ಹಾ ಸೀತಾ! ನನ್ನೂರ ರಾಮ 


Team Udayavani, Sep 29, 2017, 7:05 AM IST

RavanaSitaPainting.jpg

ಅಮ್ಮಾ ಜಾನಕೀ,
ಪರೀಕ್ಷೆ ಮತ್ತು ಅದರ ಸೋಲು-ಗೆಲುವು ಪರೀಕ್ಷಾರ್ಥಿಗೆ ಮಾತ್ರ ಸಂಬಂಧಿಸಿದ್ದಾಗಬೇಕಲ್ಲದೆ ಅದು ಅವನ ಊರು-ಕೇರಿ, ಮನೆ-ಮಂದಿರಗಳ ಮಾನಾಭಿಮಾನದ ಸಂಗತಿಯಾಗಿ ಬಿಟ್ಟರೆ ಎಂತಹ ಅನಾಹುತವಾಗಬಹುದಲ್ಲವೆ?

ನಿನ್ನ ಅಗ್ನಿಪರೀಕ್ಷೆಯ ಸಂದರ್ಭದ ಬಗೆಗೇ ಮಾತಿಗಿಳಿದರೆ, ನೀನೂ ಅದನ್ನು ನಿರೀಕ್ಷಿಸಿರಲಿಲ್ಲ, ಅದು ಲಕ್ಷ್ಮಣನ ಆಗ್ರಹವೂ ಆಗಿರಲಿಲ್ಲ. ಬಹುಶಃ ರಾಮನೂ ಅದನ್ನು ಅಪೇಕ್ಷಿಸಿರಲಿಲ್ಲ. ಆದರೆ, ಇಡೀ ಲೋಕಕ್ಕೆ ಈ ಸಂಗತಿಯ ಬಗೆಗೆ ಒಂದು ಬಗೆಯ ವಿಲಕ್ಷಣವಾದ ಕೌತುಕವಿತ್ತು. ಹಾಗಾಗಿ, ಅಂಥಾದ್ದೊಂದು ಪರೀಕ್ಷೆ ಅವರಿಗೆ ಬೇಕೇ ಬೇಕಿತ್ತು ಮತ್ತು ರಾಮನಿಗೆ ಈ ಲೋಕವನ್ನು ಕಾಯುವ ತುರ್ತಿತ್ತು.

ಇಡೀ ಜಗತ್ತೇ ಉಸಿರು ಹಿಡಿದು ಸಾಕ್ಷಿಯಾದ ನಿನ್ನ ಅಗ್ನಿದಿವ್ಯವನ್ನು ನೀನು ನಿರ್ಲಿಪ್ತತೆಯಿಂದ ಪೂರೈಸಿದ ಗಳಿಗೆ ಸೀತೆಯ ಪಾವಿತ್ರ್ಯವನ್ನು ಪ್ರಪಂಚದೆದುರು ರುಜುಪಡಿಸಿದ ಹೆಮ್ಮೆಯ ಭಾವ ನಿನ್ನ ಪತಿದೇವ ರಾಮನದ್ದು. ನಿನ್ನ ಗಂಡನ ಪುಣ್ಯಕ್ಕೆ “ಅಗ್ನಿ ಪುರುಷನ ತೆಕ್ಕೆಯಿಂದ ಜಾರಿದವಳು’ ಎಂದು ಈ ಲೋಕ ನಿನ್ನನ್ನು ಆಡಿಕೊಳ್ಳಲಿಲ್ಲ. ಆ ಸುಡುವಗ್ನಿಯ ಕಾವು ನೀ ಮುಡಿದ ಹೂವಿನ ಎಸಳನ್ನು ಕೂಡ ಬಾಡಿಸಿರಲಿಲ್ಲವಂತೆ, ಆದ‌ರೆ ತಾಯಿ, ಅದೇ ಹೊತ್ತಿಗೆ ನಿನ್ನೊಡಲೊಳಗೆ ಹೊತ್ತಿಕೊಂಡಿರಬಹುದಾದ ಬೆಂಕಿಯ ಕಾವು ನಿನ್ನನ್ನೆಷ್ಟು ಸುಟ್ಟಿರಬಹುದು, ಆ ಗುಟ್ಟಿನ ಬೇಗುದಿ, ಸಂಕಟ, ಅನುದಿನವೂ ಇಂಥ ಪರೀಕ್ಷೆಗಳಿಗೆ ತಮ್ಮನ್ನೊಡ್ಡಿಕೊಂಡು ತಮ್ಮ ಸಚ್ಚಾರಿತ್ರ್ಯವನ್ನು ನಿರೂಪಿಸಲು ಹೆಣಗುತ್ತಿರುವ ಈ ಲೋಕದ ಎಲ್ಲ ಸೀತೆಯರಿಗೂ ಗೊತ್ತಮ್ಮಾ. ಆದರೆ, ನನ್ನ ಪ್ರಶ್ನೆಯಿರುವುದು ಅದಲ್ಲ, ಒಂದೊಮ್ಮೆ ನೀನು ನಿನ್ನ ಗಂಡನೊಡ್ಡಿದ “ಅಗ್ನಿ ಪರೀಕ್ಷೆ’ಯ ಸವಾಲನ್ನು ಧಿಕ್ಕರಿಸಿದ್ದರೆ…

