ಲಕ್ಷ್ಮಣ ರೇಖೆ
Team Udayavani, Dec 21, 2018, 6:00 AM IST
ಎರಡು ತಿಂಗಳ ಕೆಳಗೆ ನಾಸಿಕಕ್ಕೆ ಹೋದಾಗ ರಾಮಾಯಣ ಪ್ರಸಿದ್ಧ ಪಂಚವಟಿ ನೋಡುವ ಸಂದರ್ಭ ಸಿಕ್ಕಿತು. ಪಂಚವಟಿ ನೋಡಲು ಹೋಗುವವರು ಒಂದೇ ಕಾಲುನಡಿಗೆಯಲ್ಲಿ ಹೋಗಬೇಕು ಇಲ್ಲವೇ ಆಟೋದಲ್ಲೇ ಹೋಗಬೇಕು, ಬಾಡಿಗೆ ಕಾರುಗಳಿಗೆ ಪ್ರವೇಶವಿಲ್ಲ, ಸ್ಥಳೀಯರಿಗೆ ಉದ್ಯೋಗಾವಕಾಶ ಮಾಡಲು ಇರಬಹುದು ಈ ವ್ಯವಸ್ಥೆ. ಗೋದಾವರಿ, ಕದಂಬ ನದಿಗಳ ಸಂಗಮ ಸ್ಥಳದಲ್ಲಿದೆ- ಪಂಚವಟಿ. ಗೈಡ್ ಕಮ… ಆಟೋದವನು ಅಲ್ಲಿ ನಡೆದಿರಬಹುದಾದ ರಾಮಾಯಣದ ಹಲವು ಘಟನೆಗಳನ್ನು ವಿವರಿಸಿದ, ಆಟೋ ಮುಂದೆ ಸಾಗುತ್ತಿರುವಾಗಲೇ ಉದ್ದಕ್ಕೆ ಅಡ್ಡಾದಿಡ್ಡಿಯಾಗಿ ಹರಿದ ಸಿಮೆಂಟಿನ ಚರಂಡಿಯನ್ನು ತೋರಿಸುತ್ತ, “ಇದೇ ಲಕ್ಷ್ಮಣ ರೇಖೆ’ ಎಂದ. ಇದು ಮಾತ್ರ ನನ್ನ ಊಹೆಗೂ ಮೀರಿದ್ದಾಗಿತ್ತು. ರಾಮಾಯಣ ಓದುವಾಗಲೆಲ್ಲ ಮರದ ಕೋಲಿನಿಂದ ಬರೆದ, ಕಲ್ಲಿನಿಂದ ಎಳೆದ, ರಂಗೋಲಿ ಹುಡಿಯ, ಇಷ್ಟು ಸಾಲದೆಂಬಂತೆ ಚಾಕ್‌ಪೀಸಿನಲ್ಲಿ ಬರೆದ ಲಕ್ಷ್ಮಣ ರೇಖೆಯೂ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಎಲ್ಲವೂ ಆಯಾ ವಯಸ್ಸಿಗೆ ತಕ್ಕಂತೆ ಮನಸ್ಸಿನಲ್ಲಿ ಮೂಡಿದ ರೇಖೆಗಳಿವು.
ಈ ಲಕ್ಷ್ಮಣ ರೇಖೆಗಳು ಬಾಲ್ಯದಲ್ಲಿ ಶಿಸ್ತಿನ ಜೀವನವನ್ನು ಕಲಿಸಿದರೆ ದೊಡ್ಡವರಾದಂತೆ ಅದೇ ರೇಖೆಗಳು ಉಸಿರುಗಟ್ಟುವಂತೆ ಮಾಡುವುದೂ ಸುಳ್ಳಲ್ಲ. ಮನಸ್ಸೂ ವಿನಾಕಾರಣ ಎಗರಾಡುತ್ತಿರುತ್ತದೆ. ಆಸೆ, ಸಿಟ್ಟು, ದ್ವೇಷ, ದುಃಖ, ಪ್ರೀತಿ, ಅಸೂಯೆ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆಂದು ಇನ್ನೊಬ್ಬರಿಗೆ ಹೇಳಿದರೂ ಉಪ್ಪು$ಹುಳಿ ತಿನ್ನುವ ದೇಹದಲ್ಲಿ ಆಕಾರ, ವಿಕಾರಗಳು ಎದ್ದೇಳುವುದು ಸಹಜ, ಆದರೂ ಎಲ್ಲವೂ ಒಂದು ಹದ್ದುಬಸ್ತಿನಲ್ಲಿದ್ದರೆ ಚೆಂದ. ಅದು ಸೀಮೋಲ್ಲಂಘನ ಮಾಡಿತೋ ಆಗ ಅನಾಹುತ ತಪ್ಪಿದ್ದಲ್ಲ.
