ಅತಿಥಿ ದೇವೋ ಭವ
Team Udayavani, Jul 12, 2019, 5:00 AM IST
ವಾರ, ತಿಥಿ ಇಲ್ಲದೆ ಬರುವವರು ಅತಿಥಿಗಳು. ದಾರಿಯಲ್ಲಿ ಸಿಕ್ಕಾಗಲೆಲ್ಲ “ಮನೆಗೆ ಬನ್ನಿ ಮನೆಗೆ ಬನ್ನಿ’ ಎನ್ನುತ್ತಿದ್ದ ನನ್ನ ಅತ್ತೆಯ ದೂರದ ಸಂಬಂಧಿಯೊಬ್ಬರ ಮನೆಯ ಹತ್ತಿರ ಹೋಗುವ ಕೆಲಸವಿತ್ತು. ನನ್ನ ಕೆಲಸ ಮುಗಿಸಿ ಹಾಗೇ ಅವರ ಮನೆಗೂ ಭೇಟಿಕೊಟ್ಟರಾಯಿತು ಎಂದು ವಾರ, ತಿಥಿಯಿಲ್ಲದೆ ಯಾವ ಸೂಚನೆಯನ್ನೂ ಕೊಡದೆ ಅತಿಥಿಯಾಗಿ ಅವರಲ್ಲಿಗೆ ಹೋದೆ. ಅನಿರೀಕ್ಷಿತ ಅತಿಥಿಯಾಗಿ ಹೋದ ನಾನು ಅವರಿಗೇನಾದರೂ ಅನಪೇಕ್ಷಿತವಾಗಿ ಬಿಡುತ್ತೇನೇನೊ ಎಂಬ ಆತಂಕವಿತ್ತು. ಆದರೆ, ಅವರು ನನ್ನನ್ನು ನೋಡಿದವರೇ “ಬನ್ನಿ ಬನ್ನಿ’ ಎಂದು ಸ್ವಾಗತಿಸುತ್ತ ನನ್ನನ್ನು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಒಳಗಿನಿಂದ ತಂಪು ಪಾನೀಯ ತಂದುಕೊಟ್ಟರು. ಅದನ್ನು ಕುಡಿದೆ. ಅಷ್ಟರಲ್ಲಿಯೇ ಉಪ್ಪುಮಿಶ್ರಿತ ಕರಿದ ಗೇರುಬೀಜವನ್ನು ತಂದಿಟ್ಟರು. ಸ್ವಲ್ಪ ಅದೂ ಇದೂ ಮಾತನಾಡಿ, ನಾನು “ಏನೂ ಬೇಡ’ ಎಂದರೂ ಕೇಳದೆ ಉತ್ಸಾಹದಿಂದ ಒಳಗೆ ಹೋಗಿ,
ಹೊರಗೆ ಬರುವಾಗ ಕಾಫಿಯ ಜೊತೆಗೆ ಅವರೇ ತಯಾರಿಸಿದ ತೆಂಗಿನ ಕಾಯಿ ಬರ್ಫಿ, ಚಿಪ್ಸ್ , ಕೋಡುಬಳೆಯಿಂದ ಸಾಲಂಕೃತವಾದ ತಟ್ಟೆ ಯನ್ನು ನನ್ನೆದುರು ತಂದಿತ್ತರು. ಸುಮಾರು ಮಧ್ಯವಯಸ್ಸಿನವರಾದ ಆ ಗೃಹಿಣಿ ಅವರ ಅತಿಥಿಯಾದ ನನ್ನನ್ನು ಉಪಚರಿಸಲು ಪಾದರಸದಂತೆ ಒಳಗೆ-ಹೊರಗೆ ಓಡಾಡುವುದನ್ನು ನೋಡಿ ಸಂತಸವಾಯಿತು. ನಾನು ಅಲ್ಲಿಂದ ಹೊರಡುವಾಗ “ಮತ್ತೂಮ್ಮೆ ಬನ್ನಿ, ತುಂಬ ಖುಷಿಯಾಯಿತು’ ಎಂದು ಬೆನ್ನುತಟ್ಟಿದಾಗ, ನನ್ನ ಆತಂಕವೆಲ್ಲ ದೂರವಾಗಿ ಆತ್ಮೀಯತೆ ಮೂಡಿತು.
