ಕುರು ಕುರು ತಿಂದರೆ ಹಸಿವೇ ಇಲ್ಲ !
Team Udayavani, Nov 23, 2018, 6:00 AM IST
ಆಪ್ತ ಸ್ನೇಹಿತೆಯ ಮನೆಯಲ್ಲಿ ಸಣ್ಣ ಕಾರ್ಯಕ್ರಮವಿತ್ತು. “ನಿನ್ನ ಹೊರತು ಬೇರೆ ಯಾರನ್ನೂ ಕರೆದಿಲ್ಲ. ತಪ್ಪಿಸಬೇಡ’ ಎಂದಿದ್ದಳು ಆಕೆ. ಅವಳ ಅತ್ತೆ, ಮಾವನೂ ಊರಿಂದ ಬಂದಿದ್ದರು. ಅವಳ ಅತ್ತೆ, ಮಗನಿಗೆ ಅದಿಷ್ಟ, ಇದಿಷ್ಟ ಅಂತ ನಾಲ್ಕಾರು ಐಟಮ… ತಯಾರಿಸಿದ್ದರು. ಮಗ ಚಿಕ್ಕದಿರುವಾಗ ಹಟ ಮಾಡಿ ಮಾಡಿಸಿಕೊಳ್ತಿದ್ದ ಪಲ್ಯ, ಪದಾರ್ಥ, ಮೊಮ್ಮಕ್ಕಳಿಗೆ ಪ್ರೀತಿ ಅಂತ ಸಿಹಿ, ಖಾರ ಪ್ರತ್ಯೇಕ. ಸೊಸೆಗೆ ಇಂಥದ್ದೇ ಬೇಕು ಅನ್ನುವ ಪ್ರಶ್ನೆ ಇಲ್ಲ. ತಾವೇ ಬಡಿಸಲು ನಿಂತವರು ಮಗ ಚಿಕ್ಕವನಿದ್ದಾಗ ಆಸೆ ಪಡ್ತಿದ್ದ ಸಾಂಬಾರ್, ಆವಿಯಲ… ಬಡಿಸಿದಾಗ ಆತ ನಾಜೂಕಾಗಿ ಮುಟ್ಟಿದ ಶಾಸ್ತ್ರ ಮಾಡಿದ್ದ. ಎರಡು ಹೊತ್ತಿಗಿರಲಿ ಅಂತ ಮಾಡಿದ್ದ ಸಾಂಬಾರು ಒಂದೇ ಹೊತ್ತಿಗೆ ಖಾಲಿ ಮಾಡಿ ತೃಪ್ತಿಯಿಂದ ಉಣ್ಣುತ್ತಿದ್ದ ಮಗ ಹೀಗೆ ಉಂಡ ಶಾಸ್ತ್ರ ಮಾಡಿದರೆ ಆಕೆಗೆ ತಡೆಯಲಿಲ್ಲ. ವಿಚಾರಿಸಿದರು. “ಅಂದು ಪಾತ್ರೆಯಿಡೀ ನಾನೊಬ್ಬನೇ ಖಾಲಿ ಮಾಡ್ತಿ¨ªೆ ನಿಜ. ಆ ಊಟದ ರುಚಿ ಈಗಲೂ ನೆನಪಿದೆ. ಆದರೆ ಅಮ್ಮಾ, ಅಂದಿನ ಸವಿ ಈಗ ಇಲ್ಲ. ನಿನ್ನ ಕೈರುಚಿ ಬದಲಾಗಿದೆ. ಮಧ್ಯಾಹ್ನದ ಊಟದ ಹೊತ್ತು. ಆದರೆ, ಯಾಕೋ ಹಸಿವಿಲ್ಲ. ನಾಲ್ಕು ತುತ್ತು ಉಣ್ಣುವಾಗಲೇ ಸಾಕು ಅನ್ನಿಸ್ತದೆ’.
