ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ !


Team Udayavani, May 11, 2018, 7:20 AM IST

10.jpg

ಅಮ್ಮ, ಅವ್ವ, ತಾಯಿ, ಜನನಿ, ಮಾತೆ, ದೇವರೊಬ್ಬ ನಾಮ ಹಲವೆಂಬಂತೆ ತಾಯಿಯ ನೂರಾರು ನಾಮಗಳು. ನಾವೆಲ್ಲ “ಮಮ್ಮಿ’ ಎಂದು ಕರೆಯುವುದು ಆಕೆಯನ್ನೇ. ಒಂಬತ್ತು ತಿಂಗಳು ಹೊತ್ತು, ಹೆತ್ತು, ನಮ್ಮನ್ನು ಸಾಕು ಸಲಹಿದವಳು ಶಕ್ತಿಮಾತೆ ತಾಯಿ.

“ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’, “ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು’, ಎಂದವರು ಅಮ್ಮನಲ್ಲೇ ದೇವರನ್ನು ಕಾಣುತ್ತೇವೆ. ಲಂಕೇಶರು ಹೇಳುವಂತೆ ಸಾಮಾನ್ಯರಲ್ಲಿ ಅಸಾಮಾನ್ಯಳವಳು. ಮ್ಯಾಕ್ಸಿಮ್ ಗೋರ್ಕಿಯವರ “ತಾಯಿ’ ಕೂಡ ತಾಯಿಯ ಮಹತ್ವವನ್ನು ಸಾರಿ ಹೇಳುತ್ತದೆ. ಬರೆದಷ್ಟು ಪುಟಗಳೇ ಸಾಲದೇನೋ ಅಮ್ಮನ ಬಣ್ಣಿಸಲು.

ಹಿಂದೆ ಮನೆಯಲ್ಲಿ  ಹತ್ತಾರು ಮಕ್ಕಳನ್ನು ಸಾಕಿ ಸಲಹಿದ ತಾಯಿಯಲ್ಲೂ, ಈಗಿನ ದುಡಿಮೆಯ ಜೀವನದಲ್ಲಿ ಕಚೆೇರಿ ಕೆಲಸದೊಂದಿಗೆ ನಾವಿಬ್ಬರು, ನಮಗಿಬ್ಬರು ಎನ್ನುವಂತೆ ಎರಡು ಮಕ್ಕಳನ್ನು ಸಲಹುವ ತಾಯಿಯಲ್ಲೂ ಅಷ್ಟೇ ಮಮತೆ ಅಡಗಿದೆ. ತಾಯಿಯು ಮಮತೆಯ ಆಗರ. ಇಂದಿನ ಕಚೇರಿ ಕೆಲಸದ ನಡುವೆ ಮಕ್ಕಳನ್ನು ಉತ್ತಮ “ಡೇ ಕೇರ್‌’, “ಪ್ಲೇ ಸ್ಕೂಲ…’ ಹುಡುಕಾಟಕ್ಕಾಗಿ ನೂರಾರು ಬಾರಿ ಆಲೋಚಿಸಿ, ಮಗುವನ್ನು ಅಲ್ಲಿ ಸೇರಿಸುವುಷ್ಟರಲ್ಲಿ ಅವಳ ಹೃದಯಬಡಿತ ನಿಂತೇ ಹೋಗಿರುತ್ತದೆ. ಇನ್ನು ಆಯ ಕೈಯಲ್ಲಿ ಬಿಟ್ಟು ಬಂದರಂತೂ ಅವಳ ಮನಸ್ಸೆಲ್ಲ  ಮನೆಯಲ್ಲೇ. ಯಾವಾಗ ಕೆಲಸ ಮುಗಿಸಿ, ಮಗುವನ್ನು ನೋಡುತ್ತೇನೋ ಎಂಬ ಹಂಬಲ ಅವಳಲ್ಲಿ.

