ಹೊತ್ತು ಹೆತ್ತಳಾ ತಾಯಿ
Team Udayavani, Jan 19, 2018, 6:40 AM IST
ಮೈತುಂಬ ನಿಗಿನಿಗಿ ಕೆಂಡಹೂ ಹೊತ್ತು ನಿಂತ ಬೂರುಗದ ಬೆಂಕಿಮರದಡಿಯಲ್ಲೇ ನಿನ್ನೆ ತಾನೇ ಚಿತೆಯಲಿ ಹೊತ್ತಿಯುರಿದು ಇನ್ನಿಲ್ಲವಾಗಿದ್ದಾಳೆ ಅವನ ಅಮ್ಮ. ಮಗನ ಎದೆಯಲ್ಲದು ಸುಡುತ್ತಲೇ ಇದೆ. ಮೂಡುದಿಕ್ಕಿನ ಬಚ್ಚಲೊಲೆಯಲ್ಲಿ ಕೆಂಪಗೆ ಧಗಧಗನೆ ಉರಿಯುತ್ತ ಬೆಳಕು ಉಕ್ಕಿಸುತ್ತಿದೆ ನೇಸರ ಹಂಡೆ. ಆದರೆ ಊದುಕೊಳವೆಯಲ್ಲಿ “ಫೂ’ ಎಂದು ಒಲೆಯೂದುತ್ತ ಮಗನಿಗಾಗಿ ಬಿಸಿನೀರು ಕಾಯಿಸುತ್ತ ಕೇಪಳದಂತೆ ಕೆಂಪಾದ ಕಂಗಳಲ್ಲಿ ಒಲವು ಉಕ್ಕಿಸುತ್ತಿದ್ದ ಅಮ್ಮನಿಂದು ಇಲ್ಲ! ಒಲೆಗೂಡಲ್ಲಿ ಬೆಂಕಿಯುರಿಯುತ್ತಿಲ್ಲ, ಮಾಡಿನ ಚಿಮಣಿಯಲ್ಲಿ ಹೊಗೆಯಲೆಯುತ್ತಿಲ್ಲ. ಮಗನಿಗೆ ಅದನ್ನು ನಂಬಲಾಗುತ್ತಿಲ್ಲ!
ಹಿತ್ತಲಲ್ಲಿ ಚಪ್ಪರ ತುಂಬ ಹರಡಿಕೊಂಡು “ಬಳ್ಳಿಗೆ ಕಾಯಿ ಭಾರವೇ?’ ಎಂದು ನಿಟ್ಟುಸಿರಿಡುತ್ತ ಮೈತುಂಬ ಗಜಗಾತ್ರದ ಬೂದುಕುಂಬಳ ಹೊತ್ತು ಏದುಬ್ಬಸ ಬಿಡುವ ಬಳ್ಳಿಗಳು.
ಬಾಲ್ಯದಲ್ಲಿ ಅದರ ಕೆಳಗೇ ಅಮ್ಮನ ಹಿಂದೆಯೇ ಸೆರಗು ಹೊದ್ದು ಓಡಾಡುತ್ತಿದ್ದ ಈ ಮಗನಾಗ ಅಮ್ಮ ಕೊನೆಯುಸಿರೆಳೆಯುವ ಮುನ್ನ ಚಪ್ಪರಕೆ ಹರವಿದ ಸೀರೆಯೀಗ ಒಣಗಿ ಗಾಳಿತುಟಿಯಲಿ ಪಟಪಟನೆ ಮಾತಾಡುತ್ತಿದೆ. ಮರವೇರಿ ಆಚಿನ ಸುಗಂಧವನ್ನು ಒಡಲೊಳಗೆ ತುಂಬಿಕೊಂಡು ಈಚೆಗೆ ತೂರಿಬಿಡುವ ದುಂಡುಮಲ್ಲಿಗೆ, ರಾತ್ರಿರಾಣಿ ಹೂಬಳ್ಳಿ. ಗಿಡದ ಮೈತುಂಬ ಸೂರ್ಯಕಾಂತಿಯ ಹೂಗಳು. ಹೂಕೊಕ್ಕೆಯ ಮಗನೊಡನೆ ಹೂಹೂ ಸೆರಗಿನ ಅಮ್ಮ, ಹೂವು ದೇವರಿಗೆ. ಅಮ್ಮನೀಗ ಹೂವಂತೆ ದೇವರಪಾದ ಸೇರಿದ್ದಾಳೆ.