ಮಗ ಹೇಳಿದ್ದು ಕೇಳಿದ ಆ ತಾಯಿ ತಿರುಗಿ ಉತ್ತರ ಕೊಟ್ಟಿದ್ದು ವಾಸ್ತವ ಸತ್ಯ. ಆಕೆ ಹೇಳಿದ್ದರು, “”ನಿನ್ನ ಎಳವೆಯಲ್ಲಿ ನಮ್ಮ ಮನೆಯಲ್ಲಿನ ಸ್ಥಿತಿ ನೆನಪಿಸಿಕೊ ಒಮ್ಮೆ . ಈಗಿನ ಹಾಗೆ ವಿದ್ಯುತ್ ಸೌಲಭ್ಯ ಆಗ ಇಲ್ಲ. ನೀರು ಬಾವಿಯಿಂದ ಹೊತ್ತು ತರಬೇಕು. ಈಗಲೂ ಊರಿಗೆ ಬಂದಾಗ ನಮ್ಮ ಬಾವಿಯ ನೀರು ತುಂಬಾ ರುಚಿ ಅಂತ ಕುಡೀತಿ ಅಲ್ವಾ! ತಾಜಾ ಒರತೆಯ ನೀರು ಅದು. ಇಲ್ಲಿನ ನಲ್ಲಿ ನೀರಿಗೆ ಅಂಥ ಸವಿ ಬಾರದು. ಬೆಳಗಿನ ತಿಂಡಿ ಮುಗಿಸಿದ ನಂತರ ನಮಗೆಲ್ಲ ಸಾಕಷ್ಟು ಕೆಲಸ ಇರುತ್ತಿತ್ತು. ದೈಹಿಕ ಶ್ರಮವಾಗುವ ಕೆಲಸ ಮಾಡಿದಾಗ ಹಸಿವು ಸಹಜ. ಮತ್ತೆ ಈಗಿನ ಹಾಗೆ ಮಧ್ಯೆ ಮಧ್ಯೆ ತಿನ್ನಲಾದರೂ ಏನಿತ್ತು ಹೇಳು. ಹಳ್ಳಿಯ ಮನೆ, ಮನೆ ತುಂಬ ಜನ, ಬೆಳಗಿನ ಆಹಾರ ಸೇವಿಸಿದ ಮೇಲೆ ನಡುವೆ ಹಸಿವೆಂದರೆ ಕೊಡಲಾದರೂ ಏನೂ ಇಲ್ಲ. ಮಧ್ಯಾಹ್ನ ಊಟದ ವೇಳೆಗೆ ಹೊಟ್ಟೆ ಹಸಿದು ಚೀರಿಡುವ ಹೊತ್ತು. ಆಗ ಒಡಲಿಗಿಷ್ಟು ಆಹಾರ ಸಿಕ್ಕಿದರೆ ಸಾಕು; ಅದರ ಸವಿ ಅಮೋಘವಾಗಿ ಇದ್ದೇ ಇರುತ್ತದೆ. ಅದಕ್ಕೇ ಅಷ್ಟು ರುಚಿಯಾಗಿರುವುದು.
ಈಗ ನಾನೇ ನೋಡಿದೆ. ತಿಂಡಿ ಆದ ಮೇಲೆ ಅರ್ಧ ಗಂಟೆ ಕಳೆಯಬೇಕಾದರೆ ಕುರುಕಲು ತಿಂಡಿ ತಿಂದಾಯ್ತು; ಮತ್ತೆ ತುಸು ಹೊತ್ತಿಗೆ ಅದೇನೋ ಸ್ವೀಟ್ ಹಂಚಿದೆ ನೀನು. ನಿನ್ನ ಮಗ ಒಳಗೆ ಡಬ್ಬ ಹುಡುಕಿ ಕಡಲೆ, ಚಿಪ್ಸ್ ತಂದು ಎದುರಿಗಿಟ್ಟ. ಬಾಳೆಯ ಹಣ್ಣು ಸಿಕು¤ ಪುನಃ. ಅದೆಲ್ಲ ತಿಂದು ಊಟಕ್ಕೆ ಕೂತರೆ ಅದೆಂಥ ಉತ್ತಮ ಭೋಜನವಾದರೂ ಹಸಿವಿದ್ದರೆ ತಾನೆ ಬೆಲೆ! ಒಮ್ಮೆ ಘನ ಆಹಾರ ತೆಗೆದುಕೊಂಡರೆ ಪುನಃ ಉಣ್ಣಲು ಮಧ್ಯೆ ಮೂರು ಗಂಟೆಗಳಾದರೂ ಎಡೆ ಬೇಕು. ಅದು ಬಿಟ್ಟು ಹರಟುತ್ತಾ, ಆಗಾಗ ಮೆಲುಕು ಹಾಕ್ತಾ, ತುಂಬಿದ ಹೊಟ್ಟೆಗೇ ಪುನಃ ಅನ್ನ ಉಣ್ಣಲಾದರೂ ರುಚಿಸುತ್ತದಾ? ನಾನೆ ನೋಡಿದ ಹಾಗೆ ನಿನಗಾಗಲೀ ಮಕ್ಕಳಿಗಾಗಲೀ ಹಸಿವಾಗಿಲ್ಲ. ಕರೆದಿದ್ದಕ್ಕೆ ಬಂದು ಊಟಕ್ಕೆ ಕೂತದ್ದು ಅಷ್ಟೆ. ನಾನೀಗ ಅದೆಷ್ಟೇ ಐಟಮ… ಮಾಡಿ ಬಡಿಸಿದರೂ ಹಸಿವೇ ಇಲ್ಲದವನಿಗೆ ರುಚಿ ಗೊತ್ತಾಗುತ್ತದಾ!