ಇಲ್ಲೊಬ್ಬ ರಾಮನ ಕಥೆ ಕೇಳು. ನಮ್ಮೂರ ಹಿಡುವಳಿದಾರರೊಬ್ಬರ ಮನೆಯಲ್ಲಿ ದುಗ್ಗಪ್ಪ ಎಂಬವನೊಬ್ಬ ಕೆಲಸಕ್ಕೆ ಸೇರಿಕೊಂಡಿದ್ದ. ಆ ಮನೆಯೇ ಅವನಿಗೆ ರಾತ್ರಿಯ ನೆಲೆಯೂ ಆಗಿತ್ತು. ಅವನ ಕೆಲಸದ ಶಿಸ್ತು, ಅಚ್ಚುಕಟ್ಟುತನ, ಜಾಣ್ಮೆ ನೋಡಿದವರು ನಿಯತ್ತು ಇವರ ರಕ್ತದಲ್ಲಿಯೇ ಇದೆ ಎನ್ನುತ್ತಿದ್ದರು. ಹಗಲಿಡೀ ಒಂದು ಮಾತಿಗೆ ಹತ್ತು ಸೇರಿಸಿ ಲಕಲಕ ಎನ್ನುತ್ತಾ ಸುತ್ತಲಿದ್ದವರಿಗೆ ಜೀವ ಉಕ್ಕಿಸುತ್ತಿದ್ದವ ಸೂರ್ಯ ಕಂತುತ್ತಲೇ ತಾನೂ ಕಂದಿ ಹೋಗುತ್ತಿದ್ದ. ತನ್ನ ಜೀವದ ಸೆಲೆ ಬತ್ತಿ ಹೋದಂತೆ ಭಯಂಕರ ಮೌನವನ್ನು ಹೊದ್ದು ಬರುತ್ತಿದ್ದ. ಒಂದಿಷ್ಟು ತೆಂಗಿನ ಮಡಲು ಹರಡಿಕೊಂಡು ಹಿಡಿಕಡ್ಡಿ ಮಾಡುವ ಕಾರ್ಯ ಮಾಡುತ್ತಲೇ ಅವನು ಮನಸ್ಸಿನಲ್ಲಿಯೇ ಮೂಕ ನೋವಿನಿಂದ ಒದ್ದಾಡುತ್ತಿದ್ದುದು ಯಾರ ಕಣ್ಣಿಗೂ ಸ್ಪಷ್ಟವಾಗಿ ಕಾಣುತ್ತಿತ್ತು. “ಬೈಗು ಬರುತ್ತಲೇ ಇವನು ತನ್ನ ಮನೆಯನ್ನು ಜಾನಿಸಲು ಶುರುಮಾಡುತ್ತಾನೆ’ ಎನ್ನುವುದು ಉಳಿದವರ ಮಾತು. ಅವನು ಅಷ್ಟೊಂದು ಜಾನಿಸುವ ಮನೆ ಎಂದರೆ, ಅದು ಅವನ ಮಡದಿ- ಮಕ್ಕಳಿರುವ ಗುಡಿಸಲು. ಈ ಪರಿಯಲ್ಲಿ ಮನೆ-ಮಡದಿ ಅಂತ ಹಚ್ಚಿಕೊಂಡವನು ಅಲ್ಲಿಗೂ ಹೋಗದೇ ಇಲ್ಲಿಯೂ ಇರಲಾರದೇ ಏಕಾಂಗಿಯಾಗಿ ನರಳುತ್ತಿರುವುದೇಕೆ ಎಂದು ಕೇಳಿದರೆ, ಅದಕ್ಕೆ ಅವನೇ ಅವನ ಬದುಕಿನಲ್ಲಿ ಮಾಡಿಕೊಂಡ ಒಂದು ರಾಮಾಯಣವೇ ಕಾರಣ.ಅವನ ಹೆಂಡತಿ ಎರಡನೆಯ ಮಗುವಿನ ಗರ್ಭಿಣಿಯಾಗುವವ ರೆಗೂ ಅವನ ಚೆಂದದ ಸಂಸಾರ ಶ್ರುತಿಬದ್ಧವಾಗೇ ಇತ್ತು. 