ಮಗು ಹೊಟ್ಟೆಯಲ್ಲಿರುವಾಗಲೇ ಅದರ ಪೋಷಣೆಗೆಂದು ಸಮತೋಲನ ಆಹಾರ ಶುರು ಮಾಡಿದವಳು, ಅದರ ಪೋಷಣೆಗೆಂದು ತನ್ನ ಪೋಷಣೆಯನ್ನು ಮರೆತು ಬಿಡುವಳು. ಇನ್ನು ಮತ್ತೂಂದು ಹಡೆಯಲು ತಯಾರಾದರಂತೂ ಅವಳ ಜವಾಬ್ದಾರಿ ದುಪ್ಪಟ್ಟು ಆದರೂ ಏನೂ ಆಗದವಳಂತೆ ಇಬ್ಬರನ್ನು ಸಲಹಲು ನಗುನಗುತ್ತ ತಯಾರಾಗುತ್ತಾಳೆ.
ಮಗುವನ್ನು ಶಾಲೆಗೆ ಕಳುಹಿಸಲು ಡಬ್ಬಿಗೆ ತಿಂಡಿ ತುಂಬಿ, ಸಮವಸ್ತ್ರವನ್ನು ಇಸ್ತ್ರಿ ಮಾಡಿ, ತಿಂಡಿ ತಿನಿಸಲು ಹೆಣಗಾಡಿ, ಶಾಲೆಗೆ ಕಳುಹಿಸಿ, ಸಂಜೆ ಬಂದ ನಂತರ ಡಬ್ಬಿಯಲ್ಲಿ ತಿಂಡಿ ಖಾಲಿಯಾಗಿರುವುದು ಖಾತರಿಯಾದರೆ ಅವಳು ಊಟ ಮಾಡಿದಷ್ಟೇ ಸಮಾಧಾನ. ಮಕ್ಕಳನ್ನು ಆಟ ಆಡಲು ಕಳುಹಿಸಿ ಮನೆಗೆ ಬಂದಂತೆ, “ಎಳನೀರ ತಕ್ಕೊಂಡು ಅಂಗಾಲ ತೊಳೆದೇನ’ ಎಂದು ಜನಪದರು ಹೇಳಿದಂತೆ ಕೈಕಾಲು ತೊಳೆದು, ಹೋಮ್‌ವರ್ಕ್‌ ಮಾಡಿಸಿ, ಊಟ ಮಾಡಿಸಿ ಮಲಗಿಸಿದರೆ ಅವಳ ಕೆಲಸ ಮುಗಿಯಿತೆಂದುಕೊಂಡರೆ ನಾಳೆಯ ಬೆಳಗಿನ ತಿಂಡಿ ತಿನಿಸಿಗಾಗಿ ಅಕ್ಕಿ, ಕಾಳನ್ನು ನೆನೆಸುವುದೋ, ಹಿಟ್ಟು ರುಬ್ಬುವುದಕ್ಕೋ ಶುರುಮಾಡುತ್ತಾಳೆ.

ಮಕ್ಕಳ ಆರೈಕೆಗಾಗಿ ಕಚೆೇರಿ ಕೆಲಸ ಮಾಡುವ ಹಂಬಲವಿದ್ದರೂ, ರಾಜೀನಾಮೆ ನೀಡುತ್ತಾಳೆ. ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಸಿದ್ಧಳಾಗುವಳು.ಇಷ್ಟು ದಿನ ಎರಡು ಸಂಬಳದಿಂದ ಒಂದೇ ಸಂಬಳಕ್ಕೆ ಬದಲಾದದ್ದು ಮನೆಯಲ್ಲಿ ಯಾರಿಗೂ ಏನೂ ಬದಲಾವಣೆಯಾಗದಂತೆ, ಹೇಗೆ ನೋಡಿಕೊಂಡಳ್ಳೋ ದೇವರೇ ಬಲ್ಲ. ಹಣಕಾಸು ಮಂತ್ರಿಯ ಕೆಲಸ ಇವಳಿಗೇ ನೀಡಬೇಕು.

ಮಕ್ಕಳು ದೊಡ್ಡವರಾದಂತೆ ಅವರ ಮದುವೆ, ಮಕ್ಕಳ ಜವಾಬ್ದಾರಿಯನ್ನು ಅವಳೇ ಹೊರುತ್ತಾಳೆ. ಸೊಸೆಯಾದರೂ ನನ್ನಂತೆ ಆಸೆಗಳನ್ನು ಅದುಮಿಕೊಳ್ಳಬಾರದು ಎಂಬ ಭಾವನೆ ಅವಳದು, ಸೊಸೆಯನ್ನು ಮಗಳಂತೆ ಕಾಣುತ್ತಾಳೆ. “”ಕೆಲಸಕ್ಕೆ ಹೋಗಮ್ಮ, ಮನೆಕೆಲಸ, ಮೊಮ್ಮಗುವನ್ನು ನಾನು ನೋಡಿಕೊಳ್ಳುತ್ತೇನೆ” ಎಂಬ ಭರವಸೆ ನೀಡಿ ಕಳುಹಿಸುತ್ತಾಳೆ. ಅವಳನ್ನು ಮಗನೊಂದಿಗೆ ಸಿನೆಮಾ, ಹೊಟೇಲುಗಳಿಗೆ ಕಳುಹಿಸುತ್ತಾಳೆ. ಸೊಸೆ ಕಾರು ಕಲಿತರೆ ಅವಳು ಕಲಿತಷ್ಟೇ ಸಂತೋಷ.

