ಣೆ.
ತಯಾರಿಸುವ ವಿಧಾನ: ತೊಂಡೆಕಾಯಿ ತೊಳೆದು, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿ, ಹಸಿಮೆಣಸು, ಬೆಂದ ತೊಂಡೆ ಸೇರಿಸಿ ನಯವಾಗಿ ರುಬ್ಬಿ. ನಂತರ ಸಿಹಿ ಮಜ್ಜಿಗೆ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಲು ರುಚಿಯಾಗಿರುತ್ತದೆ.
ತೊಂಡೆಕಾಯಿ ದೋಸೆ
ಬೇಕಾಗುವ ಸಾಮಗ್ರಿ: 1 ಕಪ್ ಬೆಳ್ತಿಗೆ ಅಕ್ಕಿ, 1/4 ಕಪ್ ಉದ್ದಿನಬೇಳೆ, 7-8 ತೊಂಡೆಕಾಯಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಚಮಚ ಮೆಂತೆ.
ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ, ಮೆಂತೆ 5-6 ಗಂಟೆ ನೆನೆಸಿ. ನಂತರ ತೊಳೆದು ತೊಂಡೆಕಾಯಿ ತುಂಡು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಮಾರನೆ ದಿನ ತವಾ ಒಲೆಯ ಮೇಲಿಟ್ಟು ಎಣ್ಣೆ ಪಸೆ ಮಾಡಿ ದೋಸೆ ಹೊಯ್ಯಿರಿ. ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ಹಣ್ಣಾದ ತೊಂಡೆಯಲ್ಲಿಯೂ ದೋಸೆ ಮಾಡಬಹುದು.
ತೊಂಡೆಕಾಯಿ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿ: 1 ಕಪ್ ಉದ್ದಕ್ಕೆ ತುಂಡು ಮಾಡಿದ ತೊಂಡೆಕಾಯಿ, 2 ಕಪ್ ಹಸಿ ತೆಂಗಿನ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಹಸಿಮೆಣಸು, 1 ಕಪ್ ಸಿಹಿ ಮಜ್ಜಿಗೆ, 1/2 ಕಪ್ ಹುಳಿ ಮಜ್ಜಿಗೆ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪು ಮೆಣಸು.
ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, ಉದ್ದಕ್ಕೆ ತುಂಡು ಮಾಡಿ ಸ್ವಲ್ಪ ನೀರು, ಉಪ್ಪು , ಕೆಂಪುಮೆಣಸಿನ ಪುಡಿ, ಸಿಗಿದ ಹಸಿಮೆಣಸು ಸೇರಿಸಿ ಪಾತ್ರೆಯಲ್ಲಿಟ್ಟು ಒಲೆಯ ಮೇಲಿಟ್ಟು ಬೇಯಿಸಿ. ತೆಂಗಿನತುರಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ತೊಂಡೆಕಾಯಿಗೆ ಸೇರಿಸಿ. ಸಿಹಿ ಮಜ್ಜಿಗೆ, ಹುಳಿ ಮಜ್ಜಿಗೆ ಸೇರಿಸಿ ನಂತರ ಸಾಕಷ್ಟು ನೀರು ಸೇರಿಸಿ 1 ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು ಸೇರಿಸಿ ಒಗ್ಗರಣೆ ಕೊಡಿ. ಈ ಮಜ್ಜಿಗೆ ಹುಳಿ ಸಾಂಬಾರಿಗಿಂತ ದಪ್ಪವಿರಬೇಕು. ಅನ್ನ, ಗಂಜಿಯೊಂದಿಗೆ ತಿನ್ನಲು ಸ್ವಾದಿಷ್ಟವಾಗಿರುತ್ತದೆ.
ತೊಂಡೆಕಾಯಿ ಹುಳಿ ಮೆಣಸಿನ ಕೊದಿಲು
ಬೇಕಾಗುವ ಸಾಮಗ್ರಿ: 1 ಕಪ್ ಜಜ್ಜಿದ ತೊಂಡೆಕಾಯಿ, 1 ಚಮಚ ಹುಳಿ, 2-3 ಕೆಂಪು ಮೆಣಸು, 1/4 ಚಮಚ ಕೆಂಪುಮೆಣಸಿನ ಪುಡಿ, ಚಿಟಿಕೆ ಅರಸಿನ, 2 ಕಪ್ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, 1 ಚಮಚ ಎಣ್ಣೆ.
ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, ಕಲ್ಲಿನಿಂದ ಜಜ್ಜಿ, ಸ್ವಲ್ಪ ನೀರು, ಉಪ್ಪು ಸೇರಿಸಿ ಮೆಣಸಿನ ಪುಡಿ ಸೇರಿಸಿ ಪಾತ್ರೆಯಲ್ಲಿಟ್ಟು ಬೇಯಿಸಿ. ತೆಂಗಿನತುರಿ, ಅರಸಿನ, ಕೆಂಪು ಮೆಣಸು, ಸ್ವಲ್ಪ ಹುಳಿ, ನೀರು ಸೇರಿಸಿ ರುಬ್ಬಿ ಬೆಂದ ತರಕಾರಿಗೆ ಸೇರಿಸಿ ಕುದಿಸಿ. ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಎಣ್ಣೆಯಲ್ಲಿ ಸೇರಿಸಿ ಒಗ್ಗರಣೆ ಕೊಡಿ. ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.