ನಾನು ಬಡವಿ, ಆತ ಬಡವ… ಒಲವೇ ನಮ್ಮ ಬದುಕು…
Team Udayavani, Sep 29, 2017, 7:40 AM IST
ನಾನು ಬಡವರ ಮನೆಯ ಹುಡುಗಿ. ಸ್ವಲ್ಪ ಕುಳ್ಳಗಿದ್ದೆ. ಸ್ವಲ್ಪ ಕಪ್ಪಗಿದ್ದೆ. ನನ್ನ ಅಪ್ಪ-ಅಮ್ಮ ಇಬ್ರೂ ಕೂಲಿ ಕೆಲಸಕ್ಕೆ ಹೋಗ್ತಿದ್ರು. ಇಬ್ಬರಿಗೂ ವಾರಕ್ಕೊಮ್ಮೆ ಸಂಬಳ ಸಿಗುತ್ತಿತ್ತು. ದಿನವೂ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ಹಾಗಾಗಿ, ಕೆಲಸ ಇದ್ದ ದಿನ ರೊಟ್ಟಿ ಅಥವಾ ಅನ್ನ ತಿನ್ನುವುದು, ಉಳಿದ ದಿನಗಳಲ್ಲಿ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಅದ್ಯಾವ ಕಾರಣಕ್ಕೋ ಕಾಣೆ. ನನ್ನ ಪಾದಗಳು ಸ್ವಲ್ಪ ತಿರುಚಿದಂತೆ ಕಾಣುತ್ತಿದ್ದವು. ಇದೇ ಕಾರಣದಿಂದ ನಾನು ಅಸಹಜ ಎಂಬಂತೆ ಹೆಜ್ಜೆ ಇಡುತ್ತಿದ್ದೆ. ಈ ಅತಿ ಸಣ್ಣ ಊನದಿಂದಾಗಿ ಯಾವುದೇ ನೋವಾಗಲಿ, ಆರೋಗ್ಯದ ಸಮಸ್ಯೆಯಾಗಲಿ ಇರಲಿಲ್ಲ. ಹಾಗಾಗಿ, ಅದನ್ನು ನೋಡಿಯೂ ನೋಡದಂತೆ ನಾನು ಬೆಳೆದುಬಿಟ್ಟೆ.
ಕಾಲ ಉರುಳಿತು. ಅಪ್ಪ-ಅಮ್ಮನ ಮುಖಗಳಲ್ಲಿ ನೆರಿಗೆಗಳು ಕಾಣಿಸಿಕೊಂಡವು. ಪ್ರತಿದಿನವೂ ಮಳೆ, ಬಿಸಿಲು, ಚಳಿಯೆನ್ನದೇ ದುಡಿದ ಜೀವಗಳಲ್ಲವೆ? ಅದೇ ಕಾರಣದಿಂದ ಇಬ್ಬರಿಗೂ ನಿಶ್ಶಕ್ತಿ ಜೊತೆಯಾಯಿತು. ಮೂರು ದಿನ ದುಡಿದರೆ ಉಳಿದ ಎರಡು ದಿನ ವಿಶ್ರಾಂತಿ ಬೇಕು ಎನ್ನುವಂಥ ಸ್ಥಿತಿ ಎದುರಾಯಿತು. ಇದೇ ಸಂದರ್ಭದಲ್ಲಿ ನಾನು