ಲಕ್ಷ್ಮಣ, ಲಕ್ಷ್ಮಣರೇಖೆ ಎಳೆದದ್ದು ಸೀತೆಗಾಗಿ. ಅಂದರೆ ಗಂಡು ಹೆಣ್ಣಿಗೆ, ಅಪಾಯ ಅರಿತು ಎಳೆದ ರೇಖೆಯದು. ಅಂದಿನಿಂದ ಇಂದಿನವರೆಗೂ ಹೆಣ್ಣು ಸುಲಭದಲ್ಲಿ ಶಿಕಾರಿಗೆ ಬಲಿಯಾಗುತ್ತ ಬಂದಳು ಎಂದರೆ ತಪ್ಪಾಗಲಾರದು. ಹೆಣ್ಣು ಅರಿತೋ, ಅರಿಯದೆಯೋ ಲಕ್ಷ್ಮಣ ರೇಖೆ ದಾಟಿದಾಗ ಬೆಲೆ ತೆತ್ತಿದ್ದು ಅವಳೇ, ಸೀತೆ ಹಲವು ವರ್ಷಗಳ ಕಾಲ ಲಂಕೆಯ ಅಶೋಕ ವನದಲ್ಲಿ ಶೋಕ ತಪ್ತಳಾಗಿ ಕುಳಿತುಕೊಳ್ಳಬೇಕಾಗಿ ಬಂತು. ಕಡೆಗೂ ರಾಮ, ಸೀತೆಯರು ಒಂದಾದಾಗ ಒಟ್ಟಿಗೆ ಇದ್ದದ್ದಾದರೂ ಎಷ್ಟು ದಿನ? ಮತ್ತೆ ಪರಿತ್ಯಕ್ತೆಯಾಗಿ ಕಾಡಿನಲ್ಲಿ ಒಂಟಿಜೀವನ ಮಕ್ಕಳೊಂದಿಗೆ, ತನ್ನ ಪರಿಶುದ್ಧತೆಯನ್ನು ಪರೀಕ್ಷಿಸಲು ಅಗ್ನಿ ಪ್ರವೇಶ, ಇವೆಲ್ಲವೂ ಸೀತೆ ಲಕ್ಷ್ಮಣ ರೇಖೆ ದಾಟಿದ ಪರಿಣಾಮವೆ? ಸೀತೆ ಲಕ್ಷ್ಮಣ ರೇಖೆ ದಾಟುವ ಸಾಹಸ ಮಾಡಿದ್ದಾದರೂ ಏಕೆ?