ನೀ ಮಾತ್ರ ಅಲ್ಲ, ಈಗ ಆಹಾರ ಸೇವನೆಗೆ ನಿಗದಿತ ಹೊತ್ತು ಅಂತಲೇ ಇಲ್ಲ. ಮೊದಲಿಗೆ ಮನೆ ಮಕ್ಕಳಿಗೆ ತಿಂಡಿ ಅಂದರೆ ಮನೆಯಲ್ಲಿ ಮಾಡಿದರಷ್ಟೆ ಸಿಕ್ಕುವುದು; ಈಗ ನೋಡು ರಸ್ತೆಗೆ ಕಾಲಿಟ್ಟರೆ ಸಾಲು ಸಾಲು ರೆಡಿಮೇಡ್ ತಿಂಡಿಗಳು. ಎಂದು, ಎಲ್ಲಿ, ಯಾವಾಗ ತಯಾರಿಸಿ ಇಟ್ಟದ್ದು ಅಂತಲಾದರೂ ಗೊತ್ತಾ? ಮಕ್ಕಳು ಹೊರಗೆ ಸಿಗುವ ಪ್ಯಾಕೆಟ… ತಂದು ಒಡೆದು ಸಿಕ್ಕಿಸಿಕ್ಕಿದ್ದು ತಿಂತಾರೆ. ಚಾಕೊಲೇಟು, ಕೇಕು ಸದಾ ಕೈಗೆಟುಕುವ ಹಾಗೆ ಸಿಗುತ್ತದೆ. ಚೆನ್ನಾಗಿ ಹಸಿವಾಗಿ ಹೊಟ್ಟೆತುಂಬ ಉಣ್ಣಬೇಕಾದ ಹೊತ್ತಿಗೆ ಹಸಿವಿಲ್ಲ. ಸಂಜೆಗೆ ಮತ್ತಿನ್ನೇನು. ಎರಡು ಗಂಟೆ ಆಗಬೇಕಾದರೆ ಮಕ್ಕಳು ಫ್ರಿಜ… ತೆರೆದು ಅದೇನೇನೋ ಬಾಯಿಗೆ ತುಂಬಿಕೊಳ್ತಾರೆ. ಟಿ.ವಿಯಲ್ಲಿ ಬರೂದು ನೋಡ್ತಾ ಏನು ತಿಂತಿದ್ದಾರೆ, ಎಷ್ಟು ತಿಂತಾರೆ ಅನ್ನೋದು ಅವರಿಗಾದರೂ ಗೊತ್ತಾ? ಸಂಜೆ ಫ್ರೆಶ್ ಆಗಿ ತಿಂಡಿ ಮಾಡಿದರೆ ಅದು ಹಾಗೆ ಉಳಿಯುತ್ತದೆ. ಆಗಲೂ ಹಸಿವಿಲ್ಲವಂತೆ. ಎಂದೋ, ಯಾವತ್ತೋ ತಯಾರಿಸಿ, ಪ್ಲಾಸ್ಟಿಕ್‌ನಲ್ಲಿ ತುಂಬಿಸಿದ ಕುರುಕಲು ತಿಂದು ಹೀಗೆ ಹಸಿವೇ ಮುಚ್ಚಿಹೋದರೆ ಮತ್ತೆ ಫ್ರೆಶ್ ಆಗಿ ಮನೆಯಲ್ಲಿ ತಯಾರಿಸಿದ ಊಟ, ತಿಂಡಿಗೆ ಬೆಲೆ ಉಂಟಾ? ಅದು ಬೇಡ, ಇದು ಹಿಡಿಸುವುದಿಲ್ಲ, ನನ್ನ ಇಷ್ಟದ್ದು ತಯಾರಿಸಲಿಲ್ಲಾತ ಎಲೆ ಮುಂದೆ ಪಿರಿಪಿರಿ ಬೇರೆ. ಆಹಾರದಲ್ಲಿ ಕೊರತೆ ಹುಡುಕುವುದರ ಬದಲು ತಯಾರಿಸಿದ್ದು ಏನಿದ್ದರೂ ಅದು ಎಲ್ಲರಿಗಾಗಿ ಅಂತ ಪ್ರೀತಿಯಿಂದ ಉಣ್ಣಲು ಕಲಿತರೆ ಚೆಂದ. ತಯಾರಿಸಿದವರಿಗೆ ಸಂತೋಷ. ಅದಲ್ವಾ ಸಂಸಾರ.