ಇದು ನಮ್ಮ ಪರಂಪರಾಗತ ಸಂಸ್ಕೃತಿ, ಆದರಾತಿಥ್ಯ ಎನ್ನುವುದು ಭಾರತೀಯ ಸಂಸ್ಕಾರ. ಇತಿಹಾಸದ ಪುಟಗಳನ್ನು ತಿರುವಿದರೆ ರಾಜರ ಕಾಲದಲ್ಲಿ ಕೂಡಾ ವೈರಿಗಳೇ ಆದರೂ ಮನೆ ಬಾಗಿಲಿಗೆ ಬಂದರೆ ಅವರನ್ನು ಅತಿಥಿ ಎಂದು ಪರಿಗಣಿಸಿ ಆದರಿಸಬೇಕೇ ಹೊರತು ಬಂಧಿಸಬಾರದು ಎಂಬ ಹೃದಯ ವೈಶಾಲ್ಯದ ನೀತಿಯಿತ್ತು.
ನಮ್ಮ ಸಮಾಜದಲ್ಲಿ ಅತಿಥಿ ಸತ್ಕಾರದಲ್ಲಿ ಗೃಹಿಣಿಯ ಪಾತ್ರ ಮಹತ್ವದ್ದು. ಇಂಥ ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಾದರೆ ಆಕೆಯಲ್ಲಿ ಅಂಥ ಒಂದು ಮನೋಭಾವವೂ ಇರಬೇಕು.
ನನ್ನ ಅಜ್ಜಿ , ಅಮ್ಮನ ಕಾಲದಲ್ಲೆಲ್ಲ ಐದು ದಿನಗಳ ಮದುವೆ. ನೆಂಟರಿಷ್ಟರೆಲ್ಲ ದೂರದಿಂದ ದೋಣಿಯಲ್ಲಿ ಕುಳಿತು ಹಲವು ಹೊಳೆಗಳನ್ನು ದಾಟಿ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ, ಸೇತುವೆಗಳ ಕಲ್ಪನೆಯೇ ಇರಲಿಲ್ಲ ಆ ಕಾಲದಲ್ಲಿ. ವಾಹನ ಸೌಕರ್ಯವೂ ಕಡಿಮೆ. ಮೈಲುಗಟ್ಟಲೆ ದೂರವನ್ನು ನಡೆದೇ ಕ್ರಮಿಸಬೇಕಿತ್ತು. ಸಣ್ಣ ಮಕ್ಕಳನ್ನು ಗಂಡಸರು ತಮ್ಮ ತಲೆಯ ಮೇಲೆ ಹಿಂಭಾಗದಲ್ಲಿ ಕುಳ್ಳಿರಿಸಿಕೊಂಡು ನಡೆಯುತ್ತಿದ್ದರೆ, ಪುಟ್ಟ ಶಿಶುಗಳು ಹೆಂಗಸರ ಸೊಂಟದಲ್ಲಿರುತ್ತಿದ್ದರು. ಇಷ್ಟು ಕಷ್ಟಪಟ್ಟು ಬಂದವರು ಮನೆಯ ಸಮಾರಂಭವನ್ನೆಲ್ಲ ಮುಗಿಸಿ ಒಂದೆರಡು ತಿಂಗಳಾದರೂ ಆ ಮನೆಯಲ್ಲೇ ತಂಗಿ, ಮತ್ತೆ ಅವರವರ ಮನೆಯ ದಾರಿ ಹಿಡಿಯುತ್ತಿದ್ದರು. ಯಾರಿಗೂ ಯಾವ ಗಡಿಬಿಡಿಯೂ ಇಲ್ಲ. ಮನೆಗೆ ಹೋಗಬೇಕೆಂಬ ಅವಸರವಿಲ್ಲ. ಜನರಿಗೆ ಸಮಯ ಧಾರಾಳವಾಗಿ ಅವರ ಊಟೋಪಚಾರದ ಆತಿಥ್ಯವನ್ನೆಲ್ಲ ಆಕೆಯೇ ವಹಿಸಿಕೊಳ್ಳಬೇಕಾಗಿತ್ತು. ಒಬ್ಬರಿಗೆ ಕಾಫಿಯಾದರೆ ಮತ್ತೂಬ್ಬರಿಗೆ ಚಹಾ. ಕೆಲವರಿಗೆ ಕಷಾಯವಾದರೆ, ಮತ್ತೆ ಕೆಲವರಿಗೆ ಮಜ್ಜಿಗೆ ನೀರು. ಬಂದವರಲ್ಲಿ ಖಾರ ಇಷ್ಟಪಡುವವರು ಕೆಲವರಾದರೆ, ಇನ್ನುಳಿದವರಿಗೆ ಸಿಹಿ ಇಷ್ಟ. ಎಲ್ಲರ ಇಷ್ಟಾರ್ಥ ಸಿದ್ಧಿಗಾಗಿ, ಗೃಹಿಣಿಯ ಅಭಯಹಸ್ತ ತಯಾರಾಗಿ ರುತ್ತಿತ್ತು. ಸ್ವಲ್ಪವೂ ಬೇಸರಿಸದೆ ಖುಷಿಯಿಂದಲೇ ಗೃಹಿಣಿ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಳು. ಅಂದಿನ ಗೃಹಿಣಿ ತಮ್ಮ ಅತಿಥಿಗಳಿಗೆ ಮಾಡುತ್ತಿದ್ದ ಈ ಬಗೆಯ ಉದಯಾಸ್ತಮಾನ ಸೇವೆಯನ್ನು ನೆನೆದರೆ ಅಚ್ಚರಿಯಾಗುತ್ತದೆ.
ಬಹಳ ದೀರ್ಘ ಕಾಲದವರೆಗೆ ಮನೆಯಲ್ಲಿ ಅತಿಥಿಗಳಾಗಿಯೇ ಕುಳಿತು ಬಿಡುವವರನ್ನು ಒತ್ತುಶ್ಯಾವಿಗೆ ಮಾಡಿ, ತಿನಿಸಿ ಒತ್ತಾಯದಿಂದ ಮನೆಯಿಂದ ಹೊರಡಿಸುವುದು ಎಂಬುದು ತುಳುನಾಡಿನ ಗೃಹಿಣಿ ಲೋಕದಲ್ಲಿ ವಿನೋ ದದ ವಿಷಯವಾಗಿ ಜನಪ್ರಿಯವಾಗಿದೆ. ಗೃಹಿಣಿಯ ಅತಿಥಿ ಸತ್ಕಾರದ ನಿಷ್ಠೆಯನ್ನು ನಮ್ಮ ಪೌರಾಣಿಕ ಕಥೆಗಳಲ್ಲಿ ನೋಡಬಹುದು. ದುರ್ಯೋಧನ ಪ್ರೇರಿತ ದೂರ್ವಾಸರು ತಮ್ಮ ಶಿಷ್ಯವೃಂದ ಸಮೇತರಾಗಿ ವನವಾಸದಲ್ಲಿದ್ದ ದ್ರೌಪದಿಯ ಅತಿಥಿ ಸತ್ಕಾರವನ್ನು ಪರೀಕ್ಷಿಸಲು ಬಂದಾಗ ತೊಳೆದಿಟ್ಟ ಆಕೆಯ ಅಕ್ಷಯಪಾತ್ರೆಯ ಒಂದು ಅಗುಳು ಕೃಷ್ಣಾನುಗ್ರಹದಿಂದ ಹೇಗೆ ಅತಿಥಿಗಳ ಹಸಿವು ಹಿಂಗಿಸಿತು ಎಂಬುದು ಯಾವತ್ತೂ ಗೃಹಣಿಯಿಂದ ಆತಿಥ್ಯ ಭಂಗವಾಗುವಂತಿಲ್ಲ ಎಂಬ ನೀತಿಮಾತಿ ನಂತೆ ಸತ್ಯ ವಾ ಗಿ, ಇನ್ನೊಂದು ಕಡೆ ಅತ್ರಿ ಮಹರ್ಷಿಯ ಪತ್ನಿ ಮಹಾ ಪ್ರತಿವ್ರತೆ ಅನಸೂಯಾಳ ಅತಿಥಿ ಸತ್ಕಾರವನ್ನು ಪರೀಕ್ಷಿಸಲು ತ್ರಿಮೂರ್ತಿಗಳೇ ಆಕೆಯ ಮನೆಗೆ ಬಂದಿಳಿಯುತ್ತಾರೆ. ವಿವಸ್ತ್ರಳಾಗಿ ಬಡಿಸಬೇಕೆಂಬ ಅತಿಥಿಗಳ ಅಪೇಕ್ಷೆಗೆ ಕಿಂಚಿತ್ತೂ ವಿಚಲಿತಳಾಗದ ಅನಸೂಯೆ ತ್ರಿಮೂರ್ತಿಗಳನ್ನೇ ಚಿಕ್ಕಮಗುವಾಗಿ ಪರಿವರ್ತಿಸಿ, ಹಾಲು ಅನ್ನಕೊಟ್ಟು ಉಪಚರಿಸಿ, ತನ್ನ ಆತಿಥ್ಯ ಧರ್ಮವನ್ನು ಶ್ರದ್ಧೆಯಿಂದ ನಿಭಾಯಿಸಿ, ಗೃಹಿಣಿಯ ಅತಿಥಿ ಸತ್ಕಾರ ಸಾಮರ್ಥ್ಯಕ್ಕೆ ಆದರ್ಶ ದೃಷ್ಟಾಂತವಾಗುತ್ತಾಳೆ.
