ಶಾಲೆಯೆಂಬ ಸ್ನೇಹಲೋಕ
ಅಧ್ಯಾಪಕಿಯ ಟಿಪ್ಪಣಿಗಳು ಕ್ಲಾಸ್‌ರೂಮ್
Team Udayavani, Sep 20, 2019, 5:00 AM IST
ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು ಬೇರೆ ಬೇರೆಯಾಗಿ ಚರ್ಚೆ ಮಾಡುತ್ತಾರೆ. ಯಾಕೆಂದರೆ, ನಮ್ಮ ಚರ್ಚಾ ವಿಷಯ, ಆಸಕ್ತಿಗಳು ಭಿನ್ನ. ಹೆಚ್ಚಾಗಿ ಗಂಡಸರ ಚರ್ಚೆ ರಾಜಕೀಯ, ಕೃಷಿ, ಕ್ರೀಡೆ ಇತ್ಯಾದಿಗಳ ಕುರಿತಾದರೆ, ಎಲ್ಲಾ ಹೆಂಗಸರಂತೆ ನಾವೂ ಸೀರೆ, ಒಡವೆ, ಗಂಡ, ಮಕ್ಕಳು, ಅತ್ತೆ ಮುಂತಾದ ವಿಷಯಗಳ ಕುರಿತು ಚರ್ಚಿಸುತ್ತೇವೆ. (ಒಮ್ಮೊಮ್ಮೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆಯೂ ಮಾತನಾಡುತ್ತೇವೆ) ತಮ್ಮ ತಮ್ಮ ಅತ್ತೆಯಂದಿರ ಕುರಿತಾದ ಗಹನವಾದ ಚರ್ಚೆಯಲ್ಲಿ ಯಾರ ಅತ್ತೆ ಪಾಪ, ಯಾರ ಅತ್ತೆ ಜೋರು ಎಂಬ ನಿರ್ಧಾರವೂ ಆಗುತ್ತದೆ. ಒಮ್ಮೊಮ್ಮೆ ಗಂಡಂದಿರ ಕುರಿತ ಗುಣಗಾನಗಳ ಚರ್ಚೆ ನಡೆಯುತ್ತದೆ.
ಅನುಭವಿ ಹಿರಿಯರು ಕಿರಿಯರಿಗೆ ಅತ್ತೆ ಹಾಗೂ ಗಂಡನನ್ನು ಹೇಗೆ ಹದ್ದುಬಸ್ತಿನಲ್ಲಿಡಬೇಕು ಎಂಬ ಟಿಪ್ಸ್ ಹೇಳಿಕೊಡಲೂ ಮರೆಯುವುದಿಲ್ಲ. ಹೊಸದಾಗಿ ಮದುವೆಯಾದವರಿಗೆ ಹಿರಿಯ ಸಹೋದ್ಯೋಗಿಗಳ ಮಾತು ಉತ್ಪ್ರೇಕ್ಷೆ ಎಂದೆನಿಸುವುದೂ ಇದೆ. ಆದರೆ, ವರ್ಷಗಳು ಉರುಳಿದಂತೆ ಅವರ ಮಾತಿನ ಹುರುಳೂ ತಿರುಳೂ ಅವರಿಗೆ ಅರ್ಥವಾಗುತ್ತದೆ. ಒಂದೊಂದು ದಿನ ಮಕ್ಕಳ ಕುರಿತಾದ ಚರ್ಚೆ ನಡೆಯುತ್ತದೆ. ಮಕ್ಕಳ ಒಳ್ಳೆಯ ಗುಣಗಳಷ್ಟೇ ಅಲ್ಲ, ಅವಗುಣಗಳ ಕುರಿತೂ ಎಲ್ಲರೂ ಮನಬಿಚ್ಚಿ ಮಾತನಾಡುತ್ತಾರೆ. ಮಕ್ಕಳನ್ನು ತಾವು ನಿಯಂತ್ರಿಸುವ ಪರಿ ಯಾವುದು? ಯಾವ ರೀತಿ ಅವರನ್ನು ಸರಿದಾರಿಗೆ ತರಬಹುದು, ಶಿಸ್ತು ಕಲಿಸಬಹುದು ಎಂಬ ಕುರಿತಾದ ವಿಚಾರ ವಿನಿಮಯ ನಡೆಯುತ್ತದೆ. ಒಂದೆರಡು ವರ್ಷ ಒಟ್ಟಿಗಿದ್ದ ಸಹೋದ್ಯೋಗಿಗಳಿಗೆ ಪರಸ್ಪರರ ಮನೆಯ ಸದಸ್ಯರ ಅಮೂಲಾಗ್ರ ಮಾಹಿತಿಯಿರುತ್ತದೆ. ಅವರು ನೇರವಾಗಿ ಜೊತೆಗಿಲ್ಲದೆಯೇ ಚಿರಪರಿಚಿತರಾಗಿಬಿಡುತ್ತಾರೆ.