ಹರೆಯಕ್ಕೆ ಕಾಲಿಟ್ಟಿದ್ದೆ. ಅದುವರೆಗೂ ತಮ್ಮ ಪಾಡಿಗೆ ತಾವಿದ್ದ ಬಂಧುಗಳು, ನೆರೆಹೊರೆಯವರು ಈಗ ಏನಾದರೊಂದು ನೆಪ ಮಾಡಿಕೊಂಡು ಮನೆಗೆ ಬರತೊಡಗಿದರು. ಅಪ್ಪ-ಅಮ್ಮನೊಂದಿಗೆ ಅದೂ ಇದೂ ಮಾತಾಡುತ್ತಾ ಇದ್ದಕ್ಕಿದ್ದಂತೆಯೇ-“ಮಗಳು ದೊಡ್ಡವಳಾದಳು ಅಲ್ವಾ? ಅವಳಿಗೆ ಎಲ್ಲಾದ್ರೂ ಗಂಡು ಹುಡುಕಿದ್ರಾ? ಎಷ್ಟ್ ದಿನ ಅಂತ ಹೀಗೇ ಮನೇಲಿ ಇಟ್ಕೊàತೀರಿ? ಹೆಣ್ಣುಮಗು ಯಾವತ್ತಿದ್ರೂ ಹೆತ್ತವರಿಗೆ ಹೊರೆನೇ. ಬೇಗ ಒಂದು ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಿ…’ ಅನ್ನುತ್ತಿದ್ದರು. ಅನಂತರವಾದ್ರೂ ಸುಮ್ಮನೆ ಹೋಗ್ತಿದ್ರಾ? ಅದೂ ಇಲ್ಲ. ಬಾಗಿಲ ಮರೆಯಲ್ಲಿ ಮೌನವಾಗಿ ನಿಂತಿರುತ್ತಿದ್ದ ನನ್ನತ್ತ ನೋಡಿ- “ಇಷ್ಟೊಂದು ಕಪ್ಪು ಬಣ್ಣದ ಹುಡುಗೀನ ಯಾರು ತಾನೆ ಇಷ್ಟಪಡ್ತಾರೆ? ಕಪ್ಪಗಿರೋದು ಸಾಲದು ಅಂತ ಎತ್ತರವೂ ಕಡಿಮೆ ಇದೆ. ಇದರ ಜೊತೆಗೆ ಬಡತನದ ಶಾಪ ಬೇರೆ. ನಿಮ್ಮನ್ನು ದೇವರೇ ಕಾಪಾಡಬೇಕು…’ ಎಂದು ಹೇಳಿಯೇ ಕಾಲೆ¤ಗೆಯುತ್ತಿದ್ದರು. ಹೆಚ್ಚಿನವರಿಂದ ಇಂಥವೇ ಮಾತುಗಳನ್ನು ಕೇಳಿ ಕೇಳಿ ನನಗೂ ಸಾಕಾಗಿಹೋಗಿತ್ತು. ಹಾಗಂತ ಸುಮ್ಮನಿರಲು ಆಗುತ್ತಾ? ಜವಾಬ್ದಾರಿ ಕಳೆದುಕೊಳ್ಳುವ ಉದ್ದೇಶದಿಂದ ಅಪ್ಪ-ಅಮ್ಮ ಪರಿಚಯದವರಿಗೆಲ್ಲ- “ನಮ್ಮ ಮಗಳಿಗೆ ಯಾರಾದ್ರೂ ಹುಡುಗ ಇದ್ರೆ ನೋಡಿ…’ ಎಂದು ಮನವಿ ಮಾಡುತ್ತಲೇ ಇದ್ದರು.