ಮನೆಗೆ ಬರುವ ನೆಂಟರು ಕೂಡ ಏನೂ ಕೆಲಸ ಮಾಡದಿದ್ದರೂ ಸಹಿಸಿ ಅವರ ಉಪಚಾರಕ್ಕೆ ತೊಡಗುತ್ತಾಳೆ, “ಅತಿಥಿ ದೇವೋ ಭವ’ ಎಂದು. ನೆಂಟರು ಕೂಡ “”ಮನೆಯಲ್ಲಿ ಎಂದೂ ಕೆಲಸ ಇದ್ದಿದ್ದೇ, ಈಗ ಅಕ್ಕನ ಕೈರುಚಿ ನೋಡೋಣ” ಎಂಬ ಭಾವದಲ್ಲಿರುವಾಗ ಅಮ್ಮ ಮೌನವಾಗಿ ಅಡುಗೆ ಮಾಡುತ್ತಿರುತ್ತಾಳೆ. ಅವಳು ಊಟ ಮಾಡಿದಳ್ಳೋ ಇಲ್ಲವೋ ಕೋಳುವವರ್ಯಾರು.

ಮೊಮ್ಮಗಳು ಶಾಲೆಗೆ ಹೋದಾಗ ಇವಳಿಗೆ ಸ್ವಲ್ಪ ವಿರಾಮ. ಆ ಸಮಯದಲ್ಲಿ ಅವಳ ಹಳೇ ಜರಿ ಸೀರೆಯ ಲಂಗ-ರವಿಕೆ ಹೊಲಿದು, ಅವಳಿಗಾಗಿ ಸ್ವೆಟರ್‌, ಟೋಪಿ ತಯಾರಿಸಿ, ಅಲಂಕರಿಸಿ ನೋಡುವ ತನಕ ಸಮಾಧಾನವಿಲ್ಲ.
ದೂರದಲ್ಲಿರುವ ಮಗಳು ವಾಟ್ಸಾಪ್‌ ಫೋಟೋಗಳನ್ನು ಕಳುಹಿಸಿದರೆ ಅದನ್ನು ನೋಡಲು, ಸೊಸೆ ಹೇಳಿಕೊಟ್ಟಿದ್ದಾಳೆ. ವೀಡಿಯೋ ಕಾಲ… ಕೂಡ ಮಾಡಲು ಕಲಿತ್ತಿದ್ದಾಳೆ.

“ಅಮ್ಮಾ ಎಂದರೆ ಏನೋ ಹರುಷವು’ ಹಾಡನ್ನು ನೀವೆಲ್ಲ ಕೇಳಿರಬಹುದು. ಅಮ್ಮ ಎಂಬುದೊಂದು ಮೋಹಕರಾಗ. ಆ ಹೆಸರಲ್ಲೇನೋ ಸೆಳೆತವಿದೆ. ಮಗುವೊಂದು ಮೊದಲು ಕರೆಯುವ ಶಬ್ದವೇ ಅಮ್ಮ. ಬಿದ್ದು ನೋವಾದಾಗಲೂ ನಾವು ಉಚ್ಚರಿಸುವುದು ಕೂಡ “ಅಮ್ಮ’.ತಾಯಿಗಿಂತ ಬಂಧು ಇದ್ದಾಳೆಯೇ ಈ ಜಗದಲ್ಲಿ. ದೇವರು ಎಲ್ಲ ಸಮಯದಲ್ಲೂ ನಮ್ಮೊಂದಿಗೆ ಇರಲಾಗದೆಂದು ತಾಯಿಯನ್ನು ಸೃಷ್ಟಿಸಿದನೆಂದು ಕೇಳಿದ್ದೇವೆ. ತಾಯಿಯು ಕೊನೆಯವರೆಗೆ ಇರಲಾಗದೆಂದು ಸೃಷ್ಟಿಸಿದ ಹೆಂಡತಿ, ಮಗಳಲ್ಲೂ ಒಬ್ಬ ತಾಯಿಯಿದ್ದಾಳೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಕುಳಿತು ಕಲಿತ “ಅ… ಆ…’ , “ಅಜ್ಜ, ಅಜ್ಜಿ, ಅಕ್ಕ, ಅಪ್ಪ’ ಈ ಶಬ್ದಗಳನ್ನು ನಾವು ಎಂದಿಂಗೂ ಮರೆಯಲಾರೆವು.

