ಮನೆ ಸ್ವಚ್ಛವಾದರೆ ಪರಿಸರ ಸ್ವಚ್ಛ
Team Udayavani, Nov 8, 2019, 4:06 AM IST
ಮಕ್ಕಳ ವಿದ್ಯಾಭ್ಯಾಸ, ಅವರಿಗೆ ಕೆಲಸ, ಮದುವೆ ಮುಂತಾದ ಜವಾಬ್ದಾರಿಗಳೆಲ್ಲಾ ಮುಗಿದು, “ರಾಮಾ ಕೃಷ್ಣ’ ಅಂತ ನಮ್ಮ ಪಾಡಿಗೆ ಇದ್ದ ನಮಗೆ ಇದ್ದಕ್ಕಿದ್ದಂತೆ ಒಂದು ಭಡ್ತಿ ಸಿಕ್ಕಿತ್ತು. ಅದೂ ಮಗನಿಂದ. “ಏನಪ್ಪಾ , ಈ ಪ್ರಾಯದಲ್ಲಿ ಇವರಿಗೆಂಥ ಭಡ್ತಿ’ ಎಂದು ಕನ್‌ಫ್ಯೂಸ್ ಆಗ್ತಿದ್ದೀರಾ! ಹೇಳ್ತೀನಿ ಕೇಳಿ. ನನ್ನ ಮೊಮ್ಮಗಳನ್ನು ನೋಡಿಕೊಳ್ಳುವ ಅಂದರೆ ಕೇರ್ ಟೇಕರ್ ಆಗಿ ಪ್ರಮೋಷನ್ ಸಿಕ್ಕಿದ್ದು. ಅದು ಸಿಕ್ಕಿದ ನಂತರ ನಮ್ಮ ಪ್ರಯಾಣ ಬೆಂಗಳೂರಿನತ್ತ ನಿಶ್ಚಿತವಾಗಿತ್ತು. ಹಳ್ಳಿಯ ಸ್ವಚ್ಛ ಹಸಿರು ಪರಿಸರ, ನೆರೆಹೊರೆಯವರ ಆತ್ಮೀಯತೆ, ಒಕ್ಕಲಾಳುಗಳು ನಮಗೆ ನೀಡುತ್ತಿದ್ದ ಗೌರವ, ಇವೆಲ್ಲವನ್ನೂ ಬಿಟ್ಟು ಬೆಂಗಳೂರಿಗೆ ಪ್ರಯಾಣ ಬೆಳೆಸಿದಾಗ ಕಣ್ಣಂಚು ತೇವವಾಗಿತ್ತು.
ಬೆಂಗಳೂರು ಸೇರಿ, ಕೇರ್ ಟೇಕರ್ ಕೆಲಸಕ್ಕೆ ಸೇರಿ, ಒಂದೆರಡು ದಿನಗಳಾಗಿದ್ದವಷ್ಟೇ. ಮಗನ ವಾಸ್ತವ್ಯವಿದ್ದುದು ಒಂದು ಅಪಾರ್ಟ್ ಮೆಂಟ್‌ನಲ್ಲಿ. ಒಂದು ದಿನ ಬೆಳ್ಳಂಬೆಳಿಗ್ಗೆ ಶಿಳ್ಳೆಯ ಕರ್ಕಶವಾದ ಶಬ್ದ ಕೇಳಿಸಿತು. ಇದೇನಪ್ಪಾ ಅಂತ ಆಶ್ಚರ್ಯದಿಂದ ಸೊಸೆಯ ಕಡೆ ನೋಡಿದಾಗ “”ಏನೂ ಇಲ್ಲ ಅತ್ತೆ, ಕಸದ ಗಾಡಿ ಬಂದಿದೆ. ಎಲ್ಲರೂ ಕಸ ತಗೊಂಡು ಹೋಗಿ, ಅದಕ್ಕೆ ಹಾಕಬೇಕು. ಎಲ್ಲರ ಮನೆಯಲ್ಲೂ ಎರಡು ಡಬ್ಬಿಗಳಿರುತ್ತವೆ. ಒಂದರಲ್ಲಿ ಹಸಿ, ಇನ್ನೊಂದರಲ್ಲಿ ಒಣ ಕಸವನ್ನು ಹಾಕ ಬೇಕು. ಎರಡನ್ನೂ ಮಿಶ್ರ ಮಾಡಿದರೆ ಬಿ.ಬಿ.ಎಂ.ಪಿ.ಯವರು ದಂಡ ಹಾಕುತ್ತಾರಂತೆ ಎಂದು ಸೂಕ್ಷ್ಮವಾಗಿ ಕಸದ ಪರಿಚಯ ಮಾಡಿಸಿ, ಕಸ ತೆಗೆದುಕೊಂಡು ಹೋಗಿ, ಕೊಟ್ಟು, ಹಾಗೇ ಕೆಲಸಕ್ಕೆ ಹೊರಟು ಬಿಟ್ಟಳು.