ಒಬ್ಬ ಸಹೋದ್ಯೋಗಿಯ ಯಾರೋ ಒಬ್ಬರು ಬಂಧುವಿಗೆ ಅನಾರೋಗ್ಯವಿದ್ದ ಮಾಹಿತಿ ತಿಳಿದರೂ ದಿನದಿನವೂ ಅವರ ಆರೋಗ್ಯದ ಕುರಿತು ಉಳಿದವರು ವಿಚಾರಿಸುತ್ತಾರೆ. “ದುಃಖ ಹಂಚಿಕೊಂಡಾಗ ಕಡಿಮೆಯಾಗುತ್ತದೆ. ಸಂತೋಷ ಹಂಚಿಕೊಂಡಾಗ ಹೆಚ್ಚುತ್ತದೆ’ ಎಂಬುದರ ಪ್ರತ್ಯಕ್ಷ ಅನುಭವವಾಗುವುದು ಈ ಸಹೋದ್ಯೋಗಿಗಳೊಂದಿಗಿನ ಮಾತುಕತೆಯಲ್ಲಿ! ದುಃಖ, ಚಿಂತೆ, ರೋಗ, ನೋವು ಎಲ್ಲದರ ಶಮನಕ್ಕೂ ಆಳಿಗೊಂದರಂತೆ ಸಲಹೆಗಳನ್ನು ನೀಡಲು ಸಹೋದ್ಯೋಗಿಗಳಿರುವಾಗ ಅವು ದೂರವಾಗದಿದ್ದೀತೇ? ಬ್ಯೂಟಿ ಟಿಪ್ಸ್ ಬೇಕೇ? ಹೊಸ ಅಡುಗೆ ರೆಸಿಪಿ ಬೇಕೇ? ಮಕ್ಕಳಿಗೆ ಸೂಕ್ತವಾದ ಲೇಟೆಸ್ಟ್ ಡಿಸೈನ್ ಡ್ರೆಸ್ ಯಾವುದೆಂದು ತಿಳಿಯಬೇಕೇ? ಹೊಸ ಸೀರೆ ಖರೀದಿಸಬೇಕೇ? ಹೊಸ ಗೃಹೋಪಕರಣ ಖರೀದಿಸಬೇಕಿದೆಯೇ? ನೋ ಪ್ರಾಬ್ಲಿಮ್. ನುರಿತ ಸಲಹಾ ಸಮಿತಿಯೇ ಸುತ್ತ ಇದೆಯಲ್ಲ ! ಅನುಭವದ ಮಾತುಗಳ ಮುಂದೆ ಸೇಲ್ಸ…ಮ್ಯಾನ್ ಗಳೂ ಸೋಲಬೇಕಷ್ಟೇ. ಅಂತೂ ಅತ್ಯಂತ ಸೂಕ್ತವಾದ ವಸ್ತು ಖರೀದಿಸಲು ನಾವು ಹೆಚ್ಚು ಕಷ್ಟಪಡಬೇಕಾಗಿಲ್ಲ.
