ಇಂಗು ತಿಂದರೆ ಭಂಗವಿಲ್ಲ !
Team Udayavani, Aug 31, 2018, 6:00 AM IST
ಮಳೆಗಾಲದಲ್ಲಿ ಪ್ರಕೃತಿ ಸಹಜವಾಗಿಯೇ ಮನುಷ್ಯರಲ್ಲಿ ದೇಹದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಮಳೆಗಾಲವನ್ನು ರೋಗಮುಕ್ತವಾಗಿ ಕಳೆಯುವುದು ಮಾತ್ರವಲ್ಲ , ಆರೋಗ್ಯವನ್ನು ವರ್ಧಿಸಿಕೊಳ್ಳುವುದೂ ಅವಶ್ಯ.
“”ಸ್ವಸ್ಥಸ್ಯ ಸ್ವಾಸ್ಥ್ಯ ವರ್ಧನಂ
ಆತುರಸ್ಯ ರೋಗನುತ್” ಎನ್ನುತ್ತದೆ ಆಯುರ್ವೇದ ಶಾಸ್ತ್ರ. ಅಂದರೆ ಆರೋಗ್ಯವಂತರಲ್ಲಿ ಸ್ವಾಸ್ಥ್ಯವನ್ನು ವರ್ಧಿಸುವುದು ರೋಗಿಗಳಲ್ಲಿ ರೋಗವನ್ನು ನಿವಾರಣೆ ಮಾಡುವುದು. ಈ ಎರಡೂ ಕಾರ್ಯಗಳನ್ನು ನಿರ್ವಹಿಸುವಲ್ಲಿ ನಾವು ನಿತ್ಯದಲ್ಲಿ ಬಳಸುವ ಸಂಬಾರ ದಿನಸುಗಳು ಬಹೂಪಯುಕ್ತ. ಮಳೆಗಾಲದಲ್ಲಿ ಸಂಬಾರ ದಿನಿಸುಗಳನ್ನು ಆಹಾರದಲ್ಲಿ ವಿಶೇಷ ರೀತಿಯಲ್ಲಿ ಬಳಸುವುದರಿಂದ ಆರೋಗ್ಯ ವರ್ಧಿಸಿಕೊಳ್ಳಬಹುದು.
ಇಂಗು
ಮಳೆಗಾಲದ ಹಬ್ಬಗಳಲ್ಲಿ, ಶ್ರಾವಣ ಮಾಸದ ವಿಶೇಷ ಪೂಜೆಗಳಿಗೆ ಈರುಳ್ಳಿ-ಬೆಳ್ಳುಳ್ಳಿಯ ಬದಲಾಗಿ ಇಂಗು ಉಪಯೋಗಿಸಲಾಗುತ್ತದೆ. ತೀಕ್ಷ್ಣ , ಕಟು ಗುಣವುಳ್ಳ, ಪರಿಮಳಯುಕ್ತ ಇಂಗು, ವಾತಾ-ಕಫಗಳಲ್ಲಿ ಶಮನ ಮಾಡಿ ಮಳೆಗಾಲದಲ್ಲಿ ಜೀರ್ಣದ ಪ್ರಕ್ರಿಯೆ ವರ್ಧಿಸುತ್ತದೆ. ಇಂಗಿನ ಪರಿಮಳಕ್ಕೆ ಕಾರಣ ಅದರಲ್ಲಿರುವ ಸಲ್ಫೆ„ಡ್ ಕಂಪೌಂಡ್‌ಗಳು. ಮಳೆಗಾಲದಲ್ಲಿ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ ಮೊದಲಾದವು ಉಂಟಾದಾಗ ವಿಶೇಷವಾಗಿ ಮಕ್ಕಳಲ್ಲಿ ಇಂಗನ್ನು ಬಿಸಿನೀರಿನಲ್ಲಿ ಕದಡಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕುಡಿಸಿದರೆ ಶೀಘ್ರ ಶಮನವಾಗುತ್ತದೆ. ನೆಗಡಿ, ಅಸ್ತಮಾ, ಫ್ಲೂ ಜ್ವರಗಳಿಗೂ ಇಂಗು ಉತ್ತಮ ಮನೆಮದ್ದು.
ಆಂಧ್ರಪ್ರದೇಶದ “ಅದಿಲಾಬಾದ್’ ಎಂಬ ಪ್ರದೇಶದಲ್ಲಿ ಬೆಲ್ಲ ಮತ್ತು ಇಂಗನ್ನು ಬೆರೆಸಿ ಸಣ್ಣ ಉಂಡೆಗಳನ್ನಾಗಿ ಮಾಡಿ ಮಳೆಗಾಲದಲ್ಲಿ ಮೊದಲು ಬಿತ್ತನೆ ನಡೆಸುವ ದಿನ “ಮಿರುಗು’ ಎಂದು ಬಳಸುತ್ತಾರೆ. ಇದರ ಸೇವನೆ ಮಳೆಗಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂಬುದು ಪ್ರಾದೇಶಿಕ ನಂಬಿಕೆ ಹಾಗೂ ಆಚರಣೆಯಾಗಿದೆ. ಹಿಂಗ್‌ಪೂರಿ (ಇಂಗಿನ ಪೂರಿ) ಪಶ್ಚಿಮ ಬಂಗಾಳದ ವಿಶೇಷ ಖಾದ್ಯವಾಗಿದೆ. ಇಂಗು, ಕಲ್ಲುಪ್ಪು , ಶುಂಠಿ ಬೆರೆಸಿ ಸೇವಿಸಿದರೆ ಮಳೆಗಾಲದ ಮೋಡ ಮುಸುಕಿದ ವಾತಾವರಣದಲ್ಲಿ ಉಂಟಾಗುವ ಅತಿಸಾರ, ಮಾಂಸಭೇದಿ ಮೊದಲಾದವುಗಳನ್ನು ನಿವಾರಣೆ ಮಾಡುತ್ತದೆ.
