ಕಾಡುವ ದಿನಗಳ ಗೆಳತಿ : ಶೀ ಕಪ್
Team Udayavani, Jul 28, 2017, 6:45 AM IST
ಇತ್ತೀಚೆಗೆ ನನ್ನ ಸಂಬಂಧಿಕರ ಮಗಳೊಬ್ಬಳು ಮೈ ನೆರೆದಿದ್ದಳು. ಆ ವಿಷಯವನ್ನು ಹೇಳಲು ತಾಯಿಗೆ ಆತಂಕದ ಜತೆಗೆ ಮುಜುಗರ. “ಇದೊಂದು ಹೆಣ್ಣುಮಕ್ಕಳಿಗೆ ಅಂಟಿದ ಶಾಪ’ ಎಂದು ಆಕೆ ಗೊಣಗುತ್ತಲೆ ಮಗಳಿಗೆ “ಇನ್ನು ಮುಂದೆ ಜಾಸ್ತಿ ಹಾರಾಡಬೇಡ, ಅಲ್ಲಿ ಇಲ್ಲಿ ಓಡಾಡಬೇಡ ಕುಳಿತುಕೊಳ್ಳುವಾಗ, ನಿಂತುಕೊಳ್ಳುವಾಗ ಸ್ವಲ್ಪ ನಿನ್ನ ಬಟ್ಟೆ ಕಡೆ ಗಮನ ನೀಡು’ ಎಂದು ಉಪದೇಶ ನೀಡಿದರು. ಅದರ ಜತೆಗೆ ಆಕೆಯದ್ದು ಇನ್ನೊಂದು ಗೋಳು. “”ನನ್ನ ಮಗಳು ಸ್ಯಾನಿಟರಿ ಪ್ಯಾಡ್ ಹಾಕಿಕೊಂಡು 10 ನಿಮಿಷದಲ್ಲಿಯೇ ತೆಗೆದು ಬಿಸಾಕುತ್ತಾಳೆ. ಅವಳಿಗೆ ಅಷ್ಟೇನೂ ರಕ್ತಸ್ರಾವದ ತೊಂದರೆ ಇಲ್ಲ. ಇವಳು ಹೀಗೆ ಮಾಡಿದರೆ ತಿಂಗಳಿಗೆ ಎಷ್ಟು ಪ್ಯಾಕೆಟ್ ಖರೀದಿಸಲಿ…? ಅದು ಅಲ್ಲದೇ ಅದನ್ನೆಲ್ಲಾ ಎಲ್ಲಿ ಎಂದು ಬಿಸಾಡಲಿ?” ಎನ್ನುತ್ತ ಹೆಣ್ಣು ಜನ್ಮವೆತ್ತಿದ್ದಕ್ಕೆ ಹಿಡಿಶಾಪ ಹಾಕುತ್ತಲೇ ನಡೆದರು.
ಕಾಲ ಎಷ್ಟೇ ಬದಲಾಗಿರಬಹುದು ಹೆಣ್ಣು ಋತುಮತಿಯಾಗಿದ್ದಾಳೆ ಎಂದು ಹೇಳಿಕೊಳ್ಳುವುದು ಇಂದಿಗೂ ಒಂದು ಮುಜುಗರಪಡುವ ಸನ್ನಿವೇಶ. ಇದರ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಇಂದಿಗೂ ಇಲ್ಲ ಎನ್ನಬಹುದು. ಏನೋ ಒಂದು ರೀತಿ ಅನಿಷ್ಟವಾದದ್ದು ಅನ್ನುವ ಹಾಗೆ ನೋಡುತ್ತಾರೆ. ಇಂದಿಗೂ ಮೌಡ್ಯ ಕೂಪದೊಳಗೆ ಕುಳಿತಿರುವವರು ಮುಟ್ಟಿನ ದಿನಗಳಲ್ಲಿ ಹೆಣ್ಣು ಮನೆಯ ಮುಖ್ಯದ್ವಾರವನ್ನು ಹಾದುಹೋಗಬಾರದು, ಮನೆಯ ಒಳಗೆ ಮಲಗಬಾರದು, ಆ ದಿನಗಳಲ್ಲಿ ಅವರು ಉಪಯೋ ಗಿಸುವ ಪಾತ್ರೆ, ಬಟ್ಟೆ, ಚಾಪೆಯನ್ನು ಬೇರೆಯೇ ಇಡಬೇಕು ಎಂಬಿತ್ಯಾದಿ ಕಟ್ಟಳೆಗಳನ್ನು ಬಿಗಿದಿಡುತ್ತಾರೆ. ಇದೊಂದು ಸ್ವಾಭಾವಿಕವಾದ ದೈಹಿಕ ಪ್ರಕ್ರಿಯೆ ಎಂಬುದರ ಸಾಮಾನ್ಯ ಅರಿವು ಇಲ್ಲದವರಂತೆ ವರ್ತಿಸು ವವರೂ ಇದ್ದಾರೆ.