ಈಗ ನಾನು ಅಧ್ಯಾಪಕಿಯಾಗಿ ವೃತ್ತಿ ಮಾಡುತ್ತಿರುವ ಶಾಲೆ ನನ್ನ ವೃತ್ತಿಬದುಕಿನಲ್ಲಿ ನಾಲ್ಕನೆಯದು. ಹಾಗಾಗಿ, ವಿಭಿನ್ನ ವ್ಯಕ್ತಿತ್ವದ, ವಿವಿಧ ಧರ್ಮ ಹಾಗೂ ಭಾಷೆಗಳ ಹಲವು ಸಹೋದ್ಯೋಗಿಗಳು ನನಗೆ ಸಿಕ್ಕರು. ನಮ್ಮ ಸ್ಟಾಫ್ರೂಮಲ್ಲಿ ಬಿಡುವಿನ ವೇಳೆ ನಾವು ಆರೇಳು ಮಹಿಳಾ ಸಹೋದ್ಯೋಗಿಗಳು ಯಾವುದೋ ವಿಷಯದ ಬಗ್ಗೆ ಮಾತುಕತೆ ಶುರುಮಾಡಿದೆವೆಂದರೆ ನಮ್ಮ ಇಬ್ಬರು ಪುರುಷ ಸಹೋದ್ಯೋಗಿಗಳು ಸುಮ್ಮನೆ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಮಧ್ಯೆ ಅವರು ಮುಗುಳ್ನಕ್ಕರೆ ಅವರು ನಮ್ಮ ಮಾತುಕತೆಗಳನ್ನು ಕೇಳಿಸಿಕೊಂಡಿದ್ದಾರೆ, ಪ್ರತಿಕ್ರಿಯಿಸದಿರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅರ್ಥ. ಅವರೂ ನಮ್ಮ ಚರ್ಚೆಯಲ್ಲಿ ಸೇರಿಕೊಳ್ಳುತ್ತಾರೆ. ಅಂದರೆ ಬಿಡುವಿನ ವೇಳೆಗಳೆಲ್ಲ ಕಾಡುಹರಟೆಗೆ ಸೀಮಿತ ಎಂದಲ್ಲ. ಬಿಡುವಿನ ಅವಧಿಯಲ್ಲಿ ಪಾಠ ಟಿಪ್ಪಣಿ ಬರೆಯುವುದು, ವಿವಿಧ ದಾಖಲೆಗಳ ನಿರ್ವಹಣೆ ಮಾಡುವುದರ ಮಧ್ಯೆ ಒಮ್ಮೊಮ್ಮೆ ಏನೋ ಒಂದು ವಿಷಯ ಪ್ರಸ್ತಾಪವಾಗಿ ಮಾತುಕತೆ ಶುರುವಾಗುತ್ತದೆ ಅಷ್ಟೇ. ತರಗತಿ ತಪ್ಪಿಸಿ ನಾವು ಯಾರೂ ಮಾತುಕತೆಗೆ ಕುಳಿತುಕೊಳ್ಳುವುದಿಲ್ಲ.
ಶಿಕ್ಷಕರಾದ ನಮಗೆ ವಿದ್ಯಾರ್ಥಿಗಳ ಕುರಿತು ಒಂದಷ್ಟು ಹೆಚ್ಚೇ ಕಾಳಜಿಯಿರುತ್ತದೆ. ಹಾಗಾಗಿ ಅವರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇವೆ. ಅದಕ್ಕಾಗಿ ಒಂದು ಶೈಕ್ಷಣಿಕ ವರ್ಷದಲ್ಲಿ ನಾಲ್ಕೈದು ಬಾರಿ ಪೋಷಕರ ಸಭೆ ನಡೆಸುತ್ತೇವೆ. ಸಭೆಯ ನಂತರ ಮಕ್ಕಳ ಪ್ರಗತಿಯ ಬಗ್ಗೆ ವೈಯಕ್ತಿಕವಾಗಿ ವಿಚಾರಿಸಲು ಪೋಷಕರು ನಮ್ಮ ಬಳಿಗೆ ಬರುತ್ತಾರೆ. ಅಲ್ಲಿಂದ ಹೊರಗೆ ಹೋಗುವಾಗ ಯಾಕಾದರೂ ಇವರನ್ನು ಮಾತನಾಡಿಸಲು ಬಂದೆವೋ ಎಂದು ಕೆಲವರಾದರೂ ತಮ್ಮೊಳಗೆ ಅಂದುಕೊಂಡಿರುತ್ತಾರೆ. ಕಾರಣವಿಷ್ಟೇ. ಒಬ್ಬರು ಶಿಕ್ಷಕಿ/ಶಿಕ್ಷಕ ಆ ವಿದ್ಯಾರ್ಥಿಯ ಬಗ್ಗೆ ಹೇಳುತ್ತ, “ಅವನು ನಿಮ್ಮ ಸಬ್ಜೆಕ್ಟ್ ನಲ್ಲಿ ಹೇಗಿದ್ದಾನೆ ಸರ್/ ಮೇಡಂ?’ ಎಂದೇನಾದರೂ ಉಳಿದವರಲ್ಲಿ ಕೇಳಿದರೆ ಸಾಕು ನಾಲ್ಕೂ ದಿಕ್ಕುಗಳಿಂದ ಎಲ್ಲರೂ ಒಮ್ಮೆಲೇ ಫೈರಿಂಗ್ ಆರಂಭಿಸಿ ಬಿಡುತ್ತಾರೆ.