ಇನ್ನೇನು ಹಾರಿಯೇ ಬಿಟ್ಟೆವು ಎಂಬಂತೆ ಚಂದದ ಮುತ್ತುಗದ ಕೆಂಪುಹೂಗಳು ಮರದಲಿ ರೆಕ್ಕೆಬಿಚ್ಚಿ ನಿಂತಾಗಲೇ ರೆಕ್ಕೆಬಂದ ಮರಿಹಕ್ಕಿ ಹಾರಿತ್ತು ದೂರ! ಗೂಡುಬಿಟ್ಟ ಮರಿಯನ್ನೇ ಕಾಯುತ್ತ ಎಲೆಯುದುರಿದ ಒಂಟಿ ಬೋಳುಮರವಾಗಿಬಿಟ್ಟಳು ಅಮ್ಮ ! ಆದರೂ ಕೊಂಬೆತುದಿಯಲ್ಲೆ ಮೂತಿಚೂಪು ಮಾಡಿ ಇಣುಕುತ್ತಿದ್ದ ಆಸೆಯ ಒಂಟಿಮೊಗ್ಗು ನಕ್ಕು ಅರಳಿತಲ್ಲ ಒಂದುದಿನ. ಮಗ ಬಂದವನೇ ಶ್ರವಣಕುಮಾರನಾದ. ಮುದಿತಾಯಿಯನ್ನು ಬುಟ್ಟಿಯಲ್ಲಿ ಕೂರಿಸಿ ಹೊತ್ತುಕೊಂಡು ಕಾಲ್ನಡಿಗೆಯಲ್ಲೇ ತೀರ್ಥಯಾತ್ರೆ ಮಾಡಿಸಿದ. ಮತ್ತೆ ಚಿಗುರಿ ಹೂಬಿಟ್ಟು ಖುಶಿ ಹೆಚ್ಚಾಗಿ ಬಾಡಿಹೋದಳವಳು. ಮಗ ಬೇಡವೆಂದು ಅತ್ತರೂ ಅಮ್ಮನಿಗೆ ಕೊನೆಗಾಲ ಹತ್ತಿರವಾಯಿತು. ಅವಳಿಗೆ ಇವನೇ ತಾಯಿಯಾದ. ಆರುವ ಮುನ್ನ ಪ್ರಕಾಶಮಾನವಾಗಿ ಉರಿಯುವ ದೀಪದಂತೆ ಉರಿದು ಬೆಳಕು ನೀಡಿ ಇನ್ನಿಲ್ಲವಾದಳವಳು. ಈಗಷ್ಟೇ ಇದ್ದವಳು ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ. ಅವಳಿಲ್ಲದ ಮನೆಯಲ್ಲಿ ಹಣತೆಯಲ್ಲೂ ಕತ್ತಲೆಯೇ ದೀಪ.
“ಮನುಷ್ಯನ ಬದುಕೆಂದರೆ ಮತ್ತೇನು ಮಗ? ಅಕ್ಕಿಯಲ್ಲಿ ಹುಟ್ಟಿ ಅರೆಕಾಲ ಬಾಳಿ ಸಾಯುವ ಹುಳದಂತೆ!’ ಪಕ್ಕದ ಮನೆ ಅಜ್ಜಿ ವೇದಾಂತ ಮಾತಾಡಿ ಹೋದಳಾದರೂ ಅವನನ್ನು ಅವನೇ ಸಂತೈಸಿಕೊಳ್ಳಬೇಕಲ್ಲ. ಅವರವರ ತಲೆಗೆ ಅವರವರದೇ ಕೈ. ದಿನ ನಿಲ್ಲುವುದೇ? ಹಗಲಿನ ಮೇಲೆ ಇರುಳು, ಇರುಳಿನ ಮೇಲೆ ಹಗಲು ನರಳುತ್ತ ಉರುಳುತ್ತಿದ್ದಂತೆ ನೋಡನೋಡ ಮತ್ತೆ ಚಿಗುರಿಕೊಂಡ. ಈಗಂತೂ ಅಜ್ಜಿಯ ತಲೆತುದಿ ಕಂಡರೆ ಸಾಕು ಕಿಸಬಾಯಿದಾಸನಂತೆ ಹಾಡಿದ್ದನ್ನೇ ಹಾಡುತ್ತಾನೆ,
“”ಅಮ್ಮನನ್ನು ತಲೆಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದೆ, ಕೊನೆಗಾಲದಲ್ಲಿ ಮಗುವಿನಂತೆ ಆರೈಕೆ ಮಾಡಿದೆ, ಋಣ ತೀರಿಸಿದೆ, ನಾನೀಗ ನಿಶ್ಚಿಂತ!” ಎಂದು.
