“ನೀವು ನನಗಿಷ್ಟ’ ಎಂದ ಹುಡುಗಿ
ಅಧ್ಯಾಪಕಿಯ ಟಿಪ್ಪಣಿಗಳು ಕ್ಲಾಸ್‌ರೂಮ್
Team Udayavani, Oct 4, 2019, 5:36 AM IST
ಮೇಡಂ, ನೀವೆಂದರೆ ನನಗಿಷ್ಟ”- ಹತ್ತನೆಯ ಕ್ಲಾಸಿನ ಪರೀಕ್ಷೆಗೆ ಹೋಗುವ ಮೊದಲು ನಮ್ಮ ಆಶೀರ್ವಾದ ಬೇಡಲು ಬಂದ ಆ ಹುಡುಗಿ ನನ್ನಲ್ಲಿ ಹೇಳಿದಳು. ಅವಳ ಗದ್ಗದಿತ ಕಂಠ ಅವಳ ಭಾವುಕತೆಗೆ ಸಾಕ್ಷಿಯಾಗಿತ್ತು. ನಾನು ಅವಳನ್ನು ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಿ, ಶುಭ ಹಾರೈಸಿ ಕಳಿಸಿದೆ. ಫಲಿತಾಂಶ ಬಂದಾಗ ಐನೂರಕ್ಕೆ ನಾಲ್ಕಂಕವಷ್ಟೇ ಕಡಿಮೆಯಿತ್ತು. ನನಗೆ ಖುಷಿಯಾಯ್ತು. ಅವಳಿಗೆ ಅಷ್ಟು ಅಂಕ ಬಂದದ್ದರ ಕುರಿತು ನಾವು ಶಿಕ್ಷಕರು ಖುಷಿಪಡಲೂ ಕಾರಣವಿದೆ.ಅವಳು ಪಾಸಾದರೆ ಸಾಕೆಂದು ನಾವು ಪ್ರಾರ್ಥಿಸುತ್ತಿದ್ದ ಸಮಯವೊಂದಿತ್ತು. ಈಗ ಗಳಿಸಿದ್ದಕ್ಕಿಂತ ಹೆಚ್ಚು ಅಂಕ ಗಳಿಸುವ ಸಾಮರ್ಥ್ಯವಿದ್ದ ಆಕೆಗೆ ಈಗ ಇಷ್ಟು ಅಂಕ ಬಂದದ್ದೇ ವಿಶೇಷ.
ನಾನು ಆಗ ಒಂಬತ್ತನೆಯ ತರಗತಿಯ ಕ್ಲಾಸ್ ಟೀಚರ್. ನಾನು ಮೊದಲು ಹೇಳಿದ ಪರಮೇಶ್ವರಿಯದ್ದೇ ಕ್ಲಾಸ್‌ನಲ್ಲಿದ್ದಳು ಅವಳು. ಅವಳು ನನ್ನ ತರಗತಿಯ ಪ್ರಥಮ ಸ್ಥಾನೀಯಳು. ಇದುವರೆಗಿನ ಎಲ್ಲ ಪರೀಕ್ಷೆಗಳಲ್ಲಿ ಅವಳದ್ದೇ ಮೇಲುಗೈ ಇತ್ತು. ಅದು ವಾರ್ಷಿಕ ಪರೀಕ್ಷೆಯ ಸಿದ್ಧತೆಯ ಸಮಯ. ನಾನು ಹತ್ತು ಅಂಕಕ್ಕಿರುವ ಮೌಖೀಕ ಪರೀಕ್ಷೆ ನಡೆಸುತ್ತಿದ್ದೆ. ತರಗತಿಯ ಬಹುತೇಕ ಎಲ್ಲರೂ ನನ್ನ ಬಳಿ ಬಂದು ನಿಗದಿತ ಹತ್ತು ಪ್ರಶ್ನೆಗಳಿಗೆ ಉತ್ತರ ಹೇಳಿ ಮುಗಿದರೂ ಇವಳು ಬಂದಿರಲಿಲ್ಲ . ಕೇಳಿದೆ. “”ನಾನು ಕೊನೆಗೆ ಉತ್ತರ ಹೇಳ್ತೇನೆ ಮೇಡಂ” ಅಂದಳು. ಕಲಿಯದೆಯೇ ಅಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿರುವ ಇವಳು ಯಾಕೆ ಉತ್ತರ ಹೇಳಲಿಲ್ಲ ಅನಿಸಿದರೂ, ಒಪ್ಪಿದೆ.