ಕೆಲವು ಅಮ್ಮಂದಿರು ತಮ್ಮ ಮಕ್ಕಳ ಕುರಿತಾದ ವಿವರಣೆ ಕೇಳಿ ಕಣ್ಣೀರು ಸುರಿಸುವುದೂ ಇದೆ. ನಾವೇನೂ ಇಲ್ಲದ್ದನ್ನು ಹೇಳಿರುವುದಿಲ್ಲ. ಅವರನ್ನು ನೋಯಿಸಬೇಕೆಂದು ಬಯಸಿರುವುದೂ ಇಲ್ಲ. ತಾವು ಮಗುವಿನ ಬಗ್ಗೆ ತಿಳಿದುಕೊಂಡದ್ದಕ್ಕೂ, ವಾಸ್ತವಕ್ಕೂ ವ್ಯತ್ಯಾಸವಿದೆ ಎಂದು ಅರಿವಾದಾಗ ಅವರಿಗೆ ಚಿಂತೆಯಾಗುತ್ತದೆ. ಹೈಸ್ಕೂಲಿಗೆ ಬಂದಾಗ ಮಕ್ಕಳ ವರ್ತನೆಯಲ್ಲಿ ಹದಿಹರೆಯಕ್ಕೆ ಸಂಬಂಧಿಸಿದ ಬದಲಾವಣೆಗಳಾದದ್ದು ಹೆತ್ತವರಿಗೆ ತಿಳಿದಿರುವುದಿಲ್ಲ. ಆದರೆ ಅವರ ಚಟುವಟಿಕೆಗಳ ಸಂಪೂರ್ಣ ಮಾಹಿತಿಯಿರುವ ನಾವು ವಾಸ್ತವವನ್ನು ತೆರೆದಿಟ್ಟಾಗ ಅವರಿಗೆ ಬೇಸರವಾಗುವುದು ಸಹಜ.ಆದರೆ ಆ ಬಳಿಕ ಹೆತ್ತವರು ಸೂಕ್ತ ರೀತಿಯಲ್ಲಿ ಗಮನಹರಿಸುವುದರಿಂದ ಅವರ ವರ್ತನೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ವಿದ್ಯಾರ್ಥಿಗಳನ್ನು “ಮಕ್ಕಳು’ ಎಂದೇ ಶಿಕ್ಷಕರು ಕರೆಯುವುದು ವಾಡಿಕೆ. ಒಮ್ಮೊಮ್ಮೆ ನಮ್ಮ ಯಾರಾದರೂ ಸ್ನೇಹಿತರು ಹೊರಗಡೆ ಭೇಟಿಯಾದರೆ ಕುಶಲಾನ್ವೇಷಣೆ ಮಾಡುವರು. “ನಿಮ್ಮ ಮಕ್ಕಳು ಹೇಗಿದ್ದಾರೆ?’ ಎಂದು ಅವರು ಕೇಳಿದರೆ ಒಮ್ಮೆಲೇ ಸ್ವಿಚ್ ಹಾಕಿದಂತೆ ನಮ್ಮ ಸ್ವಂತ ಮಕ್ಕಳ ಬದಲು ಶಾಲೆಯ ಮಕ್ಕಳ ಕುರಿತು ಅದರಲ್ಲೂ ಹತ್ತನೆಯ ತರಗತಿಯ ಮಕ್ಕಳ ಕುರಿತು ಹೆಚ್ಚು ಚಿಂತಿಸುವ ನಾವು, “ಓ, ಈ ಸಲ ಕೂಡಾ ಒಳ್ಳೆಯ ಅಂಕ ಗಳಿಸುವ ಕೆಲವರಿದ್ದಾರೆ.