ಆಗಾಗ್ಗೆ ಗಂಡಿನ ಕಡೆಯವರೂ ಬಂದುಹೋಗುತ್ತಿದ್ದರು. ಆಗೆಲ್ಲಾ ಢಾಳಾಗಿ ಪೌಡರ್ ಮೆತ್ತಿಕೊಂಡು, ನನ್ನ ಬೆರಳುಗಳು ಸ್ವಲ್ಪ ವಕ್ರವಾಗಿರುವುದು ಅವರಿಗೆ ಗೊತ್ತಾಗದಂತೆ ಮಾಡಲು ಸಾಕ್ಸ್ ಹಾಕಿಕೊಂಡು ಗಂಡಿನ ಕಡೆಯವರ ಎದುರು ನಿಲ್ಲುವಂತೆ ನನಗೆ ಹೇಳಿಕೊಡಲಾಗಿತ್ತು. ವಿಚಿತ್ರವೇನು ಗೊತ್ತೆ? ನನ್ನನ್ನು ನೋಡಲು ಬರುತ್ತಿದ್ದ ಗಂಡುಗಳು ನನಗಿಂತ ಕಪ್ಪಗೆ ಇರ್ತಾ ಇದ್ರು. ಅವರ ಪೋಷಕರೂ ಹಾಗೇ ಇರಿ¤ದ್ರು. ನನ್ನನ್ನು ನೋಡಿದ ಕೆಲವೇ ನಿಮಿಷಕ್ಕೆ ಅವರ ಮುಖದ ಚಹರೆಯೇ ಬದಲಾಗುತ್ತಿತ್ತು. ನಂತರ ಅವರು ತಮ್ಮ ತಮ್ಮಲ್ಲಿಯೇ ಪಿಸಪಿಸ ಮಾತಾಡಿಕೊಳ್ಳುತ್ತಿದ್ದರು. “ಊರಿಗೆ ಹೋಗಿ, ವಿಚಾರ ಮಾಡಿ ಹೇಳ್ತೀವಿ’ ಎಂದು ಡೈಲಾಗ್ ಹೊಡೆದು ಎದ್ದುಹೋಗುತ್ತಿದ್ದರು. ನಾಲ್ಕೈದು ದಿನಗಳ ನಂತರ-“ಸಂಬಂಧ ನಮಗೆ ಒಪ್ಪಿಗೆ ಆಗಲಿಲ್ಲ…’ ಎನ್ನುವ ಉತ್ತರ ಆ ಕಡೆಯಿಂದ ಕೇಳಿಬರುತ್ತಿತ್ತು. ಒಂದೆರಡು ದಿನಗಳ ನಂತರ “ಹುಡುಗಿ ತುಂಬಾ ಕರ್ರಗಿದ್ದಾಳೆ ಎಂಬ ಕಾರಣಕ್ಕೆ ಗಂಡಿನ ಕಡೆಯವರು ಒಪ್ಪಲಿಲ್ಲವಂತೆ’ ಎಂಬ ಇನ್ನೊಂದು ಮಾತೂ ನನ್ನನ್ನು ತಲುಪುತ್ತಿತ್ತು.
ಒಂದೊಂದು ಬಾರಿಯಂತೂ ವಧುಪರೀಕ್ಷೆ ಎಂಬುದು ಚಿತ್ರಹಿಂಸೆಯಂತೆ ಭಾಸವಾಗುತ್ತಿತ್ತು. ಯಾಕೆಂದರೆ, ನನ್ನನ್ನು ನೋಡಲು ಬಂದಿರುತ್ತಿದ್ದ ಹಿರಿಯರು ಬಹು ಸೂಕ್ಷ್ಮವಾಗಿ ನನ್ನ ಕಾಲುಗಳನ್ನು ಗಮನಿಸುತ್ತಿದ್ದರು. ಸಾಕ್ಸ್ ಹಾಕಿಕೊಂಡಿರುವುದು ಗೊತ್ತಾಗುತ್ತಿದ್ದಂತೆಯೇ- “ಯಾಕೆ ಸಾಕ್ಸ್ ಹಾಕ್ಕೊಂಡಿದೀಯಾ? ಎಲ್ಲಾ ಕಾಲೆºರಳೂ ಇವೆ ತಾನೆ? ನಿನಗೆ ಕಾಲಿನಲ್ಲಿ ಏನೂ ಐಬು ಇಲ್ಲ ತಾನೆ?’ ಎಂದು ಕೇಳುತ್ತಿದ್ದರು. ಮತ್ತೆ ಕೆಲವರು, ನನಗಿದ್ದ ಉದ್ದದ ಜಡೆಯನ್ನೇ ಅನುಮಾನದಿಂದ ನೋಡುತ್ತ, ಇದು ಒರಿಜಿನಲ್ ಜಡೆಯೋ ಅಥವಾ ಕೂದಲು ಕಟ್ಟಿ ಹೀಗೆ ಅಲಂಕಾರ ಮಾಡ್ಕೊಂಡಿದೀಯೋ ಎಂದು ಕೇಳುತ್ತಿದ್ದರು. ಆಗೆಲ್ಲಾ ಜಗಳಕ್ಕೇ ಹೋಗಿಬಿಡುವಷ್ಟು ಸಿಟ್ಟು ಬರುತ್ತಿತ್ತು. ಆದರೆ, ಗಂಡಿನ ಕಡೆಯವರು ಏನೇ ಪ್ರಶ್ನೆ ಕೇಳಿದರೂ ತಾಳ್ಮೆಯಿಂದಲೇ ಉತ್ತರ ಹೇಳಬೇಕೆಂದು ಹೆತ್ತವರು ಮೊದಲೇ ತಾಕೀತು ಮಾಡಿರುತ್ತಿದ್ದರು. ಹಾಗಾಗಿ, ಎಲ್ಲ ಅವಮಾನಗಳನ್ನೂ ನಾನು ಮೌನವಾಗಿ ಸಹಿಸಿಕೊಳ್ಳುತ್ತಿದ್ದೆ.