ಇಂದು ನಾವು ಆಧುನಿಕ ಯುಗ, ಜಾಗತೀಕರಣ ಎಂಬ ದೊಡ್ಡ ದೊಡ್ಡ ಮಾತು ಗಳನ್ನಾಡುತ್ತೇವೆ. ಆದರೆ ಹೆಣ್ಣೊಬ್ಬಳಿಗೆ ತನ್ನ ಮುಟ್ಟಿನ ದಿನಗಳನ್ನು ಯಾವುದೇ ಮುಜುಗರವಿಲ್ಲದೇ ಹೇಳುವ ಅವಕಾಶ ಮಾತ್ರ ಇಲ್ಲ. ಮೊದಲೆಲ್ಲ ಮುಟ್ಟಿನ ದಿನಗಳಲ್ಲಿ ಹತ್ತಿಯ ಬಟ್ಟೆ ಉಪಯೋಗಿಸುತ್ತಿದ್ದರು. ಮನೆಯಲ್ಲಿ ಹೆಣ್ಣು ಮೈನೆರೆದು ಕುಳಿತಿದ್ದಾಳೆ ಎಂದರೆ ಪೆಟ್ಟಿಗೆಯೊಳಗಿನ ಅಜ್ಜಿಯ ಮೆತ್ತಗಿನ ಹಳೆಯ ಸೀರೆಗಳನ್ನು ತುಂಡು ತುಂಡು ಮಾಡಿ ಅವಳಿಗೆ ನೀಡುತ್ತಿದ್ದರು. ಕಲೆ, ಸೋರಿಕೆಯ ಭಯದಿಂದಲೇ ಮುಟ್ಟಿನ ದಿನಗಳು ಹತ್ತಿರ ಬಂದಾಗ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಯಾಕಾದರೂ ಇದು ಆಗುತ್ತೋ ಎಂಬ ಬೇಸರದ ಭಾವವೊಂದು ಹಾದು ಹೋಗುತ್ತೆ. ಜತೆಗೆ ಆ ಬಟ್ಟೆಯನ್ನು ಒಣಗಿಸಲು ಪರದಾಡಬೇಕಾದ ಸ್ಥಿತಿ. ಬಚ್ಚಲು ಕೋಣೆಯಲ್ಲಿ ಒಣಗಿಸುವ ಎಂದರೆ ಅಲ್ಲಿ ಅಪ್ಪನೋ, ಅಣ್ಣನೋ ಸ್ನಾನಕ್ಕೆ ಹೋಗುತ್ತಾರೆ ಎಂಬ ಚಿಂತೆ, ಸರಿಯಾಗಿ ಒಣಗದ ಬಟ್ಟೆ ಉಪಯೋಗಿಸಿದರೆ ಸೋಂಕಿನ ಭಯ! ಹೀಗಿರುವಾಗ ಈ ಸ್ಯಾನಿಟರಿ ಪ್ಯಾಡ್ ಹೆಣ್ಣುಮಕ್ಕಳಿಗೆ ಒಂದು ವರದಾನವಾಗಿತ್ತು. ಆದರೆ, ಶಾಪ್‌ಗೆ ಹೋಗಿ ಸ್ಯಾನಿಟರಿ ಪ್ಯಾಡ್ ಕೇಳುವುದಕ್ಕೂ ಈಗಲೂ ಹೆಣ್ಣುಮಕ್ಕಳಿಗೆ ಒಂಥರ ಕಸಿವಿಸಿ. ಇನ್ನು ಉಪಯೋಗಿಸಿದ ಪ್ಯಾಡ್ ಅನ್ನು ಯಾರ ಕಣ್ಣಿಗೂ ಬೀಳದಂತೆ ವಿಲೇವಾರಿ ಮಾಡುವುದಕ್ಕೂ ಅಳುಕು. ಆದರೆ ಈಗ ಈ ಪ್ಯಾಡ್‌ನಿಂದಲೂ ಮುಕ್ತಿ ಸಿಗುವ ದಿನಗಳು ಬಂದಿವೆ. ಪ್ಯಾಡ್ ಬದಲಾಗಿ ಈಗ “ಶೀ-ಕಪ್’ನ ಹೆಸರು ಹೆಂಗಳೆಯರ ಬಾಯಲ್ಲಿ ಹರಿದಾಡುತ್ತಿವೆ. ಶೈಕಾರ್ಟ್ ನಂತಹ ಅಂತರ್ಜಾಲ ತಾಣಗಳಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.
ಏನಿದು ಶೀ-ಕಪ್? ಉಪಯೋಗಿಸುವ ಬಗೆ ಹೇಗೆ?