ಆದರೆ ಒಂದು ಎಂಟು-ಹತ್ತು ಜನ ಇದ್ದಾರೆ. ಅವರನ್ನು ಹೇಗೆ ಪಾಸು ಮಾಡಿಸುವುದೆಂದೇ ಚಿಂತೆಯಾಗಿದೆ’ ಎಂದು ಬಿಡುತ್ತೇವೆ. ನಮ್ಮೊಂದಿಗೆ ಮಾತನಾಡುತ್ತಿದ್ದವರಿಗೆ ಸಹಜವಾಗಿಯೇ ಇವರೇನು ಮಾತನಾಡುತ್ತಿದ್ದಾರೆ ಎಂಬ ಗೊಂದಲ ಮೂಡುತ್ತದೆ. ಇದು ನಮ್ಮ ವೃತ್ತಿಯ ಮಹಿಮೆ. ಯಾರದೋ ಮಕ್ಕಳು ನಮ್ಮ ಮಕ್ಕಳಾಗುತ್ತಾರೆ. ವಿದ್ಯಾರ್ಥಿಗಳಿಗೂ ನಾವು ಆಪ್ತರಾಗಿಬಿಟ್ಟಿರುತ್ತೇವೆ. ಕೆಲವರಿಗೆ ಶಾಲೆಯಲ್ಲಿ ಕಲಿಯುವಾಗ ಇಂತಹ ಸೆಂಟಿಮೆಂಟ್‌ಗಳು ಅರಿವಿಗೆ ಬರುವುದಿಲ್ಲ. ಆದರೆ ಹತ್ತನೆಯ ತರಗತಿ ಮುಗಿಸಿ ಹೊರಹೋದ ನಂತರ ಅವರು ಶಾಲೆಯನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಾರೆ. ಇಂತಹ ಕಾಡುವಿಕೆಗಳು ಅವರನ್ನು ಹಳೆವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮ ಏರ್ಪಡಿಸುವಂತೆ ಪ್ರೇರೇಪಿಸುತ್ತದೆ. ಇದನ್ನೆಲ್ಲ ನೆನೆಯುವಾಗ ನನಗೆ ನನ್ನ ವೃತ್ತಿಯ ಬಗ್ಗೆ ಅಭಿಮಾನ ಉಕ್ಕುತ್ತದೆ. ಪ್ರಾರಂಭದಲ್ಲಿ ಇಷ್ಟವಿಲ್ಲದೇ ಈ ಶಿಕ್ಷಕ ತರಬೇತಿಗೆ ಹೋಗಿದ್ದ ನಾನು ಈಗ ಈ ವೃತ್ತಿಯನ್ನು ಬಹುವಾಗಿ ಪ್ರೀತಿಸುವ ಮಟ್ಟಿಗೆ ಬದಲಾಗಿದ್ದೇನೆಂದರೆ ಅದಕ್ಕೆ ನನಗೆ ಲಭಿಸಿದ ಉತ್ತಮ ಸಹೋದ್ಯೋಗಿಗಳ ಒಡನಾಟ, ಸಣ್ಣಪುಟ್ಟ ತರಲೆಗಳಿದ್ದರೂ ಪಾಠಕ್ಕೆ ಸಹಕಾರ ನೀಡುತ್ತಿದ್ದ ನನ್ನ ವಿದ್ಯಾರ್ಥಿಗಳು ಕಾರಣ.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.