ಚೌತಿಯ ಗಣಪನಿಗೆ: ಚಕ್ಕುಲಿ-ಉಂಡೆಗಳ ನೈವೇದ್ಯ
Team Udayavani, Sep 7, 2018, 6:00 AM IST
ಚೌತಿ ಹಬ್ಬ ಬಂತೆಂದರೆ ಸಾಕು… ಉಂಡೆ – ಚಕ್ಕುಲಿಗಳ ಸುಗ್ಗಿ. ಚಿಣ್ಣರಿಗಂತೂ ತಿಂಡಿಗಳನ್ನು ಮೆಲ್ಲುವ ಸಡಗರ. ಗಣಪನಿಗೆ ಪ್ರಿಯವಾದ ಉಂಡೆ-ಚಕ್ಕುಲಿಗಳ ನೈವೇದ್ಯಗಳೊಂದಿಗೆ ಹಬ್ಬವನ್ನು ಆನಂದಿಸಲು ಇಲ್ಲಿವೆ ಕೆಲವು ರಿಸಿಪಿ.
ಹುರಿಗಡಲೆ ಚಕ್ಕುಲಿ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಎರಡು ಕಪ್, ಹುರಿದ ಉದ್ದಿನಹುಡಿ- ಮುಕ್ಕಾಲು ಕಪ್, ಹುರಿಗಡಲೆ ಪುಡಿ- ಅರ್ಧ ಕಪ್, ಬೆಣ್ಣೆ – ಲಿಂಬೆಗಾತ್ರ, ಉಪ್ಪು ರುಚಿಗೆ, ಜೀರಿಗೆ ಅಥವಾ ಎಳ್ಳು – ಒಂದು ಚಮಚ.
ತಯಾರಿಸುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೆನೆಸಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಹುರಿಗಡಲೆ ಪುಡಿ, ಉದ್ದಿನಹುಡಿ, ಬೆಣ್ಣೆ ಮತ್ತು ಎಳ್ಳು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ, ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಚಕ್ಕುಲಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಹೆಸರುಬೇಳೆ ಚಕ್ಕುಲಿ
ಬೇಕಾಗುವ ಸಾಮಗ್ರಿ: ಹೆಸರುಬೇಳೆ- ಅರ್ಧ ಕಪ್, ಮೈದಾ- ಎರಡು ಕಪ್, ಇಂಗು ಸುವಾಸನೆಗಾಗಿ, ಕೆಂಪು ಮೆಣಸಿನ ಪುಡಿ- ಎರಡು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಒದ್ದೆಮಾಡಿ ಹಿಂಡಿದ ಬಟ್ಟೆಯಲ್ಲಿ ಮೈದಾವನ್ನು ಕಟ್ಟಿ ಹಬೆಯಲ್ಲಿ ಹತ್ತು ನಿಮಿಷ ಇಡಿ. ಹೆಸರುಬೇಳೆಗೆ ಒಂದು ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿ. ಆರಿದ ಇದನ್ನು ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿ. ನಂತರ, ಇದಕ್ಕೆ ಪುಡಿಮಾಡಿದ ಮೈದಾ, ಇಂಗು, ಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಹಿಟ್ಟು ತಯಾರಿಸಿ ಚಕ್ಕುಲಿ ಒರಳಿನಲ್ಲಿ ಕಾದ ಎಣ್ಣೆಗೆ ಒತ್ತಿ ಕರಿಯಿರಿ.
ಹೆಸರುಬೇಳೆ ಉಂಡೆ
ಬೇಕಾಗುವ ಸಾಮಗ್ರಿ: ಹೆಸರುಬೇಳೆ- ಒಂದು ಕಪ್, ಒಣಕೊಬ್ಬರಿ ತುರಿ- ಕಾಲು ಕಪ್, ಹುರಿದು ಸಿಪ್ಪೆ$ತೆಗೆದು ತರಿಯಾಗಿಸಿದ ಶೇಂಗಾಬೀಜ- ಕಾಲು ಕಪ್, ತುಪ್ಪದಲ್ಲಿ ಹುರಿದ ಗೇರುಬೀಜ- ಆರು, ದ್ರಾಕ್ಷಿ- ಹತ್ತು, ಬೆಲ್ಲದ ಪುಡಿ- ಮುಕ್ಕಾಲು ಕಪ್.
ತಯಾರಿಸುವ ವಿಧಾನ: ಬೆಲ್ಲದಪುಡಿಗೆ ಸ್ವಲ್ಪ ನೀರು ಹಾಕಿ, ಪಾಕಕ್ಕೆ ಇಡಿ. ಪಾಕ ಗಟ್ಟಿಯಾಗಿ ಏರುಪಾಕವಾದಾಗ ಒಲೆಯಿಂದ ಇಳಿಸಿ. ನೀರಿಗೆ ಸ್ವಲ್ಪ ಪಾಕ ಹಾಕಿದಾಗ ತಳದಲ್ಲಿ ಗಟ್ಟಿಯಾಗಿ ನಿಂತರೆ ಸಾಕು ಹೆಸರುಬೇಳೆಯನ್ನು ಘಮ್ ಎಂದು ಸುವಾಸನೆ ಬರುವವರೆಗೂ ಹುರಿಯಿರಿ. ಇದು ಆರಿದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಹುರಿದ ಕೊಬ್ಬರಿತರಿ, ಶೇಂಗಾ, ಗೋಡಂಬಿತರಿ, ದ್ರಾಕ್ಷಿ ಹಾಗೂ ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ, ಬಿಸಿಬಿಸಿ ಬೆಲ್ಲ ಪಾಕ ಸ್ವಲ್ಪ$ಸ್ವಲ್ಪವೇ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕೈಗೆ ತುಪ್ಪಹಚ್ಚಿಕೊಂಡು ಉಂಡೆಕಟ್ಟಿ.