ದಿನಗಳು, ವಾರಗಳು, ತಿಂಗಳುಗಳು ಹೀಗೇ ಉರುಳುತ್ತಾ ಇದ್ದವು. ಆಗಲೇ ನಮ್ಮ ಬಂಧುವೊಬ್ಬರು ಗಡಿಬಿಡಿಯಿಂದ ಮನೆಗೆ ಬಂದು- “ಒಬ್ಬ ಹುಡುಗ ಬಂದಿದಾನೆ. ಊರಿಂದಾಚೆ ಇರುವ ಮರದ ಕೆಳಗೆ ಕುಳಿತಿದ್ದಾನೆ. ಅಲ್ಲಿಗೆ ನೀನೂ ಬಾ. ಅವನೊಮ್ಮೆ ನಿನ್ನನ್ನು ನೋಡಬೇಕಂತೆ. ಅವನಿಗೆ ಒಪ್ಪಿಗೆಯಾದ್ರೆ ಮುಂದುವರಿಯೋಣ. ನೀನು ಬೇಗ ರೆಡಿಯಾಗು’ ಅಂದರು! ವಧುಪರೀಕ್ಷೆಯ ಕಾರಣಕ್ಕೆ ಅಲಂಕಾರ ಮಾಡಿಕೊಂಡು ಅಷ್ಟು ದೂರ ಹೋಗಿ ಅವನ ಮುಂದೆ ನಿಲ್ಲುವುದಾ? ಇಂಥದಕ್ಕೆಲ್ಲ ನಾನು ರೆಡಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟೆ. ಆಗ ನನ್ನ ಬಂಧು ಹೇಳಿದ್ರು, “ನೋಡೂ, ಅವನು ಮನೆಗೇ ಬಂದ್ರೆ ಕಾಫಿ, ತಿಂಡಿ ಎಂದೆಲ್ಲಾ ಖರ್ಚು ಬರುತ್ತೆ. ಕೂಲಿ ಕೆಲಸದಿಂದ ಬದುಕುವ ನಮಗೆ ಇಷ್ಟು ಖರ್ಚು ಭರಿಸುವುದೂ ಕಷ್ಟಾನೇ. ಮಿಗಿಲಾಗಿ, ಹುಡುಗ ಮನೆಗೇ ಬಂದು ಹೋದರೆ ಅದನ್ನು ಹತ್ತು ಮಂದಿ ಗಮನಿಸ್ತಾರೆ. ನಾಳೆಯಿಂದಾನೇ ತಮ್ಮ ಮೂಗಿನ ನೇರಕ್ಕೇ ಕಾಮೆಂಟ್ ಶುರುಮಾಡ್ತಾರೆ. ಇಂಥದ್ದೇನೂ ಆಗಬಾರ್ಧು ಅನ್ನುವುದಾದ್ರೆ ಊರಾಚೆಗೆ ಇರುವ ಮರದ ಬಳಿಗೆ ಒಮ್ಮೆ ಹೋಗಿ ಬಾ. ಹುಡುಗ ಏನಾದ್ರೂ ಕೇಳಿದ್ರೆ ನಿನಗೆ ತೋಚಿದಂತೆ ಉತ್ತರ ಹೇಳು…’
ಇರಲಿ, ಇದೂ ಒಂದು ಪರೀಕ್ಷೆ ಆಗಿಯೇ ಹೋಗಲಿ ಎಂದು ನಿರ್ಧರಿಸಿಕೊಂಡು, ಲಗುಬಗೆಯಿಂದಲೇ ಢಾಳಾಗಿ ಪೌಡರ್ ಮೆತ್ತಿಕೊಂಡು, ಸಾಕ್ಸ್ ಧರಿಸಿ ಹೊರಟೆ. ಹುಡುಗ ಯಾವ ಕಲರ್‌ನ ಶರ್ಟ್ ಹಾಕಿದ್ದಾನೆ, ಎಲ್ಲಿ ಕುಳಿತಿದ್ದಾನೆ ಎಂಬುದನ್ನು ನನ್ನ ಬಂಧು ಮೊದಲೇ ತಿಳಿಸಿದ್ದರು. ನನ್ನಿಂದ ಬಹಳ ದೂರದಲ್ಲಿ ಅವರು ನಿಂತಿದ್ದರು. ಪರಿಚಯವೇ ಇಲ್ಲದವನನ್ನು ದಿಟ್ಟಿಸಿ ನೋಡುವುದಾದರೂ ಹೇಗೆ?