ಮೊದಲೆಲ್ಲ ಮನೆಯ ಗೃಹಿಣಿಗೆ ತನ್ನ ಸುತ್ತಲಿನ ವಠಾರವೇ ಇಡೀ ಗ್ರಾಮವೇ ತನ್ನ ಮನೆಯಂತಿತ್ತು. ಅಕ್ಕಪಕ್ಕದ ಮನೆಯವರೆಲ್ಲ ಒಟ್ಟಿಗೆ ಪ್ರೀತಿ-ಸೌಹಾರ್ದದಿಂದ ಬದುಕುತ್ತ ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ಆ ಕಾಲದಲ್ಲಿ ಗೃಹಿಣಿಯ ಅತಿಥಿ ಸತ್ಕಾರಕ್ಕೆ ಎಲ್ಲೆಯೇ ಇರುತ್ತಿರಲಿಲ್ಲ.
ಒಳ್ಳೆಯ ಉದ್ದೇಶಕ್ಕೇ ಬರಲಿ ಅಥವಾ ದುರುದ್ದೇಶವನ್ನಿಟ್ಟುಕೊಂಡು ಬಂದರೂ ಅವರನ್ನು ಯಥೋಚಿತವಾಗಿ ಸತ್ಕರಿಸುವುದರಲ್ಲಿ ನಮ್ಮ ಭಾರತೀಯ ಪರಂಪರೆಯ ಗೃಹಿಣಿ ಹಿಂದೆ ಬೀಳುವುದಿಲ್ಲ.
ಮನುಷ್ಯನನ್ನು ಯಾವುದರಿಂದಲೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ, ಭೋಜನದಿಂದ ಮಾತ್ರ ಆತನನ್ನು ಆ ಒಂದು ಕ್ಷಣವಾದರೂ ಸಂತೃಪ್ತಿಗೊಳಿಸಬಹುದು. ಹೊಟ್ಟೆ ತುಂಬ ಊಟ ಕೊಡುವುದರ ಮೂಲಕ ಅತಿಥಿಗಳನ್ನು ಸತ್ಕರಿಸುವುದು ಪರಂಪರಾಗತವಾಗಿ ಗೃಹಿಣಿಯ ಪಾಲಿಗೆ ಒದಗಿಬಂದ ಕರ್ತವ್ಯವಾಗಿದೆ.
