ಪುಷ್ಪ ಪಾಕ ಕಲೆ
Team Udayavani, Apr 6, 2018, 6:00 AM IST
ಮಹಿಳೆಯರ ಹೂವಿನಂತಹ ಮನಸ್ಸು ಹೂವಿನಲ್ಲೂ ಅಡುಗೆ ಮಾಡಿ ಉಣಬಡಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಾರೆ. ಇಲ್ಲಿದೆ ಕೆಲವು ಹೂವಿನ ಅಡುಗೆಗಳು…
ಮಾವಿನ ಹೂವಿನ ಚಟ್ನಿ
ಈಗ ಎಲ್ಲಾ ಕಡೆಯೂ ಮಾವಿನ ಹೂ ಬಿಡುವ ಕಾಲ. ಚಟ್ನಿ ಮಾಡಲು ಮಿಡಿ ಆಗುವ ತನಕ ಕಾಯಬೇಕಾಗಿಲ್ಲ.
ಬೇಕಾಗುವ ಸಾಮಗ್ರಿ: ತೊಳೆದು ಶುದ್ಧೀಕರಿಸಿದ ಮಾವಿನ ಹೂ 3 ಚಮಚ, 1 ಕಪ್ ತೆಂಗಿನತುರಿ, ಎರಡು ಕಾಯಿಮೆಣಸು, 1 ಚಮಚ ಹಸಿ ಸಾಸಿವೆ, ರುಚಿಗೆ ತಕ್ಕಂತೆ ಉಪ್ಪು , ಹುಳಿ, ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಎಣ್ಣೆ , ಕರಿಬೇವು, ಒಣಮೆಣಸು.
ತಯಾರಿಸುವ ವಿಧಾನ: ತೆಂಗಿನ ತುರಿ, ಸಾಸಿವೆ, ಮೆಣಸು, ಉಪ್ಪು, ಹುಳಿ, ಮಾವಿನ ಹೂ ಎಲ್ಲಾ ಸೇರಿಸಿ ರುಬ್ಬಿ. ಒಗ್ಗರಣೆ ಸಿಡಿಸಿ ಕರಿಬೇವು ಹಾಕಿ ಚಟ್ನಿಗೆ ಸೇರಿಸಿದರೆ ಘಮಘಮ ಮಾವಿನಕಾಯಿ ಸುವಾಸನೆಯ ಚಟ್ನಿ ರೆಡಿ.
ಸಿಹಿಕುಂಬಳ ಹೂವಿನ ಚಟ್ನಿ
ಬೇಕಾಗುವ ಸಾಮಗ್ರಿ: ಹತ್ತು ಸಿಹಿ ಕುಂಬಳದ ಹೂ, ಕಾಯಿಮೆಣಸು-3, 2 ಕಪ್ ತೆಂಗಿನತುರಿ, ರುಚಿಗೆ ತಕ್ಕಷ್ಟು ಹುಳಿ, ಉಪ್ಪು , ಒಗ್ಗರಣೆಗೆ ಸಾಮಾನು, ಕರಿಬೇವು.
ತಯಾರಿಸುವ ವಿಧಾನ: ಹೂ, ಹಸಿಮೆಣಸು, ಹುಳಿಯೊಂದಿಗೆ ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ನಂತರ ತೆಂಗಿನತುರಿಯೊಂದಿಗೆ ರುಬ್ಬಿ. ಉಪ್ಪು ಸೇರಿಸಿ ಒಂದು ಕುದಿ ಕುದಿಸಿ. ಕೂಡಲೇ ಬಳಸುವುದಿದ್ದರೆ ಕುದಿಸುವ ಅಗತ್ಯವಿಲ್ಲ. ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ಚಟ್ನಿ ತಯಾರು. (ಗಿಡದಲ್ಲಿ ಮಿಡಿಕಟ್ಟದ ಹೂಗಳು ನೆಲಕ್ಕೆ ಬಿದ್ದು ಹಾಳಾಗುವ ಬದಲು ಚಟ್ನಿ ಮಾಡಿದರೆ ಉಪಯೋಗ. ಈ ಹೂಗಳನ್ನು ತೊಟ್ಟಿನ ಹತ್ತಿರ ಬಿಡಿಸಿ ನೋಡಿ ಬಳಸಬೇಕು. ಕೆಲವೊಂದು ಸಂದರ್ಭದಲ್ಲಿ ತೊಟ್ಟಿನೊಳಗೆ ಹುಳಗಳು ಇರುವ ಪ್ರಮೇಯವೂ ಇರುವುದನ್ನು ಗಮನಿಸಬೇಕು).
ನುಗ್ಗೆ ಹೂವಿನ ಸಾರು
ಬೇಕಾಗುವ ಸಾಮಗ್ರಿ: ನುಗ್ಗೆ ಹೂ- 1 ಕಪ್, ಹುಣಸೆಹುಳಿ- ಸುಲಿದ ಅಡಿಕೆ ಗಾತ್ರದಷ್ಟು , ರುಚಿಗೆ ತಕ್ಕಷ್ಟು ಉಪ್ಪು , ಬೆಲ್ಲ , ಹಸಿಮೆಣಸು- 2, ಶುಂಠಿ ಸಣ್ಣ ತುಂಡು, ತುಪ್ಪ , ಒಗ್ಗರಣೆ ಎಣ್ಣೆ, ಕರಿಬೇವು.