ಮಗು ಏಳುವಷ್ಟರಲ್ಲಿ ಉಳಿದ ಕೆಲಸವನ್ನು ಬೇಗ ಮುಗಿಸಿ ಬಿಡಬೇಕೆಂಬ ತರಾತುರಿಯಲ್ಲಿದ್ದೆ. ಆಗ ಬಾಗಿಲಿನ ಕರೆಗಂಟೆ ಶಬ್ದ ಮಾಡಿತು. ಬಾಗಿಲು ತೆರೆದು ನೋಡಿದಾಗ ಪಕ್ಕದ ಮನೆಯವಳೆಂದು ಕಾಣುತ್ತದೆ, “”ಆಂಟೀ ಕಸದ ಗಾಡಿಯವನು ಬಂದಿದ್ದಾನೆ. ನೀವು ಕಸ ಹಾಕಿದ ಹಾಗೆ ಕಾಣಲಿಲ್ಲ. ಅದಕ್ಕೆ ಹೇಳಿ ಹೋಗೋಣ ಅಂತ ಬಂದೆ”.
“”ಇಲ್ಲಮ್ಮ, ಸೊಸೆನೇ ಕಸ ಹಾಕಿ ಹೋದಳು. ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್” ಅಂತ ಹೇಳಿ ಬಾಗಿಲು ಭದ್ರಪಡಿಸಿ ಬಂದೆ. ಒಳಗೆ ಬರುತ್ತಿದ್ದಂತೆಯೇ ಇನ್ಯಾರೋ ಬಾಗಿಲು ಬಡಿದರು. ಮತ್ತೆ ಹೋಗಿ ಬಾಗಿಲು ತೆರೆದಾಗ, ಎದುರು ಮನೆಯವಳಂತೆ, “”ಆಂಟೀ, ಕಸದ ಗಾಡಿ ಬಂದಿದೆ. ನೀವು ಕಸ ಹಾಕಿಲ್ವ?”
“”ಇಲ್ಲಮ್ಮ, ಹಾಕಿ ಆಯ್ತು, ಥ್ಯಾಂಕ್ಸ್” ಅಂತ ಹೇಳಿ ಕಳುಹಿಸಿದೆ. ಇಷ್ಟರಲ್ಲಾಗಲೇ ಕಸದ ಗಾಡಿಯವನು ನನ್ನ ದೃಷ್ಟಿಯಲ್ಲಿ ದೊಡ್ಡ ಹೀರೋ ಆಗಿ ಬಿಟ್ಟಿದ್ದ. ಇವರ ಗಲಾಟೆಯಲ್ಲಿ ಮಲಗಿದ್ದ ಮಗು ಎದ್ದು ಅಳಲು ಶುರು ಮಾಡಿತು. ಮಗುವನ್ನು ಮಲಗಿಸುತ್ತಿರುವಾಗ, ಮತ್ತೂಮ್ಮೆ ಕಾಲಿಂಗ್ ಬೆಲ್ ಸದ್ದಾಯಿತು. ಅದರ ಅರಚಾಟ ನಿಲ್ಲದಿದ್ದಾಗ ಗೊಣಗುತ್ತಲೇ ಬಂದು ಬಾಗಿಲು ತೆರೆದೆ.
ಈಗ ಬಂದಿದ್ದು ಎಡಬದಿಯ ಮನೆಯ ಹೆಂಗಸಂತೆ. “”ಆಂಟೀ, ನಿಮ್ಮ ಸೊಸೆ ಇಲ್ವ?”