ಚಿಕ್ಕಂದಿನಲ್ಲಿ ಅತ್ತಾಗ ಮುದ್ದಾಡಿ, ಹಾಲುಣಿಸಿ, ಚಂದಮಾಮನ ತೋರಿಸಿ ಅನ್ನವುಣಿಸಿ, ನಮ್ಮ ತೀಟೆಗಳನ್ನು ಸಹಿಸಿ, ಗೆಳೆಯರೊಂದಿಗೆ ಜಗಳಕ್ಕಾಗಿ ಪಕ್ಕದಮನೆ ಆಂಟಿ ಬೈದಾಗ ಅವರಿಗೆ ಆಶ್ವಾಸನೆ ನೀಡಿ ನಮ್ಮನ್ನು ತಿದ್ದಿ, ರಾತ್ರಿ ಜೋಗುಳ ಹಾಡಿ ಮಲಗಿಸಿದ ಅವಳ ಸಹನೆಗೋ ನಮೋ ನಮಃ. ಶಾಲೆಯಲ್ಲಿ ಕಡಿಮೆ ಅಂಕ ಪಡೆದು ಗುರುಗಳ ಬಳಿ ಪಡೆದ ನಾಗರಬೆತ್ತದ ಏಟಿಗೆ, ಅವಳ ಏಟೂ ಸೇರಿಸಿ, ಇನ್ನು ಜೀವನದಲ್ಲಿ ಮರೆಯಲಾಗದಂತೆ ಪಾಠವನ್ನು ಹೇಳಿಕೊಟ್ಟು ಮುಂದಿನ ಪರೀಕ್ಷೆಯಲ್ಲಿ ನೂರಕ್ಕೆ ನೂರು ಗಳಿಸಿದಾಗ ನನಗಿಂತ ಜಾಸ್ತಿ ಖುಷಿಪಟ್ಟವಳು ಅವಳೇ.

ಕಥೆ ಪುಸ್ತಕ ಓದುವ ಹುಚ್ಚನ್ನು ಗಮನಿಸಿ, ಆಗಾಗ ಪುಸ್ತಕಗಳನ್ನು ಜೋಡಿಸಿ, ಉಗುರು ಕಚ್ಚುವ ದುರಾಭ್ಯಾಸವನ್ನು ಕಲಿತದ್ದನ್ನು ಕಂಡು, ಕೈಯನ್ನು ಬೆಂಕಿಯತ್ತ ಕೊಂಡೊಯ್ದು ಇನ್ನೆಂದು ಅಪ್ಪಿತಪ್ಪಿಯೂ ಉಗುರು ಕಚ್ಚದಂತೆ ಮಾಡಿದವಳು ನನ್ನವ್ವ.

ಕಾಲೇಜು ಜೀವನಕ್ಕೆ ಕಾಲಿಡುತ್ತ ನಾನು ಹಾಸ್ಟೆಲು ಸೇರಿದಾಗ, ನನಗೆ ಕಾಣದಂತೆ ಮರೆಯಲ್ಲಿ ಅತ್ತವಳವಳು. ಗೆಳತಿಯರ ತಂದೆ-ತಾಯಿ ಬರುವಾಗೆಲ್ಲ ಅವರ ಬಳಿ ಚಕ್ಕುಲಿ, ಕೋಡುಬಳೆ, ಪುಳಿಯೋಗರೆಯನ್ನು ಕಳಿಸಿ, ನಾನು ಮನೆಗೆ ಬಂದಾಗ ನನ್ನಿಷ್ಟದ ಖಾದ್ಯಗಳನ್ನೆಲ್ಲ ಮಾಡಿ ಬಡಿಸುತ್ತಿದ್ದಳು. ನನ್ನ ಗೆಳತಿಯಂತೆ ನನ್ನೊಂದಿಗೆ ಹರಟುತ್ತಿದ್ದಳು ಕೂಡ. ನನ್ನ ಅವಳ ನಡುವೆ ಗುಟ್ಟೇನೂ ಇರಲಿಲ್ಲ.

