ಹೆಣ್ಣಿಗೆ ನಗಲು ಬಾರದೋ? ಅಥವಾ ಹೆಣ್ಣು ನಗಬಾರದೋ?
Team Udayavani, Sep 1, 2017, 6:05 AM IST
ನಗುನಗುತಾ ಬಾಳಮ್ಮ’ ಇದು ಎಲ್ಲಾ ಹೆಣ್ಣುಮಕ್ಕಳಿಗೆ ಹಿರಿಯರಿಂದ ಸಿಗುವ ಆಶೀರ್ವಾದ. ಹೆಣ್ಣಿಗೆ ಬದುಕಿನಲ್ಲಿ ಗಂಡ-ಮಕ್ಕಳ ಹೊರತಾಗಿ, ತನಗೆಂದೇ ಸಿಗುವ ಆಶೀರ್ವಾದ ಲಾಭವೆಂದರೆ ಇದೊಂದೇ. ಉಳಿದದ್ದೆಲ್ಲ ನಿನ್ನ ಗಂಡನ ಆಯುಷ್ಯ ವೃದ್ಧಿಯಾಗಲಿ, ಸಂತಾನ ಅಭಿವೃದ್ಧಿಯಾಗಲಿ ಇತ್ಯಾದಿ.
“ನಗು’ ಎಲ್ಲರಿಗೂ ಅತೀ ಅಗತ್ಯವಾದ ಒಂದು ಸಂವೇದನೆ. ತನ್ನ ಮನಸ್ಸಿನ ಭಾವನೆಯನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮವೂ ಹೌದು. ನಗುವಿಲ್ಲದೆ ಬದುಕಿಗೆ ಏನು ಸಾರ್ಥಕತೆ? ಪ್ರತಿದಿನದ ಆಗುಹೋಗುಗಳ ಮಧ್ಯೆ ಸಣ್ಣದೊಂದು ನಗು ಬಾರದಿದ್ದರೆ ಆ ದಿನವೇ ವ್ಯರ್ಥವಾದಂತೆ!
ನಮ್ಮೆಲ್ಲ ಮನರಂಜನೆಗಳ ಮುಖ್ಯ ಉದ್ದೇಶ ಮುಖದಲ್ಲಿ ನಗು ಮೂಡಿಸುವುದು. ನಮ್ಮ ದೇವರುಗಳು, ದೇವತೆಗಳು ನಮಗೆ ಇಷ್ಟರಾಗುವುದು ಅವರುಗಳ ತುಟಿ, ಕಣ್ಣುಗಳಲ್ಲಿ ಹೊರಸೂಸುವ ನಗುವಿನಿಂದ! ರಾಕ್ಷಸರ ಮುಖದಲ್ಲಿಯೂ ನಗು ಇರುತ್ತದೆ. ಆದರೆ, ಅದು ಅಟ್ಟಹಾಸ.
ಆದರೆ, ನಗು ಕೇವಲ ಮುಖದಲ್ಲಿ ಸೂಸುವ ಅಭಿವ್ಯಕ್ತಿಯಾದರೂ ಅದಕ್ಕೆ ದೇಹ, ಮನಸ್ಸು ಎರಡೂ ಸಂಪೂರ್ಣ ಒಳಪಡಬೇಕಾಗುತ್ತದೆ. ಇಂಥ ನಗುವಿನ ಸ್ವಾತಂತ್ರ್ಯ ಕೂಡ ಹೆಣ್ಣು ಜನ್ಮಕ್ಕೆ ಕೇವಲ ನಸೀಬಾಗಿ ಉಳಿದಿದೆ ಎಂದು ನನ್ನ ಅನಿಸಿಕೆ.