ನನ್ನ ಅವಧಿಯ ಬಳಿಕ ಶಿಕ್ಷಕರ ಕೊಠಡಿಯತ್ತ ಹೊರಟ ನನ್ನ ಹಿಂದೆ ಅವಳ ಗೆಳತಿ ಹಿಂಬಾಲಿಸಿ ಬಂದಳು. ಅವಳು ಬಿಕ್ಕಳಿಸಿ ಅಳುತ್ತ, “”ಮೇಡಂ, ಅವಳು ಮೊದಲಿನ ಹಾಗೆ ಇಲ್ಲ, ಅವಳಿಗೆ ಏನೋ ಆಗಿದೆ. ಅವಳ ಕೈಯಿಂದ ಪುಸ್ತಕ ಜಾರಿ ಬಿದ್ದರೂ ಅವಳಿಗೆ ಗೊತ್ತಾಗುವುದಿಲ್ಲ” ಎಂದಳು. ಇವಳನ್ನು ಸಮಾಧಾನಪಡಿಸಿ ಅವಳನ್ನು ಕರೆತರುವಂತೆ ಹೇಳಿದೆ. ನಾನು ಅವಳಲ್ಲಿ ವೈಯಕ್ತಿಕವಾಗಿ ಮಾತನಾಡಿದೆ. ಹದಿಹರೆಯದ ಸಾಮಾನ್ಯ ಸಮಸ್ಯೆಯಾದ ಪ್ರೀತಿ ಅವಳ ಸಮಸ್ಯೆ ಇರಬಹುದೆಂದುಕೊಂಡೆ. ಆದರೆ, ಅದಕ್ಕಿಂತ ಭಿನ್ನವಾದ ಸಮಸ್ಯೆಯೊಂದು ಅಲ್ಲಿತ್ತು. ಹೇಗೆ ಹೇಳಲಿ… ಹೇಗೆ ಹೇಳಲಿ… ಎಂದು ಮೊದಲು ಬಹಳ ಹಿಂಜರಿದರೂ ಕೊನೆಗೆ ಅವಳು ಮಾತನಾಡಿದಳು. ಅವಳ ಮನಸ್ಸಲ್ಲಿ ತೀವ್ರವಾದ ನೋವೊಂದಿತ್ತು. ಹೇಳಲು ಯಾರೂ ಇಲ್ಲದೇ ಒದ್ದಾಡುತ್ತಿದ್ದಳು. ಸಂಬಂಧಿಕರ ಮನೆಯಿಂದ ಶಾಲೆಗೆ ಬರುವ ಅವಳ ಅಮ್ಮನಿಗೆ ಅನಾರೋಗ್ಯವಿತ್ತು. ಅಪ್ಪ ಅಷ್ಟಾಗಿ ಇವಳ ಕುರಿತು ಗಮನಹರಿಸುತ್ತಿರಲಿಲ್ಲ. ಅವಳು ಮಾತನಾಡುತ್ತಿರಬೇಕಾದರೆ ತನ್ನ ತೀವ್ರ ಮಾನಸಿಕ ಒತ್ತಡವನ್ನು ಅದುಮಿಡಲು ಪಾಡುಪಡುತ್ತ ಕೆೊರಳಲ್ಲಿದ್ದ ಮಣಿಸರ ತಿರುಚುತ್ತಿದ್ದಳು. ಅವಳ ಮಾನಸಿಕ ಒತ್ತಡದ ಪ್ರತಿಫಲನ ಎಂಬಂತೆ ಅದು ತುಂಡಾಗಿ ನನ್ನ ಟೇಬಲ್ ಮೇಲೆಲ್ಲ ಮಣಿಗಳು ಚೆಲ್ಲಾಡಿದವು.