ಕೆಲವೊಂದು ವಿಚಾರಗಳು ಒಂದು ಕಾಲದಲ್ಲಿ ಸೀಮೋಲ್ಲಂಘನ ಎಂದು ಸಮಾಜದಲ್ಲಿ ಬಹಿಷ್ಕಾರ ಎದುರಿಸಬೇಕಾಗಿ ಬಂದರೂ ಕಾಲ ಕಳೆದಂತೆ ಸಮಾಜದಲ್ಲಿ ಅದೂ ಆಗಬೇಕಾದ ಸುಧಾರಣೆ ಅನ್ನಿಸಿ ಮನ್ನಣೆ ಸಿಕ್ಕಿದ್ದೂ ಇದೆ. ಒಂದು ಕಾಲದಲ್ಲಿ ಹೆಣ್ಣಿಗೆ 10 ವರ್ಷಕ್ಕೇ ಮದುವೆಯಾಗಿ 11ಕ್ಕೆ ಗಂಡ ತೀರಿಕೊಂಡರೂ ತಲೆ ಕೂದಲು ಕತ್ತರಿಸಿ, ಕೆಂಪು ಸೀರೆ ಉಡಿಸಿ ಲಕ್ಷ್ಮಣ ರೇಖೆ ಎಳೆದು ಒಳಗೇ ಕೂರಿಸುತ್ತಿದ್ದರು. ಅವಳ ಜೀವನ ನಾಲ್ಕು ಗೋಡೆಯ ಮಧ್ಯೆ ಮಾತ್ರ. ಅವಳು ಎಲ್ಲಾದರೂ ಲಕ್ಷ್ಮ¾ಣ ರೇಖೆ ದಾಟಿ ಹೊರಬಂದು ಅಪ್ಪಿತಪ್ಪಿ ಬಸಿರಾದರೆ ಕಾರಂತರು ಬರೆದಂತೆ ಘಟಶ್ರಾದ್ಧ ತಪ್ಪಿದ್ದಲ್ಲ, ಸೀರೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳು ಸೀರೆ ಮೇಲೆ ಬಿದ್ದರೂ ಹರಿಯುವುದು ಸೀರೆ ತಾನೇ? ಆದರೆ, ಈಗ ಇಂತಹ ವಿಷಯಗಳಲ್ಲಿ ಲಕ್ಷ್ಮಣ ರೇಖೆ ಪೂರ್ಣವಾಗಿ ಅಳಿಸದಿದ್ದರೂ ಪರಿಧಿ ದೊಡ್ಡದಾಗಿದೆ ಎನ್ನಬಹುದು. ಹೆಣ್ಣಿಗೆ ವಿದ್ಯೆ, ಉದ್ಯೋಗ, ಪ್ರಾಯ ಪೂರ್ತಿಯಾದ ಮೇಲೆಯೇ ಮದುವೆ ಮತ್ತು ಅನಾಹುತವಾದಾಗ ಮರು ಮದುವೆಯನ್ನು ಸಮಾಜ ಒಪ್ಪಿಕೊಳ್ಳುತ್ತಿದೆ ಅನ್ನಿಸುತ್ತಿದೆ. ಆದರೂ ಕೆಲವೊಂದು ಕಡೆ ಆಗಬೇಕಾದದ್ದು ಬಹಳವಿದೆ.
ಲಕ್ಷ್ಮಣ ರೇಖೆ ಯಾವತ್ತೂ ಗಂಡು ಹೆಣ್ಣಿಗೆ ಎಳೆದ ರೇಖೆಯೆ? ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ ಹೆಣ್ಣು ಹೆಣ್ಣಿಗೆ ಎಳೆದ ರೇಖೆಗಳೇ ಅಧಿಕವೇನೋ, ಹೆಣ್ಣು ಅಕ್ಕನಾಗಿ, ಅಮ್ಮನಾಗಿ, ಅತ್ತೆಯಾಗಿ, ಅತ್ತಿಗೆಯಾಗಿ ಎಳೆದ ರೇಖೆಗಳೂ ಹಲವಿದೆ, ನೋಡು ಹೊರಗೆ ಕತ್ತಲು, ಗುಮ್ಮನಿದ್ದಾನೆ, ಯಾರಾದರೂ ಏನಾದರೂ ಅಂದಾರು, ಅದು ನಮ್ಮ ಸಂಪ್ರದಾಯ ಎನ್ನುತ್ತಲೋ ಗೆರೆಗಳನ್ನು ಎಳೆಯುತ್ತಿಲ್ಲವೆ? ಇಂತಹ ರೇಖೆಗಳು ಕಂಡೂ ಕಾಣದಂತಿದ್ದರೂ ಹೆಣ್ಣಿನ ಸ್ವಾತಂತ್ರ್ಯವಂತೂ ಹರಣವಾದದ್ದಿದೆ, ಅದರೊಳಗೆ ಸಿಕ್ಕಿ ಹಾಕಿಕೊಂಡು ಮೂಕವಾಗಿ ವಿಲವಿಲ ಒದ್ದಾಡಿದವರ ಸಂಖ್ಯೆಯೂ ಸಾಕಷ್ಟಿದೆ.