ತಯಾರಿಸುವ ವಿಧಾನ: ಹುಣಸೆ ಹುಳಿಗೆ ನೀರು ಹಾಕಿ ಕಿವುಚಿ 2 ಕಪ್‌ನಷ್ಟು ನೀರು ಮಾಡಿಟ್ಟುಕೊಳ್ಳಿ. ಉಪ್ಪು , ಹಸಿಮೆಣಸು, ಬೆಲ್ಲ ಸೇರಿಸಿ ಕುದಿಸಿ. ಶುಂಠಿಯನ್ನು ಜಜ್ಜಿ ಚಿಕ್ಕದಾಗಿ ಕತ್ತರಿಸಿ ಕುದಿಯುತ್ತಿರುವ ನೀರಿಗೆ ಸೇರಿಸಿ. ತುಪ್ಪದಲ್ಲಿ ಹುರಿದ ನುಗ್ಗೆ ಹೂವನ್ನು ಸೇರಿಸಿ ಕರಿಬೇವು ಹಾಕಿ ಇಳಿಸಿ. ಕೊನೆ ಹಂತದಲ್ಲಿ ತುಪ್ಪದಲ್ಲಿ ಒಗ್ಗರಣೆ ಕೊಡಿ. ತೆಂಗಿನಕಾಯಿ ಬಳಸದ ಕಾರಣ ಬೆಲ್ಲದ ಅಂಶ ಜಾಸ್ತಿ ಇದ್ದರೆ ರುಚಿಯಾಗಿರುತ್ತದೆ. (ಮರದ ಅಡಿ ಬಟ್ಟೆ ಹರಡಿ ಉದುರಿದ ಹೂಗಳನ್ನು ಸಂಗ್ರಹಿಸಿ ಒಣಗಿಸಿಟ್ಟುಕೊಂಡದ್ದಾದಲ್ಲಿ ಬೇಕಾದಾಗ ಬಳಸಬಹುದು).
ಕೆಂಪು ದಾಸವಾಳ ಹೂವಿನ ಗೊಜ್ಜು
ಬೇಕಾಗುವ ಸಾಮಗ್ರಿ: ದಾಸವಾಳ ಹೂ-10, ಹುಳಿಗೆ-ಮಾವಿನಕಾಯಿ, ಅಮಟೆಕಾಯಿ, ಬೆಲ್ಲ , ಉಪ್ಪು , ಕಾರಪುಡಿ-2 ಚಮಚ, ಹಸಿಮೆಣಸು, ಅರಸಿನಪುಡಿ, ಒಗ್ಗರಣೆಗೆ ಸಾಸಿವೆ, ಮೆಣಸು, ಇಂಗು, ಎಣ್ಣೆ, ಕರಿಬೇವು.
ತಯಾರಿಸುವ ವಿಧಾನ: ಹೂವನ್ನು ತೊಳೆದು ತೊಟ್ಟು ತೆಗೆದು ಹಚ್ಚಿಟಟ್ಕೊಳ್ಳಿ. ಹಸಿಮೆಣಸು ಸೀಳಿ ಬೆಲ್ಲ , ಉಪ್ಪು , ಕಾರಪುಡಿ, ಅರಸಿನಪುಡಿ, ಹುಳಿಗೆ ತಕ್ಕಂತೆ ಆಯ್ಕೆ ಮಾಡಿದ ಹಣ್ಣು ಎಲ್ಲವನ್ನೂ ಸ್ವಲ್ಪ ನೀರಿನೊಂದಿಗೆ ಸೇರಿಸಿ ಬೇಯಿಸಿ. ನಂತರ ಒಂದು ಲೋಟ ನೀರು ಹಾಕಿ ಕುದಿಸಿ ಇಂಗು ಸೇರಿಸಿ ಒಗ್ಗರಣೆ ಕೊಟ್ಟು ಕರಿಬೇವು ಹಾಕಿ ಇಳಿಸಿ ಮುಚ್ಚಿಡಿ. ಕಲರ್‌ಫುಲ್ ಗೊಜ್ಜು ಗಂಜಿಯೂಟಕ್ಕೆ ಚೆನ್ನಾಗಿರುತ್ತದೆ.
ಕೇಪುಳ ಹೂವಿನ ತಂಬುಳಿ
ಬೇಕಾಗುವ ಸಾಮಗ್ರಿ: ಕೆಂಪು ಕೇಪುಳ ಹೂ- 1 ಕಪ್, ತೆಂಗಿನತುರಿ- 1 ಕಪ್, ಮಜ್ಜಿಗೆ- 1 ಕಪ್, ಕರಿಮೆಣಸು- 5, ಒಗ್ಗರಣೆ ಸಾಮಾನು, ತುಪ್ಪ , ಕರಿಬೇವು, ಜೀರಿಗೆ- 1/2 ಚಮಚ.
ತಯಾರಿಸುವ ವಿಧಾನ: ಕರಿಮೆಣಸು ಹಾಗೂ ಹೂವನ್ನು ಎರಡು ಚಮಚ ತುಪ್ಪದಲ್ಲಿ ಹುರಿಯಿರಿ. ತೆಂಗಿನಕಾಯಿ, ಜೀರಿಯೊಂದಿಗೆ ರುಬ್ಬಿ ಉಪ್ಪು ಸೇರಿಸಿ. ತದನಂತರ ಮಜ್ಜಿಗೆ ಸೇರಿಸಿ ತುಪ್ಪದಲ್ಲಿ ಕರಿಬೇವು ಒಗ್ಗರಣೆ ಕೊಡಿ. ಬಿಸಿಲಿನ ಝಳಕ್ಕೆ ಈ ತಂಬುಳಿ ತುಂಬಾ ಉತ್ತಮ. (ಗುಡ್ಡೆ ಕೇಪುಳ ಆದರೆ ಔಷಧಿಯುಕ್ತವಾಗಿದ್ದು ತಂಬುಳಿಗೆ ತುಂಬಾ ಉತ್ತಮ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.