ಇದನ್ನೇ ಕೇಳಿಕೇಳಿ ಅಜ್ಜಿಯ ಕಿವಿಹೂ ಬಾಡಿ ಕೊನೆಗೊಮ್ಮೆ ಅಂದೇಬಿಟ್ಟಳು, “”ಮಗಾ, ನೀನು ಅಮ್ಮನನ್ನು ತಲೆಯಲ್ಲಿ ಹೊತ್ತು ಯಾತ್ರೆ ಮಾಡಿಸಿದೆಯಲ್ಲ? ಮಳೆ ಧೋ ಎಂದು ಅಳುವಾಗ, ಗಾಳಿ ಹೋ ಎಂದು ನಗುವಾಗ, ನೇಸರ ನೆತ್ತಿಗೇರಿ ಉರಿಯುವಾಗ, ಚಳಿ ಮೈಕೊರೆಯುವಾಗ, ಕಾಯಿಲೆಕಸಾಲೆ ಕಾಡಿದಾಗ ಏನು ಮಾಡುತ್ತಿದ್ದೆ?”
“”ಮರದಡಿಯಲ್ಲೋ, ಮಾಡಿನಡಿಯಲ್ಲೋ ಆಶ್ರಯ ಪಡೆಯುತ್ತಿದ್ದೆ ಅಜ್ಜೀ!”
“”ಅಮ್ಮನನ್ನು ಹೊತ್ತುಕೊಂಡೇ ಇರುತ್ತಿದ್ದೆಯ ಮಗ?”
“”ಎಲ್ಲಾದರೂ ಉಂಟೇ ಅಜ್ಜೀ? ಮರವೇ? ಮನುಷ್ಯನಲ್ಲವೇ? ಕೆಳಗಿಡುತ್ತಿದ್ದೆ!”
“”ನಿನ್ನಮ್ಮ ನಿನ್ನನ್ನು ಎಂತಹ ಕಷ್ಟಕಾಲದಲ್ಲೂ ಹೊಟ್ಟೆಯಿಂದೆತ್ತಿ ಪಕ್ಕಕ್ಕಿಡದೆಯೇ ಒಂಬತ್ತು ತಿಂಗಳು ಹೊತ್ತಿದ್ದಳಲ್ಲ? ಬೇನೆತಿಂದು ಹೆತ್ತಕ್ಷಣದಿಂದ ನಿನ್ನನ್ನು ಕೆಳಗಿಟ್ಟರೆ ಇರುವೆ ಕೊಂಡ್ಹೊàದೀತು, ಮೇಲಿಟ್ಟರೆ ಕಾಗೆ ಕೊಂಡ್ಹೊàದೀತು ಎಂಬಂತೆ ಕಣ್ಣುರೆಪ್ಪೆಯಂತೆ ನೋಡಿಕೊಂಡಳಲ್ಲ? ಅಮ್ಮನ ಋಣ ತೀರಿಸಲಾದೀತೇ?”
“”ಖಂಡಿತ ಇಲ್ಲ ಅಜ್ಜೀ! ಏಳೇಳು ಜನುಮಕ್ಕೂ ತೀರಿಸಲಾರೆ” ಎಂದ ಮಗ ಒಳಗಣ್ಣು ತೆರೆದುಕೊಂಡು!