ಇನ್ನು ರಾಮಾಯಣಕ್ಕೆ ಪುನಃ ಬರೋಣ. ಸೀತೆಗೆ ಚಿನ್ನದ ಜಿಂಕೆಯನ್ನು ನೋಡುತ್ತಲೇ ಅದು ತನಗೆ ಬೇಕೆಂಬ ಆಸೆ ಬಂದು ಲಕ್ಷ್ಮಣನನ್ನು ಒತ್ತಾಯಿಸದಿದ್ದರೆ ಲಕ್ಷ್ಮಣನಿಗೆ ರೇಖೆ ಎಳೆಯುವ ಸಂದರ್ಭ ಬರುತ್ತಿರಲಿಲ್ಲ, ಇನ್ನೂ ಹಿಂದಕ್ಕೆ ಹೋದರೆ ಶೂರ್ಪನಖೀಗೆ ರಾಮ, ಲಕ್ಷ್ಮ¾ಣರ ಮೇಲೆ ಆಸೆ, ಮೋಹ ಬಾರದಿದ್ದರೆ ಶೂರ್ಪನಖೀ ಮೂಗು ಕಳೆದುಕೊಳ್ಳುತ್ತಿರಲಿಲ್ಲ, ಕೈಕೇಯಿಗೆ ತನ್ನ ಮಗ ಭರತನ ಮೇಲಿನ ಅತಿಯಾದ ಮೋಹವೇ ರಾಮನನ್ನು ಕಾಡಿಗೆ ಅಟ್ಟುವಂತೆ ಮಾಡಿತು. ಇದರರ್ಥ ಎಷ್ಟೋ ಸಲ ಆಸೆ-ಮೋಹಗಳು ಲಕ್ಷ್ಮಣ ರೇಖೆ ದಾಟಿದಾಗ ರಾಮಾಯಣ, ಮಹಾಭಾರತಕ್ಕೆ ಕಾರಣವಾಯಿತೆನ್ನಬಹುದೆ?
ಮಧ್ಯ ರಾತ್ರಿಯ ಹೆಣ್ಣಿನ ಒಂಟಿ ತಿರುಗಾಟದಲ್ಲಿ ನಡೆದಿರುವ ಅತ್ಯಾಚಾರವನ್ನು ಗಮನಿಸಿದರೆ ಎಲ್ಲಿಯವರೆಗೆ ಗುಮ್ಮ, ರಾವಣ, ದುಶ್ಯಾಸನರು ಹೊರಗೆ ಆರಾಮವಾಗಿ ತಿರುಗಾಡುತ್ತಿರುತ್ತಾರೋ ಅಲ್ಲಿಯವರೆಗೆ ಹೆಣ್ಣು ತನಗೆ ತಾನೇ ಲಕ್ಷ್ಮಣ ರೇಖೆಯ ಒಳಗಿರುವುದೇ ಸರಿ ಅನ್ನಿಸದಿರುವುದಿಲ್ಲವೆ? ಸ್ವಾತಂತ್ರ್ಯದ ಹೆಸರಲ್ಲಿ ಬಿಯರು, ಬಾರ್‌ಗಳಲ್ಲಿ ನಲಿದಾಟ, ಫ್ಯಾಷನ್ನಿನ ಹೆಸರಲ್ಲಿ ಬಿಚ್ಚಾಟ ಮಾಡುವುದು ಎಷ್ಟು ಸರಿ? ಇಲ್ಲಿ ಸಂಸ್ಕೃತಿಯ ಚೌಕಟ್ಟಿನ ಲಘು ಲಕ್ಷ್ಮಣ ರೇಖೆ ಒಳ್ಳೆಯದು.