ಈ ಹುಡುಗ ಬೇಗ ಮಾತಾಡಿ ಕಳಿಸಬಾರದೆ ಅಂದುಕೊಂಡೆ. ಅದೇ ವೇಳೆಗೆ ಅವನೊಮ್ಮೆ ನನ್ನ ಕಾಲುಗಳತ್ತ ನೋಡಿದ. ಓಹೋ, ಉಳಿದವರಂತೆ ಇವನೂ ಕಾಲಲ್ಲಿ ಎಲ್ಲಾ ಬೆರಳೂ ಇದ್ದಾವಾ? ಏನಾದ್ರೂ ಚರ್ಮದ ಕಾಯಿಲೆ ಇದೆಯಾ ಎಂಬ ಪ್ರಶ್ನೆ ಕೇಳಬಹುದು ಎಂದುಕೊಂಡೇ ಇದ್ದೆ. ಆಗಲೇ ಅವನು- “ಅಲ್ಲಾರೀ, ಮನೇಲಿ ಇರುವಾಗ, ಮನೆಯಿಂದ ಆಚೆ ಹೋಗುವಾಗ ಕೂಡ ಬರೀ ಸಾಕ್ಸ್ ಹಾಕಿಕೊಂಡು ಬಂದಿದೀರಲ್ವ? ಅದನ್ನು ಧರಿಸಿ ನಡೆಯುವಾಗ ಸೊಟ್ಟಂಪಟ್ಟ ಕಾಲು ಹಾಕಿದಂತೆ ಆಗಲ್ವ? ಹೀಗೇ ಅಷ್ಟು ದೂರ ನಡೆದ್ರೆ ಅದೊಂದು ಡ್ಯಾನ್ಸ್ ಥರಾ ಕಾಣಿಸಲ್ವ?’ ಅಂದುಬಿಟ್ಟ.
ಹುಡುಗನಿಂದ ವ್ಯಂಗ್ಯದ ಮಾತು ಅಥವಾ ದರ್ಪದ ಪ್ರಶ್ನೆಯನ್ನು ನಿರೀಕ್ಷಿಸಿದ್ದ ನನಗೆ, ಅವನ ಈ ಹೊಸಬಗೆಯ ಮಾತು ಕೇಳಿ ಥ್ರಿಲ್ ಆಯಿತು. ಈ ಸಾಕ್ಸ್ ಹಾಕ್ಕೊಂಡು ಅಷ್ಟು ದೂರ ನಡೆದ್ರೆ ಅದು ಡ್ಯಾನ್ಸ್ ಥರಾ ಕಾಣಿಸುತ್ತೆ ಅಲ್ವಾ, ಅಂದನಲ್ಲ? ಆ ಮಾತು ಕೇಳಿ ವಿಪರೀತ ನಗು ಬಂತು. ಅವನೊಂದಿಗೆ ಇದು ಮೊದಲ ಭೇಟಿ ಎಂಬುದನ್ನೂ ಮರೆತು ಕಿಲಕಿಲನೆ ನಕ್ಕುಬಿಟ್ಟೆ.