ಗೋಧಿಹುಡಿ ಉಂಡೆ
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಅರ್ಧ ಕಪ್, ಕಡ್ಲೆಹುಡಿ- ಅರ್ಧ ಕಪ್, ಸಕ್ಕರೆಪುಡಿ- ಒಂದು ಕಪ್, ಕೊಬ್ಬರಿತರಿ- ಅರ್ಧ ಕಪ್, ಗೋಡಂಬಿ ತರಿ- ಆರು ಚಮಚ, ಒಣದ್ರಾಕ್ಷಿ- ಹತ್ತು, ತುಪ್ಪ- ಅರ್ಧ ಕಪ್, ಏಲಕ್ಕಿಪುಡಿ- ಕಾಲು ಚಮಚ.
ತಯಾರಿಸುವ ವಿಧಾನ: ದಪ್ಪತಳದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಕೊಬ್ಬರಿ, ಗೋಡಂಬಿತರಿ, ದ್ರಾಕ್ಷಿ ಇವುಗಳನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿಂಗ್‌ಬೌಲ್‌ಗೆ ಹಾಕಿ. ನಂತರ, ಅದೇ ಬಾಣಲೆಯಲ್ಲಿ ಕಾಲು ಕಪ್ ತುಪ್ಪ ಹಾಕಿ ಗೋಧಿಹುಡಿ ಮತ್ತು ಕಡ್ಲೆಹುಡಿಯನ್ನು ಬೇರೆಬೇರೆಯಾಗಿ ಘಂ ಎಂದು ಸುವಾಸನೆ ಬರುವವರೆಗೂ ಹುರಿದು ಮಿಕ್ಸಿಂಗ್‌ಬೌಲ್‌ಗೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಇದು ಸಂಪೂರ್ಣ ಆರಿದಮೇಲೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ತುಪ್ಪ ಸೇರಿಸಿ ಮಿಶ್ರಮಾಡಿ ಉಂಡೆಕಟ್ಟಿ.
ಎಳ್ಳು -ನೆಲಕಡಲೆಯ ಉಂಡೆ
ಬೇಕಾಗುವ ಸಾಮಗ್ರಿ: ಹುರಿದ ಎಳ್ಳು – ಅರ್ಧ ಕಪ್, ಹುರಿದು ಸಿಪ್ಪೆ ತೆಗೆದ ನೆಲಗಡಲೆ- ಅರ್ಧ ಕಪ್, ಕೊಬ್ಬರಿತರಿ- ಕಾಲು ಕಪ್, ಬೆಲ್ಲದತರಿ- ಒಂದೂವರೆ ಕಪ್.
ತಯಾರಿಸುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಬೆಲ್ಲ ಕರಗಿ ಪಾಕ ಗಟ್ಟಿಯಾಗುತ್ತಾ ಬರುವಾಗ ಸ್ವಲ್ಪ ಪಾಕವನ್ನು ನೀರಿಗೆ ಹಾಕಿ ನೋಡಿ. ಪಾಕ ನೀರಿನ ತಳದಲ್ಲಿ ಗಟ್ಟಿಯಾಗಿ ನಿಂತರೆ ಸಾಕು, ಒಲೆಯಿಂದ ಕೆಳಗಿಳಿಸಿ. ಕೊಬ್ಬರಿತುರಿಯನ್ನು ಬಾಣಲೆಯಲ್ಲಿ ಘಂ ಎಂದು ಸುವಾಸನೆ ಬರುವವರೆಗೂ ಬಾಡಿಸಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಹುರಿದ ಎಳ್ಳು, ನೆಲಕಡಲೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಬಿಸಿಯಾದ ಬೆಲ್ಲದ ಪಾಕ ಸ್ವಲ್ಪ ಸ್ವಲ್ಪವೇ ಹಾಕಿ ಸೌಟಿನಿಂದ ಕಲಸಿ, ತುಪ್ಪಎರಡು ಚಮಚ ಸೇರಿಸಿ ಉಂಡೆ ಕಟ್ಟಿ. ಉಂಡೆಯನ್ನು ಗಟ್ಟಿಯಾಗಿ ಕಟ್ಟಬಾರದು. ಆರಿದ ಮೇಲೆ ತುಂಬಾ ಗಟ್ಟಿಯಾಗುತ್ತದೆ. ಬೆಲ್ಲಪಾಕ ಗಟ್ಟಿಯಾದರೆ ಉತ್ತಮ.
ಗೀತಾಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.