ಯಾರಾದರೂ ಮನೆಗೆ ಬಂದ ತಕ್ಷಣ ಉಭಯ ಕುಶಲೋಪರಿಯ ತರುವಾಯ ಗೃಹಿಣಿ ವಿಚಾರಿಸುವುದು “”ಬಾಯಾರಿಕೆಗೆ ಏನು ಬೇಕು. ಊಟ ಮಾಡುತ್ತೀರಾ. ತಿಂಡಿ ತಿನ್ನಿ…” ಎಂಬೆಲ್ಲ ಔಪಚಾರಿಕ ಮಾತುಗಳಿಂದ ಇಲ್ಲವೆ ಎನ್ನುವ ಬಗ್ಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅತಿಥಿಗಳನ್ನು ಉಪಚರಿಸಬೇಕು ಎನ್ನುವುದೊಂದೇ ಕಳಕಳಿ ಆಕೆಯ ಒಳಗಿನ ತುರ್ತಾಗಿರುತ್ತದೆ. ಆ ಕ್ಷಣಕ್ಕೆ ಎಷ್ಟು ಕಷ್ಟವಾದರೂ ಬಂದ ಅತಿಥಿಗಳನ್ನು ಖಾಲಿ ಹೊಟ್ಟೆಯಲ್ಲಿ ಕಳುಹಿಸುವ ಜಾಯಮಾನ ಆಕೆಯದಲ್ಲ. ಇದು ನಮ್ಮ ಭಾರತೀಯ ಗೃಹಿಣಿಯ ಆದರಾತಿಥ್ಯದ ಸಂಸ್ಕೃತಿ.
ಒಂದು ಕಾಲದಲ್ಲಿ ಅತಿಥಿ ಸತ್ಕಾರವೇ ತನ್ನ ಉಸಿರಾಗಿಸಿಕೊಂಡ ಗೃಹಿಣಿ, ಇವತ್ತು ತಾನು ಒಪ್ಪಿಕೊಂಡು ಬಂದ ಈ ಬಂಧದಿಂದ ತಾನೇ ಹೊರಬರುತ್ತಿದ್ದಾಳೊ ಎನಿಸುತ್ತದೆ. ಈ ಮಹಿಳಾ ಉದ್ಯೋಗ ಪರ್ವದಲ್ಲಿ ನಗರದ ಅವಸರಿಸುವ ಬದುಕಲ್ಲಿ ಪರಂಪರಾಗತ ಸಂಸ್ಕಾರಗಳೆಲ್ಲ ಮಾಯವಾಗುತ್ತಿದೆ. ಇದರ ಛಾಯೆ ಈಗ ಅಲ್ಲೊಂದು ಇಲ್ಲೊಂದು ನಮ್ಮ ಅವಗಾಹನೆಗೆ ದಕ್ಕುತ್ತದೆ.
ಈಗಿನ ಅಪಾರ್ಟ್‌ಮೆಂಟ್‌ಗಳಲ್ಲಿ ಗಗನಯಾನದ ತ್ರಿಶಂಕುಗಳಂತೆ ಬದುಕುತ್ತಿರುವವರಿಗೆ ಪಕ್ಕದ ಮನೆಯವರ ಪರಿಚಯವೇ ಇರುವುದಿಲ್ಲ. ಇನ್ನು ಲಿಫ್ಟ್ನಲ್ಲಿ ಹೋಗುವ ಅಲ್ಪಾವಧಿಯಲ್ಲೂ ಹತ್ತಿರವೇ ನಿಂತಿದ್ದರೂ ಒಬ್ಬರಿಗೊಬ್ಬರು ಮುಖವನ್ನೇ ನೋಡದೆ ಮುಗುಳ್ನಗುವನ್ನೂ ಬೀರದೆ ಮುಗುಮ್ಮಾಗಿ ಹೋಗಿಬಿಡುತ್ತಾರೆ. ಇದು ಅವರ ಏಕಾಂಗಿತನ, ಖಾಸಗೀತನದ ಮೇಲಾಟವೊ ಅಥವಾ ಮಾನವೀಯತೆಯ ದಾರಿದ್ರéವೊ ಏನೆಂದು ಹೇಳಲಾಗುವುದಿಲ್ಲ. ಉದ್ಯೋಗಸ್ಥ ಮಹಿಳೆಯ ಅಲ್ಪಾವಧಿಯ ಗೃಹವಾಸದಲ್ಲಿ ವಾರ, ತಿಥಿ, ವಿಳಾಸವನ್ನು ವರ್ಷ ಮೊದಲೇ ಅರುಹಿ ಬರುವ ಅತಿಥಿಯೂ ಅನಪೇಕ್ಷಿತವಾಗುವುದನ್ನು ಅರಗಿಸಿಕೊಳ್ಳಲಾಗದ ವಿದ್ಯಮಾನವೊಂದು ಇತ್ತೀಚೆಗೆ ಏರ್ಪಟ್ಟಿದೆಯೊ ಎನಿಸುತ್ತದೆ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.