ಇಂಗಿನಲ್ಲಿ ಆ್ಯಂಟಿವೈರಲ್ ಅಥವಾ ವೈರಾಣು ನಿರೋಧಕ ಗುಣವಿರುವುದರಿಂದ ಹಲವು ವೈರಲ್ ಜ್ವರಗಳಲ್ಲಿ (ಎಚ್1, ಎನ್1 ಜ್ವರ ಸೇರಿದಂತೆ) ಪರಿಣಾಮಕಾರಿಯಾಗಿದೆ. ಬೇಳೆ, ಬೀನ್ಸ್ , ತರಕಾರಿ ಖಾದ್ಯ, ಅಕ್ಕಿಯ ಆಹಾರ ಪದಾರ್ಥಗಳಲ್ಲಿ ಬಳಸಲು ಉತ್ತಮ ಸಂಬಾರ ಪದಾರ್ಥವಾಗಿದೆ ಇಂಗು.
ರುಚಿ ಪರಿಮಳ ಹೆಚ್ಚಿಸುವುದಲ್ಲದೆ ಖಾದ್ಯಗಳು ಸುಲಭವಾಗಿ ಚಯಾಪಚಯ ಕ್ರಿಯೆಯಲ್ಲಿ ಒಂದಾಗುವಂತೆ ಮಾಡುತ್ತದೆ ಇಂಗು.
.ಇಂಗನ್ನು ಬಿಸಿನೀರಿನಲ್ಲಿ ತೇದಿ ಮೊಡವೆ, ಗುಳ್ಳೆಗಳಿಗೆ ಲೇಪಿಸಿದರೆ ಶೀಘ್ರ ಮಾಯುತ್ತದೆ.
.ಕಡಲೆಹಿಟ್ಟು , ಬಟಾಣಿ ಹಿಟ್ಟುಗಳ ಮಿಶ್ರಣಕ್ಕೆ ಸ್ವಲ್ಪ ಇಂಗಿನ ಹುಡಿ ಬೆರೆಸಿ ಮುಖಕ್ಕೆ ಲೇಪಿಸಬೇಕು. ಇದು ಮುಖವನ್ನು ಬೆಳ್ಳಗೆ ಮಾಡುತ್ತದೆ, ಜೊತೆಗೆ ಮೊಗದ ನೆರಿಗೆಗಳ ನಿವಾರಣೆಗೆ ಸಹಾಯಕ. ಕಪ್ಪು ಬಣ್ಣಕ್ಕೆ ಕಾರಣವಾಗಿರುವ ಮೆಲಾನಿನ್ ಸ್ರಾವ ಹೆಚ್ಚಿಸುವ ಟೈರೊಸಿನ್ ಉತ್ಪತ್ತಿ ಕಡಿಮೆ ಮಾಡುವುದರಿಂದ ಕಲೆಗಳನ್ನು ನಿವಾರಣೆ ಮಾಡಿ, ಮುಖವನ್ನು ಶುಭ್ರಗೊಳಿಸುತ್ತದೆ.
ಹೀಗೆ ಸೌಂದರ್ಯವರ್ಧಕವಾಗಿಯೂ ಇಂಗು ಉಪಯುಕ್ತ.
ಇಂಗಿನ ಹೇರ್‌ಪ್ಯಾಕ್
ಇಂಗಿನ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಹೊಟ್ಟು ನಿವಾರಣೆಯಾಗಿ ಕೂದಲು ಉದುರುವುದು ಶಮನವಾಗುತ್ತದೆ.
ನೆರಿಗೆನಿವಾರಕ ಇಂಗಿನ ಫೇಸ್‌ಮಾಸ್ಕ್
ಒಂದು ಬೌಲ್‌ನಲ್ಲಿ ಮುಲ್ತಾನಿ ಮಿಟ್ಟಿ , ಜೇನು ಹಾಗೂ ರೋಸ್‌ವಾಟರ್ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದಕ್ಕೆ 3 ಚಿಟಿಕೆ ಇಂಗು ಬೆರೆಸಿ ಮುಖಕ್ಕೆ ಲೇಪಿಸಿ 10-15 ನಿಮಿಷದ ಬಳಿಕ ತೊಳೆದರೆ ನೆರಿಗೆ ನಿವಾರಕ ಹಾಗೂ ಚರ್ಮವನ್ನು ಬಿಳಿಯಾಗಿಸುತ್ತದೆ.
ಇಂಗಿನ ಮಜ್ಜಿಗೆ
ಮಳೆಗಾಲದಲ್ಲಿ ನಿತ್ಯವೂ ಮಜ್ಜಿಗೆಯಲ್ಲಿ ಇಂಗು ಕದಡಿ ಕಲ್ಲುಪ್ಪು , ಕೊತ್ತಂಬರಿಸೊಪ್ಪು ಹೆಚ್ಚಿದ್ದು ಬೆರೆಸಿ ಸೇವಿಸಿದರೆ ಪಚನಕ್ರಿಯೆಗೆ ಉತ್ತಮ. ವಾತಾಕಫ ರೋಗನಿವಾರಕ.
ಮಳೆಗಾಲದಲ್ಲಿ ಮನೆಯಲ್ಲಿರಲಿ ಇಂಗು!
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.