ಅವಳು ಏದುಸಿರಿಡುತ್ತಿದ್ದಳು. ಸ್ವರ ಅದುರುತಿತ್ತು. ಪೂರ್ತಿ ಬೆವರಿ ಮುದ್ದೆಯಾಗಿದ್ದಳು. ಅಷ್ಟಾದಾಗ ನನಗೂ ನನ್ನ ಬಳಿ ಅಲ್ಲಿದ್ದ ಇತರ ಶಿಕ್ಷಕರಿಗೂ ಬಹಳ ನೋವಾಯಿತು. ಅಂತೂ ಅವಳನ್ನು ಕಾಡುವ ಸಮಸ್ಯೆ ಏನೆಂಬುದನ್ನು ತಿಳಿದುಕೊಂಡೆವು. ಈ ವಿಷಯ ತಿಳಿಸಲು ಅವಳಿದ್ದ ಮನೆಯವರಿಗೆ ದೂರವಾಣಿ ಕರೆಮಾಡಿದೆವು. ಅವರು ಕೂಡಲೇ ಹೊರಟುಬಂದರು. ಆದರೆ, ನಮ್ಮ ಮಾತುಗಳಿಗೆ ಗಮನ ಕೊಡದೇ “”ಇವಳ ಅಮ್ಮನಿಗೆ ಮಾನಸಿಕ ಕಾಯಿಲೆ ಇತ್ತು. ಅದೇ ಸಮಸ್ಯೆ ಇವಳಿಗೆ ಪಾರಂಪರ್ಯವಾಗಿ ಬಂದಿರಬಹುದು. ಇದಕ್ಕೆ ಮನೋರೋಗ ತಜ್ಞರ ಬಳಿಗೆ ಕರೆದೊಯ್ಯಬೇಕಷ್ಟೇ” ಎಂದರು.
ಅವಳ ಮಾನಸಿಕ ಒತ್ತಡ ಹಾಗೂ ಖನ್ನತೆಗೆ ಕಾರಣವಾಗಬಹುದಾದ, ಅವಳು ನಮ್ಮಲ್ಲಿ ಹಂಚಿಕೊಂಡ ಆ ಕಾರಣವನ್ನು ಅವರು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಅವಳನ್ನು ಅವರು ಆಗಲೇ ಮನೋವೈದ್ಯರ ಬಳಿ ಕರೆದೊಯ್ದರು. ಸುಮ್ಮಸುಮ್ಮನೆ ಇಲ್ಲದ ರೋಗಕ್ಕೆ ಡಾಕ್ಟರ್ ಮದ್ದು ಕೊಡಬಹುದು (ಡಾಕ್ಟರ್ ಹಾಗೆ ಮಾಡಲಿಕ್ಕಿಲ್ಲ. ಆದರೆ ಮನೆಯವರ ವಿವರಣೆ ಕೇಳಿ, ನಿಜ ವಿಷಯ ತಿಳಿಯದೇ ಹಾಗೆ ಮಾಡಿದರೆ)ಎಂಬ ಭಯದಿಂದ ನಾನು ಮತ್ತು ಮತ್ತೂಬ್ಬರು ಶಿಕ್ಷಕಿ ಆ ಮನೋವೈದ್ಯರ ಬಳಿಗೆ ಹೋಗಿ ನಮಗೆ ಅವಳು ಹೇಳಿದ ವಿಷಯವನ್ನು ಹೇಳಿ ಬಂದೆವು. ಡಾಕ್ಟರ್‌ನ ಪ್ರತಿಕ್ರಿಯೆ ನಮಗೆ ತೃಪ್ತಿ ಕೊಡದ ಕಾರಣ ನಮಗೆ ಮತ್ತೂ ಚಿಂತೆ ಹೆಚ್ಚಿತು. ವಾರ್ಷಿಕ ಪರೀಕ್ಷೆಯಲ್ಲಿ ಇವಳು ತೀರಾ ಕಡಿಮೆ ಅಂಕಗಳೊಂದಿಗೆ ಕಷ್ಟದಲ್ಲಿ ಉತ್ತೀರ್ಣಳಾಗಿದ್ದಳು. ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಬೇರೆ ಬಂತು.