ಎರಡು ನಿಮಿಷ ಸುಮ್ಮನಿದ್ದ. ಅವನು ನಂತರ- “ನನ್ನನ್ನು ಏನಾದ್ರೂ ಕೇಳುವುದಿದ್ರೆ ಕೇಳಿ’ ಅಂದ! ಈ ಮಾತು ಕೇಳಿ ನನಗಂತೂ ಮಾತೇ ಹೊರಡಲಿಲ್ಲ. ಏಕೆಂದರೆ, ಅದುವರೆಗೂ ಯಾರೊಬ್ಬರೂ ನನಗೆ ಇಂಥ ಮಾತು ಹೇಳಿರಲಿಲ್ಲ. ಹೆಣ್ಣು ನೋಡುವ ನೆಪದಲ್ಲಿ ಬಂದವರೆಲ್ಲ ನನ್ನಲ್ಲಿ “ಐಬು’ಗಳನ್ನು ಹುಡುಕುತ್ತಿದ್ದರು. ನಿಮ್ಮಪ್ಪ ಎಷ್ಟು ಸಂಪಾದನೆ ಮಾಡಿದ್ದಾರೆ? ನೀನು ಎಷ್ಟು ದುಡಿಯಬಲ್ಲೆ? ಎಂದೆಲ್ಲಾ ಕೇಳಿ, ವ್ಯಂಗ್ಯದ ಮಾತಾಡಿ ಹೋಗಿಬಿಡುತ್ತಿದ್ದರು. ಆದರೆ, ಈ ಹುಡುಗ “ವರಪರೀಕ್ಷೆ’ಗೇ ಸಿದ್ಧವಾಗಿ ಬಂದಿದ್ದ. ಯಾವ ಪ್ರಶ್ನೆ ಇದ್ರೂ ಕೇಳಿಬಿಡು ಅಂದಿದ್ದ.
“ನೀನು ಮದುವೆಯಾಗುವ ಹುಡುಗಿ ಹೇಗಿರಬೇಕು?’- ಕಡೆಗೂ ನಾನು ಈ ಪ್ರಶ್ನೆ ಕೇಳಿಬಿಟ್ಟೆ. ಅವನು, ಯಾವುದೇ ಹಿಂಜರಿಕೆಯಿಲ್ಲದೆ- “ನಿನ್ನ ಥರಾ ಮುಗ್ಧವಾಗಿ, ಮುಕ್ತವಾಗಿ ನಗುವ ಹುಡುಗಿ ಬೇಕು ನನಗೆ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನೊಂದಿಗೆ ಅಮ್ಮ ಇದ್ದಾಳೆ. ಕೂಲಿ ಕೆಲಸ ಮಾಡ್ತೇನೆ. ಮೂರು ಜನಕ್ಕೆ, ಮೂರು ಹೊತ್ತಿನ ಅನ್ನ ಸಂಪಾದಿಸುವಷ್ಟು ಶಕ್ತಿಯಿದೆ. ಮೂಡ್ ಬಂದಾಗ ಅಡುಗೆ ಕೂಡ ಮಾಡ್ತೇನೆ. ಹಳೆಯ ಚಿತ್ರಗೀತೆಗಳನ್ನು ಒಬ್ಬನೇ ಹಾಡಿಕೊಂಡು ಖುಷಿಪಡೋದು ನನಗಿರುವ ದುರಭ್ಯಾಸ…’ ಅಂದ. ಒಂದು ಕ್ಷಣ ಸುಮ್ಮನಿದ್ದು, ನಂತರ- “ನಿನಗೆ ನಾನು ಇಷ್ಟವಾಗಿದೀನಿ ಅನ್ನೋದಾದ್ರೆ ಹೇಳು. ನಾಡಿದ್ದು ಅಮ್ಮನನ್ನು ನಿಮ್ಮ ಮನೆಗೆ ಕಳಿಸ್ತೇನೆ’ ಎಂದು ಮುಗುಳ್ನಕ್ಕ!