ಬೆಳಗಿನ ಉಪಾಹಾರದ ನಂತರ ಮಧ್ಯೆ ಬೇರೇನೂ ಆಹಾರ ತಿನ್ನದೆ ಇದ್ದರೆ ಒಳ್ಳೆಯ ಹಸಿವಾಗಿ, ಆಹಾರ ಬಲು ರುಚಿಯಾಗಿರುತ್ತದೆ. ಅದು ಮಾಡಿದ್ದು ನಾನೇ ಇರಬಹುದು; ಅಥವಾ ಸೊಸೆಯೇ ಆಗಿರಬಹುದು. ಹೊಟ್ಟೆ ತುಂಬಿದವ ಎಲೆಯ ಮುಂದೆ ಕೂತರೆ ಅದು ಮೃಷ್ಟಾನ್ನ ಭೋಜನವಾದರೂ ಅಷ್ಟಷ್ಟೆ . ಹಸಿವಿದ್ದವನಿಗೆ ಗಂಜಿ, ಚಟ್ನಿ ಇದ್ದರೂ ಅದೇ ಸುಗ್ರಾಸ ಭೋಜನ. ಈಗ ನಮ್ಮಲ್ಲಿ ಮಾತ್ರಾ ಹೀಗೆ ಅಂದುಕೋಬೇಡ. ಆಹಾರ ಸೇವನೆಗೆ ನಿಗದಿತ ಸಮಯ ಇಟ್ಟುಕೊಂಡು ಆ ಹೊತ್ತಿಗೆ ಉಂಡರೆ, ತಿಂದರೆ ಅದು ರುಚಿ ಹೊರತು ಇಪ್ಪತ್ತನಾಲ್ಕು ಗಂಟೆಯೂ ಬಾಯಾಡಿಸುತ್ತ ಇರುವ ಅನಿಯಮಿತ ದುರಭ್ಯಾಸ ಅನಾರೋಗ್ಯಕ್ಕೆ ಹಾದಿ ಮಾಡಿಕೊಡಲು ತಡವಿರುವುದಿಲ್ಲ.
ಈಗ ಆ ಮಟ್ಟಿಗೆ ನಗರ, ಹಳ್ಳಿ ಒಂದೇ ಆಗುತ್ತ ಬಂದಿದೆ. ಸಣ್ಣಮಕ್ಕಳೂ ಅಂಗಡಿಯ ಬಾಗಿಲಿಗೆ ತೋರಣ ಕಟ್ಟಿದ ಹಾಗಿನ ಪ್ಯಾಕೆಟ… ತಿಂಡಿ ಗುರುತಿಸಿ ಹಟ ಹಿಡಿಯುವ ಬುದ್ಧಿವಂತಿಕೆ ಪಡೆದಿವೆ. ಇದೂ ನಾಗರಿಕತೆ ಅಂತ ಅಮ್ಮಂದಿರು ಕೊಡಿಸ್ತಾರೆ. ತಪ್ಪು ಅವರದಲ್ಲ. ಆ ಪರಿಯಲ್ಲಿ ಕೊಳ್ಳುವ ತಹತಹ ಬೆಳೆದಿದೆ. ಬೇಕಿದ್ದು ಬೇಡದ್ದು ಎಲ್ಲ ರಾಶಿ ರಾಶಿ. ಅದರ ಪರಿಣಾಮ ಗೊತ್ತಾಗುವುದು ಮುಂದೆ. ನಮ್ಮಲ್ಲಿ ಅಂತಲ್ಲ; ಹೆಚ್ಚಿನ ಮನೆಗಳದು ಇದೇ ಪಾಡು.