“” ಇಲ್ಲಮ್ಮ, ಯಾಕೆ? ನಾನು ನಿಮ್ಮ ಸೊಸೆ ಫ್ರೆಂಡ್ಸ್ ಅವರು ಹೊರಟು ಹೋದರಾ ಆಂಟೀ ನಿಮ್ಮಿಂದ ನನಗೊಂದು ಹೆಲ್ಪ್ ಆಗ್ಬೇಕಿತ್ತಲ್ಲಾ” “”ಏನು ಹೇಳಮ್ಮಾ” ಕೇಳಿದೆ. “”ಆಂಟಿ, ನಾನು ಕಸ ತಗೊಂಡು ಹೋಗುವಷ್ಟರಲ್ಲಿ ಗಾಡಿ ಹೊರಟುಹೋಗಿತ್ತು. ಅವನು ಪುನಃ ಬರೋದು ಎರಡು ದಿನಗಳ ಬಳಿಕವೇ. ನಾವು ಇವತ್ತು ಊರಿಗೆ ಹೋಗ್ತಾ ಇದ್ದೇವೆ. ಮಕ್ಕಳಿಗೆ ರಜೆ ಮುಗಿದ ಮೇಲೆ ಬರುವುದು. ಹದಿನೈದು ದಿನಗಳಾಗಬಹುದು. ಅಷ್ಟರ ತನಕ ಇದನ್ನು ಮನೇಲಿ ಇಟ್ಟುಕೊಳ್ಳಬೇಕಲ್ವ. ನಿಮ್ಮ ಮನೆ ಹಿಂದಿನ ಬಾಲ್ಕನಿಯಲ್ಲಿ ಇಟ್ಟು ಹೋಗ್ತಿನಿ. ಕಸ ಬಂದರೆ ಹಾಕಿ ಬಿಡ್ತೀರಾ ಆಂಟಿ”.
ನನಗೆ ಇದು ಬಿಸಿ ತುಪ್ಪವಾಗಿತ್ತು. ಸೊಸೆ ಇದ್ದಿದ್ರೆ ಇಟ್ಕೊಳ್ತಿದ್ದಳ್ಳೋ ಏನೋ, ನಾನು ಬೇಡ ಆಂದುಬಿಟ್ರೆ ಸರಿಯಾಗುವುದಿಲ್ಲ ಅಂತ ಬಾಲ್ಕನಿ ಯಲ್ಲಿ ಇಡಲು ಹೇಳಿದೆ. ಅಂತೂಇಂತೂ ಈ ಕಸದ ರಾಮಾಯಣ ಮುಗೀತಲ್ಲ ಅಂತ ಒಳಗೆ ಬಂದು ಕೆಲಸದಲ್ಲಿ ತೊಡಗಿಕೊಂಡೆ. ಸಾಯಂಕಾಲ ಮಗ ಬಂದವನೇ, “”ಅಮ್ಮ, ಇದ್ಯಾವುದು ಈ ಕಸದ ಡಬ್ಬಿ. ಇವತ್ತು ಕಸ ಹಾಕಲಿಲ್ವಾ?” ಅಂತ ಕೇಳಿದ.
“”ಇಲ್ಲ ಕಣೋ, ಇದು ನಮ್ಮದಲ್ಲ. ಪಕ್ಕದ ಮನೆಯವರದ್ದು” ಅಂತ ಎಲ್ಲಾ ವರದಿ ಒಪ್ಪಿಸಿದೆ. ಅವನಿಗೆ ಒಮ್ಮೆಲೆ ಕೋಪ ಬಂದು, “”ನಮ್ಮದೇ ನಮಗೆ ಜಾಸ್ತಿಯಾಗಿದೆ. ಇವರದ್ದು ಬೇರೆ ಈ ತಾಪತ್ರಯ. ಇನ್ಮೆಲೆ ಇಂಥದ್ದನ್ನೆಲ್ಲಾ ಒಪ್ಕೋಬೇಡಿ” ಅಂತ ನನಗೆ ಬೈದು ಬಿಟ್ಟ. ನನಗ್ಯಾಕೆ ಬೇಕಿತ್ತಪ್ಪ ಈ ಉಸಾಬರಿ ಅಂತ ಅನ್ನಿಸ್ತು. ನಮ್ಮ ಹಳ್ಳಿಯಲ್ಲಿ ಹೀಗೆಲ್ಲಾ ಇರಲೇ ಇಲ್ಲ. ಹಸಿ ಕಸವನ್ನು ಗಿಡದ ಬುಡಕ್ಕೆ ಹಾಕಿ, ಒಣ ಕಸವನ್ನು ಒಟ್ಟು ಮಾಡಿ ಬೆಂಕಿ ಹಚ್ಚಿ ಬಿಡುತ್ತಿದ್ದೆವು.
