ಕೈತೋಟ ಮತ್ತು ಕಣ್ಣೋಟ
Team Udayavani, Oct 13, 2017, 6:30 AM IST
ಅಂಗಳ ಕಂಡರೆ ತಿಳಿವುದು ಎಲ್ಲ ಹೆಂಗಳೆಯರ ಗುಣಗಡಣಗಳೆಲ್ಲ ಎಂಬ ಬಲ್ಲವರ ಮಾತಿನಂತೆ ಗೃಹಿಣಿಯು ಮನೆಯಂಗಳವನ್ನು ಆಕರ್ಷಣೀಯವಾಗಿಸಲು ಹೂದೋಟ ಸಹಕಾರಿಯಾಗಿದೆ. ಮಲ್ಲಿಗೆ, ಜಾಜಿ, ದಾಸವಾಳ, ಗುಲಾಬಿ, ಕನಕಾಂಬರ, ಚೆಂಡು ಹೂ, ಗುಲಾಬಿ, ಸೇವಂತಿಗೆ ಮುಂತಾದ ಹೂವುಗಳು ಹೆಚ್ಚಿನ ಪರಿಸರಗಳಲ್ಲಿ ಬೆಳೆಯಲು ಯೋಗ್ಯವಾಗಿರುವುದರಿಂದ ನಮ್ಮ ಮನೆಯಂಗಳದಲ್ಲಿ ಅದಕ್ಕೊಂದು ಜಾಗವಿರಲಿ.
ಸುಲಭವಾಗಿ ನಿರ್ಮಿಸಬಹುದಾದ ಹಸಿರು ಹುಲ್ಲಿನ ಹಾಸನ್ನು ನಿರ್ಮಿಸಿ ಮನಕ್ಕೆ ಮುದ ನೀಡುವ ವಿಭಿನ್ನ ವರ್ಣದ, ವಿವಿಧ ಬಗೆಯ ಪುಷ್ಪಗಳನ್ನು ಮನೆಯ ಮುಂದೆ ನೆಡುವುದರಿಂದ ಸುತ್ತಲ ಪರಿಸರ ಆಹ್ಲಾದಕರವೆನಿಸುತ್ತದೆ. ಕಾಲಕಾಲಕ್ಕೆ ಟ್ರಿಮ್ಮಾಗಿ ಬೇರೆ ಬೇರೆ ಆಕಾರಗಳಲ್ಲಿ ಕತ್ತರಿಸಲ್ಪಡುವ ಆಲಂಕಾರಿಕ ಗಿಡಗಳು ಮನೆಗೆ ಬರೋ ಅತಿಥಿಗಳ, ನೆಂಟರ ಕಣ್ಮನ ಸೆಳೆದು ಮನ ತಣಿಸುತ್ತವೆ.
ಹೂದೋಟ ನಿರ್ಮಿಸುವುದರಿಂದ ಅನುಪಯುಕ್ತವೆಂದು ಬಿಸಾಡುವ ಗೋಣೀಚೀಲಗಳು, ಒಡೆದುಹೋದ ಮಡಕೆಗಳು, ಪ್ಲಾಸ್ಟಿಕ್ ಬಕೆಟ್, ವಾಹನಗಳ ಟೈರುಗಳು ಹೂವಿನ ಕುಂಡಗಳಾಗಿ, ಹಸಿಕಸ ಗೊಬ್ಬರವಾಗಿ ಅಲ್ಪ ಜಾಗದಲ್ಲಿ ಉತ್ತಮ ಹೂದೋಟ ಸೃಷ್ಟಿrಸಲು ನೆರವಾಗುತ್ತವೆ. ಮಾರುಕಟ್ಟೆಗಳಲ್ಲಿ ಸಿಗುವ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕುಂಡಗಳಲ್ಲಿ ಗೊಂಚಲು ಹೂ ಬಿಡುವ ಬಳ್ಳಿ ಗಿಡಗಳನ್ನು ನೆಟ್ಟು, ಪೋರ್ಟಿಕೋಗಳಲ್ಲಿ ನೇತಾಡಿಸುವುದರಿಂದ ಮನೆಯ ಅಂದ ಇಮ್ಮಡಿಗೊಳ್ಳುತ್ತದೆ.
1. ಕೈದೋಟ ಬೆಳೆಸುವ ಮನೆಯಾಕೆಯ ಹವ್ಯಾಸ ಆಕೆಯ ಆರಾಮದ ಸಮಯವನ್ನು ಸದುಪಯೋಗ ಮಾಡುತ್ತದೆ.
2. ಗಾಳಿಯಲ್ಲಿ ಹರಡುವ ಸುಗಂಧವನ್ನು ಆಘ್ರಾಣಿಸುತ್ತಿದ್ದಂತೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
3. ವಾಸ್ತುಶಾಸ್ತ್ರ ಹೇಳುವಂತೆ, ಮನೆಯೊಳಗೆ ಹಾಗೂ ಸುತ್ತಮುತ್ತ ಧನಾತ್ಮಕ ಲಹರಿಗಳನ್ನು ಪಸರಿಸುತ್ತದೆ.
4. ಮನೆಯ ಮುಂದೆ ಬೆಳೆಯಲಾಗುವ ತುಳಸಿಯಂತಹ ಔಷಧೀಯ ಸಸ್ಯಗಳು ಆರೋಗ್ಯವರ್ಧಕಗಳಾಗಿವೆ.
5. ನೆಲದ ಮೇಲೆ ಹರಡಿರುವ ಹಸಿರು ಹುಲ್ಲಿನ ಹಾಸು ನೀರನ್ನು ಹಿಡಿದಿಡುವುದಲ್ಲದೆ, ಮಣ್ಣಿನ ಸವಕಳಿಯನ್ನು ತಡೆಯುತ್ತದೆ.
6. ವೈವಿಧ್ಯಮಯ ಬಣ್ಣ ಬಣ್ಣಗಳಿಂದ ಕಂಗೊಳಿಸುವ ಹೂವಿನ ಲೋಕ ವರ್ಣಮಯ ಚಿಟ್ಟೆಗಳನ್ನು ಆಕರ್ಷಿಸುತ್ತದೆ. ಹಣ್ಣುಗಳು ಹಕ್ಕಿಗಳನ್ನು ಸೆಳೆಯುತ್ತದೆ. ಮನೆಯಂಗಳವು ಜೀವಜಗತ್ತಿನ ವೈವಿಧ್ಯಗಳಿಂದ ಸಮೃದ್ಧವಾಗುತ್ತದೆ.
7. ನಮ್ಮ ಮನದ ಭಾವನೆಗಳ ಜೊತೆ ಹೂಗಳು ನಿಕಟ ಸಂಬಂಧವನ್ನು ಹೊಂದಿದ್ದು, ತಮ್ಮ ಸುವಾಸನೆ ಮತ್ತು ಸೌಂದರ್ಯದ ಮೂಲಕವೇ ನಮ್ಮ ಮನಸ್ಸಿನ ಚಿಂತೆ, ದುಗುಡ, ಹಾಗೂ ಖನ್ನತೆಯನ್ನು ಹೋಗಲಾಡಿಸುತ್ತದೆ.
8. ಟೆರೇಸ್‌ನಲ್ಲಿ ಬೆಳೆಸುವ ಹೂಗಿಡಗಳು ಮುಂಜಾನೆಯ, ಸಂಜೆಯ ಚಹಾ ಸಮಯವನ್ನು ಅರ್ಥಪೂರ್ಣಗೊಳಿಸುತ್ತವೆೆ.
– ಹರಿಣಾಕ್ಷಿ ಕೆ. ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.