ಆದರೆ ಆ ಗರ್ಭದ ಬಗೆಗೆ ಎಲ್ಲೋ ಏನೋ ಅಪಶ್ರುತಿ ಹೊರಟು ಅದು ನಮ್ಮ ದುಗ್ಗಪ್ಪನ ಮನಸ್ಸನ್ನು ಕದಡಿಬಿಟ್ಟಿತು. ಆ ಮಗು ತನ್ನದಲ್ಲವೋ ಏನೋ ಎಂಬ ಅನುಮಾನದ ಭೂತ ಅವನನ್ನು ಮೆಟ್ಟಿಕೊಂಡಿತು. ಈ ವಿಷಯದಲ್ಲಿ ಹೆಂಡತಿಯ ಮಾತನ್ನಷ್ಟೇ ನಂಬಬೇಕಾದ ಗಂಡನ ಅಸಹಾಯಕತೆ ಮತ್ತು “”ಯಾರಧ್ದೋ ಮಗುವಿಗೆ ಅಪ್ಪ ಆದೆಯಲ್ಲ” ಎಂದು ಆಡಿಕೊಳ್ಳುವವರನ್ನು ಎದುರಿಸಲಾಗದ ಭಯ ದುಗ್ಗಪ್ಪನನ್ನು ಬಿಡದೆ ಕಾಡಿತು. ಈ ರಗಳೆಗಳನ್ನು ನಿವಾರಿಸಿಕೊಳ್ಳಲು ಇರುವುದು ಒಂದೇ ದಾರಿ ಅಂದುಕೊಂಡವನು ತನ್ನ ಹೆಂಡತಿಗೆ “”ನೀನು ಧರ್ಮಸ್ಥಳದ ದೇವರ ಮೇಲೆ ಆಣೆ ಮಾಡಿ ಈ ಮಗುವಿನ ಅಪ್ಪ ನಾನೇ ಎಂದು ಸಾಬೀತುಪಡಿಸಬೇಕು” ಅಂತಂದು, ಇನ್ನು ಈ ಲೋಕದ ಮುಂದೆ ತಾನು ಅಪ್ಪನಾಗಿ ಸೆಟೆದು ನಿಲ್ಲಬಹುದು ಎಂದೇ ನಂಬಿದ.