“ನಿನ್ನ ಗಂಡನ್ನ ಬೈತಿದ್ದೇನೆ ಅಂತ ತಪ್ಪು ತಿಳಿದುಕೊಳ್ಳಬೇಡವೇ ತಾಯಿ. ಅವನು ಸರಿಯಾಗಿ ಊಟ ಮಾಡದ ಕಾರಣ ಗದರಿಸಿದ್ದು’ ಅಂದರು ಅಮ್ಮ. “ಇನ್ನೂ ಸ್ವಲ್ಪ ಗದರಿಸಿಬಿಡಿ ಅತ್ತೆ. ನಾನು ಹೇಳಿದ್ರೆ ಕಿವಿಗೇ ಹಾಕಿಕೊಳ್ಳುವುದಿಲ್ಲ’ ಅಂದಳು ಸ್ನೇಹಿತೆ. ಆಕೆಗೂ ಬೇಸರ. ಎಲ್ಲರೂ ಒಟ್ಟಿಗೆ ಊಟ ಮಾಡುವ ಅಂತ ಇದ್ದಳು. ಮಧ್ಯೆ ತಿಂದ ಸಿಹಿ, ಕುರುಕಲು ಹಸಿವನ್ನೇ ತೆಗೆದ ಕಾರಣ ತಯಾರಿಸಿದ್ದರಲ್ಲಿ ಬಹುಪಾಲು ಉಳಿದು ಫ್ರಿಜ… ಸೇರಿತ್ತು. ಮಾರನೆ ದಿನಕ್ಕೆ ಪುನಃ ತಯಾರಿಸಬೇಕಿಲ್ಲ . ಅದೇ ಆಗುತ್ತದೆ ನಿಜ. ಆದರೆ, ಫ್ರೆಶ್ ಆಗಿರುವಾಗ ಇದ್ದ ರುಚಿ ಮರುದಿನಕ್ಕೆ ಕಾಣದು. ಅಲ್ಲದೆ ದಿನ ದಿನ ಮುನ್ನಾ ದಿನದ್ದು ಎಳೆಯರಿಗೆ ಸೇರಿ ಮನೆಯವರೆಲ್ಲ ಉಣ್ಣುವುದು ಆರೋಗ್ಯದ ದೃಷ್ಟಿಯಿಂದ ಸಲ್ಲದು ಎಂದು ಆಕೆಯ ಸ್ನೇಹಿತೆ ವೈದ್ಯೆ ಎಚ್ಚರಿಸಿದ್ದರು. ಹಸಿವಾಗುವ ಹೊತ್ತಿನಲ್ಲಿ ನಿಗದಿತ ಸಮಯ ನೋಡಿ ಊಟ, ತಿಂಡಿ ಸೇವಿಸಿದಲ್ಲಿ ಹೇಗೆ ಪೂರಕವೋ; ಹಾಗೇ ಎರಡು ಘನ ಆಹಾರದ ಮಧ್ಯೆ ಕುರುಕಲು, ಸಿಹಿ, ಬೇಕರಿ ಐಟಮ್ಸ… ತಿನ್ನುವ ಅಭ್ಯಾಸ ಒಮ್ಮೆಗೆ ಕಾಣಿಸದೆ ಹೋದರೂ ಮುಂದೊಂದು ದಿನಕ್ಕೆ ಅನಾರೋಗ್ಯ ಕಾಡುವ ಎಚ್ಚರಿಕೆಯ ಗಂಟೆ. ವೈದ್ಯೆಯ ಅನುಭವದ ಸಲಹೆ ಎಚ್ಚರಿಸುತ್ತಲೇ ಇತ್ತು ಆಕೆಯನ್ನು. ಯಾರಿಗೆ ಹೇಳುವುದು; ಕಿವಿಗೇ ಹಾಕ್ಕೊಳ್ಳುವುದಿಲ್ಲ; ಮಕ್ಕಳೂ ಅದನ್ನೇ ಫಾಲೋ ಮಾಡ್ತಿರೋದು ಮತ್ತಷ್ಟು ಕಠಿಣದ ಸಮಸ್ಯೆ.
ಕೃಷ್ಣವೇಣಿ ಕಿದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.