ಅಂದು ಶನಿವಾರ. ಮಗ, ಸೊಸೆ ಇಬ್ಬರೂ ಮನೆಯಲ್ಲಿದ್ದರು. ಹಾಗಾಗಿ, ನಾವಿಬ್ಬರೂ ಹೊರಗಡೆ ತಿರುಗಾಡಲು ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಮೂಗಿಗೆ ಗಬ್ಬೆಂದು ವಾಸನೆ ಹೊಡೆಯಿತು. ಪಕ್ಕಕ್ಕೆ ತಿರುಗಿ ನೋಡಿದರೆ ಕಸದ ರಾಶಿ. ನಾವು ನೋಡುತ್ತಿದ್ದಂತೆಯೇ ಯಾರೋ ಸ್ಕೂಟರ್‌ನಲ್ಲಿ ಬಂದು ಒಂದು ಕಸದ ಕವರನ್ನು “ರೊಂಯ್’ ಎಂದು ರಾಶಿಗೆ ಬಿಸಾಡಿ ಹೋದರು. ಮಳೆಗಾಲ ಬೇರೆ. ಕಸವೆಲ್ಲಾ ಕೊಳೆತು ನಾರುತ್ತಿತ್ತು. ನಾಯಿಗಳು ಅದನ್ನು ತಿನ್ನಲು ಒಂದನ್ನೊಂದು ಅಟ್ಟಾಡಿಸಿಕೊಂಡು ಕಚ್ಚಾಡುತ್ತಿದ್ದವು. ಕವರನ್ನು ಎತ್ತಿಕೊಂಡು ಹೋಗಿ ಕಿತ್ತೂ, ಕಿತ್ತು ತಿನ್ನುತ್ತಿದ್ದವು. ಕೊಳೆತ ತಿಂಡಿಗಾಗಿ ಹಸುಗಳ ಕಾದಾಟ, ಹಕ್ಕಿಗಳ ಕಿರುಚಾಟ ಇವೆಲ್ಲವನ್ನೂ ನೋಡಿ ನಮ್ಮ ಹಳ್ಳಿಯೇ ವಾಸಿ ಎಂದು ಅನಿಸದೆ ಇರಲಿಲ್ಲ.
ಎಷ್ಟು ದೂರ ಹೋದರೂ ಇಂಥ ರಾಶಿಗಳೇ ಸ್ವಾಗತ ನೀಡುತ್ತಿದ್ದವು. ದೇವರ ಫೋಟೋಗಳನ್ನು ಇಟ್ಟು, ಇಲ್ಲಿ ಕಸ ಬಿಸಾಡಬಾರದು ಅಂತ ಬರೆದಿದ್ದರೂ ಯಾರಿಗೂ ಅದರ ಕ್ಯಾರೇ ಇರಲಿಲ್ಲ. ಕಸದ ಗಾಡಿಯವರು ಕೆಲವು ವೇಳೆ ವಾರಗಟ್ಟಲೆ ಬಾರದಿದ್ದರೆ ಅವರಾದರೂ ಏನು ಮಾಡಬೇಕು ಹೇಳಿ. ಕೆಲವು ಕಡೆ ಕಸದ ರಾಶಿ, ಮತ್ತೆ ಕೆಲವೆಡೆ ಕಸದ ಬೆಟ್ಟ, ಮತ್ತೂಂದೆಡೆ ಕಸದ ಪರ್ವತ ಸೃಷ್ಟಿಯಾಗಿದ್ದರೆ, ಇನ್ನೊಂದು ಕಡೆ ಕಸದಿಂದ ಬೇಲಿಯೇ ನಿರ್ಮಾಣವಾಗಿತ್ತು. ದೇವರೇ, ಈ ಸಮಸ್ಯೆಯನ್ನು ಹೇಗೆ ಪಾರು ಮಾಡುತ್ತೀಯಪ್ಪ ಅಂತ ಅಂದುಕೊಂಡೆ.
