ಕಾಮಿನಿಯರ ಕಟಿ ಬಂಧ
Team Udayavani, May 19, 2017, 3:18 PM IST
ವಸ್ತ್ರ ವಿನ್ಯಾಸಕ್ಕೆ ಒಂದು ಲುಕ್ ಬರುವುದು ಬೆಲ್ಟ್ ಕಟ್ಟಿಕೊಂಡಾಗ. ಇಷ್ಟು ದಿನಗಳವರೆಗೆ ಬೆಲ್ಟ್ ಧರಿಸಿ ಫ್ಯಾಶನ್ ಪ್ರದರ್ಶಿಸುವುದು ಪುರುಷರಿಗೆ ಮಾತ್ರ ಮೀಸಲು ಎಂಬಂತಿತ್ತು. ಆದರೆ ಈಗ, ಹೆಂಗಸರೂ ಬೆಲ್ಟ್ ಧರಿಸಿ ಸ್ಟೈಲ್ ಮಾಡಲು ಆರಂಭಿಸಿದ್ದಾರೆ! ಬೆಲ್ಟ್ ಧರಿಸಿ ಓಡಾಡುವುದು ಹೊಸ ಫ್ಯಾಶನ್ ಕೂಡ ಆಗಿದೆ. ಈಗ, ಬೆಡಗಿಯರಿಗೆಂದೇ ಎಷ್ಟೆಲ್ಲಾ ವೆರೈಟಿಯ ಬೆಲ್ಟ್‌ಗಳು ಬಂದಿವೆ ಗೊತ್ತೆ?
ಫ್ಯಾಷನ್ ಎಂದಾಗ ಆಕ್ಸೆಸರೀಸ್‌ಗಳಲ್ಲಿ ಬೆಲ್ಟ್ ದೊಡ್ಡ ಪಾತ್ರ ವಹಿಸುತ್ತದೆ. ಹಿಂದೆಲ್ಲ ಪ್ಯಾಂಟ್ ಬಿಗಿಯಾಗಿ ನಿಲ್ಲಲು ಸೊಂಟಕ್ಕೆ ಬೆಲ್ಡ್ ಹಾಕಿಕೊಳ್ಳುತ್ತಿದ್ದರು. ಆದರೀಗ ಬೆಲ್ಟ್ನ ಉಪಯೋಗ ಅಷ್ಟಕ್ಕೇ ಸೀಮಿತವಾಗಿಲ್ಲ. ಉಡುಪಿನ ಅಂದಚೆಂದ ಹೆಚ್ಚಿಸಲೂ ಬಳಸಲಾಗುತ್ತದೆ. ಶರ್ಟ್‌ಧಿ-ಪ್ಯಾಂಟ್ ಅಲ್ಲದೆ ಮಹಿಳೆಯರ ಡ್ರೆಸ್‌ಗೂ ಈಗ ಬೆಲ್ಡ್ ಹಾಕಿಕೊಳ್ಳಲಾಗುತ್ತದೆ. ಮಹಿಳೆಯರು ತಮ್ಮ ಡ್ರೆಸ್ ಮೇಲೆ ಬಣ್ಣ ಬಣ್ಣದ, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್‌ಗಳನ್ನು ಉಟ್ಟು ಫ್ಯಾಷನ್ ಕೋಶಂಟ್ ಅನ್ನು ಹೆಚ್ಚಿಸುತ್ತಿದ್ದಾರೆ. ಸಣ್ಣ ಸೊಂಟ ಇದ್ದವರಿಗಂತೂ ಡ್ರೆಸ್ ಮೇಲೆ ಇಂಥ ಬೆಲ್ಟ್ ತೊಟ್ಟು ಶೋ ಆಫ್ ಮಾಡೋದು ಒಂದು ಫ್ಯಾಷನ್ನೇ ಆಗಿಹೋಗಿದೆ!
ಡ್ರೆಸ್ ಮೇಲೆ ಬೆಲ್ಟ್ ತೊಡುವುದೂ ಹಳೇ ಫ್ಯಾಷನ್ ಆಗಿಬಿಟ್ಟಿದೆ. ಏಕೆಂದರೆ ಈಗಿನ ಟ್ರೆಂಡ್, ಸೀರೆ ಮೇಲೆ ಬೆಲ್ಟ್ ತೊಡುವುದು! ಹೌದು, ಸಿಂಪಲ್ ಆದ ಸೀರೆಯೂ ಗ್ರಾಂಡ್ ಆಗಿರೋ ಬೆಲ್ಟ್ನಿಂದಾಗಿ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಹೆವಿ ಎಂಬ್ರಾಯxರಿ ಇರುವ ಸೀರೆಗಳ ಮೇಲೆ ಪ್ಲೆ„ನ್ ಬೆಲ್ಟ್ ಮತ್ತು ಪ್ಲೆ„ನ್ ಸೀರೆಗಳ ಮೇಲೆ ಗ್ರಾಂಡ್ ಬೆಲ್ಟ್ ತೊಡಬೇಕೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ವೆಸ್ಟರ್ನ್ ಬೆಲ್ಟ್ ಅನ್ನು ಟ್ರೆಡೀಷನಲ್ ಆಗಿಸುವುದು ಈ ಥರ!