ನಂತರ ನಾಲ್ಕೇ ತಿಂಗಳಲ್ಲಿ ನಮ್ಮ ಮದುವೆಯಾಯಿತು. ಮದುವೆಯ ಗಿಫ್ಟ್ ಅಂತ ನನ್ನ ಗಂಡ ಕೊಡಿಸಿದ್ದೇನು ಗೊತ್ತೇ? ಒಂದು ಜೊತೆ ಚಪ್ಲಿ ! ಅವನ್ನು ಎದುರಿಗಿಟ್ಟು “ನಾಳೆಯಿಂದ ಈ ಶೂ, ಸಾಕ್ಸ್‌ನ ಹಾಕ್ಕೋಬೇಡ. ಅವನ್ನು ತೆಗೆದು ಮೂಲೆಗೆ ಬಿಸಾಕು’ ಎಂದ. ಹಾಗೆಯೇ ಮಾಡಿದೆ.
ಈಗ, ನಾವಿಬ್ರೂ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗ್ತೀವೆ. ಮನೇಲಿ ಅಮ್ಮ ಇರ್ತಾರೆ. ಆಕೆ ನಮ್ಮಿಬ್ಬರಿಗೂ ಅಮ್ಮ. ಬೆಳಿಗ್ಗೆ ಇಬ್ಬರೂ ಒಟ್ಟಿಗೇ ತಿಂಡಿ ತಿಂದು, ಬಾಕ್ಸ್ ರೆಡಿ ಮಾಡಿಕೊಂಡು “ಅಮ್ಮಾ ಹುಷಾರೂ…’ ಎಂದು ಒಟ್ಟಿಗೇ ಹೇಳಿ ಕೈ ಕೈ ಹಿಡಿದು ನಡೆದುಹೋಗ್ತೀವೆ. ಸಂಜೆ ಕೆಲ್ಸ ಮುಗಿಯುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತೆ. ಎಷ್ಟೋ ಬಾರಿ ನಾಲ್ಕು ಹೆಜ್ಜೆ ನಡೆಯುವ ತ್ರಾಣವೂ ಇರೋದಿಲ್ಲ. ಆಗೆಲ್ಲಾ “ಇವನು’ ಹಳೆಯ ಹಾಡುಗಳನ್ನು ಹೇಳುತ್ತಾ ಕೈ ಹಿಡಿದು ಬಿಡದೇ ನಡೆಸುತ್ತಾನೆ. ಆಗ, ದಾರಿ ಸವೆದಿದ್ದೇ ತಿಳಿಯೋದಿಲ್ಲ. ಮೂರು ಹೊತ್ತಿನ ಊಟ, ಕಣ್ತುಂಬಾ ನಿದ್ರೆ-ಇದಿಷ್ಟು ಸಿಕ್ಕಿದ್ರೆ ಸಾಕು ಎಂಬುದೇ ನಮ್ಮ ಜೀವನಸೂತ್ರ ಆಗಿರುವುದರಿಂದ, ನಮಗೆ ಯಾವುದೇ ಚಿಂತೆಯಾಗಲಿ, ಸಂಕಟವಾಗಲಿ, ಭಯವಾಗಲಿ ಜೊತೆಯಾಗಿಲ್ಲ. ನಾವು ಖುಷ್ ಖುಷಿಯಾಗಿ ಇದೀವಿ !
(ಬಾಂಗ್ಲಾ ದೇಶದ ಪ್ರಸಿದ್ಧ ಛಾಯಾಚಿತ್ರಕಾರ ಜಿ.ಎಂ.ಬಿ. ಆಕಾಶ್ ಅವರ ಬರಹದ ವಿಸ್ತೃತ ರೂಪ)
– ಎ. ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
England vs Newzeland Test: ನ್ಯೂಜಿಲ್ಯಾಂಡ್ ಹಿಡಿತದಲ್ಲಿ ಹ್ಯಾಮಿಲ್ಟನ್ ಟೆಸ್ಟ್
Womens T20 Cricket: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
Ali Trophy: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ
Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.