ಪ್ರತಿ ಹೆಣ್ಣುಮಗುವಿಗೆ ಮೂರ್‍ನಾಲ್ಕು ವರ್ಷ ಆಗುತ್ತಿದಂತೆ, ಎಲ್ಲಾವಿಷಯಗಳ ತರಬೇತಿಗಳ ಜೊತೆ ತಾನು ಹೇಗೆ ನಗಬೇಕೆಂದು ಕೂಡ ತರಬೇತಿ ನೀಡಲಾಗುತ್ತದೆ. ಹೆಣ್ಣುಮಕ್ಕಳು ಮನಸ್ಸು ಬಿಚ್ಚಿ ಎಲ್ಲರೆದುರು ಎಂದು ನಗುವುದನ್ನು ಸಾಂಪ್ರದಾಯಿಕ ಸಮಾಜ ಅನುಮಾನದಿಂದ ನೋಡುತ್ತದೆ. ನಗುವನ್ನು ಮನಸ್ಸಿನಲ್ಲೇ ಇಟ್ಟುಕೊಂಡು, ಗಂಭೀರ ವ್ಯಕ್ತಿತ್ವದವಳೆಂದು ಅನ್ನಿಸಿಕೊಂಡರೆ ಆಕೆ ಆದರ್ಶ ಹೆಣ್ಣೆಂದು ಪರಿಗಣಿಸಲ್ಪಡುತ್ತಾಳೆ. ನಗುನಗುತ್ತ ಮಾತನಾಡುವ ಗಂಡು ಸ್ನೇಹಮಯಿ ಎನ್ನಿಸಿಕೊಳ್ಳುತ್ತಾನೆ. ಆದರೆ, ಹಾಗಿರುವ ಹೆಣ್ಣು “ಚೆಲ್ಲುಚೆಲ್ಲು’ ಗುಣದವಳಾಗಿ ಅಡ್ಡಹೆಸರಿಗೆ ಒಳಗಾಗುತ್ತಾಳೆ!
ಪುರಾಣಗಳಲ್ಲಾಗಲಿ, ಇತಿಹಾಸದಲ್ಲಾಗಲಿ ನಗುವನ್ನೇ ಜೀವನದ ಜೀವಾಳವಾಗಿಸಿಕೊಂಡ, ತುಂಟತನದ ಅಭಿವ್ಯಕ್ತಿಯಲ್ಲಿ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸಿದ ಯಾರಾದರೂ ಹೆಣ್ಣನ್ನ ಉದಾಹರಿಸಲಾಗುವುದೆ? ಕೃಷ್ಣನಂತೆ ಬಾಲಲೀಲೆಗಳನ್ನು ಪ್ರದರ್ಶಿಸುತ್ತ ಜಗತ್ತನ್ನು ಆಕರ್ಷಿಸಿದ ಪುರುಷರು ಸಾಕಷ್ಟು ಮಂದಿ ಪುರಾಣಲೋಕದಲ್ಲಿರಬಹುದು. ಅಂದರೆ ಹೆಣ್ಣು ನಗಬಾರದೋ ಅಥವಾ ಆಕೆಗೆ ನಗಲು ಬಾರದೋ ಎಂಬುದು ಯೋಚಿಸತಕ್ಕ ವಿಷಯ.