ಅವಳು ಹತ್ತುಮಕ್ಕಳ ತಾಯಿ. ಆರು ಗಂಡು, ನಾಲ್ಕು ಹೆಣ್ಣುಮಕ್ಕಳು. ಬಟ್ಟಲಿಗೂ ಗತಿಯಿಲ್ಲ. ಇವಳು ಹೆಣ್ಣುಮಗುವಿಗಾಗಿ ಹಂಬಲಿಸಿ ಹಂಬಲಿಸಿ ನಾಕು ಗಂಡುಮಕ್ಕಳನ್ನೇ ಹೆತ್ತತಾಯಿ, ಸಿರಿಯನ್ನೇ ಹಾಸಿ ಹೊದ್ದವಳು. ಕೇಳಿದರೆ ನನಗೊಂದು ಹೆಣ್ಣುಗೂಸನ್ನು ಕೊಟ್ಟಾಳು ಎಂಬ ಆಸೆಯಲ್ಲಿ ಇವಳು ಬಂದು ನೋಡುತ್ತಾಳೆ, ನೆಲದಲ್ಲಿ ಬಟ್ಟಲುಕಂಗಳ ಹತೂ ¤ಮಕ್ಕಳನ್ನು ಸಾಲಾಗಿ ಕೂರಿಸಿ ಅವರ ಮುಂದೆ ಪುಟ್ಟಪುಟ್ಟ ಹತ್ತು ಗಂಜಿಗುಂಡಿಗಳಲ್ಲಿ ನೀರುನೀರು ಕುಚ್ಚಲಕ್ಕಿ ಗಂಜಿ ಬಡಿಸಿದ್ದಾಳವಳು! ಮಕ್ಕಳೆಲ್ಲ ಉಂಡೆದ್ದ ಮೇಲೆ, ಅವು ತಿಂದು ಬಿಟ್ಟದ್ದನ್ನು ನೆಕ್ಕುತ್ತ ನೆಕ್ಕುತ್ತ ಹತ್ತು ಮುಗಿದೊಡನೆ, “”ಇನ್ನೊಂದು ಮಗುವಿದ್ದರೆ ನನ್ನ ಹೊಟ್ಟೆ ಒಂಚೂರಾದರೂ ತುಂಬುತ್ತಿತ್ತಲ್ಲ ಶಿವನೇ!” ಎಂದಳಾ ಮಹಾತಾಯಿ.
ಮುನಿರೂಪದಲ್ಲಿ ತ್ರಿಮೂರ್ತಿಗಳು ಬಂದು ದಿಗಂಬರಳಾಗಿ ಊಟಬಡಿಸೆಂದು ಮಹಾಸತಿ ಅನಸೂಯೆಯನ್ನು ಕೇಳಿಕೊಂಡಾಗ ಅತ್ರಿಮುನಿಯನ್ನು ನೆನೆದು ತ್ರಿಮೂರ್ತಿಗಳನ್ನು ಅಂಬೆಹರಿಯುವ ಮಗುವಾಗಿಸಿ ತುತ್ತುಣಿಸಿ ಮಹಾತಾಯಿಯಾದಳಂತೆ. ರಾಜಕುಮಾರನೊಬ್ಬ ತನ್ನನ್ನು ಹೆತ್ತವಳಾರೆಂದು ಪತ್ತೆಹಚ್ಚಲು ಮುತ್ತೆ„ದೆಯರನ್ನು ಕರೆದು ಊಟದೆಲೆಗೆ ತುಪ್ಪಬಡಿಸತೊಡಗಿದ. ಮಗನ ತುಟಿಗೆ ಹೆತ್ತಮ್ಮನೆದೆಯಿಂದ ಹಾಲು ಸಟ್ಟ ಸಿಡಿಯಿತಂತೆ! “ಅಮ್ಮನ ಮನಸ್ಸು ತೆಂಗಿನಕಾಯಿ ತಿರುಳು, ಮಗುವಿನ ಮನಸ್ಸು ಕರಟ’. “ಬಾನನ್ನು ಅಳೆಯಬಹುದು, ಅಮ್ಮನ ಪ್ರೀತಿಗೆ ಅಳತೆಗೋಲಿಲ್ಲ’- ಗಾದೆಗಳು ಹುಟ್ಟಿವೆಯಿಲ್ಲಿ. “ಕಣ್ಣೆಂಜಲು ಕಾಡಿಗೆ, ಬಾಯೆಂಜಲು ವೀಳ್ಯವ, ಯಾರೆಂಜಲುಂಡು ಬೆಳೆದೇನ ನನ ಮನವ ತಾಯೆಂಜಲುಂಡು ಬೆಳೆದೇನ’ ತ್ರಿಪದಿಯಲ್ಲಿ ಅಮ್ಮನ ಕಾಡಿಗೆಯನ್ನು ಮುಖತುಂಬ ಬಳಿದುಕೊಂಡು, ತಟ್ಟೆಯನ್ನಕ್ಕಾಗಿ, ಬಾಯಿಯ ವೀಳ್ಯದೆಲೆಗಾಗಿ ಕಾಡುತ್ತದೆ ಮಗು. ಮಗುವಿನ ಜೀವನವೇ ಅಮ್ಮ ಕೊಟ್ಟ ಎಂಜಲು ಎನ್ನುತ್ತಾರೆ ಜನಪದರು.
– ಕಾತ್ಯಾಯಿನಿ ಕುಂಜಿಬೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.