ರಜೆ ಮುಗಿದು ಶಾಲೆ ಆರಂಭವಾದರೂ ಅವಳಿರಬೇಕಾದ ಹತ್ತನೆಯ ತರಗತಿಯಲ್ಲಿ ಅವಳ ಸುಳಿವಿರಲಿಲ್ಲ. ದೂರದ ಊರಲ್ಲಿರುವ ಅವಳ ಸ್ವಂತ ಮನೆಗೆ ಹೋಗಿದ್ದಾಳೆ ಎಂಬ ವಿಷಯ ಉಳಿದ ವಿದ್ಯಾರ್ಥಿಗಳಿಂದ ತಿಳಿಯಿತು. ಒಂದೆರಡು ತಿಂಗಳ ನಂತರ ಅವಳು ಶಾಲೆಗೆ ಬರಲಾರಂಭಿಸಿದಳು. ಹಿಂದಿನ ಉತ್ಸಾಹ, ಚುರುಕುತನ ಎಲ್ಲಾ ನಷ್ಟವಾದ ಒಂದು ಜೀವಂತ ಬೊಂಬೆ ತರ ಅವಳು ತರಗತಿಯಲ್ಲಿ ಕುಳಿತಿರುವುದು ನೋಡುವಾಗ ನಮಗೆ ತೀವ್ರ ದುಃಖವಾಗುತ್ತಿತ್ತು. ಮಾತಿಲ್ಲ, ಎತ್ತಲೋ ನೋಡುವ ನೋಟ, ಅಸಂಬದ್ಧವೆನಿಸುವ ಪ್ರಶ್ನೆಗಳು ನಮ್ಮ ನೋವನ್ನು ಹೆಚ್ಚಿಸುತಿತ್ತು. ನಾವು ಅವಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೆವು. ನಿಧಾನವಾಗಿ ಚೇತರಿಸುತ್ತ ಬಂದು ವರ್ಷದ ಕೊನೆಗಾಗುವಾಗ ಪೂರ್ತಿ ಚೇತರಿಸಿಕೊಂಡಳು. ಕಿರುಪರೀಕ್ಷೆಗಳಲ್ಲಿ ತೀರಾ ಕಡಿಮೆ ಅಂಕ ಗಳಿಸುತ್ತಿದ್ದವಳು ವಾರ್ಷಿಕ ಪರೀಕ್ಷೆಯಲ್ಲಿ ಈ ಹಂತಕ್ಕೆ ತಲುಪಿದ್ದು ನಮಗೆಲ್ಲಾ ಖುಷಿಕೊಟ್ಟಿತು. ಅವಳ ಸಮಸ್ಯೆಯ ಪರಿಹಾರಕ್ಕೆ ನಾವು ವಹಿಸಿದ ಕಾಳಜಿಗಾಗಿ, ನಾವು ತೋರಿದ ಪ್ರೀತಿಗಾಗಿ ಅವಳು, “ನೀವು ನನಗಿಷ್ಟ’ ಎಂದು ಹೇಳಿದ್ದಳು. ಮುಂದೆ ಅವಳು ಕಾಲೇಜಿಗೆ ದಾಖಲಾದಳು. ಉತ್ತಮ ಅಂಕಗಳೊಂದಿಗೆ ಪಾಸಾದಳು. ಅವಳೀಗ ಬಹಳ ಚೆನ್ನಾಗಿದ್ದಾಳೆ ಎಂಬುದಕ್ಕಿಂತ ಹೆಚ್ಚಿನ ಖುಷಿ ಶಿಕ್ಷಕರಾದ ನಮಗೆ ಬೇರೆಯಿಲ್ಲ. ಸುಖಾಂತವಾದ ಅವಳ ಪ್ರಕರಣ ಮನಸ್ಸಿಗೆ ನೆಮ್ಮದಿ ಕೊಟ್ಟಿತು.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.