ಚುಮುಚುಮು ಚಳಿಗೆ ಬಿಸಿ ಬಿಸಿ ಸೂಪ್
Team Udayavani, Dec 1, 2017, 1:29 PM IST
ಚುಮು ಚುಮು ಚಳಿಗೆ ಬಿಸಿಬಿಸಿಯಾದ ಸೂಪ್ ಸೇವಿಸಿದರೆ ಪುಷ್ಟಿಕರ ಹಾಗೂ ಶಕ್ತಿದಾಯಕ. ಊಟದ ಮೊದಲು ಸೂಪ್ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯ ವೃದ್ಧಿಯಾಗುತ್ತದೆ. ಇಲ್ಲಿವೆ ಬಾಯಿಗೆ ರುಚಿ ನೀಡುವ ಕೆಲವು ಆರೋಗ್ಯಕರ ಸೂಪ್‌ಗ್ಳು.
ಪಾಲಕ್ ಸೂಪ್
ಬೇಕಾಗುವ ಸಾಮಗ್ರಿ: ಪಾಲಕ್ ಸೊಪ್ಪು – 1 ಕಟ್ಟು , ನೀರುಳ್ಳಿ- 1, ಕಾರ್ನ್ಪ್ಲೋರ್- 2 ಚಮಚ, ಹಸಿಮೆಣಸಿನ ಕಾಯಿ- 2, ಲವಂಗ- 3, ಚಕ್ಕೆ – 2 ತುಂಡು, ರುಚಿಗೆ ತಕ್ಕಷ್ಟು ಉಪ್ಪು , ತುಪ್ಪ- 2 ಚಮಚ, ಸಕ್ಕರೆ- 1 ಚಮಚ.
ತಯಾರಿಸುವ ವಿಧಾನ: ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಬಾಣಲೆಗೆ ತುಪ್ಪಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ, ಹಸಿಮೆಣಸಿನ ಚೂರು ಹಾಕಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಬೇಯಿಸಿದ ಪಾಲಕ್ ಸೊಪ್ಪು ಹಾಗೂ ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ಈ ಮಿಶ್ರಣಕ್ಕೆ ಕಾರ್ನ್ಪ್ಲೋರ್ ಸೇರಿಸಿ, ಸ್ವಲ್ಪ ನೀರು ಹಾಗೂ ಉಪ್ಪು$ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಕಿ ಒಲೆಯ ಮೇಲಿಟ್ಟು ಕುದಿಸಿರಿ. ಈಗ ಬಿಸಿ ಬಿಸಿ ಸೂಪ್ ಸವಿಯಲು ತಯಾರು. ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಅಂಶಗಳಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪುದೀನ ಸೂಪ್
ಬೇಕಾಗುವ ಸಾಮಗ್ರಿ: ಪುದೀನ ಎಲೆ- 10, ಕರಿಮೆಣಸಿನ ಪುಡಿ- 1/2 ಚಮಚ, ಬೆಳ್ಳುಳ್ಳಿ ಎಸಳು- 4, ಕೊತ್ತಂಬರಿ ಸೊಪ್ಪು ಕಡ್ಡಿ ಸಮೇತ- 10, ಬೆಣ್ಣೆ – 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಹಾಲಿನ ಕ್ರೀಮ್- 1 ಚಮಚ.
ತಯಾರಿಸುವ ವಿಧಾನ: ಪುದೀನ, ಕೊತ್ತಂಬರಿಸೊಪ್ಪು ಚೆನ್ನಾಗಿ ತೊಳೆದು, ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ರುಬ್ಬಿದ ಮಿಶ್ರಣ ಹಾಕಿ. ಬಳಿಕ ಬೇಕಾದಷ್ಟು ನೀರು ಸೇರಿಸಿಕೊಂಡು ಕರಿಮೆಣಸಿನ ಪುಡಿ, ಉಪ್ಪು ಹಾಕಿ ಕುದಿಸಿರಿ. ನಂತರ ಬೌಲ್‌ಗೆ ಹಾಕಿ ಅದರ ಮೇಲೆ ಕ್ರೀಮ್‌ನಿಂದ ಅಲಂಕರಿಸಿದರೆ ಬಿಸಿ ಬಿಸಿ ಸೂಪ್ ಸವಿಯಲು ಸಿದ್ಧ.