ಆದರೆ, ಅವನ ಊಹೆಗೆ ಮೀರಿ ಅವನ ಹೆಂಡತಿ ಆ ಸವಾಲನ್ನು ಧಿಕ್ಕರಿಸಿಬಿಟ್ಟಳು. “”ಧರ್ಮಸ್ಥಳದ ದೇವರು ಅಂದರೆ ಅಂತಿಂಥ ದೇವರೇನು? ಆ ದೇವರ ಹೆಸರು ತೆಗೆದು ನನ್ನ ಮಕ್ಕಳಿಗೆ ಕಂಟಕ ತರೋಳಲ್ಲ ನಾನು. ಆಣೆ ಪ್ರಮಾಣದ ಬಗ್ಗೆ ಉಸಿರೆತ್ತಿದರೆ ಜಾಗ್ರತೆ” ಅಂತ ಸಿಡಿದುಬಿಟ್ಟಳು. ದುಗ್ಗಪ್ಪ ಬೆಚ್ಚಿದ, ಹಾಗಾದರೆ, ತನ್ನ ಹೆಂಡತಿ ದಾರಿತಪ್ಪಿದವಳೇ? ಊಹೂಂ ಅದನ್ನು ಒಪ್ಪಲೂ ಅವನ ಮನಸ್ಸು ತಯಾರಿರಲಿಲ್ಲ. ಹಾಗಾದರೆ ಅವಳೇಕೆ ಎಲ್ಲರ ಮುಂದೆ ಪ್ರಮಾಣ ಮಾಡುವ ಧೈರ್ಯ ತೋರಬಾರದು, ಆಗ ಊರವರೂ ಬಾಯಿಗೆ ಬೀಗ ಹಾಕಿಕೊಳ್ಳುವುದಿಲ್ಲವೆ? ಹೆಂಡತಿಯನ್ನು ಕಾಡಿದ, ಬೇಡಿದ. ಅವಳು ಮಾಜತ್ರ “”ನೀನು ನಂಬಿದ್ರೆ ನಂಬು, ಬಿಟ್ಟರೆ ಬಿಡು. ನಾನು ಆ ದೇವರ ಸುದ್ದಿಗೆ ಹೋಗುವವಳಲ್ಲ” ನಿಷ್ಠುರವಾಗೇ ಉಳಿದಳು. ಇಷ್ಟಾದ ಮೇಲೆ ಅವಳೊಟ್ಟಿಗೆ ಬಾಳ್ವೆ ನಡೆಸಿದರೆ ತಾನು ಗಂಡಸು ಅಂತನ್ನಿಸಿಕೊಳ್ಳುತ್ತೇನೆಯೆ? ಹೇಳದೇ ಕೇಳದೇ ಬಸುರಿ ಹೆಂಡತಿಯೊಡನೆ ಮುದ್ದಿನ ಮಗನನ್ನೂ ತೊರೆದು ಊರು ಬಿಟ್ಟು ಹೊರಟೇ ಹೋದ.

ತನ್ನ ಸಂಕಟದ ಮೂಟೆಯನ್ನು ಹೊತ್ತು ಕೊಂಡು ಊರೂರು ಅಲೆದ, ಮೈಮುರಿದು ದುಡಿದ. ಆದರೆ, ಆ ಮೂಟೆಯಲ್ಲಿಟ್ಟಿದ್ದ ಠೇವಣಿ ಹೆಚ್ಚುತ್ತಿತ್ತೇ ವಿನಃ ಕಡಿಮೆಯಾಗಲಿಲ್ಲ. ತನ್ನ ಹೆಂಡತಿ ಹೊಲ-ಗದ್ದೆಗಳಲ್ಲಿ ಗಂಡಸರಿಗೆ ಸಮ ಸಮ ದುಡಿಯುತ್ತ¤ ಮಕ್ಕಳನ್ನು ಬೆಳೆಸುತ್ತಿರುವ ಸುದ್ದಿ ಆಗೀಗ ತಲುಪಿದಾಗಲಂತೂ ಮತ್ತಷ್ಟು ಜೀವ ಹಿಂಡಿ ಹಿಪ್ಪೆಯಾಗುತ್ತಿತ್ತು.

“”ನಿನಗೆ ಅವಳು ಬೇಡ ಅಂತಾದರೆ ಬಿಟ್ಟು ಬಿಡು, ಬೇರೆ ಸಂಬಂಧ ಹುಡುಕಿದರಾಯ್ತು” ಎಂಬ ಊರವರ ಮಾತಿಗೆ, “”ಒಂದು ಬದುಕು-ಒಂದು ಸಂಬಂಧ, ಇನ್ನೊಂದು ಅಂತಿದ್ರೆ ಅದು ಇನ್ನೊಂದು ಜನ್ಮಕ್ಕೆ” ಅನ್ನುತ್ತ ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ತಬ್ಬಲಿತನವನ್ನು ತನ್ನೊಳಗೆ ತುಂಬಿಸಿಕೊಳ್ಳುತ್ತಿದ್ದ.