ಅವಳ ಮೆನೋಪಾಸ್‌ ದಿನಗಳಲ್ಲಿ, ಅವಳನ್ನು ನಾನು ಒಂದೊಮ್ಮೆ ತೀಟೆ ಮಾಡಿದರೂ, ಅವಳನ್ನು ಬೈದರೂ, “”ಅಷ್ಟೂ ಗೊತ್ತಾಗಲ್ವ ನಿನಗೆ” ಎಂದೆಲ್ಲ  ವಯಸ್ಸಿನ ಭರದಲ್ಲಿ ಕಾಡಿರಬಹುದು, ಅವನ್ನೆಲ್ಲ ಸಹಿಸಿದ ಸಹನಾ ಧರಿತ್ರಿ ಅವಳು. ನನ್ನ ಮದುವೆಯ ದಿನ ನನ್ನನ್ನು ಧಾರೆ ಎರೆಯುವಾಗ ಅವಳ ಕಣ್ಣಲ್ಲಿ ಜಲಧಾರೆ. ಹಾಗೆಂದು ಪತಿಯ ಮನೆಗೆ ಕಳಿಸುವಾಗ ಒಂದು ತೊಟ್ಟು ಕಣ್ಣೀರನ್ನೂ ಅವಳು ಸುರಿಸಲಿಲ್ಲ, ನಗುನಗುತ್ತ ಕಳುಹಿಸಲೆಂದು.

ಇನ್ನು ನಾನು ಹಡೆದಾಗ, ಅವಳ ಮುಖದಲ್ಲಿ ನನ್ನನ್ನೇ ಮತ್ತೆ ಹಡೆದಂತಹ ಸಂಭ್ರಮ. ಆಸ್ಪತ್ರೆಯಲ್ಲಿ ತಾನು ಮೊದಲು ಮೊಮ್ಮಗುವನ್ನು ಪಡೆದು, ಮು¨ªಾಡಿ, ನಂತರದ ದಿನಗಳಲ್ಲಿ ಎಣ್ಣೆ-ಸ್ನಾನ, ಅದಕ್ಕಾಗಿ ಬಟ್ಟೆ-ಬರೆಗಳನ್ನು ಹೊಲಿದು, ನಾಮಕರಣ ಎಂದೆಲ್ಲ ಸಂಭ್ರಮದಲ್ಲಿ ಅವಳ ಊಟ-ನಿದ್ರೆಗಳನ್ನೂ ಮರೆತಳು. ಒಂದು ವರ್ಷದವರೆಗೂ ನನ್ನ ಮತ್ತು ಮಗುವಿನ ಆರೈಕೆಯಲ್ಲಿ ಮುಳುಗಿದ್ದಳು.

ಹುಟ್ಟಿದಾಗ ತಾಯಿಯಾಗಿ, ವಿದ್ಯೆ ಕಲಿಸಲು ಗುರುವಾಗಿ, ತಪ್ಪು ಮಾಡಿದಾಗ ತಿದ್ದುವ ನ್ಯಾಯಾಧೀಶಳಾಗಿ, ನನ್ನ ಯೌವ್ವನದ ದಿನಗಳಲ್ಲಿ ಗೆಳತಿಯಾಗಿ, ಬಹುಮುಖ ಪ್ರತಿಭೆಯಾಗಿ ಮೆರೆದವಳು ನನ್ನ ತಾಯಿ.ಅವಳಿಗೆ ನೂರಾರು ವರುಷಗಳನ್ನು ದೇವರು ನೀಡಿದರೂ ಸಾಲದು, ಅವಳ ತಾಯ್ತನದ ಮುಖ ಬೆಳಗುತ್ತಲೇ ಇರುತ್ತದೆ.