ಕ್ಯಾರೆಟ್ ಸೂಪ್
ಬೇಕಾಗುವ ಸಾಮಗ್ರಿ: ಕ್ಯಾರೆಟ್ (ಹೆಚ್ಚಿಕೊಂಡಿದ್ದು)- 1 ಕಪ್, ಶುಂಠಿ- 1 ತುಂಡು, ಈರುಳ್ಳಿ- 1, ಎಣ್ಣೆ- 1 ಚಮಚ, ಕರಿಮೆಣಸಿನ ಪುಡಿ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಕ್ಯಾರೆಟ್ ಮತ್ತು ಶುಂಠಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ ಈರುಳ್ಳಿ ಹುರಿಯಿರಿ. ಇದಕ್ಕೆ ಹೆಚ್ಚಿ ಕೊಂಡ ಕ್ಯಾರೆಟ್ ಮತ್ತು ಶುಂಠಿಯನ್ನು ಹಾಕಿ ಉಪ್ಪು$ಬೆರೆಸಿ, ನಂತರ ಮುಚ್ಚಳ ಮುಚ್ಚಿ ಎರಡು ವಿಷಲ್ ಕೂಗಿಸಿ. ಇದು ಆರಿದ ನಂತರ, ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಈ ಮಿಶ್ರಣಕ್ಕೆ ಅರ್ಧ ಕಪ್ ನೀರು ಸೇರಿಸಿ, ಕರಿಮೆಣಸಿನ ಪುಡಿ ಹಾಕಿ ಬಿಸಿ ಇರುವಾಗಲೇ ಕುಡಿಯಿರಿ.
ಟೊಮೆಟೋ ಸೂಪ್
ಬೇಕಾಗುವ ಸಾಮಗ್ರಿ: ಟೊಮೆಟೊ- 8, ಜೀರಿಗೆ- 2 ಚಮಚ, ಕರಿಮೆಣಸಿನ ಪುಡಿ- 1 ಚಮಚ, ಬೆಳ್ಳುಳ್ಳಿ ಎಸಳು- 4, ದಾಲಿcನಿ ಎಲೆ, ಸಕ್ಕರೆ- 1 ಚಮಚ, ಬೆಣ್ಣೆ- 1 ಚಮಚ, ಜೋಳದ ಪುಡಿ- 2 ಚಮಚ, ರುಚಿಗೆ ಬೇಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ.
ತಯಾರಿಸುವ ವಿಧಾನ: ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ತುಪ್ಪದೊಂದಿಗೆ ಬೇಯಿಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಜೀರಿಗೆಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿರಿ, ಬಳಿಕ ಸೋಸಿಕೊಳ್ಳಬೇಕು.ಇದಕ್ಕೆ ಸಕ್ಕರೆ, ಉಪ್ಪು$, ಕರಿಮೆಣಸಿನ ಪುಡಿ, ಜೋಳದ ಪುಡಿ, ದಾಲಿcàನಿ ಎಲೆ, ತುಪ್ಪಹಾಕಿ ಐದು ನಿಮಿಷ ಚೆನ್ನಾಗಿ ಕುದಿಸಿದರೆ ಸೂಪ್ ರೆಡಿ.
ರೈಸ್ ಸೂಪ್
ಬೇಕಾಗುವ ಸಾಮಗ್ರಿ: ಚೆನ್ನಾಗಿ ಮಸೆದ ಬೆಳ್ತಿಗೆ ಅನ್ನ- 4 ಚಮಚ, ಕ್ಯಾರೆಟ್‌ತುರಿ- 2 ಚಮಚ, ನೀರುಳ್ಳಿ ಚೂರು- 3 ಚಮಚ, ಕಾರ್ನ್ಪ್ಲೋರ್- 1 ಚಮಚ, ಕಾಳುಮೆಣಿಸಿನ ಪುಡಿ- 1/2 ಚಮಚ, ನಿಂಬೆರಸ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ಕ್ಯಾರೆಟ್ ಮತ್ತು ಈರುಳ್ಳಿ ಚೂರು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸ್ವಲ್ಪ ನೀರಲ್ಲಿ ಕಾರ್ನ್ಪ್ಲೋರ್ ಹಾಕಿ ಕರಗಿಸಿ ಈ ಮಿಶ್ರಣಕ್ಕೆ ಸೇರಿಸಿ. ಇದನ್ನು ಒಲೆಯ ಮೇಲಿಟ್ಟು ಕುದಿಸಿ. ಕುದಿಯಲು ಪ್ರಾರಂಭವಾದಾಗ ಮಸೆದ ಬೆಳ್ತಿಗೆ ಅನ್ನ, ಕರಿಮೆಣಸು ಪುಡಿ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಕೆಳಗಿಳಿಸಿ. ನಂತರ ಬೌಲ್‌ಗೆ ಹಾಕಿ ಸವಿಯಿರಿ.
ಸ್ವಾತಿ