ಸೀರೆಗಳ ಮೇಲೆ ಹಾಕಿಕೊಳ್ಳುವ ಬೆಲ್ಟ್‌ಗಳಲ್ಲಿ ಅದೆಷ್ಟು ವಿಧಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೊದಲಿಗೆ ಸೀರೆಯನ್ನು ಉಟ್ಟು , ನಂತರ ಅದರ ಮೇಲೆ ಕಾಲರ್ ಇರುವ ಜಾಕೆಟ್ ರವಿಕೆಯನ್ನು ತೊಟ್ಟು , ಅದರ ಮೇಲೆ ಬೆಲ್ಟ್ ಅನ್ನು ತೊಡಬಹುದು. ಈ ಲುಕ್ ಪಡೆಯಲು ಪ್ಲೆ„ನ್ ಸೀರೆಗೆ ಎಂಬ್ರಾಯxರಿ ಇರುವ ಜಾಕೆಟ್ ಬ್ಲೌಸ್ ಉಟ್ಟು , ಸ್ವರ್ಣ ಬಣ್ಣದ ಬೆಲ್ಟ್ ಧರಿಸಿದರೆ ನೀವು ಯಾವ ಸಿನೆಮಾ ತಾರೆಗಿಂತಲೂ ಕಡಿಮೆಯಲ್ಲ !
ಸೀರೆಗೆ ಬೆಲ್ಟ್ ಹಾಕಿಕೊಳ್ಳುವುದರಿಂದ ನೆರಿಗೆ ಮತ್ತು ಸೆರಗು ಅಚ್ಚುಕಟ್ಟಾಗಿ ನಿಲ್ಲುತ್ತವೆ. ಪ್ಲೆ„ನ್ ಡ್ರೆಸ್ ಹಾಕಿಕೊಳ್ಳುವುದಾದರೆ ಮೆಟಲ್ ಬೆಲ್ಟ್ , ಗೋಲ್ಡ್ ಬೆಲ್ಟ್ , ಚೈನ್ ಬೆಲ್ಟ್ ಸೇರಿದಂತೆ ಟಾಸ್ಸೆಲ್ ಬೆಲ್ಟ್‌ಗಳನ್ನು ಬಳಸಬಹುದು. ಇದರಿಂದ ಬೋರಿಂಗ್ ಬಟ್ಟೆಗಳಿಗೆ ಮೆರುಗು ಸಿಗುತ್ತದೆ. ಇಲಾಸ್ಟಿಕ್ ಬೆಲ್ಟ್‌ಗಳಲ್ಲೂ ಲೋಹದ ಬಕಲ್‌ಗಳಿದ್ದು, ಇವು ತೊಡಲು ಸರಳ ಹಾಗೂ ಸುಲಭವಾಗಿರುತ್ತವೆ. ಪದೇ ಪದೇ ಸಡಿಲ ಅಥವಾ ಬಿಗಿ ಮಾಡಿಕೊಳ್ಳಬೇಕಿಲ್ಲ. ಇಲಾಸ್ಟಿಕ್ ಬೆಲ್ಟ್ನ ಇನ್ನೊಂದು ಉಪಯೋಗವೆಂದರೆ ಸಮಾರಂಭಗಳಲ್ಲಿ ಊಟ ಮಾಡುವಾಗ ಹೊಟ್ಟೆ ಅಥವಾ ಸೊಂಟ ಅಗತ್ಯಕ್ಕಿಂತ ಹೆಚ್ಚು ಬಿಗಿಯಾಗಿರುವುದಿಲ್ಲ. ಆರಾಮವಾಗಿ ಕೂತುಕೊಳ್ಳಬಹುದು. ಕುಳಿತು ತಿನ್ನಬಹುದು, ನಡೆಯಬಹುದು, ಓಡಾಡಬಹುದು.ಹಿಂದಿನಿಂದಲೂ ಜನರು ಚರ್ಮದ ಬೆಲ್ಟ್ ಬಳಸುತ್ತಾ ಬಂದಿದ್ದಾರೆ. ಆದರೆ ಪರಿಸರವಾದಿಗಳು, ಪ್ರಾಣಿಪ್ರಿಯರು ಚರ್ಮದ ಬದಲಿಗೆ ಫೇಕ್ ಲೆದರ್ (ನಕಲಿ ಲೆದರ್) ಬಳಸುವಂತೆ ಇತರರನ್ನು ಉತ್ತೇಜಿಸುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಒರಿಜಿನಲ್ ಲೆದರ್‌ಗಿಂತ ಸ್ವಲ್ಪವೂ ಭಿನ್ನವಾಗಿ ಕಾಣದ ಫೇಕ್ ಲೆದರ್‌ನಿಂದ ಮಾಡಿದ ಸುಂದರ ಬೆಲ್ಟ್‌ಗಳು ಲಭ್ಯವಿವೆ!
ಇನ್ನು ಮುತ್ತು, ರತ್ನ, ಹವಳ, ವಜ್ರ ಸೇರಿದಂತೆ ಅಮೂಲ್ಯ ಕಲ್ಲುಗಳಂತೆ ಕಾಣುವ ಪ್ಲಾಸ್ಟಿಕ್, ಕುಪ್ಪಿ ಮತ್ತು ಇತರ ವಸ್ತುಗಳಿಂದ ಸರ, ಹಾರದಂತೆ ಪೋಣಿಸಿ ಬೆಲ್ಟ್‌ಗಳನ್ನು ಮಾಡಲಾಗುತ್ತದೆ. ಇವು ಚೈನ್ ಬೆಲ್ಟ್‌ಗಳ ಸಾಲಿಗೆ ಸೇರುತ್ತವೆ. ಇವುಗಳಿಗೆ ಮ್ಯಾಚಿಂಗ್ ಕಿವಿಯೋಲೆ, ಸರ ಮತ್ತು ಬಳೆಗಳನ್ನು ಹಾಕಿಕೊಳ್ಳಬಹುದು. ತಲೆಕೂದಲಿಗೆ ಕಟ್ಟಿಕೊಳ್ಳುವ ರಿಬ್ಬನ್‌ಗಳನ್ನೂ ಬಳಸಿ ಬೆಲ್ಟ್ನಂತೆ ತೊಡಬಹುದು.
– ಮಾನಸಿ