ಇನ್ನೂ ಮುಂದುವರೆದು ನೋಡಿದರೆ, ಹೆಣ್ಣುಮಕ್ಕಳು ಹೇಗೆ ನಗಬೇಕು, ಎಂದು ನಗಬೇಕು ಎಂಬ ಬಗ್ಗೆ ಕಟ್ಟಳೆಗಳಿರುವುದು ಗಮನಕ್ಕೆ ಬರುತ್ತದೆ. ಈಗ ಕೊಂಚ ಬದಲಾವಣೆಯಾಗಿರಬಹುದು; ಆದರೆ, ಮನೆಗೆ ಬಂದವರೆದುರು ಗಂಡಸು ಹೇಗೂ ವರ್ತಿಸಬಹುದು, ಗಟ್ಟಿಧ್ವನಿಯಲ್ಲಿ ಮಾತನಾಡಬಹುದು, ಅಸಮಾಧಾನವನ್ನು ಸೂಚಿಸಬಹುದು; ಆದರೆ, ಹೆಂಗಸು ಮಾತ್ರ ನಗುನಗುತ್ತ “ಮನೆಯಲ್ಲಿ ಎಲ್ಲವೂ ಸರಿ ಇದೆ’ ಎಂಬಂತೆ ತೋರಿಸಬೇಕಾಗುತ್ತದೆ. ಇದು ಅವಳ ಪಾಲಿಗೆ ಇರುವ ಅನಿವಾರ್ಯತೆ. ಮನೆಯೊಳಗೆ ನಡೆದಿರುವ ಜಗಳದ ಗುಟ್ಟು ಹೊರಬರದಂತೆ ತಡೆದು ಮುಗುಳ್ನಗುವಿನ ಮುಖವಾಡ ಧರಿಸಿ ಆದರ್ಶ ಪತ್ನಿಯಾಗಬೇಕಾದ ನಿರ್ಬಂಧ ಆಕೆಗೆ ಮಾತ್ರವಿದೆ. ಗಂಡಸರಿಗಾದರೆ ಅದು ಅನಿವಾರ್ಯ ಸ್ಥಿತಿಯಲ್ಲ. ಮಕ್ಕಳೆದುರು ಕೂಡ ಆಕೆ ಮನಸ್ಸಿನ ಒಳಗನ್ನು ಹೊರಗೆಡಹುವ ಹಾಗಿಲ್ಲ. ಮಕ್ಕಳೆದುರು ಕೂಡ ತನ್ನ ದುಃಖದ ಚೀಲಗಳನ್ನು ತನ್ನೊಳಗೇ ಮಡಿಚಿಟ್ಟು ಕೊಳ್ಳಬೇಕಾದ ಕಷ್ಟದ ವ್ಯವಹಾರ!
“ನಗುನಗುತಾ ಬಾಳಮ್ಮ’ ಎಂದು ಪ್ರತ್ಯೇಕವಾಗಿ ಯಾಕೆ ಆಶೀರ್ವದಿಸುತ್ತಾರೆ ಎಂಬುದೇ ನನಗೆ ಅಚ್ಚರಿಯ ಸಂಗತಿ. “ನಿನ್ನ ಭಾವನೆಗಳನ್ನು ಹತ್ತಿಕ್ಕುವ ಸ್ಥಿತಿ ಮುಂದೆ ಬರಲಿದೆ. ಅದನ್ನು ಎದುರಿಸಲು ಸಿದ್ಧಳಾಗು’ ಎಂದು ಪರೋಕ್ಷವಾಗಿ ಸೂಚಿಸುವ ಮಾರ್ಗವೋ ಏನೊ! ಆಶೀರ್ವಾದ ಬಲದಿಂದಾದರೂ “ನಗುವನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಸ್ಥೈರ್ಯ ಬರಲಿ’ ಎಂಬ ಆಶಯವೂ ಇದ್ದಿರಬಹುದು. ಅಂತೂ, ಗಾಂಭೀರ್ಯವನ್ನೇ ತನ್ನ ಲಕ್ಷಣವಾಗಿರಿಸಿಕೊಂಡ ಹೆಣ್ಣು ಸಹಜತೆಯನ್ನು ಮೆಟ್ಟಿ ನಿಲ್ಲಬೇಕಾದ ಸ್ಥಿತಿ ಈ ಕಾಲದಲ್ಲಿಯೂ ಇದೆ.
ಇಲ್ಲವೆಂದರೂ ಕೆಲವೊಮ್ಮೆ ಹೆಣ್ಣು ನಗಬೇಕಾಗುತ್ತದೆ; ಯಾವಾಗ ಎಂದು ಕೇಳುತ್ತೀರಾ? ತನ್ನಲ್ಲಿರುವ ಸಹಜ ಕೋಪತಾಪಗಳನ್ನು ನಗುವಿನ ಬಣ್ಣಕ್ಕೆ ಕರಗಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ !
– ರಶ್ಮಿ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.