ನಗರಪಾಲಿಕೆಯವರು ಈ ಸಮಸ್ಯೆಯ ನಿವಾರಣೆಗೆ ಅನೇಕ ಕಾನೂನುಗಳನ್ನು ರೂಪಿಸಿದ್ದಾರಂತೆ. ಒಂದು ದಂಡ, ಎರಡನೆಯದು ಪಾಲಿಥೀನ್ ಕವರುಗಳ ನಿಷೇಧ. ಏನೇ ಆದರೂ ಜನ ಈ ನಿಯಮಗಳಿಗೆ ಸ್ಪಂದಿಸುತ್ತಲೇ ಇಲ್ಲ. ನಮಗೆ ಮುಂಚಿನಿಂದಲೂ ಹೊರಗೆ ಹೋಗುವಾಗ ಒಂದು ಚೀಲ ಹಿಡಿದುಕೊಂಡು ಹೋಗುವ ರೂಢಿ. ಹೂ ಮಾರುವವನ ಹತ್ತಿರ ಹೂ ಖರೀದಿಸುತ್ತಿದ್ದೆ. ಆಗ ಒಬ್ಬಳು ಬಂದು ಹೂವು ಕೇಳಿದಳು. “”ಚೀಲ ಇದೆಯಾ?”. “”ಇಲ್ಲಪ್ಪಾ, ಒಂದು ಕವರಿನಲ್ಲಿ ಹಾಕಿಕೊಡು” ಎಂದಳು.
“”ಇಲ್ಲ ತಾಯಿ, ಪಾಲಿಥೀನ್ ಚೀಲ ಉಪಯೋಗಿಸಿದರೆ ದಂಡ ಹಾಕುತ್ತಾರೆ”.
“”ಹಾಗಾದರೆ ಬೇಡ ಬಿಡಪ್ಪಾ” ಅಂತ ಆಕೆ ಹೊರಡಲನುವಾದಾಗ ಅವನು ಆಚೆ ಈಚೆ ನೋಡಿ, ಮೆಲ್ಲನೆ ಒಂದು ಕವರನ್ನು ತೆಗೆದು, ಹೂ ಹಾಕಿ ಕೊಟ್ಟ. ಇಂಥ ಮಾರುವವರು, ಕೊಳ್ಳುವವರು ಇರುವವರೆಗೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದೆಯೇ?
ಹೇಗಾದರೂ ಮಾಡಿ ಈ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಲೇಬೇಕೆಂದು ಸರ್ಕಾರ ಪಣತೊಟ್ಟಿದೆ. ಗಾರ್ಡನ್ ಸಿಟಿಯನ್ನು ಮತ್ತೆ ಅದೇ ಸ್ಥಿತಿಗೆ ತರಬೇಕೆಂದು ಪ್ರಯತ್ನಿಸುತ್ತಿದೆ. ಹಾಗಾಗಿ, ಕಸಾಸುರನ ಸಂಹಾರಕ್ಕಾಗಿ ಹರಸಾಹಸ ಮಾಡುತ್ತಿದೆ. ಆದರೆ ರಕ್ತ ಬೀಜಾಸುರನ ವಂಶದಂತೆ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಲೇ ಇ¨ªಾನೆ. ಯಾವತ್ತೂ ಒಂದು ಕೈಯಿಂದ ಚಪ್ಪಾಳೆ ಆಗುವುದಿಲ್ಲ. ಎರಡು ಕೈಗಳು ಜೊತೆಯಾಗಲೇಬೇಕು. ಸರ್ಕಾರದ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕು. ಒಂದು ಕಾಲದಲ್ಲಿ ಪ್ಲಾಸ್ಟಿಕ್ ಇಲ್ಲದ ದಿನಗಳೂ ಇದ್ದವು ಎಂಬುದನ್ನು ಮನದಲ್ಲಿಟ್ಟುಕೊಂಡು ಆದಷ್ಟೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಪರ್ಯಾಯ ವಸ್ತುಗಳನ್ನು ಬಳಸಬೇಕು. ಹೀಗಾದಾಗ ಮಾತ್ರ ನಗರ ಸ್ವತ್ಛತೆ ಸಾಧ್ಯ. ನಮ್ಮ ಮನೆಯಂತೆಯೇ ನಮ್ಮ ಪರಿಸರವೂ ಮುಖ್ಯ ಎಂಬುದನ್ನು ಎಲ್ಲರೂ ತಿಳಿದುಕೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೋ ಏನೋ ಕಾದು ನೋಡಬೇಕಿದೆ.
ಪುಷ್ಪಾ ಎನ್. ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.