ನೋಡಲು ಒಂದು ರೀತಿ ಗಂಟೆಯ ಹಾಗೆ ಕಾಣಿಸುವ ಈ ಪುಟ್ಟದಾದ ಕಪ್ ಹೆಣ್ಣಿನ ಆ ದಿನಗಳಿಗೆ ಸಾಥ್ ನೀಡಲು ಸಹಕಾರಿಯಾಗಿದೆ, ಮೆಡಿಕಲ್ ಗ್ರೇಡ್ ಸಿಲಿಕೋನ್ ಅನ್ನು ಉಪಯೋಗಿಸಿ ಈ ಶೀ-ಕಪ್ ಅನ್ನು ತಯಾರಿಸಲಾಗಿದೆ. ಮುಟ್ಟಿನ ದಿನಗಳಲ್ಲಿ ಆಗುವ ರಕ್ತಸ್ರಾವವನ್ನು ಈ ಪುಟ್ಟಬಟ್ಟಲು ತನ್ನೊಳಗೆ ತುಂಬಿಸಿಕೊಳ್ಳುತ್ತದೆ. ಇದು ಯೋನಿಯ ಒಳಗೆ ಸೇರಿ ಗರ್ಭಕಂಠಕ್ಕೆ ಅಂಟಿಕೊಂಡು ಅಲ್ಲಿಯೇ ನಿಲ್ಲುತ್ತದೆ. ಮೊದಲ ಬಾರಿಗೆ ಇದನ್ನು ಹಾಕುವುದು, ತೆಗೆಯುವುದು ತುಸು ಕಷ್ಟ ಅನಿಸಬಹುದು. ಶೈಕಾರ್ಟ್ ವೆಬ್‌ಸೈಟ್‌ನಲ್ಲಿ ಇದನ್ನು ಉಪಯೋಗಿಸುವ ಕುರಿತು ವಿಡಿಯೋದ ತುಣುಕು ಇದೆ. ಇದನ್ನೊಮ್ಮೆ ಗಮನಿಸಿದರೆ ಸಹಾಯವಾಗಬಹುದು.
ಒಮ್ಮೆ ಧರಿಸಿದರೆ ಸುಮಾರು 8 ಗಂಟೆಗಳ ಕಾಲ ಇದು ಮುಟ್ಟಿನ ದಿನದ ರಕ್ತವನ್ನು ಸಂಗ್ರಹಿಸುತ್ತದೆ. ಕೆಲವರಿಗೆ ಅತಿಯಾದ ಋತುಸ್ರಾವವಿರುತ್ತದೆ. ಅಂಥವರಿಗೆ 5-6 ಗಂಟೆಗಳ ಕಾಲ ಇದು ರಕ್ಷಣೆ ನೀಡುತ್ತದೆ. ತುಂಬ ಕಡಿಮೆ ರಕ್ತಸ್ರಾವ ಇರುವವರು 10ರಿಂದ 12 ಗಂಟೆಯವರೆಗೂ ಇದನ್ನು ಉಪಯೋಗಿಸಬಹುದು. ಮತ್ತೆ ಇದನ್ನು ಸ್ವತ್ಛಮಾಡಿ ಮರು ಉಪಯೋಗಿಸಬಹುದು. ಇದನ್ನು ಪದೇ ಪದೇ ಖರೀದಿಸುವ ಅಗತ್ಯವಿಲ್ಲ. ಒಮ್ಮೆ ಕೊಂಡರೆ ಸುಮಾರು ಹತ್ತರಿಂದ ಹದಿನೈದು ವರ್ಷದವರೆಗೆ ಇದನ್ನು ಉಪಯೋಗಿಸಬಹುದಂತೆ.
ಶೀ-ಕಪ್ ಪರಿಸರಸ್ನೇಹಿಯಾಗಿದೆ. ಪದೇ ಪದೇ ಪ್ಯಾಡ್ ಬದಲಾಯಿಸುವ ತಾಪತ್ರಯವಿಲ್ಲ. ಮುಟ್ಟಿನ ದಿನಗಳಲ್ಲಿ ದೈನಂದಿನ ಕೆಲಸಗಳನ್ನು ಯಾವುದೇ ಅಳುಕಿಲ್ಲದೇ ಮಾಡಬಹುದು. ಇದರ ಜತೆಗೆ ಸ್ಯಾನಿಟರಿ ಪ್ಯಾಡ್‌ಗೆ ಹಾಕುವ ದುಡ್ಡು ಕೂಡ ಉಳಿತಾಯವಾಗುತ್ತದೆ. ತಿಂಗಳ ಮುಟ್ಟಿನ ಗಡುವು ಮುಗಿದ ಮೇಲೆ ಇದನ್ನು ಹದವಾದ ಬಿಸಿನೀರಲ್ಲಿ 20 ನಿಮಿಷ ನೆನೆಸಿಟ್ಟು ಆಮೇಲೆ ತೆಗೆದಿಡಬೇಕು. ಇನ್ನು ಮುಂದೆ ಯಾವುದೇ ಸಂಕೋಚವಿಲ್ಲದೇ ಪ್ರಕೃತಿ ಸಹಜವಾದ ಮುಟ್ಟಿನ ದಿನಗಳನ್ನು ಆನಂದಿಸಲು ಶೀಕಪ್ ಸಹಕಾರಿಯಾಗಬಹುದೇನೋ!
– ಪವಿತ್ರಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.