ಅವನ ಕಥೆ ಗೊತ್ತಿದ್ದ ಪ್ರತಿಯೊಬ್ಬರಿಗೂ ಅವನ ನಗುವಿನೊಳ ಗೊಂದು ನೋವು ಕಾಣುತ್ತಿತ್ತು, ಮಾತಿನೊಳಗೊಂದು ಮೌನ ಕೇಳುತ್ತಿತ್ತು, ಕಟ್ಟೆ ಕಡಿಯುವಾಗಿನ ಅವನ ಏದುಸಿರ ನಡುವೆ ಹೊರಹೊಮ್ಮುತ್ತಿದ್ದ ನಿಟ್ಟುಸಿರ ಬಿಸಿ ತಾಕುತ್ತಿತ್ತು. ಮಡದಿ-ಮಕ್ಕಳ ಅಗಲುವಿಕೆಯ ನೋವು ಪೆಚ್ಚಾದ ಅಹಮಿಕೆಯ ಸಂಕಟ, ಲೋಕಾಪವಾದದ ಅಂಜಿಕೆ ದುಗ್ಗಪ್ಪನನ್ನು ಬಿಡದೇ ಕಾಡಿತ್ತು, ಒದ್ದಾಡಿಸಿತ್ತು. ಬದುಕಿನುದ್ದಕ್ಕೂ ಅವನೊಂದು ನೆಲೆಯೇ ಕಾಣದಂತೆ ಅವನನ್ನು ಬೆನ್ನಟ್ಟಿತ್ತು. ಹೀಗೆ ಮತ್ತೆ ಮತ್ತೆ ಗೊತ್ತಿಲ್ಲದೂರಿಗೆ ತೆರಳುತ್ತಲೇ, ಅಲೆದು ನರಳಿದ.

ಹೆಣ್ಣು ಗಂಡನ್ನು ಎದುರಿಸಿ ತನ್ನತನಕ್ಕಾಗಿ ಸೆಟೆದು ನಿಂತಾಗಲೆಲ್ಲ ಗಂಡು ಎಷ್ಟೊಂದು ನರಳಿಬಿಡುತ್ತಾನಲ್ಲ, ನಿನ್ನ ರಾಮನನ್ನು ನೀನು ಉಳಿಸಿದೆ ತಾಯಿ! ಈ ಹುಳುಕು ಮನಸ್ಸಿನ ಕೆಟ್ಟ ಕುತೂಹಲ ಹೀಗೆ ಕೇಳುತ್ತಿದೆ, ನನ್ನೂರ ಸೀತೆ, ಆಣೆ ಪ್ರಮಾಣದ ಪರೀಕ್ಷೆಯನ್ನು ಧಿಕ್ಕರಿಸಲು ಕಾರಣವೇನಿದ್ದಿರಬಹುದು? ಅವಳು ನಿನ್ನಷ್ಟು ಪರಿಶುದ್ಧಳಲ್ಲ ಎನ್ನುವುದು ಇದರ ಅರ್ಥವೇ? ಪರಿಶುದ್ಧತೆಗೂ ಮೀರಿದ ಗಟ್ಟಿ ಬದುಕನ್ನು ತಾನೇ ಕಟ್ಟಿಕೊಂಡು ಆ ಊರಲ್ಲೇ ನೆಲೆನಿಲ್ಲುವ ಬದ್ಧತೆ ತೋರಿದಳಲ್ಲ ಆಕೆ?

ಒಮ್ಮೆ ಹೊತ್ತಿಕೊಂಡ ಅನುಮಾನದ ಬೆಂಕಿಯನ್ನು ನಂದಿಸುವ ಶಕ್ತಿ ಯಾವ ಆಣೆ ಪ್ರಮಾಣದ ಅಗ್ನಿಶಾಮಕಕ್ಕೂ ಇಲ್ಲ ಎಂಬ ಸತ್ಯ ಅವಳಿಗೆ ಅರಿವಿರಬೇಕೇನೋ! ಸುಳ್ಳಲ್ಲ, ಲಂಕೆಯಲ್ಲಿ ನಿನ್ನ ಪಾವಿತ್ರ್ಯವನ್ನು ನೀನು ನಿರೂಪಿಸಿದ್ದರೂ, ಅಯೋಧ್ಯೆ ಅದನ್ನು ಪೂರ್ಣವಾಗಿ ಒಪ್ಪಿಕೊಂಡಿತೆ? ಒಪ್ಪಿಕೊಂಡಿದ್ದರೆ, ನೀನು ಲವಕುಶರನ್ನು ಗರ್ಭದಲ್ಲಿ ಧರಿಸಿ ಮತ್ತೆ ಕಾನನ ಮುಖೀಯಾಗಬೇಕಿತ್ತೆ? ರಾಮ ರಾಮಾ!

– ಅಭಿಲಾಷಾ ಎಸ್‌.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.