ಒಂದು ಮಗುವಿಗಾಗಿ ಇಬ್ಬರು ತಾಯಂದಿರು ಕಿತ್ತಾಡಿ ರಾಜನು ಮಗುವನ್ನು ಕತ್ತರಿಸಿ ಪಾಲು ಮಾಡಲು ತೀರ್ಪು ನೀಡಿದಾಗ ನಿಜವಾದ ತಾಯಿ, “ಆ ಮಗುವನ್ನು ಆಕೆಗೇ ಕೊಡಿ, ಕತ್ತರಿಸಬೇಡಿ’ ಎಂದು ಬೇಡಿ ಕೊಂಡು, ಅವಳಲ್ಲಿರುವ ತಾಯ್ತನವನ್ನು ತೋರಿಸಿದಳು. ಕೃಷ್ಣನನ್ನು  ಜನ್ಮ ನೀಡಿದ ದೇವಕಿಯೂ ತಾಯಿ, ಸಾಕಿ ಸಲಹಿದ ಯಶೋದೆಯೂ ತಾಯಿ. ರಾಮನಿಗಾಗಿ ಉತ್ತಮ ಬೋರೆ ಹಣ್ಣು ತೆಗೆದಿಟ್ಟ ಶಬರಿಯೂ ತಾಯಿಯೇ ಸರಿ.

ಬೆಕ್ಕುಗಳು ಕೂಡ ಹೆತ್ತ ಮರಿಗಳನ್ನು ಗಂಡು ಬೆಕ್ಕಿನಿಂದ ರಕ್ಷಿಸಲು ಹೆಣಗಾಡುತ್ತವೆ. ಆಕಳು ಕೂಡ ನೂರಾರು ಆಕಳ ಹಿಂಡಿನ ನಡುವೆ ತನ್ನ ಕರುವನ್ನು ಹುಡುಕಿ ಹಾಲುಣಿಸುತ್ತದೆ. ಪಕ್ಷಿಗಳು ತಮ್ಮ ಮಕ್ಕಳಿಗಾಗಿ ತಮ್ಮ ಕೊಕ್ಕಿನಲ್ಲಿ ಆಹಾರವನ್ನು ತಂದು ಉಣಿಸುತ್ತವೆ. ಪ್ರಾಣಿಗಳೂ ತಮ್ಮ ಮರಿಗಳನ್ನು ಬೇರೆ ಪ್ರಾಣಿಗಳಿಂದ ರಕ್ಷಿಸುತ್ತವೆ. ಅವುಗಳಲ್ಲೂ ಒಬ್ಬ ತಾಯಿಯಿದ್ದಾಳೆ.

“ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ’ ಎಂದು ರಾಮನು ಹೆತ್ತ ತಾಯಿ ಮತ್ತು ತಾಯ್ನಾಡಿನಲ್ಲಿದ್ದರೆ ಸ್ವರ್ಗದಲ್ಲಿದ್ದಂತೆ ಎಂದು ರಾವಣನನ್ನು ಸೋಲಿಸಿ ಭೂಲೋಕದ ಸ್ವರ್ಗದಂತಿದ್ದ ಲಂಕೆಯಲ್ಲಿರಲು ನಿರಾಕರಿಸುತ್ತಾನೆ. ತಾಯಿಯ ಮೇಲಿನ ಗೌರವದಿಂದ ಶಂಕರಾಚಾರ್ಯರು, ದೀಕ್ಷೆ ಸ್ವೀಕರಿಸಿದ ನಂತರ ಕೂಡ ತಾಯಿ ಸತ್ತಾಗ ಅವಳ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ನವರಸ ನಾಯಕಿ ತಾಯಿ ಕಣ್ಣಿಗೆ ಕಾಣುವ ದೇವರೇ ಅಲ್ಲದೇ ಇನ್ನೇನು. ತುತ್ತು ಕೊಟ್ಟವಳಿಗೊಂದು ಮುತ್ತು ಕೊಟ್ಟು ನಮಸ್ಕರಿಸೋಣ. ನಮಸ್ತೇ ಅವ್ವ, ಅಮ್ಮ, ಅಲಿಯಾಸ್‌ ಮಮ್ಮಿ. ಜನುಮ ನೀಡುವವಳು, ಸಾಕಿ ಸಲಹುವವಳು ತಾಯಿ, ನೆಲವ ಕೊಟ್ಟ ಭೂತಾಯಿ, ಜಲವ ಕೊಡುವ ಕಾವೇರಿ, ಗಂಗಾ ಎಲ್ಲ ತಾಯಂದಿರೇ.

ಸಾವಿತ್ರಿ ಶ್ಯಾನುಭಾಗ್‌

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.