ಇನ್ನೂ ಪತ್ರಿಕೆಗಳ ಮುಖಪುಟವನ್ನು ಆವರಿಸುತ್ತಿರುವ, ಸದ್ಯಕ್ಕೆ ದೇಶದ ಉದ್ದಗಲಕ್ಕೂ ದೊಡ್ಡ ಬಿರುಗಾಳಿಯಂತೆ ಹಬ್ಬುತ್ತಿರುವ ಮೀ ಟೂ ಮೂವಮೆಂಟ್‌ನತ್ತ ಗಮನ ಹರಿಸೋಣ. ಗಂಡು -ಹೆಣ್ಣಿನ ಮಧ್ಯೆ ಇರಬೇಕಾದ ಲಕ್ಷ್ಮಣ ರೇಖೆ ದಾಟಿ ದಾಂಧಲೆ ಮಾಡಿದ ದುಶ್ಯಾಸನರತ್ತ ಲೋಕದ ಚಿತ್ತ ಸೆಳೆಯುತ್ತಿರುವ ದ್ರೌಪದಿಯ ಕಣ್ಣೀರಿನ ಕತೆಗಳಿವು. ಎದ್ದ ಬಿರುಗಾಳಿ ಹಲವರನ್ನು ಬೇರು ಸಮೇತ ಕಿತ್ತೆಸೆಯುತ್ತಿವೆ, ರಾಮ-ಧರ್ಮರಾಯನೆನಿಸಿಕೊಂಡವರ ಮುಖವಾಡ ಕಳಚುತ್ತಿದೆ. ರಾಮನೆಂದು ಪೂಜಿಸಿದರೆ ಹಿಂದಿರುವುದು ರಾವಣನೆಂದು ಗೊತ್ತಾದಾಗ ಪ್ರಶ್ನೆಗಳು ಏಳುತ್ತವೆ ಇಲ್ಲಿ ರಾಮ ಯಾರು? ರಾವಣನಾರು? ತಪ್ಪುತಪ್ಪೇ, ಎಷ್ಟು ದಿನ ತಪ್ಪುಗಳನ್ನು ಮುಚ್ಚಿಡಬಹುದು? ಅನ್ಯಾಯಕ್ಕೇ ಯಾವತ್ತೂ ಜಯವೇ? ಲಕ್ಷ್ಮಣ ರೇಖೆ ದಾಟಿದವರಿಗೆ ದಂಡನೆ ಬೇಡವೇ? ಆದರೆ ದ್ರೌಪದಿ ಕಣ್ಣೀರು ಸುರಿಸುವಾಗ ಪ್ರಶ್ನೆಗಳೂ ಏಳುತ್ತವೆ ದ್ರೌಪದಿಯ ವರ್ಷಗಳ ಮೌನದ ಕಾರಣವೇನು? ದ್ರೌಪದಿ(/ಸೀತೆ) ಮಾಯಾಮೃಗಕ್ಕೆ ಆಸೆ ಪಟ್ಟಿದ್ದಾದರೂ ಏಕೆ? ಅದು ಮಾಯಾ ಮೃಗವೆಂದು ದ್ರೌಪದಿ ತಿಳಿದಿರಲಿಲ್ಲವೇ? ಬೂದಿ ಮುಚ್ಚಿದ ಕೆಂಡವು ಬೆಂಕಿಯಾಗಿ ಹತ್ತಿ ಉರಿಯುತ್ತಿವೆ, ಕೆಲವರು ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದಾರೆ, ಮೌನವಾಗಿ ಅಳುತ್ತಿದ್ದವರು ಸ್ವರ ಏರಿಸಿ ಅಳುತ್ತಿದ್ದಾರೆ. ನನಗನ್ನಿಸುವುದಿಷ್ಟೇ ಸಿನೆಮಾಗಿಂತ ನಿಜಜೀವನ ಭೀಕರವೂ ಹೌದು, ಸ್ವಾರಸ್ಯವೂ ಹೌದು.
ಎಲ್ಲವೂ ಆಯಾಯ ಚೌಕಟ್ಟಿನಲ್ಲಿ ಅಂದರೆ ಲಕ್ಷ್ಮಣ ರೇಖೆಯೊಳಗೆ ಇದ್ದರೆ ಚೆಂದ, ಪರಿಮಿತಿ ದಾಟಿದರೆ ವಿಕೃತ, ಅನಾಹುತ ತಪ್ಪಿದ್ದಲ್ಲ.
– ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.